ರಂಗ ಪತಂಗ
© ಮಹದೇವ ಕೆ. ಸಿ
ಮೊನ್ನೆ ಫೇಸ್-ಬುಕ್ನ ಇಂಡಿಯನ್ ಮೊತ್ಸ್-ನಲ್ಲಿ ಅಪರೂಪದ ಚರ್ಚೆಯೊಂದು ನಡೆಯಿತು. ತ್ರಿಪುರಾದಿಂದ ಒಬ್ಬರು ಪತಂಗವೊಂದರ ಚಿತ್ರವೊಂದನ್ನು ತೋರಿಸಿ, ಅದರ ವೈಜ್ಞಾನಿಕ ಹೆಸರನ್ನು ತಿಳಿಸುವಂತೆ ಕೇಳಿದರು. ಇರುವ ನಾಕಾರು ಜನ ತಜ್ಞರು ಗಮನಿಸಲಿಲ್ಲವೋ ಅಥವಾ ಆ ಕೀಟ ಕುಳಿತಿರುವ ಶೈಲಿಯಿಂದ ಅದನ್ನು ಕಡೆಗಣಿಸಿದರೋ, ಅದು ಕೆಲವು ದಿನ ಹಾಗೆಯೇ ಉಳಿದುಬಿಟ್ಟಿತ್ತು. ನಾನು ನನ್ನ ಅಂದಾಜಿನಲ್ಲಿ ಊಹಿಸಿ, ಆ ಕೀಟದ ವೈಜ್ಞಾನಿಕ ಹೆಸರೊಂದನ್ನು ಹಾಕಿದೆ. ಒಂದು ದಿನದ ನಂತರ ಪತಂಗ ತಜ್ಞ – “ರೋಜರ್ಕೆಂಡ್ರಿಕ್” ಅದನ್ನು ಗಮನಿಸಿ, ಯಾವ ಕಾರಣಕ್ಕೆ ನಾನು ಆ ಹೆಸರನ್ನು ಸೂಚಿಸಿದ್ದೇನೆ ಎಂಬುದನ್ನು ತಿಳಿಸುವಂತೆ ಬರೆದರು. ನಾನು ನನ್ನ ಗ್ರಹಿಕೆಯ ಕ್ರಮವನ್ನು ಅವರಿಗೆ ತಿಳಿಸಿದೆ. ಅದನ್ನು ಗಮನಿಸಿದ ಅವರು ಸಂಕೀರ್ಣ ವಿವರಣೆಯನ್ನು ಕೊಟ್ಟು, ವಿಸ್ತಾರವಾಗಿ ಕೀಟವನ್ನು ಗಮನಿಸಬೇಕಾದ ಕ್ರಮ, ಅದರ ಕೋಡು, ಕಾಲು ಹಾಗು ಅದರ ತಲೆಯ ಭಾಗ ಇವುಗಳನ್ನು ಗಮನಿಸಿದರೆ ನಾನು ಕೊಟ್ಟಿರುವ ಹೆಸರು, ಸರಿಯಾಗಿರುವ ಸಾಧ್ಯತೆ ಬಹಳ ಕಮ್ಮಿ ಎಂದೂ, ಮತ್ತೊಮ್ಮೆ ಪ್ರಯತ್ನಿಸುವಂತೆ ತಿಳಿಸಿ ಶುಭಾಶಯ ಹೇಳಿದರು. ನನಗೆ ತಲೆಬಿಸಿ ಪ್ರಾರಂಭವಾಯಿತು. ಅವರು ಹೇಳಿದ ಕ್ರಮದಲ್ಲಿ ಅದನ್ನು ಗಮನಿಸಿ, ಮತ್ತೊಮ್ಮೆ ಅದರ ವೈಜ್ಞಾನಿಕ ಹೆಸರನ್ನು ಸೂಚಿಸಿ, ಆ ಹೆಸರಿನ-ವಿಕಿಪಿಡಿಯಾ ಲಿಂಕನ್ನು ಜೋಡಿಸಿ ಬರೆದೆ. ಮತ್ತೊಮ್ಮೆ ಕೆಂಡ್ರಿಕ್, ನಾನು ಕೊಟ್ಟ ಹೆಸರಿನಲ್ಲಿ ಆ ಕೀಟದ ಕುಟುಂಬಕ್ಕೆ ಸೇರಿದ ಇನ್ನೂ ಹತ್ತಾರು ಕೀಟಗಳಲ್ಲಿ ಯಾವುದು ನಾನು ಸೂಚಿಸಿದ ಹೆಸರು ಎಂಬುದನ್ನು ಗಮನಿಸುವಂತೆ ತಿಳಿಸಿ ಮತ್ತೊಂದು ಕೊಂಡಿಯನ್ನು ಲಿಂಕ್ ಮಾಡಿದರು.
