ನಾನು ಕೂಡ ಒಂದು ಜೀವಿ

ನಾನು ಕೂಡ ಒಂದು ಜೀವಿ

© ಬಸನಗೌಡ  ಎನ್.  ಬಗಲಿ

ಅದೊಂದು ದಿನ ನೆಡುತೋಪಿನಲ್ಲಿ ತಿರುಗಾಡುತ್ತಿರುವಾಗ ಅಂದಾಜು ಒಂದು ಮೀಟರ್ ಎತ್ತರದ ಹೊಳೆಮತ್ತಿ ಗಿಡದಲ್ಲಿ ಸಣ್ಣಸಣ್ಣ ಕಡ್ಡಿಗಳನ್ನು ಕೂಡಿಸಿ ಅದ್ಯಾರೋ ಗಿಡದಲ್ಲಿಟ್ಟ ಹಾಗೆ ಕಣ್ಣಿಗೆ ಕಾಣಿಸಿತು. ಇದೇನಿದು ಗಿಡದಲ್ಲಿ ಕಡ್ಡಿಗಳ ಸಮೂಹವಿದೆಯಲ್ಲಾ? ಎಂದು ಹತ್ತಿರ ಹೋಗಿ ನೋಡಿದಾಗ, ಇದು “ಬ್ಯಾಗ್ ವರ್ಮ್” ಎನ್ನುವ ಪತಂಗದ ಕಂಬಳಿಹುಳುವಿನ ಕೆಲಸ ಎಂದು ಸ್ಪಷ್ಟವಾಯಿತು. ಈ ಜೀವಿ ಬಗ್ಗೆ ಮೊದಲೇ ನನಗೆ ಸ್ವಲ್ಪ ಗೊತ್ತಿದ್ದರಿಂದ ಇದನ್ನು ಗುರುತಿಸುವುದು ಅಷ್ಟೇನೂ ಕಷ್ಟಕರವಾಗಲಿಲ್ಲ. ಈ ಜೀವಿಯು, ತನ್ನ ರೇಷ್ಮೆ ಮತ್ತು ಮರದ ಕಟ್ಟಿಗೆಗಳಿಂದ ಆವೃತವಾದ ಒಂದು ಸಣ್ಣ ಚೀಲವನ್ನು ರಚನೆ ಮಾಡಿ ಒಳಗೆ ತಾನು ಕುಳಿತು ತಿರುಗಾಡುತ್ತಿತ್ತು. ಆದರೆ ಅದು ಟೊಂಗೆಯಿಂದ ಟೊಂಗಿಗೆ ಸುತ್ತಾಡುತ್ತಿರುವುದು ನನಗೆ ವಿಚಿತ್ರವೆನಿಸಿ, ಇದೇನು? ಈ ತರಹ ವಿಚಿತ್ರವಾಗಿ ವರ್ತಿಸುತ್ತಿದೆ ಎಂದು ಅಲ್ಲೇ ಅದನ್ನು ವೀಕ್ಷಿಸುತ್ತಾ ಕುಳಿತುಬಿಟ್ಟೆ. ಅದು ಗಿಡದ ತುಂಬೆಲ್ಲಾ ತಿರುಗಾಡುವುದಕ್ಕೆ ಕಾರಣ ಗೊತ್ತಾಗಲು ಬಹಳ ಸಮಯ ಬೇಕಿರಲಿಲ್ಲ. ಅದು ತನ್ನ ಹೊರಭಾಗದ ಕಟ್ಟಿಗೆಯ ಚೀಲವನ್ನು ರಚಿಸಲು ತನಗೆ ಬೇಕಾದ ಅಳತೆಯ ಕಟ್ಟಿಗೆಯ ಸಣ್ಣ ತುಂಡನ್ನು ಗಿಡದ ತುಂಬಾ ಹುಡುಕುತ್ತಿತ್ತು.

