ಪರಿಸರ ಪ್ರವಾಸೋದ್ಯಮ – ಆದಾಯವೋ? ಅಪಾಯವೊ?
©ಮಹದೇವ ಕೆ. ಸಿ.
ಮಹಾರಾಷ್ಟ್ರದ ತಡೋಬ ರಾಷ್ಟ್ರೀಯ ಉದ್ಯಾನವನದ ಪುಟ್ಟ ಕೊಳದಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ಹುಲಿಯೊಂದು ಬಾಯಲ್ಲೆತ್ತಿಕೊಂಡು ಕಾಡಿನೊಳಗೆ ಹೋದ ವಿಡಿಯೋ ತುಣುಕೊಂದನ್ನು ನೋಡುತ್ತಿದ್ದೆ. ವನ್ಯಜೀವಿಗಳ ಆವಾಸ ಸ್ಥಾನದೊಳಗೆ ಹೊಕ್ಕು ಮಾನವನು ನಡೆಸುತ್ತಿರುವ ಪಾಪಕಾರ್ಯಗಳು ಇನ್ನೂ ಅದ್ಯಾವ ಹಂತ ತಲುಪಲಿದೆಯೋ ಎಂಬ ಚಿಂತೆಯಲ್ಲಿದ್ದಾಗಲೇ ಒಂದು ಕರೆ ಬಂತು. ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕೆಲಸ ಮಾಡುತ್ತಿರುವ ನನ್ನ ಪರಿಚಯಸ್ಥರೊಬ್ಬರು ಕರೆ ಮಾಡಿ ಮನಸ್ಸಿಗೆ ಮತ್ತೊಂದು ಘಾಸಿಯಾಗುವ ವಿಷಯ ತಿಳಿಸಿದರು. ಮುಳ್ಳಯ್ಯನಗಿರಿ ಶೋಲಾ ಕಾಡುಗಳ ಹುಲ್ಲುಗಾವಲಿಗೆ ಬೆಂಕಿ ತಗುಲಿತ್ತು. ಸರಿಸುಮಾರು ಐನೂರು ಎಕರೆಯಷ್ಟು ಅರಣ್ಯ ಬೆಂಕಿಯ ಕೆನ್ನಾಲಗೆಯಲ್ಲಿ ಬೇಯುತ್ತಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಚಾರಣಿಗನೊಬ್ಬ ಬಿಸಾಡಿದ ಸಿಗರೇಟಿನ ತುಂಡೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿತ್ತು. ಮೇಲಿನ ಎರಡೂ ಘಟನೆಗಳಿಗೆ ಕಾರಣರಾದವರು ಮಾತ್ರ ಪ್ರವಾಸಿಗರೆಂಬುದು ಸ್ಪಷ್ಟ. ಎರಡರಲ್ಲೂ ‘ಪರಿಸರ ಪ್ರೇಮಿ’ಯ ಸೋಗಿನಲ್ಲಿ ತಿರುಗಾಡುವವರೇ ಅಪರಾಧಿಗಳು. ಆದಾಯದ ಮಾರ್ಗವೊಂದು ಅಪಾಯಕಾರಿಯಾಗುತ್ತಿರುವ ಮುನ್ಸೂಚನೆ ಕೊಡುತ್ತಿದೆ ಎಂದೆನಿಸಿತು.
‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬ ಮಾತಿನಲ್ಲಿ ಮೊದಲರ್ಧವನ್ನು ಇಷ್ಟ ಪಡುವವರೇ ಇಂದು ಹೆಚ್ಚಾಗಿದ್ದಾರೆ. ತಮ್ಮ ಆದಾಯದ ಬಹು ಪಾಲನ್ನು ದೇಶ-ವಿದೇಶ ಸುತ್ತಲು ವ್ಯಯಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದಾಗಿ ಪ್ರವಾಸಿ ತಾಣಗಳಲ್ಲಿ ಜನಜಂಗುಳಿಯಾಗಿ ಈಗ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇಂತಹ ಪ್ರವಾಸಿಗರ ಪೈಕಿ ಪರಿಸರಾಸಕ್ತಿ ಇರುವ ಒಂದಷ್ಟು ಜನರನ್ನು ಬೇರೆಡೆಗೆ ಬರುವಂತೆ ಮಾಡಲು ಸೃಷ್ಟಿಯಾದದ್ದೇ ಪರಿಸರ ಪ್ರವಾಸೋದ್ಯಮ. ಸಾಂಪ್ರದಾಯಿಕ ಪ್ರವಾಸೋದ್ಯಮದಲ್ಲಿರುವ ಮಾಲಿನ್ಯ, ನೈಸರ್ಗಿಕ ಇಂಧನಗಳ ದಹಿಸುವಿಕೆ, ವಾಹನಗಳ ದಟ್ಟಣೆ, ಕಾಂಕ್ರೀಟ್ ಕಟ್ಟಡಗಳ ದರ್ಬಾರು, ಅಬ್ಬರದ ಗಲಾಟೆ- ಗದ್ದಲ, ತ್ಯಾಜ್ಯ ಉತ್ಪತ್ತಿಯಂತಹ ಸಮಸ್ಯೆಗಳು ಪರಿಸರ ಪ್ರವಾಸೋದ್ಯಮದಲ್ಲಿ ಇರುವಂತಿಲ್ಲ ಎಂಬುದೇ ಅದರ ವಿಶೇಷತೆ.
ಪರಿಸರ ಪ್ರವಾಸೋದ್ಯಮ ಎಂಬ ಪರಿಕಲ್ಪನೆ ಹುಟ್ಟಿದ್ದು 80 ರ ದಶಕದಲ್ಲಿ. ಕೋಸ್ಟರಿಕವು ಅತ್ಯಂತ ಯೋಜನಾಬದ್ಧವಾಗಿ ಪರಿಸರ ಪ್ರವಾಸೋದ್ಯಮವನ್ನು ಆರಂಭಿಸಿದ ಮೊದಲ ದೇಶ. ಈಗಲೂ ಸಹ ಅದು ವಿಶ್ವದ ನಂ.1 ಪರಿಸರ ಪ್ರವಾಸೋದ್ಯಮ ರಾಷ್ಟ್ರವಾಗಿದೆ. ಆರ್ಥಿಕತೆಗೆ ಪೂರಕವಾಗಿ ಬೆಳೆಯುತ್ತಾ ಸಾಗಿದ ಈ ಉದ್ಯಮ ಇನ್ನಿತರ ದೇಶಗಳನ್ನೂ ಪ್ರೇರೇಪಿಸಿತು. ಆದರೆ ಆದಾಯದ ದುರಾಸೆಗೆ ಬಿದ್ದು ಯಾವುದೇ ಪೂರ್ವತಯಾರಿಗಳಿಲ್ಲದೆ ಯೋಜನೆಯನ್ನು ಜಾರಿಗೊಳಿಸಿದ ಅನೇಕ ದೇಶಗಳು ಅದರ ದುಷ್ಪರಿಣಾಮವನ್ನು ಕಾಣಲಾರಂಭಿಸಿವೆ, ಭಾರತವೂ ಸೇರಿದಂತೆ. ಹಾಗಾದರೆ ನಾವು ಪರಿಸರ ಪ್ರವಾಸೋದ್ಯಮಕ್ಕೆ ನಿಜಕ್ಕೂ ಸಿದ್ಧರಾಗಿದ್ದೇವೆಯೇ? ಅದರ ಎಲ್ಲಾ ಆಯಾಮಗಳ ಬಗ್ಗೆ ಚಿಂತಿಸಿದ್ದೇವೆಯೇ? ಅದರ ಆಳ ಅಗಲಗಳನ್ನು ಅಂದಾಜಿಸಿದ್ದೇವೆಯೇ? ಎಂಬ ಪ್ರಶ್ನೆಗಳಿಗೆ ತುರ್ತಾಗಿ ಉತ್ತರ ಕಂಡುಕೊಳ್ಳಬೇಕಿದೆ.
