ವಾಟರ್ ಪ್ರೂಫ್ ದುಂಬಿಗಳು!

ವಾಟರ್ ಪ್ರೂಫ್ ದುಂಬಿಗಳು!

ನನ್ನ ಬಾಲ್ಯ ಸ್ನೇಹಿತನಾದ ಪಿಳ್ಳೆ ಇದ್ದ ರೂಮಿಗೆ ಹೋಗಬೇಕಿತ್ತು. ಮಳೆ ಬರುವ ಎಲ್ಲಾ ಸಾಧ್ಯತೆಗಳು ಕಣ್ಮುಂದೆ ಇದ್ದ ಮೋಡಗಳು ಸಾಗುತ್ತಾ ಸಾರುತ್ತಿದ್ದವು. ಅದನ್ನು ಲೆಕ್ಕಿಸದೇ ನನ್ನ ಬಳಿ ಇದ್ದ, ಡಿಕಾತ್ಲಾನ್ ನಿಂದ ಕೊಂಡಿದ್ದ ರೇನ್ ಜಾಕೆಟ್ ಅನ್ನು ಶಿಸ್ತಾಗಿ ಧರಿಸಿ ನನ್ನ ಕೋಬ್ರಾ (ಬೈಕ್) ಏರಿ ಹೊರಟೆ. ಇಂತಹ ಸಿಟಿ ಸವಾರಿಯಲ್ಲಿ ಗದ್ದಲ ಕೇಳುವ ಬದಲು ಸಂಗೀತ ಕೇಳುವ ಮನಸಾಗಿ, ನನ್ನಲ್ಲಿದ್ದ ಇಯರ್ ಫೋನ್ ಅನ್ನು ಫೋನಿನ 3.5 ಎಮ್. ಎಮ್. ಪೋರ್ಟಿಗೆ ಸೇರಿಸಿ ‘My Likes’ ಪ್ಲೇ ಲಿಸ್ಟ್ ಅನ್ನು ಹಾಕಿಕೊಂಡು ಹೊರಟೆ. ಪ್ಲೇ ಲಿಸ್ಟ್ ಮೈ ಲೈಕ್ಸ್ ಆದರೂ ಎಲ್ಲವನ್ನೂ ಕೇಳುವ ಮನಸಿರುವುದಿಲ್ಲ, ಸಾಂಗ್ ಬದಲಾಯಿಸಬೇಕೆಂಬ ಮನಸಾಗಿ ಫೋನ್ ತೆಗೆದೆ. ಬದಲಾಯಿಸಿದ ನಂತರ ಮತ್ತೆ ಪ್ಯಾಂಟ್ ಜೇಬಿನಲ್ಲಿ ಯಾರು ಸಿಕ್ಕಿಸುತ್ತಾರೆ ಎಂದು, ನನ್ನ ವಾಟರ್ ಪ್ರೂಫ್ ರೇನ್ ಜಾಕೆಟ್ ನ ಜೇಬಲ್ಲೇ ಇರಿಸಿ ಜಿಪ್ ಹಾಕಿದೆ. ಮಳೆಯಲಿ ಸಂಗೀತದ ಜೊತೆಯಲಿ ಹಾಗೇ ತೇಲುತ್ತಾ ಅವನ ರೂಮ್ ಸೇರಿದ್ದೇ ತಿಳಿಯಲಿಲ್ಲ.