ಹುಲಿಬೈಲಿನ ತೊರೆ

ಹುಲಿಬೈಲಿನ ತೊರೆ

© ಅರವಿಂದ ರಂಗನಾಥ್

“ಹೊಸ ಮನುಷ್ಯ” ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಒಂಬೈನೂರು ವರುಷಗಳ ಹಿಂದಿನ ಮಾತಿದು, ಅದೊಂದು ದಿನ, ಮೊದಲ ಬಾರಿಗೆ ನನಗೆ ಮಾನವನ ದರುಶನವಾಗಿತ್ತು. ಸುಡು ಸುಡು ಬಿಸಿಲಿಗೆ ಬಳಲಿ ಬೆಂಡಾದ ಯೋಗಿಗಳ ಗುಂಪೊಂದು ನನ್ನನ್ನೇ ಅರಸಿ ಬಂದಂತೆ ಬಂದಿತು. ನನ್ನ ಮಡಿಲಿನಲ್ಲಿ ತುಸು ವಿಶ್ರಾಂತಿ ಪಡೆದಾದ ಬಳಿಕ ಸತ್ಸಂಗ ನಡೆಸಿತು. ಘಟ್ಟದ ಮೇಲಿನ ಬಯಲು ನಾಡಿನ ಕಡೆಯಿಂದ ಬಂದಂಥ ಮಹಾನುಭಾವರ ಆ ಗುಂಪಿನಲ್ಲಿ ತೇಜೋಮಯರಾದ ಓರ್ವರು ನನ್ನಲ್ಲಿರುವ ಜೀವಕಳೆಯ ಆಹ್ಲಾದ ವಾತಾವರಣಕ್ಕೆ ಹರುಷಗೊಂಡು ತಮ್ಮ ಸಂಗಾತಿಗಳನ್ನು ಉದ್ದೇಶಿಸಿ, “ನಾವೆಲ್ಲ, ಕೆಲದಿನಗಳ ಕಾಲ ಈ ತೊರೆಯ ಸಾನಿಧ್ಯದಲ್ಲಿಯೇ ನೆಲಸಬಹುದಲ್ಲವೆ?” ಎಂದು ಅರುಹಿದಾಗ, ಅವರೆಲ್ಲರೂ ಗುರುಗಳ ನಿರ್ಧಾರವನ್ನು ಒಮ್ಮತದಿಂದ ಒಪ್ಪಿ ನನ್ನಲ್ಲಿಯೇ ತಂಗಿದರು. ಆ ಯೋಗಿಯ ಹೆಸರು ಸಿದ್ಧರಾಮಶರಣರೆಂದೂ, ಅವರು ದೂರದ ಕಲ್ಯಾಣದಿಂದ ಬಂದವರೆಂದು ನಂತರದ ದಿನಗಳಲ್ಲಿ ಅವರು ನಡೆಸುತ್ತಿದ್ದ ಶಿವಾನುಭವಗಳಿಂದ ನನಗೆ ತಿಳಿಯಿತು. ಬಂದಂತಹ ಸಂತರ ಜೋಳಿಗೆಗಳಲ್ಲಿದ್ದ ತಾಡೋಲೆಗಳಲ್ಲಿ ಅಮೂರ್ತ ಅನುಭವಗಳನ್ನು ಮೂರ್ತ ರೂಪಕ್ಕೆ ಇಳಿಸಿರುವ ಸಾಹಿತ್ಯದ ನುಡಿಗಟ್ಟುಗಳಿದ್ದವು; ಅವುಗಳನ್ನು ಅವರು ವಚನಗಳೆಂದು ಕರೆಯುತ್ತಿದ್ದರು. ಈ ಶರಣರು, ಉಳವಿಯ ಗೊಂಡಾರಣ್ಯದಲ್ಲಿ ಉಳಿದುಕೊಂಡಿದ್ದ ಚೆನ್ನಬಸವಣ್ಣ ಹಾಗೂ ಅಕ್ಕನಾಗಾಯಿಯನ್ನು ಭೇಟಿಯಾಗಲು ಹೊರಟಿದ್ದರು. ಅನುಭವಿಗಳ ತಂಡ ನನ್ನ ಪರಿಸರದಲ್ಲಿದ್ದಷ್ಟು ದಿನಗಳ ಕಾಲ ಅತ್ಯಂತ ಆನಂದದಿಂದ ಇತ್ತು; ಅವರು ನಡೆಸುತ್ತಿದ್ದ ಸತ್ಸಂಗಗಳಲ್ಲಿ ನಾನೂ ಭಾಗಿಯಾಗಿರುತ್ತಿದ್ದೆ. ಪ್ರತಿ ಗೋಷ್ಠಿಯಲ್ಲಿ ನಾಲ್ಕಾರು ವಚನಗಳ ಕುರಿತು ಚರ್ಚೆ ನಡೆಯುತ್ತಿತ್ತು. ಒಂದು ಮುಂಜಾನೆ, ನನ್ನಲ್ಲಿದ್ದ ನಯನಮನೋಹರ ತಡಸಿಲಿನ ಪಕ್ಕದಲ್ಲಿದ್ದ ವಿಶಾಲವಾದ ಏಕಶಿಲಾ ವೇದಿಕೆಯಲ್ಲಿ ಚರ್ಚೆಗೆ ಎಲ್ಲರೂ ಸೇರಿದ್ದಾಗ ಸಿದ್ಧರಾಮಶರಣರು ಶ್ರೀಶೈಲದೆಡೆಗೆ ಹೋದಂತಹ ಶರಣೆ ಮಹಾದೇವಿಯಕ್ಕನ ವಚನವೊಂದನ್ನು ಹಾಡಿ ತಮ್ಮ ಸಂಗಾತಿಗಳಿಗೆ ವಾಚಿಸಿದರು. ವಚನ ಹೀಗಿತ್ತು “ಚಿಲಿಪಿಲಿ ಎಂದೋಡುವ ಗಿಳಿಗಳಿರಾ ! ಸರವೆತ್ತಿ ಪಾಡುವ ಕೋಗಿಲೆಗಳಿರಾ ! ಎರಗಿ ಬಂದಾಡುವ ದುಂಬಿಗಳಿರಾ! ಕೊಳನ ತಡಿಯಾಡುವ ಹಂಸಗಳಿರಾ ! ಗಿರಿಗುಹ್ವರದೊಳಗಾಡುವ ನವಿಲುಗಳಿರಾ ! ನೀವು ಕಾಣಿರೆ ? ನೀವು ಕಾಣಿರೆ ? ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂಬುದು ಬಲ್ಲಡೆ ನೀವು ಹೇಳಿರೇ ! ”.

ನಿಸರ್ಗದ ಜೊತೆ ತದಾತ್ಮ್ಯತೆಯನ್ನು ಹೊಂದುತ್ತಾ ಶಿವಾನುಭವದ ಸಾಧನೆಗೆ ಅನುವು ಮಾಡಿಕೊಡುತ್ತಿದ್ದ ವಚನಗಾಯನವು ಸಿದ್ಧರಾಮರ ಕಂಠಸಿರಿಯಿಂದ ಸುಶ್ರಾವ್ಯವಾಗಿ ಮೂಡಿ ಬಂದಿತ್ತು; ಭಕ್ತಿಭರಿತ ಹಾಡುಗಾರಿಕೆ ಅಲ್ಲಿ ನೆರೆದಿದ್ದ ಇತರ ಶರಣರನ್ನು ಅನುಭವ ಲೋಕದೊಳಗೆ ತೇಲಿಸಿತ್ತು. ಆ ವಚನವು ಇಂದಿಗೂ ಅನೇಕ ಶತಮಾನಗಳು ಉರುಳಿದರೂ ಈ ಕ್ಷಣವೂ ನನ್ನ ಹೃದಯಕಮಲದಲ್ಲಿ ನಲಿದಾಡುತ್ತಿದೆ.

