ಬಾತುಕೋಳಿಯ ಮಾತು ಕೇಳಿ..
©VICKI JAURON, BABYLON AND BEYOND PHOTOGRAPHY_GETTY IMAGES PLUS
ಎಂದೂ ಕಂಡಿರದ, ಕೇಳಿರದ, ಸವಿಯದ, ತರು-ಲತೆಗಳಿಂದ ಸಿಂಗರಿಸಿಕೊಂಡು ತಲೆಯ ಮೇಲೆ ಮಂಜಿನ ಕಿರೀಟವನ್ನು ಧರಿಸಿದ್ದ ಪರ್ವತ ಶ್ರೇಣಿಗಳು ಕಣ್ಣ ಮುಂದೆ ಇದ್ದವು. ಮೊದಲ ನೋಟದಲ್ಲೇ ಮನಸೋತಾಗಿತ್ತು. ಜೊತೆಗೆ ನಡೆದು ನಡೆದು ಕಾಲುಗಳೂ ಸಹ ಸೋತಿದ್ದವು. ಉತ್ತರಖಂಡ ರಾಜ್ಯದ ಭಾಗಕ್ಕೆ ಪ್ರವಾಸ ಬಂದಿದ್ದ ನಾವು, ಅಂದು ಚಂದ್ರಶಿಲಾ ಪರ್ವತದಲ್ಲಿದ್ದ ‘ತುಂಗ್ ನಾಥ್’ ಅರ್ಥಾತ್ ಪರ್ವತಗಳ ದೇವನಾದ ಈಶ್ವರನ ಸನ್ನಿಧಾನಕ್ಕೆ ಚಾರಣ ಹೊರಟಿದ್ದೆವು. ಸುತ್ತಲಿನ ಪರ್ವತಗಳ ಸೌಂದರ್ಯ ಸವಿಯುತ್ತಾ ನಡೆಯುವಾಗ ಸ್ವಲ್ಪ ಸುಸ್ತಾಯಿತು. ಏಕೆ ಸುಸ್ತಾಯ್ತು ಎಂದು ಯೋಚಿಸುವಾಗಲೇ ತಿಳಿದದ್ದು ಅಂದಿನ ಉಪಹಾರ ಸೇವಿಸಲೇ ಇಲ್ಲ ಎಂದು. ಹಾಗೆ ಮುಂದೆ ನಡೆದಾಗ ಜನಸಂದಣಿ ಮತ್ತು ಹೆಂಚಿನ ಛಾವಣಿಯ, ಮನೆಗಳ ರೂಪದಲ್ಲಿದ್ದ ಅಂಗಡಿ-ಹೋಟೆಲುಗಳು ಕಂಡವು. ಓಹ್… ಹಾಗಾದರೆ ತಲುಪಬೇಕಿದ್ದ ಜಾಗ ಬಂದಾಯ್ತು ಎಂದುಕೊಂಡು ಒಂದು ಹೋಟೆಲ್ ಗೆ ಹೋಗಿ ತಿನ್ನಲು ಶುರುಮಾಡಿದೆವು. ಬಹುಶಃ ಇಲ್ಲೆ ಎಲ್ಲೊ ದೇವಸ್ಥಾನವಿರಬೇಕು, ಮುಗಿಸಿ ಮುಂದೆ ಹೋಗಬಹುದು ಎಂದುಕೊಂಡೆ. ಆದರೆ ತಿಂಡಿ ಮುಗಿಸಿದ ಮೇಲೆಯೇ ತಿಳಿದದ್ದು, ನಾವು ತಲುಪಬೇಕಿದ್ದ ತುಂಗನಾಥನ ದೇವಸ್ಥಾನಕ್ಕೆ ಹೊರಡುವ ಚಾರಣದ ಹಾದಿಯ ಶುರುವಿನಲ್ಲಿದ್ದೇವೆಂದು. ಆದರೂ ಪರವಾಗಿಲ್ಲ ತಿಂಡಿ ತಿಂದು ಶಕ್ತಿ ಬಂದಿದೆ ಜೊತೆಗೆ ಎಂತೆಂಥಾ ಬೆಟ್ಟಗಳನ್ನೆಲ್ಲಾ ಹತ್ತಿದ್ದೇವೆ ಎಂದುಕೊಂಡು ಚಾರಣ ಶುರುಮಾಡಿದೆವು. ಅದೇಕೋ ಗೊತ್ತಿಲ್ಲ ಆ ಬೆಟ್ಟಗಳಲ್ಲಿ ಸ್ವಲ್ಪ ದೂರ ನಡೆದರೂ ಹೆಚ್ಚು ಸುಸ್ತಾಗುತ್ತದೆ. ಹಿಮಾಲಯ ಪರ್ವತ ಶ್ರೇಣಿಗಳ ಹಾಗೆ ಸಮುದ್ರ ಮಟ್ಟದಿಂದ ಎತ್ತರಕ್ಕಿವೆಯಲ್ಲಾ ಅದಕ್ಕೇ ಇರಬೇಕು ಎಂದುಕೊಳ್ಳುತ್ತಾ ಚಾರಣ ಮುಂದುವರೆಸಲಾಯಿತು.
ಚಾರಣಕ್ಕೆ ಕಲ್ಲಿನ ಹಾದಿಯಿದ್ದು ಅದು ನಮ್ಮ ಕರ್ನಾಟಕದ ಘಟ್ಟದ ರಸ್ತೆಗಳಂತೆ ಅಲ್ಲಲ್ಲೇ ತಿರುಗಿ ತಿರುಗಿ ಹೋಗಿದ್ದವು. ನಾವೇಕೆ ಹೀಗೆ ತಿರುಗಿ ತಿರುಗಿ ಹೋಗಬೇಕು, ‘ದೂರ’ ಜಾಸ್ತಿ ಇದೆ, ನಾವು ‘ಡಿಸ್ಪ್ಲೇಸ್ಮೆಂಟ್’ದಾರಿಯಲ್ಲಿ ನಡೆಯೋಣವೆಂದು, ನಾನು ಮತ್ತು ಪಿಳ್ಳೆ (ಚಡ್ಡಿ ದೋಸ್ತನ ಅಡ್ಡ ಹೆಸರು) ನಿರ್ಧರಿಸಿಕೊಂಡೆವು. ಹಾಗಾಗಿ ದಾರಿ ಇಲ್ಲದಿದ್ದರೂ ಬೆಟ್ಟವನ್ನು ನೇರಕ್ಕೆ ಹತ್ತಲು ಶುರು ಮಾಡಿದೆವು. ಸ್ವಲ್ಪ ಸಮಯದ ನಂತರ ದಾರಿಯೇ ಕಾಣಲಿಲ್ಲ. ಸ್ವಲ್ಪ ಅನುಮಾನ ಶುರುವಾದರೂ ಮುಂದೆ ನಡೆದ ಮೇಲೆ ದಾರಿ ಕಂಡಿತು. ಓಹ್ ಹಾಗಾದರೆ ನಾವು ಸರಿಯಾದ ದಾರಿಯಲ್ಲೇ ಇದ್ದೇವೆ ಎಂದುಕೊಂಡು ಮುಂದುವರೆದೆವು. ಇರುವ ದಾರಿ ಬಿಟ್ಟು ಹೀಗೆ ನಾವೇ ಅಂದಾಜಿನ ದಾರಿ ಮಾಡಿಕೊಂಡು ಹೋಗುವುದರಲ್ಲಿ ಏನೋ ಮಜವಿದೆ. ಈ ನಮ್ಮ ತಲೆಯೊಳಗಿನ ಮಾತು ಜುಪಿಟರ್ (ಅಕ್ಕನ ಅಡ್ಡ ಹೆಸರು) ಗೆ ಕೂಡಾ ಕೇಳಿಸಿದೆ ಎನಿಸುತ್ತದೆ. ‘ನಾನೂ ನಿಮ್ ಜೊತೆ ಬರ್ತೀನಿ’ ಎಂದಳು. ನಾವೂ ಸಹ ಹೆಚ್ಚು ಯೋಚಿಸಲಿಲ್ಲ, ನಿನಗಾಗುವುದಾದರೆ ಬಾ ಎಂದೆವು. ಸಾಹಸ ಮಾಡಲು ಇಚ್ಛಿಸುವವರಿಗೆ ನಾವ್ಹೇಗೆ ಬೇಡ ಎನ್ನುವುದು!