ಅಂತರಾಷ್ಟ್ರೀಯ ಪರಿಸರ ಪ್ರವಾಸೋದ್ಯಮ ಸೊಸೈಟಿಯ ಪ್ರಕಾರ “Responsible travel to natural areas that conserves the environment, sustains the well being of the local people and involves interpretation and education” ಎಂಬುದು ಪರಿಸರ ಪ್ರವಾಸೋದ್ಯಮದ ಮೂಲತತ್ವ. ಈ ತತ್ವಗಳ ಅಡಿಪಾಯದ ಮೇಲೆ ವ್ಯವಸ್ಥಿತವಾಗಿ ಯೋಜನೆಗಳು ರೂಪುಗೊಂಡಾಗ ಮಾತ್ರ ಪರಿಸರಕ್ಕೆ ಮಾರಕವಾಗದಂತೆ ಈ ಪ್ರವಾಸೋದ್ಯಮವನ್ನು ಬೆಳೆಸಬಹುದು. ಕೋಸ್ಟರಿಕ, ಕೀನ್ಯಾ, ನಾರ್ವೆ ಯಂತಹ ರಾಷ್ಟ್ರಗಳು ಈ ನಿಟ್ಟಿನಲ್ಲಿ ಸದ್ಯಕ್ಕೆ ಉತ್ತಮ ಸ್ಥಿತಿಯಲ್ಲಿವೆ. ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಈಗ ಪ್ರವರ್ಧಮಾನ ಸ್ಥಿತಿಯನ್ನು ತಲುಪುತ್ತಿದೆ. ದೇಶದ ಬೊಕ್ಕಸಕ್ಕೆ ಒಳ್ಳೆಯ ಕಾಣಿಕೆಯನ್ನೂ ನೀಡುತ್ತಿದೆ. ದುರಂತವೆಂದರೆ ಈ ಆದಾಯದ ಘಮಲು ಹಾಗೂ ಅಮಲು ಪರಿಸರ ಪ್ರವಾಸೋದ್ಯಮಕ್ಕೂ ಆವರಿಸಿ ಅದರ ದಿಕ್ಕನ್ನೇ ಬದಲಿಸುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಪರಿಸರ ಪ್ರವಾಸೋದ್ಯಮದ ಮುಖ್ಯ ಧ್ಯೇಯ “ಪರಿಸರ ಶಿಕ್ಷಣ”. ವನ್ಯಜೀವಿಗಳನ್ನು, ಸಸ್ಯ ಸಂಪತ್ತನ್ನು, ಜೀವ ವೈವಿಧ್ಯತೆಯನ್ನು ಕಣ್ಣಾರೆ ಕಂಡು, ಶೈಕ್ಷಣಿಕ ದೃಷ್ಟಿಕೋನದಿಂದ ಅರಿತು, ಅವುಗಳ ಬಗೆಗಿನ ಜಾಗೃತಿಯನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರವಾಸಿಗರೇ ಮೂಡಿಸುವಂತೆ ಮಾಡುವುದು ಪ್ರಮುಖ ಆಶಯ. ಈ ಆಶಯವನ್ನು ಸಾಕಾರಗೊಳಿಸಲು ಸ್ಥಳೀಯ ಜನ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಪರಿಸರ ಪ್ರವಾಸೋದ್ಯಮದ ಅವಿಭಾಜ್ಯ ಅಂಗ. ಪ್ರಾಕೃತಿಕವಾಗಿ ಮಹತ್ವ ಹೊಂದಿರುವ ನಿಸರ್ಗ ತಾಣಗಳಿಗೆ ಪ್ರವಾಸದ ಜೊತೆಗೆ ಅಲ್ಲಿನ ಮೂಲ ನಿವಾಸಿಗಳ ಸಂಸ್ಕೃತಿ, ಜೀವನ ಶೈಲಿ, ಪರಂಪರೆ ಹಾಗೂ ಆ ಪರಿಸರದ ಸಂರಕ್ಷಣೆಯಲ್ಲಿ ಅವರ ಪಾತ್ರವನ್ನೂ ಗೌರವಿಸುತ್ತ ಪ್ರವಾಸೋದ್ಯಮವನ್ನು ಜವಾಬ್ದಾರಿಯುತವಾಗಿ ಸುಸ್ಥಿರವಾಗಿಸಬೇಕಾದದ್ದು ಈಗಿನ ಮೊದಲ ಆದ್ಯತೆ.
