ಓಡುವ ಕಸ

ಓಡುವ ಕಸ

©ನವೀನ್ ಐಯ್ಯರ್

ಲಾಕ್ ಡೌನ್ ವೇಳೆಯಲ್ಲಿ ಬಹಳ ದಿನಗಳ ನಂತರ ನಮ್ಮ ಹಳ್ಳಿ ಮನೆಗೆ ಕಾಲಿಟ್ಟೆವು. ಮನೆಯು ಬೇರೆಯವರಿಂದ ಉಪಯೋಗಿಸಲ್ಪಡುತ್ತಿದ್ದರೂ ನಮ್ಮ ಮಹಡಿ ಮನೆಯ ಕೋಣೆಗಳು ಬಹುಶಃ ಹೆಚ್ಚು ಉಪಯೋಗವಾಗಿರಲಿಕ್ಕಿಲ್ಲ ಎನಿಸುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಅವತ್ತು ದಿನವಿಡೀ ಕೋಣೆಗಳ ಕಸಗುಡಿಸಿ ಸ್ವಚ್ಚವಾಗಿ ನೆಲ ಒರೆಸಿದರೂ ಮತ್ತೆ ಎಲ್ಲಿಂದಲೋ ಕಸ ಹಾರಿ ಬರುತ್ತಿತ್ತು. ಮುಖ್ಯವಾಗಿ ಮನೆಯನ್ನು ಗಲೀಜು ಮಾಡುವ ಮಕ್ಕಳು ಹಾಗು ಉಳಿದವರನ್ನು ನಮ್ಮ ಕೋಣೆಯಲ್ಲಿ ಇರಲು ಹೇಳಿ, ಅಲ್ಲಿಂದ ಕಿಂಚಿತ್ತೂ ಕದಲಬಾರದು ಅಂತ ಆಜ್ಞೆ ಮಾಡಿ, ಇದೇ ಕೊನೆಯದಾಗಿ ಅಂದುಕೊಂಡು ಬದಿಯಲ್ಲಿರುವ ಮಕ್ಕಳ ಕೋಣೆಯನ್ನು ಐದನೇ ಬಾರಿ ಗುಡಿಸುತ್ತಿದ್ದೆ! ಆಗ ಮಕ್ಕಳ ಕಿರುಚಾಟ ಕೇಳಿ ಬೆಚ್ಚಿ ಬಿದ್ದು ಹಾವನ್ನೋ ಅಥವಾ ಚೇಳನ್ನೋ ನೋಡಿರಬೇಕೆಂದು ಓಡಿ ಹೋದೆ. ಮಕ್ಕಳು ‘ಅವ್ವಾ ಕಸ ಓಡಾತೈತಿ … ಹೋ ಅಲ್ಲಿ ನೋಡು, ಆಕಡೆ ನೋಡು, ಗೋಡೆ ಮ್ಯಾಲೂ ಕಸಾ ಓಡ್ಯಾಡತಾವ… ಅಯ್ಯಯ್ಯಪ್ಪಾ… ಹೋ’ ಅಂತ ತಕ ತಕ ಕುಣಿಯುತ್ತಿದ್ದರು! ಒಮ್ಮೆಲೇ ನೋಡಿದಾಗ ನನಗೂ ಕೂಡ ಹಾಗೆ ಅನ್ನಿಸಿತು. ವಿಚಿತ್ರವೆಂದರೆ ಹೆಚ್ಚು ಕಡಿಮೆ ಎಲ್ಲಾ ಕಸಗಳೂ ಒಂದೇ ತರಹ ಇದ್ದು ಎಲ್ಲವೂ ನಮ್ಮ ಕಟ್ಟಿಗೆಯ ಮಂಚದ ಕೆಳಗಿನಿಂದ ಬರುತ್ತಿದ್ದವು! ಈ ದೃಶ್ಯ ಯಾರನ್ನಾದರೂ ಬೆಚ್ಚಿ ಬೀಳಿಸುವಂತದ್ದೇ ಆಗಿತ್ತು. ನನ್ನೆದೆ ಒಂದು ಕ್ಷಣ ಧಸಕ್ಕೆಂದಿದ್ದು ಸುಳ್ಳಲ್ಲ. ತಲೆಯಲ್ಲಿ ನೂರೆಂಟು ವಿಚಾರಗಳು. ಮಂಚದ ಕೆಳಗೆ ಏನಾದರೂ ಸತ್ತು ಬಿದ್ದಿರಬಹುದೇ? ಇವೆಲ್ಲಾ ಹುಳುಗಳೇ? ಇಷ್ಟೊಂದು ಹುಳುಗಳೇ? ಎಲ್ಲಿದ್ದವು? ಗಾದಿಯ ಕೆಳಗಿರಬಹುದೇ? ಅಯ್ಯೋ ಅಲ್ಲೇ ಮಲಗಬೇಕಲ್ಲ? ಕಟ್ಟಿಗೆಯ ಮಂಚ ಹಳೆಯ ಕಾಲದ್ದಾಗಿರದೆ ಅದರ ಕೆಳಗೆ ಸ್ಟೋರೇಜ್ ಬಾಕ್ಸ್ ಇದ್ದು ಅಲ್ಲಿ ಸ್ವಲ್ಪ ಹಳೆಯ ಬಟ್ಟೆಗಳು, ಕಿಟಕಿಗೆ ಹಾಕುವ ಪರದೆಗಳು, ಬೆಡ್ ಶೀಟ್ಗಳು, ಸ್ವಲ್ಪ ಹಾಸಿಗೆಗಳು ಇದ್ದವು. ಅದರಲ್ಲೇನಾದರೂ ನುಸಿ ಆದವೇ? ಇವು ನುಸಿ ತರಹ ಕಾಣುತ್ತಿಲ್ಲವಲ್ಲ? ಇನ್ನು ಸ್ವಲ್ಪ ಹೊತ್ತು ಇಲ್ಲೇ ನಿಂತರೆ ಈ ಓಡುವ ಕಸಗಳು ನನ್ನ ಮೇಲೂ ಹತ್ತಿ ಬಿಡುತ್ತವೆ ಅಂತ ಭಯವಾಯಿತು. ಇಂಗ್ಲಿಷ್ ನ ಅತ್ಯಂತ ಜನಪ್ರಿಯ ಸಿನಿಮಾದ ಭಯಂಕರ ದೃಶ್ಯ ಕೂಡ ನನ್ನ ತಲೆಯಲ್ಲಿ ಧುತ್ತೆಂದು ನುಸುಳಿತು! ಅದೇ ‘The Mummy’ ಅಂತ ಈಜಿಪ್ಷಿಯನ್ ಅಳಿದು ಹೋದ ಸಾಮ್ರಾಜ್ಯವನ್ನು ಮತ್ತು ನಿಧಿಯನ್ನು ಹುಡುಕಲು ಹೋದಾಗ ಅಲ್ಲಿನ ಮರುಭೂಮಿಯಲ್ಲಿ ವಿಚಿತ್ರ ಬಗೆಯ ಕಪ್ಪು ಬಣ್ಣದ ಹುಳುಗಳು ಬುಚು ಬುಚು ಅಂತ ಬಂದು ಮನುಷ್ಯನ ಅಥವಾ ಯಾವುದೇ ಪ್ರಾಣಿಯ ದೇಹದಲ್ಲಿ ನುಸುಳಿ ಬಿಡುತ್ತಿದ್ದವು! ಮತ್ತು ಆ ಪ್ರಾಣಿಯನ್ನು ಜೀವಂತವಾಗಿರುವಾಗಲೇ ತಿಂದು ಬಿಡುತ್ತಿದ್ದವು! ಈ ದೃಶ್ಯ ನೆನಪಾದ ಕೂಡಲೇ ಅಲ್ಲಿಂದ ಓಡಿ ಹೋಗಿ ನನ್ನ ಪ್ರಾಥಮಿಕ ಮತ್ತು ಸಾರ್ವಕಾಲಿಕ ಆಯುಧವಾದ ಕಸಬರಿಗೆಯನ್ನು (ಪೊರಕೆ) ತಂದು ‘ಓಡುವ ಕಸಗಳನ್ನೆಲ್ಲ’ ಮನೆಯ ಹೊರಗೆ ನೂಕಿದೆ. ಅಷ್ಟರಲ್ಲಾಗಲೇ ನನ್ನ ಬುದ್ಧಿವಂತ ಸುರಕ್ಷಿತವಾಗಿ ಮಕ್ಕಳು ಮಂಚವನ್ನು ಏರಿ ನಿಂತು, ಉಳಿದ ದೃಶ್ಯವನ್ನು ಸವಿಯುತ್ತಿದ್ದರು. ಕೋಣೆಯನ್ನು ಹಾಗು ಗೋಡೆಯನ್ನು ದಿಟ್ಟಿಸಿ ನೋಡಿದಾಗ ‘ಓಡುವ ಕಸಗಳೆಲ್ಲವೂ’ ಹುಳುಗಳೆಂದು ಖಾತ್ರಿಯಾಯಿತು. ಇನ್ನಷ್ಟು ಹತ್ತಿರ ಹೋಗಿ ನೋಡಿದಾಗ ಅವುಗಳೆಲ್ಲವೂ ವಿಷಕಾರಿ ಅಲ್ಲ ಅಂತ ಬಹುತೇಕ ಖಾತ್ರಿ ಪಡಿಸಿಕೊಂಡೆ; ಯಾಕೆಂದರೆ ಅವುಗಳ ಮುಂದಿನ ಭಾಗ ಅಥವಾ ಬಾಯಿ ಎನ್ನಬಹುದು, ಅದರಲ್ಲಿ ಯಾವುದೇ ಉದ್ದುದ್ದ ಮ್ಯಾಂಡಿಬಲ್ ಇರಲಿಲ್ಲ. ಸ್ವಲ್ಪ ಮುಟ್ಟಿದರೂ ಅಥವಾ ಅದಕ್ಕೆ ಏನಾದರು ಭಯ ಆದರೆ ಬಸವನ ಹುಳುವಿನಂತೆ ತನ್ನ ದೇಹದಲ್ಲಿ ಅಥವಾ ಅದರ ಮನೆಯಿರಬಹುದು ಅದರಲ್ಲಿ ಅಡಗಿ ಬಿಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಹೊರ ಬರುತ್ತಿತ್ತು, ಆಮೆಯ ತರಹ. ಇವುಗಳ ಈ ದೃಶ್ಯವೈಭವ ಕೆಲವು ದಿನಗಳವರೆಗೆ ಮುಂದುವರಿಯಿತು. ನಾನು ಅವುಗಳನ್ನು ಮನೆಯಿಂದ ಆಚೆ ಹಾಕಿದಷ್ಟೂ ಮತ್ತೆ ಕಾಣಿಸುತ್ತಿದ್ದವು! ಎಲ್ಲಿ ನೋಡಿದರೂ ಅವೇ ಕಾಣಿಸುತ್ತಿವೆಯಲ್ಲ ಎಂದು ಸ್ವಲ್ಪ ಭಯವಾಯಿತಾದರೂ! ಒಂದು ವಾರದ ನಂತರ ಇವುಗಳ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು.

©  ರಾಮಾಂಜಿನಯ್ಯ ವಿ.
