ಹಾವು, ನಾವು ಮತ್ತು ಪರಿಸರ
Ornate flying snake ©ಪೂರ್ಣಪ್ರಜ್ಞಾ ಎಸ್. ಎನ್.
ಹಿಂದಿನ ಸಂಚಿಕೆಯಿಂದ . . .
ಹಾವುಗಳ ಬಗೆಗೆ ನಮ್ಮಲ್ಲಿರುವ ಕೆಲವು ಅಜ್ಞಾನ ಅಥವಾ ಮೂಢನಂಬಿಕೆಗಳು.
1. ನಾಗರ ಹಾವಿಗೆ 12 ವರ್ಷದ ದ್ವೇಷವಾಗಲಿ ಸೇಡಾಗಲಿ ಇರುವುದಿಲ್ಲ. ಮೂಲತಃ ಹಾವಿಗೆ ನೆನಪಿನ ಶಕ್ತಿಯೇ ಇಲ್ಲ.
2. ಹಾವು ಹಾಲುಕುಡಿಯುತ್ತದೆ ಅನ್ನುವ ನಂಬಿಕೆ. ಈ ಅಜ್ಞಾನದಿಂದ ನಿಜವಾದ ಹಾವಿಗೆ ಹಾಲೆರೆಯಲು ಹೋಗಿ ಅಪಾಯಕ್ಕೆ ಸಿಲುಕಿಕೊಳ್ಳಬಹುದು ಅಥವಾ ಆ ನಂಬಿಕೆಯಿಂದ ಕಲ್ಲು ನಾಗರಕ್ಕೆ ಅಥವಾ ಹುತ್ತಕ್ಕೆ ಹಾಲು ಸುರಿದು ಪೌಷ್ಟಿಕ ಆಹಾರವಾಗಿರುವ ಅಮೂಲ್ಯವಾದ ಹಾಲನ್ನು ವ್ಯರ್ಥ ಮಾಡುವುದರ ಬದಲು ನಿಜವಾದ ಹಾವುಗಳನ್ನು ಸಂರಕ್ಷಿಸುವುದೇ ನಾಗದೇವರಿಗೆ ಸಲ್ಲಿಸುವ ನಿಜವಾದ ಪೂಜೆ ಎನ್ನುವುದು, ಎಲ್ಲಾ ಪರಿಸರ ಪ್ರೇಮಿಗಳ ಮತ್ತು ಉರಗ ಸಂರಕ್ಷಕರ ಒಕ್ಕೊರಲ ಅಭಿಪ್ರಾಯ. ನಮ್ಮ ಪೂರ್ವಿಕರು ರೂಢಿಸಿಕೊಂಡು ಬಂದಂತೆ ಹಾವನ್ನು ಪೂಜಿಸುವುದು ತಪ್ಪಲ್ಲ ಆದರೆ ಆ ರೂಢಿಯಲ್ಲಿರುವ ಕೆಲವು ಮೂಢನಂಬಿಕೆಗಳನ್ನು ಅರ್ಥೈಸಿಕೊಂಡು, ಬೇಕಾದ್ದನ್ನು ಮಾತ್ರ ಮಾಡಿದರೆ ಹಾವುಗಳು ಉಳಿಯುತ್ತವೆ ಮತ್ತು ನಮ್ಮ ಆಚರಣೆ, ಧರ್ಮ ಮತ್ತು ನಂಬಿಕೆಗಳೂ ಉಳಿಯುತ್ತವೆ.
3. ಸರ್ಪ ಸಂಚಾರ / ನಾಗನ ಹಾದಿ: ಹಾವುಗಳು ವಿಶೇಷವಾಗಿ ನಾಗರಹಾವು ತಮ್ಮ ಆಹಾರ ಹುಡುಕಾಟ ಪ್ರಕ್ರಿಯೆಯಲ್ಲಿ ತಮ್ಮ ಶತ್ರುಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಸುರಕ್ಷಿತವಾದ ಹಾದಿಯೊಂದನ್ನು ಕಂಡುಕೊಂಡಿರುತ್ತವೆ. ಆಹಾರ ಹುಡುಕಾಟಕ್ಕೆ ಪ್ರತೀ ಭಾರಿ ತಮ್ಮ ಬಿಲ ಅಥವಾ ವಾಸಸ್ಥಾನದಿಂದ ಅದೇ ಹಾದಿಯಲ್ಲಿ ಸಂಚರಿಸುತ್ತವೆ. ಇದಲ್ಲದೆ ಅದರಲ್ಲಿ ಮತ್ಯಾವ ಅಪಾಯವೂ ಅಪಶಕುನವೂ ಇರುವುದಿಲ್ಲ.