ಅಷ್ಟು ಚೆನ್ನಾಗಿತ್ತು ಕಾಂಬಿನೇಷನ್. ನಂತರ ಅವನ ರೂಮ್ ಸೇರಿ ಸ್ವಲ್ಪ ತೇವ ಒರೆಸಿ ಬಿಸಿಯಾಗೋಣ ಎಂದು ಮೊಬೈಲ್ ಪಕ್ಕಕ್ಕಿರಿಸಿ ಮೊದಲು ನಾನು ಒರೆಸಿಕೊಂಡೆ ನಂತರ ಹಾಗೇ ಹಾಡಿಗೆ ತಲೆ ದೂಗುತ್ತಲೇ ಗಾನಸುಧೆಯನ್ನು ನಿಲ್ಲಿಸೋಣ ಎಂದು ಫೋನ್ ನೋಡಿದರೇ… ಫೋನ್ ನ ಮೂಲೆಯಲ್ಲಿ ಸಣ್ಣ ಸಣ್ಣ ನೀಲಿ ಚುಕ್ಕೆಗಳು ಕಂಡವು. ಇದೇನೋ ಡಿಸ್ಪ್ಲೇ ಡಿಸೈನ್ ಇರಬೇಕು ಎಂದು ಸುಮ್ಮನಾಗಿ ಚೆನ್ನಾಗಿ ತಿಂದು ಮಲಗಿದೆವು. ಬೆಳಿಗ್ಗೆ ಎದ್ದು ಫೋನ್ ನೋಡಿದರೆ ಆ ನೀಲಿ ಚುಕ್ಕೆಗಳು ಆಗಸದಂತಾಗಿ ಇಡೀ ಡಿಸ್ಪ್ಲೇ ತುಂಬಿತ್ತು. ಆಗ ತಿಳಿಯಿತು ನನ್ನ ಫೋನಿನ ಡಿಸ್ಪ್ಲೇ ಹೋಗಿತ್ತೆಂದು. ಅದಕ್ಕೆ ಕಾರಣ ಸಂಶೋಧಿಸುತ್ತಾ ಹೋದಾಗ ತಿಳಿದದ್ದು, ಇದೆಲ್ಲಾ ನನ್ನ ವಾಟರ್ ಪ್ರೂಫ್ ಜಾಕೆಟ್ ಜೇಬಿನಲ್ಲಿ ನುಸುಳಿದ್ದ ನೀರು ಫೋನಿನ ಒಳಗೆ ಸೇರಿ ಆದ ದುಷ್ಕೃತ್ಯ ಎಂದು. ಅದರ ಜೊತೆಗೆ ಈ ಗೂಗಲ್ ಫೋನಿನ ಡಿಸ್ಪ್ಲೇ ಇಲ್ಲಿ ಸಿಗದೇ ಅದನ್ನು ಮುಂಬೈಗೆ ಕಳಿಸಿ ರಿಪೇರಿ ಮಾಡಿಸಿದ್ದು ಇನ್ನೊಂದು ಕಥೆ. ಇಲ್ಲಿಯ ಸ್ವಾರಸ್ಯ ಎಂದರೆ, ಇದು ವಾಟರ್ ಪ್ರೂಫ್ ಎಂದು ನಂಬಿ ಖರೀದಿಸಿದ ವಸ್ತುವೂ ಸಹ ತನ್ನ ಕೆಲಸ ಕೆಲವೇ ಕೆಲವು ಗಂಟೆಗಳು ನಿಭಾಯಿಸಿಲ್ಲ. ಆದರೇ, ನಾವು ನೀವು ನೋಡುವ ಕಪ್ಪಗೆದಪ್ಪ ಇರುವ ಮರ ದುಂಬಿಗಳು ನೀರಿನೊಳಗೆ ವಾರಗಳ ಕಾಲ ಮುಳುಗಿದರೂ ಏನೂ ಆಗದೆ, ತನ್ನ ಜೀವವೇ ವಾಟರ್ ಪ್ರೂಫ್ ಎಂಬಂತೆ ಬದುಕಿ ಬರುತ್ತವೆ ಎಂದು ನಾನು ಕನಸಲ್ಲೂ ಊಹಿಸಿರಲಿಲ್ಲ.

