ಜೇನು ಪ್ರಪಂಚ: ಭಾಗ ೮

ಜೇನು ಪ್ರಪಂಚ: ಭಾಗ ೮

© ಪನ್ನಗಾ ಶ್ರೀ ಜಿ

ಈ ನಿಸ್ವಾರ್ಥತೆ ಏನೋ ನಮ್ಮಲ್ಲಿ ವಿಕಾಸವಾಯಿತು, ನಮ್ಮನ್ನು ಬಂಜೆಯಾಗಿಸಿ ನಮ್ಮ ತಾಯಿಯ ಸೇವಕಿಯನ್ನಾಗಿಸಿತು. ಇದರಿಂದ ನಾವೇಕೆ ನಮ್ಮ ವಠಾರಕ್ಕೆ, ನಮ್ಮ ತಾಯಿಗೆ, ನಮ್ಮ ಸಹೋದರಿಯರಿಗೆ ಸಹಾಯವಾಗಬೇಕು? ನಮಗೇನು ಉಪಯೋಗ? ನಾನು ಇದನ್ನೆಲ್ಲಾ ಯೋಚಿಸಲೇ ಇಲ್ಲವಲ್ಲ! ನಾವು ಇಷ್ಟೊಂದು ಆಳವಾಗಿ ಯೋಚಿಸುತ್ತೇವಾ? ಬಹುಶಃ ಈ ನಿಸ್ವಾರ್ಥತೆ ನಮ್ಮ ಆಂತರಿಕ ನಡುವಳಿಕೆಯ ಯಂತ್ರದ ಭಾಗ ಎಂದು ತಿಳಿದು ಅದರಂತೆ ನಡೆದುಕೊಂಡು ಹೋಗುತ್ತೇವೆ ಎಂದನಿಸುತ್ತದೆ.

ಪ್ರತಿಯೊಂದು ಜೀವಿಯು ತಾನು ಮಕ್ಕಳನ್ನು ಹೆರಬೇಕು ನನ್ನ ವಂಶ ವೃದ್ಧಿಯಾಗಬೇಕು ಎನ್ನುವುದು ತನ್ನ ಅನುವಂಶದಲ್ಲಿಯೇ ಬಂದಿರುವಂತಹ ಸ್ವಾರ್ಥ ನಡುವಳಿಕೆ, ಆದರೆ ನಾವಿಲ್ಲಿ ಬಂಜೆ! ಕೇವಲ ನಮ್ಮ ತಾಯಿ/ರಾಣಿಯ ಸೇವಕರು, ಸೇನಾನಿಗಳು! ಕೇವಲ ಅವಳಿಗಷ್ಟೇ ಮಕ್ಕಳನ್ನು ಹೇರುವಂತಹ ಅವಕಾಶ! ನಾವ್ಯಾಕೆ ಅವಳ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಲಿಲ್ಲ? ನಮ್ಮಲ್ಲೂ ನಮಗೆ ಅರಿಯದ ಸ್ವಾರ್ಥವಿದೆಯೇ? ನಮ್ಮ ಈ ನಡುವಳಿಕೆಯ ಕುರಿತಾಗಿ ವಿವರಣೆಯನ್ನು ಕೊಡಲು ಎಲ್ಲರು ಸೋತಾಗ 1964ರಲ್ಲಿ W. D. Hamilton ಎಂಬ ವಿಜ್ಞಾನಿ ಬರಬೇಕಾಯಿತು, ಅವನು ತನ್ನ ಗಣಿತ ಮತ್ತು ಆನುವಂಶಿಕ ಮಾದರಿಗಳ ಮೂಲಕ ಸೂಕ್ತವಾದ ವಿವರಣೆ ಕೊಟ್ಟು ನೂರಾರು ವರ್ಷಗಳಿಂದ ಜೀವ ವಿಜ್ಞಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿದ್ದ ಪ್ರಶ್ನೆಗೆ ಉತ್ತರವಿಟ್ಟ. ನಮ್ಮ ಈ ನಡುವಳಿಕೆಯ ಹಿಂದಿನ ಮರ್ಮವನ್ನು ಅರ್ಥೈಸಿದ ಘನತೆ ಮಾತ್ರ ಈ ಹ್ಯಾಮಿಲ್ಟನ್ ಗೆ ಸಲ್ಲಬೇಕು.

