ಬಯಲಾದ ಆಹಾರ ರಹಸ್ಯ

ಬಯಲಾದ ಆಹಾರ ರಹಸ್ಯ

© DANILO LIMA

ನಗರದಲ್ಲಿ ಸರಣಿ ಕಳ್ಳತನಗಳು ನಡೆಯುತ್ತವೆ. ಅವು ಎಷ್ಟು ಜಾಗರೂಕತೆ ಮತ್ತು ಜಾಣತನದಿಂದ ನಡೆದಿರುತ್ತವೆಂದರೆ, ಪೋಲೀಸರಿಗೆ ಯಾವ ಸಣ್ಣ ಸುಳಿವೂ ಸಿಗುವುದಿಲ್ಲ. ಹಾಗಾಗಿ ಕಳ್ಳತನಗಳನ್ನು ಭೇದಿಸಲು ಒಬ್ಬ ವಿಶೇಷ ಪೋಲೀಸ್ ಅಧಿಕಾರಿಯನ್ನು ನೇಮಿಸುತ್ತಾರೆ. ಸಮಯ ಕಳೆಯುತ್ತದೆಯೇ ವಿನಹ ಆ ವ್ಯಕ್ತಿಗೂ ಈ ಚಕ್ರವ್ಯೂಹವನ್ನು ಭೇದಿಸಲು ಆಗುವುದಿಲ್ಲ. ಆದರೆ ಅವನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಪೋಲೀಸ್ ಮಾತ್ರ ತನ್ನ ಎಲ್ಲಾ ಜಾಣ್ಮೆಯನ್ನು ಬಳಸಿ ಕಳ್ಳನ ರಹಸ್ಯ ಬೇಧಿಸಲು ಸಣ್ಣ ಸಣ್ಣ ಸುಳಿವುಗಳನ್ನು ಸಂಗ್ರಹಿಸಿ, ಹೆಣೆದು ಇನ್ನೇನು ತೀರ್ಮಾನಕ್ಕೆ ಬರುವ ಸಮಯ. ಆದರೆ ಅವನ ಮೇಲಾಧಿಕಾರಿ ಅವನನ್ನು ತಡೆದುಬಿಡುತ್ತಾನೆ. ಅಲ್ಲಿಗೆ ವಿರಾಮ. ವಿರಾಮದ ನಂತರದ ಭಾಗದಲ್ಲಿ ಅದೇ ಸಹಾಯಕ ಪೋಲೀಸ್ ತನ್ನ ಕರ್ತವ್ಯ ಬಿಡದೇ ಮುಂದುವರೆಸುತ್ತಾನೆ. ಕೊನೆಗೆ ಅವನಿಗೇ ನಂಬಲಾಗದ ರಹಸ್ಯ ಬಯಲಾಗುತ್ತದೆ. ಅದೇನೆಂದರೆ ಇಷ್ಟು ದಿನ ಜೊತೆಗಿದ್ದು ಯಾರ ಆದೇಶಗಳನ್ನು ಪಾಲಿಸುತ್ತಿದ್ದನೋ ಅದೇ ವಿಶೇಷ ಅಧಿಕಾರಿಯೇ ಕಳ್ಳ. ಅದು ಹೇಗೆ ಎಂದು ಒಂದೊಂದೇ ಸೀನ್ ನಲ್ಲಿ ತೋರಿಸಿ ವೀಕ್ಷಕರ ಹುಬ್ಬೇರಿಸುವಂತೆ ಮಾಡಿರುತ್ತಾನೆ ಚಲನಚಿತ್ರ ನಿರ್ದೇಶಕ. ಇಂತಹ ಹಲವಾರು ಟ್ವಿಸ್ಟ್ ಇರುವ ಸಿನೆಮಾಗಳು ನೀವೂ ನೋಡಿರಬಹುದು. ಇಂತಹ ಟ್ವಿಸ್ಟ್ಗಳು ನಮ್ಮ ನಿಜಜೀವನದಲ್ಲಿ ನೋಡಿದರೆ ಅದು ಇನ್ನೂ ಸ್ವಾರಸ್ಯಕರ ಎನಿಸುತ್ತದೆ ಅಲ್ಲವೇ? ಅದೇ ವಿಷಯ ಸಸ್ಯಗಳ ಜೀವನದಲ್ಲಿ ನಡೆದರೆ ಇನ್ನೂ ಹೆಚ್ಚು ಅಚ್ಚರಿಯಾಗುತ್ತದೆ. ಅಂತಹುದೇ ಒಂದು ವಿಷಯವಿಲ್ಲಿದೆ.

