ಲೋಹದ ಸ್ನಾಯುಗಳು

ಲೋಹದ ಸ್ನಾಯುಗಳು

© Leafcutter_ants

ನಾನು : ಮಾ… ಸಕ್ರೆ ಏನಿಕ್ಕೆ ಇರ್ವೆಗೆ ಹಾಕ್ತಾ ಇದ್ಯಾ?
ಅಮ್ಮ : ಅವು ಒಳ್ಳೆ ಇರ್ವೆ ಕಣೋ
ನಾನು : ಒಳ್ಳೆ ಇರ್ವೆ ನಾ, ಎಲ್ಲಾ ಇರುವೆಗಳು ಕಚ್ತವೆ ತಾನೆ?
ಅಮ್ಮ : ಇವು ಕಪ್ಪಿರ್ವೆ ಕಚ್ಚಲ್ಲ. ಒಳ್ಳೇವು, ಸಕ್ರೆ ತಗೊಂಡು ಹೋಗ್ಬಿಡ್ತಾವೆ ನೋಡ್ಕೋ

ಹೀಗೆ ಸಣ್ಣ ಕಪ್ಪು ಬಣ್ಣದ ಒಂದು ಪ್ರಭೇದದ ಇರುವೆ ಕಂಡರೆ ನನ್ನ ಅಮ್ಮ, ಅಡುಗೆ ಮಾಡುವ ಮಧ್ಯದಲ್ಲೂ ಬಿಡುವು ಮಾಡಿಕೊಂಡು ಹೋಗಿ ಸಕ್ಕರೆ ಹಾಕುತ್ತಿದ್ದಳು. ಆಗಲಿಂದ ಅಂತಹ ಇರುವೆ ನಮಗೆ ಒಳ್ಳೆ ಇರುವೆ. ಇದಕ್ಕೆ ಅಭಿಮುಖವಾಗಿ ಅಮ್ಮನ ಇನ್ನೊಂದು ಮುಖವಿದೆ. ಮುಂದೆ ನೋಡಿ, ಆಗ ಊರಿನಲ್ಲಿ ಎಲ್ಲಾ ಮನೆಗಳು ಹೆಂಚಿನ ಮನೆಗಳಾಗಿದ್ದವು. ಮನೆಯ ಒಳಗೆ ನೆಲ ಮಣ್ಣಿನದ್ದಾಗಿತ್ತು. ಹಸುವಿನ ಸಗಣಿಯಿಂದ ಪ್ರತೀ ಶುಕ್ರವಾರ ಸಾರಿಸುವುದರಿಂದ ಕೆಲವು ಸೆಂಟೀಮೀಟರುಗಳಷ್ಟು ಆಳಕ್ಕೆ ಮಣ್ಣು ಹುದುಗಿರುತ್ತಿತ್ತು. ಚಾಪೆ ಹಾಸಿ ಮಲಗಿದರೂ ನೆಲದ ಅಂಕು ಡೊಂಕು