ನಿಸರ್ಗದ ಸಾಂಗತ್ಯ

ನಿಸರ್ಗದ ಸಾಂಗತ್ಯ

© ಕಲ್ಪನ ಎಂ.

ಈ ಕಾಲಘಟ್ಟದಲ್ಲಿ ಪ್ರಕೃತಿಯ ಭಾಗವಾಗಿಯೇ ಪ್ರಕೃತಿಗೆ ಹಾನಿಯಾಗದಂತೆ ಬದುಕುವುದನ್ನು ರೂಢಿಸಿಕೊಳ್ಳಲು ಹೊರಟವರಲ್ಲಿ ಅದೆಷ್ಟೋ ಕುತೂಹಲಿಗಳಿದ್ದಾರೆ. ಸಸ್ಯಪ್ರಬೇಧಗಳು, ಪ್ರಾಣಿಗಳು, ಆಹಾರ ಸರಪಳಿಯೊಂದಿಗೆ ಪರಿಸರ ತನ್ನಲ್ಲಿ ತಾನೇ ಸಮತೋಲನ ಕಾಯ್ದುಕೊಳ್ಳುವಿಕೆಯ ಕುರಿತಾದ ರೋಚಕವೆನ್ನಿಸಬಹುದಾದ ವಿಷಯಗಳು ಪರಿಸರ ಪ್ರೇಮಿಗಳನ್ನು ಬೌದ್ಧಿಕವಾಗಿ ಸಬಲರನ್ನಾಗಿಸುತ್ತವೆ. ಚಾರಣ ನನ್ನ ಮೊದಲ ಅನುಭವವಲ್ಲವಾದರೂ, ದೊಡ್ಡಿಬೆಟ್ಟಕ್ಕೆ ನನ್ನ ಮೊದಲ ಅನುಭವ. ನಮ್ಮ ಪಯಣ ಮಧ್ಯಾಹ್ನ ಸುಮಾರು 3 ರಿಂದ 3.30ಕ್ಕೆ ಆರಂಭವಾಯಿತು. ಅದೇನೋ ಖುಷಿ, ಅದೇನೋ ಉತ್ಸಾಹ ತುಂಬಿದ ಚಿಗರೆಗಳ ರೀತಿ.  ಸುಮಾರು 35 ಶಿಕ್ಷಕರು, ಅಶ್ವತ್ಥ್ ಸರ್ ಹಾಗೂ ಧನುಷ್ ಸರ್ ಮಾಗದರ್ಶನದಲ್ಲಿ ಸಾಗಿದ ಪರಿ, ಕಟ್ಟಿರುವೆಯ ಸಾಲನ್ನು ನೆನಪಿಸುವಂತಿತ್ತು. ನಮ್ಮ ಪುಟ್ಟ ಪುಟ್ಟ ಕಂಗಳು ಅರಳಿ ನಿಂತದ್ದು ಅಲ್ಲಿರುವ ಅದೆಷ್ಟೋ ಪ್ರಭೇದದ, ಅದೆಷ್ಟೋ ರೀತಿಯ, ಅದೆಷ್ಟೋ ಬಣ್ಣದ ಗಿಡ-ಮರ ನೋಡದೇ ಇರುವ ಅದೆಷ್ಟೋ ಜಾತಿಯ ಹೂಗಳನ್ನು ನೋಡಿ. ಅಲ್ಲಿರುವ ಸರಳ ಮತ್ತು ಸುಂದರ ವಾತಾವರಣ ಮನಸ್ಸಿಗೆ ಮುದ ನೀಡಿದ್ದು, ಇವೆಲ್ಲವೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದಂತಹ ಅನೇಕ ಶಿಕ್ಷಕರಿಗೆ ಹೊಸ ಅನುಭವವನ್ನೇ ಕಟ್ಟಿಕೊಟ್ಟವು. ಸಮತಟ್ಟಾದ ಕಚ್ಚಾ ರಸ್ತೆಯಲ್ಲಿ ಸಾಗುತ್ತಾ ನಂತರದಲ್ಲಿ ಕಾಲುಹಾದಿಗೆ ಸೇರಿಕೊಂಡೆವು. ಸಮವಲ್ಲದ ರಸ್ತೆಗಳಲ್ಲಿ ಸಣ್ಣಸಣ್ಣ ದಿಬ್ಬಗಳನ್ನು ಏದುಸಿರಿನೊಂದಿಗೆ ಹತ್ತಿ ಇಳಿಯುತ್ತಾ ಅಲ್ಲಲ್ಲೇ ಕೂತು ಸುಧಾರಿಸಿಕೊಳ್ಳುತ್ತಾ ನಮ್ಮ ಪಯಣ ಸಾಗುತ್ತಲೇ ಇತ್ತು.

© ಕಲ್ಪನ ಎಂ

ಸಾಗುವ ಹಾದಿಯಲ್ಲಿ, ಅಲ್ಲಲ್ಲಿ ಈ ಹಿಂದೆ ಮನೆಗಳಿದ್ದವು ಎಂಬುದಕ್ಕೆ ಕಟ್ಟಡದ ಅಡಿಪಾಯ, ಜಗ್ಗು(ಬೋರ್ವೆಲ್)ಗಳಂತಹ ಪುರಾವೆಗಳನ್ನು ಗಮನಿಸುತ್ತಾ ಸ್ಥಳೀಯ ಇತಿಹಾಸವನ್ನು ಕಂಡುಕೊಂಡೆವು. ಈ ಹಿಂದೆ ಅಲ್ಲಿ ಜನವಸತಿ ಇದ್ದಿತೆಂದೂ, ಅವರೆಲ್ಲ ಬಹಳ ಹಿಂದೆಯೇ ಹಸುಗಳನ್ನು ಮೇಯಿಸುವ ಸಲುವಾಗಿ ಬಂದವರೆಂದೂ, ಇಲ್ಲಿ ಪಶುಗಳಿಗೆ ಉತ್ತಮ ವಾತಾವರಣ ಸಿಗುವುದರಿಂದ ಇಲ್ಲಿಯೇ ನೆಲೆಸಬೇಕೆಂದು ಆ ಗುಂಪಿನ ಹಿರಿಯ ನಿರ್ಧರಿಸಿದನೆಂದು ತಿಳಿಸಿದರು. ಆ ಗುಂಪಿನ ಸದಸ್ಯರು ಇಲ್ಲಿಯೇ ನೆಲೆ ನಿಂತರೆಂದೂ, ಆ ಬೆಟ್ಟ ಹಾಗೂ ಅಲ್ಲಿಯ ಸ್ಥಳೀಯ ಊರುಗಳಿಗೆ ಅವರ ಹೆಸರೇ ಗುರುತಾಯಿತೆಂದೂ ಹಾಗಾಗಿಯೇ ಇಲ್ಲಿಯ ಸುಮಾರು ಊರುಗಳಿಗೆ ಯಾವುದೋ ಒಬ್ಬ ವ್ಯಕ್ತಿಯ ಹೆಸರಿನೊಂದಿಗೆ ದೊಡ್ಡಿ ಎನ್ನುವ ಹೆಸರು ಸೇರಿಕೊಂಡು ಊರಿನ ಹೆಸರಾಗಿವೆ. ದೊಡ್ಡಿ ಎಂದರೆ ದನಗಳನ್ನು ಮೇಯಿಸುವ ಅಥವಾ ಕೂಡುವ ಜಾಗ ಎಂದರ್ಥ.

