ಬ್ಯಾಕ್ಟಿರಿಯಾಸ್ಯಗಳು!
© LUKE THOMPSON_CHISHOLM LAB, NIKKI
ಮಾವಿನ ಕಾಲ ಮುಗಿಯುತ್ತಾ ಬಂತು. ಆದರು ಈ ಬಾರಿ ಸರಿಯಾಗಿ ಮಾವನ್ನು ಸವಿದಿಲ್ಲ. ಕೆಲವನ್ನು ತಿಂದೆನಾದರೂ ಅಷ್ಟು ರುಚಿಯಾಗೇನು ಇರಲಿಲ್ಲ. ಬಹುಶಃ ಅಸ್ವಾಭಾವಿಕವಾಗಿ ಕಾಯನ್ನು ಹಣ್ಣು ಮಾಡಿರುವುದರಿಂದಲೋ ಏನೋ? ಅಥವಾ ಆ ಪ್ರಭೇದದ ಮಾವಿನ ಹಣ್ಣಿಗೆ ಪೂರ್ವಜನಾದ ಬ್ಯಾಕ್ಟೀರಿಯಾ ಗುಣದಿಂದಲೋ ಏನೋ. ಅರೆರೇ ಒಂದು ನಿಮಿಷ ತಾಳಿ, ನೋಡಿ ಸ್ವಾಮಿ ಊಹೆಗೇನು ಏನು ಬೇಕಾದರೂ ಮಾಡಬಹುದು, ಆದರೆ ಅದಕ್ಕೊಂದು ಅರ್ಥ-ಪರ್ಥ ಬೇಡವೇ? ಸ್ವಾಭಾವಿಕವಾಗಿ ಹಣ್ಣು ಮಾಡಿರುವುದರಿಂದ ಹಣ್ಣಿನ ರುಚಿ ಕೆಟ್ಟಿರಬಹುದೇನೊ, ಆದರೆ ಮರಕ್ಕೂ, ಬ್ಯಾಕ್ಟೀರಿಯಾಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಅದಲ್ಲದೇ ಪೂರ್ವಜನಂತೆ! ಮತಿ ಇದ್ದೇ ಮಾತನಾಡುತ್ತಿದ್ದೀರೇನು? ಎನ್ನುವಷ್ಟು ಹುಸಿ ಕೋಪ ಬರಬಹುದು. ಆದರೆ ಬಿಸಿ ಸುದ್ದಿ ಅದೇ.. ಕೆಲವರಿಗೆ ತಿಳಿದಿರಬಹುದು, ನಾವು ಈಗ ಚಾರಣಗಳಿಗೆ ಹೋಗಿ ಕಣ್ಣಾರೆ ಹಸಿರ ಐಸಿರಿ ಕಂಡು ಸಂತಸಪಡುವ ಈಗಿನೆಲ್ಲಾ ಸಸ್ಯ ಪ್ರಭೇದಗಳ ಮೂಲ ಕೋಟ್ಯಂತರ ವರ್ಷಗಳ ಹಿಂದೆ ಬ್ಯಾಕ್ಟೀರಿಯಾಗಳಲ್ಲಿ ಬದಲಾದ ಒಂದು ಮಹತ್ತರ ಬದಲಾವಣೆ ಇಂದ ಆದದ್ದು. ಅದೇ ದ್ಯುತಿಸಂಶ್ಲೇಷಣಾ ಕ್ರಿಯೆ. ಅಂದರೆ ಜೀವಿ ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುವುದು.