ಅನುಭವಕ್ಕೆ ಬರುತ್ತಿತ್ತು. ಕೆಲವೊಮ್ಮೆ ನಿದ್ರೆಯಲ್ಲಿ ಅದರಿಂದಲೇ ಬೆಟ್ಟ ಗುಡ್ಡಗಳ ಮೇಲೆ ಓಡಾಡುವ ಹಾಗೆ ಆಗಿರುವುದುಂಟು. ಹಾಗೆಯೇ ಕೆಲವೊಮ್ಮೆ ಯಾರೋ ಚುಚ್ಚಿ ಚುಚ್ಚಿ ಎಬ್ಬಿಸಿದಂತೆಯೂ ಆಗುತ್ತಿತ್ತು. ಬೆಳಿಗ್ಗೆ ಎದ್ದು ನೋಡಿದರೆ, ನಾವು ಹಾಸಿ ಮಲಗಿದ್ದ ಜಾಗದಲ್ಲಿ ಯಾವುದೋ ಒಂದು ಪ್ರಭೇದದ ಇರುವೆ ಮಣ್ಣಿನಲ್ಲಿ ಗೂಡು ಮಾಡಿ ಕೇವಲ ಒಂದೇ ಒಂದು ಸಣ್ಣ ರಂಧ್ರವನ್ನು ತನ್ನ ಹೆಬ್ಬಾಗಿಲಾಗಿ ಮಾಡಿಕೊಂಡಿರುವುದು ಕಾಣುತ್ತಿತ್ತು. ಅಮ್ಮನಿಗೆ ಬೆಳಿಗ್ಗೆಯ ವರದಿಯಲ್ಲಿ ಈ ವಿಷಯ ತಿಳಿಸಿದ ಕೂಡಲೇ ದೇವರ ಫೋಟೋ ಬಳಿ ಹೋಗಿ ಅರಿಶಿನ ತಂದು ಆ ಇರುವೆಯ ಗೂಡಿನ ಸುತ್ತ ಉದುರಿಸುತ್ತಿದ್ದಳು. ಅದೇಕೆ ಎಂದು ಕೇಳಿದರೆ, ಇವು ಕಚ್ಚುವ ಇರುವೆ ಅದಕ್ಕೆ ಸಾಯಲಿ ಎಂದು ಅರಿಶಿನ ಹಾಕಿದ್ದೇನೆ, ಎನ್ನುವಳು.  ಕೆಲವೊಮ್ಮೆ ಗೂಡು ದೊಡ್ಡದಿರುತ್ತಿತ್ತು, ಇರುವೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ಕೆಲಸದಲ್ಲಿ ಎಂದಿನಂತೆ ಮುಳುಗಿರುತ್ತಿದ್ದವು.