© ಕಲ್ಪನ ಎಂ

ಸಹೋದ್ಯೋಗಿಗಳೊಂದಿಗೆ ಒಂದಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾ ಹರಟೆಯೊಂದಿಗೆ ನಮ್ಮ ಪಯಣ ದೊಡ್ಡಿಬೆಟ್ಟ ತಲುಪಿತ್ತು. ಇದೆಲ್ಲಾ ಆಗುವಾಗ ಸಮಯ ಸುಮಾರು 4 ಗಂಟೆ ದಾಟಿತ್ತು. ‘ಅಬ್ಬಾ! ಅಂತೂ ಬೆಟ್ಟ ತಲುಪಿದೆವು’ ಎನ್ನುವಾಗ ಆದ ಖುಷಿ ಅಷ್ಟಿಷ್ಟಲ್ಲ. ಮತ್ತೆ ದೊಡ್ಡದಾದ ಬಂಡೆ ಹತ್ತಿ ನಂತರದಲ್ಲಿ ಬೆಟ್ಟದ ತುದಿ ತಲುಪುವಷ್ಟರಲ್ಲೇ ನಮ್ಮ ಅನೇಕ ಸಹೋದ್ಯೋಗಿಗಳು ಆಗಲೇ ತಲುಪಿ, ವಿಶ್ರಾಂತಿ ಪಡೆಯುತ್ತಿದ್ದರು. ಅದಾಗಲೇ ಶುರುವಾಯ್ತು ನೋಡಿ ಜೋರು ಗಾಳಿ, ಮಳೆ.  ಛತ್ರಿ ತಂದವರೆಲ್ಲ ಅದರ ಅಡಿಯಲ್ಲಿ ಆಶ್ರಯ ಪಡೆದರೆ ಮತ್ತೊಂದಷ್ಟು ಜನರು ಮಳೆಗೆ ಮೈಯೊಡ್ಡಿ, ಮಳೆಯನ್ನು ಆಸ್ವಾದಿಸಿದರು. ಜೊತೆಗೆ ಹಿರಿಯ – ಕಿರಿಯರೆನ್ನದೆ ಅಲ್ಲಲ್ಲಿ ಗುಂಡಿ, ಗೊಟರುಗಳಲ್ಲಿ ನಿಂತ ನೀರನ್ನು ಎರಚುತ್ತಾ ಮಕ್ಕಳಂತೆ ಸಂತಸಪಟ್ಟದ್ದೂ ಆಯಿತು. ಮಳೆಯಲ್ಲಿ ಮಿಂದೆದ್ದ ಹಸಿರ ಮಾತೆಯನ್ನು ನೋಡುವುದೇ ಒಂದು ಚೆಂದ. ಜೊತೆಗೆ ಬೆಟ್ಟದ ಮೇಲಿಂದ ನೋಡಿದಾಗ ಪ್ರಕೃತಿಯ ರಮಣೀಯತೆ ಮಾತ್ರವಲ್ಲ, ಭಯಾನಕತೆಯ ಅರಿವೂ ಆಯಿತು. ಆದರೆ ಅದನ್ನೆಲ್ಲ ಬದಿಗೊತ್ತಿ ಸಹೋದ್ಯೋಗಿಗಳೊಂದಿಗೆ ನೆನಪುಗಳು ಕಳೆದುಹೋಗದಂತಹ ನೆನಪಿನ ಪೋಟೋವನ್ನೂ ಕ್ಲಿಕ್ಕಿಸಿದ್ದಾಯಿತು.