© Nigel Raine

ಈ ದುಂಬಿಗಳು ವಸಂತ ಕಾಲದಲ್ಲಿ ಬೇರೆ ರಾಣಿ ದುಂಬಿಯಂತೆ ತನ್ನ ಸೈನ್ಯವನ್ನು ಕಟ್ಟುತ್ತವೆ. ಆದರೆ ಅದಕ್ಕೆ ಮುಂಚೆ ಬರುವ ಚಳಿಗಾಲವನ್ನು ಮಣ್ಣಿನಲ್ಲಿ ಹುದುಗಿ ಚಳಿನಿದ್ದೆ(hibernation)ಗೆ ಜಾರುತ್ತವೆ. ಇದು ಇವುಗಳ ಜೀವನ ಚಕ್ರದಲ್ಲಿ ಒಂದು ಭಾಗ. ಆದರೆ ವಿಜ್ಞಾನಿಗಳ ಪ್ರಯೋಗಾಲಯದಲ್ಲಿ ಆದ ಒಂದು ಆಕಸ್ಮಿಕ ತಪ್ಪು ಇವುಗಳು ನೀರಿನಲ್ಲಿ ಒಂದು ವಾರದ ವರೆಗೆ ಮುಳುಗಿದರೂ ಬದುಕಿರಬಲ್ಲವು ಎಂಬ ಅಚ್ಚರಿಯ ಸಂಗತಿಯನ್ನು ಹೊರಹಾಕಿವೆ. ಹೌದು, ಕೀಟನಾಶಕಗಳಿಂದಈ ದುಂಬಿಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ತಂದಿದ್ದ,ಚಳಿನಿದ್ದೆಯಲ್ಲಿದ್ದ ದುಂಬಿಗಳನ್ನು ಒಂದು ಶೀತಕೇಂದ್ರದಲ್ಲಿ ಇರಿಸಿದ್ದರು. ಆ ಯಂತ್ರ ಕೆಟ್ಟು ಇವುಗಳನ್ನು ಇರಿಸಿದ್ದ ಬಾಟಲುಗಳಲ್ಲಿ ನೀರು ತುಂಬಿ ಬಿಟ್ಟಿತ್ತು. ಇದನ್ನು ಒಂದು ವಾರದ ನಂತರ ಗಮನಿಸಿದ ವಿಜ್ಞಾನಿಗಳು. ಇವುಗಳು ಬದುಕಿರಲಿಕ್ಕೆ ಸಾಧ್ಯವಿಲ್ಲ ಎಂದು,ಅವುಗಳನ್ನು ಎಸೆಯುವ ಸಲುವಾಗಿ ಹೊರಕ್ಕೆ ತೆಗೆದರೇ… ನೀರಿನಿಂದ ಮೇಲೆ ಎತ್ತಿದ ತಕ್ಷಣ ರೆಕ್ಕೆಯನ್ನೂ ಅಲುಗಾಡಿಸಿದವು. ಅಂದರೆ ನೀರಿನಲ್ಲಿ ಸುಮಾರು 8 ದಿನಗಳ ಕಾಲ ಮುಳುಗಿದ್ದರೂ ಸಹ ಇನ್ನೂ ಬದುಕಿದ್ದವು.

