ಮಂಡೂಕ ವಿಸ್ಮಯ

ಮಂಡೂಕ ವಿಸ್ಮಯ

© ಅಶ್ವಥ ಕೆ. ಎನ್.

ಮಣ್ಣ ಬಣ್ಣ ನೀಲಿ ಕಣ್ಣ; ಸಣ್ಣ ಜೀವಿ ನಾನು; ಸಂಜೆ ಹೊತ್ತು ಕೆರೆಯ ಸುತ್ತ; ನೋಡಿರುವೆಯಾ ನೀನು? ಎಂಬ ಗೋಪಾಲಕೃಷ್ಣ ಶಗ್ರಿತ್ತಾಯ ಅವರ ಸಾಲುಗಳನ್ನು ಕೇಳಿರುತ್ತೇವೆ. ಈ ಸಾಲುಗಳನ್ನು ನೆನೆದಾಗಲೆಲ್ಲ ನೆನಪಾಗುವುದು ರೈತನ ಗೆಳೆಯರಲ್ಲೊಬ್ಬರಾದ ಕಪ್ಪೆರಾಯ. ‘ಕಪ್ಪೆಯ ಕೊರಳ ಹಾಡಿಗಾಗಿ ಕಾಯುತ್ತಿದ್ದ ಕಾಲವೊಂದಿತ್ತು’ ಎಂದರೆ ನಂಬಲೇಬೇಕು. ಏಕೆಂದರೆ ಕಪ್ಪೆಯ ವಟಗುಟ್ಟುವಿಕೆ ಕೇಳಿ ಬಂತೆಂದರೆ ನಮ್ಮ ಕೃಷಿಕರು ಬೇಸಾಯ ಕೆಲಸದ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದರು. ಅಂತಹ ಅವಿನಾಭಾವ ಸಂಬಂಧ ನಮ್ಮ ಪೂರ್ವಜರಿಗೂ ಈ ಪುಟಾಣಿ ಜೀವಿಗಳಿಗೂ ಇತ್ತು ಎಂಬುದು ಸತ್ಯ. ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ ಎಂಬ ಒಗಟುಗಳೂ ನಮಗೆ ಪುರಾವೆಗಳೇ.

ಅಷ್ಟೆಲ್ಲಾ ಯಾಕೆ ಒಮ್ಮೆ ಹಳ್ಳಿಗರನ್ನ ಕೇಳಿ ನೋಡಿ ‘ತಮ್ಮ ಬೆಳೆಗಳನ್ನು ಕೀಟ ನಿಯಂತ್ರಣದ ಕೆಲಸ ಮಾಡಿ ರಕ್ಷಿಸುತ್ತವೆ. ನೀರಿನಲ್ಲಿರುವ ಹುಳು ಹುಪ್ಪಟೆಗಳನ್ನು ತಿನ್ನುತ್ತವೆ. ಕೊಳಚೆ ನೀರಿನಲ್ಲಿ ಉತ್ಪತ್ತಿಯಾಗುವ ರೋಗವಾಹಕಗಳಾಗಿರುವ ಮಾರಕ ಸೊಳ್ಳೆಗಳನ್ನು ಆಹಾರವಾಗಿ ಸೇವಿಸುತ್ತವೆ. ಕೆರೆಗಳನ್ನು ಶುದ್ದಿಗೊಳಿಸುತ್ತವೆ. ಹೀಗೆ ಅವು ವಾಸಿಸುವ ಸ್ಥಳದಲ್ಲಿ ಪರಿಸರದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ, ಪರಿಸರ ಸ್ನೇಹಿಗಳಾಗಿವೆ’ ಎಂದು ವಿವರಣೆ ನೀಡುತ್ತಾರೆ. ಆದರೆ ಕಪ್ಪೆಗಳ ಬದುಕುವ ಹಕ್ಕನ್ನು ಕಸಿದುಕೊಂಡಿರುವ ನಾವುಗಳು ಸಾಕ್ಷರತೆಯ ಹೆಸರಿನಲ್ಲಿ ಪರಿಸರಕ್ಕೆ ಏನು ಕೊಡಮಾಡುತ್ತಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಅದಕ್ಕೆ ನಾವುಗಳೇ ಉತ್ತರ ಹುಡುಕಿಕೊಳ್ಳಬೇಕು ಕೂಡ.