© ಕಲ್ಪನ ಎಂ

ಸಾಕೆನಿಸುವಷ್ಟು ಕುಣಿದ ನಂತರದಲ್ಲಿ ಎಲ್ಲರೂ ತಂಡ ತಂಡಗಳಲ್ಲಿ ಕುಳಿತು ತಮ್ಮ ತಮ್ಮ ಜೀವನದ ಕೆಲ ಘಟನೆಗಳನ್ನು ಮೆಲುಕು ಹಾಕಿದರು. ಮತ್ತೊಂದಷ್ಟು ಜನರು ಬೈನಾಕ್ಯುಲರ್ ನಲ್ಲಿ (ದುರ್ಬೀನು) ಎಲ್ಲಾದರೂ ಪ್ರಾಣಿಗಳು ನೋಡಲು ಸಿಕ್ಕವೇನೋ ಅನ್ನೋ ಹುಡುಕಾಟದಲ್ಲಿ ತೊಡಗಿದರು. ದುರದೃಷ್ಟವಶಾತ್ ಯಾವುದೇ ಕಾಡುಪ್ರಾಣಿಗಳ ಸುಳಿವೂ ಸಿಗಲಿಲ್ಲ. ಬಹುಶಃ ಅವಕ್ಕೆ ಅರಿವಾಗಿರಬೇಕು ಕಾಡಿನ ವಾಸಕ್ಕಲ್ಲದ ಪ್ರಾಣಿಗಳು ಕಾಡಿನೊಳಗೆ ಬಂದಿದ್ದಾವೆಂದು! ನಂತರದಲ್ಲಿ ಒಂದಷ್ಟು ಚಹಾ ಹಾಗೂ ತಿಂಡಿಯ ಸಮಾರಾಧನೆಯೂ ಆಯಿತು. ಆನಂತರದಲ್ಲಿ ಸೂರ್ಯಾಸ್ತದವರೆಗೂ ಕಾದು, ಬೆಟ್ಟಗಳ ನಡುವಲ್ಲಿ ಮುಳುಗುವ ಸೂರ್ಯ ಬಾನಲ್ಲಿ ಉಂಟುಮಾಡುವ ಬಣ್ಣದೋಕುಳಿಯನ್ನು, ಮಳೆಯಿಂದಾಗಿ ಎಲೆಗಳ ಮೇಲೆ ನಿಂತ ನೀರಿನ ಬಿಂದುಗಳು ಬಿಂಬಿಸುವ ಕಾಮನಬಿಲ್ಲಿನ ಚಿತ್ತಾರವನ್ನು ಕಂಡೆವು. ಈ ಅನುಭವಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದವೆಂದರೆ ತಪ್ಪಾಗಲಾರದು. ಪಂಜೆ ಮಂಗೇಶರಾಯರ ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ’ ಅನ್ನುವ ಸಾಲು ಮನದಂಗಳದಲ್ಲಿ ರಿಂಗಣಿಸುತ್ತಿತ್ತು. ಆ ಸಮಯದಲ್ಲಿ ಮನಸ್ಸಿಗೆ ಹಿತವೆನಿಸುವ ಒಂದಷ್ಟು ಭಜನೆ ಹಾಗು ಕೀರ್ತನೆಗಳನ್ನು ಹಾಡಿ, ಪ್ರಕೃತಿಯಲ್ಲಿ ನಮ್ಮನ್ನು ನಾವು ಕಳೆದುಕೊಂಡ ಭಾವ.

