ನಿದ್ರಾ – ಅವಸ್ಥೆ!

ನಿದ್ರಾ – ಅವಸ್ಥೆ!

ಉತ್ತರ ಭಾರತದಲ್ಲಿನ ಆ ದಿನದ ಚಾರಣ ವಾಪಸ್ ರೂಮಿಗೆ ಗಾಡಿಯಲ್ಲಿ ಹಿಂದಿರುಗುವಾಗ ನನ್ನನ್ನು ನಿದ್ರೆಗೆ ದೂಡಿತ್ತು. ನಿದ್ದೆ ಎಂದರೆ ಆಗ ನನಗೆ ಎಷ್ಟು ಇಷ್ಟವೆಂದರೆ, ಏನೂ ಮಾತನಾಡದೇ ಆ ತಿರುವುಗಳಲ್ಲಿಯೂ ಸುಖವಾಗಿ ನಿದ್ರಿಸುತ್ತಿದ್ದೆ. ನಾವೊಂದು ಬಗೆದರೆ, ಪ್ರಕೃತಿಯೊಂದು ಬಗೆದಂತೆ,  ನಿದ್ದೆಯಿಂದ ಎದ್ದೆ. ಒಂದೆರೆಡು ಕ್ಷಣ ನಾನೆಲ್ಲಿರುವೆ? ಏನು ಮಾಡುತ್ತಿರುವೆ ಎಂದು ಅರಿಯಲು ಸಮಯ ಬೇಕಾಯ್ತು. ಇವೆಲ್ಲಾ ಆದ ಮರು ಕ್ಷಣದಲ್ಲೇ ನನ್ನೆದುರು ರಸ್ತೆಯ ಬಲ ಭಾಗದಲ್ಲಿ ಚಿರತೆ! ಏನು ಹೇಳಬೇಕೋ ತಿಳಿಯಲಿಲ್ಲ. ಜೊತೆಗೆ ನನ್ನಂತೆ ಯಾರೂ ಸೋಮಾರಿಗಳ ಹಾಗೆ ಮಲಗದೇ ಇದ್ದುದ್ದರಿಂದ ಎಲ್ಲರೂ ಚಿರತೆ ನೋಡಿದರು ಎಂದುಕೊಂಡೆ. ಯಾರೂ ಏನೂ ಮಾತನಾಡದ ಕಾರಣ ನಾನೆ ‘ಚಿರತೇ..’ ಎಂದೆ. ಆಗ ಎಲ್ಲರೂ ಕಣ್ಣುಬಿಟ್ಟು ನಿದ್ದೆಯಿಂದ ಎದ್ದರೆಂದು ಕಾಣುತ್ತದೆ, ಎಲ್ಲರೂ ಎಲ್ಲಿ? ಎಲ್ಲಿ? ಎಂದು ಚೀರತೊಡಗಿದರು. ಆದರೂ ಯಾರಿಗೂ ಕಾಣಲಿಲ್ಲ. ಕಾರಣ ನಮ್ಮ ಕಾರು ಚಾಲಕರ ಗಮನವೂ ಕೇವಲ ರಸ್ತೆಯ ಮೇಲಿದ್ದರಿಂದ ಅವರಿಗೂ ಕಾಣಲಿಲ್ಲ ಎಂದು ಕಾಣುತ್ತದೆ. ಅದನ್ನೆಲ್ಲ ನಿರ್ಧರಿಸಿ ನಾವೆಲ್ಲಾ ನಿಲ್ಲಿಸಿ… ನಿಲ್ಲಿಸಿ… ಎಂದು ಎಷ್ಟು ಕೂಗಿದರೂ ಆತ ಗಾಡಿ ನಿಲ್ಲಿಸಲೇ ಇಲ್ಲ. ಒಂದು ಕ್ಷಣದಲ್ಲಿ, ‘ಇವನಿಗೆ ಎಷ್ಟು ಕೊಬ್ಬು! ಇಷ್ಟು ಜನ ಹೇಳಿದರೂ ನಿಲ್ಲಿಸುತ್ತಿಲ್ಲ’ ಎಂದು ಎಲ್ಲರೂ ಬೈದುಕೊಂಡೆವು. ಆದರೆ ಆತ ಕಾರು ನಿಲ್ಲಿಸದೇ ಇರಲು ಕಾರಣ ಅದಲ್ಲ. ಆತ ಉತ್ತರ ಭಾರತದ ಹಿಂದಿಯವನು, ನಾವು ಕನ್ನಡದಲ್ಲಿ ನಿಲ್ಲಿಸು ಎಂದರೆ ಅವನಿಗೆ ತಿಳಿಯಲೇ ಇಲ್ಲ ಪಾಪ. ನಂತರ ಮೆದುಳಿನ ಮೂಲೆ ಮೂಲೆ ಹೋಗಿ ಹಿಂದಿ ಶಬ್ಧವನ್ನು ಹುಡುಕಿ ‘ರುಕೋ.. ರುಕೋ ಭಯ್ಯಾ’ ಎಂದು ಹೇಳಿ ಗಾಡಿ ನಿಲ್ಲಿಸಲಾಯ್ತು. ಕೆಳಗಿಳಿದು ಎಲ್ಲರೂ ಓಡುತ್ತಿದ್ದ ಚಿರತೆಯನ್ನು ನೋಡಲಾಯ್ತು. ಅಷ್ಟು ಗಾಢ ನಿದ್ರೆಯಲ್ಲಿದ್ದರೂ ಸಹ ಸರಿಯಾಗಿ ಚಿರತೆ ಇದ್ದ ಜಾಗದಲ್ಲಿ ಎಚ್ಚರ ಹೇಗೆ ಆಯ್ತು ಎಂಬುದು ನನಗೆ ಈಗಲೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ. ಅಥವಾ ನನ್ನ ಪ್ರಕೃತಿಯ ಮೇಲಿನ ಒಲವು ನಿದ್ರಾ ದೇವಿಗೂ ತಿಳಿದು, ‘ಎಷ್ಟು ನಿದ್ದೆ ಮಾಡುತ್ತೀಯಾ ಸೋಂಬೇರಿ, ಏಳು ಅಲ್ಲಿ ಚಿರತೆ ಇದೆ ನೋಡು’ ಎಂದು ಎಬ್ಬಿಸಿರಬಹುದು. ಏನೇ ಆದರೂ ನಿದ್ರೆ ಪ್ರತೀ ಜೀವಿಯ ಜೀವನದ ಬಹುಮುಖ್ಯ ಅಂಗ. ನನಗಂತೂ ಅದು ನನ್ನ ದೇಹದ ಒಂದು ಅಂಗಾಂಗ! ಅಷ್ಟು ಮುಖ್ಯವಾಗಿತ್ತು.

