ಗುಂಯ್ ಗುಂಯ್
© ಗುರುಪ್ರಸಾದ್ ಕೆ. ಆರ್
ಶುಕ್ರವಾರ ಬೆಳಗ್ಗೆ ಎಂಟು ಗಂಟೆಯಾಗಿರಬಹುದು. ನಾನು ಅಡುಗೆ ಮಾಡುತ್ತ ಆ ದಿನದ ಯೋಜನೆಗಳನ್ನು ರೂಪಿಸುತ್ತಿದ್ದೆ. ಹೊರಗಿನಿಂದ ನನ್ನ 3 ವರ್ಷದ ಕಂದಮ್ಮ “ಅಮ್ಮಾ ನಮ್ಮ ಹುಳ, ಟಿವಿ ಒಳಗ!” ಅಂತ ಕೂಗಹತ್ತಿದ. ಯಾವ ಹುಳು ನಮ್ಮ ಟಿವಿ ಮೇಲೆ ಬಂದಿತೋ? ಅಥವಾ ಯಾವುದು ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿತೋ ಎಂದು ಯೋಚಿಸುತ್ತ ಕೈಯಲ್ಲಿರುವ ಲಟ್ಟಣಿಗೆ ತಗೊಂಡು ಓಡಿ ಹೋದೆ. ನನ್ನ ಅವತಾರವನ್ನು ನೋಡಿದ ನಮ್ಮನೆಯ ಕೆಲಸದಾಕೆ ನಗುವನ್ನು ಒತ್ತಿ ಹಿಡಿಯಲು ಪ್ರಯತ್ನ ಪಟ್ಟು ಅದು ಅಸಾಧ್ಯವಾದಾಗ ಬಾಯಿ ತೆಗೆದು ಗೊಳ್ಳನೆ ನಗಲಾರಂಭಿಸಿದಳು. ನಾನು ಹುಳುವನ್ನು ಟಿವಿಯ ಸುತ್ತಮುತ್ತ ಹುಡುಕುತ್ತಿದ್ದೆ, ಕಂದಮ್ಮ “ಅಲ್ನೋಡು ಹುಳ” ಅಂತ ಮತ್ತೆ ಟಿವಿಯತ್ತ ತೋರಿಸಿದ. ಟಿವಿಯಲ್ಲಿ ಕವಿರತ್ನ ಕಾಳಿದಾಸ ಸಿನಿಮಾದ ಸುಪ್ರಸಿದ್ಧ ‘ಪ್ರಿಯತಮಾ ಓ .. ‘ಹಾಡು ಪ್ರಸಾರವಾಗುತ್ತಿತ್ತು. ಅದರಲ್ಲಿ ಜಯಪ್ರದಾ ಸುತ್ತ ದುಂಬಿಯೊಂದು ಗುಯ್ಗುಡುತ್ತ ಹಾರುತ್ತಿತ್ತು. ಎಲ್ಲರೂ ಜಯಪ್ರದಾಳನ್ನು ನೋಡಿದರೆ ನನ್ನ ಮಗ ಹುಳುವನ್ನು ನೋಡಿ “ಅಕೀಗ ಕಡಿತೈತಿ ಅದು ಪಾಪ” ಅಂತ ಪ್ರಾಮಾಣಿಕವಾಗಿ ಕಳವಳಗೊಂಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ, ಇವನು ಹುಳು ನೋಡಿ ಆಕರ್ಷಿತನಾದನಲ್ಲವೇ ಎಂದು ಅವನ ಮೇಲೆ ತುಸು ಹೆಮ್ಮೆಯೆನಿಸಿತು. ಆಮೇಲೆ ಅದು ಟಿವಿಯ ಹೊರಗಡೆ ಇಲ್ಲ, ಅದು ಸಿನಿಮಾ ಮಾತ್ರ ಎಂದು ತಿಳಿಸಿ ಹೇಳಲು ಸ್ವಲ್ಪ ಸಮಯವೇ ಬೇಕಾಯಿತು! ಈ ಹುಳುವನ್ನು ಅವನು ಅಜ್ಜನ ಮನೆಯ ಕೈದೋಟದಲ್ಲಿ ಬಹಳಷ್ಟು ನೋಡಿದ್ದ. ಅದಕ್ಕೇ ಟಿವಿಯಲ್ಲಿ ನೋಡಿದ ತಕ್ಷಣ ‘ನಮ್ಮ ಹುಳ’ ಅಂತ ಸಂಭೋದಿಸಿದ್ದ! ಸುಮಾರು ಗಂಟೆ ಕೂತು ನಾವು ಮೂರೂ ಜನ ಎಕ್ಕದ ಗಿಡದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದೆವು. ಎಷ್ಟು ಪಕ್ಷಿಗಳು ಗಿಡಕ್ಕೆ ಭೇಟಿ ಕೊಟ್ಟವು? ಎಷ್ಟು ಹುಳುಗಳು ಇವೆ, ಯಾವ ತರಹದ ಹುಳುಗಳು ? ಕಚ್ಚುತ್ತವೆಯೇ? ಏನು ತಿನ್ನುತ್ತಾ ಇವೆ? ಎಂದು ಚರ್ಚಿಸುತ್ತಿದ್ದೆವು. ಅದರ ಕಾಯಿಯಿಂದ ಬೀಜಗಳು ಹಾರತೊಡಗಿದ ನಂತರವಂತೂ, ಬೀಜಗಳು ಪೂರ್ತಿ ಹಾರಿ ಹೋಗುವ ತನಕ ನಮ್ಮ ಠಿಕಾಣಿ ಅಲ್ಲಿಯೇ! ನಮ್ಮ ಪಕ್ಕದ ಮನೆಯ ಆಂಟಿ ಒಬ್ಬರು ನಮ್ಮ ತಾಯಿಗೆ “ಅನುಪಮಾ ಏನಾರೆ ವ್ರತಾ ಪೂಜಾ ಹಿಡದಾಳ ಏನ್ರಿ? ಎಕ್ಕದ ಗಿಡದ ಮುಂದೆ ಕೂತಿರ್ತಾಳಲ್ಲಾ?” ಅಂತ ಕೇಳಿದ್ದಕ್ಕೆ ನಮ್ಮಮ್ಮ ಕೊಂಚ ಕಸಿವಿಸಿಗೊಂಡರೂ ಅದನ್ನು ಅವರ ಮುಂದೆ ತೋರ್ಪಡಿಸದೆ ಸುಮ್ಮನೆ ಬಂದಿದ್ದರು! ಆಮೇಲೆ ನಮಗೆ ಬೈದು ಬುದ್ದಿ ಹೇಳಿದರು ಎಂಬುದು ಬೇರೆ ಹೇಳಬೇಕಾಗಿಲ್ಲವಲ್ಲ!
ಈ ಹುಳುವನ್ನು ಇಂಗ್ಲಿಷ್ ನಲ್ಲಿ ಕಾರ್ಪೆಂಟರ್ ಬೀ (Carpenter bee) ಅಂತ ಕರೆದರೂ ಆಡುಭಾಷೆಯಲ್ಲಿ ಗುಂಗಿ ಹುಳ ಅಂತ ಕರೆಯುತ್ತಾರೆ. ಅಧಿಕೃತವಾಗಿ ಇದು ದುಂಬಿಯೆಂದೇ ಪ್ರಸಿದ್ಧಿ. ಇದು ಗುಂಯ್ ಗುಂಯ್ ಎಂದು ರಾಜಾರೋಷವಾಗಿ ಸದ್ದು ಮಾಡುತ್ತ ಹೂವುಗಳ ಮಕರಂದ ಹೀರಲು ತೊಡಗಿದಾಗ ದುಂಬಿಯ ಭಾರಕ್ಕೆ ಹೂವು ಬಾಗುವುದನ್ನು ನೋಡುವುದೇ ಆನಂದ. ಆ ಸಂಗತಿಯನ್ನು ಎಷ್ಟು ಹೊತ್ತು ನೋಡಿದರೂ ಬೇಸರವಾಗುವುದೇ ಇಲ್ಲ. ಅದಕ್ಕಾಗಿಯೇ ಈ ಸಂಚಿಕೆಗೆ ದುಂಬಿಯನ್ನು ಆಯ್ದುಕೊಂಡಿದ್ದು! ಈ ಸಂಚಿಕೆಯ ವಿಶೇಷವೇನೆಂದರೆ ಕೀಟದ ನಂಟು ಅಂಕಣ ಶುರುವಾಗಿ ಒಂದು ವರ್ಷ ಪೂರೈಸಿದ್ದು. ಈ ಸಂಭ್ರಮಕ್ಕಾಗಿಯೇ ದುಂಬಿಯ ಬಗ್ಗೆ ಬರೆಯಬೇಕೆಂದು ಮನಸ್ಸಾಗಿದ್ದು. ದುಂಬಿಯು ಕಟ್ಟುವ ಗೂಡಿನ ಆಧಾರದ ಮೇಲೆ ಇದಕ್ಕೆ ಕಾರ್ಪೆಂಟರ್ ಬೀ (Carpenter bee) ಅಂತ ಹೆಸರು. ಆದರೆ ಕನ್ನಡದಲ್ಲಿ ಅನಾದಿಕಾಲದಿಂದ ಅಥವಾ ಭಾರತದಲ್ಲಿಯೇ ಇದನ್ನು ಪುರಾತನ ಕಾಲಗಳಿಂದ ಒಂದು ವಿಶಿಷ್ಟ ಸ್ಥಾನದಲ್ಲಿಟ್ಟಿದ್ದಾರೆ. ಎಲ್ಲ ಕವಿಗಳು ಇದನ್ನು ತಮ್ಮ ಕವಿತೆಯಲ್ಲಿ ಉಪಮೇಯವಾಗಿ ಬಳಸಿದ್ದಾರೆ. ಬೇಂದ್ರೆಯವರ ಕವಿತೆಯಲ್ಲಿ, ಬಸವಣ್ಣನವರ ವಚನದಲ್ಲಿ.
ಅಂದರೆ ನಮ್ಮ ಪೂರ್ವಜರು ತಮ್ಮ ಸುತ್ತಮುತ್ತಲಿನ ಕೀಟ ಪ್ರಪಂಚವನ್ನು ಬಹು ಹತ್ತಿರದಿಂದ ವೀಕ್ಷಿಸುತ್ತಿದ್ದರು. ಈ ದುಂಬಿಯ ವೈಜ್ಞಾನಿಕ ಹೆಸರು ‘Xylocopa violacea’. ಇದು Apidae ಎಂಬ ಕುಟುಂಬಕ್ಕೆ ಸೇರಲ್ಪಟ್ಟಿದ್ದು, Xylocopinae ಎಂಬ ಸಹ ಕುಟುಂಬಕ್ಕೆ ಸೇರಲ್ಪಡುತ್ತದೆ. ಇದರ ಹೆಸರು ಪುರಾತನ ಗ್ರೀಕ್ ಶಬ್ದ Xylocopus ದಿಂದ ಹುಟ್ಟಿದ್ದು, ಅದರರ್ಥ ‘ಮರ ಕತ್ತರಿಸುವವ’ (wood cutter) ಎಂದಾಗಿದೆ.