© ಅಶ್ವಥ ಕೆ. ಎನ್.

ಇರಲಿ ನನ್ನ ಲೇಖನದ ವಿಷಯಕ್ಕೆ ಬರುತ್ತೇನೆ. ನನಗೆ ನಾಲ್ಕು ಗೋಡೆಗಳ ಒಳಗೆ ಬಂದಿಯಾಗುವುದಕ್ಕಿಂತ ಸ್ವತಂತ್ರವಾಗಿರುವುದೇ ಅತ್ಯಂತ ಪ್ರಿಯವಾದದ್ದು. ಅದರಲ್ಲೂ ಬಾಲ್ಯದ ನೆನಪುಗಳಲ್ಲಿ ಅದೆಷ್ಟು ಕಾಡು-ಮೇಡು ಸುತ್ತಿ, ಮಳೆಯಲ್ಲಿ ನೆನೆದು ಅಮ್ಮನ ಬಳಿ ಪೆಟ್ಟು ತಿಂದಿದ್ದೇವೋ ಅಪ್ಪನ ಬಳಿ ಬೈಗುಳ ಕೇಳಿದ್ದೇವೋ ಲೆಕ್ಕಕ್ಕೇ ಇಲ್ಲ ಬಿಡಿ. ಮಳೆ ನಿಂತ ಮೇಲೆ ನೀರು ನಿಂತ ಗುಂಡಿಗಳಿಂದ ಬರುತ್ತಿದ್ದ ಗೊಟರ್…ಗೊಟರ್ ಶಬ್ಧದ ಬಗ್ಗೆ ಅದೇನೋ ಕೆಟ್ಟ ಕುತೂಹಲ. ನಿಂತ ನೀರಿಗೆ ಕಲ್ಲನ್ನು ಎಸೆದು ಕುಣಿದು ಕುಪ್ಪಳಿಸುತ್ತಿದ್ದೆವು. ಸರಿ, ಈಗ ನೇರವಾಗಿ ವಿಷಯಕ್ಕೆ ಬರ್ತೇನೆ. ಇಷ್ಟೆಲ್ಲಾ ಯಾಕೆ ವಿವರಣೆ ಕೊಡ್ತಾ ಇದ್ದೇನೆ ಅಂದ್ರೆ ಇತ್ತೀಚೆಗಷ್ಟೇ ನನಗೆ ಬಾಲ್ಯದಲ್ಲಿ ಕಾಡಿದ ಅನೇಕ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ತುಡಿತ ನನ್ನದು. ಅದಕ್ಕೆ ನನ್ನ ಪ್ರಶ್ನೆಯ ಕೇಂದ್ರಬಿಂದುವಾದ ಕಪ್ಪೆಗಳ ಬಗೆಗೆ ಒಂದಷ್ಟು ವಿವರಣೆಗಳನ್ನು ಕೊಡುವುದರೊಂದಿಗೆ, ನನ್ನ ಪ್ರಶ್ನೆ ಹಾಗೂ ಉತ್ತರವನ್ನು ತಿಳಿಸಿಕೊಡುತ್ತೇನೆ.

© ಅಶ್ವಥ ಕೆ. ಎನ್.

ಕಪ್ಪೆ, ದುರ್ದುರ, ಭೇಕ ಎಂದೆಲ್ಲ ಕರೆಸಿಕೊಳ್ಳುವ ಪ್ರಾಣಿಪ್ರಪಂಚದ ಪುಟ್ಟ ಜೀವಿಗಳಿವು. ಬೆನ್ನುಮೂಳೆ ಹೊಂದಿರುವ ಕಶೇರುಕ ಪ್ರಾಣಿಯೂ ಹೌದು. ಇವು ನೀರಿನಲ್ಲೂ, ಭೂಮಿಯ ಮೇಲು ವಾಸಿಸುವ ಕಾರಣದಿಂದಾಗಿ ಇವುಗಳನ್ನು ಉಭಯವಾಸಿಗಳು ಎಂದು ಹೇಳಲಾಗುತ್ತದೆ. ಇಂತಹ ಕಪ್ಪೆಗಳ ಶಾರೀರಿಕ ರಚನೆಯು

• ಅಗಲವಾದ ತಲೆ ಮತ್ತು ದೊಡ್ಡ ಬಾಯಿ
• ಎರಡು ದೊಡ್ಡ ಉಬ್ಬುವ ಕಣ್ಣುಗಳು
• ಬೆನ್ನುಮೂಳೆಯಲ್ಲಿ ಕೇವಲ ಎಂಟು ಅಥವಾ ಒಂಬತ್ತು ಮೂಳೆಗಳನ್ನು ಹೊಂದಿರುವ
ಸಣ್ಣ ದೇಹ
• ಪಾದದ ಪ್ರದೇಶದಲ್ಲಿ ಎರಡು ಹೆಚ್ಚುವರಿ ಮೂಳೆಗಳು ಅವುಗಳ ಉದ್ದವಾದ
ಕಾಲುಗಳನ್ನು ಇನ್ನಷ್ಟು ಉದ್ದವಾಗಿಸುತ್ತದೆ.
• ಬಾಲ ಇರುವುದಿಲ್ಲ.

© ಅಶ್ವಥ ಕೆ. ಎನ್.

ಈ ರೀತಿಯಿರುವ ಕಪ್ಪೆಗಳ ಬಗೆಗೆ ನನಗೆ ಅಷ್ಟಾಗಿ ಏನು ಗೊತ್ತಿಲ್ಲ. ಆದರೆ ‘ಕಂದು, ಹಳದಿ, ಮರಗಪ್ಪೆ, ಹಸಿರು, ವಿಷದ ಕಪ್ಪೆಗಳು ಹೀಗೆ ಹಲವು ಬಣ್ಣದ, ಹಲವು ಪ್ರಭೇದದ, 1 ಸೆಂಟಿಮೀಟರ್ ಇಂದ 32 ಸೆಂಟಿಮೀಟರ್ ವರೆಗೂ ಬೆಳೆಯುವ ಕಪ್ಪೆಗಳು, ಹಾರುವ ಕಪ್ಪೆಗಳು ಮುಂತಾದ ಸಾವಿರಕ್ಕೂ ಅಧಿಕ ಪ್ರಭೇದಗಳು ಕಪ್ಪೆಯ ಪ್ರಪಂಚದಲ್ಲಿವೆ. ಇವುಗಳನ್ನು ಪ್ರಾಣಿಶಾಸ್ತ್ರಜ್ಞರು ಗುರುತಿಸಿದ್ದಾರೆ’ ಎಂಬ ಕೆಲವೇ ಕೆಲವು ವಿಚಾರಗಳನ್ನು ಮಾತ್ರ ತಿಳಿದಿದ್ದೇನೆ. ಜೊತೆಗೆ ಇವು ಬಹುತೇಕ ಮಾಂಸಾಹಾರಿ ಪ್ರಾಣಿಗಳಾಗಿವೆ. ಈಗ ಕಪ್ಪೆಗಳ ಹಲವು ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂಬ ಕೆಲವು ವಿಚಾರಗಳು ಗೊತ್ತಷ್ಟೇ!     

