ಸಸ್ಯಗಳ ವಿದ್ಯುತ್ ಸಂವಹನ!

ಸಸ್ಯಗಳ ವಿದ್ಯುತ್ ಸಂವಹನ!

© ಜೈಕುಮಾರ್ ಆರ್.

ತಲೆಯಲ್ಲಿಯೇ ಪ್ಲಾನ್ನಿಂಗ್ ನಡೆದಿತ್ತು. ಸಂಜೆ ಯಾವ ಶೋಗೆ ಹೋದರೆ ಸಿನೆಮಾ ಮುಗಿಯುವ ಸಮಯ, ಊಟದ ಸಮಯಕ್ಕೆ ಸರಿಯಾಗಿ ಮುಗಿಯುತ್ತದೆ ಎಂದು. ಜೊತೆಗೆ ಮಲ್ಟಿಪ್ಲೆಕ್ಸ್ ಆದ್ದರಿಂದ ಸಿನೆಮಾ ಟಿಕೆಟ್ ಸ್ವಲ್ಪ ದುಬಾರಿಯೇ ಇರುತ್ತದೆ. ಆದ್ದರಿಂದ ಕಡಿಮೆ ದರ ಇರುವ ದಿನ ಹಾಗೂ ಕಡಿಮೆ ದರ ಇರುವ ಶೋ ಅನ್ನು ಆರಿಸಿಕೊಳ್ಳುತ್ತೇನೆ. ಅಂತಹುದೇ ಒಂದು ದಿನ. ಬಹು ದಿನಗಳ ನಂತರ ಸಿನೆಮಾಗೆ ಹೋಗಬೇಕೆಂಬ ಮನಸ್ಸಾಗಿ ಈ ರೀತಿಯ ಪ್ಲಾನ್ನಿಂಗ್ ಮಾಡಿ ಇಟ್ಟಿದ್ದೆ. ಆದರೆ ಇಷ್ಟೆಲ್ಲಾ ಲೆಕ್ಕಾಚಾರ ಮಾಡಿ, ಕೂಡಿ-ಕಳೆದು, ಅಳೆದರೂ ಅಂದು ನಾನು ಸಿನೆಮಾ ನೋಡಲಾಗಲಿಲ್ಲ. ಅದಕ್ಕೆ ಮುಖ್ಯ ಕಾರಣ ಎರಡಿವೆ, ಅದರಲ್ಲಿ ಒಂದು ಸಿನೆಮಾ ಶುರುವಾಗುವ ಸಮಯ ಹತ್ತಿರ ಬರುತ್ತಿದ್ದಂತೆಯೇ ಟಿಕೆಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆನ್ ಲೈನ್ ನಲ್ಲಿ ಸೇಲ್ ಆಗುತ್ತಿದ್ದವು. ಆಗ ನನಗೆ ಬೇಕಾದ ಮಧ್ಯದ ಕುರ್ಚಿ ಕಣ್ಮರೆಯಾಗುತ್ತಾ ಹೋಯಿತು. ಜೊತೆಗೆ ಆ ಮಲ್ಟಿಪ್ಲೆಕ್ಸ್ ನ ಪಾಪಿಗಳು, ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದ್ದ ಬುಕಿಂಗ್ ಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಸಿನೆಮಾ ಟಿಕೆಟ್ ದರವನ್ನೂ ಏರಿಸುತ್ತಾ ಹೋದರು. ಗಂಟೆ ಗಂಟೆಗೆ ದರ ಏರುತ್ತಾ ಹೋಗಿ, ಮೊದಲಿಗೆ ನಾನು ನೋಡಿದ್ದ ಟಿಕೆಟ್ ದರಕ್ಕಿಂತ ಶೋ ಶುರುವಾಗುವ ಕೊನೆಯ ಅರ್ಧಗಂಟೆಯಲ್ಲಿ ಟಿಕೆಟ್ ದರ ಎರಡು ಪಟ್ಟು ಹೆಚ್ಚಿತ್ತು. ಅದರ ಜೊತೆಗೆ ನನಗೆ ಸಿನೆಮಾ ಸವಿಯಲು ಬೇಕಿದ್ದ ಮಧ್ಯದ ಕುರ್ಚಿಯೂ ಸೇಲ್ ಆಗಿದ್ದರಿಂದ ಅಂದು ನಾನು ತಲೆಯಲ್ಲಿ ಮಾಡಿದ ಪ್ಲಾನ್ನಿಂಗ್ ತಲೆಯಲ್ಲೇ ಉಳಿದಿತ್ತು. ಸಿನೆಮಾಗೆ ಹೋಗುವ ನನ್ನ ಯೋಚನೆಯನ್ನ ಮಾರುಕಟ್ಟೆಗೆ ತಕ್ಕಂತೆ ದರ ಏರಿಸಿದ ಬಿಸಿ ಕೊಲೆ ಮಾಡಿತ್ತು.

