ಪ್ರಕೃತಿ ಬಿಂಬ
© ವಿಜಯ್ ಕುಮಾರ್ ಡಿ.ಎಸ್,ಡೇಗೆ
ನದಿ ಹಾಗೂ ಕಡಲತೀರಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಡೇಗೆಯೂ 60 ಸೆಂಟಿಮೀಟರ್ ಉದ್ದವಿದ್ದು ಇವುಗಳ ರೆಕ್ಕೆಗಳು 160 ರಿಂದ 180 ಸೆಂಟಿಮೀಟರ್ ತಲುಪುತ್ತವೆ. ಎದೆಭಾಗ ಬೂದು ಬಣ್ಣದಿಂದ ಕೂಡಿರುತ್ತದೆ ಹಾಗೂ ಹಳದಿ ಬಣ್ಣದ ಮಧ್ಯೆ ಕಪ್ಪು ಚುಕ್ಕೆಯಂತೆ ಕಾಣುವ ಕಣ್ಣುಗಳನ್ನು ಹೊಂದಿದೆ. ಮೀನುಗಳು ಇದರ ಕಣ್ಣಿಗೆ ಸೆಳೆಯಲ್ಪಡುತ್ತವೆ ಎಂಬ ವದಂತಿಯು ರೋಮನ್ ಕಾದಂಬರಿಯಲ್ಲಿ ಇದೆ. 2 ಕೆ.ಜಿ ವರೆಗೆ ತೂಗುವ ಮೀನುಗಳನ್ನು ಸರಾಗವಾಗಿ ಹೊತ್ತೊಯ್ಯಬಲ್ಲ ಇದು ಸಂಪೂರ್ಣವಾಗಿ ಮೀನನ್ನು ಆಹಾರವಾಗಿ ಸೇವಿಸುತ್ತದೆ. ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳಲ್ಲಿ ಸಂತಾನೋತ್ಪತ್ತಿ ನಡೆಸುವ ಇವು ಕೆಂಪು ಕಂದು ಬಣ್ಣದ ಸುಮಾರು 60 ಗ್ರಾಂ ತೂಕವಿರುವ ಮೊಟ್ಟೆಗಳನ್ನು 30 ರಿಂದ 35 ದಿನಗಳ ಕಾಲ ಕಾವುಕೊಟ್ಟು ಮರಿ ಮಾಡುತ್ತವೆ.
© ವಿಜಯ್ ಕುಮಾರ್ ಡಿ.ಎಸ್,ಬಾರ್ ಹೆಡೆಡ್ ಹೆಬ್ಬಾತು
ಟಿಬೆಟ್, ಕಜಕಿಸ್ತಾನ್, ಮಂಗೋಲಿಯಾ ಹಾಗೂ ರಷ್ಯಾ ದೇಶಗಳಿಂದ ಹಿಮಾಲಯ ಪರ್ವತಗಳನ್ನು ದಾಟಿ ಭಾರತಕ್ಕೆ ವಲಸೆ ಬರುವ ಈ ಬಾತುಗಳು 2 ರಿಂದ 3 ಕೆಜಿ ತೂಕವಿದ್ದು ಸಾವಿರಾರು ಕಿಲೋಮೀಟರ್ ಹಾರಬಲ್ಲವು. ಪ್ರಪಂಚದಲ್ಲಿ ಅತಿ ಹೆಚ್ಚು ಹಾರುವ ಪಕ್ಷಗಳಲ್ಲಿ ಒಂದಾಗಿರುವ ಈ ಬಾರ್ ಹೆಡೆಡ್ ಹೆಬ್ಬಾತು ಪ್ರಪಂಚದ 5ನೇ ಅತಿ ಎತ್ತರದ ಪರ್ವತ ಹಾಗೂ ಮೌಂಟ್ ಎವರೆಸ್ಟ್ ಪರ್ವತಗಳನ್ನೂ ದಾಟಿ ಬರುತ್ತದೆ ಎಂಬ ವರದಿಗಳು ಇವೆ. ಆದರೆ ಇವುಗಳು 6550 ಮೀಟರ್ ಗಿಂತ ಎತ್ತರಕ್ಕೆ ಹಾರುವುದು ಇನ್ನು ಪತ್ತೆಯಾಗಿಲ್ಲ. ಈ ಹೆಬ್ಬಾತುಗಳು ಚಳಿ ಪ್ರದೇಶಗಳಲ್ಲಿ ನೆಲದ ಮೇಲೆ ಗೂಡುಮಾಡಿ 4 ರಿಂದ 5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ. ಉಳಿದ ಹೆಬ್ಬಾತುಗಳಿಗಿಂತ ತೂಕದಲ್ಲಿ ಸ್ವಲ್ಪ ಹೆಚ್ಚಿರುವುದರಿಂದ ರೆಕ್ಕೆಗಳು ಉದ್ಧವಾಗಿವೆ ಹಾಗು ಇದು ಸರಾಗವಾಗಿ ಹಾರಲು ಉಪಯುಕ್ತವಾಗಿದೆ.
