ಹಕ್ಕಿ ವೀಕ್ಷಣೆಗೆ ಹೋಗೋಣ ಮಕ್ಕಳೇ?

ಹಕ್ಕಿ ವೀಕ್ಷಣೆಗೆ ಹೋಗೋಣ ಮಕ್ಕಳೇ?

© ಧನರಾಜ್ ಎಮ್.

ನಾನು ಮಕ್ಕಳೊಂದಿಗೆ ನನ್ನ ಪಕ್ಷಿವೀಕ್ಷಣೆಯ ರೋಮಾಂಚನಕಾರಿ ಮತ್ತು ಆನಂದಭರಿತವಾದ ಒಂದು ಪುಟ್ಟ ಅನುಭವವನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಒಂದು ಸುಂದರವಾದ ಭಾನುವಾರ ಬೆಳಿಗ್ಗೆ ನಾನು ನನ್ನ ಕುಟುಂಬದೊಂದಿಗೆ ನನ್ನ ಪೋಷಕರ ಮನೆಗೆ ಭೇಟಿ ನೀಡಿದೆನು. ಅಲ್ಲಿನ ಮಕ್ಕಳು ಯಾವಾಗಲೂ ನನ್ನೊಂದಿಗೆ ಪಕ್ಷಿವೀಕ್ಷಣೆ ಮಾಡಲು ಇಷ್ಟಪಡುತ್ತಾರೆ. ನಾನು ಮಕ್ಕಳೊಂದಿಗೆ ಪ್ರಕೃತಿಯನ್ನು ಆನಂದಿಸಲು ಪಕ್ಷಿವೀಕ್ಷಣೆಗೆ ಹೊರಟೆ.

ಬೆಂಗಳೂರಿನ ಹೊರವಲಯದಲ್ಲಿರುವ ಹ್ಯಾಪಿವ್ಯಾಲಿ ಬಡಾವಣೆ ಪಕ್ಷಿಗಳಿಗೆ ಮತ್ತು ಇತರ ವನ್ಯಜೀವಿಗಳಿಗೆ ಸ್ವರ್ಗವಾಗಿದೆ. ಅರಳಿದ ಹೂವುಗಳಿಂದ ತುಂಬಿದ ಬಹಳಷ್ಟು ಮರಗಳು ವೀಕ್ಷಿಸಲು ಅದ್ಭುತವಾಗಿದ್ದವು. ಈ ಸುಂದರ ಮರಗಳನ್ನು ಗಮನಿಸುತ್ತಾ ನಾವು ನಮ್ಮ ಪಕ್ಷಿವೀಕ್ಷಣೆಯನ್ನು ಶುರು ಮಾಡಿದೆವು.  ನಮ್ಮ ಜೊತೆಯಲ್ಲಿನ ಮಕ್ಕಳಿಗೆ ಮೊದಲು ಪಕ್ಷಿಗಳ ಧ್ವನಿಯನ್ನು ಆಲಿಸಲು ಹೇಳಿದೆನು. ಕೆಮ್ಮೀಸೆ ಪಿಕಳಾರದ ತೀಕ್ಷ್ಣವಾದ ‘ಪಿಕ್-ಪಿಕ್-ಎ-ವೆವ್’ ಕರೆಯನ್ನು ಆಲಿಸಿದೆವು. ನಮ್ಮ ಗಮನ ಇನ್ನೂ ಸೂಕ್ಷ್ಮವಾದಂತೆ ಶೀಘ್ರದಲ್ಲೇ ಹೆಚ್ಚು ಹೆಚ್ಚು ಪಕ್ಷಿಗಳ ಕರೆಗಳನ್ನು ಆಲಿಸಲು ಪ್ರಾರಂಭಿಸಿದೆವು. ಕೆಂಪು ಕೊರಳಿನ ಗಿಳಿ ‘ಕಿಐ-ಎ’ ಅಥವಾ ‘ಕಿಐ-ಅಕ್’, ಕುಟ್ರ ಪಕ್ಷಿಯ ‘ಕುಕ್-ಕುಕ್’ ಅಥವಾ ‘ಕೋಟ್-ಕೋಟ್’, ಸಿಂಪಿಗದ ‘ಟುಯಿ-ಟುಯಿ ವ್ಹೀ-ವ್ಹೀ’, ಕೋಗಿಲೆಯ ‘ಕುಹೂ. .  ಕುಹೂ. . ‘ ಕರೆಯನ್ನು ನಾವು ಕೇಳಿದೆವು. ಮಕ್ಕಳು ಸಹ ಹಕ್ಕಿಗಳಂತೆ ಅನುಕರಣೆ ಮಾಡಲು ಪ್ರಾರಂಭಿಸಿದರು.