ಇದು ನನ್ನ ಸಿನೆಮಾ ಕಥೆ. ಎಂದಿನಂತೆ ಇದರಿಂದ ತಿಳಿಯುವುದೇನೋ ಒಂದು ವಿಷಯ ನಮ್ಮ ಈ ಬಾರಿಯ ಅಚ್ಚರಿ ಮೂಡಿಸುವ ಸಂಶೋಧನೆಯ ಪೀಠಿಕೆಯೇ. ಈ ಮೇಲೆ ಹೇಳಿರುವಂತೆ ಸಮಯ-ಸಂದರ್ಭಕ್ಕೆ ತಕ್ಕಂತೆ ಬದಲಾದ ಟಿಕೆಟ್ ದರ ಗಮನಿಸಿದ್ದೀರಿ. ಆದರೆ ನಾವು ದಿನ ನಿತ್ಯ ನೋಡುವ ಸಸ್ಯಗಳ ಹಾಗೂ ಹೂಗಳ ಕಾರ್ಯವಿಧಾನವೂ ಹೇಗೆ ಇದೆ ಗೊತ್ತೇನು? ವಿವರಿಸಿ ಹೇಳುತ್ತೇನೆ ಕೇಳಿ, ನಮಗೆಲ್ಲ ತಿಳಿದಿರುವ ಹಾಗೆ ಸಸ್ಯ, ಗಿಡ-ಮರಗಳು ಚಂದದ ಹಾಗೂ ಸುವಾಸಿತ ಹೂ ಬಿಡುವುದೇ ಪರಾಗ ಸ್ಪರ್ಶಕಗಳನ್ನು ಆಕರ್ಷಿಸಲು. ಅವುಗಳ ಆಗಮನದ ನಂತರ ತಮ್ಮ ಪರಾಗಸ್ಪರ್ಶ ಕ್ರಿಯೆ ಮುಗಿಸಿಕೊಂಡು ಅದಕ್ಕೆ ತಕ್ಕ ಉಡುಗೊರೆಯಂತೆ ಮಕರಂದವನ್ನು ಕೊಡುವುದು ವಾಡಿಕೆ. ಇದು ನಮ್ಮ ನಿಮ್ಮ ಹಾಗೆ ಜೆನ್-ಜೀ ಅಥವಾ ಮಿಲ್ಲೆನಿಯಲ್ಸ್ ಗೆ ತಿಳಿದಿರುವ ವಿಷಯ. ಈಗಿನ ಆಲ್ಫ ಮತ್ತು ಬೀಟಾ ಜೆನರೇಷನ್ ಕಲಿಯುವ ವಿಚಾರವೇನೆಂದರೆ, ಸರಳವಾಗಿ ಕಾಣುವ ಈ ಸಸ್ಯ ಮತ್ತು ಹೂಗಳ ಪರಾಗಸ್ಪರ್ಶಕಗಳು ತಮ್ಮ ಬಳಿ ಓಡಾಡುವಾಗ ಹೊರಬಿಡುವ ಸೂಕ್ಷ್ಮ ವಿದ್ಯುತ್ ತರಂಗಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಅವುಗಳನ್ನು ಆಕರ್ಷಿಸಲು ಹೆಚ್ಚಿನ ಸುವಾಸನೆ ಹಾಗೂ ಮಕರಂದವನ್ನು ತದನಂತರ ಉತ್ಪಾದಿಸುತ್ತವೆಯಂತೆ! ಅಷ್ಟೇ ಅಲ್ಲ ಸಿಗ್ನಲ್ ಪಡೆದ ಈ ಸಸ್ಯಗಳು ಮಣ್ಣಿನ ಮೂಲಕ ಪಕ್ಕದ ಹಾಗೂ ದೂರದ ಸಸ್ಯಗಳಿಗೂ ಈ ಸಂದೇಶವನ್ನು ರವಾನಿಸುತ್ತವೆಯಂತೆ!

ಈ ಸಂಶೋಧನೆಯ ಅನುಭವದ ಮೇಲೆ ಇವರೇ ಒಂದು ತಂಡವನ್ನು ರೂಪಿಸಿ ಇನ್ನೂ ನಿಖರವಾದ ಸಂಶೋಧನೆಯನ್ನು ಮಾಡಲು ಹೊರಟರು. ಅದರ ಅನುಸಾರ ದುಂಬಿಗಳು ರೆಕ್ಕೆ ಬಡಿಯುವಾಗ ಹೊರಸೂಸುವ ವಿದ್ಯುತ್ ಚಾರ್ಜ್ ಹೋಲುವ ಚಾರ್ಜ್ ಗಳನ್ನು ನೀಡುವ ಆಂಟೆನಾಗಳನ್ನು ತಯಾರಿಸಿದರು. ನಂತರ ಪ್ರಯೋಗಾಲಯದಲ್ಲೇ ಬೆಳೆದ ಡಾಫೊಡಿಲ್ ಹೂವಿನ ಸಸ್ಯದ ಕಾಂಡಕ್ಕೆ ಆ ವಿದ್ಯುತ್ ಚಾರ್ಜ್ ಗಳನ್ನು ಗ್ರಹಿಸಬಲ್ಲ ತಟ್ಟೆಯನ್ನು ಸುತ್ತಿದರು. ಅವರ ಊಹೆಯಂತೆಯೇ ದೂರದಿಂದ ಬರುತ್ತಿದ್ದ ವಿದ್ಯುತ್ ಚಾರ್ಜ್ ಗಳನ್ನು ಗಿಡ ಗ್ರಹಿಸುತ್ತಿತ್ತು. ಹಾಗಾದರೆ ಈ ಹೂಗಳ ದಳಗಳನ್ನು ಬದಲಿಸಿದರೆ ಅಥವಾ ಮುರಿದರೆ ಏನಾಗುವುದು ಎಂದೂ ಪರೀಕ್ಷಿಸಿದರು. ಹಾಗೆ ದಳಗಳನ್ನು ತೆಗೆದಾಗ ಕಾಂಡದಲ್ಲಿ ಯಾವುದೇ ಸಿಗ್ನಲ್ ಗ್ರಹಿಕೆಯಾಗಲಿಲ್ಲ. ಹಾಗಾದರೆ ಈ ಚಾರ್ಜ್ ಗಳ ಗ್ರಹಿಕೆ ಹೂಗಳಿಂದಲೇ ಆಗುತ್ತಿದೆ ಎಂದು ಖಾತ್ರಿಯಾಯ್ತು ಅಲ್ಲವೇ.

ಗುಡ್. ಮುಂದೆ ಹೋಗುವುದಾದರೆ, ಈ ಬಾರಿ ಇದೇ ಪ್ರಯೋಗವನ್ನು ಹಳದಿ ಬಣ್ಣದ ಹೂಗಳನ್ನು ಬಿಡುವ ಬಟರ್ ಕಪ್ ಸಸ್ಯದ ಮೇಲೆ ಮಾಡಿದರು. ಆದರೆ ಈ ಬಾರಿ ಗ್ರಹಿಕೆ ತಟ್ಟೆಗಳನ್ನು ಅಲ್ಲಿದ್ದ ಬೇರೆಯೇ ಮರಗಳ ಕಾಂಡಗಳಿಗೂ ಅಳವಡಿಸಿದರು. ಹಾಗೂ ಇಲ್ಲಿ ನಾವು ಹೂಗಳ ಬಳಿ ಆಂಟೆನಾದಿಂದ ನೀಡುವ ವಿದ್ಯುತ್ ಚಾರ್ಜ್ ಗಳು ಬೇರೆ ಮರಗಳಿಗೆ ತಲುಪದಂತೆ ತಡೆಗಳನ್ನು ಹಾಕಲಾಗಿತ್ತು. ಅವರ ಅಚ್ಚರಿಗೆ, ಹೀಗೆಲ್ಲ ಮಾಡಿದ್ದರೂ ದೂರದ ಬಟರ್ ಕಪ್ ಮರಗಳಲ್ಲಿಯೂ ಇಲ್ಲಿ ನೀಡಿದ್ದ ವಿದ್ಯುತ್ ಚಾರ್ಜ್ ಗಳಿಗೆ ಪ್ರತಿಕ್ರಿಯಿತ ಚಾರ್ಜ್ ಗಳು ಮೂಡಿದ್ದವು.

