ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

 © ಪೃಥ್ವಿ  ಬಿನೇರಳೆ ಬೆನ್ನಿನ ಸೂರಕ್ಕಿ            

ಹೂವಿನ ಮಕರಂದನ್ನು ಆಹಾರವನ್ನಾಗಿಸಿರುವ ಬೆರಳೆಣಿಕೆ ಪ್ರಭೇದದ ಪಕ್ಷಿಗಳಲ್ಲಿ  ಸೂರಕ್ಕಿಯೂ ಕೂಡ ಒಂದು. ವರ್ಷದುದ್ದಕ್ಕೂ ಸಂತಾನೋತ್ಪತ್ತಿ ಮಾಡುವ ಸೂರಕ್ಕಿಗಳು ತಮ್ಮ ಗೂಡುಗಳನ್ನು ಸಸ್ಯದ ನಾರು, ಜೇಡದ ಬಲೆ, ಕಲ್ಲು ಹೂ, ಮರದ ತೊಗಟೆ ಮತ್ತು ಇತರ ವಸ್ತುಗಳಿಂದ ತುಂಬಾ ಮೃದುವಾಗಿ ಪೊದೆಗಳಲ್ಲಿ ಕೆಲವೊಮ್ಮೆ ಕಟ್ಟಡ ಹಾಗು ಬಂಡೆಗಳ ಅಡಿಯಲ್ಲಿಯೂ ಕಟ್ಟಿ ಕೊಳ್ಳುತ್ತವೆ. ಹೆಣ್ಣು ಮೊಟ್ಟೆಯಿಡುವ ಮುನ್ನ ಎರಡರಿಂದ ಮೂರು ದಿನಗಳ ಕಾಲ ಗೂಡಲ್ಲಿ ವಾಸವಿದ್ದು ಮರಿಗಳು ಅದರಲ್ಲಿ ಬೆಳೆಯಲು ಯೋಗ್ಯವಿದೆಯೇ ಎಂದು ಪರೀಕ್ಷಿಸುತ್ತವೆ. ಎರಡು ಮೊಟ್ಟೆಗಳನ್ನಿಟ್ಟು ಗಂಡು ಮತ್ತು ಹೆಣ್ಣು ಎರಡೂ ಕೂಡ 14-17 ದಿನಗಳ ಕಾಲ ಕಾವುಕೊಡುತ್ತವೆ. ಮೊಟ್ಟೆಯಿಂದ ಹೊರಬರುವ ಮರಿಗಳು ಕೇವಲ ಹೂವಿನ ಮಕರಂದದಿಂದಲೇ ಬೆಳೆಯುವುದು ಕಷ್ಟವಾಗಿರುವುದರಿಂದ ಮರಿಗಳು ಗೂಡಿಂದ ಹೊರ ಹೋಗುವವರೆಗೂ ಕೀಟಗಳನ್ನು ಆಹಾರವನ್ನಾಗಿ ನೀಡುತ್ತವೆ. ಕೆಲವೊಮ್ಮೆ ಹಳೆಯ ಗೂಡನ್ನೇ ಮರುಬಳಕೆ ಮಾಡಲಾಗುತ್ತದೆ. ಇವುಗಳ ಕೊಕ್ಕಿಗೆ ಸವಾಲೊಡ್ಡುವಂತಹ ಹೂ ಕಂಡುಬಂದಲ್ಲಿ ಹೆಚ್ಚು ತೊಂದರೆ ತೆಗೆದುಕೊಳ್ಳದೆ ಆ ಹೂವಿನ ಬುಡದಲ್ಲಿ ರಂಧ್ರ ಮಾಡಿ ಮಕರಂದವನ್ನು ದೋಚುತ್ತವೆ. ನೇರಳೆ ಬೆನ್ನಿನ ಸೂರಕ್ಕಿಯ ತಲೆ, ಹೊಳೆಯುವ ನೀಲಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿಗೆ ಕಂದು ಬಣ್ಣವಿರುತ್ತದೆ.

© ಪೃಥ್ವಿ  ಬಿ,ನೀಲಿ ಬಾಲದ ಕಳ್ಳಿ ಪೀರ   

ನೀಲಿ ಬಾಲದ ಕಳ್ಳಿ ಪೀರ ಎಂದು ಕರೆಯಲ್ಪಡುವ ಈ ಪಕ್ಷಿಯು ಮೆರೋಪಿಡೆ ಕುಟುಂಬಕ್ಕೆ ಸೇರುತ್ತದೆ. ಹಲವಾರು ಪ್ರದೇಶಗಳಲ್ಲಿ ಪುಕ್ಕ ಹಾಗು ಬಣ್ಣದ ವ್ಯತ್ಯಾಸಗಳಿಂದ ಕಾಣುವುದರಿಂದ ಇತರ ಉಪಜಾತಿಗಳನ್ನು ವಿಂಗಡಿಸಲಾಗುತ್ತದೆ. ಮುಖ್ಯವಾಗಿ ಕೀಟಗಳನ್ನು ತಿನ್ನುವುದರಿಂದ ಹುಲ್ಲುಗಾವಲು, ತೆಳುವಾದ ಪೊದೆಗಳು ಮತ್ತು ಕಾಡಿನಲ್ಲಿ ಕಂಡುಬರುತ್ತವೆ. ಇವುಗಳ ಬೇಟೆಯ ವರ್ತನೆಯು ನೋಡಲು ಸೊಗಸಾಗಿರುತ್ತದೆ. ಹಿಡಿದ ಜೇನುನೊಣವನ್ನು ಹಾರುತ್ತಲೇ ತಿನ್ನದೆ ಒಂದು ಒಣ ಕಡ್ಡಿ ಅಥವಾ ವಿದ್ಯುತ್ ತಂತಿಯ ಮೇಲೆ ಕುಳಿತು ಆ ನೊಣವನ್ನು ಕಡ್ಡಿಗೆ ಉಜ್ಜುವ ಮೂಲಕ ಅದರ ಗುಟುಕನ್ನು ತೆಗೆದು ನಂತರ ತಿನ್ನುತ್ತವೆ. ಇವುಗಳನ್ನು ಸಾಮಾನ್ಯವಾಗಿ ಸಣ್ಣ ಸಣ್ಣ ಗುಂಪುಗಳಲ್ಲಿ ಕಾಣಬಹುದು, ಗುಂಪಿನಲ್ಲಿ ಸರಿಸುಮಾರು 50-150 ಪಕ್ಷಿಗಳವರೆಗೂ ಗುರುತಿಸಬಹುದು. ಸಂತಾನೋತ್ಪತ್ತಿಯು ಮಾರ್ಚ್ ನಿಂದ ಜೂನ್ ವರೆಗೆ ಇರುತ್ತದೆ. ಮಣ್ಣಿನ ಗೋಡೆಗಳಲ್ಲಿ ನಾಲ್ಕರಿಂದ ಐದು ಅಡಿಯಷ್ಟು ಉದ್ದದ ಸುರಂಗವನ್ನು ಮಾಡಿ ಬರಿ ನೆಲದ ಮೇಲೆ 3-5 ಗೋಳಾಕಾರದ ಮೊಟ್ಟೆಗಳನ್ನಿಟ್ಟು 14 ದಿನಗಳ ಕಾಲ ಕಾವುಕೊಡುತ್ತವೆ. ಮರಿಗಳು ನಾಲ್ಕು ವಾರಗಳಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದುತ್ತವೆ.

©ಪೃಥ್ವಿ  ಬಿ,ಕಪ್ಪು ಬಿಳಿ ಮಿಂಚುಳ್ಳಿ    

ಕಪ್ಪು ಬಿಳಿ ಮಿಂಚುಳ್ಳಿ (ಪೈಡ್ ಕಿಂಗ್‌ಫಿಶರ್) ಆಫ್ರಿಕಾ ಮತ್ತು ಏಷ್ಯದಾದ್ಯಂತ ವ್ಯಾಪಕವಾಗಿ ವಿಸ್ತರಿಸಲ್ಪಟ್ಟಿದೆ. ನೀರಿನ ಮಟ್ಟದಲ್ಲಿ ಹಾರಾಡುತ್ತ ಕ್ಷಣಾರ್ಧದಲ್ಲೇ ನೀರಿಗೆ ಧುಮುಕಿ ಮೀನನ್ನು ಹಿಡಿಯಬಲ್ಲದ್ದಾಗಿದೆ. ಗಂಟೆಗೆ ಸುಮಾರು ಐವತ್ತು ಕಿ.ಮೀ ವೇಗವಾಗಿ ಹಾರಾಡುತ್ತ ನದಿ, ಸರೋವರ, ದೊಡ್ಡ ದೊಡ್ಡ ಕೆರೆಗಳ ಬಳಿ ಕಾಣಸಿಗುತ್ತವೆ. ಗಾಳಿಯಲ್ಲಿ ಒಂದೇ ಜಾಗದಲ್ಲಿ ಹಾರಾಡುತ್ತಾ ಸುಮಾರು ಸಮಯದವರೆಗೆ ನಿಲ್ಲುವ ಸಾಮರ್ಥ್ಯ ಹೊಂದಿದ್ದು, ಅಲ್ಲಿಂದಲೇ ನೀರಿಗೆ ಜಿಗಿಯುತ್ತದೆ. ಸುಮಾರು ಇಪ್ಪತೈದು ಸೆಂ.ಮೀ  ಉದ್ದವಿದ್ದು, ಕಪ್ಪು ಮುಖವಾಡದೊಂದಿಗೆ ದೇಹವೆಲ್ಲಾ ಕಪ್ಪು ಬಿಳಿ ಗುರುತುಗಳನ್ನೊಳಗೊಂಡಿದೆ. ಇವುಗಳ ಮುಖ್ಯ ಆಹಾರ ಮೀನುಗಳಾಗಿದ್ದರೂ ಆಗಾಗ ಕೊಡತಿ ಹುಳ, ಏಡಿ ಮತ್ತು ನೀರಿನ ಬಳಿ ಸುಳಿದಾಡುವಂತಹ ಮಿಡತೆಗಳನ್ನು ಸಹ ಹಿಡಿಯುತ್ತವೆ. ತಾನು ಹಿಡಿದ ಬೇಟೆಯು ಸಣ್ಣದಾಗಿದ್ದಲ್ಲಿ ಹಾರುತ್ತಲೇ ಅದನ್ನು ನುಂಗುತ್ತದೆ. ಇವುಗಳ ಸಂತಾನೋತ್ಪತ್ತಿ ಸಮಯವು ಫೆಬ್ರವರಿ ಇಂದ ಏಪ್ರಿಲ್ ವರೆಗೆ. ನೀರಿನಿಂದ ಸುಮಾರು ಐದು ಅಡಿ ಎತ್ತರದಲ್ಲಿ ಮಣ್ಣಿನ ಗೋಡೆಯಲ್ಲಿ ಸುರಂಗದಂತಹ ಗೂಡನ್ನು ಮಾಡುತ್ತವೆ. ಹಲವಾರು ಮಿಂಚುಳ್ಳಿಗಳ ಗೂಡುಗಳು ಅಕ್ಕ ಪಕ್ಕದಲ್ಲಿಯೇ ಇರುತ್ತವೆ. ಸಾಮಾನ್ಯವಾಗಿ  ನಾಲ್ಕರಿಂದ ಆರು ಬಿಳಿ ಮೊಟ್ಟೆಗಳನ್ನಿಟ್ಟು ಗಂಡು ಮತ್ತು ಹೆಣ್ಣು ಎರಡು ಕೂಡ ಕಾವು ಕೊಟ್ಟು ಮರಿಮಾಡುತ್ತವೆ.