© Nigel Raine

ಆದರೆ ಈಗ, ಬದಲಾದ ಜೀವನ ಶೈಲಿಗಳು, ಕಾಣದ ಒತ್ತಡಗಳು, ಮೊಬೈಲ್ ಅನ್ನು ಕಂಡೂ ಕಂಡೂ ಹಾಳಾದ ಕಣ್ಣುಗಳಿಂದ, ಹೀಗೆ ಹತ್ತಾರು ಕಾರಣಗಳಿಂದ ನಮ್ಮ ನಿದ್ದೆ ಕಡಿಮೆಯಾಗುತ್ತಿದೆ. ಆದರೂ ಮನುಷ್ಯ ದಿನಕ್ಕೆ ಸರಾಸರಿ 8 ಘಂಟೆ ನಿದ್ರಿಸುತ್ತಾನೆ. ಅದರಲ್ಲೂ ನಾವು ‘ರಾತ್ರಿಯ ಸಮಯ-ನಿದ್ರಿಸುವ ಸಮಯವನ್ನೇ ಮುಡಿಪಾಗಿಟ್ಟಿದ್ದೀವಿ’. ಒಳ್ಳೆಯದೇ ಆದರೆ ನಾವು ಮಲಗುವ ಹಾಗೆ ಬೇರೆ ಜೀವಿಗಳೂ ಸಹ ರಾತ್ರಿಯಲ್ಲಿ ನಿದ್ರಿಸುತ್ತವೆ ಅಥವಾ ನಮ್ಮ ಹಾಗೆ 8 ಘಂಟೆಗಳು ಮಲಗುತ್ತವೆ. ಅಂದುಕೊಳ್ಳುವ ಹಾಗಿಲ್ಲ. ಅವುಗಳ ನಿದ್ದೆಯ ಮಾದರಿಯೇ ಬೇರೆ. ಕೆಲವಂತೂ ಕೇಳಲು ಸಹ ವಿಚಿತ್ರವಾಗಿವೆ.

