ಇಲಿ ಮತ್ತು ಹೆಗ್ಗಣಗಳನ್ನು ತಿನ್ನುವ ಮಾಂಸಾಹಾರಿ ಸಸ್ಯಗಳು
© Dionaea,_muscoid_fly fe
ಈ ಭೂಮಿಯು ಹಲವು ವೈಶಿಷ್ಟ್ಯಗಳ ಆಗರ ಎಂದರೆ ತಪ್ಪಾಗದು. ಏಕೆಂದರೆ, ಈ ಭೂಮಿಯಲ್ಲಿ ಸಸ್ಯಗಳು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಬಳಸಿಕೊಂಡು ಜೀವಿಸುತ್ತವೆ, ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೇ ಕೆಲವು ವಿಧದ ಸಸ್ಯಗಳು ತಮಗೆ ಮಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ದೊರೆಯದಿದ್ದಾಗ ಪರಭಕ್ಷಕ ಮತ್ತು ಮಾಂಸಾಹಾರಿಗಳಾಗುತ್ತವೆ ಎಂದರೆ ನಂಬುತ್ತೀರಾ? ಹೌದು, ಕೆಲವೇ ಕೆಲವು ಪ್ರಭೇದದ ಸಸ್ಯಗಳು ಮಾಂಸಾಹಾರಿಗಳಾಗಿರುವುದು ಪ್ರಕೃತಿಯ ವಿಸ್ಮಯಗಳಲ್ಲಿ ಒಂದು. ನೋಡಲು ಆಕರ್ಷಕವಾಗಿ ಇರುವ ಇವುಗಳು ಕ್ರಿಮಿಕೀಟಗಳು ಮತ್ತಿತರ ಜೀವಿಗಳನ್ನು ತಮ್ಮೆಡೆಗೆ ಆಕರ್ಷಿಸಿ ತಿನ್ನುತ್ತವೆ. ಇವುಗಳನ್ನು “ಕಾರ್ನಿವೋರಸ್ಪ್ಲಾಂಟ್‍ಗಳು” ಎಂದು ಕರೆಯುತ್ತಾರೆ. ಈ ಸಸ್ಯಸಂಕುಲಗಳು ಕ್ರಿಮಿಕೀಟಗಳು ಮತ್ತಿತರ ಜೀವಿಗಳನ್ನು ಆಕರ್ಷಿಸಿ ತಿನ್ನುವುದಲ್ಲದೇ ಇವುಗಳಲ್ಲಿ ಕೆಲವು ಗಿಡಗಳು ತಮಗೆ ಯಾರಾದರೂ ತೊಂದರೆ ನೀಡಿದರೆ ಅವರಿಗೆ ಕಚ್ಚುತ್ತವೆ.
ಮಾಂಸವನ್ನೇಕೆ ಇವು ಭಕ್ಷಿಸುತ್ತವೆ?