ಹೀಗೆ ನಮ್ಮ ಸಾಹಸದ ಅಡ್ಡದಾರಿ ಶುರುವಾಯಿತು. ನಮ್ಮದು ಸುಲಭವಾದ ತರ್ಕ, ಹೇಗಿದ್ದರೂ ಬೆಟ್ಟದ ತುದಿಗೆ ತಲುಪಬೇಕು. ಯಾವ ದಾರಿಯಲ್ಲಿ ಹೋದರೇನು? ಎಂದುಕೊಂಡು ಅಲ್ಲಿ ಬೆಳೆದಿದ್ದ ಗಿಡಗಳು, ಅವುಗಳ ಮೇಲಿನ ಮಂಜನ್ನು ನೋಡಿ ಆಸ್ವಾದಿಸುತ್ತಾ ಮುಂದೆ ನಡೆದೆವು. ಸ್ವಲ್ಪ ದೂರದಲ್ಲೇ ಬೆಟ್ಟದ ತುದಿ ತಲುಪುವುದರಲ್ಲಿದ್ದೆವು. ಅರೇ ಇಷ್ಟು ಬೇಗ ಬಂದುಬಿಟ್ಟೆವಾ, ಮೇಲೆ ಹೋಗಿ ಒಟ್ಟಿಗೆ ಸುಧಾರಿಸಿಕೊಳ್ಳೋಣ ಎಂದು ಸ್ವಲ್ಪ ವೇಗ ಹೆಚ್ಚಿಸಿದೆವು. ತಲೆ ಕೆಳಗಿರಿಸಿ ಹತ್ತುತ್ತಿದ್ದ ನಾವು ತುದಿ ಸಿಕ್ಕಮೇಲೆ ತಲೆ ಎತ್ತಿದರೆ… ಇನ್ನೊಂದು ಸಣ್ಣ ಬೆಟ್ಟ ಮುಂದೆ ಗೋಚರಿಸುತ್ತಿದೆ. ಅಯ್ಯೋ ಆದರಾಯಿತು ಇದೊಂದು ಬೆಟ್ಟ ಅಲ್ಲವೇ ಸ್ವಲ್ಪ ಸುಧಾರಿಸಿಕೊಂಡು ಮುಂದೆ ಹೋಗೋಣವೆಂದು ನಿರ್ಧರಿಸಿ ಕುಳಿತೆವು.
ಅಲ್ಲಿಂದ ಕಾಣುತ್ತಿದ್ದ ಪರ್ವತ ಶ್ರೇಣಿಗಳು ನಯನ ಮನೋಹರಕ್ಕೆ ಮೀರಿದ್ದವಾಗಿದ್ದವು. ನಾವು ನಡೆದು ಬಂದ ದಾರಿ ಬಿದ್ದ ಸಣ್ಣ ದಾರದ ಎಳೆಯಂತೆ ಕಾಣುತ್ತಿತ್ತು. ಸರಿ ಗುರಿ ತಲುಪುವ ಸಮಯ ಎಂದುಕೊಂಡು ಮುಂದೆ ಹೆಜ್ಜೆ ಹಾಕಿದೆವು. ಒಂದೊಂದು ಹೆಜ್ಜೆ ಇಟ್ಟಂತ್ತೆಲ್ಲಾ ಏನೋ ಕಾಣದ ಆಯಾಸ ಆವರಿಸುತ್ತಿತ್ತು. ಆದರೂ ಪರವಾಗಿಲ್ಲ ಹತ್ತಿಬಿಡೋಣ ಎಂದು ದೃಢಸಂಕಲ್ಪದಿಂದ ಒಂದಾದ ಮೇಲೆ ಒಂದು ಹೆಜ್ಜೆಗಳನ್ನಿಡುತ್ತಾ ಮುನ್ನಡೆದೆವು. ಇನ್ನೇನು ಆ ಬೆಟ್ಟದ ತುದಿ ನಮ್ಮ ಕೈಗೆಟುಕುತ್ತಿದೆ ಎನ್ನುವಷ್ಟರಲ್ಲಿ ಬೆಳಿಗ್ಗೆ ತಿಂದ ತಿಂಡಿ ಏಕೋ ಹೊಟ್ಟೆಯ ಪಚನಕ್ರಿಯೆಯಲ್ಲಿ ಸರಿಯಾಗಿ ಭಾಗಿಯಾಗದ ಮುನ್ಸೂಚನೆ ನೀಡಿತ್ತು. ಆ ಆಯಾಸದ ಚಾರಣದಲ್ಲಿ ಎರಡು ಮನಸ್ಸಿಗೆ ಜಾಗವಿರಲಿಲ್ಲ. ಆದ್ದರಿಂದ ಅಲ್ಲೇ ದೂರದಲ್ಲಿ ಮುಖ್ಯ ಕೆಲಸ ಮುಗಿಸಿ ಚಾರಣ ಮುಂದುವರೆಸಲಾಯಿತು. ಅಷ್ಟರಲ್ಲಿ ಎಷ್ಟು ಸುಸ್ತಾಗಿತ್ತೆಂದರೆ ನಮ್ಮ ಕಾಲನ್ನು ನಾವೇ ಕೈಯಾರೆ ಎತ್ತಿ ಇಡಬೇಕಿತ್ತು. ಆಗಲೂ ಸಹ ಬಿಡದೆ ಆ ತುದಿಯನ್ನೂ ತಲುಪಿ ತಲೆ ಎತ್ತಲು… ಇನ್ನೊಂದು ತುದಿ ಮಾಯಾಲೋಕದಿಂದ ನಮಗಾಗೆ ಬಂದು ಬಿದ್ದಿತ್ತು. ಬಹುಶಃ ನಾವೂ ಎಲ್ಲರೂ ಇದ್ದ ದಾರಿಯಲ್ಲೇ ಬರಬೇಕಿತ್ತೇನೋ ಎಂದು ಇನ್ನೇನು ಅಂದುಕೊಳ್ಳುವಷ್ಟರಲ್ಲಿ ನಮ್ಮ ಸಹ ಚಾರಣಿಗರ ಧ್ವನಿ ಇಲ್ಲೇ ಎಲ್ಲೋ ಕೇಳಿಸಿತು. ಹಾಗಾದರೆ ಪರವಾಗಿಲ್ಲ ಸರಿ ದಾರಿಯಲ್ಲಿದ್ದೇವೆ ಎಂದುಕೊಂಡೆವು. ಇದೊಂದೇ ತುದಿ ಹತ್ತಿದರೆ ಗುರಿ ಮುಟ್ಟುತ್ತೇವೆಂದು, ಮೂರನೇ ತುದಿ ತಲುಪುವ ಆತುರದಲ್ಲಿ ಮುನ್ನಡೆದೆವು. ಕೇವಲ ಕೆಲವೇ ಮೀಟರುಗಳ ಎತ್ತರದಲ್ಲಿದ್ದ ತುದಿಯನ್ನು ಅರ್ಧ ಘಂಟೆ ಹತ್ತಿ ಹತ್ತಿರ ಬಂದಿದ್ದೆವು. ತಲೆ ಎತ್ತಲು ಈ ಬಾರಿ ಇನ್ನೊಂದು ತುದಿಯ ಬದಲಿಗೆ ಯಾರೋ ಈ ಮೊದಲೇ ಬಂದು ನೆಟ್ಟಿದ್ದ ವಿಜಯ ಪತಾಕೆ ಕಣ್ಣಿಗೆ ಬಿತ್ತು. ನಮ್ಮ ಖುಷಿಗೆ ಪಾರವೇ ಇರಲಿಲ್ಲ. ನಾವೂ ಪತಾಕೆಯನ್ನು ಸ್ಪರ್ಶಿಸಿ ನಮ್ಮ ವಿಜಯೋತ್ಸವವನ್ನು ಮನಸ್ಸಿನಲ್ಲೇ ಆಚರಿಕೊಳ್ಳುತ್ತಿದ್ದೆವು. ನಮ್ಮ ಇತರ ಸ್ನೇಹಿತರ ಸುಳಿವೂ ಕಾಣಲಿಲ್ಲ. ನಾವೇ ಮೊದಲು ತಲುಪಿದ್ದೇವೆಂಬ ಒಣಜಂಭ ಮೈಯಲ್ಲಿ ಓಡಾಡುತ್ತಿರುವಾಗ ದೂರದಿಂದ ಯಾರೋ ಕಿರುಚುವ ಧ್ವನಿ ಮೆಲ್ಲಗೆ ಕೇಳಿಸಿದಂತಾಗಿ ಆ ದಿಕ್ಕಿಗೆ ತಿರುಗಿದೆವು. ನೋಡಿದರೆ ಯಾರೋ ದೂರದಿಂದ ನಮ್ಮ ಕಡೆಗೆ ಕೈಯಾಡಿಸಿ ಏನೋ ಹೇಳುವ ಹಾಗೆ ಕಂಡಿತು. ಎದುರಿಗಿದ್ದ ಪಾತಾಳ ದಾಟಿ ಇದ್ದ ಆ ಬೆಟ್ಟದಿಂದ ನಮ್ಮನ್ಯಾರು ಮಾತನಾಡಿಸುತ್ತಾರೆ ಎಂದು ನಮ್ಮ ಹೆಗಿಲಿಗೇರಿಸಿದ್ದ ಬೈನಾಕುಲರಿನಿಂದ ನೋಡುತ್ತೇವೆ. ಅವರು ನಮ್ಮ ಸ್ನೇಹಿತರೇ! ಅಷ್ಟರಲ್ಲಿ ನಾವು ದಾರಿ ತಪ್ಪಿದ್ದೇವೆಂಬ ಅರಿವು ನಮ್ಮ ನಮ್ಮಲ್ಲೇ ಯಾರೂ ಹೇಳದಂತೆ ಅರಿವಾಗಿಬಿಟ್ಟಿತ್ತು. ಅವರಿದ್ದ ಆ ದೇವಸ್ಥಾನದ ಬೆಟ್ಟವನ್ನು ಹತ್ತಲು ಈ ಬೆಟ್ಟ ಇಳಿದು ನಡೆದು ಇನ್ನೊಂದನ್ನು ಹತ್ತಬೇಕಿತ್ತು ಎಂದು ಅರಿವಾಗುತ್ತಲೇ, ತೆರೆದ ಕಣ್ಣು ತೆರೆದ ಹಾಗೆ, ತೆರೆದ ಬಾಯಿ ತೆರೆದ ಹಾಗೆ ಇದ್ದದ್ದು ನೆನಪಾಗಿ ವಾಸ್ತವಕ್ಕೆ ಬಂದೆ. ಹೇಗಿದ್ದರೂ ದಾರಿ ತಪ್ಪಿಯಾಯ್ತು, ಮುಂದಿನ ದಾರಿಯೂ ತಿಳಿದಿದೆ. ಇಲ್ಲೇ ಸ್ವಲ್ಪ ಸಮಯ ವಿಶ್ರಮಿಸಿ ಹೋಗೋಣವೆಂದು ನಿರ್ಧರಿಸಿ ಅಲ್ಲೆ ಸ್ವಲ್ಪ ಕಾಲ ಕುಳಿತೆವು. ಸುಧಾರಿಸಿಕೊಂಡು ನಮ್ಮ ದಾರಿ ತಪ್ಪಿದ ಬೆಟ್ಟ ಇಳಿದು, ದೇವಸ್ಥಾನದ ಬೆಟ್ಟ ಹತ್ತಿ ಮಹದೇವನ ದರ್ಶನ ಮಾಡಿ ಕುಳಿತುಕೊಳ್ಳೋಣವೆಂದು ಬಂದರೆ, ಬನ್ನಿ ಚಂದ್ರಶೀಲಾ ಪರ್ವತ ಹತ್ತೋಣ ಎನ್ನುವುದೇ? ಅರೇ… ಮತ್ತೆ ಈ ದೇವಸ್ಥಾನ ಏನು? ಎಂದರೆ, ಇದು ಬರೀ ದೇವಸ್ಥಾನ, ಪರ್ವತ ಇನ್ನೂ ಸ್ವಲ್ಪ ಹತ್ತಬೇಕೆಂದರು. ಅಲ್ಲಿಗೇ ಹಣ್ಣುಗಾಯಿ ನೀರುಗಾಯಿ ಆಗಿದ್ದ ನಮಗೆ ನಮ್ಮ ದೇಹವನ್ನು ಎಳೆದುಕೊಂಡು ಹೋಗುವುದು ಹೇಗೆ ಎನ್ನಿಸಿತು. ಆದರೂ ಬಿಡದೆ ಹತ್ತಿಬಿಟ್ಟೆವು, ಹತ್ತುವ ದಾರಿಯಲ್ಲಿ ಸಿಕ್ಕ ಮಂಜುಗಡ್ಡೆಯನ್ನು ಮುರಿದುಕೊಂಡು ಹೋಗಿ ಪರ್ವತದ ಮೇಲೆ ನಾವೇ ತಂದಿದ್ದ ವಿಶೇಷ ಮೇಣ ಬಳಸಿ ಸಣ್ಣ ಪಾತ್ರೆಯಲ್ಲಿ ತಂದಿದ್ದ ಮಂಜುಗಡ್ಡೆಯನ್ನು ಕರಗಿಸಿ ಮಾಡಿದ ಚಹಾ… ಸುತ್ತಲೂ ಕಾಣುತ್ತಿದ್ದ ಹಿಮಾಲಯ ಪರ್ವತದ ಸಾಲು ಬಣ್ಣಿಸಲು ಅಸಾಧ್ಯ, ನೀವೇ ಅನುಭವಿಸಬೇಕಷ್ಟೇ…!
ದು ನಾವು ತಪ್ಪಿದ ದಾರಿ ನಮ್ಮನ್ನು ಹೊಸ ಪ್ರಪಂಚಕ್ಕೇ ಕರೆದುಕೊಂಡು ಹೋಗಿತ್ತು. ಆ ಅನುಭವವನ್ನು ಈಗಲೂ ನೆನೆಯುತ್ತೇವೆ. ಆದರೆ ಹಿರಿಯರು ತೋರಿದ ದಾರಿಯಲ್ಲಿ ನಡೆಯದಿದ್ದರೆ ಕಷ್ಟಕ್ಕೂ ಈಡಾಗಬೇಕಾಗುತ್ತದೆ. ಬಾತುಕೋಳಿಯ ಮರಿಗಳ ಹಾಗೆ. ಅಮ್ಮ ಬಾತುಕೋಳಿಯ ಜಾಡು ಹಿಡಿದು ಶಿಸ್ತಿನ ಸಿಪಾಯಿಯಂತೆ ಸಾಲಾಗಿ ಮರಿ ಬಾತುಗಳು ಸಾಗುವುದನ್ನು ಎಲ್ಲಾದರೂ ಗಮನಿಸಿರುವಿರಾ? ಈ ಚಿತ್ರದಲ್ಲಿ ಕಾಣುವ ಹಾಗೆ, ಅಮ್ಮ ಬಾತುವಿನ ಹಿಂದೆ ಹೀಗೆ ಸಾಗುವುದರಿಂದ ಮರಿಗಳು ಲೀಲಾಜಾಲವಾಗಿ ಈಜುತ್ತಾ ಶಕ್ತಿಯನ್ನು ಉಳಿಸಬಹುದು ಎನ್ನುತ್ತಿದೆ ಈ ಸಂಶೋಧನೆ. ಹೌದು, ಮರಿಗಳು ಹೀಗೆ ಅಮ್ಮನ ಹಿಂದೆ ಸಾಲಾಗಿ ಹೋಗುವುದರಿಂದ ಈಜಲು ತಾವು ಬಳಸುವ ಶಕ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಉಳಿಸಬಹುದೆನ್ನುತ್ತಾರೆ ವಿಜ್ಞಾನಿ ಯುವಾನ್. ಈ ಹಿಂದೆಯೇ ಬಾತುಗಳು ಈಜುವಾಗ ಎಷ್ಟು ಶಕ್ತಿಯನ್ನು ಬಳಸುತ್ತವೆ ಎಂಬುದನ್ನು ಲೆಕ್ಕಿಸಲಾಗಿದೆ. ಜೊತೆಗೆ ಮರಿಗಳು ಅಮ್ಮನ ಹಿಂದೆ ಹೀಗೆ ಈಜುವುದರಿಂದ ಶಕ್ತಿಯನ್ನೂ ಉಳಿಸುತ್ತವೆ, ಎನ್ನುವುದನ್ನೂ ಕಂಡುಕೊಂಡಿದ್ದರು. ಆದರೆ ಏಕೆ? ಹೇಗೆ? ಎಂದು ಯಾರಿಗೂ ತಿಳಿದಿರಲಿಲ್ಲ. ವಿಜ್ಞಾನಿ ಯುವಾನ್ ರಚಿಸಿದ ಕಂಪ್ಯೂಟರ್ ಚಿತ್ರಣದಿಂದ ಈ ರಹಸ್ಯ ಬಯಲಾಗಿದೆ.