ಸಾಧಾರಣವಾಗಿ ಮಳೆಗಾಲದ ಸಮಯದಲ್ಲಿ ವಾಹನಗಳಲ್ಲಿ ಹೋಗುವಾಗ ರಸ್ತೆಗಳಲ್ಲೆಲ್ಲ ಕುಣಿದು ಕುಪ್ಪಳಿಸುವ ಕಪ್ಪೆಗಳನ್ನು ಕಾಣುತ್ತೇವೆ. ವಾಹನಗಳು ಹರಿದು ಅಪ್ಪಚ್ಚಿಯಾಗಿರುವ ಅವುಗಳ ದೇಹಗಳನ್ನೂ ನೋಡುತ್ತೇವೆ. ಆದರೆ ಇಂತಹ ಕಪ್ಪೆಗಳು ಮಳೆಗಾಲದಲ್ಲಿ ಬಿಟ್ಟರೆ ಮತ್ಯಾವ ಕಾಲದಲ್ಲೂ ಕಾಣಿಸುವುದಿಲ್ಲ. ನಂತರದ ಕಾಲದಲ್ಲಿ ಎಲ್ಲಿ ಹೋಗುತ್ತವೆ? ಎಂಬುದು ನನ್ನ ಯಕ್ಷಪ್ರಶ್ನೆಯಾಗಿತ್ತು. ಒಮ್ಮೆ ತಲೆಯಲ್ಲಿ ಹುಳು ಹೊಕ್ಕರೆ ಅದನ್ನು ಮತ್ತಾರಿಗೋ ದಾಟಿಸದಿದ್ದರೆ ಅಥವಾ ಉತ್ತರ ಪಡೆಯದೇ ಇದ್ದರೆ ಬೇತಾಳದ ಶಾಪದಂತೆ ನನ್ನ ತಲೆ ಸಿಡಿದು ಸಾವಿರ ಹೋಳಾಗುವುದು ಎಂಬುದನ್ನು ಬಲ್ಲೆ ನಾನು. ಅದಕ್ಕಾಗಿ ಅಜ್ಜಿಯ ಬಳಿ ಕೇಳಿದೆ. ಅದಕ್ಕೆ ಅಜ್ಜಿ ಉತ್ತರಿಸಿದ್ದು ಹೀಗೆ ‘ಆಕಾಸಪ್ಪಂಗೂ ಭೂಮ್ತಾಯಿಗೂ ಮದುವೆಯಾದಾಗ ಮಂಗಳವಾದ್ಯದವರು ದೂರದೂರಿನಿಂದ ಬಂದು ಮದ್ವೆ ಮಾಡಿಸ್ತಾರಂತೆ. ಅವ್ರೆಯ ಇವ್ರು. ಮದ್ವೆ ಮಾಡ್ಸಿ ಮತ್ತೆ ತಮ್ಮೂರಿಗೆ ಹೋಗ್ತಾರಂತೆ’ ಅನ್ನೋ ಉತ್ತರ. ಅವ್ರ ಊರೆಲ್ಲಿದೆ?  ಎಷ್ಟು ದೂರವಿದೆ? ಆಕಾಶಕ್ಕೂ ಭೂಮಿಗೂ ಮದ್ವೆ ಹೆಂಗ್ ಮಾಡಿಸ್ತಾರೆ? ಭೂಮಿ ತಾಯಿ ನಮ್ಮನ್ನೆಲ್ಲ ಬಿಟ್ಟು ಗಂಡನ್ ಮನೆಗ್ ಹೋದ್ರೆ, ನಮ್ ಗತಿ ಏನು? ಹೀಗೆ ಸಾಲು ಸಾಲು ಪ್ರಶ್ನೆ ಕೇಳಿ ಅಜ್ಜಿಯ ತಾಳ್ಮೆಯ ಕಟ್ಟೆ ಒಡೆಯುವಂತದಾಗ, ಮೆತ್ತಗೆ ಜಾಗ ಖಾಲಿ ಮಾಡಿದ್ದೆ. ಉತ್ತರ ಸಮಾಧಾನ ಕೊಡಲಿಲ್ಲ. ನನ್ನ ಕುತೂಹಲ ರಕ್ತಬೀಜಾಸುರನಂತೆ ಬೆಳೆಯುತ್ತಲೇ ಹೋಯಿತು. ಪ್ರೌಢಶಾಲೆಗೆ ಬರುವಷ್ಟರಲ್ಲಿ ಅಮ್ಮ ಆ ರೀತಿ ಪ್ರಶ್ನೆ ಕೇಳಬೇಡ ಎಂದು ಕಟ್ಟಪ್ಪಣೆ ಮಾಡಿಬಿಟ್ಟಿದ್ದರು. ಆದರೇನು ಮಾಡುವುದು? ಉತ್ತರ ಬೇಕೇ ಬೇಕು.  ಹಾಗಾಗಿ ನನ್ನ ಹುಡುಕಾಟ ನಿಧನವಾಗದೇ ನಿಧಾನವಾಯಿತು.