ಮಣ್ಣು ತುಂಬಾ ನಿಸ್ಸಾರವಾಗಿರುವ (ಪೌಷ್ಟಿಕಾಂಶ ಇಲ್ಲದ), ಅದರಲ್ಲೂ ಸಾರಜನಕದ ಅಂಶವಿಲ್ಲದಿರುವ ಜೌಗು ಪ್ರದೇಶದಲ್ಲಿ ಮಾಂಸಾಹಾರಿ ಸಸ್ಯಗಳು ಕಂಡುಬರುತ್ತವೆ. ಈ ರೀತಿಯ ಮಾಂಸಾಹಾರಿ ಸಸ್ಯಗಳ ಕುರಿತು ಮೊದಲ ಬಾರಿಗೆ ಅಧ್ಯಯನ ಮಾಡಿ ಪುಸ್ತಕ ಬರೆದ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್. ಈ ವರ್ಗದ ಸಸ್ಯಗಳು ಕೀಟಗಳ ಮಾಂಸವನ್ನು ಆಹಾರವಾಗಿ ಸೇವಿಸುವುದಿಲ್ಲ. ಇತರ ಸಸ್ಯಗಳಂತೆ ಇವುಗಳೂ ದ್ಯುತಿಸಂಶ್ಲೇಷಣೆಯ ಮೂಲಕವೇ ಆಹಾರ ಉತ್ಪಾದಿಸುತ್ತವೆ. ಆದರೆ ಮಾಂಸಾಹಾರಿ ಸಸ್ಯಗಳು ತಾವು ಪಡೆದ ಮಾಂಸಾಹಾರದ ಸಹಾಯದಿಂದ ಸಾರಜನಕ ಮತ್ತು ರಂಜಕ ಅಂಶಗಳನ್ನು ಪಡೆದುಕೊಂಡು ತಮ್ಮ ದ್ಯುತಿಸಂಶ್ಲೇಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ದಕ್ಷಿಣ ಅಮೆರಿಕಾ, ಕ್ಯಾಲಿಫೋರ್ನಿಯಾ, ಕೆನಡಾ, ಆಸ್ಟ್ರೇಲಿಯಾಗಳಲ್ಲೆಲ್ಲಾ ಬೃಹತ್ ಪ್ರಮಾಣದಲ್ಲಿ ಕಾಣಿಸುವ ಈ ಸಸ್ಯಗಳ ಹಲವು ಪ್ರಭೇದಗಳು ಈಶಾನ್ಯ ಭಾರತದ ರಾಜ್ಯಗಳಲ್ಲೂ ಇವೆ.
ಮಾಂಸಭಕ್ಷಕ ಗಿಡಗಳನ್ನು ಬೆಳಸುವುದು ಸುಲಭ. ಇವು ಮಣ್ಣಿನ ಅತ್ಯಂತ ಕಡಿಮೆ ಪೋಷಕಾಂಶದೊಂದಿಗೆ ಬದುಕುತ್ತವೆ. ಕ್ರಿಮಿಕೀಟಗಳು, ಇಲಿ-ಹೆಗ್ಗಣಗಳು ಇವುಗಳ ಪ್ರಮುಖ ಆಹಾರ. ಇವು ಮನುಷ್ಯನ ಮಾಂಸವನ್ನು ತಿನ್ನುವುದಿಲ್ಲ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಮಾಂಸಾಹಾರಿ ಸಸ್ಯಗಳು ಎಂದ ಕೂಡಲೇ ಇವುಗಳು ಪ್ರಾಣಿಗಳನ್ನೆಲ್ಲಾ ಬೇಟೆಯಾಡಿ ತಿನ್ನುತ್ತವೆ ಎಂದು ಅರ್ಥವಲ್ಲ. ಇವು ತೀರಾ ಸಣ್ಣ ಗಾತ್ರದ ನೊಣ, ದುಂಬಿ, ಜಿರಳೆ, ಮಿಡತೆ ಇತ್ಯಾದಿಗಳನ್ನು ತಿನ್ನುತ್ತವೆ. ಆದರೆ ಕಪ್ಪೆ, ಹಲ್ಲಿ, ಓತಿಕ್ಯಾತ ಮುಂತಾದ ಮಧ್ಯಮ ಗಾತ್ರದ ಪ್ರಾಣಿಗಳನ್ನೂ ತಿನ್ನುವ ಸಸ್ಯಗಳೂ ಇವೆ. ಬಹುಮಟ್ಟಿಗೆ ಈ ಸಸ್ಯಗಳು ಕೀಟಗಳನ್ನೇ ಸೆರೆಹಿಡಿದು ಸೇವಿಸುವುದರಿಂದ ಇವುಗಳಿಗೆ ಕೀಟಾಹಾರಿ ಸಸ್ಯಗಳು ಎನ್ನುವ ಹೆಸರೂ ಇದೆ. ಇವುಗಳಲ್ಲಿ ಅನೇಕ ಪ್ರಭೇದಗಳಿವೆ. ಇಬ್ಬನಿಗಿಡ, ಹೂಜಿಗಿಡ, ನೊಣದ ಬೋನು (ವೀನಸ್ ಫ್ಲೈಟ್ರಾಪ್), ಬ್ಲಾಡರ್ ವರ್ಟ್ ಇತ್ಯಾದಿ. ಜಗತ್ತಿನಲ್ಲಿ ಆರುನೂರಕ್ಕೂ ಹೆಚ್ಚು ವಿಧದ ಮಾಂಸಾಹಾರಿ ಸಸ್ಯಗಳಿವೆ. ಮಾಂಸಾಹಾರಿ ಸಸ್ಯಗಳು ಪ್ರಾಣಿ ಬೇಟೆಯ ಕ್ರಮ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಅಂತಹ ಕೆಲವು ಸಸ್ಯಗಳು ಇಲ್ಲಿವೆ.