© ಅರವಿಂದ ರಂಗನಾಥ್

ಇದಾದ ನಂತರ ನಾಲ್ಕು ಶತಮಾನಗಳವರೆಗೆ ನಾನು ಮಾನಿಸರ ಒಂದು ನೆರಳನ್ನೂ ಕಂಡಿರಲಿಲ್ಲ. ಒಂದು ನಸುಕಿನಲ್ಲಿ ವೈಭವಪೋಷಿತ ವಸ್ತ್ರಗಳನ್ನು ಧರಿಸಿದ್ದ ದೊರೆಸಾನಿಯೊಬ್ಬಳು ಪರಿಜನರೊಂದಿಗೆ ನನ್ನ ತಟಾಕಿನಲ್ಲಿ ಮಿಂದು, ಹಿಂದೆ ಸಿದ್ದರಾಮಶರಣರು ವಿರಾಜಮಾನರಾಗಿದ್ದ ಅದೇ ಕಲ್ಲುಹಾಸಿನ ಮೇಲೆ ಕೆಲಹೊತ್ತು ವಿಶ್ರಮಿಸಿದಳು. ಅವಳು ಹಿಂದಿರುಗುವಾಗ ದಡದ ಇಕ್ಕೆಲ್ಲಗಳಲ್ಲಿ ಅಗಾಧವಾಗಿ ಬೆಳೆದ ಮರಗಳನ್ನು ತಬ್ಬಿಕೊಂಡಿದ್ದ ಅಪೂರ್ವ ರುಚಿಯ ಕಾಳುಮೆಣಸಿನ ಬಳ್ಳಿಗಳ ಕೆಲ ತುಂಡುಗಳನ್ನು ಹೊತ್ತೊಯ್ದಳು. ಪರಿಚಾರಿಕೆಯರ ಮಾತುಗಳನ್ನು ಆಲಿಸಿದಾಗ ಸೌಂದರ್ಯವತಿಯೂ, ಧೈರ್ಯಗಿತ್ತಿಯೂ ಆದ ಆ ಮಹಿಳೆ ಗೇರುಸೊಪ್ಪೆಯ ಪ್ರಾಂತ್ಯದ ಕಾಳುಮೆಣಸಿನರಾಣಿ ಚೆನ್ನಭೈರಾದೇವಿಯೆಂದು ತಿಳಿಯಿತು. ರಾಣಿಪರಿವಾರ ಉಲ್ಲಾಸಭರಿತವಾಗಿ ಇಲ್ಲಿಂದ ಕರಾವಳಿಯ ಹೊನ್ನೂರಿನ ಬಸದಿಗಳತ್ತ ತೆರಳಿತು.

ಮತ್ತೆ ನೂರಾರು ವರುಷಗಳು ಗತಿಸಿರಬಹುದು, ದೊರೆಯೊಬ್ಬ ತನ್ನ ಕೆಲ ಸೈನಿಕರೊಂದಿಗೆ ಒಪ್ಪೊತ್ತು ಕಲ್ಲುಹಾಸಿನ ಮೇಲೆ ನಿದ್ರಿಸಿ ಆಯಾಸ ಪರಿಹರಿಸಿಕೊಂಡು ಮುಂದೆ ಹೊರಟ; ಆತನು ಸೋಂದೆಯ ರಾಜ ಸದಾಶಿವಲಿಂಗ ನಾಯಕನಾಗಿದ್ದ. ತನ್ನ ರಾಜ್ಯದ ವಾಯುವ್ಯ ಗಡಿಯಲ್ಲಿ ಕಾಳಿನದಿಯು ಶರಧಿಯನ್ನು ಸೇರುವಲ್ಲಿರುವ ಚಿತ್ತಾಕುಲಾ ಬೆಟ್ಟದ ಮೇಲೆ ಕೋಟೆ ಕಟ್ಟಿಸಿ ತನ್ನ ಪ್ರಾಂತ್ಯದ ರಾಜಧಾನಿ ಸೋಂದೆಗೆ ವಾಪಸಾಗುವ ಮುನ್ನ ಉಳವಿ ಚೆನ್ನಬಸವಣ್ಣನ ಗದ್ದುಗೆಗೆ ನಮಿಸುವ ಬಯಕೆ ಅವನದಾಗಿತ್ತು. ಹೋಗುವ ಮುಂಚೆ ನಾನಿರುವ ಸ್ಥಳದಲ್ಲೂ ತನ್ನ ಪ್ರಾಂತ್ಯದ ಗಡಿಗುರುತುಗಳನ್ನು ಹಾಕಿಸಿದ. ಹೀಗೆ ಕೆಲವರ್ಷಗಳಾದ ನಂತರ ಮತ್ತೊಂದು ಮಧ್ಯಾಹ್ನ ಒಬ್ಬ ಬಿಳಿ ಬಣ್ಣದ ವ್ಯಕ್ತಿಯೊಬ್ಬ ಬಂದ; ಅವನ ವೇಷಭೂಷಣವು ಚಿತ್ರವಿಚಿತ್ರವಾಗಿತ್ತು. ಕಾಲಿಗೆ ಉದ್ದನೆಯ ಬೂಟುಗಳನ್ನು ಧರಿಸಿ, ತಲೆಗೆ ವರ್ತುಲಾಕಾರದ ಟೊಪ್ಪಿ ಹಾಕಿಕೊಂಡು, ಕೈಯಲ್ಲಿ ಮಸೂರ ಹಾಗೂ ಇನ್ನಿತರ ಲೇಖನಿ ಸಾಮಗ್ರಿಗಳನ್ನು ಹಿಡಿದುಕೊಂಡಿದ್ದ; ಅವನೊಂದಿಗೆ ನಾಲ್ಕಾರು ಸೇವಕರೂ ಇದ್ದರು. ಆತನ ಹೆಸರು ಫ್ರಾನ್ಸಿಸ್ ಬುಕಾನನ್ ಎಂದೂ, ಈತ ಮಾತನಾಡುವ ಭಾಷೆ ಆಂಗ್ಲವೆಂದೂ ತಿಳಿಯಿತು. ಜನಜೀವನ, ಕಾಡು, ನದಿ, ಬೆಟ್ಟಗುಡ್ಡ, ಸಮುದ್ರತೀರ, ಸಸ್ಯಗಳನ್ನು ಮೋಜಣಿ ಮಾಡುತ್ತಾ ದೂರದ ಮದ್ರಾಸಿನಿಂದ ಕಾಲ್ನಡಿಗೆಯಿಂದಲೇ ಬುಕಾನನ್ ಬಂದಿದ್ದ. ಆತನ ತಂಡವು ನನ್ನಲ್ಲಿರುವ ಸಸ್ಯರಾಶಿಗಳ ಮಾಹಿತಿಗಳನ್ನು ಕಲೆಹಾಕ ತೊಡಗಿತು. ಈತ ಬಹುಸಾಹಸಿ ಎನ್ನುವುದು ನನ್ನಲ್ಲಿರುವ ಎತ್ತರದ ಜಲಪಾತವನ್ನು ನೋಡಿ, “ಓಹೋ…” ಎಂದವನೇ ಅದರ ತುದಿಯಿಂದ ಒಂದೇ ಸಾರಿಗೆ ‘ದುಡುಂ’ ಎಂದು ಮಡುವಿನ ಆಳಕ್ಕೆ ಧುಮುಕಿದಾಗ ನನಗೆ ಅರಿವಾಯಿತು. ಜಲಧಾರೆಯ ತುತ್ತತುದಿಯಿಂದ ಪ್ರಾಣಿಯೊಂದು ಹೀಗೆ ಧುಮುಕಿದ್ದನ್ನು ಮೊದಲ ಬಾರಿಗೆ ಕಂಡು ಮೂಕವಿಸ್ಮಿತನಾದೆ. ಬುಕಾನನ್ ಮಡುವಿನಲ್ಲಿ ಮನಸೋಯಿಚ್ಛೆ ಈಜಾಡಿ, ಜಲಪಾತದ ದಬದಬೆಗೆ ಮೈಯೊಡ್ಡಿ ಮೈಮನಗಳನ್ನು ಹಗುರಮಾಡಿಕೊಂಡು ಕಣಿವೆಯ ಮತ್ತೊಂದು ತುದಿಯಲ್ಲಿರುವ ಕವಳಾ ಗುಹೆಗಳ ಸಮೀಪದ ನಾಗಝರಿ ಕೊಳ್ಳದಲ್ಲಿ ಧುಮುಕುವ ಜಲಪಾತಗಳತ್ತ ತನ್ನ ಸಹಚರರೊಡನೆ ನಡೆದ.