© ವಿಜಯ್ ಕುಮಾರ್ ಡಿ.ಎಸ್,ಬೂದು ತಲೆಯ ಮೀನು ಗಿಡುಗ
ಬೂದು ತಲೆಯ ಮೀನು ಗಿಡುಗ: ಸಣ್ಣ ಕೊಕ್ಕು ಉದ್ದನೆಯ ಕುತ್ತಿಗೆಯ ಮೇಲೆ ಸಣ್ಣ ತಲೆ. ದುಂಡಾದ ಬಾಲ ಮತ್ತು ಚಿಕ್ಕದಾದ ಕಾಲುಗಳನ್ನು ಹೊಂದಿರುವ ಈ ಹದ್ದು 2 ರಿಂದ 3 ಕೆಜಿ ವರೆಗೆ ತೂಕವಿದ್ದು 60 ರಿಂದ 70 ಸೆಂಟೀಮೀಟರ್ ಉದ್ದವಿರುತ್ತದೆ. ವಯಸ್ಕ ಪಕ್ಷಿಯು ಬೂದು – ಕಂದು ಬಣ್ಣದಾಗಿದ್ದು ಮಸುಕಾದ ಬೂದು ತಲೆ ಹೊಂದಿರುತ್ತದೆ. ಈ ಹದ್ದುಗಳು ಸಮುದ್ರ1 ಮಟ್ಟದಿಂದ 1500 ಮೀಟರ್ ಎತ್ತರದ ತಗ್ಗು ಕಾಡುಗಳಲ್ಲಿ ವಾಸಿಸುತ್ತವೆ. ಇವು ನಿಧಾನವಾಗಿ ಚಲಿಸುವ ನದಿಗಳು, ತೊರೆಗಳು, ಸರೋವರಗಳು, ಕೆರೆಗಳು, ಜಲಾಶಯಗಳು ಮತ್ತು ಕರಾವಳಿಗಳಲ್ಲಿ ಕಂಡುಬರುತ್ತವೆ. ವಲಸೆ ಹೋಗದ ಪಕ್ಷಿ ಇದು ಆಗಿರುವುದರಿಂದ ಯಾವಾಗಲೂ ಒಂಟಿಯಾಗಿದ್ದು ಆಗಾಗ ಹುಡುಕುತ್ತ ಮತ್ತು ಸಂತಾನೋತ್ಪತ್ತಿ ಸಮಯದಲ್ಲಿ ಸಂಗಾತಿ ಪಕ್ಷಿಯನ್ನು ಹುಡುಕುತ್ತ ಹೊರಡುತ್ತವೆ. 2 – 4 ಮೊಟ್ಟೆಗಳನ್ನಿಟ್ಟು 40 – 45 ದಿನಗಳ ಕಾಲ ಕಾವು ಕೊಡುತ್ತವೆ.
© ವಿಜಯ್ ಕುಮಾರ್ ಡಿ.ಎಸ್,ಗರುಡ
ಸತ್ತ ಮೀನುಗಳು ಹಾಗೂ ಇತರ ಬೇಟೆಗಳನ್ನು ತಿನ್ನುತ್ತ ಸಮುದ್ರ ತೀರದಲ್ಲಿ ನದಿ ದಂಡೆಗಳಲ್ಲಿ ಕಂಡುಬರುವ ಈ ಗರುಡವು ತಲೆ ಸೇರಿದಂತೆ ಎದೆಭಾಗವು ಬಿಳಿಯಾಗಿದ್ದು ರೆಕ್ಕೆ ಹಾಗೂ ದೇಹವೆಲ್ಲ ಕೆಂಪು-ಕಂದು ಮಿಶ್ರಿತವಾಗಿರುತ್ತದೆ. ಇದರ ಸಂತಾನೋತ್ಪತ್ತಿ ಸಮಯ ದಕ್ಷಿಣ ಏಷ್ಯಾದಲ್ಲಿ ಡಿಸಂಬರ್ ನಿಂದ ಏಪ್ರಿಲ್ ತಿಂಗಳು. ಆ ಸಮಯದಲ್ಲಿ 2 ಕಡು ಬಿಳಿ ಬಣ್ಣದ ಮೊಟ್ಟೆಗಳನ್ನಿಟ್ಟು 25 – 28 ದಿನಗಳ ಕಾಲ ಕಾವುಕೊಡುತ್ತವೆ. ಇವುಗಳ ಎಳೆಯ ಪಕ್ಷಿಗಳು ಗಾಳಿಯಲ್ಲಿ ಬೇಟೆಯಾಡುವುದನ್ನು ಕಲಿಯಲು ಗಾಳಿಯಲ್ಲಿ ಎಲೆಯನ್ನು ಬಿಟ್ಟು ಅದನ್ನು ಗಾಳಿಯಲ್ಲಿ ಹಿಡಿಯಲು ಪ್ರಯತ್ನಿಸುತ್ತದೆ. ಕೆಲವು ಬಾರಿ ನೀರಿಗೆ ಇಳಿದು ಮೀನನ್ನು ಹಿಡಿಯಲು ಪ್ರಯತ್ನಿಸುತ್ತವೆ.
ಚಿತ್ರಗಳು: ವಿಜಯ್ ಕುಮಾರ್ ಡಿ.ಎಸ್
ವಿವರಣೆ: ನಾಗೇಶ್ ಓ ಎಸ್