ದೊಡ್ಡಿಬೆಟ್ಟದಲ್ಲಿ ಅಲ್ಲಲ್ಲೇ ಕಲ್ಲುಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟಿರುವುದನ್ನು ಕಂಡೆವು. ಅದೇನೆಂದು ಕೇಳಿದಾಗ, ‘ದೊಡ್ಡಿ ಬೆಟ್ಟದಲ್ಲಿ ಈ ಹಿಂದೆ ಸುತ್ತಮುತ್ತ ಹಳ್ಳಿಗಳ ಜನರು ಮನುಷ್ಯರ ದೇಹಗಳನ್ನು, ಜೋಡಿಸಿದ ಕಲ್ಲುಗಳ ಮಧ್ಯದಲ್ಲಿ ಇರಿಸಿ, ಮೇಲೆ ಚಪ್ಪಡಿ ಇಟ್ಟು ಆ ದೇಹದ ಪಕ್ಕದಲ್ಲಿ ಒಂದು ತೆಂಗಿನ ಗಂಟದಲ್ಲಿ ನೀರನ್ನು ಸಹ ಇಟ್ಟು ಬರುತ್ತಿದ್ದರಂತೆ. ಅಲ್ಲಿಗೆ ಬರುವ ಕಾಗೆ, ಗಿಡುಗ, ರಣಹದ್ದುಗಳು ಹಾಗೂ ಇನ್ನಿತರ ಸಣ್ಣ ಪುಟ್ಟ ಪ್ರಾಣಿಗಳು ಆ ದೇಹದ ಮಾಂಸವನ್ನು ಆಹಾರವನ್ನಾಗಿಸಿಕೊಳ್ಳಲಿ ಎಂದು. ಸ್ವಲ್ಪ ದಿನಗಳ ತರುವಾಯ ಉಳಿದ ಅಸ್ತಿಯನ್ನು ಸಂಸ್ಕಾರ ಮಾಡುವುದನ್ನು ರೂಢಿಸಿಕೊಂಡಿದ್ದರಂತೆ ಎಂದು ಹಿರಿಯ ಶಿಕ್ಷಕರೊಬ್ಬರು ಹೇಳಿದರು. ಎಂಥ ಅಪರೂಪದ ಯೋಚನೆ ಎನಿಸಿದರೂ ನಮ್ಮ ಹಿರಿಯರು ಪ್ರಕೃತಿಯೊಂದಿಗೆ ತಮ್ಮ ಬದುಕನ್ನು ಬೆಸೆದುಕೊಂಡಿರುವ ಬಗೆಗೆ, ಕೊಳುಕೊಡುಗೆಯ ವ್ಯವಹಾರದ ಬಗೆಗೆ ಸೋಜಿಗವೆನಿಸುವ ಜೊತೆಗೆ ಗೌರವವೂ ಹೆಚ್ಚಾಯಿತು. ಈಗಲೂ ಈ ಒಂದು ಪದ್ಧತಿಯನ್ನು ಟಿಬೆಟಿನಲ್ಲಿ ಕಾಣಬಹುದು. ಜೊತೆಗೆ ಇಂತಹ ವಿಚಾರಗಳು ಇಂದಿನ ಜನತೆಯಲ್ಲಿಲ್ಲ ಎಂಬುದು ಅಷ್ಟೇ ಚಿಂತಿಸುವ ವಿಚಾರವೂ ಹೌದು.

© ಕಲ್ಪನ ಎಂ

ಕತ್ತಲಾಗುತ್ತಿದ್ದಂತೆ ನಮ್ಮ ಪಯಣ ಮತ್ತೆ ನಾಡಿನೆಡೆಗೆ. ಚಂದ್ರನೇನೋ ಆಗಸದಲ್ಲಿ ಬಂದು ದಾರಿ ತೋರಿಸುವ ಪ್ರಯತ್ನ ಮಾಡಿದ. ಆದರೆ ನಗರದ ಜಿಗಿಮಿಗಿ ಬೆಳಕಿಗೆ ಹೊಂದಿಕೊಂಡ ಕಣ್ಣುಗಳು ಕಾಡಿನ ಹಾದಿಯಲ್ಲಿ ಕಷ್ಟಪಟ್ಟವು. ಅಲ್ಲಲ್ಲೇ ಕೇಳಿಬರುವ ವಿವಿಧ ರೀತಿಯ ಪಕ್ಷಿಗಳ ಕೂಗು, ತರಗೆಲೆ ಮೇಲೆ ಹೆಜ್ಜೆಯಿಟ್ಟಾಗ ಕೇಳುವ ಸದ್ದು ಭಯದಲ್ಲಿ ಮುಳುಗಿಸಿದರೂ ಒಂಥರಾ ಚೆನ್ನಾಗಿತ್ತು. ಅಲ್ಲೂ ನಡೆಯುವ ವೇಗಕ್ಕನುಗುಣವಾಗಿ 3-4 ಗುಂಪುಗಳಾಗಿ ಎಲ್ಲರೂ ಬೇರೆಯಾದರು. ಅಲ್ಲಲ್ಲಿ ಗುಂಪುಗಳಲ್ಲಿ ಕೇಳಿಬರುತ್ತಿದ್ದ ಮಾತುಗಳು ಅಸ್ಪಷ್ಟವಾಗಿ ಕೇಳಬರತೊಡಗಿದ್ದವು. ಕೆಲವರು ಅಬ್ಬಾ! ನಡೆದೂ ನಡೆದು ಸಾಕಾಯ್ತು ಎಂದರೆ, ಮತ್ತೊಬ್ಬರು ಅವರನ್ನು ಹುರಿದುಂಬಿಸಿ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಲು ಹರಸಾಹಸ ಪಡುತ್ತಿದ್ದರು. ಮತ್ತೊಬ್ಬರು ಕಾಡುಪ್ರಾಣಿಗಳು ಬರ್ತಾವೆ ಅಂತ ಹೆದರಿಸಿದರೆ, ಇನ್ನೊಬ್ಬರು ನಿಧಾನವಾಗಿ ಹೋಗೋಣ ಎಂದು ಒಬ್ಬರನ್ನೊಬ್ಬರು ಛೇಡಿಸಿಕೊಳ್ಳುತ್ತ, ಸಮಾಧಾನಪಡಿಸುತ್ತಾ ಗಮ್ಯದೆಡೆಗೆ ಪಯಣ ಮುಂದುವರೆಸಿದೆವು. ಚಂದಿರ ಮಾತ್ರವಲ್ಲ ಮಿಂಚುಹುಳುಗಳು ಕೂಡ ‘ಹೇ… ನಾವು ದಾರಿ ತೋರಿಸೋಕೆ ಸಹಾಯ ಮಾಡ್ತೀವಿ’ ಅಂತ ಚಂದಿರನೊಂದಿಗೆ ಸ್ಪರ್ಧೆಗಿಳಿದಿದ್ದವು. ಅಂತೂ ಇಂತೂ ರಾತ್ರಿ 7.30ರ ಸುಮಾರಿಗೆ ನಮ್ಮ ಶಾಲೆಯನ್ನು ತಲುಪಿದೆವು. ದೇಹಕ್ಕೆ ಆಯಾಸವಾಗಿದ್ದರೂ ಮನಸ್ಸು ಮಾತ್ರ ಪ್ರಕೃತಿಯ ರಮಣೀಯತೆಯನ್ನು ನೆನೆದು ಪುಳಕಗೊಳ್ಳುತ್ತಿತ್ತು.