©  ಅನುಪಮಾ ಕೆ. ಬೆಣಚಿನಮರ್ಡಿ

ಆದರೆ ಅವುಗಳ ಬಗ್ಗೆ ಕುತೂಹಲ ಅಂತೂ ಇದ್ದೇ ಇತ್ತು. ಅದಕ್ಕೆ ಸಂಬಂಧ ಪಟ್ಟ ವಿಷಯದ ಬಗ್ಗೆ ಓದಿದಾಗ ಅದು ಅಸಲಿಗೆ ಹುಳು ಅಲ್ಲವೇ ಅಲ್ಲ, ಅದು ಕೇವಲ ಲಾರ್ವ ಎಂದು ತಿಳಿದು ಇನ್ನೂ ಆಶ್ಚರ್ಯವಾಯಿತು. ಇದಕ್ಕೆ ಬ್ಯಾಗ್ ವರ್ಮ್ (Bag worm) ಅಂತ ಇಂಗ್ಲೀಷಿನಲ್ಲಿ ಕರೆಯುತ್ತಾರೆ. ಇದು ಒಂದು ಬಗೆಯ ಪತಂಗದ ಲಾರ್ವ. ಈ ಪತಂಗವು Psychidae ಎಂಬ ಕುಟುಂಬಕ್ಕೆ ಸೇರಲ್ಪಡುತ್ತದೆ. ಈ ಕುಟುಂಬಕ್ಕೆ ಸೇರಿದ ವಿವಿಧ ಬಗೆಯ ಬ್ಯಾಗ್ ವರ್ಮ್ ಗಳು, ಸುಮಾರು 1300 ಬಗೆಗಳಿರಬಹುದೆಂಬ ಅಂದಾಜಿದೆ. ಅವುಗಳು ವಾಸಿಸುವ ಭೌಗೋಳಿಕ ಪ್ರದೇಶದ ಅನುಸಾರವಾಗಿ ಸುತ್ತಮುತ್ತಲಿನ ಕಡ್ಡಿ ಕಸಗಳಿಂದಲೇ ತಮ್ಮ ಗೂಡನ್ನು ನಿರ್ಮಿಸಿಕೊಂಡು ಅದರಲ್ಲಿಯೇ ವಾಸಿಸುತ್ತವೆ. ಬ್ಯಾಗ್ ವರ್ಮ್ ಗಳು ಒಂದು ಬಗೆಯ ಅಂಟಂಟಾದ ರೇಷ್ಮೆ ಎಳೆಯನ್ನು ತಯಾರಿಸಿ ಅದರ ಮೂಲಕ ತಮ್ಮ ಮನೆಯನ್ನು ನಿರ್ಮಿಸಿಕೊಳ್ಳುತ್ತವೆ. ಮನೆಯಲ್ಲಿ ನಾನು ನೋಡಿದ ಬೆಟಾಲಿಯನ್ ಪ್ಲಾಸ್ಟರ್ ಬ್ಯಾಗ್ ವರ್ಮ್ ಗಳದ್ದು (Plaster bag worm). ಹೆಸರೇ ಸೂಚಿಸುವಂತೆ ಇವು ಮನೆಯನ್ನು ಕಟ್ಟಲು ಬಳಸಿದ ಸಿಮೆಂಟ್, ಮುಖ್ಯವಾಗಿ ಗೋಡೆಯ ಮೇಲಿನ ಪ್ಲಾಸ್ಟರ್ ಅನ್ನು ಬಳಸಿಕೊಂಡು ಗೂಡನ್ನು ಕಟ್ಟಿಕೊಳ್ಳುತ್ತವೆ. ಗೂಡಿನ ಆಕಾರ ಒಂದು ವಿಶಿಷ್ಟ ರೀತಿಯಲ್ಲಿದ್ದು, ಬಹುತೇಕ ಕಲ್ಲಂಗಡಿ ಹಣ್ಣಿನ ಬೀಜದಂತೆ ರೂಪಿಸಿಕೊಳ್ಳುತ್ತವೆ. ವಿಶೇಷ ಎಂದರೆ ಇವು ಎರಡು ಬದಿಗೂ ತೆರೆದುಕೊಂಡಿರುತ್ತವೆ. ಹೀಗಾಗಿ, ನಾನು ಅದರ ದಾರಿಗೆ ಅಡ್ಡವಾಗಿ ಕೆಣಕಿದರೆ ಅದು ಇನ್ನೊಂದು ತುದಿಯಿಂದ ವಿರುದ್ಧ ದಿಕ್ಕಿಗೆ ಚಲಿಸಲು ಆರಂಭಿಸುತ್ತಿತ್ತು! 