ನಾನು ಈ ವಿಷಯವನ್ನು ಬಹಳ ಸರಳೀಕರಿಸಿ ಹೇಳಿದ್ದೇನಾದರು, ವಾಸ್ತು ವಿಷಯ ಹಾಗಿಲ್ಲ, ಆ ಕೀಟ ಸಿಕ್ಕಿದ್ದು ತ್ರಿಪುರಾದಲ್ಲಿ, ನಾನು ಕೊಟ್ಟ ಹೆಸರು ಆ ಕೀಟದ ವೈಜ್ಞಾನಿಕ ಹೆಸರಾದರೂ, ಅದರ ಕುಟುಂಬದಲ್ಲೇ ಬೇರೆ-ಬೇರೆ ಹೆಸರುಗಳಿರುವ ಸಾಧ್ಯತೆ ಹೆಚ್ಚು. ಅದರಲ್ಲೂ ಪತಂಗದಂತಹ ಬಹಳ ಸಂಕೀರ್ಣ ಜೀವಿಗಳಿಗೆ ಹೆಸರನ್ನು ನೀಡುವುದು ಅತ್ಯಂತ ತಲೆಬೇನೆ ಕೆಲಸ. ನಮ್ಮ ದೇಶದಲ್ಲಿಯೇ ಸರಿಸುಮಾರು 3000 ದಿಂದ 4000 ಕುಟುಂಬಗಳಿಗೆ ಸೇರಿದ ಸರಿ ಸುಮಾರು 15,000 ಪತಂಗದ ಪ್ರಭೇದಗಳಿರಬಹುದೆಂಬ ಅಂದಾಜಿದೆ. ಆ 15,000 ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿ, ಅದರ ವೈಜ್ಞಾನಿಕ ಹೆಸರನ್ನು ನೀಡಬೇಕು. ರೋಜರ್ ಕೆಂಡ್ರಿಕ್ ಕಳೆದ 27 ವರ್ಷಗಳಿಂದ ಪತಂಗಗಳ ವೀಕ್ಷಣೆ ಹಾಗೂ ಅಧ್ಯಯನ ನಡೆಸುತ್ತಾ ಬಂದವರು. ಈ ವಿಷಯದಲ್ಲಿ ಅಧಿಕೃತವಾಗಿ ಮಾತಾಡಬಲ್ಲವರು. ಹಾಗಾಗಿ ಅವರು ನೀಡಿದ ಸಲಹೆ, ಸೂಚನೆಯನ್ನು ಕಡೆಗಣಿಸುವಂತಿರಲಿಲ್ಲ. ಕಳೆದ ನಾಕಾರು ವರ್ಷಗಳಿಂದ ನನ್ನ ಪರಿಸರದಲ್ಲಿ ಇರಬಹುದಾದ ಪತಂಗಗಳ ವೀಕ್ಷಣೆ ನಡೆಸಿರುವ ನಾನೂ ಕೆಲವು ಬಾರಿ ಕೈ ಚೆಲ್ಲಿ ಕುಳಿತಿದ್ದೇನೆ, ಆದರೆ ನಾನು ವೀಕ್ಷಣೆ ಹಾಗೂ ದಾಖಲಾತಿಯನ್ನು ನಿಲ್ಲಿಸಿಲ್ಲ. ಏಕೆಂದರೆ ವರ್ಷದಿಂದ ವರ್ಷಕ್ಕೆ ನನ್ನ ಪರಿಸರದಲ್ಲೇ ಇಲ್ಲಿಯವರೆಗೂ ಗಮನಿಸದೆ ಇರುವಂತಹ ಪತಂಗ ಪ್ರಭೇದಗಳು ಇರುವ ಸಾಧ್ಯತೆ ಇದೆ. ಪತಂಗಗಳು ನಮ್ಮ ಪರಿಸರದ ಬಹು ಮುಖ್ಯವಾದ ಜೀವ ಪ್ರಭೇದಗಳೆಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಹಕ್ಕಿ, ಮಿಡತೆ, ಜೇಡ, ಕಣಜ, ಹಾವು, ಹಾವುರಾಣಿ, ಓತೀಕ್ಯಾತ, ಹಲ್ಲಿಯ ಪ್ರಭೇದದ ಜೀವಿಗಳಿಗಲ್ಲದೆ ಕಪ್ಪೆಯಂತಹ ಉಭಯವಾಸಿ ಜೀವಿಗಳಿಗೂ ಪತಂಗ ಬಹುಮುಖ್ಯವಾದ ಆಹಾರ. ಇನ್ನೂ ಕೆಲವು ಪತಂಗಗಳು ಇರುವೆ ಪ್ರಭೇದದ ಭೂ ವಾಸಿಗಳಿಗೂ ಆಹಾರವಾಗುತ್ತವೆ.