© ant-ants-eat-nature

ಅಂತಹದ್ದೇನಾದರೂ ಅಮ್ಮನಿಗೆ ಕಂಡುಬಿಟ್ಟರೆ ಮುಗಿಯಿತು. ನನ್ನ ಮನೆಯೊಳಗೆ ನಿಮ್ಮ ಸಾಮ್ರಾಜ್ಯವೋ ಎಂಬಂತೆ, ಹೋಗಿ ಮುಸರೆ ಬಟ್ಟೆಗೆ ಸೀಮೆ ಎಣ್ಣೆಯನ್ನು ಸೋಕಿಸಿ ತಂದು ಅದರ ಗೂಡಿನ ಬಳಿ ಹಾಕುತ್ತಿದ್ದಳು. ಆ ಸೀಮೆ ಎಣ್ಣೆಯ ವಾಸನೆಗೆ ಅವು ಜಾಗ ಖಾಲಿ ಮಾಡಲೇ ಬೇಕಿತ್ತು. ಎಲ್ಲೋ ಕೆಲವು ಮಾತ್ರ, ಮಾತು ಕೇಳದಿದ್ದಾಗ ಅವುಗಳ ಮೇಲೆ ಅಗ್ನಿ ಅಸ್ತ್ರವನ್ನೂ ಪ್ರಯೋಗಿಸಿದ್ದುಂಟು. ಅರೇ, ಒಂದು ಸಣ್ಣ ಇರುವೆಗೆ ಇಷ್ಟೆಲ್ಲಾ ಕಷ್ಟಕೊಟ್ಟು ಸಾಯಿಸಬೇಕೆ? ಎನ್ನುವುದಾದರೆ ಒಮ್ಮೆ ಅವುಗಳಿಂದ ಕಚ್ಚಿಸಿಕೊಳ್ಳಿ ತಿಳಿಯುತ್ತದೆ. ‘ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು’ ಎಂಬ ಗಾದೆಯ ಅರ್ಥ ಖಂಡಿತ ಮನವರಿಕೆಯಾಗುತ್ತದೆ. ಕಟ್ಟಿರುವೆ ಅಥವಾ ಕೆಟ್ಟಿರುವೆ ಎಂದು ನಾವು ಕರೆಯುವ ದಪ್ಪದಾದ ಕಪ್ಪು ಇರುವೆ ಕಚ್ಚಿದರೆ ಒಮ್ಮೊಮ್ಮೆ ಕತ್ತರಿಯ ತುದಿಯಿಂದ ಕತ್ತರಿಸಿದ ಹಾಗೆ ಗಾಯವೂ ಆಗಿರುತ್ತದೆ. ನಾನು ನೋಡಿದ ಹಾಗೆ ಎಲ್ಲಾ ಇರುವೆಗಳೂ ಕಚ್ಚುತ್ತವೆ. ಅದು ಎಷ್ಟೇ ಸಣ್ಣದಿದ್ದರೂ ಸರಿ, ಎಷ್ಟೇ ದಪ್ಪದಿದ್ದರೂ ಸರಿ ಅಥವಾ ಎಷ್ಟೇ ವಿಚಿತ್ರವಿದ್ದರೂ ಸರಿ. ಹಾಗೆ ನೋಡಿದರೆ ಅಮ್ಮ ತೋರಿಸಿದ “ಆ ” ಕಪ್ಪು ಇರುವೆ ಮಾತ್ರ ಇದುವರೆಗೂ ನನಗೆ ಕಚ್ಚಲಿಲ್ಲ. ಅದಕ್ಕೆಂದೇ ಇರಬೇಕು ಅಮ್ಮ ಅವುಗಳಿಗೆ “ದೇವರ ಇರುವೆ” ಎಂದು ಹೆಸರಿಟ್ಟು ಸಕ್ಕರೆಯ ನೈವೇದ್ಯ ನೀಡುತ್ತಿದ್ದುದು.