ಹೂಜಿಗಿಡ:
ಹೂಜಿ ಗಿಡದ ಹೆಸರೇ ಹೇಳುವಂತೆ ಇದರ ಎಲೆಗಳು ಕೊಳವೆಯ ಆಕಾರದ ಉದ್ದ ಕತ್ತಿನ ಮುಚ್ಚಳ ಇರುವ ಹೂಜಿಯಂತೆ ಕಾಣುತ್ತವೆ. ಈ ಸಸ್ಯವು ಹೂಜಿಯಂತೆ ಇರುವ ತೆರೆದ ಅಂಚಿನ ಆಸುಪಾಸು ಆಕರ್ಷಕ ದ್ರವ್ಯವನ್ನು ಹೊರಸೂಸುತ್ತದೆ. ಈ ದ್ರವ್ಯಕ್ಕೆ ಆಕರ್ಷಿತರಾಗಿ ಬರುವ ಕೀಟಗಳು ಹೂಜಿಯಂತಹ ನಳಿಗೆಯ ಒಳಗೆ ಸಿಕ್ಕಿಹಾಕಿಕೊಳ್ಳುತ್ತವೆ. ತನ್ನ ಬೇಟೆಯು ಹೂಜಿಯೊಳಗೆ ಬೀಳುತ್ತಲೇ ಹೂಜಿಯ ಬಾಯಿಯು ತನ್ನಿಂದ ತಾನಾಗಿಯೇ ಮುಚ್ಚಿಕೊಳ್ಳುತ್ತದೆ. ಕಪ್ಪೆ, ಓತಿಕ್ಯಾತ ಮತ್ತು ಹಲ್ಲಿಯೇನಾದರೂ ಇದರ ಹೂಜಿಯೊಳಗೆ ಬಿದ್ದರೆ ಅವುಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯೂ ಈ ಹೂಜಿ ಗಿಡಗಳಿಗೆ ಇವೆ.
ನೊಣದ ಬೋನು (ವೀನಸ್ ಫ್ಲೈಟ್ರಾಪ್)
ನೊಣದ ಬೋನು ಸಸ್ಯದ ಎಲೆಗಳು ಇಬ್ಭಾಗಗೊಂಡ ಆಕಾರವಿದ್ದು, ಒಳಗೆ ಮಡಚುವಂತಹ ರಚನೆಯನ್ನು ಹೊಂದಿರುತ್ತವೆ. ಪ್ರತಿ ಎಲೆಯ ಅಂಚಿನಲ್ಲೂ ಸೂಕ್ಷ್ಮಸಂವೇದಿ ತಂತುಗಳಿದ್ದು. ಕೀಟಗಳು ಏನಾದರೂ ಈ ತಂತನ್ನು ಸ್ಪರ್ಶಿಸಿದಲ್ಲಿ, ಆ ಸಸ್ಯದಲ್ಲಿ ವಿದ್ಯುತ್ ಕಾಂತೀಯ ಶಕ್ತಿಯು ಪ್ರವಹಿಸಿ ಕ್ಷಣದಲ್ಲಿ ಎಲೆಗಳನ್ನು ಭದ್ರವಾಗಿ ಮಡಚಿಕೊಂಡು ಅದರೊಳಗೆ ಸಿಲುಕಿಕೊಂಡಿರುವ ಕೀಟಗಳನ್ನು ಜೀರ್ಣಿಸಿಕೊಂಡು ಬಿಡುತ್ತದೆ.