ಕಳೆದ ಸಂಚಿಕೆಗಳಲ್ಲಿ ತಿಳಿಸಿದಂತೆ, ಎಲೆ ಕತ್ತರಿಸುವ ಹುಳದ ಹಾಗೆ, ಇದು ಕೂಡ ಏಕಾಂಗಿಯಾಗಿ ಬದುಕುತ್ತದೆ. ಜೇನ್ನೊಣಗಳ ತರಹ ದೊಡ್ಡ ಸಂಖ್ಯೆಯ ಗೂಡಿರುವುದಿಲ್ಲ. ಹೆಣ್ಣು ದುಂಬಿಯೇ ಮನೆಯ ಯಜಮಾನ್ತಿ. ಗಟ್ಟಿಯಾದ ಕಟ್ಟಿಗೆಯಲ್ಲಿ ಕೂಡ ರಂಧ್ರ ಕೊರೆಯುವಂತಹ ಶಕ್ತಿಶಾಲಿಯಾದ ಮ್ಯಾಂಡಿಬಲ್ಸ್ (ದವಡೆಗಳು-mandibles) ಇದ್ದು, ಇವುಗಳ ಮುಖಾಂತರ ಕಟ್ಟಿಗೆಯಲ್ಲಿ ರಂಧ್ರ ಕೊರೆದು ಅದರ ಒಳಗೆ ಒಂದು ಉದ್ದ ಸುರಂಗದ ಹಾಗೆ ಕೊರೆದಿರುತ್ತವೆ. ಅದರಲ್ಲಿ ಒಂದು ಮೊಟ್ಟೆಯನ್ನಿಟ್ಟು, ಹೂವಿನ ಮಕರಂದವನ್ನು ಸಂಗ್ರಹಿಸಿ ತಂದಿಟ್ಟು, ನಂತರ ತಮ್ಮ ಬಾಯಿಯಲ್ಲಿ ಅಗಿದ ಕಟ್ಟಿಗೆಯಂತಹ ವಸ್ತುವಿನಿಂದ ಮುಚ್ಚು ಗೋಡೆ ಕಟ್ಟುತ್ತವೆ. ಪಕ್ಕದಲ್ಲಿಯೇ ಮತ್ತೊಂದು ಮೊಟ್ಟೆಯನ್ನಿಟ್ಟು ಮತ್ತೆ ಮಕರಂದವನ್ನು ತಂದಿಡುತ್ತವೆ. ಹೀಗೆ ಸುಮಾರು ಮೊಟ್ಟೆ ಇಟ್ಟ ಬಳಿಕ ಮುಖ್ಯ ದ್ವಾರವನ್ನು ಮುಚ್ಚುತ್ತವೆ. ಕೆಲವು ದಿನಗಳ ಬಳಿಕ ಮೊಟ್ಟೆಯಿಂದ ಲಾರ್ವ ಹೊರಬಂದು ಮಕರಂದ ಸವಿದು ಪ್ಯೂಪಗಳಾಗಿ ಪರಿವರ್ತಿತಗೊಂಡು ನಂತರ ಹುಳುಗಳಾಗಿ ಆ ಮುಚ್ಚಿದ ಸುರಂಗವನ್ನು ಕೊರೆದು ಹೊರಬರುತ್ತವೆ. ವಿಶೇಷವೆಂದರೆ ಈ ಎಲ್ಲಾ ಹುಳುಗಳು ಏಕಕಾಲಕ್ಕೆ ಬೆಳವಣಿಗೆ ಹೊಂದಿ ಏಕಕಾಲಕ್ಕೆ ಹೊರಬರುತ್ತವೆ! ವಯಸ್ಕ ದುಂಬಿಗಳು ಮಿಲನ ಕ್ರಿಯೆ ನಡೆಸಿ ಮತ್ತೆ ಜೀವನ ಚಕ್ರ ಮುಂದುವರಿಯುತ್ತದೆ.
