ಜೇನು ಪ್ರಪಂಚ: ಭಾಗ -೫
©ಗುರುಪ್ರಸಾದ್ ಕೆ. ಆರ್.
ಕಳೆದ ಸಂಚಿಕೆಯಿಂದ…
ನಾನಲ್ಲದೆ ನನ್ನೊಡನೆ ಇತರ ಪರಾಗಸ್ಪರ್ಶಗಳಾದ ಚಿಟ್ಟೆಗಳು, ಪತಂಗಗಳು, ಜೀರುಂಡೆಗಳು, ನೊಣಗಳು, ಬಾವಲಿಗಳು ಮತ್ತು ಇತರ ಪ್ರಾಣಿ-ಪಕ್ಷಿಗಳು ಸಸ್ಯ ಸಂಕುಲದ ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಾಯ ಮಾಡುತ್ತೇವೆ.
ಆದರೆ ಇಂದು ನಾವೆಲ್ಲಾ ಅಪಾಯದಲ್ಲಿದ್ದೇವೆ, ಪ್ರಸ್ತುತ, ಜೀವಿಗಳ ಅಳಿವಿನಂಚಿನ ಪ್ರಮಾಣವು ಮಾನವನ ಪ್ರಭಾವದಿಂದಾಗಿ ಸಾಮಾನ್ಯಕ್ಕಿಂತಲೂ 100 ರಿಂದ 1000 ಪಟ್ಟು ಹೆಚ್ಚಾಗಿದೆ. ಅಕಶೇರುಕ ಪರಾಗಸ್ಪರ್ಶಕಗಳಲ್ಲಿ ಶೇಕಡ 35% ರಷ್ಟು ಮತ್ತು ಕಶೇರುಕ ಪರಾಗಸ್ಪರ್ಶಗಳಲ್ಲಿ ಶೇಕಡ 17% ರಷ್ಟು ಅಳಿವಿನಂಚಿನಲ್ಲಿದ್ದೇವೆ, ಇದೇ ಪ್ರಮಾಣದಲ್ಲಿ ಮುಂದುವರೆದರೆ, ಮುಂದೆ ನಾವು ಇಲ್ಲದಂತಾಗುತ್ತೇವೆ. ನಮ್ಮಿಂದ ಪರಿಸರಕ್ಕೆ, ಮನುಷ್ಯರಿಗೆ ಆಗುವ ಸಹಾಯವನ್ನು ಮರೆತು ಇಂದು ಮನುಷ್ಯರು ನಮ್ಮನ್ನು ಅಳಿವಿನಂಚಿಗೆ ತಳ್ಳುತ್ತಿದ್ದಾರೆ.
ನಮ್ಮಿಂದ ನಿಮಗಾಗುವ ಸಹಾಯದ ಬಗ್ಗೆ ತಿಳಿಸುವೆ…
ನಮ್ಮಿಂದಾಗುವ ಪರಾಗಸ್ಪರ್ಶವು ಒಂದು ಪರಿಸರ ವ್ಯವಸ್ಥೆಯನ್ನೇ ಸುಸ್ಥಿತಿಯಲ್ಲಿ ಇಡುವ ಒಂದು ಮೂಲ ಪ್ರಕ್ರಿಯೆಯಾಗಿದೆ. ವಿಶ್ವದ ಸುಮಾರು 90% ರಷ್ಟು ಹೂಬಿಡುವ ಸಸ್ಯ ಪ್ರಭೇದಗಳು ಸಂಪೂರ್ಣವಾಗಿ ಅಥವಾ ಭಾಗಶಃ ನಮ್ಮ ಪರಾಗಸ್ಪರ್ಶಕಗಳ ಮೇಲೆಯೇ ಅವಲಂಬಿತವಾಗಿವೆ, ನಾವಿಲ್ಲದೆ ಅವುಗಳ ಸಂತಾನೋತ್ಪತ್ತಿಯೇ ಆಗುವುದಿಲ್ಲ! ಮುಂದಿನ ಪೀಳಿಗೆಯೇ ಇಲ್ಲ!
ಜೊತೆಗೆ ವಿಶ್ವದ ಶೇಕಡ 75% ಕ್ಕಿಂತ ಹೆಚ್ಚು ಆಹಾರ ಬೆಳೆಗಳು ಬೀಜ ಬಿಡಲು ನಾವು ಬೇಕೇ ಬೇಕು ಇಲ್ಲವಾದರೆ ನಿಮ್ಮೆಲ್ಲರ ಆಹಾರ ಸುರಕ್ಷತೆ ಬುಡಮೇಲಾಗುತ್ತದೆ, ನಾವಿಲ್ಲದೆ ನಿಮಗೆ ಆಹಾರವೇ ಇಲ್ಲ ಎಂದು ಹೇಳಬಹುದು. ಇನ್ನೂ ನಮ್ಮಿಂದಾಗುವ ಆಹಾರ ಉತ್ಪಾದನೆಯಲ್ಲಿನ ಪರಾಗಸ್ಪರ್ಶ ಕೆಲಸಕ್ಕೆ ಹಣದ ರೂಪದಲ್ಲಿ ಹೇಳುವುದಾದರೆ, ನೀವು ನಮಗೆ ವರ್ಷಕ್ಕೆ ಸುಮಾರು 1,77,43,79,25,00,000 ರಿಂದ 4,35,66,67,35,00,000 (ಒಂದು ಲಕ್ಷದ ಎಪ್ಪತ್ತೇಳು ಸಾವಿರ ಕೋಟಿಯಿಂದ ನಾಲ್ಕು ಲಕ್ಷದ ಮುವ್ವತ್ತೈದು ಕೋಟಿ ರೂಪಾಯಿ ಅಥವಾ $235 ರಿಂದ $577 ಬಿಲಿಯನ್ U.S. ಡಾಲರ್) ರೂಪಾಯಿಗಳಷ್ಟು ವೇತನ ಸಲ್ಲಿಸಬೇಕಾಗುತ್ತದೆ.
ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಮ್ಮ ಯೋಗಕ್ಷೇಮಕ್ಕಾಗಿ ನೀವೇನು ಮಾಡಬಹುದು:
1. ನಿಮ್ಮ ಸುತ್ತಮುತ್ತಲು ವೈವಿಧ್ಯಮಯ ಸ್ಥಳೀಯ ಸಸ್ಯಗಳನ್ನು ನೆಡುವುದು, ವರ್ಷವಿಡೀ ಯಾವುದಾದರೂ ಸಸ್ಯಗಳಲ್ಲಿ ಹೂಗಳು ಸಿಗುವಂತೆ ಮಾಡುವುದು.
2. ನಿಮ್ಮ ತೋಟಗಳಲ್ಲಿ ಕೀಟನಾಶಕಗಳು, ಶಿಲೀಂಧ್ರನಾಶಕಗಳು ಅಥವಾ ಸಸ್ಯನಾಶಕಗಳನ್ನು ಸಿಂಪಡಿಸುವುದನ್ನು ತಪ್ಪಿಸುವುದು.
3. ಕಾಡು ಜೇನುನೊಣಗಳ ವಾಸಸ್ಥಳವನ್ನು ನಾಶ ಮಾಡದೆ ರಕ್ಷಿಸುವುದು.
4. ಬೇಸಿಗೆ ಸಮಯದಲ್ಲಿ ಮತ್ತು ನೀರಿನ ಅಭಾವದ ಸಂದರ್ಭದಲ್ಲಿ ನೀರು ಸಿಗುವ ಹಾಗೆ ಇಟ್ಟು, ನಮ್ಮ ಬಗ್ಗೆ ಕಾಳಜಿವಹಿಸುವುದು.
5. ಅರಣ್ಯ ಮತ್ತು ಸುತ್ತಮುತ್ತಲಿನ ಪರಿಸರ ನಾಶಮಾಡದೆ ಉಳಿಸಿಕೊಳ್ಳುವುದು.
6. ನಮ್ಮ ಬಗ್ಗೆ ನಿಮ್ಮ ಸುತ್ತಮುತ್ತಲೂ ಇರುವವರಿಗೆ ಜಾಗೃತಿ ಮೂಡಿಸಿ ನಮ್ಮ ಸಂತತಿಯನ್ನು ಉಳಿಸುವುದು.
ಜೇನುಸಾಕಣೆದಾರರಾಗಿ ಅಥವಾ ರೈತನಾಗಿ:
1. ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದು ಅಥವಾ ಬಳಸದೇ ಇರುವುದು, ಬದಲಾಗಿ ಜೈವಿಕ ಕೀಟನಾಶಕಗಳನ್ನು ಬಳಸುವುದು.
2. ಏಕರೂಪ ಬೆಳೆಗಳನ್ನು ಬೆಳೆಯುವ ಬದಲು, ಬೆಳೆಗಳನ್ನು ಸಾಧ್ಯವಾದಷ್ಟು ವೈವಿಧ್ಯಗೊಳಿಸುವುದು.
3. ನಮ್ಮ ಆವಾಸಸ್ಥಾನಗಳನ್ನು ನಾಶಮಾಡದೆ ರಕ್ಷಿಸುವುದು.
ಸರ್ಕಾರ ಏನು ಮಾಡಬಹುದು:
1.ನಮ್ಮ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಪರಿಸರದ ಬಗ್ಗೆ ಕಾಳಜಿ ಇರುವ ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆಯನ್ನು ಬಲಪಡಿಸುವುದು.
2. ನಮ್ಮ ಮೇಲಿನ ವೈಜ್ಞಾನಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸಲು, ಆರ್ಥಿಕ ಸಹಾಯ ಮಾಡುವುದು.
3. ಪರಾಗಸ್ಪರ್ಶ ಸೇವೆಗಳ ಬಗ್ಗೆ ಇನ್ನಷ್ಟು ತಿಳಿಯುವ ಸಲುವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಶೈಕ್ಷಣಿಕ ಮತ್ತು ಸಂಶೋಧನಾ ಜಾಲಗಳ ನಡುವಿನ ಸಹಯೋಗವನ್ನು ಹೆಚ್ಚಿಸುವುದು.
ದಯವಿಟ್ಟು ಮುಂದೆ ಎಂದಾದರೂ ನಮ್ಮ ಮನೆಯಿಂದ ತುಪ್ಪ ತೆಗೆಯಬೇಕಾದರೆ, ನಮ್ಮನ್ನು ಸಾಯಿಸದೆ, ಬೆಂಕಿಯಲ್ಲಿ ಸುಡದೆ, ಕೀಟನಾಶಕ ಸಿಂಪಡಿಸದೆ ಕೇವಲ ತುಪ್ಪ ತೆಗೆದು ನಮ್ಮ ಸಂತತಿಯನ್ನು ಉಳಿಸಿ, ನಿಮ್ಮನ್ನು ಉಳಿಸಿಕೊಳ್ಳಿ…
ಲೇಖನ: ಹರೀಶ ಎ. ಎಸ್.
ಜಿಕೆವಿಕೆ, ಬೆಂಗಳೂರು ನಗರ ಜಿಲ್ಲೆ