© RYAN GARRETT

ಆದರೂ ಅಷ್ಟು ಸಣ್ಣ ಇರುವೆ ಇಷ್ಟು ದೊಡ್ಡ ದೇಹದ ಪ್ರಾಣಿಗೆ ಕಚ್ಚಿದರೆ ಹೇಗೆ ಇಷ್ಟು ನೋವಾಗುತ್ತದೆ? ಅಲ್ಲವೇ? ಇಲ್ಲೇನೋ ಇರಬೇಕು. ಇರುವೆಯೇ ಅಷ್ಟು ಸಣ್ಣ ಗಾತ್ರ, ಅದರಲ್ಲೂ ಅದರ ಮೂತಿಯ ಬಳಿ ಇರುವ ಆ ಸೂಕ್ಷ್ಮ ಕೊಂಡಿಗಳಿಗೆ ಇಷ್ಟು ಶಕ್ತಿ ಹೇಗೆ ಬಂತು? ಏಕೆಂದರೆ ಚಿಕ್ಕಂದಿನಲ್ಲಿ ನಮ್ಮ ತಂದೆ ಅಥವಾ ತರಗತಿಯಲ್ಲಿ ಶಿಕ್ಷಕರು ಹೊಡೆಯುವ ಏಟಿಗೆ ಬೆತ್ತವೇ ಮುರಿದು ಹೋದ ನಿದರ್ಶನಗಳಿವೆ. ಹೀಗಿರುವಾಗ ಈ ಇರುವೆಗೆ ಹೇಗೆ ಸಾಧ್ಯ? ಎಂದಷ್ಟೇ ನನ್ನ ಪ್ರಶ್ನೆ. ನನ್ನ ಈ ಪ್ರಶ್ನೆಯನ್ನು ಸ್ವಲ್ಪ ಗಂಭೀರವಾಗಿಯೇ ತೆಗೆದುಕೊಂಡ ರಾಬರ್ಟ್ ಸ್ಕೋಫೀಲ್ಡ್ ಎಂಬ ಭೌತಶಾಸ್ತ್ರಜ್ಞ ಇದಕ್ಕೆ ಉತ್ತರವನ್ನು ಹುಡುಕುತ್ತಾ ಹೊರಟರು. ತಮ್ಮ ಅಧ್ಯಯನಕ್ಕೆಂದು ‘ಎಲೆ ಕತ್ತರಿಸುವ’ ಒಂದು ಇರುವೆಯ ಪ್ರಭೇದವನ್ನು ಆರಿಸಿಕೊಂಡರು. ಆ ಇರುವೆಗಳ ಅಷ್ಟು ಚೂಪಾದ ಮತ್ತು ಬಲವಾದ ಕತ್ತರಿಯ ಬಾಯಿಗೆ ಮೂಲ ಅವುಗಳು ಮಾಡಲ್ಪಟ್ಟಿರುವ ವಸ್ತುಗಳಿಂದ. ಹೌದು, ಇಂತಹ ಇರುವೆಗಳ ಈ ಕತ್ತರಿಸುವ ಕೊಂಡಿಗಳು ಕೇವಲ ಜೀವಕೋಶಗಳಿಂದ ಮಾತ್ರ ಆಗಿರದೆ, ಅದರಲ್ಲಿ ಸತು (zinc) ಮತ್ತು ಮ್ಯಾಂಗನೀಸ್ ನಂತಹ ಲೋಹಗಳು ಇರುತ್ತವೆ. ಅದರಿಂದಾಗಿಯೇ ಅವುಗಳಿಗೆ ಅಷ್ಟು ಬಲವಿರುತ್ತದೆ ಹಾಗೂ ಶಕ್ತಿಯುತವಾಗಿರುತ್ತವೆ. ಆದರೆ ಇರುವೆಗಳ  ಕತ್ತರಿಸುವ ಕಾರ್ಯಕ್ಕೆ ಇಂತಹ ‘ಲೋಹದ ಸ್ನಾಯು’ಗಳಿದ್ದರೆ ಸಾಲದು ಜೊತೆಗೆ ಹಲ್ಲುಗಳಂತಹ ರಚನೆಯೂ ಇದೆ. ಇರುವೆಗಳಂತಹ ಕೀಟಗಳಿಗೆ ಲೋಹದ ಸ್ನಾಯುಗಳಿರುತ್ತವೆ ಎಂದು ಈ ಹಿಂದೆಯೂ ಕೆಲವು ಸಂಶೋಧನೆಗಳು ಹೇಳಿವೆ. ಆದರೆ ಈ ಎಲೆ ಕತ್ತರಿಸುವ ಇರುವೆ ಕೊಂಚ ವಿಶೇಷ. ಅದು ಹೇಗೆಂದರೆ, ಈ ಇರುವೆಗಳಲ್ಲಿ ಹಿಂದೆ ಹೇಳಿದ ಹಾಗೆ ಕೇವಲ ಲೋಹದ ಸ್ನಾಯುಗಳು ಮಾತ್ರವಲ್ಲದೇ ಆ ಕೊಂಡಿಗಳಲ್ಲಿ ಚೂಪಾದ ಹಲ್ಲಿನಂತಹ ರಚನೆಗಳಿವೆ.