©  ಅನುಪಮಾ ಕೆ. ಬೆಣಚಿನಮರ್ಡಿ

ಗಾತ್ರದಲ್ಲಿ ಕೇವಲ 1 c.m to 1.4 c.m ಇರುವ ಈ ಬ್ಯಾಗ್ ವರ್ಮ್ ಗಳು ಥೇಟ್ ಕಸದಂತೆಯೇ ಕಾಣಿಸಿಕೊಳ್ಳುತ್ತವೆ.  ಇವುಗಳು ಛದ್ಮವೇಷತನದಲ್ಲಿ (Camouflage) ಎಷ್ಟು ನಿಪುಣವೆಂದರೆ ನಮ್ಮ ಮನೆಯಲ್ಲಿರುವ ಬ್ಯಾಗ್ ವರ್ಮ್ ಗಳು ಬೂದು ಮತ್ತು ಬಿಳಿ ಮಿಶ್ರಿತ ಬಣ್ಣದವಾಗಿದ್ದರೆ ಹಿತ್ತಲಿನಲ್ಲಿರುವ ಬ್ಯಾಗ್ ವರ್ಮಗಳ ಮನೆ (ಮನೆ ಅಥವಾ ಕೋಶ ಅಥವಾ ಗೂಡು) ಯ ಬಣ್ಣ ಕಂದು ಬಿಳಿ ಮಿಶ್ರಿತ! ಕಾರಣ ಒಳಗಿನ ಗೋಡೆಯ ಬಣ್ಣ ಬಿಳಿಯಾಗಿದ್ದರೆ, ಮನೆ ಹೊರಗಿನ ಬಣ್ಣ ಕಡುಕಂದು ಮತ್ತು ಹಿತ್ತಲಿನಲ್ಲಿರುವ ಮಣ್ಣು ಕೂಡ ಕೆಂಪು! ಇವುಗಳೆರಡರ ಫೋಟೋವನ್ನು ಮರೆಯದೆ ತೆಗೆದುಕೊಂಡಿದ್ದೇನೆ. ಇದರಲ್ಲಿ ತುಂಬಾ ಸ್ಪಷ್ಟವಾಗಿ ಛದ್ಮವೇಷದ ಜಾಣ್ಮೆಯನ್ನು ಕಾಣಬಹುದು. ಇವುಗಳ ಮುಖ್ಯ ಆಹಾರ ಜೇಡರ ಬಲೆಯ ಎಳೆಗಳು! ಅಲ್ಲದೆ ಅಳಿದುಳಿದ ಕೀಟಗಳ ಅವಶೇಷಗಳು, ಬಟ್ಟೆಯ ಮೇಲಿರುವ ಸೂಕ್ಷ್ಮ ನೂಲಿನಂತಹ ಎಳೆಗಳು. ಇಷ್ಟೆಲ್ಲಾ ಮಾಹಿತಿ ಸಂಗ್ರಹಿಸಿದ ಮೇಲೆ ನನಗೆ ಗೊತ್ತಾಯ್ತು ಯಾಕೆ ನಮ್ಮ ಮಹಡಿ ಮನೆ ಅಷ್ಟು ಗಲೀಜಾಗಿತ್ತು ಎಂದು!

©  ದೀಕ್ಷಿತ್ ಕುಮಾರ್ ಪಿ.

ಒಂದು ಸಲ ನಾನು ಎಲ್ಲೋ ಗಡಿಬಿಡಿಯಿಂದ ಬರುತ್ತಿರಬೇಕಾದರೆ ಗೇಟ್ ಹಾಕುವಾಗ ಏನೋ ಪಚಕ್ ಎಂದಂತಾಯಿತು! ಹುಡುಕಿ ನೋಡಿದರೆ ಎಲೆ, ಕಸ, ಕಡ್ಡಿಗಳು ಮಾತ್ರ ಕಾಣುತ್ತಿದ್ದವು.  ಯಾವುದೋ ಹುಳುವನ್ನು ಸಾಯಿಸಿರಬಹುದೆಂದು ನಾನು ಅಪರಾಧಿ ಭಾವದಿಂದ ಕೆಳಗೆ ಹುಡುಕುತ್ತಿದ್ದರೆ ಅಲ್ಲೇನೂ ಕಾಣಿಸಲಿಲ್ಲ ಆದರೆ ಎರಡು ಗೇಟಿನ ಬಾಗಿಲುಗಳ ಮಧ್ಯೆ ಕಡ್ಡಿಗಳನ್ನು ಉದ್ದುದ್ದ ಜೋಡಿಸಿಟ್ಟ ಕೊಳವೆಯಾಕಾರದ ವಿಚಿತ್ರ ವಸ್ತುವೊಂದು ಕಾಣಿಸಿತು. ಇದು ಕೆಳಗೆ ಬೀಳದೆ ಮಧ್ಯದಲ್ಲೇ ನೇತಾಡುತ್ತಿದ್ದರಿಂದ ನನಗೆ ಅದರೆಡೆ ಗಮನ ಹರಿಯಿತು. ಇನ್ನು ಅಲ್ಲೇ ಹೆಚ್ಚು ಹೊತ್ತು ದಿಟ್ಟಿಸುತ್ತಾ ನಿಂತರೆ ಬಾಡಿಗೆ ಮನೆಯ ಯಜಮಾನ್ತಿಯ ವಿಚಾರಣೆ ಆರಂಭವಾಗುತ್ತದೆ ಎಂದು ಹೆದರಿ ಆ ಕಡ್ಡಿಯ ವಸ್ತುವನ್ನು ನಮ್ಮನೆಯ ಬಾಲ್ಕನಿಗೆ ಒಯ್ದು ಅಲ್ಲಿ ನಿಧಾನವಾಗಿ ಪರಿಶೀಲಿಸಿದರಾಯಿತೆಂದು ಅದನ್ನು ಹೂಕುಂಡದ ಬಳಿಯಿಟ್ಟು ಒಳಗೆ ಹೋದವಳು ಮತ್ತೆ ಅದರ ಬಗ್ಗೆ ನೆನಪಾಗಿದ್ದು ಕೆಲವು ಘಂಟೆಗಳ ನಂತರವೇ! ಹೊರಗೆ ಬಂದು ನೋಡಿದರೆ ಅದರ ಪತ್ತೆಯೇ ಇಲ್ಲ, ಸ್ವಲ್ಪ ಹುಡುಕಾಡಿ ನೋಡಿದಾಗ ಗೋಡೆಯ ಸಂದಿನಲ್ಲಿ ಕಡ್ಡಿಗಳ ಗುಂಪು ಚಲಿಸುತ್ತಿತ್ತು! ಈ ಘಟನೆಯನ್ನೆಲ್ಲ ನೆನಪಿಸಿಕೊಂಡು ಏಕೆ ಹೇಳುತ್ತಿದ್ದೇನೆಂದರೆ ನಾನವತ್ತು ನೋಡಿದ ಕಡ್ಡಿಗಳ ಗುಂಪು ಕೂಡ ಬ್ಯಾಗ್ ವರ್ಮ್ ನ ಒಂದು ಬಗೆಯೇ. ಇದು ಗೂಡಿನ ಹೊರಭಾಗದಲ್ಲಿ ಕಡ್ಡಿಗಳನ್ನು ಸಮಾನಾಂತರವಾಗಿ ಜೋಡಿಸಿ ಒಳಗಡೆ ಸುರಕ್ಷಿತವಾಗಿ ಇರುತ್ತದೆ. ಇದರ ಗೂಡಿನ ಗಾತ್ರ ಸುಮಾರು 5cm ವರೆಗೆ ಇರುತ್ತದೆ.  ವಿಶ್ರಮಿಸುತ್ತಿರಬೇಕಾದರೆ ಗೂಡಿನ ಬಾಗಿಲನ್ನು ಮುಚ್ಚಿಕೊಳ್ಳುತ್ತದೆ. ಇವುಗಳ ಆಹಾರ ಚಿಟ್ಟೆಯ ಕ್ಯಾಟರ್ಪಿಲ್ಲರ್, ಎಲೆ ಹಾಗೂ ಗಿಡದ ತುದಿ. ಇವು ಕೂಡ ಕೇವಲ ಈ ಅವಸ್ಥೆಯಲ್ಲಿ ಮಾತ್ರ ತಿನ್ನುತ್ತಿದ್ದು, ಕೋಶಾವಸ್ಥೆ ತಲುಪಿದ ನಂತರ ಏನನ್ನೂ ತಿನ್ನುವುದಿಲ್ಲ. ಗಂಡು ಬ್ಯಾಗ್ ವರ್ಮ್ ಗಳು ರೆಕ್ಕೆ ಮೂಡಿಸಿಕೊಂಡು ಪತಂಗವಾಗಿ ಹೊರಹೊಮ್ಮಿದರೆ, ಹೆಣ್ಣು ಬ್ಯಾಗ್ ವರ್ಮ್ ಗಳು ತಮ್ಮ ಇಡೀ ಜೀವನವನ್ನು ಅವುಗಳ ಗೂಡಲ್ಲೆ ಕಳೆಯುತ್ತವೆ. ಅವು ಬೆಳೆದಂತೆ ಗೂಡಿನ ಗಾತ್ರವೂ ಬೆಳೆಯುತ್ತದೆ. ಅದೇ ಗೂಡಿನಲ್ಲಿ ಹೆಣ್ಣು