ನಾವು ಸಹ ಪಕ್ಷಿಗಳ ಹಿಂಡುಗಳಂತೆ ಗುಂಪು ಗುಂಪಾಗಿ ಸಾಗುತ್ತ ಹೊರಟಂತೆ ಬೂದು ಕಾಗೆ, ಗೊರವಂಕ, ಚಿಟ್ಟು ಮಡಿವಾಳ, ಟುವ್ವಿ ಹಕ್ಕಿ, ಚೋರೆ ಹಕ್ಕಿಗಳು ಕಂಡವು ಹಾಗೂ ಹೀಗೇ ಹಕ್ಕಿಗಳ ಪಟ್ಟಿ ಮುಂದುವರಿಯುತ್ತಾ ಹೋಯಿತು. ಕರ್ನಾಟಕದ ರಾಜ್ಯ ಪಕ್ಷಿ ಎಂದು ಕರೆಯಲ್ಪಡುವ ‘ನೀಲ ಕಂಠ’ ವು ಏರೋಪ್ಲೈನ್ ಚಿಟ್ಟೆಯನ್ನು ಹಿಡಿಯಲು ವಿದ್ಯುತ್ ತಂತಿಯಿಂದ ಕೆಳಗಿನ ಹುಲ್ಲುಗಾವಲಿಗೆ ಧುಮುಕಿತು. ಅದು ಹಾರುವಾಗ ಲಾಗ ಹಾಕುವುದು, ಜಿಗಿಯುವುದು, ರೆಕ್ಕೆ-ಕೊಕ್ಕುಗಳ ಆಕರ್ಷಕ ಭಂಗಿಯನ್ನು ವೀಕ್ಷಿಸಲು ರೋಮಾಂಚನವಾಗಿತ್ತು. ಈ ನೀಲಕಂಠದ ಚಟುವಟಿಕೆಯನ್ನು ಕಂಡು ಮಕ್ಕಳು ಮನಸೂರೆಗೊಂಡರು.

ಅಷ್ಟರಲ್ಲಿ ಪಕ್ಕದಲ್ಲಿಯೇ ಯಾವುದೋ ಸಣ್ಣ ಪಕ್ಷಿ ತನ್ನ ಕೊಕ್ಕಿನಲ್ಲಿ ಹುಲ್ಲನ್ನು ಹೊತ್ತೊಯ್ಯುವುದನ್ನು ಕಂಡೆವು. ಮಕ್ಕಳು ಹಮ್ಮಿಂಗ್ ಬರ್ಡ್… ಹಮ್ಮಿಂಗ್ ಬರ್ಡ್… ನೋಡಿ ಎಂದು ಕೂಗಲು ಪ್ರಾರಂಭಿಸಿದರು. ನಾನು ಹುಷ್ . . .! ಕಿರುಚಬೇಡಿ, ಅದು ಹಮ್ಮಿಂಗ್ ಬರ್ಡ್ ಅಲ್ಲ ಸೂರಕ್ಕಿ, ಅಮೇರಿಕಾದ ಹಮ್ಮಿಂಗ್ ಬರ್ಡ್ ನ ಹತ್ತಿರದ ಸಂಬಂಧಿ ಎಂದು ಹೇಳಿದೆ. ಗಂಡು ಹಕ್ಕಿ ಕಂದು ಕೆಂಪು, ನೇರಳೆ, ನೀಲಿ, ಹಸಿರು ಬಣ್ಣಗಳನ್ನು ಹೊಂದಿರುತ್ತದೆ. ಚಿಲಿಪಿಲಿಗುಟ್ಟುತ್ತಾ ಅತ್ತಿಂದಿತ್ತ ಮನೆಯ ಸುತ್ತಮುತ್ತ ತನ್ನ ಚೂಪಾದ ಉದ್ದನೆಯ ಕೊಳವೆಯಾಕಾರದ ಕೊಕ್ಕಿನಿಂದ ಹೂಗಳ ಮಕರಂದವನ್ನು ಹೀರುವುದನ್ನು ನೋಡಿರುತ್ತೀರಿ ಅಲ್ಲವೇ ಮಕ್ಕಳೇ? ಅದೇ ಪಕ್ಷಿ ಇದು ಎಂದೆ.