ಜೂನ್ ತಿಂಗಳ ಒಂದು ರಾತ್ರಿ ಊಟಕ್ಕೆ ಕುಳಿತಿದ್ದೆ. ಪರಿಚಯದವರೊಬ್ಬರು ಕರೆಮಾಡಿ, ಈ ತಕ್ಷಣ ತಮ್ಮ ಅಂಗಡಿಗೆ ಬರಬೇಕೆಂದು, ತಾವು ಈವರೆಗೆ ನೋಡದೆ ಇರುವ ಚಿಟ್ಟೆಯೊಂದು ಎಲ್ಲಿಂದಲೋ ಹಾರಿಬಂದು ತಮ್ಮ ಅಂಗಡಿಯಲ್ಲಿ ಕುಳಿತಿರುವುದಾಗಿಯೂ, ಅದು ಹಾರಿ ಹೋಗುವ ಮೊದಲೇ ಬರಬೇಕೆಂದು ಕರೆಮಾಡಿದ್ದರು. ಗಡಿಬಿಡಿಯಲ್ಲಿ ಊಟ ಅರ್ಧಕ್ಕೆ ನಿಲ್ಲಿಸಿ ಹೊರಟೆ. ಶಿವಮೊಗ್ಗ-ಹರಿಹರ ಹೆದ್ದಾರಿಯ ಬದುವಿನ ಸಣ್ಣ ಅಂಗಡಿಯೊಂದರ ಮೂಲೆಯ ಮರದ ತುಂಡೊಂದರ ಮೇಲೆ ಆ ಪತಂಗ ಕುಳಿತಿತ್ತು. ಭಾರತದ ಅತ್ಯಂತ ಸುಂದರ ದೊಡ್ಡ ಪತಂಗಗಳಲ್ಲಿ ಒಂದಾದ ‘ಸಾಟರ್ನಿಡೆ’ ಕುಟುಂಬದ, ಭಾರತದ ವಿಶೇಷ ತಳಿಯಾದ ’ಇಂಡಿಯನ್ ಮೂನ್ ಮಾಥ್’ ಎಂದು ಸಾಮಾನ್ಯ ಹೆಸರಿನಿಂದ ಕರೆಯಲಾಗುವ ’ಆಕ್ಟಿಯಾಸ್ ಸೆಲೆನ’ ಎನ್ನುವ ಪತಂಗ ಅದಾಗಿತ್ತು. ಈ ಸಾಟರ್ನಿಡೆ ವರ್ಗದ ಪತಂಗಗಳು ದಟ್ಟಕಾಡಿನಲ್ಲಿ ಹಾಗೂ ಅಂತಹ ಕಾಡಿನ ಅಂಚಿನಲ್ಲಿ ಮಾತ್ರವೇ ಸಿಗಬಹುದು ಎಂದು ಭಾವಿಸಿದ್ದ ನಾನು, ನಮ್ಮ ಊರಿನ ಸುತ್ತಮುತ್ತ ಕಾಣುವ ಕುರುಚಲು ಕಾಡಿನಲ್ಲೂ ಇರುವುದನ್ನು ಕಂಡು ಅತ್ಯಂತ ಗಲಿಬಿಲಿಗೆ ಒಳಗಾದೆ. ಈ ವರ್ಗದ ಇನ್ನೊಂದು ಪತಂಗ – ಆಕ್ಟಿಯಾಸ್ ಮಾಯಿನಸ್ ಭಾರತದ ಈಶಾನ್ಯ ರಾಜ್ಯಗಳಲ್ಲಿ ಮಾತ್ರವೇ ಕಂಡು ಬಂದಿವೆ. ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಈ ವರ್ಗದವು ಕಂಡುಬರುತ್ತವೆ. ಇನ್ನು ಈ ಸಾಟರ್ನಿಡೆ ಕುಟುಂಬಕ್ಕೆ ಸೇರಿದ, ಜೀವ ಸಂಕುಲದಲ್ಲೇ ಅತ್ಯಂತ ದೊಡ್ಡದಾದ ’ಅಟ್ಲಸ್ ಪತಂಗ’ (ಅಟ್ಲಸ್ ಅಟ್ಟಕಸ್) ಭಾರತದ ಈಶಾನ್ಯ ರಾಜ್ಯಗಳಲ್ಲಿ ಮಾತ್ರವಲ್ಲದೆ, ಪಶ್ಚಿಮ ಘಟ್ಟವೂ ಸೇರಿ, ಕರ್ನಾಟಕದ ತುಮಕೂರು ಜಿಲ್ಲೆಯ ಕುರುಚಲು ಕಾಡಿನಲ್ಲಿಯೂ ಕಾಣಸಿಗುತ್ತವೆ. ಹೆಚ್ಚು ಕಡಿಮೆ ಒಂಬತ್ತು ಸೆಂಟಿಮೀಟರ್ ಉದ್ದ-ಅಗಲದ ಅಟ್ಲಸ್ ಪತಂಗದ ಹತ್ತಾರು ಉಪ ತಳಿಗಳು ಜಗತ್ತಿನಾದ್ಯಂತ ಕಂಡು ಬರುತ್ತವೆ. ದಕ್ಷಿಣ ಅಮೆರಿಕಾದ ಅಮೆಝಾನ್ ನದಿಕಣಿವೆಯ ದಟ್ಟಕಾಡುಗಳಲ್ಲಿ ಈ ಪತಂಗಗಳ ವ್ಯೆವಿಧ್ಯತೆ ಹೆಚ್ಚು.
ಪತಂಗಗಳ ಜೀವಿತಾವಧಿ ಸಾಮಾನ್ಯವಾಗಿ ಕೇವಲ ಮೂರು ತಾಸಿನಿಂದ ಹಿಡಿದು ಒಂದು ವರ್ಷ. ಅತ್ಯಂತ ಸಣ್ಣ ಗಾತ್ರದ ಪತಂಗ ಕೇವಲ ಒಂದೆರಡು ತಾಸಿನಿಂದ ಕೆಲವು ದಿನಗಳು ಮಾತ್ರ ಬದುಕಿರುತ್ತವೆ. ಆ ಕಾಲಾವಧಿಯಲ್ಲಿ ಅವು ಹೆಣ್ಣು-ಗಂಡು ಕೂಡಿ ಕೆಲವೇ ತಾಸುಗಳ ಅಂತರದಲ್ಲಿ ತಮ್ಮ ಆಹಾರವಾದ ಸಸ್ಯಗಳ ಎಲೆಯ ಮೇಲೆ ಅಥವಾ ಕೆಳಭಾಗದಲ್ಲಿ ಮೊಟ್ಟೆ ಇಡುತ್ತವೆ. ತಮ್ಮ ಸಂಕುಲಗಳ ಜೀವಿತಾವಧಿಯನ್ನು ಆಧರಿಸಿ ಮೊಟ್ಟೆಯಿಂದ ಹೊರಬಂದ ಲಾರ್ವ ಹುಳುಗಳು, ದಿನಮಾತ್ರದಲ್ಲಿ ಆ ಸಸ್ಯದ ಎಲೆಯನ್ನೆಲ್ಲಾ ತಿಂದು, ಕಂಬಳಿ ಹುಳುವಿನ ರೂಪತಾಳಿ, ಕೊನೆಗೆ ಕೋಶಾವಸ್ಥೆಗೆ ಜಾರಿ, ಪತಂಗಗಳಾಗಿ ಲೋಕಸಂಚಾರಕ್ಕೆ ಹೊರಬರುತ್ತವೆ. ತಮ್ಮ ಮುಂದಿನ ಪೀಳಿಗೆಯನ್ನು ಬೆಳೆಸಲು ವಿರುದ್ಧ ಲಿಂಗಗಳ ಹುಡುಕಾಟದಲ್ಲಿ ತೊಡಗುತ್ತವೆ.
ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಬೆಟ್ಟಪ್ರದೇಶದ ಹಳ್ಳದ ಬಳಿ ಇದ್ದೆ. ಆ ಹಳ್ಳದ ಬದುವಿನಲ್ಲಿ ಮುರುಗಲು ಮರವೊಂದು ಬೆಳೆದು ನಿಂತಿತ್ತು. ಚಳಿಗಾಲದ ಪ್ರಾರಂಭದ ದಿನಗಳಾದ್ದರಿಂದ ಮರದ ಎಲೆಗಳೆಲ್ಲಾ ಅರೆ ಹಳದಿ-ಕೆಂಬಣ್ಣಕ್ಕೆ ತಿರುಗಿ ಉದುರಲು ಪ್ರಾರಂಭಿಸಿದ್ದವು. ಮರ ಸುಮಾರು ಮೂರಡಿಯ ಸುತ್ತಳತೆಯನ್ನು ಹೊಂದಿ 14 ರಿಂದ 18 ಅಡಿಯವರೆಗೂ ಬೆಳೆದುನಿಂತಿತ್ತು. ಹಳ್ಳದ ಸಮೀಪದಲ್ಲಿ ಇದ್ದುದರಿಂದಲೋ ಏನೋ ಮರದ ಸುತ್ತಲೂ ಮೂರು-ನಾಲ್ಕು ಅಡಿ ದೂರದಲ್ಲಿ ಲಂಟನಾ, ಮತ್ತಿತರ ಪ್ರಭೇದದ ಮುಳ್ಳು ಗಿಡಗಳಿಂದ ತುಂಬಿಹೋಗಿ, ಮರದ ಬೊಡ್ಡೆಗೆ ಸಾಕಷ್ಟು ನೆರಳು ಬೀಳುವಂತಿತ್ತು. ಆ ಮರದ ಸಮೀಪಕ್ಕೆ ಹೋಗಿ ಮೇಲ್ಭಾಗದಿಂದ ಮರವನ್ನು ಗಮನಿಸತೊಡಗಿದೆ. ಮರ ಸಾಕಷ್ಟು ಎತ್ತರ ಇರುವುದರಿಂದ ಯಾವುದಾದರೂ ಹಕ್ಕಿಯ ಗೂಡು ಇರಬಹುದೆಂದು ನನ್ನ ಎಣಿಕೆಯಾಗಿತ್ತು. ಮರದ ಬೊಡ್ಡೆಯ ಸಮೀಪಕ್ಕೆ ನನ್ನ ಗಮನಹರಿಯಿತು. ಬೊಡ್ಡೆಯ ಸುತ್ತಲೂ ಹಿಡಿಯಷ್ಟು ರೇಷ್ಮೆಯಂತಹ ಹಿಂಜಿದ ಹತ್ತಿ ಮೆತ್ತಿದಂತಿತ್ತು. ಕುತೂಹಲದಿಂದ ಕುಳಿತು ನೋಡಿದಾಗ, ನೂರಾರು ಸಂಖ್ಯೆಯಲ್ಲಿ ಚಿನ್ನದಂತೆ ಹೊಳೆಯುತ್ತಿದ್ದ ಹೆಸರುಕಾಳು ಗಾತ್ರದ ಗೂಡುಗಳನ್ನು ಕಂಡೆ. ಅವುಗಳ ಸಮೀಪದಲ್ಲಿ ಹತ್ತಾರು ಪತಂಗಗಳನ್ನು ಕಂಡೆ. ಆ ಹತ್ತಿಯಂತಿದ್ದ ರಾಶಿಯಲ್ಲಿ ಪತಂಗಗಳ ಮೊಟ್ಟೆ ಹುದುಗಿಹೋಗಿದ್ದವು. ಅವು ಪತಂಗಗಳ ವರ್ಗದಲ್ಲಿ ಮುಖ್ಯ ವಿಭಾಗವಾದ-ಎರೆಬಿಡೆ ಕುಟುಂಬದ, ಲ್ಯೆಮಂಟ್ರಿಡೆ- ಉಪ ಕುಟುಂಬದ ‘ಲ್ಯೆಮಂಟ್ರಿಯಾ ಮಥುರಾ’ ಎನ್ನುವ ಹೆಸರಿನವು. ಪತಂಗದ ಈ ಉಪಕುಟುಂಬ ವರ್ಗಕ್ಕೆ ವಿಶೇಷ ಸ್ಥಾನವಿದೆ. ಕಾಡುಗಳಲ್ಲಿ ಹಣ್ಣುಬಿಡುವ, ಮುರುಗಲು ಮರದಂತಹ ಮರಗಳನ್ನು ಅವಲಂಬಿಸಿರುವ ಈ ಪತಂಗಗಳು, ಆ ಮರಗಳು ಕಾಣೆಯಾದರೆ ಈ ಪತಂಗ ಜೀವಿಗಳು ಕೂಡಾ ಅಲ್ಲಿಂದ ಅದೃಶ್ಯವಾಗುತ್ತವೆ. ಇದರಿಂದ ಏನು ತೊಂದರೆ? ಎನ್ನುವಂತಿಲ್ಲ. ಇದೊಂದು ಬೀಜ-ವೃಕ್ಷದ ನ್ಯಾಯವಿದ್ದಂತೆ. ಇಲ್ಲಿ ಮರ ಅವಲಂಬಿಸಿ