ನೈಸರ್ಗಿಕ ಸಂಪತ್ತು ಹಾಗೂ ಪರಂಪರೆಯೊಂದಿಗೆ ಆಳವಾದ ನಂಟನ್ನು ಹೊಂದಿರುವುದು ಪರಿಸರ ಪ್ರವಾಸೋದ್ಯಮ. ಈ ಉದ್ಯಮದಿಂದ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಪ್ರಯೋಜನಗಳಿವೆ. ಸ್ಥಳೀಯ ಜನರಿಗೆ ಹೊಸ ಉದ್ಯೋಗಾವಕಾಶಗಳು, ಬದುಕು ಕಟ್ಟಿಕೊಳ್ಳಲು ಹೊಸ ದಾರಿಗಳು, ತಮ್ಮ ಪಾರಂಪರಿಕ ಜ್ಞಾನವನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ ಸಿಗುತ್ತದೆ. ಅವರಿಗೆ ಸಿಗುವ ಈ ಲಾಭಗಳು ಅವರನ್ನು ಇನ್ನೂ ಹೆಚ್ಚು ಜಾಗರೂಕರಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತವೆ. ಸೇವಾ ವಲಯಗಳಾದ ಪ್ರವಾಸ ಮಾರ್ಗದರ್ಶನ, ಹೊಟೇಲ್ ಉದ್ಯಮಗಳ ಬೆಳವಣಿಗೆ ಜೊತೆ ಸ್ಥಳೀಯ ಹಾಗೂ ಸಾಂಪ್ರದಾಯಿಕ ಕಲೆ ಹಾಗೂ ಕರಕುಶಲಕಾರರಿಗೂ ಸಹ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಕಾಡಿನೊಡಲಲ್ಲಿ ರೂಪುಗೊಂಡು ಬೆಳೆದ ಬುಡಕಟ್ಟು ಜನಾಂಗಗಳ ಜೀವನ ಶೈಲಿ, ಆಚರಣೆ, ಸಂಪ್ರದಾಯಗಳ ಅನಾವರಣ ಹೊರ ಜಗತ್ತಿಗೆ ಆಗುತ್ತದೆ. ಅವರ ಅಸ್ಮಿತೆಯನ್ನು ಗೌರವಿಸಿ ಜತನದಿಂದ ಕಾಪಾಡುವ ಜವಾಬ್ದಾರಿಯನ್ನು ಮುಖ್ಯವಾಹಿನಿಗೆ ನೆನಪಿಸುತ್ತದೆ. ಪರಿಸರದ ಆಂತರ್ಯದಲ್ಲಿ ಬೆಳೆದು ಬಂದ ನಾಗರೀಕತೆಗಳನ್ನು ಮರೆತು ಹೋದಂತೆ ಬದುಕುತ್ತಿರುವ, ತಂತ್ರಜ್ಞಾನದ ಉತ್ಕೃಷ್ಟತೆಗಳನ್ನು ಅನುಭವಿಸುತ್ತಿರುವ ಜನರಿಗೆ ನಿಸರ್ಗದ ಅನಿವಾರ್ಯತೆಯನ್ನು ಸಾರಿ ಹೇಳುತ್ತದೆ.