ಈತನ ವಿಶ್ಲೇಷಣೆ ಬಹಳ ಸರಳ, ಇಷ್ಟು ದಿನ ಡಾರ್ವಿನ್ ಹೇಳಿದ್ದ ಉಳಿವು (Fitness) ಕೇವಲ ಮಕ್ಕಳನ್ನು ಹೇರುವುದರಿಂದ ಮಾತ್ರ ಬರುವುದಲ್ಲ, ಅದು ನಿನ್ನ ಮತ್ತು ನಿನ್ನ ರಕ್ತ ಸಂಬಂಧಿಕರ ಸಮಗ್ರ ಸ್ವಧಾತುಗಳಿಂದಲೂ ಬರಬಹುದು ಎಂದು ಹ್ಯಾಮಿಲ್ಟನ್ ವಿವರಿಸಿದ. ನೀನು ಹೆಚ್ಚು ಹೆಚ್ಚು ಮಕ್ಕಳನ್ನು ಹೇರಿದಷ್ಟು ನಿನ್ನ ಅನುವಂಶಿಕ ಧಾತು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತಾ ಸಾಗುತ್ತದೆ ಆದ್ದರಿಂದಲೇ ನಿನ್ನಷ್ಟೇ ಪ್ರೇಮ ನಿನ್ನ ಮಕ್ಕಳ ಮೇಲೆಯೂ ಸಹ ಇರುವುದು, ಇದು ಡಾರ್ವಿನ್ ಹೇಳಿದ್ದು, ಅದನ್ನೇ ಒಂದು ಶತಮಾನದ ಕಾಲ ನಂಬಿದ್ದು. ಹ್ಯಾಮಿಲ್ಟನ್ ಸಮಗ್ರ ಸ್ವಧಾತುಗಳ ವಿಶ್ಲೇಷಣೆಗೆ ಉದಾಕರಿಸಿದ್ದು ನಮ್ಮನ್ನು ಅಂದರೆ ನಮ್ಮಂತಹ ಸಾಮಾಜಿಕ ಕೀಟಗಳನ್ನು; ನಾವು, ಇರುವೆ, ಗೆದ್ದಲು, ಕಣಜಗಳನ್ನು. ಈ ಸಾಮಾಜಿಕ ಕೀಟಗಳಲ್ಲಿ ರಾಣಿ ಮತ್ತು ಸೇವಕರು ಶ್ರೇಣಿ ವ್ಯವಸ್ಥೆ ಸಾಮಾನ್ಯ ಮತ್ತು ಕೇವಲ ರಾಣಿಗೆ ಮಾತ್ರ ಮಕ್ಕಳನ್ನು ಹೇರುವ ಸ್ವತಂತ್ರ!

ನಿಮಗೆ ಈ ವಿಷಯ ಗೊತ್ತಿರಬಹುದು, ಮನುಷ್ಯರೆಲ್ಲಾ ‘Diploid’ ಸ್ಥಿತಿ ಅಂದರೆ ಜೀವಿಯ ಜೀವಕೋಶಗಳಲ್ಲಿ ಎರಡು ಸಂಪೂರ್ಣ ವರ್ಣತಂತುಗಳ ಉಪಸ್ಥಿತಿಯನ್ನು ಸೂಚಿಸುತ್ತದೆ, ಪ್ರತಿ ಪೋಷಕರು ಪ್ರತಿ ಜೋಡಿಗೆ ವರ್ಣತಂತುಗಳನ್ನು ಕೊಡುಗೆ ನೀಡುತ್ತಾರೆ. “Haploid” ಸ್ಥಿತಿ ಕೇವಲ ಅಂಡಾಣು ಮತ್ತು ವೀರ್ಯಗಳಲ್ಲಿ ಮಾತ್ರ ಕಾಣಲು ಸಾಧ್ಯ. ಆದರೆ ನಾವುಗಳು “Haplodiploidy” ಅಂದರೆ ಹೆಣ್ಣು ‘Diploid’ ಆಗಿದ್ದರೆ ಗಂಡು ‘Haploid’! ಕಾರಣ ಗಂಡು ಹುಳುಗಳು ಜನಿಸಲು ವೀರ್ಯದ ಅವಶ್ಯಕತೆ ಇಲ್ಲ, ಫಲೀಕರಿಸದ ಮೊಟ್ಟೆಯಿಂದಲೇ ಗಂಡು ಹುಳುಗಳಾಗುತ್ತವೆ, ಹೆಣ್ಣಾಗಲು ನಮ್ಮ ರಾಣಿಯ ಅಂಡಾಣು ಮೊಟ್ಟೆ ಮತ್ತು ತಂದೆಯ ವೀರ್ಯ ಫಲೀಕರಿಸಬೇಕು, ಆಗ ಮಾತ್ರ ನಾವು ಹೆಣ್ಣುಗಳು ಹುಟ್ಟಲು ಸಾಧ್ಯ.