© ಅರವಿಂದ ರಂಗನಾಥ್

ಬುಕಾನನ್ ಬಂದು ಹೋಗಿ ಕೆಲದಶಕಗಳೇ ಸರಿದು ಹೋದ ದಿನಗಳವು. ಸೂರ್ಯನು ನೆತ್ತಿ ಸುಡುವ ಮಧ್ಯಾಹ್ನವೊಂದರಲ್ಲಿ ತಂಪಾಗಿ ಮೌನದಿಂದ ಹರಿಯುತ್ತಿದ್ದ ನನ್ನ ಬಳಿಗೆ, ತಂಬೂರಿ ಮೀಟುತ್ತಾ ಹಾಡುತ್ತಾ ಕುಣಿಯುತ್ತಾ ಮಹಾನುಭಾವರೊಬ್ಬರು ಹತ್ತಾರು ಶಿಷ್ಯಬಳಗದೊಂದಿಗೆ ಬಂದು, ಮತ್ತೆ ಅದೇ ಕಲ್ಲುಹಾಸಿನ ಮೇಲೆ ವಿಶ್ರಾಂತಿಗಾಗಿ ತಂಗಿದರು. ಉದ್ದನೆಯ ಗಡ್ಡವನ್ನು ಬಿಟ್ಟು ಹಸಿರು ಹೊದಿಕೆಯನ್ನು ತೊಟ್ಟಂತಹ ಆ ಸಂತ ಅಪೂರ್ವ ತತ್ವಪದಕಾರ ಶಿಶುನಾಳ ಶರೀಫರಾಗಿದ್ದರು; ಶರೀಫರು ಕುಂದಗೋಳದಿಂದ ಉಳವಿಯತ್ತ ಜಾತ್ರೆಗೆ ಹೊರಟಿದ್ದರು. ಹೊರಗೆ ಚಳಿಗಾಲ ಮುಗಿಯುವ ಹಂತಕ್ಕೆ ಬಂದು ಬಿರು ಬಿಸಿಲೇರಿದ್ದರೂ, ನನ್ನ ಪರಿಸರದ ಮಡಿಲಿನಲ್ಲಿನ ನೆರಳಿನ ತಂಪು ಅವರಿಗೆ ತುಂಬಾ ಹಿಡಿಸಿ, ಆ ಆನಂದದಲ್ಲಿಯೇ “ಉಳವಿs…ಜಾತ್ರೆಗೆ ಹೋಗೋಣs….ತಿಳಿದು ಬ್ರಹ್ಮದ ಬಯಲೊಳಗಾಡೋಣs… ನಮ್ಮs…ಉಳವಿs..ಜಾತ್ರೆಗೆ ಹೋಗೋಣs ಒಮ್ಮನದಿಂದಲಿ…ಶ್ರೀಚೆನ್ನಬಸವನ ರಮ್ಯದ ವನವನವ ಗಮ್ಯನೆ ನೋಡುತಾ ಉಳವಿs ಜಾತ್ರೆಗೆ ಹೋಗೋಣs”  ಎನ್ನುವ ಅರ್ಥಗರ್ಭಿತ ಪದವನ್ನು ಸ್ಥಳದಲ್ಲೇ ರಚಿಸಿ, ತಂಬೂರಿಯನ್ನು ಮೀಟುತ್ತಾ, ಕುಣಿಯುತ್ತಾ ನಲಿಯುತ್ತಾ ಉಳವೀಶನತ್ತ ತೆರಳಿದರು.

ಶರೀಫರ ಭೇಟಿಯ ತರುವಾಯ ಮನುಷ್ಯರ ಒಡನಾಟ ನನ್ನೊಂದಿಗೆ ಹೆಚ್ಚಾಗುತ್ತಾ ಹೋಯಿತು. ಶರೀಫಜ್ಜನಿಗೆ ದಾರಿ ತೋರಿಸಲು ಬಂದಿದ್ದ ಸಮೀಪದಲ್ಲಿರುವ ‘ಕೊಡ್ತಹಳ್ಳಿ’ ಎಂಬ ಗ್ರಾಮದ ರೈತರಲ್ಲಿನ ಕೆಲವರು ಮುಂದಿನ ವರುಷಗಳಲ್ಲಿ ನನ್ನ ಸುತ್ತ ಪ್ರಸಕ್ತವಾದ ಭೂಮಿಯನ್ನು ಆರಿಸಿ ಉಳುಮೆ ಮಾಡತೊಡಗಿದರು. ಮಳೆಗಾಲದಲ್ಲಿ ವೇಗದಿಂದ ಹರಿದು ಹೋಗುತ್ತಿದ್ದ ಹೆಚ್ಚಿನ ನೀರನ್ನು ತಮ್ಮ ಜಮೀನುಗಳಿಗೆ ಹಾಯಿಸಿ ಭತ್ತ ಬೆಳೆಯತೊಡಗಿದರು; ಕುಟುಂಬಗಳು ಹೆಚ್ಚಾದಂತೆ ಇಲ್ಲಿಯೂ ಚಿಕ್ಕ ಗ್ರಾಮವೇ ಹುಟ್ಟಿಕೊಂಡಿತು. ಇಲ್ಲಿ ಹುಲಿಗಳು ನೀರು ಕುಡಿಯಲು ಹಾಗೂ ವಿಶ್ರಮಿಸಲು ಬರುತ್ತಿದ್ದರಿಂದ ಈ ಗ್ರಾಮಕ್ಕೆ ‘ಹುಲಿಬೈಲು’ ಎಂದು ಹೆಸರಾಯಿತು. ಈ ಹಿಂದೆ ಇಲ್ಲಿಗೆ ಬಂದಿದ್ದ ಸಿದ್ಧರಾಮಶರಣ ಮಗ್ಗುಲಲ್ಲಿರುವ ಬೆಟ್ಟದ ತುದಿಯಲ್ಲಿ ತುಸುದಿನಗಳ ಕಾಲ ತಂಗಿದ್ದನೆಂಬ ಪ್ರತೀತಿ ಇದ್ದುದರಿಂದ ಗುಡ್ಡವನ್ನು ಗ್ರಾಮಸ್ಥರು ‘ಅಡವಿಸಿದ್ದೇಶ್ವರಬೆಟ್ಟ’ ವೆಂದು ಕರೆಯಹತ್ತಿದರು. ಈ ಬೆಟ್ಟದ ಒಂದು ಕೊರಕಲಿನಲ್ಲಿ ಝರಿಯ ರೂಪದಲ್ಲಿ ಹುಟ್ಟಿ ಅನೇಕ ತಡಸಲುಗಳಾಗಿ, ಜಲಪಾತಗಳಾಗಿ ಕೆಳಗಡೆ ಧುಮುಕಿ, ಹರಿದು ತಪ್ಪಲಿನಲ್ಲಿರುವ ಹುಲಿಬೈಲು ಗ್ರಾಮದ ಮೂಲಕ ನಾಲ್ಕೈದು ಮೈಲುಗಳಷ್ಟು ಬಳುಕಿ ಹರಿದು ಮುಂದೆ ಕಪ್ಪು ಸುಂದರಿ ಎಂದೇ ಖ್ಯಾತಳಾದ ಕಾಳಿಯ ಒಡಲು ಸೇರುವ ತೊರೆಯಾದ ನನ್ನನ್ನು ‘ಅಳಶ್ಯಾ ಹೊಳೆ’ ಎಂದು ಕರೆದರು. ಗ್ರಾಮದ ಜನರು ನನ್ನ ಜೊತೆ ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಹುಲಿಬೈಲಿನ ರೈತರೆಲ್ಲ ಒಂದು ಬಾರಿ ಘಟ್ಟದ ಮೇಲಿನ ಶಿರಸಿ ಪಟ್ಟಣಕ್ಕೆ ಗಾಂಧೀಜಿಯ ಭಾಷಣ ಕೇಳಲು ಹೋಗಿ ಬಂದಿದ್ದರು. ಭಾಷಣವನ್ನು ಆಲಿಸಿದ್ದ ಅವರೆಲ್ಲ ತುಂಬಾ ಹರುಷದಿಂದ ಇನ್ನೇನು ಕೆಲ ಕಾಲದಲ್ಲೇ ತಮಗೆಲ್ಲ ಕುಂಪಣಿ ಸರ್ಕಾರದ ಬಾಧೆಯಿಂದ ಸ್ವಾತ್ರಂತ್ರ್ಯ ಸಿಕ್ಕಿ ಭರತ ಭೂಮಿ ಮತ್ತೆ ಒಂದಾಗಿ; ನಮ್ಮದೇ ಸ್ವರಾಜ್ಯವನ್ನು ರಚಿಸಿಕೊಂಡು ನಮ್ಮ ಬದುಕನ್ನು ಶಿರಸಿ ಪಟ್ಟಣದ ಬದುಕಿನಂತೆಯೇ ಹಲವೊಂದು ಅನುಕೂಲತೆಗಳಿಂದ ಹಸನುಗೊಳಿಸಿಕೊಂಡು ನೆಮ್ಮದಿಯಿಂದ ಜೀವಿಸಬಹುದೆಂದು ವಿಚಾರ ಮಾಡುತ್ತಿದ್ದರು.