© Nigel Raine

   ಉದಾಹರಣೆಗೆ ಉತ್ತರ ಭಾಗದ ‘ಆನೆ ಸೀಲ್ ಗಳು’ ದಿನಕ್ಕೆ ಕೇವಲ 2 ಘಂಟೆಗಳ ಕಾಲ ನಿದ್ರಿಸುತ್ತವೆಯಂತೆ. ಅದೂ ಸಹ ಒಂದೇ ಬಾರಿಯಲ್ಲ. ಬದಲಿಗೆ, 20 ನಿಮಿಷಗಳಿಗಿಂತ ಕಡಿಮೆ ನಿದ್ರೆಯ ಹಲವು ಭಾಗಗಳಲ್ಲಿ. ಉಳಿದ ಸಮಯದಲ್ಲಿ ಅಂದರೆ ಅವು ಸಮುದ್ರದಲ್ಲಿ ಇರುವಾಗ ಆಳಕ್ಕೆ ಹೋಗಿ ತಮ್ಮನ್ನು ಬೇಟೆಯಾಡುವ ಜೀವಿಗಳಿಂದ ತಪ್ಪಿಸಿಕೊಳ್ಳುತ್ತವೆ. ಇದರ ಜೊತೆಗೆ ಮಂಜಿನ ಮೇಲೆ ಸುಂದರವಾಗಿ ನಡೆಯುವ ಪೆಂಗ್ವಿನ್ ಗಳ ನಿದ್ದೆಯ ದಿನಚರಿ ಗೊತ್ತೇನು? ಪೆಂಗ್ವಿನ್ ಗಳು ದಿನದಲ್ಲಿ ಸರಿಸುಮಾರು 10000 ಬಾರಿ ನಿದ್ರಿಸುತ್ತವೆಯಂತೆ. ಅಂದರೆ ಪ್ರತೀ ಬಾರಿ ನಿದ್ದೆ ಹೋಗುವ ಸಮಯ ಕೇವಲ ಸೆಕೆಂಡುಗಳು. ಅವುಗಳು ಹೀಗೆ ಮಾಡುವುದರಿಂದ ತನ್ನ ಮರಿಗಳನ್ನು ಸದಾ ಎಚ್ಚರವಿದ್ದು ಬೇರೆ ಭಕ್ಷಕಗಳಿಂದ ರಕ್ಷಿಸಲು ಸುಲಭವಾಗುತ್ತದೆ.

ಅಷ್ಟೇ ಅಲ್ಲ, ಇನ್ನೂ ವಿಚಿತ್ರ ಎನಿಸುವಂತೆ, ದೊಡ್ಡ ಸಮುದ್ರವನ್ನೂ ದಾಟಿ ಹಾರಬಲ್ಲ ‘ಫ್ರಿಗೆಟ್’ ಎಂಬ ಪಕ್ಷಿ ಒಮ್ಮೆ ಹಾರಲು ಶುರು ಮಾಡಿದರೆ ದಡ ಸೇರಲು ತಿಂಗಳುಗಳೇ ಬೇಕು. ಹಾಗಾಗಿ ಅವು ಹಾರುವಾಗಲೇ ನಿದ್ರಿಸುತ್ತವೆಯಂತೆ. ‘ರೇನ್ ಡೀರ್’ ಎಂದು ಕರೆಯಲ್ಪಡುವ ಉತ್ತರ ಧೃವದ ಜಿಂಕೆಯಂತಹ ಪ್ರಾಣಿಯು ತನ್ನ ಆಹಾರವನ್ನು ಜಗಿಯುತ್ತಲೇ ನಿದ್ರಿಸುತ್ತವೆಯಂತೆ.

ಇವನ್ನೆಲ್ಲಾ ನೋಡಿದರೆ ನಾವು ಮನುಷ್ಯರೇ ಇಷ್ಟು ನಿದ್ದೆ ಮಾಡುವ ಪುಣ್ಯವಂತೆರೆನಿಸುತ್ತದೆ. ಆದರೆ ನಮ್ಮ ಪರಿಸ್ಥಿತಿ ನೋಡಿ. ನಿದ್ದೆಗೆಂದೇ ಇಷ್ಟೆಲ್ಲ ಸೌಕರ್ಯ ನಮಗಿದ್ದರೂ ನಾವು ಮಾತ್ರ ಫೋನ್, ಸರಿಯಾಗಿ ರೂಪಿಸಿಕೊಳ್ಳದ ಜೀವನ ಶೈಲಿ ಹಾಗೂ ದಿನಚರಿಯಿಂದ ಅಂತಹ ಸೊಂಪನ್ನೂ ಹಾಳುಮಾಡಿಕೊಳ್ಳುತ್ತಿದ್ದೇವೆ. ನಿತ್ಯ ಕಾರ್ಯಗಳಲ್ಲಿ ನಿರತವಾಗಿರುವ ನಿನ್ನ ಜೀವನ ಶೈಲಿಯನ್ನು ನೀನೆ ಪರಿಶೀಲಿಸಿಕೋ.. ಏಕೆಂದರೆ ನಿನ್ನ ನಿದ್ದೆಗೆ ನೀನೆ ಹೊಣೆ! ನಿದ್ರಾ-ಅವಸ್ಥೆ ಇಂದ ನಿದ್ರಾ-ವ್ಯವಸ್ಥೆ ಆಗಲಿ, ನಿತ್ಯದ ನಿದ್ದೆ ನಿಯಮವಾಗಲಿ…

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
   
ಬೆಂಗಳೂರು ನಗರ ಜಿಲ್ಲೆ

Spread the love
error: Content is protected.