ಕೀಟವಿದೆಯೋ? ಅಥವಾ ಕೀಟವನ್ನು ಅವಲಂಬಿಸಿ ಮರವಿದೆಯೊ? ಬಲ್ಲವರಾರು. ಇದೇ ಪ್ರಕೃತಿಯ ಜೀವಿ-ಪರಿಸರ ಸಂಕೀರ್ಣ ವ್ಯವಸ್ಥೆ. ಇಲ್ಲಿ ನಮ್ಮ ದೃಷ್ಟಿಗೆ ಮರ-ಪತಂಗ ಮಾತ್ರ ಕಂಡರೂ, ವಾಸ್ತವದಲ್ಲಿ ಹಾಗಿಲ್ಲ. ಇಲ್ಲಿ ಮರ ಬೆಳೆಯಲು ಕಾರಣವಾದದ್ದು ಒಂದು ಮುರುಗಲು ಬೀಜ. ಆ ಬೀಜ ಇಲ್ಲಿಗೆ ಬಂದು ಬಿದ್ದದ್ದು ಯಾವುದೋ ಹಕ್ಕಿ, ಯಾವುದೋ ಪ್ರದೇಶದಲ್ಲಿ ಬೆಳೆದು ನಿಂತ, ಚೆನ್ನಾಗಿ ಹಣ್ಣು ಬಿಟ್ಟ ಮರದಲ್ಲಿ ಬೀಜದ ಸಮೇತ ಹಣ್ಣನ್ನು ನುಂಗಿ, ಇಲ್ಲಿಗೆ ಬಂದು ಯಾವುದೋ ಗಿಡದ ಮೇಲೆ ಕುಳಿತು ಹಿಕ್ಕೆ ಹಾಕಿದ ಸಮಯಕ್ಕೆ ಸರಿಯಾಗಿ, ಬಿರುಮಳೆಯಾಗಿ ಆ ಬೀಜದ ಮೇಲೆ ನೀರಿನ ಸಮೇತ ಹರಿದು ಬಂದ ಗೋಡು ಮಣ್ಣು ಕುಳಿತು, ಮಣ್ಣು ಒಣಗುವುದಕ್ಕೂ, ಬೀಜ ಮೊಳೆತು ಸಸಿಯಾಗುವುದಕ್ಕೂ ನಿರಂತರ ಸಾವಯವ ಸಂಬಂಧವಿದೆ. ಇವಿಷ್ಟು
ಸಂಕೀರ್ಣಗಳ ನಡುವೆ ಲ್ಯೆಮಂಟ್ರಿಯಾ ಪತಂಗ ತನ್ನ ಜೀವಾಶ್ರಯಕ್ಕೆ ಈ ಮುರುಗಲು ಮರವನ್ನು ಆಸರೆಯಾಗಿ ಪಡೆದಿದೆ. ಇದರ ನಂತರ ಮೊಟ್ಟೆಗಳು ಒಡೆದು ಹೊರಬರುವ ಸಮಯಕ್ಕೆ ಸರಿಯಾಗಿ ಮುರುಗಲು ಮರ, ತನ್ನ ಹಳೆಯ ಎಲೆಗಳನ್ನು ಕಳಚಿಕೊಂಡು ಹೊಸ ಎಲೆಗಳನ್ನು ತನ್ನ ಮುಡಿಗೇರಿಸಿಕೊಳ್ಳುವುದಕ್ಕೆ ಸರಿಯಾಗಿ ಲಾರ್ವ ಹುಳುಗಳು ತಮ್ಮ ಆಹಾರವಾಗಿ ಎಳೆಎಲೆಯನ್ನು ತಿನ್ನತೊಡಗುತ್ತವೆ. ಮೊಟ್ಟೆ ಇಟ್ಟ ನಂತರ ಪತಂಗಗಳು ಹಕ್ಕಿಗೋ, ಕಪ್ಪೆಗೋ, ಜೇಡಕ್ಕೋ, ಇರುವೆ, ಹಾವು, ಹಲ್ಲಿಗಳಿಗೋ ಆಹಾರವಾಗಿ ತಮ್ಮ ಜೀವಿತವನ್ನು ಮುಗಿಸಿದರೆ, ಆ ಜೀವಜಾಲದ ಕೊಂಡಿಯನ್ನು ಮುರುಗಲು ಮರ ಹಾಗು ಉಳಿದ ಲ್ಯೆಮಂಟ್ರಿಯಾ ಪತಂಗದ ಲಾರ್ವಾ ಹುಳುಗಳು ಮುಂದುವರೆಸುತ್ತವೆ.