© ಅರವಿಂದ ರಂಗನಾಥ್

ಗಾಂಧೀಜಿಯ ಭಾಷಣವಾಗಿ ಒಂದೆರೆಡು ದಶಕಗಳು ಕಳೆದಾದ ನಂತರ ಸ್ವಾತಂತ್ರ್ಯ ಘೋಷಣೆ ಆಯ್ತು; ಅದು ಆಗುವುದೆ ತಡ, ಹುಲಿಬೈಲಿನ ಗ್ರಾಮದ ಚಾವಡಿಯ ಮೇಲೆ ತ್ರಿವರ್ಣ ಧ್ವಜವು ಹಾರಾಡಿತು; ಎಲ್ಲರೂ “ಭಾರತ ಮಾತಾಕಿ ಜೈ” ಅಂದು ಕೂಗಿದರು. ಗ್ರಾಮದಲ್ಲಿ ಅನೇಕ ಬದಲಾವಣೆಗಳು ಆಗತೊಡಗಿದವು. ಶಾಲೆ, ಗ್ರಂಥಾಲಯ, ಆಸ್ಪತ್ರೆಗಳು ಸ್ಥಾಪನೆಗೊಂಡವು. ಅಧಿಕಾರಿಗಳು ಕುಡಿಯುವ ನೀರಿಗಾಗಿ ಬಾವಿ ತೋಡಲು ಬಂದಾಗ ಗ್ರಾಮಸ್ಥರು, “ನಮಗೆ ಅಳಶ್ಯಾ ಹೊಳೆ ಇದೆ ಅದರ ಸಿಹಿಯಾದ ಶುದ್ಧ ನೀರು ಸರ್ವಕಾಲಕ್ಕೂ ಸಿಗುತ್ತದೆ ಆದ್ದರಿಂದ ಬಾವಿಯು ಗ್ರಾಮಕ್ಕೆ ಬೇಡ” ವೆಂದು ಅಧಿಕಾರಿಗಳನ್ನು ವಾಪಾಸ್ ಕಳಿಸಿದರು. ಆ ಕಾಲದಲ್ಲಿ ಮತ್ತೊಬ್ಬ ಪ್ರಸಿದ್ಧ ವ್ಯಕ್ತಿ ಹುಲಿಬೈಲಿಗೆ ಭೇಟಿಕೊಟ್ಟಿದ್ದರು. ಆ ಭೇಟಿ ಬಹು ರೋಚಕವಾದದ್ದಾಗಿತ್ತು. ಇನ್ನೇನೂ ಮಳೆಗಾಲ ಮುಗಿದು ಕಾರ್ತಿಕ ಮಾಸ ಶುರುವಾಗುವುದರಲ್ಲಿತ್ತು; ಗ್ರಾಮದ ಹಿರಿಯರೊಬ್ಬರು ನನ್ನ ಮಡಿಲಿನ ಅದೇ ವಿಶಾಲವಾದ ಕಲ್ಲುಹಾಸನ್ನು ತಮ್ಮೊಡನೆ ಬಂದಂಥ ಅತಿಥಿ ಮಹಾಜನರಿಗೆ ತೋರಿಸಿದರು. ಬಂದ ತಂಡವು ಬಹು ಸಂತೋಷದಿಂದ ಹಾಸಿನ ಮೇಲೆ ಗುಡಾರಗಳನ್ನು ಹಾಕಿ ಠಿಕಾಣಿ ಹೂಡಿತು. ತಂಡದ ಮುಖ್ಯಸ್ಥರು ಸಣಕಲು ದೇಹದ ಕೋಲು ಮುಖವನ್ನು ಹೊತ್ತು ಕನ್ನಡಕಧಾರಿಯಾಗಿದ್ದರು. ಅವರ ಬಳಿಯಲ್ಲಿ ದುರ್ಬೀನು ಹಾಗೂ ಕ್ಯಾಮರಾಗಳಿದ್ದವು. ಈ ಮಹಾನುಭಾವರ ಹೆಸರು ಸಲೀಂ ಅಲಿ ಎಂದೂ, ಭರತಖಂಡದ ಶ್ರೇಷ್ಠ ಪಕ್ಷಿತಜ್ಞರೆಂದೂ ನಂತರ ಗೊತ್ತಾಯಿತು. ಸಲೀಂ ಅಲಿ ಬಂದ ಕೂಡಲೆ ಒಂಚೂರೂ ವಿಶ್ರಮಿಸದೆ ಹಕ್ಕಿಗಳನ್ನು ಗುರುತಿಸುತ್ತಾ, ಅವುಗಳ ಗರಿ, ಬಣ್ಣ, ಕಣ್ಣು, ಕಾಲು, ಕೂಗು ಹಾಗೂ ಇನ್ನಿತರ ವಿವರಗಳನ್ನು ಹೇಳುತ್ತಾ ಸಹಾಯಕರಿಗೆ ದಾಖಲಿಸಿಕೊಳ್ಳಲು ಸೂಚಿಸುತ್ತಿದ್ದರು. ನನ್ನ ಪರಿಸರದ ಜೀವ ವೈವಿಧ್ಯತೆಯ ವಿಶಿಷ್ಠತೆಗೆ ಬೆರೆಗುಗೊಂಡ ಸಲೀಂ ಅಲಿ ತಾನು ನೋಡಿದ ಅಪೂರ್ವ ತಾಣಗಳಲ್ಲಿ ಇದೂ ಕೂಡ ಒಂದು ಎಂದು ತಮ್ಮ ಸಂಗಾತಿಗಳಿಗೆ ಮಾಡುತ್ತಿದ್ದ ನನ್ನ ವೈಭವದ ವರ್ಣನೆಯನ್ನು ಕೇಳಿ ನನಗೆ ನಾನೆ ಸಂಭ್ರಮಿಸಿದೆ. ಸಲೀಂ ಅಲಿ ಬಂದಾಗ ಹುಣ್ಣಿಮೆಯ ದಿನಗಳಾಗಿದ್ದವು. ಅವರು ಇರುಳಿನಲ್ಲಿಯೂ ಹಕ್ಕಿಗಳನ್ನು ಗುರುತಿಸಿ ವಿವರಗಳನ್ನು ದಾಖಲಿಸುತ್ತಿದ್ದರು. ಪಕ್ಷಿತಜ್ಞರ ತಂಡ ಹೊರಡುವ ಕೊನೆಯ ದಿನದ ನಸುಕಿನ ಹೊತ್ತಲ್ಲಿ, ಅಡವಿಯಲ್ಲಿ ಇನ್ನೂ ಸೂರ್ಯನ ಪ್ರಥಮ ಚುಂಬನದ ಸ್ಪರ್ಶವೂ ಆಗಿರಲಿಲ್ಲ, ಬಾಲರವಿಯನ್ನು ಸ್ವಾಗತಿಸಲು ಬಿದಿಗೆ ಚಂದ್ರಮನು ಆಗಸದಲ್ಲಿ ಇನ್ನೂ ನಗುತ್ತಾ ತೇಲುತ್ತಿದ್ದ. ಬೆಳ್ಳಿ ಚುಕ್ಕಿ ಇನ್ನೂ ಪ್ರಕಾಶಮಾನವಾಗಿ ಮಿನುಗುತ್ತಿತ್ತು. ಅಂತಹ ಆಹ್ಲಾದಕರ ವಾತಾವರಣದಲ್ಲಿ ದಂಡೆಯ ಮೇಲಿದ್ದ ಹೊಳೆಮತ್ತಿ ಮರದಿಂದ ಸುಮಧುರವಾದ ಸಿಳ್ಳೆಯ ಧ್ವನಿಯು ಕೇಳಲಾರಂಭಿಸಿತು. ಪಕ್ಷಿತಜ್ಞರೆಲ್ಲರೂ ಅಚ್ಚರಿಯಿಂದ ಕಿವಿಗಳನ್ನು ನಿಮಿರಿಸಿಕೊಂಡು, ಕಣ್ಣುಗಳನ್ನು ಅಗಲಿಸಿ ಆ ಇನಿದನಿಯು ಹೊಮ್ಮುತ್ತಿದ್ದ ಜಾಗದತ್ತ ನೋಡಿದರು. ಅವರಿಗೆ ಅಲ್ಲಿ ಏನೂ ಕಾಣಲಿಲ್ಲ. ದನಿ ಮತ್ತೆ ಮತ್ತೆ ಅಲೆ ಅಲೆಯಾಗಿ ಮಾರ್ರ್ಧನಿಸತೊಡಗಿತು. ಈ ಸಿಳ್ಳನ್ನು ನಾನು ಹುಟ್ಟಿದಾಗಿನಿಂದ ಕೇಳುತ್ತಿದ್ದ ಕಾರಣ ನನಗೇನು ಅದು ವಿಶೇಷವೆನಿಸದಿದ್ದರೂ, ಹಕ್ಕಿಯ ಹಾಡುಗಾರಿಕೆಯ ವಿಶಿಷ್ಠತೆಯು ನನ್ನ ಈ ಮನೆಯ ಹೆಮ್ಮೆಯರೂಪದ ಗರಿ ಎಂದಂತೂ ನಾನು ಭಾವಿಸಿದ್ದೆ. ಆ ಹಕ್ಕಿಯ ಸಾಕಷ್ಟು ಕುಟುಂಬಗಳು ನನ್ನ ಒಡಲಿನಲ್ಲಿಯೇ ವಾಸವಾಗಿದ್ದರಿಂದ ಅವುಗಳ ಪರಸ್ಪರ ಪ್ರೀತಿ ಪ್ರಣಯ, ಗೂಡು ಕಟ್ಟುವುದು ಹಾಗೂ ಬಾಣಂತನಗಳನ್ನು ನಾನು ಚಿಕ್ಕಂದಿನಿಂದ ನೋಡುತ್ತಲೇ ಬಂದಿದ್ದೆ. ತುಸು ಹೊತ್ತಿನ ನಂತರ ಟೊಂಗೆಯೊಂದರಲ್ಲಿ ಉಲಿಯುತ್ತಿರುವ ಹಕ್ಕಿಯು ಅಸ್ಪಷ್ಟವಾಗಿ ಸಲೀಂ ಅಲಿಗೆ ಮೊದಲು ಗೋಚರಿಸಿದಾಗ ಅವರ ಪುಟ್ಟ ಮುಖ ಮೊರದಗಲದಂತಾಗಿ ಪಿಸುದನಿಯಲ್ಲಿ ಇತರರಿಗೆ ಸನ್ನೆ ಮಾಡಿ, ಹತ್ತಿರ ಕರೆದು “ನೋಡಿ…ಅತ್ತ…ಆs.. ಟಿಸಿಲೊಡೆದ ಟೊಂಗೆಯ ಮೇಲೆ” ಎಂದು ತೋರಿಸಿದರು. ಅವರೆಲ್ಲ “ಹೋ, ಗ್ರೇಟ್.. ಗ್ರೇಟ್..” ಎಂದು ಉದ್ಗಾರ ತೆಗೆದು ಅದು ಕಂಡ ಭಾಗ್ಯಕ್ಕೆ ಸಂತೋಷಗೊಂಡು ಕುಣಿದಾಡತೊಡಗಿದರು. ಸಲೀಂ “ಶ್..ಹಕ್ಕಿ ಹಾರಿಹೋಗುತ್ತದೆ ಸುಮ್ಮನಿದ್ದು ನೋಡಿ” ಎಂದು ಸಣ್ಣದಾಗಿ ಗದರಿಸಿ ತುಂಬಾ ಚುರುಕಿನಿಂದ ಬೆಳಕಾಗುವವರೆಗೆ ಅದನ್ನು ಹಿಂಬಾಲಿಸುತ್ತಾ ವಿವರಗಳನ್ನು ಸಂಗ್ರಹಿಸಿದರು. ಸುಶ್ರಾವ್ಯವಾಗಿ ಹಾಡುತ್ತಿದ್ದ ನೇರಳೆಮಿಶ್ರಿತ ಬಣ್ಣದ ಹಾಡುಗಾರ ಹಕ್ಕಿಗೆ ಸಲೀಂ ಇತರರೊಂದಿಗೆ ಸಮಾಲೋಚಿಸಿ ಮಲಬಾರ್ ವಿಷಲಿಂಗ್ ತ್ರಷ್’ ಎಂದು ಕರೆದರೆ ಅವರ ಜೊತೆಗಿದ್ದ ಸ್ಥಳೀಯರೊಬ್ಬರು ಅಚ್ಚಕನ್ನಡದಲ್ಲಿ “ಅಯ್ಯೋ, ಅದು ಮಲೆನಾಡ ಸಿಳ್ಳಾರ !”  ವೆಂದು ಉದ್ಗರಿಸಿದರು.