ಅದೆಷ್ಟೋ ವರ್ಷಗಳ ನಂತರದಲ್ಲಿ ನನಗೆ ಉತ್ತರ ಸಿಕ್ಕಿತು. ಆ ಉತ್ತರ ನನಗೆ ಕಪ್ಪೆ ಪ್ರಪಂಚದ ಹಲವು ಹೊಸ ವಿಚಾರಗಳನ್ನು ಪರಿಚಯಿಸಿತು. ಪರಿಸರದ ಕುರಿತಾದ ಸೂಕ್ಷ್ಮತೆಯನ್ನು ಬೆಳೆಸಿತು. ಅದು ಏನೆಂದರೆ ಕಪ್ಪೆಗಳು ಕಣ್ಮರೆಯಾಗುವುದಿಲ್ಲ. ಬದಲಾಗಿ ಅವು ನಮ್ಮ ಸುತ್ತಲೂ ಇರುತ್ತವೆ. ನಾವು ಅವುಗಳನ್ನು ಹೆಚ್ಚಾಗಿ ಗಮನಿಸುವುದಿಲ್ಲ ಅಷ್ಟೇ. ಏಕೆಂದರೆ ಮಳೆಗಾಲದಲ್ಲಿ ಕಪ್ಪೆಗಳು ಅತ್ಯಂತ ಸಕ್ರಿಯವಾಗಿರುತ್ತವೆ. ಸಂತಾನೋತ್ಪತ್ತಿಗಾಗಿ ಸಂಗಾತಿಗಳನ್ನು ಹುಡುಕುವಾಗ ಅವುಗಳನ್ನು ಆಕರ್ಷಿಸುವ ಸಲುವಾಗಿ ಕುಣಿದು ಕುಪ್ಪಳಿಸುತ್ತವೆ ಹಾಗೂ ಗೊಟರ್ ಗೊಟರ್ ಎಂಬ ಶಬ್ಧವನ್ನು ಮಾಡುತ್ತವೆ. ಹಾಗಾಗಿ ಆ ಸಮಯದಲ್ಲಿ ನಮಗೆ ಹೆಚ್ಚಾಗಿ ಕಾಣಸಿಗುತ್ತವೆ ಎಂದು. ಇಲ್ಲಿ ಶಬ್ಧ ಮಾಡುವ ಕಪ್ಪೆಗಳು ಬಹುತೇಕ ಗಂಡುಕಪ್ಪೆಗಳೇ ಆಗಿರುತ್ತವೆ ಎಂಬುದು ವಿಶೇಷ. ಮಳೆಗಾಲದಲ್ಲಿ ಕಪ್ಪೆಗಳು ಏಕೆ ಕ್ರಿಯಾಶೀಲವಾಗಿರುತ್ತವೆ? ಅಥವಾ ನಮಗೆ ಕಾಣಿಸುತ್ತವೆ? ಎಂಬುದರ ಕುರಿತಾಗಿ ಮಾಹಿತಿ ಸಿಕ್ಕಿತೇ ಹೊರತು, ಉಳಿದ ಕಾಲದಲ್ಲಿ ಏನು ಮಾಡುತ್ತವೆ? ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ.

© ಗುರುಪ್ರಸಾದ್ ಕೆ. ಆರ್.