4. ಕೇರೆ ಹಾವು ತನ್ನ ಬಾಲದಿಂದ ಹೊಡೆದರೆ ಎಲುಬು ಮುರಿಯುತ್ತದೆ ಅಥವಾ ಚರ್ಮ ಗಂಟಾಗುತ್ತದೆ ಎನ್ನುವ ನಂಬಿಕೆ. ಇದು ಒಂದು ತಪ್ಪು ಕಲ್ಪನೆ ಇದಕ್ಕೆ ಯಾವ ಪುರಾವೆಗಳು ಇಲ್ಲ.
5. ಹಾವು ಹುತ್ತವನ್ನು ಕಟ್ಟುತ್ತದೆ ಎನ್ನುವುದು ತಪ್ಪು ಕಲ್ಪನೆ. ಗೆದ್ದಲು ಹುಳುಗಳು ಕಟ್ಟಿದ ಹುತ್ತದಲ್ಲಿ ಹಾವುಗಳು ಸೇರಿಕೊಳ್ಳುವುದುಂಟು.
6. ಹಾವುಗಳ ಮಿಲನಕ್ರಿಯನ್ನು ನೋಡುವುದು ಮಹಾಪಾಪವೆಂಬ ಕಲ್ಪನೆ. ಇದು ತಪ್ಪು, ಮಿಲನ ಪ್ರತೀ ಜೀವಿಯ ಸಹಜ ಕ್ರಿಯೆ. ಆದರೆ ಮಿಲನ ಕ್ರಿಯೆಯಲ್ಲಿ ತೊಡಗಿರುವ ಹಾವುಗಳಿಗೆ ತೊಂದರೆ ನೀಡುವುದು ಮಹಾಪಾಪ.
7. ಹಾವುಗಳು ಯಾವುದೇ ನಿಧಿಯನ್ನು ಅಥವಾ ನಿಕ್ಷೇಪಗಳನ್ನು ಕಾಯುತ್ತಿರುವುದಿಲ್ಲ. ಹಾವುಗಳಿಗೆ ಅದರ ಅವಶ್ಯಕತೆ ಇಲ್ಲ. ಅವುಗಳಿಗೆ ಆಹಾರದ ಹೊರತಾಗಿ ಉಳಿದುದರಲ್ಲಿ ನಿರಾಸಕ್ತಿ ಹೆಚ್ಚು.
8. ಯಾವುದೇ ನಾಗರ ಹಾವುಗಳಲ್ಲಿ ನಾಗಮಣಿ ಇರುವುದಿಲ್ಲ. ಈ ಅಜ್ಞಾನದಿಂದಲೇ ಎಷ್ಟೋ ನಾಗರಹಾವುಗಳು ಬಲಿಯಾಗಿವೆ.
9. ಯಾವುದೇ ಮಂಡಲದ ಹಾವನ್ನು ಸಾಯಿಸಿದ ನಂತರ ಸುಡದೇ ಬಿಟ್ಟರೇ ಅದರ ಪ್ರತೀ ಎಲುಬಿಗೂ ಒಂದೊಂದು ಮರಿಯಾಗುತ್ತವೆ ಅಥವಾ ಸತ್ತ ಹಾವಿನ ಚರ್ಮ ಅಥವಾ ಎಲುಬು ತಾಕಿದರೂ ಜೀವಂತ ಹಾವಿನಷ್ಟೇ ವಿಷ ಎಂಬ ವದಂತಿ ಶುದ್ಧ ಸುಳ್ಳು. ಮೊದಲನೆಯದಾಗಿ ಹಾವುಗಳನ್ನು ಸಾಯಿಸುವುದೇ ತಪ್ಪು. ಇದು ನಮ್ಮ ಕಾನೂನಿನಡಿಯಲ್ಲಿ ಜಾಮೀನು ರಹಿತ ಅಪರಾಧ.