© ಅರವಿಂದ ರಂಗನಾಥ್

       ಸಲೀಂ ಅಲಿ ಭೇಟಿ ನೀಡಿ ಒಂದೆರೆಡು ದಶಕಗಳಾಗಿದ್ದವೇನೋ? ಅದೊಂದು ದಿನ ಆಷಾಢದ ಕಾರ್ಮೋಡಗಳು ಒಟ್ಟಾಗಿ ಹುಲಿಬೈಲಿನ ಮೇಲೆ ಮುಗಿಬೀಳುವಂತೆ ಘರ್ಜಿಸುತ್ತಿದ್ದವು. ಮಧ್ಯಾಹ್ನವೇ ಸಂಜೆಯ ಮಬ್ಬುಗತ್ತಲು ಕವಿದಿತ್ತು, ಸಮಾನಾಂತರದಲ್ಲಿ ನೆಗೆಯುತ್ತಿದ್ದ ಮಿಂಚುಗಳೇ ತುಸು ಬೆಳಕನ್ನು ಹರಡುತ್ತಿದ್ದವು. ಊರ ಗೌಡರು ರಾಮಲಿಂಗೇಶ್ವರ ಗುಡಿಯ ಮುಂದುಗಡೆಯಿರುವ ಗ್ರಾಮಚಾವಡಿಯ ಅಂಗಳದಲ್ಲಿ ಗ್ರಾಮಸ್ಥರ ಸಭೆಯೊಂದನ್ನು ಕರೆದಿದ್ದರು. ಅಲ್ಲಿ ನೆರೆದಿದ್ದವರ ಮುಖಗಳಲ್ಲಿ ದುಗುಡವನ್ನು ತುಂಬಿಕೊಂಡೆ ಕುಳಿತ್ತಿದ್ದರು. ಮ್ಲಾನವದನರಾಗಿದ್ದ ಗೌಡರು ಮಾತನಾಡುತ್ತಾ, “ನೋಡಿ, ಶಿರಸಿಯಿಂದ ಬಂದ ಸರಕಾರದ ನೋಟಿಸು ಇದು…. ಕಣಿವೆಯ ಆ ತುದಿಯಲ್ಲಿರುವ ‘ಅಮಗೆ’ಮಜಿರೆಯಲ್ಲಿ ವಿದ್ಯುತ್ ಯೋಜನೆಯನ್ನು ಸರಕಾರವು ಪ್ರಾರಂಭಿಸಲಿದೆಯಂತೆ. ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಬರುವ ನೌಕರಸ್ತರಿಗೆ ವಸತಿಗಳು ಹಾಗೂ ಇತರ ಕಚೇರಿಗಳಿಗಾಗಿ ನಮ್ಮ ಗ್ರಾಮವನ್ನು ಆರಿಸಿದ್ದಾರೆ. ಇದರಿಂದಾಗಿ ಹುಲಿಬೈಲನ್ನು ನಾವು ದೇಶದ ಒಳಿತಿಗಾಗಿ ತೆರವುಗೊಳಿಸಬೇಕಿದೆ. ನಮಗೆ ಸರಕಾರವು ಕಣಿವೆಯ ಕೆಳತುದಿಯಲ್ಲಿರುವ ‘ಜಮಗೆ‘ ಮಜಿರೆಯಲ್ಲಿ ಪುನರ್ವಸತಿ ಕಲ್ಪಿಸಲಿದೆಯಂತೆ” ಎಂದು ನೋಟಿಸನ್ನು ಓದಿ ಹೇಳಿದರು. ಬರಸಿಡಿಲಿನಂತೆ ಬಂದೆರಗಿದ ಸರಕಾರದ ಆದೇಶಕ್ಕೆ ಗ್ರಾಮಸ್ಥರು ಹೌಹಾರಿ ತಮ್ಮ ತಲೆಯಮೇಲೆ ಕೈಯಿಟ್ಟುಕೊಂಡರು. ನಾಲ್ಕಾರು ತಿಂಗಳುಗಳ ನಂತರ ಗ್ರಾಮಸ್ಥರು ಗ್ರಾಮ ತೆರವುಗೊಳಿಸುವ ಮುನ್ನ ತಮ್ಮ ಆರಾಧ್ಯ ದೈವ ಹುಲಿಬೈಲಿನ ರಾಮಲಿಂಗೇಶ್ವರನಿಗೆ ಕೊನೆಯ ಪೂಜೆ ಸಲ್ಲಿಸಿ ಗಂಟು ಮೂಟೆ, ಜಾನುವಾರುಗಳೊಂದಿಗೆ ಭಾರವಾದ ಹೃದಯಗಳಿಂದ ಜಮಗೆ ಮಜಿರೆಗೆ ತೆರಳಿದರು. ಊರಿಗೆ ಊರೇ ಖಾಲಿಯಾಯಿತು.