ಅವತ್ತೊಂದು ದಿನ ಕೆಲಸದ ನಿಮಿತ್ತ ನನ್ನದೇ ಪುಟ್ಟ ವಾಹನವನ್ನೇರಿ ಕಣಿವೆಯೊಂದರ ತಿರುವಿನಲ್ಲಿ ಹೊರಟಿದ್ದೆ. ಬೆಳಗಿನ ಹತ್ತು-ಹನ್ನೊಂದರ ಸಮಯ. ನನ್ನ ವಾಹನದ ಹಿಂದೆ-ಮುಂದೆ ಹತ್ತಾರು ವಾಹನಗಳ ಸಾಲು. ಒಂದು ನೂಲು ಎಚ್ಚರ ತಪ್ಪಿದರೆ ನಾನು ನನ್ನ ಗಾಡಿ ಸಮೇತ ಕಣಿವೆಗೆ. ಹಿಂದಿನಿಂದ ಸಿಮೆಂಟ್ ತುಂಬಿದ್ದ ಲಾರಿ ಚಾಲಕನದು ಇನ್ನಿಲ್ಲದ ಅವಸರ. ನಾನು ತುಸು ಎಡಕ್ಕೆ ನನ್ನ ಗಾಡಿಯನ್ನು ಚಾಲಿಸಿಕೊಂಡು, ಆ ಲಾರಿ ಚಾಲಕನಿಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟೆ. ಅರೆಕ್ಷಣ ನನ್ನ ಗಮನ ಬೇಲಿ ಬದುವಿನ ಲಂಟಾನ ಪೊದೆಗೆ ಹರಿಯಿತು. ನಾಲ್ಕೈದು ಅಡಿ ಎತ್ತರವಿದ್ದ ಆ ಗಿಡದ ತುದಿಯು ಒಂದೆರಡು ದಿನದ ಹಿಂದೆ ಅರಳಿನಿಂತ ಹೂ ಗೊಂಚಲಿನಿಂದ ತುಂಬಿತ್ತು. ಇದ್ದಕ್ಕಿದ್ದಂತೆ ಆ ಹೂಗೊಂಚಲ ಮೇಲ್ಭಾಗ ಗಾಳಿಗೆ ತುಸು ಹೊಯ್ದಾಡಿದಂತಾಯ್ತು. ಒಂದೆರಡು ಇಂಚಿನ ಅಳತೆಯ ಕೀಟವು ತನ್ನ ಮಾರುದ್ದದ ಕೊಳವೆಯಂತ ಬಾಯಿಯಿಂದ ಲಂಟಾನ ಹೂವಿನ ಮಕರಂದ ಹೀರುತ್ತಿರುವಂತೆ ಕಂಡಿತು. ನಾನು ನನ್ನ ಕೆಲಸದ ಅವಸರಲ್ಲಿ ಅದನ್ನು ಪೂರ ಗಮನಿಸದೆ ಮುಂದೆ ಸಾಗಿದೆ. ಲಂಟಾನ ಪೊದೆಯನ್ನೂ, ಗಮನಿಸಿದ ಸಮಯ ಹಾಗು ಆ ಸ್ಥಳವನ್ನೂ ನೆನಪಿನಲ್ಲಿ ಇಟ್ಟುಕೊಂಡೆ. ನಂತರ ಒಂದೆರಡು ದಿನಗಳಲ್ಲಿ ನಾನದನ್ನು ಗಮನಿಸಿದಾಗ ಆ ಕೀಟ, ಪತಂಗ ವರ್ಗದ ಬಹು ಮುಖ್ಯ ಕವಲಾದ ಸಾಮಾನ್ಯವಾಗಿ ಇಂಗ್ಲಿಷ್ ನಲ್ಲಿ ‘ಹಾಕ್ ಮಾಥ್’ ಎಂದು ಕರೆಯುವ ಪತಂಗವಾಗಿತ್ತು. ಈ ಪತಂಗ ವರ್ಗದಲ್ಲಿ ಜಗತ್ತಿನಾದ್ಯಂತ 1450 