ನಮ್ಮ ಬಗ್ಗೆ ತಿಳಿಸುವ ಮುನ್ನ ನಿಮ್ಮ ಮನುಷ್ಯರಲ್ಲೇ ಅನುವಂಶೀಯ ಸಂಬಂಧದ ಬಗ್ಗೆ ತಿಳಿದುಕೊಳ್ಳುವ, ಉದಾಹರಣೆಗೆ ನೀನು ನಿನ್ನ ತಂದೆಗೆ ಮತ್ತು ತಾಯಿಗೆ ೫೦% ಅನುವಂಶೀಯವಾಗಿ ಸಂಬಂಧಿಯಾಗಿರುತ್ತಿಯ. ನಿನ್ನ ಅಣ್ಣ-ತಮ್ಮಂದಿರು ಅಕ್ಕ-ತಂಗಿಯರು ನಿನಗೆ ಸಹ ಅನುವಂಶೀಯವಾಗಿ ೫೦% ಸಂಬಂಧಿಯಾಗಿರುತ್ತಾರೆ ಹೇಗೆಂದರೆ ಅದೇ ತಂದೆ ತಾಯಿಯಿಂದ ರ್ಣತಂತುಗಳು ಬಂದಿರುವ ಕಾರಣದಿಂದ (ಚಿತ್ರ-೧ ಅನ್ನು ನೋಡಿ). ನಿನಗೆ ಹುಟ್ಟುವ ಮಕ್ಕಳಿಗೆ ನೀನು ೫೦% ಅನುವಂಶೀಯವಾಗಿ ಸಂಬಂಧಿಯಾಗಿರುವೆ. ಅದೇ ರೀತಿ ನಿನ್ನ ಸೋದರ ಸೋದರಿಯರ ಮಕ್ಕಳಿಗೆ ೨೫% ರಷ್ಟು ಸಂಬಂಧಿಯಾಗಿರುವೆ. ಮತ್ತಷ್ಟು ಅನುವಂಶೀಯ ಸಂಬಂಧದ ಕುರಿತಾಗಿ ಚಿತ್ರ ೧ ಅನ್ನು ಗಮನಿಸಿ. ಆ ಅನುವಂಶೀಯ ಸಂಬಂಧದಿಂದಾಗಿಯೇ ನಾನು, ನನ್ನ ಕುಟುಂಬ, ನನ್ನ ಸಂಬಂಧಿಕರು, ನನ್ನ ಜಾತಿ, ನನ್ನ ಊರು, ನನ್ನ ದೇಶ ಎನ್ನುವ ಸ್ವರ್ಥತೆ ಇರುವುದು, ಅದಕ್ಕೆ ಮೂಲ ಕಾರಣ ಅನುವಂಶೀಯತೆ!

  ಚಿತ್ರ-1: ಮನುಷ್ಯರಲ್ಲಿ ಅನುವಂಶೀಯತೆಯ ಸಂಬಂಧ

ನಮ್ಮಲ್ಲಿ, “Haplodiploidy” ಸ್ಥಿತಿಯ ಕಾರಣದಿಂದ ನಾವು ನಮ್ಮ ತಾಯಿಗೆ 50% ಮತ್ತು ನಮ್ಮ ತಂದೆಗೆ 50% ರಷ್ಟು ಅನುವಂಶೀಯವಾಗಿ ಸಂಬಂಧಿಯಾಗಿರುತ್ತೇವೆ, ಆದರೆ ನಮ್ಮ ಅಣ್ಣ/ತಮ್ಮನಿಗೆ ನಾವು ಕೇವಲ 25% ಮಾತ್ರ ಸಂಬಂಧಿಯಾಗಿರುತ್ತೇವೆ ಕಾರಣ ಕೇವಲ ನಮ್ಮ ತಾಯಿಯಿಂದ ಜನಿಸಿದ ಕಾರಣದಿಂದ. ಇನ್ನು ನಮ್ಮ ತಾಯಿಗೆ ಹುಟ್ಟಿದ ನನ್ನ ಇತರ ಸಹೋದರಿಯರು ನನಗೆ 75% ರಷ್ಟು ಅನುವಂಶೀಯವಾಗಿ ಸಂಬಂಧಿಯಾಗಿರುತ್ತಾಳೆ.