ಮತ್ತೆ ನಾನು ಕಂಡುಕೊಂಡ ಉತ್ತರ ಈ ಮುಂದಿನಂತಿದೆ. ತಾಪಮಾನದಲ್ಲಿನ ಬದಲಾವಣೆಗಳನ್ನು ಅವು ಸ್ವಲ್ಪಮಟ್ಟಿಗೆ ತಡೆಯುತ್ತವೆ. ಉದಾ: ಚಳಿಗಾಲದ ವೇಳೆ ಬಿಸಿಲಿಗೆ ಮೈಯೊಡ್ಡಿ ದೇಹದ ಉಷ್ಣಾಂಶವನ್ನು ಹೆಚ್ಚಿಸಿಕೊಳ್ಳುತ್ತವೆ ಹಾಗೆ ಬೇಸಿಗೆ ಕಾಲದಲ್ಲಿ ನೀರಿನಲ್ಲಿ ಮುಳುಗಿ ದೇಹದ ಉಷ್ಣಾಂಶವನ್ನು ತಗ್ಗಿಸಿಕೊಳ್ಳುತ್ತವೆ. ಆ ಕಾರಣಕ್ಕಾಗಿ ಅವು ವಿಜ್ಞಾನ ಪ್ರಪಂಚದಲ್ಲಿ ಶೀತರಕ್ತ ಪ್ರಾಣಿಗಳೆಂದು ಕರೆಸಿಕೊಳ್ಳುತ್ತವೆ. ಶೀತರಕ್ತ ಪ್ರಾಣಿಗಳು ಅನ್ನುವುದಕ್ಕಿಂತ ಬಾಹ್ಯಕೋಶಸ್ತರದ ಜೀವಿಗಳು ಎನ್ನುವುದು ಅತ್ಯಂತ ಹೆಚ್ಚು ಸೂಕ್ತವಾದ ಪದಬಳಕೆಯಾಗಿದೆ. ಆದರೆ ಅತೀ ಹೆಚ್ಚಿನ ತಾಪಮಾನವನ್ನು ತಡೆಯುವ ಶಕ್ತಿ ಇವುಗಳಿಗೆ ಇರುವುದಿಲ್ಲ. ಜೊತೆಗೆ ಅವು ತಮ್ಮ ಬಹುತೇಕ ಶಕ್ತಿಯನ್ನು ದೇಹದ ಉಷ್ಣತೆಯನ್ನ ಕಾಪಾಡುವುದಕ್ಕಾಗಿಯೇ ವಿನಿಯೋಗಿಸಲು ಸಿದ್ಧವಿರುವುದಿಲ್ಲ. ಹಾಗಾಗಿ ತಮ್ಮ ಋತುಮಾನದ ರೂಪಾಂತರದ ನಂತರದ ಜೀವನಕ್ಕಾಗಿ ತಮ್ಮ ಶಕ್ತಿಯನ್ನು ಕ್ರೋಢೀಕರಿಸುತ್ತವೆ.ಜೊತೆಗೆ ಇತರ ಜೀವಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಾಗೂ ತೀವ್ರತರವಾದ ಬಿಸಿ ಮತ್ತು ಶೀತದ ಪರಿಸ್ಥಿತಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವು ನೆಲದ ಆಳದಲ್ಲಿ, ಬಂಡೆಗಳ ಅಡಿಯಲ್ಲಿ, ಮರದ ಪೊಟರೆಗಳಲ್ಲಿ, ನದಿ ದಡದ ಬಿರುಕುಗಳಲ್ಲಿ, ಕೆರೆಗಳು ಬತ್ತುವ ಮುನ್ನವೇ ಕೆಸರಿನಲ್ಲಿ ಹೀಗೆ ತಂಪಾದ ಹಾಗೂ ಕತ್ತಲೆಯ ಸ್ಥಳಗಳಲ್ಲಿ ಸೇರಿಕೊಳ್ಳುತ್ತವೆ ಮತ್ತು ಪರಿಸ್ಥಿತಿಗಳು ತಮಗೆ ಅನುಕೂಲಕರವಾಗುವವರೆಗೂ ಮರೆಯಾಗಿರುತ್ತವೆ. ಈ ಹಂತದಲ್ಲಿ ಕಪ್ಪೆಗಳು ನಿದ್ರಾವಸ್ಥೆಯಲ್ಲಿರುತ್ತವೆ.

© ಗುರುಪ್ರಸಾದ್ ಕೆ. ಆರ್.