© ಬಸನಗೌಡ  ಎನ್.  ಬಗಲಿ

ಈ ಜೀವಿಗಳು ಪರಭಕ್ಷಕ ಜೀವಿಗಳಿಂದ ರಕ್ಷಿಸಿಕೊಳ್ಳಲು ರೇಷ್ಮೆ ಮತ್ತು ಸಣ್ಣಸಣ್ಣ ಕಡ್ಡಿಗಳಿಂದ ಚೀಲ ರಚಿಸಿ, ಅದರಲ್ಲಿ ಕುಳಿತು ತಿರುಗಾಡುವುದು ಸಾಮಾನ್ಯ. ಹಾಗೆಯೇ ಈ ಜೀವಿ ಕೂಡ ರೇಷ್ಮೆ ಮತ್ತು ಸಣ್ಣಸಣ್ಣ ಕಡ್ಡಿಗಳಿಂದ ಚೀಲ ರಚಿಸಿ ಆ ಚೀಲದಲ್ಲಿ ಕುಳಿತು ಗಿಡದ ತುಂಬೆಲ್ಲ ತಿರುಗಾಡುತ್ತಿತ್ತು. ಆದರೆ ಅದು ರಚಿಸಿದ ತನ್ನ ರಕ್ಷಣಾ ಚೀಲವು ಅಪೂರ್ಣತೆಯಿಂದ ಕೂಡಿದ್ದು, ಇನ್ನಷ್ಟು ಕಡ್ಡಿಗಳನ್ನು ತನ್ನ ಚೀಲದ ಹೊರಮೈಗೆ ಅಂಟಿಸಲು ಗಿಡದಲ್ಲಿ ಕಡ್ಡಿಗಳನ್ನು ಹುಡುಕುತ್ತಿತ್ತು. ಬಹಳ ಸಮಯದವರೆಗೆ ಗಿಡದಲ್ಲಿ ಸುತ್ತಾಡಿದ ಈ ಜೀವಿಯು ತನಗೆ ಬೇಕಾದ ಒಂದು ಸಣ್ಣ ಗಿಡದ ಟೊಂಗೆಯನ್ನು ಆಯ್ಕೆ ಮಾಡಿಕೊಂಡು, ಟೊಂಗೆಯ ಬುಡದಿಂದ ಕೊರೆಯಲು ಪ್ರಾರಂಭಿಸಿತು. ಆದರೆ ಆ ಜೀವಿ ಟೊಂಗೆಯನ್ನು ಕೊರೆಯುವುದಕ್ಕೂ ಮುಂಚೆ ಒಂದು ಉಪಾಯ ಮಾಡಿತು. ಅದೇನೆಂದರೆ ತನ್ನ ದೇಹದ ಹೊರ ಭಾಗದಲ್ಲಿದ್ದ ರೇಷ್ಮೆ ಮತ್ತು ಕಟ್ಟಿಗೆ ಚೀಲವನ್ನು ಆ ಗಿಡದ ಹಿಂಬದಿಯ ಟೊಂಗೆಗೆ ರೇಷ್ಮೆಯಿಂದ ಗಟ್ಟಿಯಾಗಿ ಕಟ್ಟಿ, ನಂತರ ಅದೇ ಚೀಲದಲ್ಲಿ ಕುಳಿತು, ಟೊಂಗೆಯ ಸುತ್ತ ಕೊರೆಯಲು ಪ್ರಾರಂಭಿಸಿತು. ಆದರೆ ನನಗೊಂದು ವಿಚಿತ್ರ ಅಲ್ಲಿ ಕಾಡಲಾರಂಭಿಸಿತು, ಅದೇನೆಂದರೆ ತನ್ನ ದೇಹದ ತೂಕದ ಅಂದಾಜು 10 ಪಟ್ಟು ಹೆಚ್ಚು ತೂಕವಿರುವ ಈ ಟೊಂಗೆಯನ್ನು ಕತ್ತರಿಸಿ ಅದು ಹೇಗೆ ಹಿಡಿದುಕೊಳ್ಳಲು ಸಾಧ್ಯವೆಂದು, ಆದರೆ ನನ್ನ ಈ ಪ್ರಶ್ನೆಗೆ ಅಲ್ಲಿಯೇ ಉತ್ತರವೂ ದೊರೆಯಿತು.  ಅದು ತನ್ನ ಬಾಯಿಂದ ಟೊಂಗೆಯನ್ನು ಕತ್ತರಿಸಿ ಇನ್ನೇನು ಗಿಡದ ಟೊಂಗೆ ಕೆಳಗೆ ಬೀಳುತ್ತದೆ ಎನ್ನುವಷ್ಟರಲ್ಲಿ ಅದು ತನ್ನ ಕಾಲುಗಳಿಂದ ಗಟ್ಟಿಯಾಗಿ ಹಿಡಿದು ನೇತಾಡತೊಡಗಿತು.