ಅಮ್ಮನ ದಾರಿ ಬೇಡವೆಂದು ತಾನೇ ಮರಿಗಳು ಈಜಿದ್ದಾದರೆ, ಅವುಗಳು ಈಜಲು ತಮ್ಮ ಕಾಲುಗಳ ಸಹಾಯದಿಂದ ನೀರನ್ನು ಹಿಂದೆ ತಳ್ಳಿ ತಾವು ಮುಂದೆ ಸಾಗುತ್ತವೆ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಹಾಗೆ ಈಜುವುದರಿಂದ ತಾನು ಉತ್ಪಾದಿಸಿದ ನೀರಿನ ಅಲೆಗಳು, ಬಾತುಗಳು ಮುಂದೆ ಸಾಗುವ ವೇಗವನ್ನು ಸ್ವಲ್ಪ ಕ್ಷೀಣಿಸುತ್ತವೆ. ಇದನ್ನು ನೀರಿನ ಅಲೆತಡೆ ಅಥವಾ ವೇವ್ ಡ್ರ್ಯಾಗ್ ಎಂದು ಕರೆಯುತ್ತಾರೆ. ಹೀಗಾಗುವುದನ್ನು ತಪ್ಪಿಸಬೇಕೆಂದರೆ, ಅವುಗಳು ಅಮ್ಮನ ಹಿಂದೆ ಚಲಿಸಬೇಕು. ಹೀಗೆ ಚಲಿಸುವುದರಿಂದ ಅಮ್ಮ ಉತ್ಪಾದಿಸಿದ ಅಲೆಗಳು ಮರಿಗಳ ವೇಗವನ್ನು ಕ್ಷೀಣಿಸುವ ಬದಲು ಅವುಗಳನ್ನು ಮುಂದೆ ದೂಡುತ್ತವೆ. ಹೀಗೆ ಮಾಡುವುದರಿಂದ ಮರಿಗಳು ಸ್ವಲ್ಪವೇ ಶಕ್ತಿ ಬಳಸಿ ಚಲಿಸಬಹುದು. ಇದರ ಪ್ರಯೋಜನವನ್ನು ಪಡೆಯಬೇಕೆಂದರೆ ಉಳಿದ ಮರಿಗಳೂ ಸಹ ಶಿಸ್ತಿನ ಸಿಪಾಯಿಗಳಂತೆ ಒಂದರ ಹಿಂದೆ ಒಂದರಂತೆ ಸಾಲಾಗಿ ಹೋಗಬೇಕು. ಜೊತೆಗೆ ಅಮ್ಮನ ಈಜಿನ ವೇಗಕ್ಕೆ ಅವುಗಳ ವೇಗವನ್ನು ಹೊಂದಿಸಿಕೊಂಡಿರಬೇಕು. ಇಷ್ಟು ಮಾಡಿದರೆ ಮುಗಿಯಿತು. ತಾವು ಸ್ವತಃ ಈಜುವಾಗ ಬಳಸುವ ಶಕ್ತಿಗಿಂತ ಕಡಿಮೆ ಶಕ್ತಿಯಲ್ಲಿಯೇ ತಲುಪಬೇಕಿರುವ ಜಾಗ ತಲುಪಬಹುದು. ಅದೇ ಅಮ್ಮನ ದಾರಿ ಬಿಟ್ಟು ಕದಲಿದರೆ ಅನಗತ್ಯ ಹೆಚ್ಚು ಶಕ್ತಿ ಬಳಸಿ ಈಜಬೇಕಾಗುತ್ತದೆ ನಾವು ನಮ್ಮ ಮಾರ್ಗದರ್ಶಕರ ತೊರೆದು ಸ್ವತಃ ನಮ್ಮ ದಾರಿ ಹಿಡಿದಂತೆ.