ಹಾಗಾದರೆ ಕಪ್ಪೆಗಳು ಎಷ್ಟು ಕಾಲ ನಿದ್ದೆಯಲ್ಲಿರುತ್ತವೆ? ಭೂಮಿಯ ಅಡಿಯಲ್ಲಿ ಸೇರಿಕೊಂಡರೆ ಉಸಿರುಕಟ್ಟಿ ಸಾಯುವುದಿಲ್ಲವೇ? ಆಗ ಅವು ಬದುಕಲು ಆಹಾರವನ್ನು ಹೇಗೆ ಹುಡುಕಿಕೊಳ್ಳುತ್ತವೆ ಎಂಬ ಮತ್ತೊಂದಷ್ಟು ಪ್ರಶ್ನೆಗಳು ಧುತ್ತೆಂದು ಹುಟ್ಟಿಕೊಳ್ಳಬೇಕೇ? ಈ ಪ್ರಶ್ನೆಗಳು ನಿಮಗೂ ಬಂತೇ? ನನಗೂ ಕೂಡ. ಅದಕ್ಕೆ ಉತ್ತರ ತಿಳಿಯುವಾಗ ಕಪ್ಪೆಗಳ ದೈಹಿಕ ರಚನೆಗಳ ಬಗೆಗೆ ಪೂರ್ತಿಯಾಗಿ ತಿಳಿಯಬೇಕು. ಆದರೆ ನನ್ನ ಪ್ರಶ್ನೆಗಳಿಗೆ ಅಗತ್ಯವಿರುವಷ್ಟು ವಿವರಣೆಯನ್ನು ಮಾತ್ರ ನೀಡುತ್ತೇನೆ. ಕಪ್ಪೆಗಳ ನಿದ್ರಾವಸ್ಥೆಯ ಕಾಲ ಇಂತಿಷ್ಟೇ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಏಕೆಂದರೆ ಪಿಗ್ನೋಸ್ಟ್ರಿಮ್ಸ್ ಎಂದು ಹೆಸರಿಸಲ್ಪಟ್ಟ ಕಪ್ಪೆಗಳು ವರ್ಷದಲ್ಲಿ ಕೇವಲ ಒಂದೇ ದಿನ ನಿದ್ದೆ ಮಾಡುವ ಕಪ್ಪೆಗಳು. ರಾನ ಸಿಲ್ವತಿಕಾ(ಮರಗಪ್ಪೆ)ಯಂತಹ ಕಪ್ಪೆಗಳು ತಮ್ಮ ಹೃದಯ ಬಡಿತವನ್ನೆ ತಗ್ಗಿಸಿ ಬದುಕಬಲ್ಲವು. ಜೊತೆಗೆ ನಿದ್ದೆ ಮಾಡದ ಕಪ್ಪೆಗಳು ಇವೆ ಎಂಬುದು ಅಚ್ಚರಿಯಾದರೂ ಸತ್ಯ. ಏಕೆಂದರೆ ಅನುಕೂಲವಲ್ಲದ ಪರಿಸರದಿಂದ ಕಣ್ಮರೆಯಾಗುವ ಕಪ್ಪೆಗಳು ಕೆಲವೊಮ್ಮೆ ನಿದ್ರಾವಸ್ಥೆಗೂ ಜಾರಬಹುದು. ಇಲ್ಲವೇ ಅನುಕೂಲವೆನಿಸುವ ಸ್ಥಳಕ್ಕೆ ವಲಸೆ ಕೂಡ ಹೋಗಬಹುದು. ತಮಗೆ ಅನುಕೂಲವಾಗುವ ಪರಿಸರ ನಿರ್ಮಾಣವಾದ ನಂತರದಲ್ಲಿ ಪುನಃ ಕಾಣಿಸಿಕೊಳ್ಳಲಾರಂಭಿಸುತ್ತವೆ. ಉದಾಹರಣೆಗೆ ಕೆರೆಗಳಲ್ಲಿ ವಾಸಿಸುವ ಕಪ್ಪೆಗಳು ಇನ್ನೇನು ಕೆರೆಯ ನೀರು ಬತ್ತುತ್ತದೆ ಎಂಬ ಅರಿವಾದ ತಕ್ಷಣ ಅದರ ಕೆಸರಿನಲ್ಲಿಯೇ ಹೂತುಹೋಗುತ್ತವೆ. ಮತ್ತೆ ಮಳೆ ಬಂದು ನೀರು ನಿಂತ ಮೇಲೆಯೇ ಅವು ಅಲ್ಲಿಂದ ಹೊರಬರುವುದು.