© QIANSHI LIN_1

ಇದೊಂದು ಸಾಮಾನ್ಯವಾದ ಕಾಡು ಸಸ್ಯ. ಆದರೆ ಇದರ ನಿಜವಾದ ಜೀವನ ಶೈಲಿ ಕೇಳಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಅಂತಹ ಒಂದು ವಿಸ್ಮಯ ವಿಷಯ ಹೊರ ಬಂದದ್ದು ಆ ಸಸ್ಯವಿರುವ ದೇಶದ ಸಸ್ಯತಜ್ಞರಿಗೆ ಹುಬ್ಬೇರಿಸುವಂತೆ ಮಾಡಿದೆ. 19ನೇ ಶತಮಾನದಿಂದಲೂ ಸಸ್ಯತಜ್ಞರು ಪ್ರಯೋಗಗಳಿಗೆ ಬಳಸುತ್ತಿದ್ದ ಟ್ರಿಯಾಂಟಾ ಆಕ್ಸಿಡೆಂಟಲಿಸ್ (Triantha occidentalis) ಎಂಬ ವೈಜ್ಞಾನಿಕ ಹೆಸರಿರುವ ಒಂದು ಕಾಡು ಹೂ ಸಸ್ಯವಿದು. ಇಲ್ಲಿಯವರೆಗೆ ಎಲ್ಲದರಂತೆ ಸಾಮಾನ್ಯ ಹೂ ಬಿಡುವ ಸಸ್ಯ ಎಂದು ತಿಳಿದಿದ್ದ ಇದು ಈಗ ಕೀಟಾಹಾರಿ ಎಂದು ಬಯಲಾಗಿದೆ. ಹೌದು ತನ್ನ ಹೂ ಬಿಡುವ ಕಾಂಡದ ಅಂಟು ರಸಸದಲ್ಲಿ ಇದ್ದ ಸಣ್ಣ ಸಣ್ಣ ಸತ್ತ ಕೀಟಗಳು ಸಸ್ಯದ ಕೀಟಾಹಾರದ ನಿಗೂಢತೆಯನ್ನು ಬಯಲು ಮಾಡಿದೆ. ಅರೇ ಈ ತರಹದ ಅಂಟು ರಸ ಅಥವಾ ದ್ರವ ಕೇವಲ ಕೀಟಗಳನ್ನು ಹಿಡಿದು ತಿನ್ನಲು ಮಾತ್ರವೇ ಇದ್ದೀತೇ? ಬೇರೆ ಕಾರಣವೂ ಇರಬಹುದಲ್ಲವೇ? ಎಂದು ನೀವೆನ್ನಬಹುದು. ಈ ನಿಮ್ಮ ತರ್ಕ ಒಪ್ಪುವಂತದ್ದು. ಮೊದ ಮೊದಲು ಈ ಅಂಟಿಗೆ ಅಂಟಿಕೊಂಡು ಅಸುನೀಗಿದ್ದ ಸಣ್ಣ ಕೀಟಗಳನ್ನು ಕಂಡ ಸಸ್ಯತಜ್ಞರೂ ಸಹ ಹಾಗೇ ತಿಳಿದಿದ್ದರು. ಇದು ಬಹುಶಃ ಆ ಸಸ್ಯಕ್ಕೆ ತೊಂದರೆಯನ್ನು ಉಂಟುಮಾಡುವ ಕೀಟಗಳನ್ನು ಕೊಲ್ಲಲು ಮಾಡಿಕೊಂಡ ತಂತ್ರವೆಂದೇ ತಿಳಿದಿದ್ದರು. ಇಂತಹ ತಂತ್ರ ಉಪಯೋಗಿಸುವ ಇನ್ನೂ ಹಲವು ಸಸ್ಯಗಳಿರುವುದರಿಂದ ಈ ಕಾಡು ಹೂ ಸಸ್ಯದ ಮೇಲೆ ಯಾರಿಗೂ ಒಂದು ಶತಮಾನದ ವರೆಗೂ ಸಂದೇಹ ಬಂದಿರಲಿಲ್ಲ. ಆದರೆ ಸತ್ಯವನ್ನು ಎಷ್ಟು ದಿನವೆಂದು ಮುಚ್ಚಿಡಲಾದೀತು? ಒಂದಲ್ಲಾ ಒಂದು ದಿನ ಹೊರ ಬಂದೇ ಬರುತ್ತದೆ. ಸಸ್ಯವನ್ನು ಕೊಂಚ ವಿಶೇಷವಾಗಿ ಗಮನಿಸಿದ ಮೇಲೆ ತಿಳಿದದ್ದು ಇದು.