ಪರಿಸರದ ಬಗ್ಗೆ ಕಾಳಜಿ ಹಾಗೂ ಜಾಗೃತಿಯೇ ಮುಖ್ಯ ಆಶಯವಾಗಿದ್ದರೂ ಸಹ ಪರಿಸರ ಪ್ರವಾಸೋದ್ಯಮವನ್ನು ಹೆಚ್ಚು ಆಕರ್ಷಣೀಯಗೊಳಿಸಲು ಹಾಗೂ ಪ್ರವಾಸಿ ಸ್ನೇಹಿಯಾಗಿಸಲು ಇನ್ನಷ್ಟು ಪೂರಕ ಚಟುವಟಿಕೆಗಳನ್ನು ಅದರೊಡನೆ ಸೇರಿಸಲಾಗುತ್ತಿದೆ. ಟ್ರೆಕ್ಕಿಂಗ್, ಹೈಕಿಂಗ್, ಕಯಾಕಿಂಗ್, ಸ್ವಿಮ್ಮಿಂಗ್, ಸೈಕ್ಲಿಂಗ್, ರಾಫ್ಟಿಂಗ್, ಬೋಟಿಂಗ್, ಬಂಜೀ ಜಂಪಿಂಗ್ ನಂತಹ ಪರಿಸರ ಸ್ನೇಹಿ ಆರೋಗ್ಯಕರ ಚಟುವಟಿಕೆಗಳು ಸಹ ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗುತ್ತಿವೆ. ಇದರ ಜೊತೆಗೆ ಬರ್ಡಿಂಗ್, ಹರ್ಪಿಂಗ್, ವನ್ಯಜೀವಿ ಸಫಾರಿಗಳು ಹೆಚ್ಚೆಚ್ಚು ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಜೀವ ವೈವಿಧ್ಯತೆಯನ್ನು ಅವುಗಳ ಆವಾಸ ಸ್ಥಾನದಲ್ಲೇ ನೋಡುವ, ಅರಿಯುವ, ಅನುಭವಿಸುವ ಸದಾವಕಾಶಗಳನ್ನು ಪರಿಸರಾಸಕ್ತರಿಗೆ ಒದಗಿಸುತ್ತದೆ.
ಪ್ರವಾಸಕ್ಕೆ ಹೊಸ ಆಯಾಮವನ್ನು ನೀಡುತ್ತಿರುವ ಪರಿಸರ ಪ್ರವಾಸೋದ್ಯಮ ಇಂದು ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪರಿಸರಕ್ಕೆ ಧಕ್ಕೆಯಾಗದ ರೀತಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವುದೇ ಇದರ ಮೂಲ ಆಶಯವಾಗಿದ್ದರೂ, ಸ್ಥಳೀಯ ಜನ ಸಮುದಾಯಗಳಿಗೆ ವಿಶೇಷ ಪ್ರಾತಿನಿಧ್ಯವೂ ದಕ್ಕುತ್ತಿದೆ. ನೇರ ಹಾಗೂ ಪರೋಕ್ಷವಾಗಿ ವಿಪುಲ ಅವಕಾಶಗಳು ಸೃಷ್ಟಿಯಾಗುತ್ತಿವೆ. ಪರಿಸರಾಸಕ್ತರು, ವನ್ಯಪ್ರೇಮಿಗಳು, ಪಕ್ಷಿ ವೀಕ್ಷಕರು, ಹವ್ಯಾಸಿ ಛಾಯಾಗ್ರಾಹಕರು, ವ್ಲಾಗರ್ ಗಳಿಂದಾಗಿ ಪರಿಸರ ಪ್ರವಾಸೋದ್ಯಮವು ಆದಾಯದ ಉದ್ಯಮವಾಗುತ್ತಿದೆ. ಕೆಲವು ದೇಶಗಳಿಗಂತೂ ಈ ಉದ್ಯಮವೇ ಆದಾಯದ ಏಕಮಾತ್ರ ಮೂಲವಾಗಿರುವುದೂ ಸಹ ಗಮನಿಸಬೇಕಾದದ್ದು.
ಇವೆಲ್ಲದರ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಪರಿಸರ ಪ್ರವಾಸ ಸೊಸೈಟಿಯು ಈ ಕೆಳಗಿನವುಗಳನ್ನು ಪರಿಸರ ಪ್ರವಾಸೋದ್ಯಮದ ಪ್ರಮುಖ ತತ್ವಗಳು ಎಂದು ಗುರುತಿಸಿದೆ.