ಈ ಆಕಸ್ಮಿಕ ಘಟನೆಯಲ್ಲಿ ಹೊರಬಿದ್ದ ವಿಷಯವನ್ನೇ ಆಧಾರವಾಗಿಸಿಕೊಂಡು ಅದೇ ಪ್ರಯೋಗವನ್ನು ಮುಂದುವರೆಸಿದರು. ಅದಕ್ಕಾಗಿ 143 ರಾಣಿ ದುಂಬಿಗಳನ್ನು ತೆಗೆದುಕೊಂಡು,ಅದರಲ್ಲಿ 21 ದುಂಬಿಗಳನ್ನು ಮಣ್ಣು ತುಂಬಿದ್ದ ಬಾಟಲಿಗಳಲ್ಲಿ ಇರಿಸಿದರು. ಹಾಗೂ ಮಳೆ ಬಂದು ಅವುಗಳಿದ್ದ ಗೂಡು ನೀರು ತುಂಬಿರುವ ಹಾಗೆ ಬಿಂಬಿಸಲು,ದುಂಬಿಗಳು ಮುಳುಗುವ ಹಾಗೆ ಅಥವಾ ನೀರಿನಲ್ಲಿ ತೇಲುವಷ್ಟು ನೀರನ್ನು ಹಾಕಿದರು. ಚಳಿಗಾಲದಲ್ಲಿ ಇರುವ ಉಷ್ಣಾಂಶವನ್ನು ಅಲ್ಲಿ ಸೃಷ್ಟಿಸಿದರು. ಹೀಗೆ ಒಂದು ವಾರದವರೆಗೆ ಇಟ್ಟರು. ಇದರ ಜೊತೆಗೆ ಯಾವುದೇ ನೀರನ್ನು ಹಾಕದೇ ಹಾಗೆಯೇ ಮಣ್ಣಿನಲ್ಲಿ 17 ದುಂಬಿಗಳನ್ನು ಇಟ್ಟರು. ವಾರದ ಬಳಿಕ ಎರಡನ್ನೂ ಪರೀಕ್ಷಿಸಿದರು. ಇದಾದ ನಂತರ ಅವುಗಳನ್ನು ನೀರಿನಿಂದ ಹೊರ ತೆಗೆದು ಮಾಮೂಲಿ ಮಣ್ಣಿನಲ್ಲಿ 8 ದಿನಗಳ ವರೆಗೆ ಇಟ್ಟು ನಂತರ ಪರೀಕ್ಷಿಸಿದರು. ಅವರ ಅಚ್ಚರಿಗೆ ನೀರು ತುಂಬಿದ್ದ 21 ದುಂಬಿಗಳಲ್ಲಿ 17 ದುಂಬಿಗಳು ಏನೂ ಆಗದಂತೆ,ಇವುಗಳು ವಾಟರ್ ಪ್ರೂಫ್ ದುಂಬಿಗಳೇನೋ ಅನ್ನುವ ಹಾಗೆ ಬದುಕಿದ್ದವು. ನೀರೇ ಹಾಕಿರದ 17 ದುಂಬಿಗಳಲ್ಲಿ 15 ದುಂಬಿಗಳು ಬದುಕಿದ್ದವು. ಇವೆರಡು ಸಂದರ್ಭಗಳಲ್ಲಿ ಬದುಕಿ ಬಂದ ದುಂಬಿಗಳ ಸಂಖ್ಯೆಯಲ್ಲಿ ಅಷ್ಟೇನು ವ್ಯತ್ಯಾಸವಿಲ್ಲ ಎಂಬುದೇ ವಿಜ್ಞಾನಿಗಳಿಗೆ ಅಚ್ಚರಿ ತರಿಸಿತ್ತು. ಅಂದರೆ ಈ ದುಂಬಿಗಳು ಚಳಿ ನಿದ್ದೆಗೆ ಜಾರಿದಾಗ ಸ್ವಾಭಾವಿಕವಾಗಿಯೇ ಮಳೆ ಬಂದು ಅದರೊಳಗೆ ಇವು ಮುಳುಗಿದರೂ ಒಂದು ವಾರದವರೆಗೆ ಉಸಿರಾಡದೇ ಬದುಕಿರಬಹುದು! ಎಂಬ ವಿಷಯ ಅಚ್ಚರಿ ತರಿಸಿತ್ತು.