ಚಿತ್ರ-2: ನಮ್ಮಲ್ಲಿ ಅನುವಂಶೀಯತೆಯ ಸಂಬಂಧ; @biocyclopedia

ಒಂದು ವೇಳೆ ನಾವು ನಮ್ಮ ಬಂಜೆತನದ ವಿರುದ್ಧ ಧ್ವನಿಯೆತ್ತಿ ನಾವು ಬೇರೆ ಗಂಡಿನೊಂದಿಗೆ ಮಿಲನವಾಗಿ ಮಕ್ಕಳನ್ನು ಹೆತ್ತರೂ ನನ್ನ ಮತ್ತು ನನ್ನ ಮಗ/ಮಗಳು ಅನುವಂಶೀಯವಾಗಿ ಕೇವಲ 50% ರಷ್ಟು ಮಾತ್ರ ಸಂಬಂಧಿಯಾಗಿರುತ್ತಾರೆ! ನಾನು ಮಕ್ಕಳನ್ನು ಹೆತ್ತರೆ ಅದರಿಂದ ನನಗೆ ಸಿಗುವುದು 50%, ಆದರೆ ನನ್ನ ತಾಯಿಗೆ ಸಹಕರಿಸಿ ಅವಳನ್ನು ಇನ್ನಷ್ಟು ಮಕ್ಕಳಾಗುವಂತೆ ಮಾಡಿದರೆ ಹುಟ್ಟುವ ನನ್ನ ಸೋದರಿಯರು ನನಗೆ 75% ಹತ್ತಿರವಾಗಿರುತ್ತಾರೆ! ಆದ್ದರಿಂದ ನಾವು ಮಕ್ಕಳನ್ನು ಹೇರುವುದಕ್ಕಿಂತ ನಮ್ಮ ತಾಯಿಗೆ ಸಹಕರಿಸಿ ಇನ್ನಷ್ಟು ಸಹೋದರಿಯರನ್ನು ಪಡೆಯುದರಿಂದ ಸಮಗ್ರ ಸ್ವಧಾತುಗಳ ಒಟ್ಟು ಸಂಖ್ಯೆ ಹೆಚ್ಚಿರುತ್ತದೆ! ಆದ್ದರಿಂದಲೇ ಇರಬೇಕು ನಾವು ನಮ್ಮ ಸ್ವಂತ ಮಕ್ಕಳನ್ನು ಹೆರದೆ ನಮ್ಮ ತಾಯಿಗೆ ಸಹಕರಿಸುತ್ತಾ ನಮ್ಮ ಸೋದರಿಯರ ಏಳ್ಗೆಗೆ ಸಹಕರಿಸುತ್ತಿರುವುದು.

ಒಂದು ವಿಧದಲ್ಲಿ ನಮ್ಮ ತಾಯಿ ನಮ್ಮನ್ನು ಹಿಡಿತದಲ್ಲಿ ಇಟ್ಟಿದೆ ಎನ್ನುವುದಕ್ಕಿಂತ ನಾವೇ ನಮ್ಮ ರಾಣಿ/ತಾಯಿಯನ್ನು ಹಿಡಿತದಲ್ಲಿ ಇಟ್ಟು ಅವಳನ್ನು ಇನ್ನಷ್ಟು ಮೊಟ್ಟೆಗಳನ್ನು ಇಡುವಂತೆ ಒತ್ತಡ ಹೇರುತ್ತಿದ್ದೇವೆ ಎನ್ನಬಹುದು! ಈಗ ಯಾರು ಯಾರನ್ನು ನಿಯಂತ್ರಿಸುತ್ತಿದ್ದಾರೋ ಅರ್ಥವಾಗಿರಬಹುದು.

ಲೇಖನ: ಹರೀಶ ಎ. ಎಸ್.

IISER- ತಿರುಪತಿ

Spread the love
error: Content is protected.