ಈಗ ನಾವು ಸಸ್ಯಗಳಲ್ಲಿ ನೋಡುವ ಗುಣ. ಇನ್ನು ಬಿಡಿಸಿ ಹೇಳುತ್ತೇನೆ ಕೇಳಿ. ಸಯನೋ ಬ್ಯಾಕ್ಟೀರಿಯಾ ಎಂಬ ಒಂದು ಬ್ಯಾಕ್ಟೀರಿಯಾ ಇದೆ. ಅದು ಸಸ್ಯಗಳ ಹಾಗೆ ತನ್ನ ಆಹಾರ ತಾನೆ ತಯಾರಿಸಿಕೊಳ್ಳಬಹುದು. ಅದರ ದೇಹ, ಅಂಗಾಂಗ ರಚನೆಗಳು ಹೇಗೆ ಎಂದು ಈಗಲು ನೋಡಬಹುದು. ಅಂತಹುದೇ ಬ್ಯಾಕ್ಟೀರಿಯಾದ ಒಂದು ಪಳೆಯುಳಿಕೆ ಸಿಕ್ಕಿದೆ. ಅದರ ದೇಹದೊಳಗಿನ ಅಂಗರಚನೆ ಈಗಿನ ಸಯನೋ ಬ್ಯಾಕ್ಟೀರಿಯಾದ ಆಹಾರ ತಯಾರಿಸುವ ಅಂಗಗಳ ಹಾಗೆಯೇ ಇದೆ. ಹಾಗೂ ಈ ಪಳೆಯುಳಿಕೆ 178 ಕೋಟಿ ವರ್ಷಗಳ ಹಿಂದಿನದು. ಆ ಕಾಲಘಟ್ಟದಲ್ಲಿ ನಾವು ಈಗ ನೋಡುವ ಸಸ್ಯಗಳು ಅಥವಾ ಯಾವ ಪ್ರಾಣಿಗಳೂ ಇರಲಿಲ್ಲ. ಬ್ಯಾಕ್ಟೀರಿಯಾಗಳಲ್ಲಿ ತನ್ನ ಆಹಾರ ತಾನೆ ತಯಾರಿಸುವ ಈ ಗುಣ ಮೊದಲು ಶುರುವಾಗಿ ನಂತರದ ಪ್ರಾಣಿಗಳು ಹಾಗೂ ಸಸ್ಯಗಳ ರೂಪದಲ್ಲಿ ಬದಲಾಗಿ ನಾವು ಈಗ ನೋಡುವ ಜೀವರಾಶಿಯಾಗಿ ವಿಕಾಸಗೊಂಡಿವೆ. ಈಗ ನೀವೆ ಹೇಳಿ, ಸಸ್ಯಗಳ ಪೂರ್ವಜ ಬ್ಯಾಕ್ಟೀರಿಯಾ ಅಲ್ಲವೇನು?
ಸಸ್ಯಗಳ ಹಾಗೆ ಈ ಸಯನೋ ಬ್ಯಾಕ್ಟೀರಿಯಾಗಳು ತನ್ನ ಆಹಾರವನ್ನು ತಾವೆ ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ತಯಾರಿಸಿಕೊಳ್ಳುತ್ತವೆ. ಹಾಗು ಆಮ್ಲಜನಕವನ್ನು ಹೊರಬಿಡುತ್ತವೆ. ಈ ಕ್ರಿಯೆ ‘ಥೈಲಕಾಯ್ಡ್ಸ್’ ಎಂಬ ವಿಶೇಷ ರಚನೆಗಳಲ್ಲಿ ನಡೆಯುತ್ತದೆ. ಅಂತಹ ರಚನೆಗಳು ನಮಗೆ ಈಗ ದೊರೆತಿರುವ 178 ಕೋಟಿ ವರ್ಷ ಹಳೆಯ ಬ್ಯಾಕ್ಟೀರಿಯ ಪಳೆಯುಳಿಕೆಯಲ್ಲಿ ನೋಡಲು ಸಿಗುತ್ತದೆ. ಅಂದರೆ ಅಷ್ಟು ವರ್ಷಗಳ ಹಿಂದೆಯೇ ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಆಮ್ಲಜನಕ ವಾತಾವರಣಕ್ಕೆ ಹೆಚ್ಚಾಗಿ ಸೇರಲು ಆರಂಭಿಸಿದ್ದು. ಇದಕ್ಕೆ ಮುಂಚೆ ವಾತಾವರಣದಲ್ಲಿ ಕಡಿಮೆ ಇತ್ತು, ಇದಾದ ಬಳಿಕ ‘ಆಮ್ಲಜನಕದ ಸ್ಪೋಟವಾಯ್ತು’. ಯಾವಾಗ ವಾತಾವರಣದಲ್ಲಿನ ಆಮ್ಲಜನಕ ಹೆಚ್ಚಾಯ್ತೋ ಇನ್ನೂ ಸಂಕೀರ್ಣ ಜೀವಿಗಳು ಹುಟ್ಟಿಕೊಳ್ಳಲು ಆರಂಭಿಸಿದವು. ಅವು ಕ್ರಮೇಣ ವಿಕಾಸವಾಗಿ ನಾವು ಈಗ ಕಾಣುವ ಕೋಟ್ಯಾಂತರ ಸಸ್ಯಗಳೂ, ಪ್ರಾಣಿಗಳೂ ಆಗಿವೆ.