ಹಾವುಗಳ ಬಗೆಗಿನ ಕೆಲವು ಆಸಕ್ತಿಕರ ಮಾಹಿತಿಗಳು
1. ಹಾವುಗಳ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಜುಲೈ 16 ರ ರಂದು ವಿಶ್ವ ಹಾವುಗಳ ದಿನ ಆಚರಿಸಲಾಗುತ್ತದೆ. ಇದು 2013ರ ಜುಲೈ 16ರ ರಿಂದ ಪ್ರಾರಂಭವಾಯಿತು
2. ಜೂನ್ ನಿಂದ ಆಗಸ್ಟ್ ಅವಧಿಯಲ್ಲಿ ಹೆಚ್ಚಾಗಿ ಹಾವುಗಳು ಮರಿಮಾಡುತ್ತವೆ. ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಾದುದು ಒಳಿತು.
3. ಆಗ ತಾನೇ ಹುಟ್ಟಿದ ವಿಷಪೂರಿತ ಹಾವಿನ ಮರಿಯಲ್ಲೂ ಸಹ ಒಬ್ಬ ವ್ಯಕ್ತಿಯು ಸಾಯುವಷ್ಟು ವಿಷವಿರುತ್ತದೆ. ಅದು ಆ ಜೀವಿಯ ತಪ್ಪಲ್ಲ, ತನ್ನ ಆತ್ಮರಕ್ಷಣೆಗಾಗಿ ಪ್ರಕೃತಿ ನೀಡಿರುವ ವರ.
4. ಹಾವುಗಳು ಸಾಮಾನ್ಯವಾಗಿ ಕಾಲುಗಳಿಗೆ ಕಚ್ಚುತ್ತವೆ ಕೆಲವೊಮ್ಮೆ ಕೈಗಳಿಗೆ ಕಚ್ಚುತ್ತವೆ. ಕೃಷಿ ಚಟುವಟಿಕೆಯಲ್ಲಿರುವವರು ಜಾಗರೂಕತೆಯಿಂದ ಕೆಲಸ ಮಾಡುವುದು ಒಳ್ಳೆಯದು.
5. ಹಾವು ಕಡಿತಕ್ಕೆ ನೀಡುವ ಆಂಟಿ ಸ್ನೇಕ್ ವೆನಮ್ (Anti-Venom) ಲಸಿಕೆಗಳು ಬಹುತೇಕ ಕುದುರೆಯ ರಕ್ತದ ಆಂಟಿಡೊಟ್ ಇಂದ ಮಾಡಲ್ಪಟ್ಟಿರುತ್ತವೆ.
6. ಕಾಳಿಂಗ ಸರ್ಪ ಒಮ್ಮೆ ಕಚ್ಚಿದಾಗ ಸ್ರವಿಸುವ ವಿಷ ಸುಮಾರು 20 ಜನರನ್ನು ಒಂದೇ ಬಾರಿಗೆ ಕೊಲ್ಲುವಷ್ಟು ತೀವ್ರವಾಗಿರುತ್ತದೆ. ಕಾಳಿಂಗ ಸರ್ಪದ ಬಗ್ಗೆ ಇಲ್ಲಿ ಹೆಚ್ಚು ವಿವರಿಸಲಾಗಿಲ್ಲ, ಏಕೆಂದರೆ ಇದು ಅತ್ಯಂತ ವಿಶಿಷ್ಟ ಹಾವು ಇದರ ಬಗ್ಗೆಯೇ ಒಂದು ಪ್ರತ್ಯೇಕ ಲೇಖನವನ್ನೇ ಬರೆಯಬಹುದು.
7. ಭಾರತದಲ್ಲಿ ಕಂಡುಬರುವ ಯಾವುದೇ ಹೆಬ್ಬಾವುಗಳು ಮನುಷ್ಯನನ್ನು ನುಂಗುವುದಿಲ್ಲ. ಆಫ್ರಿಕಾದ ಕೆಲವು ದೈತ್ಯ ಹೆಬ್ಬಾವುಗಳು ಮನುಷ್ಯನನ್ನು ನುಂಗಿದ ಉದಾಹರಣೆಗಳಿವೆ. ಆದರೆ ಭಾರತದಲ್ಲಿ ಈವರೆಗೂ ಆ ರೀತಿಯ ಪ್ರಕರಣಗಳು ಜರುಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಆ ರೀತಿಯ ಬಹುತೇಕ ಪ್ರಕರಣಗಳು ಕೃತಕವಾದವು ಅಥವಾ ಆಫ್ರಿಕಾ ಮೂಲದವು.