ಇಲ್ಲಿ ಗೂಡು ಕಟ್ಟುವ ಜವಾಬ್ದಾರಿಯನ್ನು ಹೆಣ್ಣು ದುಂಬಿಯು ಹೊರುತ್ತದೆ. ಎಲ್ಲೋ ಕೆಲ ಗಂಡು ದುಂಬಿಗಳು ಗೂಡಿನ ಮುಖ್ಯ ದ್ವಾರದ ಕಾವಲು ಕಾಯುತ್ತವೆ ಎಂದು ಕೆಲ ಸಂಶೋಧನೆಗಳು ಹೇಳಿದರೂ ಹೆಚ್ಚಿನ ಸರ್ವೆಗಳಲ್ಲಿ ಕಂಡುಬಂದ ಅಂಶವೆಂದರೆ ಗೂಡು ಕಟ್ಟುವ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಹೆಣ್ಣು ತೊಡಗಿಕೊಳ್ಳುತ್ತದೆಯೇ ವಿನಃ ಅಲ್ಲಿ ಗಂಡು ದುಂಬಿ ಸುಳಿಯುವುದಿಲ್ಲ. ಆದರೆ ಗಂಡು ದುಂಬಿಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಅದಕ್ಕೇ ಬಹುಶಃ ಒಂದು ಸುಪ್ರಸಿದ್ಧ ಹಿಂದಿ ಚಿತ್ರಗೀತೆಯಲ್ಲಿ ‘ಆವಾರಾ ಭವರೆ ಜೋ ಹೋಲೇ ಹೋಲೇ ಗಾಯೆ’ ಅಂತ ಇದೆ! ಇದರರ್ಥ ಸುಮ್ಮನೆ ಕಾಲಹರಣ ಮಾಡುತ್ತ ಹಾರಾಡುವ ದುಂಬಿ ನಿಧಾನವಾಗಿ ಹಾಡುತ್ತದೆ ಎಂದು! ನನ್ನ ತರ್ಕಶಾಸ್ತ್ರ ಏನೇ ಇದ್ದರೂ, ಎಲ್ಲ ಜೀವಿಗಳಿಗೂ ತಮ್ಮದೇ ಆದ ಜವಾಬ್ದಾರಿಗಳಿರುತ್ತವೆ ಎಂಬುದು ಸತ್ಯ.
ದುಂಬಿಯ ಗುಯ್ಗುಡುವಿಕೆ ನನ್ನ ಕಿವಿಗಳಿಗೆ ಎಷ್ಟು ಶಾಂತಿ ನೀಡುತ್ತದೆ ಎಂದರೆ ಅದನ್ನು ಸತತವಾಗಿ 2 ನಿಮಿಷ ಕೇಳಿದರೆ ನಿದ್ದೆಗೆ ಜಾರುವುದು ಖಂಡಿತ. ಈಗ ಇಂತಹ ಸುಖನಿದ್ರೆ ಅಸಾಧ್ಯವೆಂದೇ ಹೇಳಬೇಕು ಏಕೆಂದರೆ ಅತಿಯಾದ ಕ್ರಿಮಿನಾಶಕಗಳ ಉಪಯೋಗ ಮತ್ತು ಕಟ್ಟಿಗೆಯೇ ಇಲ್ಲದ ಮನೆಗಳಲ್ಲಿ ಇವು ಕಾಣಸಿಗುವುದೇ ಅಪರೂಪ. ಇನ್ನು ಇವುಗಳ ಕರ್ಣಾಮೃತ ಗುಯ್ಗುಡುವಿಕೆ ಅಂತೂ ದೂರದ ಮಾತು. ಆಕಸ್ಮಿಕವಾಗಿ ಒಂದು ವೇಳೆ ಕೇಳಿದರೆ ಅದು ವಿಮಾನದ ದೂರದ ಸದ್ದು ಆಗಿರುತ್ತದೆಯೇ ವಿನಃ ದುಂಬಿಯದ್ದಲ್ಲ! ಬಾಲ್ಯದಲ್ಲಿ ಸದ್ದು ಕೇಳಿತೆಂದರೆ ದೂರದ ಆಕಾಶದಲ್ಲಿ ವಿಮಾನ ಹೋಗುತ್ತಿರಬಹುದು ಎಂದು ಓಡಿ ಹೋಗಿ ಅಂಗಳಕ್ಕೆ ನಿಲ್ಲುತ್ತಿದ್ದೆ, ವಿಮಾನ ನೋಡಲು. ಈಗ ಅಡಿಗಡಿಗೆ ಬೇರೆ ಬೇರೆ ತರಹದ ಸದ್ದು ಮಾಡುವ ವಿವಿಧ ವಿಮಾನಗಳು ತಲೆ ಮೇಲೆ ಹಾರಿ ಹೋದರೂ ಕಿವಿಗಳು ಅದನ್ನು ಅಲಕ್ಷಿಸಿ ದುಂಬಿಯ ಗುಯ್ಗುಡುವಿಕೆ ಕೇಳಲು ಹಾತೊರೆಯುತ್ತವೆ. ಎಂಥ ವಿಪರ್ಯಾಸವಲ್ಲವೇ?
ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ
ಬೆಂಗಳೂರು ನಗರ ಜಿಲ್ಲೆ