ಇಬ್ಬನಿ ಗಿಡ (ಡ್ರಾಸೆರ):
ಈ ಗಿಡದ ಎಲೆಗಳ ಸುತ್ತ ತಂತಿಯಂತೆ ಇರುವ ಎಳೆಗಳು ಚಾಚಿಕೊಂಡಿದ್ದು, ಎಳೆಗಳ ತುದಿಯಲ್ಲಿ ದ್ರವರೂಪದ ಅಂಟು ಹನಿ ಜಿನುಗುತ್ತಿರುತ್ತದೆ. ಎಲೆಗಳಲ್ಲಿರುವ ಹನಿಗಳು ಬಿಸಿಲಿನಲ್ಲಿ ಹೊಳೆಯುತ್ತಿರುತ್ತವೆ. ಇಬ್ಬನಿಯ ಹನಿಯಂತೆ ಕಾಣುವ ಈ ಅಂಟನ್ನು ಮಕರಂದವೆಂದು ಭಾವಿಸಿ ಕೀಟಗಳು ಅಂಟಿನ ಮೇಲೆ ಕುಳಿತಾಗ ಅವು ಅಂಟಿಕೊಳ್ಳುತ್ತವೆ. ಕೀಟಗಳು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಅಲ್ಲೇ ಬಂಧಿಯಾಗಿ ಇಬ್ಬನಿ ಗಿಡಕ್ಕೆ ಆಹಾರವಾಗುತ್ತವೆ.
ಗಾಳಿಗುಳ್ಳೆಯ ಗಿಡ:
ನೀರು ಕುಡಿದ ನಿಷ್ಪ್ರಯೋಜಕ ನೆಲದಲ್ಲಿ ಈ ಸಸ್ಯಗಳು ಬೆಳೆಯುತ್ತವೆ. ಈ ಸಸ್ಯಗಳು ತಮ್ಮ ಬೇಟೆಗಾಗಿ ಹೀರಿಕೊಳ್ಳುವ ನೀರಿನಿಂದ ನಿರ್ವಾತ ಗುಳ್ಳೆಗಳನ್ನು ಸೃಷ್ಟಿಸುತ್ತವೆ. ಕೀಟಗಳು ಈ ಗುಳ್ಳೆಗಳನ್ನು ಸ್ಪರ್ಶಿಸಿದಾಗ, ಈ ಗುಳ್ಳೆಗಳು ಕೀಟಗಳನ್ನು ತನ್ನೊಳಗೆ ಎಳೆದುಕೊಂಡು ತಿನ್ನುತ್ತವೆ.
ಇವುಗಳ ಬೇಟೆಯ ಬೋನು ಹೇಗೆ ಕೆಲಸ ಮಾಡುತ್ತದೆ?
ಮಾಂಸಾಹಾರಿ ಸಸ್ಯಗಳ ಬೋನಿಗೆ ಯಾವುದೇ ವಸ್ತು ಸೋಕಿದಾಗ ಬೋನಿನ ಒಳಮೈಯಲ್ಲಿರುವ ಕೂದಲುಗಳು ಸಂವೇದನೆಯನ್ನು ಉಂಟುಮಾಡಿ ಬೋನು ಮುಚ್ಚುವಂತೆ ಮಾಡುತ್ತದೆ. ಅಂದರೆ ಈ ಬೋನು ಸಂಪೂರ್ಣವಾಗಿ ಮುಚ್ಚಿಕೊಳ್ಳುವುದಿಲ್ಲ.