8. ಯಾವುದೇ ಹಾವುಗಳು ತನ್ನ ಬೇಟೆಯ ಹೊರತಾಗಿ, ತಮಗೆ ತೊಂದರೆಯಾಗದೆ, ತಮಗೆ ನೋವಾಗದೆ ವಿನಾಕಾರಣ ಯಾವ ಜೀವಿಯ ಮೇಲೂ ಆಕ್ರಮಣ ಮಾಡುವುದಿಲ್ಲ. ಒಮ್ಮೆ ಹೊಟ್ಟೆ ತುಂಬಿ ಮಲಗಿದರೆ ಮತ್ತೆ ಹೊರಗೆ ಬರುವುದು ತನಗೆ ಹಸಿವಾದಾಗಲೋ ಅಥವಾ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಬಿಸಿಲು ಕಾಯಿಸಿಕೊಳ್ಳುವುದಕ್ಕಾಗಿ ಮಾತ್ರ.
9. ಕೇರೆ ಹಾವುಗಳು ಬಹಳ ವೇಗವಾಗಿ ಚಲಿಸುವಂತವು.
10. ಕಟ್ಟುಹಾವು ಮತ್ತು ತೋಳದ ಹಾವುಗಳು ನಿಶಾಚರಿಗಳು. ಇದರಲ್ಲಿ ಕಟ್ಟು ಹಾವು ಮಾತ್ರ ವಿಷಪೂರಿತ ಹಾಗಾಗಿ ರಾತ್ರಿವೇಳೆ ಸಂಚರಿಸುವಾಗ ಟಾರ್ಚ್ ಲೈಟ್ ಬಳಸುವುದು ಒಳಿತು.
ಹಾವು ಕಚ್ಚಿದಾಗ ಏನು ಮಾಡಬೇಕು?
1. ಕಚ್ಚಿದ ತಕ್ಷಣ ಸಾಧ್ಯವಾದರೆ ಯಾವ ಹಾವು ಎಂದು ಗುರುತಿಸಿ. ಮುಖ್ಯವಾಗಿ ಗಾಬರಿ ಅಥವಾ ಭಯಭೀತರಾಗಬಾರದು.
2. ಹಾವು ಕಚ್ಚಿದ 30 ನಿಮಿಷದಿಂದ ಒಂದು ಗಂಟೆಯ ಒಳಗಾಗಿ ಅಲೋಪತಿಕ್ ಆಸ್ಪತ್ರೆಗೆ ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕು. ಕನಿಷ್ಠ ಎರಡು ಗಂಟೆಯೊಳಗಾದರೂ ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು. ಎಷ್ಟು ಬೇಗ ಆಸ್ಪತ್ರೆಗೆ ದಾಖಲಾಗುತ್ತೇವೆಯೋ ಅಷ್ಟು ಜೀವಾಪಾಯ ಅಥವಾ ಅಂಗವೈಫಲ್ಯತೆಯ ಸಾಧ್ಯತೆಗಳು ಕಡಿಮೆಯಾಗುತ್ತದೆ.
3. ಯಾವುದೇ ಕಾರಣಕ್ಕೂ ಮಂತ್ರ ಪ್ರಯೋಗ, ನಾಟಿ ಔಷಧಿ ಇಂಥವುಗಳ ಮೊರೆಹೋಗಬಾರದು. ವಿಷಪೂರಿತ ಹಾವಿನ ಕಡಿತಕ್ಕೆ ಹಾವಿನ ವಿಷ ನಿರೋಧಕ ಚುಚ್ಚುಮದ್ದು (ಆಂಟಿ ಸ್ನೇಕ್ ವೆನಿಮ್) ಒಂದೇ ಸೂಕ್ತ ಔಷಧ.
4. ಮಂತ್ರ ಪ್ರಯೋಗ ಅಥವಾ ನಾಟಿ ಔಷಧಿಗಳಿಂದ ಬದುಕುಳಿಯುವ ಪ್ರಕರಣಗಳಲ್ಲಿ ಮೊದಲನೆಯದಾಗಿ ವಿಷದ ಹಾವು ಕಚ್ಚಿರುವುದಿಲ್ಲ ಅಥವಾ ವಿಷದ ಹಾವೇ ಕಚ್ಚಿದ್ದರೂ ಅದು ವಿಷವನ್ನು ಸ್ರವಿಸಿರುವುದಿಲ್ಲ.
