ಹರಿವ ನದಿಯು ಹರಿಯುತಿರಲಿ ಎಂದಿನಂತೆ ನಾಳೆಯೂ

ಹರಿವ ನದಿಯು ಹರಿಯುತಿರಲಿ ಎಂದಿನಂತೆ ನಾಳೆಯೂ

© ನಾಗೇಶ್ ಒ. ಎಸ್.

 ಒಂದು ವೇಳೆ ನೀರಿಗೆ ಮಾತು ಬರುವ ಹಾಗಿದ್ದರೆ ಹೇಗಿರುತ್ತದೆ? ನೋಡಿ. . .

ಇದು ನನ್ನ ಕಥೆ.  ನಾನು ಹರಿವು . . .  ನಾನು ಜೀವ. . .  ನಾನೇ ಸಕಲ ಜೀವಿಗಳ ಆಧಾರ; ಅದು ನಾನೆ ‘ಜೀವ ಜಲ.’ ಕಲ್ಲು-ಬಂಡೆಗಳ ನಡುವೆ ಜನಿಸಿ ಭೋರ್ಗರೆದು ಸಮುದ್ರ ಸೇರುವುದೇ ನನ್ನ ಉದ್ದೇಶ. ಅದೊಂದು ಕಾಲವಿತ್ತು, ನಾನು ನನ್ನಿಷ್ಟದಂತೆ ಹರಿಯುತ್ತಿದ್ದೆ, ಬತ್ತುತ್ತಿದ್ದೆ ಹಾಗೂ ತುಂಬಿ ಉಕ್ಕುತ್ತಿದೆ. ನನ್ನ ಆಕರಗಳೆಲ್ಲವೂ ನನ್ನಿಂದ ನಳನಳಿಸಿ ನರ್ತಿಸಿದಂತೆ ಭಾಸವಾಗುತ್ತಿತ್ತು, ಆದರೆ ಅಂದು ತುಂಬಿದ್ದ ನನ್ನ ಆಕರಗಳು ಇಂದು ಬರಿದಾಗಿವೆ. ನನ್ನಲ್ಲೇ ಆಸರೆ ಪಡೆದ ಅದೆಷ್ಟೋ ಜೀವಸಂಕುಲ, ನನ್ನನ್ನೇ ನಂಬಿದ್ದ ಜನಸಮುದಾಯ, ನನ್ನ ಬರುವಿಕೆಗೆ ಕಾಯುತ್ತಿದ್ದ ಪರಿಸರ ಇಂದು ಒಣಗಿ ನಿಂತು ಗೋಗರೆದಂತೆ ತೋರುತ್ತಿದೆ.

© ನಾಗೇಶ್ ಒ. ಎಸ್.

ಈ ಎರಡು ಮಾಸಗಳಲ್ಲಿ ನನ್ನ ಒಳಹರಿವು ಕ್ಷೀಣಿಸಿದೆ. ಆಧುನಿಕತೆ ಹೆಸರಿನಲ್ಲಿ ನೀವು ನನ್ನ ತುಳಿದಿರಿ. ಹರಿವನ್ನೇ ಬದಲಾಯಿಸಿ ನೈಜತೆಯನ್ನು ಹಾಗೂ ಇರುವಿಕೆಯನ್ನೇ ನಾಶಪಡಿಸಿದಿರಿ. ನನ್ನೊಳಗಿನ ಆತ್ಮ ಅದೆಷ್ಟು ನೊಂದು ಗೋಗರೆಯಿತು. ನನ್ನ ಕೂಗು ನಿಮ್ಮ ಮನ ಮುಟ್ಟಲಿಲ್ಲ. ಉದ್ವೇಗ ಇನ್ನಷ್ಟು ಹೆಚ್ಚಿ ನಾನು ಉಕ್ಕಿದೆ. . .  ಪ್ರವಾಹವಾದೆ.  ಅಂದು ನಿಮ್ಮ ನರಳಾಟ ನೋಡಿ ನಾನೇ ಸೋತೆ. ಆದರೂ ನಿಮ್ಮ ಪ್ರಹಾರ ನಿಲ್ಲಲಿಲ್ಲ ನಾನು ಬತ್ತುತ್ತಾ ಬಂದೆ, ನನಗಾಗಿ ಅದೆಷ್ಟು ಪೂಜೆ, ಪುನಸ್ಕಾರ, ಹೋಮ-ಹವನಗಳು ಸಲ್ಲಿದರು ನನ್ನ ಮನ ಕರಗದ ಮಂಜುಗಡ್ಡೆಯಂತಾಗಿದೆ.