ಬಹುಶಃ ಅಂದು ನಾನು ಅನಾರೋಗ್ಯದ ಕಾರಣವನ್ನು ನೀಡಿ ಹೋಗದೇ ಇದ್ದಿದ್ದರೆ, ಒಂದು ಚೆಂದದ ಅನುಭವವನ್ನು ಕಳೆದುಕೊಳ್ಳುತ್ತಿದ್ದೆ. ಈ ಸಮಯದಲ್ಲಿ ನನ್ನ ನಿಧಾನಗತಿಯ ಹೆಜ್ಜೆಗೆ ಜೊತೆಯಾದ, ಹೆಜ್ಜೆ ಮುಂದಡಿಯಿಡಲಾರದೇ ಸೋತಾಗ, ಹುರಿದುಂಬಿಸಿ ಮುಂದೆ ಸಾಗಲು ಪ್ರೇರೇಪಿಸಿದ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲೇಬೇಕು. ಇಂತಹ ಒಂದು ಪರಿಸರಪ್ರೇಮಿ ತಂಡದೊಂದಿಗೆ ನೀವು ಕೂಡ ಹೋಗಬಹುದು. ಸೂಕ್ತ ಮಾರ್ಗದರ್ಶಕರೊಂದಿಗೆ ಹಾಗೆ ಪ್ರಕೃತಿಯನ್ನು ಅಸ್ವಾದಿಸುವವರಾಗಿದ್ದು ಚಾರಣಪ್ರಿಯರಾಗಿದ್ದರೆ! ಪ್ರಕೃತಿಯನ್ನು ಕಾಪಾಡುತ್ತೇವೆ ಎಂಬ ಭರವಸೆಯಿದ್ದರೆ!

© ಕಲ್ಪನ ಎಂ

ಲೇಖನ: ಕಲ್ಪನ ಎಂ.
             ತುಮಕೂರು ಜಿಲ್ಲೆ

Spread the love
error: Content is protected.