ಜಿಮ್ ಕಾರ್ಬೆಟ್ ಕಾಡಿನ ರೋಚಕ ಅನುಭವದ ಕಥನ ಭಾಗ ೩

© ಗುರು ಪ್ರಸಾದ್ ಕೆ. ಆರ್.
ದಟ್ಟ ಕಾಡಿನ ಮಧ್ಯದಲ್ಲಿ ಎರಡು ದಿನಗಳು ಹೇಗೆ ಕಳೆದು ಹೋಯ್ತೋ ಗೊತ್ತಾಗಲೇ ಇಲ್ಲ. ಜಿಮ್ ಕಾರ್ಬೆಟ್ ಪಕ್ಷಿ ಗಣತಿ ಕಾರ್ಯದಲ್ಲಿನ ನಮ್ಮ ದಿನಚರಿಯೆಂದರೆ, ಬೆಳಿಗ್ಗೆ ಬೇಗ ಏಳುವುದು, ನಮ್ಮ ಬೆಳಗಿನ ದೈನಂದಿನ ಕೆಲಸ ಮುಗಿಸಿ, ಶುಚಿಯಾಗಿ ಆದಷ್ಟು ಬೇಗ ತಿಂಡಿ ಮುಗಿಸಿ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅವರು ಬೀಟ್ ಹೋಗುವ ಕಾಡಿನ ಒಳ ಹೊಕ್ಕು…ಕಡಿದಾದ ಕಣಿವೆ, ಝರಿ, ಕಾಡುದಾರಿಯಲ್ಲಿ ಒಂದು ಹತ್ತರಿಂದ ಹದಿನೈದು ಕಿಲೋಮೀಟರ್ ನಡೆದು ಮಧ್ಯಾಹ್ನದ ಹೊತ್ತಿಗೆ ನಾವು ತಂಗಿದ್ದ ಅರಣ್ಯ ಭವನದ ಕ್ಯಾಂಪ್ ಗೆ ಬಂದು ಸೇರುವುದು. ಮಧ್ಯಾಹ್ನದ ಊಟ ಮುಗಿಸಿ, ನಂತರ ಒಂದು ಗಂಟೆ ಸ್ವಲ್ಪ ವಿಶ್ರಾಂತಿ, ಮತ್ತೆ ಸಂಜೆ ಮೂರು ಘಂಟೆ ಹೊತ್ತಿಗೆ ತಯಾರಾಗಿ ಮತ್ತೊಂದು ಕಡೆ ಪಕ್ಷಿ ವೀಕ್ಷಣೆ ಹಾಗು ಗಣತಿ ಕಾರ್ಯಕ್ಕೆ ಹೋಗುವುದು; ಮತ್ತೆ ಇನ್ನೊಂದತ್ತು ಕಿಲೋ ಮೀಟರ್ ಗಳ ನಡಿಗೆ ಕತ್ತಲಾಗುವ ಮುನ್ನ ವಾಪಾಸ್ ಕ್ಯಾಂಪ್ ಸೇರಿಕೊಳ್ಳುವುದು, ರಾತ್ರಿಯ ಊಟ ಮುಗಿಸಿ ಮಲಗುವ ತನಕ ಅಂದಿನ ದಿನದ ಪಕ್ಷಿ ಗಣತಿ ಕಾರ್ಯದ ಅನುಭವ, ನೋಡಿರುವ ಪಕ್ಷಿಗಳು, ಅದರ ಜಾಗ ಎಲ್ಲವನ್ನೂ ಅರಣ್ಯ ಇಲಾಖೆ ಕೊಟ್ಟಿರುವ ದಾಖಲೀಕರಣದ ಪುಸ್ತಕದಲ್ಲಿ ದಾಖಲಿಸುವುದು. ಇದರ ಮಧ್ಯೆ ಅಲ್ಲಿನ ಅರಣ್ಯ ಸಿಬ್ಬಂದಿಗಳ ರೋಚಕ ಕಾಡಿನ ಕತೆಗಳು! ಅವರ ಕಾಡಿನ ಒಂದೊಂದು ಅನುಭವದ ಘಟನೆಗಳು ರೋಮಾಂಚನವಾಗಿದ್ದವು. ಅರಣ್ಯ ಸಿಬ್ಬಂದಿಗಳ ನೈಜ ಕತೆ ಕೇಳುವಾಗ ಹೊರಗಿನ ಪ್ರಪಂಚದ ಪ್ರಜ್ಞೆಯೇ ಇರುತ್ತಿರಲಿಲ್ಲ. ಮೊಬೈಲ್ ಇಲ್ಲ, ಟಿವಿ ಇಲ್ಲ, ಅಲ್ಲಿನ ಸಿಬ್ಬಂದಿಗಳ ಮೊಬೈಲ್ ತಗೊಂಡು ಸ್ವಲ್ಪ ಹೊತ್ತು ಮನೆಗೆ ಕಾಲ್ ಮಾಡಿ ಮಾತನಾಡುವುದು ಅಷ್ಟೇ. ಅದು ಬಿಟ್ಟರೆ, ಕಾಡುವ ಕಾಡು, ಪಕ್ಷಿಗಳ ನಿನಾದ, ಜುಳು ಜುಳು ಹರಿಯುವ ನದಿಯ ಶಬ್ದ, ಚಿಟ್ಟೆಗಳ ಮನಮೋಹಕ ನೋಟ, ಜಿಂಕೆ, ಸಾರಂಗ, ಆನೆಗಳನ್ನು ಹತ್ತಿರದಿಂದ ನೋಡುವ ಅವಕಾಶ, ಇಷ್ಟೇ ಪ್ರಪಂಚವಾಗಿತ್ತು.
ಎರಡನೇ ದಿನದ ಬೆಳಿಗ್ಗೆ ಕಾಡಿನ ಮಧ್ಯ ಹೋಗಿ ಹುಲಿ ಅಟ್ಯಾಕ್ ಮಾಡಿದ ಕಥೆ ಕೇಳಿದ ನಂತರ ಕಾಡಿನ ಒಳಗೆ ತುಂಬಾ ದೂರ ಹೋಗುವುದು ಸಮಂಜಸವಲ್ಲ ಎಂದೆನಿಸಿ ಮಧ್ಯಾಹ್ನ ನಮ್ಮ ಅಮರ್ ಚಂದ್ ಅಡುಗೆ ಭಟ್ಟನ ಊರಿನ ಕಡೆ ಪಕ್ಷಿ ವೀಕ್ಷಣೆ ಮಾಡೋಣವೆಂದು ನಿರ್ಧರಿಸಿದೆವು. ಆ ಊರು ಕೂಡ ಇದ್ದದ್ದು ಕಾಡಿನ ಮಧ್ಯದಲ್ಲೇ, ಆದರೆ ಊರಿಗೆ ಹೋಗುವುದಕ್ಕೆ ಚಿಕ್ಕದಾದ ಕಾಡಿನ ದಾರಿ ಇತ್ತು. ಆ ಊರಿನ ಜನರ ಓಡಾಟ ಇದೆ ದಾರಿಯಲ್ಲಿ! ಆ ದಾರಿ ಬೈಕ್ ಅಥವಾ ಬೊಲೆರೋ (4*4) ಮಾತ್ರ ಸಾಗಲು ಇದ್ದ ದಾರಿ. ನಾವು ಇದ್ದ ಜಾಗದಿಂದ ಒಂದು ಆರು ಕಿಲೋಮೀಟರ್ ಒಳಗೆ ಇದ್ದಂತಾ ಒಂದು ಪುಟ್ಟ ಹಳ್ಳಿಯದು. ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತವಾಗಿತ್ತು. ಮೂರು ಘಂಟೆ ಸುಮಾರಿಗೆ ನಾವು ನಡೆದುಕೊಂಡು ಹೋಗಲು ಶುರು ಮಾಡಿದೆವು. ದಾರಿ ಪಕ್ಕದಲ್ಲಿ ಕಡಿದಾದ ಕಣಿವೆ. ಇನ್ನೊಂದು ಕಡೆ ದೊಡ್ಡ ಬೆಟ್ಟ. ಮಳೆ ಬರುವ ಮುನ್ಸೂಚನೆ ಇತ್ತು. ಅದಕ್ಕೆ ಪೂರಕವಾಗಿ ನಮ್ಮ ಕ್ಯಾಮೆರಾವನ್ನು ರಕ್ಷಿಸಲು ಒಂದು ರೈನ್ ಬ್ಯಾಗ್ ಮತ್ತು ನಮಗೆ ರೈನ್ ಕೋಟ್ ಇಟ್ಟುಕೊಂಡು ಹೊರಟಿದ್ದೆವು. ಎಂತಹ ಅದ್ಭುತ ಪರಿಸರ! ಹಚ್ಚ ಹಸಿರಿನ ವನಸಿರಿ. ದಾರಿಯುದ್ದಕ್ಕೂ ಬೃಹದಾಕಾರದ ಮರಗಳು, ಎಲ್ಲಿ ನೋಡಿದರಲ್ಲಿ ಪಕ್ಷಿಗಳ ಚಿಲಿಪಿಲಿ ನಿನಾದ, ಬಣ್ಣ ಬಣ್ಣದ ಚಿಟ್ಟೆಗಳು, ಪತಂಗಗಳು…






ನಾವು ಸಾಗುವ ದಾರಿಯುದ್ದಕ್ಕೂ ನಮ್ಮ ಅಕ್ಕಪಕ್ಕದಲ್ಲೇ ರಾಕೆಟ್ ನಂತೆ, ಬಿಳಿ ಬಣ್ಣದ ಉದ್ದನೆಯ ಬಾಲವುಳ್ಳ ಪಕ್ಷಿಯಾದ ಬಾಲದಂಡೆ ಪಕ್ಷಿಯು (Indian paradise flycatcher) ಅತ್ತಿಂದಿತ್ತ, ಇತ್ತಿಂದತ್ತ ಹಾರಾಡುತ್ತಿತ್ತು. ನಮ್ಮ ಬೆಂಗಳೂರಿನ ಸುತ್ತಮುತ್ತ ನಾನು ಇದರ ಒಂದು ಫೋಟೋ ತೆಗೆಯಲು ಹುಡುಕಿಕೊಂಡು ಹೋಗದ ಜಾಗವಿಲ್ಲ. ಹಾಗೇ ಕಾದು ಕುಳಿತ ಸಮಯಗಳು ಎಷ್ಟೋ. ಇಲ್ಲಿ ನೋಡಿದರೆ ಲೆಕ್ಕವಿಲ್ಲದಷ್ಟು ರಾಜ ಪಕ್ಷಿಗಳು ಕಣ್ಣ ಮುಂದೆಯೇ ಹಾರಾಡುತ್ತಾ ಇವೆ. ಇದರ ಜೊತೆಜೊತೆಗೆ, ಹಲವು ನೊಣ ಹಿಡುಕ ಪಕ್ಷಿಗಳಾದ, ನೀಲಿ ಕೆಂಪು ನೊಣ ಹಿಡುಕ. ಬೂದು ತಲೆ ನೊಣ ಹಿಡುಕ (Canary flycatcher), ಬಿಳಿ ಚುಕ್ಕೆಯ ಬೀಸಣಿಗೆ ನೊಣ ಹಿಡುಕ (White spotted fantail), ಕಪ್ಪು ಕತ್ತಿನ ರಾಜ ಹಕ್ಕಿ (Black Naped monrach). ಸಾಲು ಸಾಲಾಗಿ ಸಿಗುತ್ತಿದ್ದವು. ಇದರ ಮಧ್ಯೆ ನಮ್ಮ ಜೊತೆ ಇದ್ದ ಅರಣ್ಯ ಸಿಬ್ಬಂದಿ. ಕೆಳಗಡೆ ಇದ್ದ ಕಣಿವೆಯಲ್ಲಿ ಹರಿಯುತ್ತಿದ್ದ ನೀರಿನ ಕಡೆ ಕೈ ತೋರಿಸಿ, ಅಲ್ಲಿ ನೋಡಿ ಸರ್ ‘ಫೋರ್ಕ್ ಟೈಲ್’ ಅಂತ ತೋರಿಸಿದ. ನಾನು, ನನ್ನ ಸಹಚರರು ಎಷ್ಟು ಹುಡುಕಿದರೂ ನಮ್ಮ ಕಣ್ಣಿಗೆ ಕಾಣಲೇ ಇಲ್ಲ. ಆದರೆ ಅವರು ಮಾತ್ರ ಅಲ್ಲೇ ಇದೆ ನೋಡಿ ಸಾರ್ ಅಂತ ಹೇಳ್ತಾ ಇದ್ರು. ಒಂದೆರಡು ನಿಮಿಷ ಕಷ್ಟ ಪಟ್ಟು ಹುಡುಕಿದ ಮೇಲೆ ನಮ್ಮ ಕಣ್ಣಿಗೂ ಕಾಣಿಸಿತು. ಅದು Slaty-backed forktail. ಅಲ್ಲಿನ ನೀರಿನ ಕಲ್ಲುಗಳ ನಡುವೆ ಎಷ್ಟು camouflage ಆಗಿತ್ತು ಅಂದ್ರೆ. ಬರಿಗಣ್ಣು ಇರಲಿ ಬೈನಾಕ್ಯುಲರ್ ನಲ್ಲಿ ಕೂಡ ಅದನ್ನು ಹುಡುಕಲು ಕಷ್ಟ ಆಗ್ತಿತ್ತು. ನಮ್ಮ ಕಣ್ಣಿಗೆ ಕಾಣಿಸಿದ ಮೇಲೆ ಇಂತಹ ಅಪರೂಪದ ಪಕ್ಷಿ ನೋಡಿ ಸಂತೋಷವಾಯಿತು. ಒಂದೆರಡು ಫೋಟೋ ಮತ್ತು ವಿಡಿಯೋ ಮಾಡಿಕೊಂಡು, ಹಾಗೆ ಮುಂದೆ ಸಾಗುತ್ತ ಇರಬೇಕಾದರೆ ಹೊಸಹೊಸ ಅಂದರೆ ಹಿಮಾಲಯದ ತಪ್ಪಲಿನಲ್ಲಿ ಮಾತ್ರ ಕಾಣ ಸಿಗುವ ಮರಕುಟಿಗ ಹಕ್ಕಿಗಳು, ಕುಟುರಗಳು, ಹೀಗೆ ಹೊಸ ಬಗೆಯ ಪಕ್ಷಿಗಳ ಲೋಕ ನಮ್ಮ ಕಣ್ಣ ಮುಂದೆ ತೆರೆದಿತ್ತು.

ರಾಮ್ ಚಂದ್ ರವರ ಹಳ್ಳಿ ತಲುಪಿದಾಗ ಸಮಯ ಸುಮಾರು 4.40 ಆಗಿತ್ತು. ಅಲ್ಲೇ ಇದ್ದ ಫಾರೆಸ್ಟ್ ಕ್ಯಾಂಪ್ ನಲ್ಲಿ ಹಾಲಿಲ್ಲದ ಖಡಕ್ ಚಹಾ ಕುಡಿದು, ಹಳ್ಳಿಯನ್ನು ನೋಡಲು ಹೊರಟೆವು. ಪುಟ್ಟ ಹಳ್ಳಿ, ಸುಮಾರು ಇಪ್ಪತ್ತು ಅಥವಾ ಇಪ್ಪತೈದು ಮನೆ ಇರಬಹುದು ಅಷ್ಟೆ. ಸುತ್ತಲೂ ಬೆಟ್ಟಗಳಿಂದ ಆವೃತವಾದ ಕಾಡಿನ ಮಧ್ಯೆ ಇರುವ ಹಳ್ಳಿ. ಎಲ್ಲ ಹೆಂಚಿನ ಮನೆಗಳು, ಪ್ರತಿ ಮನೆ ಮೇಲೆ ಸೋಲಾರ್ ಪ್ಯಾನಲ್; ಇದರಿಂದಲೇ ವಿದ್ಯುತ್! ಪಕ್ಕದಲ್ಲೇ ಹರಿಯುತ್ತಿದ್ದ ನದಿ ಹಾಗು ಚಿಕ್ಕ ಚಿಕ್ಕ ಝರಿ ಇವರ ನೀರಿನ ಆಧಾರ. ಆದರೆ ವರ್ಷ ಪೂರ್ತಿ ನೀರು ಸಿಗುತ್ತದೆ. ಮಳೆಗಾಲದಲ್ಲಿ ಇವರ ಬದುಕು ತುಂಬಾ ಕಷ್ಟ. ಇಲ್ಲಿ ಮಳೆ ಬಂದರೆ ಬೆಟ್ಟಗುಡ್ಡಗಳ ಮೇಲಿನಿಂದ ನೀರು ರಭಸದಿಂದ ಹರಿಯುತ್ತದೆ. ಕೆಲವೊಮ್ಮೆ ದಾರಿಯಲ್ಲಿ ಸಿಗುವ ನದಿಗಳನ್ನು ದಾಟಿ ಮುಖ್ಯರಸ್ತೆಗೆ ಬರಲು ಆಗುವುದಿಲ್ಲವಂತೆ.