ಅಂದು ಪವಿತ್ರಳಾಗಿದ್ದ ನಾನು ಇಂದು ಕಲುಷಿತಳಾಗಿ ಕಸದ ತೊಟ್ಟಿಗಿಂತ ಕಡೆಯಾಗಿದ್ದೇನೆ. ಇಂತಹ ಹೀನ ಸ್ಥಿತಿಗೆ ನೀವೇ ಕಾರಣ. ನಾನು ಅದೆಷ್ಟು ಕಟುಕಳಾಗಿದ್ದೇನೆಂದರೆ, ಭೂಮಿಯ ಆಳದಲ್ಲಿ ಹುಡುಕಿದರೂ ಸಿಗಲಾರೆ.  ಆಕಾಶದ ಎತ್ತರದಲ್ಲೂ ಕಾಣಲಾರೆ. ಇಂದು ನನ್ನ ಸರದಿ. ಯಾವ ತಾಯಿಯು ತನ್ನ ಮಕ್ಕಳ ಮೇಲೆ ಸಾಮಾನ್ಯವಾಗಿ ಹಗೆ ಸಾಧಿಸಿರಲಾರಳು. ಆದರೆ ಆಕೆಯ ತಾಳ್ಮೆಗೂ ಒಂದು ಮಿತಿ ಎಂಬುದು ಇದೆಯಲ್ಲವೇ? ತಾಯಿಯಂತೆ ಸಹಸ್ರಾರು ವರ್ಷ ನಿಮ್ಮನ್ನು ಸಲಹುತ್ತಾ ಬರುತ್ತಿರುವ ನಾನು ಒಮ್ಮೆ ಸಿಡಿದೆದ್ದರೆ ನಿಮ್ಮ ಸ್ಥಿತಿ ಏನಾಗಬಹುದು ಊಹಿಸಿರುವಿರಾ?

ಇಷ್ಟು ಹೊತ್ತು ನೀರಿಗೆ ನಮ್ಮ ಹಾಗೆಯೇ ಜೀವವಿದ್ದು ಮಾತಾಡಿದ್ದರೆ ಹೇಗಿರುತ್ತಿತ್ತು ಎಂಬುದನ್ನು ಗಮನಿಸಿದಿರಿ. ಈಗ ಈ ನೀರು ಯಾಕಿಷ್ಟು ಗೋಗರೆಯುತ್ತಿದೆ ಎಂಬುದನ್ನು ಲೇಖಕಿಯಾಗಿ ನಾನು ಒಮ್ಮೆ ಪರಾಮರ್ಶಿಸಲು ಯತ್ನಿಸುತ್ತೇನೆ.

ನೀರು ಯಾರಿಗೆ ತಾನೇ ಬೇಡ? ಹಲವಾರು ಅಂಶಗಳನ್ನು ತನ್ನಲ್ಲಿ ಕರಗಿಸಿಕೊಳ್ಳುವ ‘ಸಾರ್ವತ್ರಿಕ ದ್ರಾವಕ’ ಎಂದೇ ಪ್ರಸಿದ್ಧಿಯಾದ ಅತ್ಯಮೂಲ್ಯ ವಸ್ತು. ಪ್ರತಿಯೊಂದು ಜೀವಿಗೂ ನೀರೇ ಆಧಾರ ಅಂತೆಯೇ ಈ ಆಧುನಿಕತೆ ಮಾನವನ ಬೆಳವಣಿಗೆಗೋ? ಪ್ರಕೃತಿಯ ವಿನಾಶದ ತಯಾರಿಯ ಲಕ್ಷಣವೋ?  ತಿಳಿಯದಾಗಿದೆ.