ಹುಲಿಬೈಲಿನ ನಿವಾಸಿಗಳು ಜಮಗೆ ಮಜಿರೆಗೆ ಸ್ಥಳಾಂತರಗೊಂಡ ಕೆಲವರುಷಗಳಲ್ಲೇ ಯೋಜನೆಯ ಕಾಮಗಾರಿ ಇಲ್ಲಿ ಪ್ರಾರಂಭವಾಯಿತು. ದೇಶದ ವಿವಿಧೆಡೆಯಿಂದ ಸಾವಿರಾರು ಕಾರ್ಮಿಕರು ಹಾಗೂ ಅಧಿಕಾರಿಗಳು ಬಂದು ನಾನು ಹರಿಯುವ ಸುತ್ತಮುತ್ತಲೂ ನಾಗರಿಕ ಸೌಲಭ್ಯಗಳಿಂದ ಸುಸಜ್ಜಿತವಾದ ಭವ್ಯ ಬಡಾವಣೆಯೊಂದನ್ನು ಕಟ್ಟಿಕೊಂಡು ವಾಸಮಾಡತೊಡಗಿದರು. ಹುಲಿಬೈಲಿಗೆ ‘ನಿಸರ್ಗಮನೆ’ ಎಂಬ ಆಕರ್ಷಕ ಹೆಸರಿಟ್ಟು ಮರುನಾಮಕರಣ ಮಾಡಿಕೊಂಡು ಹುಲಿಗಳ ಸಂಚಾರವನ್ನು ನಿರ್ಬಂಧಿಸಲು ಬಡಾವಣೆಯ ಸುತ್ತ ಪಗಾರ ಕಟ್ಟಿಕೊಂಡರು. ರಾಮಲಿಂಗೇಶ್ವರನ ಪ್ರಾಚೀನ ಶಿಲೆಯ ಲಿಂಗವನ್ನು ಬದಲಿಸಿ ಹೊಸ ಕೆತ್ತನೆಯ ಲಿಂಗವನ್ನು ಪಟ್ಟಣದಿಂದ ಕರೆತಂದ ಪುರೋಹಿತರ ಮಂತ್ರಘೋಷಗಳ ನಡುವೆ ಪ್ರತಿಷ್ಠಾಪಿಸಿದರು; ಪೂಜೆಗಾಗಿ ಹೊಸ ಪೂಜಾರಿಯನ್ನು ನೇಮಿಸಿದರು.

ನನ್ನ ಸುತ್ತಮುತ್ತ ಬರೀ ಹೊಸಬರನ್ನು ನೋಡಿ ನಾನು ತುಸು ಹೆದರಿದ್ದೆ; ಮುಗ್ಧ ಗ್ರಾಮಸ್ಥರಿಲ್ಲದ ಮೊದ ಮೊದಲಿನ ದಿನಗಳು ನನಗೂ ಬೇಸರ ತಂದವು. ಆಗಾಗ ಗುಡಿಯ ಭಜನೆಯಲ್ಲಿ ಬಾರಿಸುತ್ತಿದ್ದ ಗುಮಟೆಪಾಂಗ್ ವಾದನದ ಧ್ವನಿ ಕೇಳಿಸಿದಂತಾಯಿತು. ರೈತರಿದ್ದಾಗ ಹೊಲಗಳಲ್ಲಿನ ಭತ್ತದ ತೆನೆಗಳು ಒಡೆದು ಮಂದ ಗಾಳಿಗೆ ಅತ್ತಿಂದಿತ್ತ ಓಲಾಡಿದಾಗ ಬರುತ್ತಿದ್ದ ಸಜೀವ ಸಸ್ಯ ಪರಿಮಳ ಇಲ್ಲವಾಗಿತ್ತು. ನನ್ನ ಪಾಡಿಗೆ ಹರಿಯುತ್ತಿದ್ದ ನನ್ನ ಸಹಜ ಲಯ ದಬಿಗಳನ್ನು ಹಾಳುಗೆಡವದೆ ತಮ್ಮ ಕೃಷಿ ಕಾಯಕವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರ ಶಾಂತಚಿತ್ತ ಮುಖಗಳ ನೆನೆಪುಗಳು ಹೃದಯದ ಆಳದಲ್ಲಿ ಒತ್ತರಿಸಿ ಬರತೊಡಗಿದ್ದವು. ದಿನಗಳು ಕಳೆದಂತೆ ದೇಶಕ್ಕೆ ಬೆಳಕನ್ನು ನೀಡಬಂದ ನಿಸರ್ಗಮನೆಯ ಹೊಸ ಹೊಸ ಮುಖಗಳಿಗೆ ಹೊಂದಿಕೊಂಡು ಅವರ ಓಡಾಟ, ನಲಿದಾಟ ಹಾಗೂ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಖುಷಿಪಡಲು ಪ್ರಯತ್ನಿಸತೊಡಗಿದೆ. ನೌಕರರೂ ಕೂಡಾ ನನ್ನ ಸೌಂದರ್ಯಕ್ಕೆ ಮಾರುಹೋಗಿ ನನ್ನನ್ನು ಹೆಚ್ಚಿಗೆ ಕಾಡದೆ, ತಾವು ಹಾದಾಡಲು ಬೇಕಾದಷ್ಟೆ ಸೇತುವೆಗಳನ್ನು ಕಟ್ಟಿಕೊಂಡರು; ನನ್ನಲ್ಲಿರುವ ಸಸ್ಯರಾಶಿ, ಪ್ರಾಚೀನ ಶಿಲೆಗಳಿಗೆಲ್ಲ ಕೈಹಾಕದೆ ನನ್ನ ರೂಪಕ್ಕೆ ಯಾವುದೇ ಚ್ಯುತಿ ತರಲಿಲ್ಲ. ಪಕ್ಕದಲ್ಲಿ ಉದ್ಯಾನವನಗಳನ್ನು ನಿರ್ಮಿಸಿದರು. ಅಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳ ಕಲವರದೊಂದಿಗೆ ನಾನು ನಲಿದೆ.

© ಅರವಿಂದ ರಂಗನಾಥ್

ನಾನೊಂದು ಮಧ್ಯಮಗಾತ್ರದ ತೊರೆಯಾದರೂ ಹುಲಿಬೈಲಿನ ಜೀವವೈವಿಧ್ಯತೆಯ ತೊಟ್ಟಿಲಾಗಿ ಅಸಂಖ್ಯಾತ ಜೀವಿಗಳಿಗೆ ತವರಾಗಿದ್ದೆ. ಮೀನು, ಏಡಿ, ಹಾವು, ಕಪ್ಪೆಗಳು ನನ್ನಲ್ಲಿರುವ ಜಲರಾಶಿ, ಕಲ್ಲುಚಪ್ಪಡಿ ಹಾಗೂ ಮರಳಿನಲ್ಲಿ ನೆಲಸಿದ್ದವು. ನನ್ನ ಎರಡೂ ಬದಿಗಳಲ್ಲಿ ಹೊಳೆ ಮತ್ತಿ, ಕರಿ ಮತ್ತಿ, ಬಿಳಿ ಮತ್ತಿ, ಹೊಳೆ ದಾಸವಾಳ, ಕವಲು, ಕದಂಬ, ಹೊನ್ನೆ, ಬೀಟೆ, ನಂದಿ, ಶಿವಣೆ, ಅರಳಿ, ಅತ್ತಿ, ಆಲ, ಅರಿಷಿಣ, ಬೆತ್ತ, ಬಿದಿರು, ಕಣಗಲೆ, ಕಾಸರಕ, ಮುರಗಲು, ಅಪ್ಪೆ ಮುಂತಾದ ಗಿಡಮರಗಳಲ್ಲಿ ಹೂವು ಹಣ್ಣುಗಳು ತುಂಬಿರುತ್ತಿದ್ದವು. ಸಿಳ್ಳಾರ, ಹರಟೆಮಲ್ಲ, ಕುಟ್ರ, ಪಿಕಳಾರ, ಬೇಲಿಚಟಕ, ಕೆಂಬೂತ, ಬೆಳವ, ಕಾಜಾಣ, ಬದನಿಕೆ, ನೊಣಹಿಡುಕ, ಮಂಗಟ್ಟೆ, ಮಧುರಕಂಠ, ಮಿಂಚುಳ್ಳಿ, ಕೈರಾತ, ಎಲೆಹಕ್ಕಿ, ರಾಜಹಕ್ಕಿ, ಮರಗುಬ್ಬಿ, ಗೂಬೆ, ಹಾಲಕ್ಕಿ, ನವರಂಗ ಮುಂತಾದ ಹಕ್ಕಿಗಳ ಇಂಚರ ಎಲ್ಲೆಡೆ ಮಾರ್ಧನಿಸುತ್ತಿತ್ತು. ಮೀನು ಹಿಡಿಯುವ, ಹಣ್ಣುಗಳನ್ನು ತಿನ್ನುವ, ಕಪ್ಪೆಗಳನ್ನು ಹಾಗೂ ಹುಳು ಹುಪ್ಪಟ್ಟೆಗಳನ್ನು ನುಂಗುವ ಹಕ್ಕಿಗಳ ಚಟುವಟಿಕೆಗಳು ಎಡಬಿಡದೆ ಸಾಗುತ್ತಿದ್ದವು. ಅವುಗಳು ಗೂಡು ಕಟ್ಟುವುದು, ಬಾಣಂತನ ಮಾಡುವುದು ಎಲ್ಲವೂ ನನ್ನ ನಿಸರ್ಗದಲ್ಲಿ, ಯಾವುದೇ ತೊಂದರೆಗಳಿಲ್ಲದೆ ನಡೆಯುತ್ತಿತ್ತು. ಚಳಿಗಾಲದಲ್ಲಿ ಹಿಮಾಲಯದ ತಪ್ಪಲಿನಿಂದಲೂ ಅನೇಕ ಬಗೆಯ ವಲಸೆ ಹಕ್ಕಿಗಳು ಬಂದು ನೆಲೆಸುತ್ತಿದ್ದವು. ನನ್ನ ಇಕ್ಕೆಲಗಳಲ್ಲಿನ ಬೃಹತ್ ಮರಗಳಲ್ಲಿ ಹಾಗೂ ಬದುಗಳಲ್ಲಿ ವಿಸ್ಮಯಕಾರಕ ಅಸಂಖ್ಯಾತ ಜೇಡಗಳು ಬಲೆ ನೇಯ್ದು ಚಿಟ್ಟೆ-ಪತಂಗಗಳನ್ನು ಹೀರಲು ಕಾಯುತ್ತಿದ್ದವು; ವಿವಿಧ ನಮೂನೆಗಳ ಕಪ್ಪೆಗಳು ಮೊಟ್ಟೆಗಳನ್ನಿಟ್ಟು ಹರುಷದಿಂದ ಕುಪ್ಪಳಿಸುತ್ತಿದ್ದವು.