ಇನ್ನು ಹೇಳಬೇಕೆಂದರೆ ಕಪ್ಪೆಗಳು ನೀರಿನಲ್ಲಿ ಹಾಗೂ ನೆಲದ ಮೇಲೆ ಎರಡೂ ಕಡೆ ವಾಸಿಸುವ ದೇಹ ರಚನೆಯನ್ನು ಹೊಂದಿರುವುದರಿಂದ, ಅದರ ಸಹಾಯದಿಂದ ಕಪ್ಪೆಗಳು ಭೂಮಿ ಮೇಲೆ ಇದ್ದಾಗ ಶ್ವಾಸಕೋಶಗಳಿಂದ(ಮುಖ್ಯ), ಹಾಗೆ ನೀರಿನಲ್ಲಿದ್ದಾಗ ಲೋಳೆಯಂತಹ ಚರ್ಮದ ಸಹಾಯದಿಂದ (ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು), ಹಾಗೇ ಭೂಮಿಯ ಒಳಗಿದ್ದಾಗ ನರಗಳ ಮೂಲಕ ಮಣ್ಣಿನಲ್ಲಿರುವ ನೀರಿನ ಅಂಶವನ್ನು ಹಾಗೂ ಮಣ್ಣಿನಲ್ಲಿ ಸೇರಿಕೊಂಡಿರುವ ಗಾಳಿಯನ್ನು ಹೀರಿ ಉಸಿರಾಟವನ್ನು ಮಾಡುತ್ತವೆ. ಆದರೆ ಈ ಹಂತದಲ್ಲಿ ಅವುಗಳ ಉಸಿರಾಟದ ಕ್ರಿಯೆಯು ಅತ್ಯಂತ ನಿಧಾನವಾಗುತ್ತದೆ. ಹಾಗೇ ಜೀರ್ಣ ಕ್ರಿಯೆಯು ಕೂಡ. ಈ ಹಂತದಲ್ಲಿ ಕಪ್ಪೆಗಳು ವಿಶ್ರಾಂತ ಸ್ಥಿತಿಯಲ್ಲಿರುವುದರಿಂದ ಅವುಗಳ ದೇಹದಲ್ಲಿ ಶೇಖರಣೆಯಾಗಿದ್ದ ಕೊಬ್ಬನ್ನೇ ಆಹಾರವನ್ನಾಗಿ ಬಳಸಿ ಬದುಕುತ್ತವೆ.  ಮತ್ತೆ ಮಳೆ ಬರುವ ಸಮಯದಲ್ಲಿ ಹೊರಬರುತ್ತವೆ. ಹೊರಬಂದು ತಮ್ಮ ಸಂಗಾತಿಗಳನ್ನು ಅರಸುವ ಕೆಲಸ ಮಾಡುತ್ತವೆ. ಕಪ್ಪೆಗಳ ಜೀವನಚಕ್ರ ಇಂತಿದೆ.

ನನ್ನ ಒಂದು ಪ್ರಶ್ನೆಗೆ ಇಡಿಯಾಗಿ ಉತ್ತರ ಕಂಡುಕೊಂಡದ್ದು ಹೀಗೆ. ಇನ್ನೂ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.  ಈ ಎಲ್ಲ ಪ್ರಶ್ನೆ ಹಾಗೂ ಉತ್ತರಗಳಿಂದ ಪ್ರಾಣಿಪ್ರಪಂಚದ ವಿಶಿಷ್ಟ ಜೀವಿ ಕಪ್ಪೆ ಎನಿಸದೆ ಇರುವುದಿಲ್ಲ ನಿಮಗೆ. ಹೀಗೆ ಪರಿಸರ ವ್ಯವಸ್ಥೆಯಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಶಿಷ್ಟ ಗುಣಗಳಿವೆ. ಬದುಕುವ ರೂಢಿಗಳಿವೆ. ನೀವು ಯಾವುದೇ ಒಂದು ಜೀವಿಯನ್ನು ರಕ್ಷಿಸಿದರೆ ಪರಿಸರದ ಕೊಂಡಿಯನ್ನು ರಕ್ಷಿಸಿದಂತೆ. ಹಾಗಾಗಿ ಮಳೆಗಾಲದಲ್ಲಿ ಅದರಲ್ಲೂ ವಾಹನಗಳಲ್ಲಿ ಸಾಗುವಾಗ ಕನಿಷ್ಟಪಕ್ಷ ಕಪ್ಪೆಗಳು ಸಾಯದಂತೆ ಜಾಗ್ರತೆ ಮಾಡೋಣ. ಹೀಗೆ ಪ್ರತಿ ಜೀವಿಯನ್ನು ರಕ್ಷಿಸುವ ಮೂಲಕ ಪರಿಸರದ ಸರಪಳಿಯನ್ನು ಉಳಿಸೋಣ ಹಾಗೂ ಗೌರವಿಸೋಣ.

© ಪೂರ್ಣಪ್ರಜ್ಞಾ ಎಸ್. ಎನ್.

ಲೇಖನ: ಕಲ್ಪನ ಎಂ.
          ತುಮಕೂರು ಜಿಲ್ಲೆ

Spread the love
error: Content is protected.