© ನಾಗೇಶ್ ಒ. ಎಸ್.

ಹಿಂದಿನ ಕಾಲದ ಜನರಿಗೆ ಅಂದರೆ ನಮ್ಮ ಹಿರಿಯರಿಗೆ ನೀರು, ಪರಿಸರ ಸಂರಕ್ಷಣೆಯ ಮಹತ್ವ ತಿಳಿದಿತ್ತು. ನೈಸರ್ಗಿಕ ಸಂಪನ್ಮೂಲಗಳನ್ನು ದೇವರೆಂದು ಪೂಜಿಸುತ್ತಿದ್ದ ಕಾಲ ಅದು. ಯತೇಚ್ಛವಾಗಿ ದೊರೆಯುತ್ತಿದ್ದ ಸಂಪತ್ತು ನಶಿಸುವ ಮಟ್ಟಕ್ಕೆ ಹೋಗುತ್ತದೆ ಎಂಬ ಕಲ್ಪನೆಯೂ ಸಹ ಅವರಿಗೆ ಇರಲಿಲ್ಲ.

© ನಾಗೇಶ್ ಒ. ಎಸ್.

ಹಿಂದಿನ ಕಾಲದ ಜನ ಎಂದಾಕ್ಷಣ ನನ್ನ ಅಜ್ಜನ ಜೊತೆ ನಾನು ನಡೆಸಿದ್ದ ಸಂವಾದದ ಒಂದು ನೆನಪಾಯಿತು. ಅವರು ಒಮ್ಮೆ ಹೇಳಿದ್ದರು “ನಮ್ಮ ಕಾಲದ ಬೇಸಿಗೆಯಲ್ಲಿಯೂ ಸಹ ನಾವೆಂದೂ ತೋಟಕ್ಕೆ ನೀರು ಹಾಯಿಸಿದ ನೆನಪಿಲ್ಲ” ಎಂದು.  ಏಕೆಂದರೆ ಆಗಿನ ಕಾಲದಲ್ಲಿ ತೋಟವಿತ್ತೆಂದರೆ ಅದರ ಪಕ್ಕದಲ್ಲಿ ಒಂದು ತೊರೆ ಹರಿಯುವುದು ಸರ್ವೇಸಾಮಾನ್ಯವಾಗಿತ್ತು. ತೋಟದ ಸುತ್ತಲಿನ ಕಾಡು ಬೆಟ್ಟಗಳಿಂದ ನೀರು ಹರಿದು ತೊರೆಯಾಗುತ್ತಿತ್ತು, ಅದು ಸುತ್ತಲಿನ ವಾತಾವರಣವನ್ನು ತಂಪಾಗಿಸುತ್ತಿತ್ತು. ತೋಟದ ಕೆಲಸದ ತರುವಾಯ ದಣಿವಾರಿಸಿಕೊಳ್ಳಲು ಜನರು ಆ ತೊರೆಯ ನೀರನ್ನೇ ಕುಡಿಯುತ್ತಿದ್ದರು. ಏಕೆಂದರೆ ಕೇವಲ ಜೈವಿಕ ಸಾವಯವ ಗೊಬ್ಬರ ಬಳಸುತ್ತಿದ್ದ ಕಾರಣ ನೀರು ಶುದ್ದವಾಗಿ ಇರುತ್ತಿತ್ತು ಮತ್ತು ಬೆಟ್ಟ-ಗುಡ್ಡದ ಅನೇಕ ಗಿಡ ಮೂಲಿಕೆಗಳ ಬೇರನ್ನು ಹಾಯ್ದು ಬರುತ್ತಿದ್ದುದ್ದರಿಂದ ಅನೇಕ ಕಾಯಿಲೆ ಕಸಾಲೆಗಳನ್ನು ತಡೆಯುವ ದಿವ್ಯಔಷಧಿಯಾಗಿತ್ತು. ಅದನ್ನೇ ಅಟ್ಟಿ (ಅಬ್ಬಿ) ನೀರು ಎಂದು ಸಹ ಕರೆಯುತ್ತಿದ್ದರು. ನನಗೂ ಈ ಅಟ್ಟಿ ನೀರಿನ ರುಚಿ ನೆನಪಿದೆ. ಅಂದರೆ ಈ ಆಧುನಿಕ ಬೆಳವಣಿಗೆಗೆ ಬಹಳ ಇತಿಹಾಸವೇನಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಈ ಆಧುನಿಕತೆ ಬಂದಮೇಲೆ ಎಲ್ಲೆಂದರಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದೆ. ಕೀಟನಾಶಕ, ಕಳೆನಾಶಕ, ಶಿಲೀಂದ್ರ ನಾಶಕ ಹೀಗೆ ಹತ್ತು ಹಲವು ರಾಸಾಯನಿಕಗಳ ಬಳಕೆಯಿಂದ ನೀರಿನ ಆಕರಗಳು ಕಲುಷಿತವಾಗಿವೆ. ಅದೇ ನೀರನ್ನು ಕುಡಿಯಲು ಮತ್ತೆ ನೀರು ಶುದ್ಧಿಕಾರಕ (ವಾಟರ್ ಪ್ಯೂರಿಫೈಯರ್) ಗಳನ್ನು ಬಳಸುತ್ತಿದ್ದೇವೆ.