©ಪೃಥ್ವಿ  ಬಿ, ಶಿಕ್ರಾ 

ಶಿಕ್ರಾ ಎಸಿಪಿಟ್ರಿಡೇ ಕುಟುಂಬಕ್ಕೆ ಸೇರಿರುವ ಬೇಟೆಯಾಡುವ ಒಂದು ಸಣ್ಣ ಹಕ್ಕಿಯಾಗಿದೆ. ಹೆಚ್ಚಾಗಿ ಆಫ್ರಿಕಾ ಮತ್ತು ಏಷ್ಯ ಖಂಡಗಳಲ್ಲಿ ವ್ಯಾಪಕವಾಗಿ ಕಾಣಸಿಗುತ್ತವೆ. ಇದನ್ನು ಪುಟ್ಟ ಬ್ಯಾಂಡೆಡ್ ಗೋಶಾಕ್ ಎಂದೂ ಕೂಡ ಕರೆಯುತ್ತಾರೆ. ಇದರ ಕರೆಯನ್ನು ಕಾಜಾಣಗಳು ಮತ್ತು ಕೋಗಿಲೆಚಾಣಗಳು ಅನುಕರಿಸುತ್ತವೆ. ಕಾಡು, ಕೃಷಿ ಭೂಮಿ ಹಾಗು ನಗರಗಳಲ್ಲಿ ಗಾಳಿಯಲ್ಲಿ ತೇಲುತ್ತಿರುವುದು ಕಾಣುತ್ತದೆ. ಆಹಾರವನ್ನಾಗಿ ಅಳಿಲುಗಳನ್ನು, ಸರೀಸೃಪ, ಕೀಟ ಹಾಗು ಸಣ್ಣ ಪಕ್ಷಿಗಳನ್ನು ಸಹ ಬೇಟೆಯಾಡುತ್ತವೆ.  ಸಣ್ಣ ಪಕ್ಷಿಗಳು ಇದರಿಂದ ತಪ್ಪಿಸಿಕೊಳ್ಳಲು ಎಲೆಗಳ ಕೆಳಗೆ ಮರೆಯಾದರೆ ಸಣ್ಣ ನೀಲಿ ಮಿಂಚುಳ್ಳಿಯು ನೀರಿನಲ್ಲಿ ಮುಳುಗುತ್ತವೆ. ಇವು ಸಣ್ಣ ಬಾವಲಿಗಳಿಗಾಗಿ ಮುಸ್ಸಂಜೆಯಲ್ಲಿ ಬೇಟೆಯಾಡುವುದೂ ಸಹ ಕಂಡುಬರುತ್ತದೆ. ಭಾರತದಲ್ಲಿ ಇದರ ಸಂತಾನೋತ್ಪತ್ತಿ ಸಮಯವು ಮಾರ್ಚ್ ನಿಂದ ಜೂನ್ ವರೆಗಿರುತ್ತದೆ. ಕಾಗೆಗಳಂತೆಯೇ ಗೂಡನ್ನು ಹುಲ್ಲಿನಿಂದ ಮುಚ್ಚಿರುತ್ತದೆ. ತಿಳಿ ನೀಲಿ ಬಣ್ಣದ ಮೂರ್ನಾಲ್ಕು ಮೊಟ್ಟೆಗಳನ್ನಿಟ್ಟು 18-21 ದಿನಗಳಕಾಲ ಕಾವು ಕೊಡುತ್ತವೆ. ಶಿಕ್ರಾ ಎಂಬ ಪದವು ಹಿಂದಿ ಭಾಷೆಯಲ್ಲಿ ಬೇಟೆಗಾರ ಎಂದು ಅರ್ಥ.

ಚಿತ್ರಗಳು:  ಪೃಥ್ವಿ  ಬಿ
ವಿವರಣೆ: ಧನರಾಜ್ ಎಂ

Spread the love
error: Content is protected.