ಗಂಡಿನ ಸಮಾಗಮವಾದ ನಂತರ ಹೆಣ್ಣು ಬ್ಯಾಗ್ ವರ್ಮ್ ಮೊಟ್ಟೆಗಳನ್ನಿಟ್ಟು ಅಸು ನೀಗುತ್ತದೆ. ಮೊಟ್ಟೆಗಳು ಲಾರ್ವಾಗಳಾಗಿ ತಾಯಿಯ ಕೋಶದಲ್ಲೇ ಸ್ವಲ್ಪ ಮಟ್ಟಿಗೆ ಬೆಳವಣಿಗೆ ಹೊಂದಿ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡಿಕೊಳ್ಳುತ್ತವೆ. ಕೆಲವೊಂದು ಬಾರಿ ಹೀಗೆ ಹರಡಿಕೊಳ್ಳಲು ‘ಬಲ್ಲೂನಿಂಗ (Ballooning)’ ಮಾಡುತ್ತವೆ. ಅಂದರೆ ತಮ್ಮ ನೂಲಿನ ಎಳೆಯ ಮುಖಾಂತರ ಗಾಳಿಯಲ್ಲಿ ತೇಲಿಹೋಗಿ ಮತ್ತೊಂದು ಆವಾಸ ಸ್ಥಾನವನ್ನು ಅರಸುತ್ತ ಸಾಗುತ್ತವೆ. ಪುಷ್ಕಳವಾದ ಆಹಾರ ದೊರೆಯುವ ಆವಾಸ ಸ್ಥಾನ ಸಿಕ್ಕ ನಂತರ ತಮ್ಮ ಗೂಡನ್ನು ಸುತ್ತಮುತ್ತಲಿನ ಕಸ ಕಡ್ಡಿಗಳಿಂದ ರಚಿಸಿಕೊಳ್ಳುತ್ತವೆ ಮತ್ತು ಇವುಗಳ ಜೀವನ ಚಕ್ರ ಮುಂದುವರಿಯುತ್ತದೆ.

©  ನವೀನ್ ಐಯ್ಯರ್

ಇವೆರಡು ಬ್ಯಾಗ್ ವರ್ಮ್ ಗಳು ನೋಡಲು ಸ್ವಲ್ಪ ವಿಶಿಷ್ಟವಾಗಿವೆ. ಇನ್ನೊಂದು ಬ್ಯಾಗ್ ವರ್ಮ್ ತನ್ನ ಗೂಡಿನ ಅಂದದ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಸುತ್ತಮುತ್ತಲಿನ ಕಸ, ಮರಳಿನ ಕಣಗಳು, ಕೂದಲುಗಳು, ಕೆಲ ಬಾರಿ ಪ್ಲಾಸ್ಟಿಕ್ ತುಂಡುಗಳು ಹೀಗೆ ಏನು ಸಿಗುತ್ತವೆಯೋ ಅದನ್ನು ಉಪಯೋಗಿಸಿಕೊಂಡು ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಫೋಟೋದಲ್ಲಿ ನೋಡಬಹುದು, ಇದರಲ್ಲಿ ಏನಿಲ್ಲ ಅಂತ ಕೇಳುವಷ್ಟು ಸಹಜವಾದ ಕಸಗಳಿವೆ, ಅದೂ ಕ್ರಮಬದ್ಧವಾದ ಜೋಡಣೆಯಿಲ್ಲದೆ ಹೇಗೇಗೋ ತುರುಕಿದಂತೆ! ಕೋಶದ ಎತ್ತರ 1.5-2.5cm ವರೆಗೆ ಇರುತ್ತದೆ.  