        ಹಿಂದಿನ ಕಾಲದಲ್ಲಿ ಇದ್ದ ಪರಿಸರ, ದಟ್ಟ-ಕಾಡು, ಸ್ವಚ್ಛ ನೀರಿನ ಆಕರಗಳು ಇಂದು ಕಟ್ಟಡ ಕಾರ್ಖಾನೆ ಹೀಗೆ ಇನ್ನಿತರ ಆಧುನಿಕ ಕಾರ್ಯಗಳ ತಾಣವಾಗಿದೆ. ಇನ್ನು ಉಳಿದ ನೀರಿನ ಮೂಲಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡದೆ ಸುತ್ತಮುತ್ತಲಿನ ಚರಂಡಿ ನೀರನ್ನು ಹಾಯಿಸುವುದರ ಕಾರಣ ನೀರಿನಲ್ಲಿ ರಂಜಕ, ಸಾರಜನಕಗಳ ಪ್ರಮಾಣ ಹೆಚ್ಚಾಗಿ ಕೆರೆಯ ಮೇಲ್ಭಾಗದಲ್ಲಿ ಪಾಚಿ ಬೆಳೆದು ಕ್ರಮೇಣ ಅದರ ಸಾಂದ್ರತೆ ಹೆಚ್ಚಾಗಿ ಸೂರ್ಯನ ಕಿರಣಗಳು ನೀರಿನ ಆಳಕ್ಕೆ ತಲುಪದಂತೆಯೇ ತಡೆಯುತ್ತವೆ. ಇದರಿಂದ ನೀರೊಳಗಿನ ಸಸ್ಯಗಳು ಆಹಾರ ಹಾಗೂ ಆಮ್ಲಜನಕದ ಕೊರತೆಯಿಂದ ಸಾಯುತ್ತವೆ. ಜಲ ಪರಿಸರ ವ್ಯವಸ್ಥೆ ಕಾಡಾಗಿ ಅಥವಾ ಭೂಪರಿಸರ ವ್ಯವಸ್ಥೆಯಾಗಿ ಮಾರ್ಪಾಡಾಗುತ್ತದೆ. ಇದನ್ನು ಯುಟ್ರೋಫಿಕೇಶನ್ (Eutrophication) ಎಂದು ಕರೆಯುತ್ತೇವೆ.