ನಮ್ಮ ಈ ಕಾಡು ಹೂ ಸಸ್ಯವೂ ಸಹ ಬೇರೆ ಕೀಟಾಹಾರಿಯಂತೆ ಪ್ರಕಾಶಮಾನವಾದ ಪ್ರದೇಶ ಅಥವಾ ಹೆಚ್ಚು ಪೋಷಕಾಂಶಗಳಿರದ ಪ್ರದೇಶಗಳಲ್ಲಿ ಬೆಳೆಯುತ್ತಿದ್ದವು. ಆದರೆ ಈ ವಿಷಯಗಳೇ ಸಸ್ಯತಜ್ಞರಿಗೆ ಸಂದೇಹವನ್ನುಂಟು ಮಾಡಿದ್ದು. ಇದು ಎಲ್ಲದರಂತೆ ಸಾಮಾನ್ಯ ಹೂಸಸ್ಯವಾಗಿದ್ದರೆ ಎಲ್ಲಾ ಪೋಷಕಾಂಶ ಸಿಗುವ ಸ್ಥಳದಲ್ಲಿ ಬೆಳೆಯಬಹುದು. ಇಂತಹ ಪೋಷಕಾಂಶ ಕಡಿಮೆ ಇರುವ ಜಾಗದಲ್ಲಿ ಬೆಳೆದ ಇವಕ್ಕೆ ಉಳಿದ ಪೋಷಕಾಂಶದ ಸರಬರಾಜು ಹೇಗೆ? ಭಾಗಶಃ ಇದು ಕೀಟಾಹಾರಿಯೇ? ಎಂಬ ಸಂದೇಹಗಳು ಹುಟ್ಟಿದವು. ಸುಮ್ಮನೆ ಗೊಂದಲವೇಕೆ, ಇದು ಕೀಟಾಹಾರಿಯೋ ಇಲ್ಲವೋ ಎಂದು ಪರೀಕ್ಷಿಸಿದರೆ ಸಂದೇಹ ಬಗೆಹರಿದಂತೆ ಎಂದು ತೀರ್ಮಾನಿಸಿದರು. ಈ ವಿಷಯ ತಿಳಿಯಲು ನಮ್ಮ ಸಸ್ಯ ತಜ್ಞರಿಗೆ ಒಂದು ವಿಷಯ ಖಚಿತವಾಗಬೇಕು. ಅದೇನೆಂದರೆ ಈ ಸಸ್ಯದ ಅಂಟಿನಲ್ಲಿ ಸಿಕ್ಕು ಸತ್ತ ಕೀಟಗಳಿಂದ ಈ ಸಸ್ಯ ಪೋಷಕಾಂಶಗಳನ್ನು ಹೀರಿಕೊಳ್ಳುತ್ತಿದೆಯೇ ಇಲ್ಲವೇ? ಎಂದು ಪರೀಕ್ಷಿಸಬೇಕಿತ್ತು. ಆ ಪರೀಕ್ಷೆಯ ವಿಧಾನ ಇಂತಿದೆ…

ಹಣ್ಣಿನ ನೊಣ (fruit fly) ಕ್ಕೆ ಸಾರಜನಕ-15 ಅನ್ನು ತಿನ್ನಿಸಿ ತಯಾರು ಮಾಡಿದರು. ಈ ವಿಶಿಷ್ಟ ಸಾರಜನಕವು ಎಲ್ಲೆಲ್ಲಿಗೆ ಹರಡಿದೆ ಎಂದು ಗುರುತಿಸಬಹುದಿತ್ತು. ಹೀಗೆ ಸಾರಜನಕ-15 ತಿನ್ನಿಸಿದ ನೊಣಗಳನ್ನು ನಮ್ಮ ಈ ಕಾಡು ಹೂವಿನ ಸಸ್ಯಗಳಿರುವ ಜಾಗದಲ್ಲಿ ಬಿಡಲಾಯಿತು. ಇದಾದ ಬಳಿಕ ಅದೇ ಸಸ್ಯಗಳಲ್ಲಿ ಇದ್ದ ಸಾರಜನಕವನ್ನು ಪರೀಕ್ಷಿಸಿದರು. ಆ ಪ್ರದೇಶದಲ್ಲಿ ಪರೀಕ್ಷಿಸಿದ ಸಸ್ಯಗಳ ಪೈಕಿ 50%ಕ್ಕಿಂತ ಹೆಚ್ಚು ಸಸ್ಯಗಳಲ್ಲಿನ ಸಾರಜನಕ ಈ ಹಣ್ಣಿನ ನೊಣಗಳಿಂದಲೇ ಬಂದಿದ್ದವು ಎಂಬ ಸಂಗತಿ ಅರಿತರು. ಅದರ ಅರ್ಥ ನಮ್ಮ ಕಾಡು ಹೂ ಸಸ್ಯಗಳು ಕೀಟಾಹಾರಿಗಳೇ ಎಂದು ರುಜುವಾತಾಯಿತು. ಇದರ ಜೊತೆಗೇ ಪರೀಕ್ಷಿಸಿದಾಗ ಅವುಗಳ ಅಂಟು ರಸದಲ್ಲಿ ‘ಫಾಸ್ಪೇಟೇಸ್ (phosphatase)’ ಕೂಡಾ ಇತ್ತು. ಈ ಫಾಸ್ಪೇಟೇಸ್ ಕೇವಲ ಕೀಟಾಹಾರಿ ಸಸ್ಯಗಳಲ್ಲಿ ಮಾತ್ರ ಸ್ರವಿಸಲ್ಪಡುತ್ತದೆ. ಆದ್ದರಿಂದ ಈಗ ನಮ್ಮ ‘ಕಾಡು ಹೂ ಸಸ್ಯ’ವನ್ನು ‘ಕೀಟಾಹಾರಿ ಕಾಡು ಹೂ ಸಸ್ಯ’ವೆಂದು ನಿಸ್ಸಂದೇಹವಾಗಿ ಹೇಳಬಹುದು.