© TXJules_iStock_Getty Images Plus

ಇದರಿಂದ ನೇರವಾಗಿ ತಿಳಿಯುತ್ತದೆ, ಮರಗಳು/ಸಸ್ಯಗಳು ಇಂತಹ ವಿದ್ಯುತ್ ಚಾರ್ಜ್ ಗಳ ವಿಚಾರ ವಿನಿಮಯವನ್ನು ಸಲೀಸಾಗಿ ಮಾಡುತ್ತಿವೆ ಹಾಗು ಮಾಡುತ್ತವೆ ಎಂದು! ಆದರೆ ಅದೇ ಸಂಶೋಧನೆಯಲ್ಲಿ ತಿಳಿದ ವಿಚಾರವೆಂದರೆ, ಸುಮಾರು 10 volt ವಿದ್ಯುತ್ ನೀಡುತ್ತಿದ್ದ ಆಂಟೆನಾಗಳಿಂದ ಗಿಡಗಳು ಗ್ರಹಿಸುತ್ತಿದ್ದದ್ದು 20 millivolts. ಇದು ಅತೀ ಕಡಿಮೆ ಚಾರ್ಜ್ ಆದರೂ ರವಾನೆಯಾಗುತ್ತಿರುವುದಂತೂ ನಿಜ. ಇಲ್ಲಿ ನಾವು ಗಮನಿಸಬೇಕಾದದ್ದು ವಿಚಾರ ವಿನಿಮಯವಾಗಿ ಸಸ್ಯಗಳು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಿವೆ ಎಂಬುದೇ ಮುಖ್ಯ! ಎನ್ನುತ್ತಾರೆ ಸಂಶೋಧಕ ರಾಬರ್ಟ್. ಹೌದು, ನನ್ನದೂ ಅದೇ ವಾದ.

ತಂಗಾಳಿ ಬೀಸುವಿಕೆಯನ್ನು ವಿವರಿಸುವ, ಮುಗಿಲಿಗೇ ಹಸಿರು ತೋರಣ ಹೆಣೆದಂತೆ ತೋರುವ, ಎಷ್ಟೋ ಕವಿಗಳ, ಲೇಖಕರ ಸ್ಪೂರ್ತಿಯಾಗಿ ನಿಶ್ಚಲವಾಗಿ ನಿಂತಿರುವ ಮುಗ್ಧ ಮಗುವಿನಂತೆ ಕಾಣುವ ಈ ಸಸ್ಯಕೋಟಿಗಳು, ನಮ್ಮ ಮಾನವ ಪ್ರಭೇದ ಬರುವ ಕೋಟ್ಯಾನು ಕೋಟಿ ವರ್ಷಗಳ ಹಿಂದೆಯೇ ತಮ್ಮ ಆಧಿಪತ್ಯವನ್ನು ಈ ಭೂಮಿಯ ಮೇಲೆ ಸ್ಥಾಪಿಸಿ ಎಷ್ಟೋ ಅಡೆತಡೆಗಳನ್ನು ದಾಟಿ ಇಲ್ಲಿಯವರೆಗೆ ಹಾಗೇ ನಿಂತಿರುವ ಈ ದೇವತೆಗಳ ಬುದ್ಧಿವಂತಿಕೆಯನ್ನು, “ನಮ್ಮ ಹಾಗೆ ಪ್ರತಿಕ್ರಿಯಿಸದ ನಿಶ್ಚಲಿಗಳು”. ಎಂದು ಆತುರದ ಅರೆಬರೆ ಅರಿವಿನಲ್ಲಿ ಮುದ್ರೆ ಹಾಕಿಬಿಡುವ ನಾವು ಎಂಥ ಬುದ್ಧಿಜೀವಿಗಳು?

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
   
ಬೆಂಗಳೂರು ನಗರ ಜಿಲ್ಲೆ

Spread the love
error: Content is protected.