© ಬಸನಗೌಡ  ಎನ್.  ಬಗಲಿ

ಗಿಡವನ್ನು ಕೊರೆಯುವುದಕ್ಕಿಂತಲೂ ಮುಂಚೆ ಅದೇಕೆ ತನ್ನ ಚೀಲವನ್ನು ಗಿಡದ ಬುಡಕ್ಕೆ ರೇಷ್ಮೆಯಿಂದ ಕಟ್ಟಿತು ಎಂಬುದಕ್ಕೆ ಇಲ್ಲಿ ಉತ್ತರ ಸಿಕ್ಕಿತು. ಒಂದು ವೇಳೆ ಹಾಗೆ ಅದು ಕಟ್ಟದಿದ್ದರೆ ಅದು ಗಿಡದ ಟೊಂಗೆಯ ಸಮೇತ ಕೆಳಗಡೆ ಬೀಳುತ್ತಿತ್ತು. ಗಿಡದ ಟೊಂಗೆಯನ್ನು ಕತ್ತರಿಸಿದ ನಂತರ ತನ್ನ ಕಾಲುಗಳಿಂದ ಗಿಡದ ಟೊಂಗೆಯನ್ನು ನಿಧಾನವಾಗಿ ಮೇಲಕ್ಕೆತ್ತಿ, ಟೊಂಗೆಯನ್ನು ಕಾಲುಗಳಿಂದ ಗಟ್ಟಿಯಾಗಿ ಹಿಡಿದುಕೊಂಡು, ಟೊಂಗೆಯ ಇನ್ನೊಂದು ಭಾಗ ಕೊರೆಯಲು ಪ್ರಾರಂಭಿಸಿತು. ಬಹಳ ಸಮಯದವರೆಗೆ ಕೊರೆದು ಅಂದಾಜು 3 ಸೆಂಟಿ ಮೀಟರ್ ಉದ್ದದ ಸಣ್ಣ ಕಾಂಡದ ತುಂಡನ್ನು ತಯಾರಿಸಿತು. ಈ ಜೀವಿಯು ಇಷ್ಟೆಲ್ಲಾ ಕಸರತ್ತು ಮಾಡಬೇಕಾದರೆ ಅಂದಾಜು 15 ನಿಮಿಷ ಸಮಯ ತೆಗೆದುಕೊಂಡಿತ್ತು. ಅಷ್ಟು ಸಮಯದವರೆಗೆ ತನ್ನ ತೂಕಕ್ಕಿಂತಲೂ 10 ಪಟ್ಟು ಬಾರದ ಆ ಗಿಡದ ಟೊಂಗೆಯನ್ನು ಹಿಡಿದುಕೊಂಡು ಕೊರೆದದ್ದು ನಂಬಲು ನನಗೆ ಇದು ಅಸಾಧ್ಯವೆನಿಸಿತ್ತು. ಆದರೆ ಅದೇ ಸತ್ಯವಾಗಿತ್ತು.