© QIANSHI LIN_2

ಆದರೆ ಪ್ರಪಂಚದಲ್ಲಿ ಇಲ್ಲಿಯವರೆಗೆ ಗುರುತಿಸಿರುವ ಸುಮಾರು 800ಬಗೆಯ ಕೀಟಾಹಾರಿ ಸಸ್ಯಗಳಿಗೂ ನಮ್ಮ ಈ ಕಾಡು ಹೂ ಕೀಟಾಹಾರಿಗೂ ಸಣ್ಣ ವ್ಯತ್ಯಾಸವಿದೆ. ಸಾಮಾನ್ಯ ಕೀಟಾಹಾರಿ ಸಸ್ಯಗಳು ತಮ್ಮ ಕೀಟಾಹಾರವನ್ನು ಆಕರ್ಷಿಸುವ ದ್ರವ ಅಥವಾ ಅಂಟನ್ನು ತಾನು ಬಿಡುವ ಹೂವಿನಿಂದ ದೂರದಲ್ಲಿ ಇಟ್ಟಿರುತ್ತದೆ. ಏಕೆಂದರೆ ತಮ್ಮ ಹೂವಿನ ಪರಾಗಸ್ಪರ್ಶ ಮಾಡಲು ಬರುವ ಕೀಟಗಳೂ ಸಹ ಅವುಗಳಿಗೆ ಆಹಾರವಾಗಬಹುದು. ಆದ್ದರಿಂದಲೇ ಈ ಅಂತರ ಕಾಯ್ದುಕೊಳ್ಳುತ್ತವೆ. ಆದರೆ ನಮ್ಮ ಈ ಕಾಡು ಹೂ ಗಿಡದಲ್ಲಿ ಮಾತ್ರ ಕೀಟಗಳನ್ನು ಸಿಕ್ಕಿಸುವ ಮತ್ತು ಸೇವಿಸುವ ಆ ಅಂಟನ್ನು ತನ್ನ ಹೂವಿನ ಬಳಿಯೇ ಇಟ್ಟಿದೆ. ಈ ಕಾರಣದಿಂದಾಗಿ ಈ ಗಿಡ ಸ್ರವಿಸುವ ಅಂಟು ಕೇವಲ ಸಣ್ಣ ಕೀಟಗಳನ್ನು ಮಾತ್ರ ಹಿಡಿಯಬೇಕು. ದುಂಬಿ, ಚಿಟ್ಟೆಗಳಂತಹ ತನ್ನ ಪರಾಗಸ್ಪರ್ಶಕಗಳನ್ನು ಹಿಡಿಯುವಂತಿರಬಾರದು. ಅದಕ್ಕೆಂದೇ ತಾನು ಸ್ರವಿಸುವ ಅಂಟು ದ್ರವ ದೊಡ್ಡ ದೊಡ್ಡ ಕೀಟಗಳನ್ನು ಹಿಡಿಯುವಷ್ಟು ಶಕ್ತಿಯುತವಾಗಿರುವುದಿಲ್ಲ. ಜೊತೆಗೆ ಈ ಕೆಳಗೆ ತೋರಿರುವ ಚಿತ್ರವನ್ನು ಗಮನಿಸಿದಲ್ಲಿ, ಈ ಸಣ್ಣ ಸಣ್ಣ ಕೂದಲಿನೆಳೆಯಂತಿರುವ ಆಕಾರ ಮತ್ತು ಅಂಟು ಕೀಟಾಹಾರಿ ಸಸ್ಯಗಳು ಜೀವವಿಕಾಸದಲ್ಲಿ ಹೇಗೆ ಬದಲಾಗುತ್ತಾ ಬಂದಿವೆ ಎಂಬ ಸುಳಿವನ್ನೂ ಸಹ ಕೊಡುತ್ತದೆ. ಹಾಗಾಗಿ ಈ ಕೀಟಾಹಾರಿಗೆ ‘ಅರೆ ಕೀಟಾಹಾರಿ’ ಎಂದರೆ ತಪ್ಪಾಗಲಾರದು.

ಅದೇನೇ ಆದರೂ ಈ ಆಹಾರದಾಟದಲ್ಲಿ ಪಳಗಿದ ಜೀವಿ ಮಾತ್ರ ತನ್ನ ಪೀಳಿಗೆಯನ್ನು ಮುನ್ನಡೆಸಲಾದೀತು ಇಲ್ಲವಾದರೆ ಪಳೆಯುಳಿಕೆಯಲ್ಲೂ ನೋಡಲು ಸಿಗಬಹುದೆಂಬ ಯಾವುದೇ ಖಾತರಿಗಳಿಲ್ಲಗುವ ಜವಾಬ್ದಾರಿ ನಮ್ಮದು.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.