ಈ ಹಲ್ಲಿನಂತಹ ರಚನೆಯ ಚೂಪಿನ ರಹಸ್ಯ ತಿಳಿಯಲು ಅದನ್ನು ವಿಶೇಷ ಸೂಕ್ಷ್ಮದರ್ಶಕದಲ್ಲಿ ನೋಡಲಾಯಿತು. ಅದರಲ್ಲಿ ಬಯಲಾದ ಸತ್ಯ ಅವುಗಳ ಚೂಪಿನ ಕಾರಣವನ್ನೂ ಹೇಳಿಬಿಟ್ಟವು. ಅದೇನೆಂದರೆ, ಅವುಗಳ ಕೊಂಡಿಯಲ್ಲಿದ್ದ ಅದೇ ಸತು ಮತ್ತು ಮ್ಯಾಂಗನೀಸ್ ಲೋಹಗಳು ಇಲ್ಲಿ ಕಂಡವಾದರೂ ಅವುಗಳ ಜೋಡಣೆ ಬೇರೆ ರೀತಿಯಲ್ಲಿತ್ತು. ಅಂದರೆ ಹಲ್ಲಿನಂತಹ ರಚನೆಯಲ್ಲಿ ಸತುವಿನ ಅಣುಗಳು ಏಕರೂಪವಾಗಿ (homogeneous) ಹರಡಿದ್ದವು. ಅಣುಗಳ ಗುಂಪುಗಳಾಗಿ (chunks) ಅಲ್ಲ. ಇದರ ಫಲವಾಗಿ ಹಲ್ಲಿನಂತಹ ರಚನೆ ಹೆಚ್ಚು ಚೂಪಾದರೂ ಮುರಿಯುವ ತೊಂದರೆ ದೂರಾಯಿತು. ಖನಿಜಗಳಿಂದ ಮಾಡಿದ ಜೀವಿಯ ಹಲ್ಲುಗಳಿಗಿಂತ ಇವು ಎಷ್ಟೋ ಬಲವಾಗಿದ್ದವು ಹಾಗೂ ನೀಳವಾಗಿ ಚೂಪಾಗಿದ್ದವು. ಅದನ್ನೂ ತಿಳಿಯಲು ಚಿಟಿನ್ ಮತ್ತು ಕ್ಯಾಲ್ಶಿಯಮ್ ನಿಂದ ಮಾಡಿರುವಂತಹ ಎಷ್ಟೋ ಕೀಟಗಳ ಹೊರ ಕವಚಗಳಿಗಿಂತ ಇದು ಎರಡರಷ್ಟು ಬಲವಾಗಿತ್ತು. ‘ಎಷ್ಟರ ಮಟ್ಟಿಗೆ ಎಂದರೆ ನಾವು ಬಳಸುವ ಲೋಹದ ಕತ್ತರಿ ಅಥವಾ ಚಾಕುವಿನ ಬಲಕ್ಕೆ ಸಮ’ ಎನ್ನುತ್ತಾರೆ ರಾಬರ್ಟ್ ಸ್ಕೋಫೀಲ್ಡ್. ಇದೇ ಸಂಶೋಧನೆ ಹೇಳುವ ಹಾಗೆ ಈ ಲೋಹದ ಸ್ನಾಯುವಿನ ಹಲ್ಲಿನಂತಹ ರಚನೆಯ ಕಾರಣದಿಂದ 100% ಶಕ್ತಿ ಬಳಸಿ ಮಾಡುವ ಕೆಲಸವನ್ನು ಕೇವಲ 60% ಶಕ್ತಿಯನ್ನು ಬಳಸಿ ಮಾಡುವ ಸಾಮರ್ಥ್ಯ ಅದಕ್ಕಿದೆಯಂತೆ. ಇಂತಹ ಶಕ್ತಿಗಳಿಂದಲೇ ಇರಬೇಕು ಇರುವೆಗಳ ಕೈಗೆ ಎಟುಕದ ಆಹಾರ ಪದಾರ್ಥವೇ ಇಲ್ಲ ಎನಿಸುತ್ತದೆ.

ಐರನ್ ಮ್ಯಾನ್, ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್ ಗಳಂತಹ ಲೋಹದಂತೆ ಶಕ್ತಿಯುಳ್ಳ ಮಾನವರನ್ನು ಸೃಷ್ಟಿಸಿ ಕೇವಲ ಸಿನೆಮಾಗಳಲ್ಲಿ ನೋಡಿ ಆನಂದಿಸುವವರು ನಾವು. ಅಂತಹ ಸೂಪರ್ ಇನ್ಸೆಕ್ಟ್ ಗಳನ್ನು ಪ್ರಕೃತಿ ಸಾವಿರ ಸಾವಿರ ಪ್ರಭೇದಗಳಲ್ಲಿ ನಮಗೆ ಅರಿವಿಗೆ ನಿಲುಕದ ಕಾಲದಲ್ಲೇ ಎಲ್ಲೋ ಸೃಷ್ಟಿಸಿಯಾಗಿದೆ. ಅದನ್ನು ನಾವು ಈಗೀಗ ನಮ್ಮ ನರಕೋಶಗಳಲ್ಲಿ ಸೇರಿಸಿಕೊಳ್ಳುತ್ತಿದ್ದೇವೆ ಅಷ್ಟೇ. ಅದಕ್ಕೇ ಹೇಳುವುದು ಯಾವುದೂ ಯಕಃಶ್ಚಿತವಲ್ಲ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.