ತಾನು ಕೊರೆದು ರಚಿಸಿದ ಕಾಂಡದ ತುಂಡನ್ನು ನಯವಾಗಿ ತನ್ನ ಬಾಯಿಂದ ಹೊರಗಿನ ತೊಗಟೆ ತೆಗೆಯಲು ಪ್ರಾರಂಭಿಸಿತು. ಆ ಒಂದು ಸಣ್ಣ ಜೀವಿಯು ಕಾಂಡದ ತೊಗಟೆ ತೆಗೆದು ಅದನ್ನು ನಯವಾಗಿ ಮಾಡಬೇಕಾದರೆ ತನ್ನ ಕಾಲುಗಳಿಂದ ಸಲೀಸಾಗಿ ಅದು ಆ ಕಾಂಡವನ್ನು ಸರ್ಕಸ್ ಮಾಡುವವರ ಹಾಗೆ ಮೇಲೆ ಕೆಳಗೆ ಎತ್ತಿ ನಯಗೊಳಿಸುತ್ತಿರುವುದನ್ನು ನೋಡಿದರೆ ಅದರ ಬುದ್ಧಿಶಕ್ತಿ ಅಲ್ಲಿ ಅನಾವರಣವಾಗುತ್ತಿತ್ತು. ಪ್ರತಿಯೊಂದು ಜೀವಿಗೂ ತನ್ನದೇ ಆದಂತಹ ಅಗಾಧ ಬುದ್ಧಿಶಕ್ತಿ ಇರುವುದು ಅಲ್ಲಿ ಸಾರಿ ಸಾರಿ ಹೇಳಿದಂತ್ತಿತ್ತು. ನಯವಾಗಿರುವ ಆ ಗಿಡದ ಕಟ್ಟಿಗೆಯನ್ನು ಅತ್ಯಂತ ನಾಜೂಕಿನಿಂದ ತನ್ನ ಚೀಲದ ಹೊರ ಭಾಗದಲ್ಲಿರುವ ಕಟ್ಟಿಗೆಯ ಚೀಲಕ್ಕೆ ರೇಷ್ಮೆಯಿಂದ ಆದಷ್ಟು ಬೇಗನೆ ಅಂಟಿಸಿಬಿಟ್ಟಿತು. ಆ ಜೀವಿಯು ಕಟ್ಟಿಗೆಯನ್ನು ಅಂಟಿಸಿದ ರೀತಿ ಹೇಗಿತ್ತೆಂದರೆ ಮಾನವ ತಯಾರಿಸಿದ ಯಾವ ಗಮ್ ಕೂಡ ಅಷ್ಟು ಬೇಗನೆ ಅಂಟಿಕೊಳ್ಳಲಾರವು ಅದಕ್ಕಿಂತಲೂ ಬೇಗ ಈ ಜೀವಿ ಆ ಕಟ್ಟಿಗೆಯನ್ನು ತನ್ನ ಚೀಲಕ್ಕೆ ಅಂಟಿಸಿಬಿಟ್ಟಿತ್ತು. ಈ ಮೊದಲು ಇದು ತನ್ನ ಚೀಲವನ್ನು ಟೊಂಗೆಗೆ ರೇಷ್ಮೆಯಿಂದ ಕಟ್ಟಿದ್ದನ್ನು ನಯವಾಗಿ ಬಿಡಿಸಿಕೊಂಡು, ನಂತರ ಗಿಡದಲ್ಲಿ ಇನ್ನೊಂದು ಕಾಂಡವನ್ನು ಹುಡುಕಲು ಹೊರಟು ಹೋಯಿತು.

ಪ್ರಕೃತಿಯಲ್ಲಿ ಅದರಲ್ಲೂ ಜೀವ ವೈವಿಧ್ಯತೆಯಲ್ಲಿ ಕೌತುಕದ ಸಂಗತಿಗಳು ಪ್ರತಿಕ್ಷಣವೂ ನಡೆಯುತ್ತಿರುತ್ತವೆ. ಸ್ವಲ್ಪ ಸಮಯ ಮನಸ್ಸುಕೊಟ್ಟು ಇಂತಹ ಕೌತುಕಗಳನ್ನು ನೋಡಿದ್ದೆ ಆದರೆ, ಜೀವ ಜಗತ್ತಿನ ಅದ್ಭುತ ವಿಷಯಗಳ ಅನಾವರಣದ ರಸದೌತಣ ಅಲ್ಲಿ ನಮಗೆ ಸಿಗುತ್ತದೆ.

ಲೇಖನ: ಬಸನಗೌಡ  ಎನ್.  ಬಗಲಿ
            
                 ಉತ್ತರ ಕನ್ನಡ ಜಿಲ್ಲೆ

Print Friendly, PDF & Email
Spread the love
error: Content is protected.