ತಳಿಗಳಿದ್ದು, ಇವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ವರ್ಗದ ಎಲ್ಲಾ ಕುಟುಂಬಗಳನ್ನು ಸೇರಿಸಿ-ಸ್ಪಿಂಗಿಡೆ ಎಂದು ಹೆಸರಿಡಲಾಗಿದೆ. ಭಾರತದಲ್ಲಿ ಈ ವರ್ಗಕ್ಕೆ ಸೇರಿದ 58 ಕುಟುಂಬಗಳನ್ನು ಈವರೆಗೆ ಗುರುತಿಸಲಾಗಿದೆ. ಸಾಮಾನ್ಯವಾಗಿ ಪತಂಗಗಳು ತಮ್ಮ ಕೋಶಾವಸ್ಥೆಯಿಂದ ಹೊರಬಂದ ನಂತರ, ಮಕರಂದ ಇನ್ನಿತರೆ ಆಹಾರವನ್ನು ಸೇವಿಸುತ್ತವೆಯಾದರು ಈ ಸ್ಪಿಂಗಿಡೆ ಕುಟುಂಬದ- ಸೆಫನೋಡೆಸ್ ಹ್ಯೆಲಾಸ್ ಮತ್ತು ಅಚೆರೊಂಟಿಯಾ ಲಾಚೆನ್ಸಿಸ್ ಪತಂಗ ತಮ್ಮ ಇಡೀ ದೇಹಕ್ಕಿಂತಲೂ ಉದ್ದದ ಹೀರು ಕೊಳವೆಯಂತ ಬಾಯಿಂದ ಲಂಟಾನ ಹೂಗಳ ಮಕರಂದ ಹೀರುತ್ತವೆ. ನಾಗರ ಹೊಳೆ, ಮಲೆಮಾದೇಶ್ವರ ಬೆಟ್ಟ, ಪಶ್ಚಿಮ ಘಟ್ಟದಂತ ಕಾಡುಗಳಲ್ಲದೆ, ಇನ್ನಿತರೆ ಅರೆಮಲೆನಾಡಿನ ಕಾಡುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಲಂಟಾನ ಕಳೆಸಸ್ಯ ವೇಗವಾಗಿ ಹಬ್ಬುತ್ತಿರುವುದು ಈ ಕೀಟಗಳಿಗೆ ಮುಖ್ಯ ಆಹಾರಮೂಲವಾಗಿದೆ.
ನಮ್ಮ ಸುತ್ತಮುತ್ತಲೂ, ಎಲ್ಲಾ ವಾತಾವರಣದಲ್ಲಿಯೂ ಕಾಣಸಿಗುವ ಈ ಪತಂಗಗಳು, ಅವುಗಳ ಬಣ್ಣದಿಂದ, ವಿನ್ಯಾಸದಿಂದ ಪರಿಸರ ಪ್ರೇಮಿಗಳ ಮನಸೆಳೆಯುತ್ತವೆ. ನಾನೂ ಸಹ ಇದಕ್ಕೆ ಹೊರತಲ್ಲ. ನನ್ನ ಪತಂಗ ಪಯಣದ ಕೆಲವು ಘಟನೆಗಳನ್ನು ಇಲ್ಲಿ ತಿಳಿಸಿದ್ದೇನೆ ಅಷ್ಟೆ. ಈ ಪತಂಗ ಪಯಣವು ನನಗೆ ಪರಿಸರದ ಬಗ್ಗೆ ಒಂದು ವಿಶೇಷ ದೃಷ್ಟಿಕೋನವನ್ನು ಕಲ್ಪಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು.
ಲೇಖನ : ನಾಗಭೂಷಣ ಜ್ಯೋತಿ
ದಾವಣಗೆರೆ ಜಿಲ್ಲೆ.
ಪತಂಗಗಳ ಬಗ್ಗೆ ಆಸಕ್ತಿ ಹುಟ್ಟಿಸುವಂತಹ ಲೇಖನ??, ಚಿತ್ರಗಳೂ ಬಹಳ ಸೊಗಸಾಗಿದ್ದವು