ಇಂತಹ ಹಲವಾರು ಕೋಶಗಳು ನಮ್ಮ ಕಟ್ಟಡದ ಹೊರ ಗೋಡೆಯ ಮೇಲೆ ಕಂಡಿವೆ. ಇವು ಹಲವು ವಾರಗಳಿಂದ ಇದ್ದಲ್ಲೇ ಇರುವುದರಿಂದ ಬಹುಶಃ ಇವು ತ್ಯಜಿಸಿದ ಅಥವಾ ಕೋಶಾವಸ್ಥೆ ಪೂರ್ಣಗೊಂಡ ಗೂಡುಗಳೇ ಆಗಿವೆ ಎಂಬ ನಂಬಿಕೆ ನನ್ನದು. ಎಷ್ಟೊಂದು ಸುಂದರವಾದ ಪತಂಗಗಳು ಹೊರ ಬಂದಿರಬೇಕಲ್ಲವೇ ಎಂದು ಯೋಚಿಸಿ ಆನಂದಿಸುತ್ತೇನೆ. ಈ ಪತಂಗಗಳ ಬೆನ್ನು ಹತ್ತಿದರೆ ಅದರದೇ ಒಂದು ಪ್ರಬಂಧವಾಗುತ್ತದೆ, ಆದರೆ ಸದ್ಯಕ್ಕೆ ನನಗೆ ಈ ಬ್ಯಾಗ್ ವರ್ಮ್ ಗಳ ಛದ್ಮವೇಷದ ಜಾಣ್ಮೆ ಅಷ್ಟೇ ಅಲ್ಲದೆ ಅವುಗಳ ಸಾಮರ್ಥ್ಯದ ಬಗ್ಗೆಯೂ ಹೆಮ್ಮೆ ಎನಿಸುತ್ತದೆ. ಐದು ಕೆಜಿ ಅಕ್ಕಿ ತರಲು ಹೆಣಗಾಡುವ ನಾವು ಬ್ಯಾಗ್ ವರ್ಮ್ಮರೆಮಾಚು ನಿಂದ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ, ತನಗಿಂತ ಐದು ಪಟ್ಟು ಹೆಚ್ಚಿನ ತೂಕದ ಗೂಡನ್ನು ಎಲ್ಲೆಂದರಲ್ಲಿ ಲೀಲಾಜಾಲವಾಗಿ ಎಳೆದುಕೊಂಡು ಓಡಾಡುತ್ತವೆ. ನಾನು ನನ್ನ ಕಣ್ಣಿಂದ ನೋಡಿರಲಾರದ ಇನ್ನೂ ಹಲವು ಬಗೆಯ ಬ್ಯಾಗ್ ವರ್ಮ್ ಗಳಲ್ಲಿ ಒಂದು ಬ್ಯಾಗ್ ವರ್ಮ್ ತನ್ನ ಗೂಡನ್ನು ಚೀನಾ ದೇಶದಲ್ಲಿರುವ ಪಗೋಡಾಗಳಂತೆ ಕಾಣುವ ಕಟ್ಟಡದ ಹಾಗೆ ರಚಿಸಿಕೊಳ್ಳುತ್ತದಂತೆ! ಇನ್ನೊಂದು ಸುರುಳಿಯಾಕಾರದಲ್ಲಿ ಚಿಕ್ಕ ಚಿಕ್ಕ ಕಟ್ಟಿಗೆ ಚೂರುಗಳನ್ನು ತುಂಬಾ ಕ್ರಮಬದ್ಧವಾಗಿ ಪಿರಮಿಡ್ ಆಕಾರದಲ್ಲಿ ರಚಿಸಿಕೊಳ್ಳುತ್ತದಂತೆ, ಎತ್ತರ ಸರಿಸುಮಾರು 2cm ವರೆಗೆ ಇರುತ್ತದೆಯಂತೆ! ಇವೆರಡನ್ನು ಮಾತ್ರ ನಾನು ನೋಡಲೇಬೇಕೆಂದು ತೀರ್ಮಾನಿಸಿರುವೆ. ಇವುಗಳಲ್ಲದೆ ಇನ್ನೂ ಗೊತ್ತಿರದ ಅದೆಷ್ಟು ಬಗೆಯ ಸುಂದರವಾದ ಗೂಡು ಕಟ್ಟುವ ಬ್ಯಾಗ್ ವರ್ಮ್ ಗಳಿವೆಯೋ?

ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
             ಬೆಂಗಳೂರು ಜಿಲ್ಲೆ
.

Spread the love
error: Content is protected.