ಹೀಗೆ ನಮ್ಮನಡಿಗೆಯನ್ನು ಮುಂದುವರೆಸುತ್ತಾ ಹೋದಂತೆ ಗುಲ್ ಮೊಹರ್ (ಕತ್ತಿಕಾಯಿ) ಮರದ ಮೇಲೆ ಬೇಟೆಗಾರ ಪಕ್ಷಿಯಾದ ಶಿಕ್ರಾ ಪಕ್ಷಿಯು ಅಳಿಲು ತಿನ್ನುತ್ತಿರುವುದನ್ನು ನಾವು ನೋಡಿದೆವು. ಆಗ ಅಲ್ಲಿ ಇದ್ದ ಪುಟ್ಟ ಹುಡುಗ “ಕೆಟ್ಟ ಶಿಕ್ರಾ…! ಪಾಪಚ್ಚಿ ಅಳಿಲನ್ನು ತಿನ್ನುತ್ತಿದೆ” ಎಂದು ಹೇಳಿದ. ಅದಕ್ಕೆ ನಾನು ಅದು ‘ಆಹಾರ ಜಾಲ’; ನಮ್ಮ ಪ್ರಕೃತಿಯ ನಿಯಮ ಎಂದು ಹೇಳಿದೆ. ಒಂದು ಜೀವಿ ಆಹಾರಕ್ಕಾಗಿ ಇನ್ನೊಂದು ಜೀವಿಯನ್ನು ಅವಲಂಬಿಸಿರುವುದು ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ, ಏಕೆಂದರೆ ಪರಿಸರ ಸಮತೋಲನವನ್ನು ಉಳಿಸಲು ಎಂದು ತಿಳಿ ಹೇಳಿದೆ. ಹಾಗೆ ಮುಂದೆ ಸಾಗುತ್ತ ನಾವು ಇನ್ನೂ ಎರಡು ಬೇಟೆಯ ಪಕ್ಷಿಗಳಾದ ಗಿಡುಗ ಮತ್ತು ಬಿಳಿ ಗರುಡಗಳನ್ನು ನೋಡಿದೆವು.

ನಾವು ಹೀಗೆ ಪಕ್ಷಿವೀಕ್ಷಣೆ ಮಾಡುತ್ತಾ ಹೋದಂತೆ ಮಕ್ಕಳು ಹೆಚ್ಚು ಹೆಚ್ಚು ಪಕ್ಷಿಗಳನ್ನು ನೋಡಲು ಉತ್ಸುಕರಾದರು ಮತ್ತು ಪಕ್ಷಿಗಳ ಆಕರ್ಷಕ ಪ್ರಪಂಚದ ಬಗ್ಗೆ ಬಹಳಷ್ಟು ವಿಷಯಗಳನ್ನು ಕಲಿಯಲು ಪ್ರಾರಂಭಿಸಿದರು. ಪ್ರಕೃತಿ ಮತ್ತು ಪಕ್ಷಿಗಳ ಬಗ್ಗೆ ತಿಳಿಯಲು ಮಕ್ಕಳ ಉತ್ಸಾಹ ಮತ್ತು ಆಸಕ್ತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು.

ಮಕ್ಕಳು ಹಸಿದು ದಣಿದಿದ್ದರಿಂದ ನಮ್ಮ ಪಕ್ಷಿವೀಕ್ಷಣೆಯನ್ನು ಮೊಟಕುಗೊಳಿಸಿದೆವು. ಹಾಗಾಗಿ ನಾವೆಲ್ಲರೂ ಇರುವೆಗಳಂತೆ ಅಜ್ಜ-ಅಜ್ಜಿಯ ಮನೆಯ ಕಡೆಗೆ ಒಬ್ಬರ ನಂತರ ಒಬ್ಬರಂತೆ ಹೆಜ್ಜೆ ಹಾಕಿದೆವು. ಹೀಗೆ ನಮ್ಮ ಅಂದಿನ ಪಕ್ಷಿವೀಕ್ಷಣೆ ಬಹಳ ಕುತೂಹಲಕಾರಿಯಾದ, ವಿನೋದ ಭರಿತವಾದ, ಮಾಹಿತಿ ವಿನಿಮಯವಾದಂತಹ ಪಕ್ಷಿವೀಕ್ಷಣೆಯಾಯಿತು.

ಲೇಖನ: ಡಾ. ಅಶ್ವಿನಿ ಆರ್.
          ಬೆಂಗಳೂರು
ಜಿಲ್ಲೆ

Spread the love
error: Content is protected.