© Nigel Raine

ಇದು ಹೇಗೆ ಸಾಧ್ಯ? ನಾವು ಉಸಿರಾಡದೆ ಕೆಲವು ನಿಮಿಷಗಳೇ ಇರಲು ಸಾಧ್ಯವಿಲ್ಲದಾಗ ಇವುಗಳು ಹೇಗೆ ವಾರದವರೆಗೆ ಇರಬಲ್ಲವು? ಎಂಬ ಪ್ರಶ್ನೆಗೆ ಉತ್ತರ, ದುಂಬಿಗಳಲ್ಲದೇ ಕೆಲವು ಕೀಟಗಳು ತಾವು ಉಸಿರಾಡುವ ರಂದ್ರಗಳನ್ನು ಮುಚ್ಚಿ ಕೆಲ ಕಾಲ ಬದುಕಬಲ್ಲವು. ವಿಶೇಷವಾಗಿ ಚಳಿನಿದ್ದೆಯ ಸಮಯದಲ್ಲಿ. ಜೊತೆಗೆ ಈ ದುಂಬಿಗಳು ಚಳಿ ನಿದ್ದೆಯಲ್ಲಿರುವ ಕಾರಣ ಅವುಗಳ ದೇಹದಲ್ಲಿ ನಡೆಯುವ ಎಷ್ಟೋ ಕ್ರಿಯೆಗಳು ಸುಪ್ತ ಸ್ಥಿತಿಗೆ ಹೋಗಿರುತ್ತವೆ. ಇದೂ ಒಂದು ಕಾರಣವಾಗಿರಬಹುದು,ಎಂದು ವಿಜ್ಞಾನಿಗಳು ಊಹಿಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ,ಈ ದುಂಬಿಗಳು ಒಂದು ವಾರದವರೆಗೆ ಹೇಗೆ ಉಸಿರಾಡದೆ ಬದುಕಿರಬಹುದು ಎಂಬ ವಿಷಯ ವಿಜ್ಞಾನಿಗಳನ್ನೇ ಬೆರಗುಗೊಳಿಸಿದೆ ಎಂಬುದು ವಾಸ್ತವ.

ಇಲ್ಲಿಯವರೆಗೆ ದುಂಬಿಗಳು ಕೇವಲ ಪರಾಗಸ್ಪರ್ಶಕಗಳು, ಹೂವಿನಿಂದ ಹೂವಿಗೆ ಹಾರಿ ಪರಾಗಸ್ಪರ್ಶ ಮಾಡುತ್ತವೆ ಎಂಬ ವಿಷಯಗಳು ತಿಳಿದಿತ್ತೇ ಹೊರತು ಅವುಗಳ ಜೀವನ ಶೈಲಿ,ಗೂಡು ಕಟ್ಟುವಿಕೆ ಹಾಗೂ ಚಳಿನಿದ್ದೆಗಳಂತಹ ವಿಷಯಗಳ ಬಗ್ಗೆ ನಮಗೆಷ್ಟು ಕಡಿಮೆ ಜ್ಞಾನವಿದೆ ಎಂಬುದು ಈ ಸಂಶೋಧನೆಯಲ್ಲಿ ಅರಿವಾಗಿದೆ. ಪ್ರಕೃತಿಯೇ ಹಾಗೆ, ಏನೇನೋ ಸಂಶೋಧನೆ ಮಾಡಿಬಿಟ್ಟಿದ್ದೇವೆ ಎಂದು ಇನ್ನೇನು ಖುಷಿಯಲ್ಲಿ ಬೀಗುವ ಹೊತ್ತಿನಲ್ಲಿ ನಮ್ಮ ಬಾಯಿಗೇ ಬೀಗ ಹಾಕುವಂತ ಒಂದು ಸಣ್ಣ ವಿಚಾರವನ್ನು ಅನಾವರಣಗೊಳಿಸಿಬಿಡುತ್ತಾಳೆ.

ಎಷ್ಟೇ ಅರಿತರು, ಅರಿವುದು ಇನ್ನೆಷ್ಟೋ ಇದೆ ಎಂಬ ವಿನಮ್ರತೆ ಬರುವವರೆಗೂಇಂತಹ ಝಳಕ್ ಅನ್ನು ಆಗಾಗ ನೀಡುತ್ತಲೇ ಇರುತ್ತಾಳೆ. . .

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
   
ಬೆಂಗಳೂರು ನಗರ ಜಿಲ್ಲೆ

Spread the love
error: Content is protected.