© ಮಂಜುನಾಥ್ ಓಮಣ್ಣಾ ಗಡಕರ

ಹೀಗೆ ಹತ್ತಾರು ವರುಷಗಳು ಸಾಂಗವಾಗಿಯೇ ಸಾಗಿದವು ಎನ್ನಿ. ನೀರು ಹಾಗೂ ವಿಶ್ರಾಂತಿಗಾಗಿ ಬರುತ್ತಿದ್ದ ಜಿಂಕೆ, ಚಿರತೆ, ಹುಲಿ ಇತ್ಯಾದಿ ಕಾಡು ಪ್ರಾಣಿಗಳು ಬಡಾವಣೆಯ ಸುತ್ತ ಕಟ್ಟಿದ್ದ ಆವರಣದ ಕಾರಣ ಬರುವುದನ್ನು ನಿಲ್ಲಿಸಿದ್ದು ಬಿಟ್ಟರೆ ಇನ್ನಿತರ ವನ್ಯಮೃಗಗಳು ಹಾಗೂ ಇತರ ಜೀವ ಸಂಕುಲಕ್ಕೆ ನಾನು ಅಲ್ಲಿಯವರೆಗೆ ಸಂಪೂರ್ಣವಾಗಿ ತೆರೆದುಕೊಂಡಿದ್ದೆ. ನನ್ನಲ್ಲಿನ ಜೀವಸೆಲೆಯಲ್ಲಿ ಅಪೂರ್ವ ಜೀವಿಗಳಾದ ಹಾರುವ ಅಳಿಲು, ಹಾರುವ ಓತಿ, ಖಗಸಂಕುಲದ ದೊಡ್ಡ ದಾಸಮಂಗಟ್ಟೆ, ಕಾಕರಣೆ ಹಾಗೂ ಕಪ್ಪೆಬಾಯಿ ಹಕ್ಕಿಗಳು ಇದ್ದವು. ನಾನು ಹರಿಯುವ ದಾರಿಯಲ್ಲಿ ನೌಕರರು ಒಡ್ಡನ್ನು ಕಟ್ಟಿ ಚಿಕ್ಕ ಈಜುಕೊಳ ನಿರ್ಮಿಸಿ ಮನಸಿಚ್ಛೆ ಆಡಿ ನಲಿದಾಡುತ್ತಿದ್ದರು; ಪುಟಾಣಿ ಮಕ್ಕಳು ನನ್ನ ಥಳಕು ಬಳುಕುಗಳನ್ನು, ಪುಟಿದೇಳುವ ಚಿಕ್ಕ ಚಿಕ್ಕ ತಡಸಲುಗಳನ್ನು ನೋಡಿ ಸಂತೋಷ ಪಡುತ್ತಿದ್ದರು. ಹರಿಯುವ ನೀರಿನಲ್ಲಿ ಮಕ್ಕಳು ಅತ್ತಿಂದಿತ್ತ ಓಡಾಡಿ ನಲಿದಾಡುತ್ತಿದ್ದರು. ಕೆಲ ನಿವಾಸಿಗಳು ನನ್ನ ಒಡಲಲ್ಲಿರುವ ಸ್ವಾದಿಷ್ಟವಾದ ಏಡಿ ಹಾಗೂ ಮೀನುಗಳನ್ನು ಹಿಡಿದು ತಿಂದು ಖುಷಿಪಡುತ್ತಿದ್ದರು; ಇನ್ನೂ ಕೆಲವರು ಕಳಲೆ, ಮರಕೆಸು, ಅಪ್ಪೆಮಿಡಿ ಹಾಗೂ ಇನ್ನಿತರ ಕಾಡುಹಣ್ಣುಗಳನ್ನು ತಿಂದು ಸಂತೃಪ್ತರಾಗಿ ಹೋಗುತ್ತಿದ್ದರು.

ಹೀಗಿರಲು ಬರಬರುತ್ತಾ ಬಡಾವಣೆಯ ನಾಗರಿಕರಿಗೆ ಏನಾಯ್ತೋ ಏನೋ ಅವರ ಜೀವನಕ್ರಮಗಳಲ್ಲಿ ನನ್ನ ಅರಿವಿಗೆ ತಾಗದಂತಹ ತುಂಬಾ ಬದಲಾವಣೆಗಳು ಪ್ರಾರಂಭವಾದವು. ಅವರ ಬದುಕಿನಲ್ಲಿ ಒಂದು ಮಿತಿ ಮೀರಿದ ಸಮೃದ್ಧಿ ಬಂದಂತಿತ್ತು; ಅವರ ವರ್ತನೆಯಲ್ಲಿ ಒಂದು ತರನ ಸೊಕ್ಕು ಕಾಣಿಸತೊಡಗಿತ್ತು. ಇದರ ಸಾಂಕೇತಿಕ ಆರಂಭದಂತೆ ಒಂದು ದಿನ ನನ್ನೊಳಗೆ ಒಂದು ಸ್ಪೋಟಕ ಸಿಡಿಸಲಾಯಿತು; ಅದು ಮೀನು ಏಡಿಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಡಿದು ಸಂಗ್ರಹಿಸುವ ಹೊಸ ವಿಧಾನವಂತೆ. ನಂತರದಲ್ಲಿ ತಿಂದುಳಿದ ಆಹಾರವನ್ನು ಪ್ಲಾಸ್ಟಿಕ್ ಕೈಚೀಲಗಳ ಸಮೇತ ನನ್ನ ಒಡಲಿಗೆ ಹಾಕುವ ಪರಿಪಾಠ ಆರಂಭವಾಯಿತು. ತಮಗೆ ಬೇಡವಾದ ಹಳೆಯ ದೇವರಪಟಗಳನ್ನು, ಬಲ್ಬು, ಟ್ಯೂಬ್, ಗಾಜು, ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯವಸ್ತುಗಳನ್ನು ನನ್ನೊಳಕ್ಕೆ ಬಿಸಾಕಲು ಪ್ರಾರಂಭಿಸಿದರು. ಮನೆಗಳ ಕೊಳಚೆಯ ಕೊಳವೆಗಳು ಅನೇಕ ಕಡೆ ಒಡೆದು, ಸೋರಿ ನಾನು ಮಲಿನಳಾದೆ. ಆದರೂ ನನ್ನನ್ನು ನೋಡಲು ಹೊಸ ಜನ ಬರತೊಡಗಿದರು; ಅದು ದೂರದೂರದ ಊರುಗಳಿಂದ, ಕ್ರಮೇಣ ಅವರಿಗಾಗಿ ಉಳ್ಳವರು ಬಾಡಿಗೆ ಕುಟಿರಗಳನ್ನು ಕಟ್ಟತೊಡಗಿದರು. ಈ ಸಂದರ್ಭದಲ್ಲಿ ಅಪೂರ್ವ ಸಸ್ಯರಾಶಿಯನ್ನು ಹಾಗೂ ಗಿಡಮೂಲಿಕೆಗಳನ್ನು ಕಸವೆಂದು ತಿಳಿದು ಕಿತ್ತರು. ಇಷ್ಟು ಸಾಲದೆಂಬಂತೆ ಕಲ್ಲು ಚಪ್ಪಟೆಗಳನ್ನು ಹಾಗೂ ಮರಳನ್ನು ಸಿಕ್ಕ ಸಿಕ್ಕ ಹಾಗೆ ನನ್ನಿಂದ ಕಿತ್ತೊಯ್ದರು. ದಿನಾಚರಣೆಗಳನ್ನು ಆಚರಿಸವ ನೆಪದಲ್ಲಿ ಸಿಡಿಯುತ್ತಿದ್ದ ಭಾರಿ ಪಟಾಕಿಗಳ ಸದ್ದಿಗೆ ನನ್ನೊಡಲಿನ ಸೂಕ್ಷ ಜೀವ ಸಂಕುಲವು ಬೆದರಿ ಚೆಲ್ಲಾಪಿಲ್ಲಿಯಾಗತೊಡಗಿತು.