ಈ ಸಂಶೋಧನೆಗೆ ಮೂಲ, ಈಗಿನ ಎಲ್ಲಾ ವಿಜ್ಞಾನಿಗಳು ಅಚ್ಚರಿಪಡುವಂತಹ ವಿಷಯ ಏನೆಂದರೆ ಈ ಥೈಲಕಾಯ್ಡ್ಸ್ ಎಂಬ ಮೃದು ರಚನೆಗಳು ಪಳೆಯುಳಿಕೆಯ ಒತ್ತಡ-ಶಾಖಗಳಿಂದ ಕೂಡಿದ ಪ್ರಕ್ರಿಯೆಯನ್ನು ಸಹಿಸಿಕೊಂಡು ಉಳಿದಿರುವುದು. ಮೂಳೆಗಳಂತಹ ಗಟ್ಟಿ ಅಂಗಗಳೇ ಕರಗಿ ಬರೀ ಅಚ್ಚಾಗಿ ಸಿಗುವ ಪಳೆಯುಳಿಕೆಯನ್ನು ಸಾಮಾನ್ಯವಾಗಿ ಕಂಡಿರುವ ನಮಗೆ, ಈ ತರಹದ ಸೂಕ್ಷ್ಮಜೀವಿಯ ಮೃದು ಅಂಗ ಪಳೆಯುಳಿಕೆಯಲ್ಲಿ ಉಳಿದಿದೆ ಎಂದರೆ ಅದು ಸಾಮಾನ್ಯವಲ್ಲ. ವಿಜ್ಞಾನಿಗಳಿಗೆ ಇದೊಂದು ಕಾಲವೇ ಉಳಿಸಿಕೊಟ್ಟ ವಿಶೇಷ ವೈಜ್ಞಾನಿಕ ಮಾದರಿ.
ಇದೇ ತರಹದ ಬ್ಯಾಕ್ಟೀರಿಯಾಗಳು ಆಫ್ರಿಕಾದ ‘ಕಾಂಗೋ’ನಲ್ಲಿಯೂ ದೊರೆತಿದೆಯಾದರೂ ಆ ಬ್ಯಾಕ್ಟೀರಿಯಾಗಳಲ್ಲಿ ಥೈಲಕಾಯ್ಡ್ಸ್ ನ ರಚನೆ ಸಿಗಲಿಲ್ಲ. ಇದಕ್ಕೆ ಒಂದು ಕಾರಣ ಪಳೆಯುಳಿಕೆ ಪ್ರಕ್ರಿಯೆಯ ಒತ್ತಡವನ್ನು ತಾಳಲಾರದೆ ಅವು ಅಳಿದಿರಬಹುದು, ಇನ್ನೊಂದು ಆ ಪ್ರದೇಶದ ಬ್ಯಾಕ್ಟೀರಿಯಾಗಳು ಥೈಲಕಾಯ್ಡ್ಸ್ ಅನ್ನು ಹೊಂದಿರದೆ, ತನ್ನ ಆಹಾರ ತಾನೇ ತಯಾರಿಸದೆ ಬೇರೆ ರೀತಿಯಲ್ಲಿಯೇ ಬದುಕಿರಬಹುದು. ಏನೇ ಆದರೂ ಇಂತಹ ಸೂಕ್ಷ್ಮ ಪಳೆಯುಳಿಕೆಗಳ ಅನಾವರಣ ವಿಜ್ಞಾನಕ್ಕೆ ವಿಶೇಷ ಕೊಡುಗೆಯೆ. ಇದರಿಂದ ಕಲಿಯುವುದು ಇನ್ನೂ ಇದೆ, ಎಂದು ಹುಡುಕುತ್ತಾ ವಿಜ್ಞಾನಿಗಳು ಅದೇ ದಿಕ್ಕಿನಲ್ಲಿ ಸಾಗಿದ್ದಾರೆ.
ನಾವೂ ಸಹ ನಮ್ಮ ಸಂಪ್ರದಾಯದ ಬೇರುಗಳನ್ನು ಅರಿತು, ಭದ್ರ ಪಡಿಸಿಕೊಂಡು, ಮೂಢನಂಬಿಕೆಗಳಂತಹ ಗಂಟುಗಳನ್ನು ತೆಗೆದು ಹಾಕಿ. ಸಹಜೀವಿ-ಸಹನೆ ಜೀವನದ ಹಾದಿ ಹಿಡಿದಿದ್ದ ನಮ್ಮ ಪೂರ್ವಜರ ಅದೇ ಹಾದಿಯಲ್ಲಿ ಸಾಗುತ್ತ ಸಾರ್ಥಕ ಬದುಕು ಸಾಗಿಸೋಣ.
ಮೂಲ ಲೇಖನ: www.snexplores.org
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು ನಗರ ಜಿಲ್ಲೆ
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.