1. ಸಾಂಪ್ರದಾಯಿಕ ಪ್ರವಾಸೋದ್ಯಮದಿಂದ ಪರಿಸರದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳನ್ನು ಕಡಿಮೆಗೊಳಿಸುವುದು.
2. ಪ್ರಕೃತಿಯ ಕುರಿತಾದ ಜಾಗೃತಿ ಹಾಗೂ ಸಂಸ್ಕೃತಿಯ ಗೌರವಗಳೆರಡನ್ನೂ ಬೆಸೆಯುವುದು.
3. ಅತಿಥಿಗಳಿಗೆ ಹಾಗೂ ಆತಿಥೇಯರಿಗೆ ಧನಾತ್ಮಕ ಅನುಭವವನ್ನು ಉಂಟುಮಾಡುವುದು.
4. ಆರ್ಥಿಕ ಆದಾಯದ ಲಾಭವನ್ನು ನೇರವಾಗಿ ಸಂರಕ್ಷಣೆಗಾಗಿಯೇ ಒದಗಿಸುವುದು.
5. ಆರ್ಥಿಕ ಸೌಲಭ್ಯಗಳೊನ್ನದಗಿಸಿ ಸ್ಥಳೀಯರ ಸಬಲೀಕರಣ ಮಾಡುವುದು.
6. ಆತಿಥೇಯ ರಾಷ್ಟ್ರಗಳ ರಾಜಕೀಯ ಹಾಗೂ ಸಾಮಾಜಿಕ ವಾತಾವರಣವನ್ನು ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ನಿರ್ಮಿಸುವುದು.
ಈ ತತ್ವಗಳು ದೇಶದ ಪರಿಸರ ಪ್ರವಾಸೋದ್ಯಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಮಾರ್ಗದರ್ಶಿ ಸೂತ್ರಗಳಾಗಬೇಕು. ಆಗ ಮಾತ್ರ ಆದಾಯವಷ್ಟೇ ಅಲ್ಲದೆ ಪರಿಸರವೂ ಸುಸ್ಥಿರವಾಗುತ್ತದೆ.
ಅಪಾಯಗಳೇನು? ಪರಿಹಾರಗಳೇನು?
ವನ್ಯಜೀವಿಗಳಿಗೆ ಸಂಚಕಾರ
ವೈವಿಧ್ಯಮಯ ವನ್ಯಜೀವಿಗಳನ್ನು ಅವುಗಳ ಆವಾಸಸ್ಥಾನದಲ್ಲೇ ಸಂರಕ್ಷಿಸಿ ಪರಿಸರ ಸಮತೋಲನವನ್ನು ಸಾಧಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಉದ್ಯಾನವನಗಳ ಯೋಜನೆ ಜಾರಿಯಾಯಿತು. ಪರಿಸರ ಪ್ರವಾಸೋದ್ಯಮದ ಮೂಲಕ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಅಂತಹ ಉದ್ಯಾನವನಗಳಲ್ಲಿ ಸಫಾರಿಗಳಿಗೆ ಅನುವು ಮಾಡಿದ್ದರಿಂದ ಅವು ಪರಿಸರಾಸಕ್ತರ ನೆಚ್ಚಿನ ತಾಣಗಳಾದವು. ಹಾಗಂತ ಭಾರತದಲ್ಲಿರುವ 106 ರಾಷ್ಟ್ರೀಯ ಉದ್ಯಾನವನಗಳೆಲ್ಲವೂ ಪ್ರವಾಸಿಗರ ನೆಚ್ಚಿನ ತಾಣಗಳಲ್ಲ. ಎಲ್ಲೆಲ್ಲಿ ಹುಲಿ, ಚಿರತೆಗಳ ಸಂಖ್ಯೆ ಹೆಚ್ಚಿದೆಯೋ ಅಲ್ಲೆಲ್ಲಾ ಪ್ರವಾಸಿಗರ ಜನಜಂಗುಳಿ ಹೆಚ್ಚಾಗಿದೆ. ಆ ಜನಜಂಗುಳಿಯಲ್ಲಿ ವನ್ಯಜೀವಿ ಛಾಯಾಗ್ರಾಹಕರದ್ದೇ ಸಿಂಹ ಪಾಲು. ಅವರ ನೆಚ್ಚಿನ ಫೋಟೋ ಮಾಡೆಲ್ ಎಂದರೆ ಹುಲಿ ಅಥವಾ ಚಿರತೆ. ತಮಗೆ ಬೇಕಾದ ರೀತಿಯಲ್ಲೇ ಫೋಟೋ ತೆಗೆಯಬೇಕೆಂಬ ಹಪಾಹಪಿಯಲ್ಲಿ ವಾರಗಟ್ಟಲೆ ಅಲ್ಲೇ ಸಫಾರಿಗಳನ್ನು ಮಾಡುತ್ತಾ ಉಳಿದುಬಿಡುವ ಛಾಯಾಗ್ರಾಹಕರು ಬಹಳಷ್ಟಿದ್ದಾರೆ. ಇವರ ಪ್ರಭಾವ ಎಷ್ಟಿರುತ್ತದೆಯೆಂದರೆ ಸಾಮಾನ್ಯ ಜನರಿಗೆ ಸಫಾರಿ ಟಿಕೆಟ್ ದೊರೆಯುವುದು ತಿರುಕನ ಕನಸೇ ಸರಿ. ರಣಥಂಬೂರ್, ಪೇಂಚ್, ಫಿಲ್ಬಿಟ್, ತಡೋಬ, ನಾಗರಹೊಳೆ ಮುಂತಾದ ಕಡೆ ತಿಂಗಳುಗಟ್ಟಲೆ ಮುಂಚಿತವಾಗಿ ಸಫಾರಿ ಟಿಕೆಟ್ ಗಳು ಬಿಕರಿಯಾಗುತ್ತವೆ. ಇಂತಹ ಜಾಗಗಳಲ್ಲಿ ಹುಲಿ, ಚಿರತೆಗಳ ಫೋಟೋ ತೆಗೆಯುವವರಿಗಾಗಿ ಕಾಡಿನೊಳಗೆ ಜೀಪುಗಳನ್ನು ಯದ್ವಾತದ್ವಾ ಓಡಿಸುವುದು, ಯಾವುದೇ ವೇಗದ ಮಿತಿಯಿಲ್ಲದೇ ಚಲಾಯಿಸುವುದು ಕಣ್ಣಾರೆ ಕಂಡಿದ್ದೇನೆ. ಈ ರೀತಿಯ ಮಿತಿಮೀರಿದ ವಾಹನ ಓಡಾಟಗಳು ಕಾಡಿನೊಳಗೆ ಸೃಷ್ಟಿಸಬಹುದಾದ ಅನಾಹುತಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಯಾವುದೋ ಜಾಗದಲ್ಲಿ ಹುಲಿಯೋ, ಚಿರತೆಯೋ ಕಂಡ ಸಂದೇಶ ಸಿಕ್ಕ ಕೂಡಲೆ ಅವುಗಳತ್ತ ಧಾವಿಸಲು ಆ ಕಾಡಿನಲ್ಲಿ ಅಲೆಯುತ್ತಿದ್ದ ವಾಹನಗಳೆಲ್ಲವೂ ಅತ್ತ ದಾಂಗುಡಿಯಿಡುತ್ತವೆ. ಆ ಧಾವಂತದಲ್ಲಿ ವಾಹನದ ಟೈರುಗಳಡಿ ಸಿಲುಕಿ ಸಾಯುವ ಸಣ್ಣ ಪುಟ್ಟ ಸರೀಸೃಪಗಳು, ಉಭಯವಾಸಿಗಳು, ಪತಂಗಗಳು, ಹಕ್ಕಿಯ ಮೊಟ್ಟೆಗಳು, ಮುಂತಾದವುಗಳ ಬಗ್ಗೆ ಯಾರೂ ಯೋಚಿಸುವುದಿಲ್ಲ. ಇವೆಲ್ಲವೂ ಪರಿಸರದ ಭಾಗವಲ್ಲವೆ? ಅವುಗಳ ನಾಶದಿಂದ ಪರಿಸರದ ಸೂಕ್ಷ್ಮ ಕೊಂಡಿಗಳು ಕಳಚಿದಂತಾಗುವುದಿಲ್ಲವೆ? ಕಾಡುಪ್ರಾಣಿಗಳು ಎಂದರೆ ಹುಲಿ, ಸಿಂಹ, ಚಿರತೆ, ಆನೆಗಳು ಮಾತ್ರವೇ?