ಹಾಗೆ ಹಳ್ಳಿಯನ್ನು ಸುತ್ತುತ್ತಿದ್ದ ನಮಗೆ ದಾರಿಯಲ್ಲಿ ಒಂದು ಪುಟ್ಟ ಗುಡಿ ಕಾಣಿಸಿತು. ಯಾವ ಗುಡಿ ಎಂದು ಪ್ರಶ್ನೆ ಕೇಳಿದ ನಮಗೆ, ಅದು ಒಂದು ದೇವಿ ಗುಡಿಯೆಂದು, ಆ ದೇವಿಯೇ ಇವರನ್ನು ಮತ್ತು ಈ ಕಾಡನ್ನು ಕಾಪಾಡುತ್ತಿದ್ದಾಳೆ ಎನ್ನುವುದು ಈ ಹಳ್ಳಿಯವರ ನಂಬಿಕೆ ಎಂಬುದು ತಿಳಿಯಿತು. ಅಲ್ಲಿ ಇರುವ ಮಕ್ಕಳನ್ನು ಹಾಗು ದೊಡ್ಡವರನ್ನು ಮಾತನಾಡಿಸಿ, ಅವರ ಜೊತೆ ಫೋಟೋ ತೆಗೆದುಕೊಂಡು, ಆ ಹಳ್ಳಿಯಿಂದ ವಾಪಾಸ್ ಹೊರಟೆವು. ನಾವು ಆದಷ್ಟು ಬೇಗ ಅಂದರೆ ಕತ್ತಲು ಆಗುವುದರೊಳಗೆ ನಮ್ಮ ಕ್ಯಾಂಪ್ ಸೇರಿಕೊಳ್ಳಬೇಕಾಗಿತ್ತು… ಯಾಕೆಂದರೆ ಸಂಜೆಯ ಮೇಲೆ ಇಲ್ಲಿ ಹುಲಿಗಳ ಓಡಾಟ ಹೆಚ್ಚು. “ಹಾಗಾದರೆ ಇಲ್ಲಿರುವ ಹಳ್ಳಿ ಜನರನ್ನು ಅವು ಏನು ಮಾಡುವುದಿಲ್ವಾ?” ಎಂದು ಕೇಳಿದೆ. ಅದಕ್ಕೆ ನಮ್ಮ ಜೊತೆಯಿದ್ದ ಅರಣ್ಯಾಧಿಕಾರಿಗಳು “ಅವರಿಗೆ ಅಭ್ಯಾಸ ಆಗಿದೆ ಸರ್. ನಾವು ಏನು ಮಾಡದೇ ಸುಮ್ಮನೆ ಇದ್ದರೆ ಅದರ ಪಾಡಿಗೆ ಅವು ಹೋಗುತ್ತವೆ” ಅಂತ ಹೇಳಿದ್ರು. ನಮ್ಮ ಪಕ್ಕದಲ್ಲೇ ಇದ್ದ ಒಬ್ಬ ಪುಟ್ಟ ಹುಡುಗ ನಮ್ಮ ಬಳಿ ಬಂದು ಮೊನ್ನೆಯಷ್ಟೇ ಒಂದು ದೊಡ್ಡ ಹುಲಿಯನ್ನು ಆ ಬೆಟ್ಟದ ಮೇಲೆ ನೋಡಿದೆ ಅಂತ ಹೇಳಿದ. ಅವನು ಹೇಳುವಾಗ ಅವನ ಮುಖದಲ್ಲಿ ಯಾವುದೇ ಭಯವಿರಲಿಲ್ಲ, ಗಾಬರಿಯಿರಲಿಲ್ಲ. ಅವನು ಯಾವುದೋ ನಾಯಿಯನ್ನು ನೋಡಿದ ಹಾಗೆ ಸಾಮಾನ್ಯವಾಗಿ ಹೇಳಿ ಅದರ ಜಾಗ ತೋರಿಸಿದ. ಕಣ್ಣಳತೆ ದೂರದಲ್ಲೇ ಅವನು ತೋರಿಸಿದ ಬೆಟ್ಟವಿತ್ತು. ಇವನ ಮಾತಿನಿಂದ ಇವರ ಮತ್ತು ಕಾಡು ಪ್ರಾಣಿಗಳ ನಡುವಿನ ಸಾಮರಸ್ಯ ನನಗೆ ಕುತೂಹಲ ಹುಟ್ಟಿಸಿತು. ಪುಟ್ಟ ಹಳ್ಳಿಯ ಸುತ್ತ ಸೋಲಾರ್ ತಂತಿ ಬೇಲಿ ಹಾಕಲಾಗಿತ್ತು. ಆದರೂ ಕೂಡ ಆನೆ ಕಾಟ ಜಾಸ್ತಿ ಇರುತ್ತೆ ಅಂತ ಹೇಳ್ತಾ ಇದ್ರು. ನಾವು ಆ ಹಳ್ಳಿಯ ಜನರಿಗೆ ವಂದಿಸಿ ನಮ್ಮ ದಾರಿ ನಾವು ಹಿಡಿದು ವಾಪಾಸ್ ಕ್ಯಾಂಪ್ ಕಡೆಗೆ ನೆಡೆಯಲು ಶುರು ಮಾಡಿದೆವು.



ಕೆಲವೊಮ್ಮೆ ಅದೃಷ್ಟ ಎಂಬಂತೆ ಒಂದಷ್ಟು ಘಟನೆಗಳು ನಮ್ಮ ಕಣ್ಣಿಗೆ ಕಾಣಿಸುತ್ತವೆ. ಪಕ್ಷಿ ವೀಕ್ಷಣೆ ಸಮಯದಲ್ಲೂ ಅಷ್ಟೇ, ಕೆಲವೊಂದು ಪಕ್ಷಿಯನ್ನು ನೋಡಲೇಬೇಕು ಎಂದಾಗ ಸಿಗುವುದಿಲ್ಲ. ಆದರೆ ಏನೂ ನಿರೀಕ್ಷೆ ಇಲ್ಲದೆ ಸಾಗುತ್ತಿದ್ದರೆ ಅಪರೂಪದ ಪಕ್ಷಿಗಳು ಕಾಣಸಿಗುತ್ತವೆ. ಇದೇ ರೀತಿ ಪಕ್ಷಿ ಗಣತಿಯಲ್ಲಿಯೂ ಆಯಿತು. ಉತ್ತರಾಖಂಡದ ದಟ್ಟ ಕಾಡಿನ ನಡುವೆ ನಮ್ಮ ಪಕ್ಷಿ ವೀಕ್ಷಣೆಯ ಸರ್ವೆ ಮುಂದುವರಿದಿದ್ದಾಗ, ‘ಕತ್ತಲಾಯಿತು ಇನ್ನು ಸಾಕು ಹೊರಡೋಣ ಬೆಳಕು ಬೇರೆ ಜಾಸ್ತಿ ಇಲ್ಲ’ ಅಂದುಕೊಂಡು ವಾಪಸ್ ಹೊರಡಲು ಅನುವಾಗಿದ್ದೆವು. ಅಷ್ಟರಲ್ಲಿ ದೂರದಲ್ಲಿ ಒಂದು ಕಪ್ಪು ಮಿಶ್ರಿತ ಪಕ್ಷಿ ಕುಳಿತಿರುವುದು ಕಾಣಿಸಿತು. ಮೊದಲು ಇದು ಯಾವುದೋ ಮೈನಾ ಅಥವಾ ನೀಲಿ ಸಿಳ್ಳಾರ ಇರಬಹುದು ಎಂದು ಸುಮ್ಮನಾದೆ. ಆದರೂ ಒಮ್ಮೆ ಕ್ಯಾಮೆರಾದಲ್ಲಿ ನೋಡೋಣವೆಂದು ನೋಡಿದೆ. ಬೇರೆ ಬಣ್ಣ ಇರುವ ಹಾಗೆ ಕಾಣಿಸಿತು. ಪಕ್ಕದಲ್ಲಿದ್ದ ನನ್ನ ಜೊತೆಗಾರ ಮುನಿಶ್ ಗೆ ಇದರ ಹೊಟ್ಟೆ ಕೆಳಗಡೆ ಯಾವುದೊ ಕೆಂಪು ಮಿಶ್ರಿತ ಬಣ್ಣವಿದೆ ಎಂದು ಹೇಳಿದೆ. ವಾಹ್. . . ಇದು ಮರುನ್ ಒರಿಯಲ್ (maroon oriole) ಬೇಗ ಫೋಟೋ ತೆಗೆಯಿರಿ ಅಂತ ಹೇಳಿದರು. ನಮ್ಮ ಕರ್ನಾಟಕದ ಕಡೆ ಸಾಮಾನ್ಯವಾಗಿ ಕಾಣಸಿಗುವ ಅರಿಶಿನ ಬುರುಡೆ ಹಕ್ಕಿ (Golden Oriole) ಹಾಗೂ (Black hooded oriole) ನೋಡುತ್ತಿದ್ದ ನಮಗೆ, ಈ ಮರೂನ್ ಒರಿಯೋಲ್ ನೋಡಿ ಸಂತೋಷವಾಯಿತು. ಮಂದ ಬೆಳಕಿನಲ್ಲಿ ಕ್ಯಾಮೆರಾದ ISO ಜಾಸ್ತಿ ಮಾಡಿಕೊಂಡು, ಒಂದೆರಡು ಫೋಟೋ ತೆಗೆದು ಖುಷಿಪಟ್ಟೆವು. ಇದೆ ತರಹ ಅಪರೂಪದ ಪಕ್ಷಿಗಳು ಅಚಾನಕ್ ಆಗಿ ಎದುರುಗೊಂಡು ನಮ್ಮ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದವು.
ವಾಪಾಸ್ ಬರುವಾಗ ಇನ್ನೇನು ನಮ್ಮ ಕ್ಯಾಂಪ್ ಬಂತು ಅನ್ನುವಾಗ ಒಂದು ವಿಚಿತ್ರ ಪಕ್ಷಿಯ ಶಬ್ದ ಕೇಳಿಸಿತು. ಅದರ ಜಾಡು ಹಿಡಿದು ಹೋದಾಗ ಅದು ನಿಶಾಚರ ಪಕ್ಷಿಯಾದ ಮೀನು ಗೂಬೆ (Brown fish Owl) ಎಂದು ತಿಳಿಯಿತು. ನಮ್ಮ ದಾರಿಯ ಪಕ್ಕದ ಮರದ ಮೇಲೆ ಕುಳಿತಿದ್ದ ಅದು ನಾವು ನಡೆದಾಡಿದ ಶಬ್ದ ಕೇಳಿ, ಇನ್ನು ಸ್ವಲ್ಪ ಒಳಗಡೆ ಹಾರಿಹೋಯ್ತು. ಆ ದಿನದ ಕೊನೆಗೆ ಕೊನೆಗೆ ಅಪರೂಪದ ಪಕ್ಷಿಗಳ ಪ್ರತ್ಯಕ್ಷ ದರ್ಶನ ಮಾಡಿ, ಅಷ್ಟು ದೂರ ನಡೆದಿದ್ದರೂ ಕೂಡ ಮನಸು ಪುಳಕಿತ ಗೊಂಡಿತ್ತು.
ಮುಂದಿನ ಭಾಗದಲ್ಲಿ ಕೊನೆಯ ದಿನದ ಬೆಳಗಿನ ಅನುಭವ ಮತ್ತೆ ವಾಪಾಸ್ ಬರುವಾಗ ನನ್ನ ಕಣ್ಣಿಗೆ ಕಂಡ ಉತ್ತರಾಖಂಡ್ ರಸ್ತೆಗಳು, ದೊಡ್ಡ ದೊಡ್ಡ ಬೆಟ್ಟ, ಪ್ರಪಾತ, ನದಿಗಳ ಮಧ್ಯೆ ಸಾಗುತ್ತ ಇದ್ದ ನಮ್ಮ ಜೀಪ್ ಸಫಾರಿ ಅನುಭವವನ್ನು ಹಂಚಿಕೊಳ್ಳಲಿದ್ದೇನೆ, ಕಾಯುತ್ತೀರಿ.

ಲೇಖನ: ಗುರು ಪ್ರಸಾದ್ ಕೆ. ಆರ್.
ಬೆಂಗಳೂರು ನಗರ ಜಿಲ್ಲೆ