ಉಪಸಂಹಾರ
ನಲ್ಮೆಯ ಓದುಗರೇ, ಈ ಲೇಖನದಲ್ಲಿರುವ ಮಾಹಿತಿಗಳೇ ಅಂತಿಮ ಎಂದು ಭಾವಿಸಬಾರದು. ನಾನು ಮೂಲತಃ ಕೃಷಿ ಕುಟುಂಬದಿಂದ ಬಂದವನಾಗಿದ್ದು, ಚಿಕ್ಕಂದಿನಲ್ಲಿ ಕೃಷಿ ಚಟುವಟಿಕೆಗಳನ್ನೂ ಮಾಡುತ್ತಿದ್ದರಿಂದ ಈ ಹಾವುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿ, ಕೆಲವಾರು ಉರಗ ಸಂರಕ್ಷಕರ ಸಂದರ್ಶನಗಳನ್ನು ನೋಡಿ, ಈ ಮೇಲ್ಕಂಡ ಮಾಹಿತಿಗಳನ್ನು ಕಲೆಹಾಕಿದ್ದೇನೆ. ನಾನು ಮೊದಲೇ ಹೇಳಿರುವಂತೆ ಪ್ರಕೃತಿಯಲ್ಲಿ ಯಾವುದನ್ನೂ ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಈ ಪ್ರಕೃತಿಯೇ ಅಷ್ಟು ಗಹನ.
ಹಾವು ಕೇವಲ ಒಂದು ಜೀವಿಯಾಗಿರದೆ ದೇವರ ರೂಪದಲ್ಲಿ, ಮನೋರಂಜನೆಯ ಜೀವಿಯಾಗಿ, ಗಾದೆಗಳಲ್ಲಿ, ಕಥೆಗಳಲ್ಲಿ, ಪುರಾಣಗಳಲ್ಲಿ ಮತ್ತು ಪರಿಸರ ಸ್ನೇಹಿಯಾಗಿ ಪರೋಕ್ಷವಾಗಿ ಮಾನವನಿಗೆ ಸಹಕರಿಸುತ್ತ ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ.
ನಾನು ಈ ವಿಷಯವಾಗಿ ವೀಕ್ಷಿಸಿದ ಹಲವು ಸಂದರ್ಶನಗಳಲ್ಲಿ ನನಗೆ ಬಹಳ ಉಪಯುಕ್ತ ಮತ್ತು ನಾನು ತುಂಬಾ ಆಸಕ್ತಿ ತಾಳಿದ್ದು ಉಡುಪಿಯ ಶ್ರೀ ಗುರುರಾಜ ಸನಿಲ್ ಅವರ ಮಾತುಗಳಲ್ಲಿ ಮತ್ತು ಅವರ ಕೃತಿಗಳಲ್ಲಿ. ಬೇರೆ ಉರಗ ಸಂರಕ್ಷಕರ ಕೆಲಸ, ಸಾಧನೆ ಮತ್ತು ಕೃತಿಗಳು ಕಡಿಮೆ ಎಂದು ಯಾರೂ ಅನ್ಯತಾ ಭಾವಿಸಬಾರದು ಮತ್ತು ಅದು ಕೂಡದು. ಇದು ನನ್ನ ಅಭಿಪ್ರಾಯವಷ್ಟೇ. ಕೊನೆಯದಾಗಿ ಈ ಲೇಖನದಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಪದಗಳು ಅಥವಾ ಸಾಲುಗಳಿದ್ದರೆ ಯಾರೂ ಸಹ ಅನ್ಯತಾ ಭಾವಿಸಬಾರದು, ಏಕೆಂದರೆ ಈ ಮಾಹಿತಿಗಳು ನನ್ನ ಅಲ್ಪಮತಿಯ ಜ್ಞಾನಮಿತಿಗೆ ನಿಲುಕಿದ ವಿಚಾರಗಳಷ್ಟೇ ಆಗಿದ್ದು, ಕೇವಲ ನನ್ನ ಅಭಿಪ್ರಾಯಗಳಾಗಿರುತ್ತವೆ.