© ಪವಿತ್ರ ನಾಗೇಶ್

ಭೂಮಿಯ ಮೇಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಉಷ್ಣತೆಯ ಪ್ರಮಾಣ ಹೆಚ್ಚುತ್ತಿದೆ. ಜೊತೆಗೆ ಎಲ್ಲೆಂದರಲ್ಲಿ ಕೊಳವೆ ಬಾವಿಗಳನ್ನು ತೆಗೆಸಿ ಅಂತರ್ಜಲದ ನೀರನ್ನು ಖಾಲಿ ಮಾಡಿ ಭೂಮಿಯನ್ನು ಬೆಂಕಿಯ ಉಂಡೆಯನ್ನಾಗಿಸುತ್ತಿದ್ದೇವೆ. ಇದು ಆಗಲೇ ನಮ್ಮ ಗಮನಕ್ಕೆ ಬಂದಿದೆ. ಜಾಗತಿಕ ತಾಪಮಾನದ ಬಿಸಿ ದಟ್ಟ ಮಲೆನಾಡಿಗೂ ತಟ್ಟಿದೆ. ಉಷ್ಣ ಗಾಳಿ ಬೀಸುತ್ತಿದೆ. ಆದರೂ ಪರಿಸರವನ್ನು ರಕ್ಷಿಸಬೇಕು ಎಂಬ ಭಾವನೆ ಯಾರ ಮನದಲ್ಲೂ ಇಲ್ಲ.

ನೀರೊಂದೇ ಅಲ್ಲ ಇಂತಹ ಹಲವು ಅಮೂಲ್ಯ ಸಂಪನ್ಮೂಲಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ನಾವೇ ಕಟ್ಟಿದ ಅನೇಕ ಡ್ಯಾಂಗಳು ಇಂದು ಅತೀ ಕಡಿಮೆ ನೀರನ್ನು ಸಂಗ್ರಹಿಸಿಟ್ಟು ಕೊಂಡಿವೆ. ಬಿಸಿಲಿನ ತಾಪಕ್ಕೆ ನೀರು ಆವಿಯಾಗುವ ಪ್ರಮಾಣವು ಹೆಚ್ಚಾಗಿದೆ. ಈ ಬಾರಿಯೂ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಬಹುಶಃ ಮುಂದಿನ ವರುಷ ಹನಿ ನೀರು ಸಿಗುವುದು ಸಂದೇಹವೇ.

ಎಲ್ಲರೂ ‘ನೀರಿಲ್ಲ’ ಎಂದು ವ್ಯವಸ್ಥೆಯನ್ನು ದೂರಿದರೆ ಎಲ್ಲೂ ಇಲ್ಲದ ನೀರನ್ನು ಯಾವ ವ್ಯವಸ್ಥೆ ತಾನೆ ತಂದಿತು? ಇಂದು ಹೀಗೆ ಮುಂದುವರೆದರೆ ಈಗ ನಾವು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿದ ನೀರನ್ನು ಹಣ ಕೊಟ್ಟು ಕುಡಿಯುವಂತೆ ಈಗಿನ ಯುವ ಪೀಳಿಗೆಯ ಮಕ್ಕಳು ಉಸಿರಾಡುವ ಗಾಳಿ ಎಂದರೆ ಆಮ್ಲಜನಕವನ್ನು ಸಹ ದಿನಬಳಕೆಯ ವಸ್ತುಗಳಂತೆ ಹಣ ನೀಡಿ ಕೊಂಡು ಕೊಳ್ಳುವ ದಿನ ಬಹಳ ದೂರವಿಲ್ಲ ಎನಿಸುತ್ತಿದೆ ಒಮ್ಮೆ ನೀವೇ ಯೋಚಿಸಿ ನೋಡಿ. . .

© ವಿನೋದ್ ಕುಮಾರ್ ವಿ. ಕೆ.

ಲೇಖನ: ಸೌಮ್ಯ ಅಭಿನಂದನ್
            
                 ಶಿವಮೊಗ್ಗ
ಜಿಲ್ಲೆ

Print Friendly, PDF & Email
Spread the love
error: Content is protected.