ಬೋನಿಗೆ ಬಿದ್ದಿರುವುದು ಕೀಟವಾಗಿದ್ದಲ್ಲಿ ಇಪ್ಪತ್ತು ಸೆಕೆಂಡ್ ಒಳಗಾಗಿ ಮಿಸುಕಾಡಿ ಕೂದಲುಗಳಿಗೆ ಪುನಃ ಸಂವೇದನೆ ಉಂಟುಮಾಡಿದರೆ ಬೋನು ಪೂರ್ತಿಯಾಗಿ ಮುಚ್ಚಿಕೊಳ್ಳುತ್ತದೆ. ಒಂದು ವೇಳೆ ಬೋನಿಗೆ ಬಿದ್ದಿರುವುದು ಕಲ್ಲು ಅಥವಾ ಇಬ್ಬನಿ ಆಗಿದ್ದಲ್ಲಿ ಎರಡನೇ ಸಂವೇದನೆ ಉಂಟಾಗದೇ ಬೋನು ಪೂರ್ತಿ ಮುಚ್ಚುವುದಿಲ್ಲ. ಏಕೆಂದರೆ ಒಂದು ವೇಳೆ ಗಿಡವೇನಾದರೂ ವ್ಯರ್ಥವಾಗಿ (ಬೇಟೆ ದೊರೆಯದೇ) ಮುಚ್ಚಿಕೊಂಡರೆ, ಅದು ಮತ್ತೆ ತೆರೆದುಕೊಳ್ಳಲು ಹಲವು ಗಂಟೆಗಳೇ ಬೇಕಾಗುತ್ತದೆ. ಅದರ ನಂತರವೇ ಆ ಗಿಡವು ಮರು ಬೇಟೆಗೆ ಸಿದ್ಧಗೊಳ್ಳುತ್ತದೆ.
ಮಾಂಸಾಹಾರಿ ಗಿಡಗಳ ವಿವಿಧ ರೀತಿಯ ಬೇಟೆಯಾಡುವ ತಂತ್ರಗಳಿಗೆ ಈ ಮೇಲಿನ ಕೆಲವು ಸಸ್ಯಗಳು ಮತ್ತು ಅವುಗಳ ಬೇಟೆಯ ಕ್ರಮಗಳು ಕೇವಲ ಉದಾಹರಣೆಗಳು ಮಾತ್ರ. ಬೇಟೆಯಲ್ಲಿ ಇಂತಹ ಅನೇಕ ವಿಭಿನ್ನ ರೋಚಕ ವಿಧಾನಗಳನ್ನು ಮಾಂಸಾಹಾರಿ ಸಸ್ಯಗಳು ಅನುಸರಿಸುತ್ತವೆ. ಮಾಂಸವನ್ನು ತಿಂದು ಬದುಕುವ ಮತ್ತು ಮಾಂಸಾಹಾರದ ಸೇವನೆಯ ಮೂಲಕ ತಮ್ಮ ದ್ಯುತಿಸಂಶ್ಲೇಷಣೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಮೂಲಕ ಸಸ್ಯ ವರ್ಗಗಳ ಪೈಕಿ, ವಿಭಿನ್ನವಾಗಿ ಈ ಸಸ್ಯಗಳು ಬದುಕುವುದು ವಿಶೇಷ.
ಲೇಖನ : ಸಂತೋಷ್ ರಾವ್ ಪೆರ್ಮುಡ
ದಕ್ಷಿಣ ಕನ್ನಡ ಜಿಲ್ಲೆ
ಉದ್ಯೋಗ: ಖಾಸಗಿ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು.
ಹವ್ಯಾಸಗಳು: ಚಾರಣ, ಬರವಣಿಗೆ, ಗಾರ್ಡನಿಂಗ್, ಹಾಡು ಮತ್ತು ಚಿತ್ರಕಲೆ, ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ.
ಬರಹಗಳು: ರಾಜ್ಯಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಬರವಣಿಗೆಗಳು ಪ್ರಕಟಗೊಂಡಿವೆ.
ಪ್ರಕಟಣೆಗಳು: ಪರ್ಯಟನೆ. ದಿಕ್ಸೂಚಿ ಮತ್ತು ಪರಿಭ್ರಮಣ ಪುಸ್ತಕಗಳ ಪ್ರಕಟಣೆ, ಪರಿವರ್ತನಾ ಎಂಬ ಸ್ವಂತ ಜಾಲತಾಣಪುಟದಲ್ಲಿ 350ಕ್ಕೂ ಮಿಕ್ಕಿದ ಸಂಚಿಕೆಗಳ ಪ್ರಕಟಣೆ.