ನಮ್ಮ ಜ್ಞಾನ-ವಿಜ್ಞಾನದ ಅಲ್ಪಮತಿಗೆ ಎಷ್ಟು ಗೋಚರಿಸುವುದೋ, ಗೋಚರಿಸುದರಲ್ಲಿ ಎಷ್ಟು ಅರ್ಥವಾಗುವುದೋ, ಅರ್ಥವಾದುದರಲ್ಲಿ ಎಷ್ಟು ಸರಿಯೋ ಅಷ್ಟೇ ನಮಗೆ ದಕ್ಕುವುದು. ಈ ಪ್ರಕೃತಿಯೇ ಅಷ್ಟು ಗಹನ. ಪ್ರಕೃತಿ ಸರ್ವಶಕ್ತನನ್ನು ಸೃಷ್ಟಿಸಿತೋ ಅಥವಾ ಸರ್ವಶಕ್ತ ಪ್ರಕೃತಿಯನ್ನು ಸೃಷ್ಟಿಸಿದನೋ ಅಥವಾ ಪ್ರಕೃತಿ ಮತ್ತು ಸರ್ವಶಕ್ತ ಇಬ್ಬರೂ ಒಬ್ಬರೆಯೋ ತಿಳಿಯದು. ಈ ವಿಷಯವೇ ಅಷ್ಟು ಗಹನ ಮತ್ತು ನಿಗೂಢ. ಆದರೆ ಒಂದಂತೂ ಸತ್ಯ, ಯಾರು ಈ ಪ್ರಕೃತಿಯನ್ನು ಗೌರವಿಸುವರೋ, ಪೂಜಿಸುವರೋ, ಸಂರಕ್ಷಿಸುವರೋ, ಪ್ರಕೃತಿಯ ಆಳಕ್ಕೆ ಇಳಿಯುವರೋ ಅವರಿಗೆ ಮಾತ್ರ ಪ್ರಕೃತಿಯ ವಿಶ್ವ ರೂಪಗಳು ಮುಸುಕು ಮುಸುಕಾಗಿ ಗೋಚರಿಸುತ್ತಾ ಹೋಗುತ್ತವೆ. ಪ್ರಕೃತಿಯ ಆಳಕ್ಕೆ ಇಳಿದಂತೆಲ್ಲಾ ಆ ಪರಿಪಕ್ವತೆಯ ಹಾದಿಯಲ್ಲಿ ನಮ್ಮ ಆತ್ಮವು ಪ್ರಕೃತಿಯಲ್ಲಿ (ಪರಮಾತ್ಮನಲ್ಲಿ) ಐಕ್ಯವಾಗಿ, ನಾನು (ಆತ್ಮ) ಮತ್ತು ಪ್ರಕೃತಿ (ಪರಮಾತ್ಮ) ಒಂದೆಯೇನೋ ಎಂಬ ಭಾವ ಮೂಡುವುದೇ ಜ್ಞಾನೋದಯವೇನೋ!? ಈ ರೀತಿ ಪ್ರಕೃತಿಯ ಆಳಕ್ಕೆ ಇಳಿಯುವ ಪ್ರಕ್ರಿಯೆಯಲ್ಲಿ ನಾನು ನನ್ನದೆಂಬ ಅಹಂಭಾವದ ಪೊರೆ ಕಳಚಿ ನಾನು ಸಹ ಈ ಸೃಷ್ಟಿಯಲ್ಲಿ ಇತರ ಜೀವಿಗಳಂತೆ ನಾನು ಒಂದು ಸೃಷ್ಟಿಯಷ್ಟೇ! ಈ ಸೃಷ್ಟಿಯಲ್ಲಿ ನನಗಿರುವಷ್ಟೇ ಪ್ರಾಮುಖ್ಯತೆ ಸೂಕ್ಷ್ಮಅತಿಸೂಕ್ಷ್ಮ ಜೀವಿಗಳಿಗೂ ಇದೆ ಎಂಬ ಭಾವ ಮೂಡುವುದೇ ನಿಜವಾದ ಜ್ಞಾನೋದಯವೇನೋ ಎಂಬುದು ನನ್ನ ಅನಿಸಿಕೆ. ಇದನ್ನು ಜ್ಞಾನೋದಯವಾದವರೇ ಬೋಧಿಸಬೇಕು. ಆದರೆ ನಾವು ಅದರ ನಿರಂತರ ಪ್ರಯತ್ನದಲ್ಲಂತೂ ಸಾಗಬಹುದಲ್ಲವೇ?
ಲೇಖನ: ಹೊನ್ನಸ್ವಾಮಿ ಅ. ರಾ.
ಮಂಡ್ಯ ಜಿಲ್ಲೆ, ಪ್ರಸ್ತುತ ವಾಸ: ಕತಾರ್