ಇದೆಲ್ಲದರ ಪರಿಣಾಮವಾಗಿ ನಾನು ಈವರೆಗೆ ಒಳಗಾಗದ, ನನ್ನ ಜೀವವನ್ನೇ ಬುಡಸಮೇತ ಅಲುಗಾಡಿಸಿದ ಅಸ್ವಸ್ಥೆತೆಯೊಂದು ನನ್ನನು ಕಾಡತೊಡಗಿತು. ನನ್ನ ಹರಿವಿನ ಓಘ ವಿಚಲಿತಗೊಂಡು ಬೇಸಿಗೆಯಲ್ಲಿ ಬೇಗ ಬತ್ತತೊಡಗಿದೆ. ಕೆಂದಳಿಲು, ಮಂಗಟ್ಟೆಗಳು ಹಾಗೂ ಕೋತಿಗಳು ಹಣ್ಣುಗಳನ್ನು ತಿಂದು ಮಾಡಿದ ಬೀಜ ಪ್ರಸರಣದ ಫಲವಾಗಿ ಚಿಗಿತ ಚಿಕ್ಕಪುಟ್ಟ ಸಸಿಗಳು, ಪರ್ಣಪಾತಿಗಳು, ಕಾಡುಹಣ್ಣುಗಳ ಗಿಡಬಳ್ಳಿಗಳು ವ್ಯಾಪಾರದ ಕತ್ತಿಗಳಿಗೆ ನಿರಂತರವಾಗಿ ಬಲಿಯಾದ ಕಾರಣ ನಾನು ಕೃಶಳಾಗುತ್ತಾ ಹೋಗಿ ಅನೇಕ ಪಕ್ಷಿಗಳು, ಸಸ್ತನಿಗಳು, ಸರಿಸೃಪಗಳು, ಚಿಟ್ಟೆ, ಪತಂಗಗಳು, ಕಪ್ಪೆಗಳು, ಜೇಡಗಳು ಎಲ್ಲವೂ ನನ್ನಿಂದ ದೂರ ಸರಿಯುತ್ತಿವೆ. ಮರಗಳ ದಟ್ಟಣೆ ಕಡಿಮೆಯಾಗಿ ಹಾರುವ ಓತಿ ಹಾಗೂ ಹಾರುವ ಹಾವುಗಳು ಅಳಿದುಹೋಗುವ ಹಂತಕ್ಕೆ ಬಂದು ನಿಂತಿವೆ. ಮಾಲಿನ್ಯವು ಹಕ್ಕಿಗಳ ವಂಶಾಭಿವೃಧ್ದಿಯನ್ನು ಕುಂಠಿತಗೊಳಿಸಿದೆ. ಸುತ್ತಲಿದ್ದ ಬೃಹತ್ ಗಾತ್ರದ ಮರಗಳು ಅಕಾಲ ಮರಣವನ್ನಪ್ಪಿವೆ. ಹೀಗೆ ಎಲ್ಲ ಸಂಪತ್ತನ್ನೂ ಕಳೆದುಕೊಂಡು ಒಣಗುತ್ತಿರುವ ನನ್ನ ಬಳಿ ಈಜಲೂ ಕೂಡ ಜನ ಬರುತ್ತಿಲ್ಲ; ಕುಣಿದು ಕುಪ್ಪಳಿಸುತ್ತಿದ್ದ ಕಪ್ಪೆಗಳು ಮಾಯವಾಗಿವೆ. ಜೀವ ಸಂಸರ್ಗವೇ ಇಲ್ಲದೆ ನನಗೆ ಹುಚ್ಚು ಹಿಡಿದಂತಾಗಿದೆ.

© ಹರೀಶ್ ಗೌಡ

ಈ ಸ್ಮಶಾನ ಮೌನದ ನಡುವೆ ಎಲ್ಲಿಂದಲೋ ನನ್ನ ಪುನರುಜ್ಜೀವನಕ್ಕಾಗಿ ಕೋಟ್ಯಾಂತರ ರೂಪಾಯಿಗಳ ವೆಚ್ಚದ ಯೋಜನೆಯೊಂದು ಸಿದ್ಧವಾಗುತ್ತಿದೆ ಎಂದು ಕೇಳಿದೆ. ಮನುಷ್ಯರು ನಾನು ಮೌನವಾಗಿ ಸಾಯಲೂ ಬಿಡಲೊಲ್ಲರಲ್ಲ, ಇವರಿಗೆ ಹತ್ತಿರುವ ರೋಗವಾದರೂ ಯಾವುದೆಂದು ನಾನು ಆಶ್ಚರ್ಯಪಡುತ್ತಿದ್ದೇನೆ.


ಲೇಖನ: ಮಹಾಂತೇಶ, ಕೈಗಾ
ಉತ್ತರ ಕನ್ನಡ ಜಿಲ್ಲೆ

Spread the love

3 thoughts on “ಹುಲಿಬೈಲಿನ ತೊರೆ

  1. ‘ಹುಲಿಬೈಲತೊರೆ’ಯು ತನ್ನ ಒಂಭೈನೂರು ವರ್ಷಗಳ ಹಿಂದಿನಿಂದ ಇಂದಿನವರೆಗಿನ ಸ್ಥಿತಿ ಗತಿ ಯನ್ನು ಅತ್ಯಂತ ಆಪ್ತ ಧಾಟಿಯಲ್ಲಿ ನಿರೂಪಣೆ ಮಾಡಿದ್ದು , ಹೃನ್ಮನಗಳಿಗೆ ತನ್ನ ತಲ್ಲಣಗಳನ್ನು ತಣ್ಣಗೆ ದಾಟಿಸಿದ್ದು ನಿಜಕ್ಕೂ ರೋಚಕವಾಗಿದೆ! ಬಹು ದೊಡ್ಡ ಕಾದಂಬರಿ ಆಗಬಹುದಾದ ವಸ್ತು ವಿಷಯವನ್ನು ಹೊಂದಿದ ಸುಂದರ ಲೇಖನ ಖುಷಿ ಕೊಟ್ತು. ಮಹಾಂತೇಶ ಕೈಗಾ ಅವರ ಪ್ರಕೃತಿ ಪ್ರೇಮದ ಸಂವೇದನೆ ಲೇಖನದ ಉದ್ದಕ್ಕೂ ಕಾಡ ತೊರೆಯಂತೆ ಜುಳು ಜುಳು ಹರಿದಿದೆ. ಒಂದು ಒಳ್ಳೆಯ ಅನುಭವ ಕಟ್ಟಿ ಕೊಟ್ಟ ಲೇಖನಕ್ಕೆ ಹಾ ಲೇಖಕರಿಗೆ ಹಾರ್ದಿಕ ಅಭಿನಂದನೆಗಳು.

  2. Beautifully written, showing the journey with anecdotes & capturing mesmerizing events in his own style. Liked it & strongly recommended for reading.

  3. ಇದು ಈ ಒಂದು ತೊರೆಯ ಸ್ಥಿತಿ ಅಲ್ಲ ಎಲ್ಲ ನದಿ, ತೊರೆಗಳು, ಸುಂದರ ಅರಣ್ಯ ಸ್ಥಳಗಳ ಪರಿಸ್ಥಿತಿ
    ಲೇಖನ ತುಂಬಾ ಅರ್ಥ ಪೂರ್ಣವಾಗಿ ನಮ್ಮ ತಪ್ಪುಗಳನ್ನು ತಿಳಿಸಿಕೊಡುವ ಅದ್ಭುತ ಪ್ರಯತ್ನ ಮಾಡಿದ್ದೀರಾ… ದ್ದನ್ಯವದಾಗಳು…?

Comments are closed.

error: Content is protected.