ನೋಡಿದಿರಾ ಹೀಗೆ ಸಾಲಾಗಿ ಹೋಗುವ ಶಿಸ್ತು, ಹಿರಿಯರ ದಾರಿಯಲ್ಲಿ ಸಾಗಿದರೆ ಆಗುವ ಅನುಕೂಲಗಳು ನಮಗಿಂತ ಹೆಚ್ಚು ಪ್ರಾಣಿ, ಪಕ್ಷಿ, ಕೀಟಗಳಿಗೇ ಹೆಚ್ಚಿದೆ. ನಾವೂ ಹಾಗೆ ಹಿರಿಯರು ತೋರಿದ ಸರಿಯಾದ ದಾರಿಯಲ್ಲಿ ಸಾಗುವ ಕೆಲಸ ಈಗಿನ ಕಾಲದಲ್ಲಿ ಹೆಚ್ಚೆಚ್ಚು ಮಾಡಬೇಕಿದೆ. ಏಕೆಂದರೆ, ಕೆಲವು ನಮಗೆ ತಿಳಿದ ಹಾಗೆ ಇನ್ನು ಕೆಲವು ತಿಳಿಯದ ಹಾಗೆ ನಮ್ಮ ಸುತ್ತಲಿನ ಪರಿಸರ, ಎಷ್ಟೋ ಜೀವರಾಶಿಗಳ ಜೊತೆಗಿನ ಸೌಹಾರ್ದ ಜೀವನದಿಂದ ದಾರಿತಪ್ಪಿಬಿಟ್ಟಿದ್ದೇವೆ. ನಮ್ಮ ಹಾಗೆ ಕೇವಲ ಕಾಗದದ ಸ್ನಾತಕ ಪದವಿಗಳಿರದ ನಮ್ಮ ಹಿರಿಯರು ಎಷ್ಟೋ ಜೀವರಾಶಿಗಳೊಂದಿಗೆ ಸಹಯೋಗದಿಂದ ಬದುಕುವ ದಾರಿ ಕಂಡುಕೊಂಡಿದ್ದರು. ಆದರೆ ಈಗಿನ ಪದವಿಗಳು ನಮ್ಮ ನಿತ್ಯ ಅನರ್ಥ ಜೀವನ ಸಾಗಿಸಲು ಬೇಕಾದ ಗಾಂಧಿ ಮುದ್ರಿತ ಕಾಗದಗಳನ್ನು ಗಳಿಸಲು ಮಾತ್ರ ಯೋಗ್ಯವಾಗುವ ಹಾಗೆ ಬದುಕುತ್ತಿದ್ದೇವೆ. ನಾವು ನಮ್ಮ ಜೀವನದ ಬಹುಮುಖ್ಯವಾದ ಪ್ರಪಂಚವನ್ನು ಅರಿಯುವ ಬಾಲ್ಯಾವಸ್ಥೆಯಿಂದ ಕಲಿಯುವ ಶಿಕ್ಷಣ ನಮ್ಮನ್ನು ನಮ್ಮ ನೆರೆ-ಹೊರೆಯವರೊಂದಿಗೆ ಹರ್ಷ-ಅನ್ಯೋನ್ಯತೆಗಳಿಂದ ಬದುಕಲು ಕಲಿಸದಿದ್ದರೆ, ಅಂತಹ ಶಿಕ್ಷಣದ ಉದ್ದೇಶವೇ ದಾರಿ ತಪ್ಪಿದ ಹಾಗೆ ಅಲ್ಲವೇ……!
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.