ಒಂದೇ ಹುಲಿಯ ಸುತ್ತ ಕ್ಷಣ ಮಾತ್ರದಲ್ಲಿ ಇಪ್ಪತ್ತೆಂಟು ಸಫಾರಿ ಜೀಪುಗಳು ಜಮಾವಣೆಯಾದದ್ದನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡಿದ್ದೆ. ಅಷ್ಟೊಂದು ವಾಹನಗಳ ಓಡಾಟದಿಂದಾಗಿ ಕಾಡಿನ ಪ್ರಾಣಿಗಳು ತಮ್ಮ ನೈಸರ್ಗಿಕ ಸಂವೇದನೆಗಳನ್ನು ಕಳೆದುಕೊಳ್ಳುತ್ತಿವೆ. ಈಗ ಅವುಗಳಿಗೆ ವಾಹನ ಓಡಾಟದ ಭಯವಿಲ್ಲ. ಇಂತಹ ಪರಿಸ್ಥಿತಿಗೆ ಒಗ್ಗಿಕೊಂಡ ಪ್ರಾಣಿಗಳು ಬೇರೆ ಪ್ರದೇಶಕ್ಕೆ ವಲಸೆ ಹೋಗುವಾಗ ವಾಹನಗಳ ಓಡಾಟಕ್ಕೆ ಅಂಜದೆ ಒಮ್ಮೆಲೆ ರಸ್ತೆಗೆ ಬಂದು ಬಿಡುತ್ತವೆ. ಇಂತಹ ಪ್ರದೇಶಗಳಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಹುಲಿ ಅಥವಾ ಚಿರತೆಗಳು ಸಾವನ್ನಪ್ಪಿರುವ ಅನೇಕ ಉದಾಹರಣೆಗಳಿವೆ. ಕಾಡಿನಲ್ಲಿ ಸಣ್ಣ ಶಬ್ಧವನ್ನೂ ಗ್ರಹಿಸುವ ಸೂಕ್ಷ್ಮತೆ ಇರುವ ಪ್ರಾಣಿಗಳು ರಸ್ತೆ ಅಪಘಾತದಲ್ಲಿ ಸಾಯುತ್ತವೆ ಅಂದರೆ ಅರ್ಥವೇನು? ದೇಶದ ಸುಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯಗಳಲ್ಲಿ ದಿನಕ್ಕೆ ಕನಿಷ್ಟ 50 ರಿಂದ 60 ಸಫಾರಿ ವಾಹನಗಳು ತಿರುಗಾಡುತ್ತವೆ ಎಂದರೆ ಆಶ್ಚರ್ಯವೆನಿಸುವುದಿಲ್ಲವೆ? ಹಚ್ಚ ಹಸಿರಿನ ಕಾನನದೊಳಗೆ ಇವುಗಳಿಂದಾಗುವ ಮಾಲಿನ್ಯದ ಪ್ರಮಾಣ ಅಪಾಯಕಾರಿಯಲ್ಲವೆ?
ವಾಸ್ತವದಲ್ಲಿ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಧಾಮಗಳು, ಅಭಯಾರಣ್ಯಗಳು ಜನರಲ್ಲಿ ಜೀವವೈವಿಧ್ಯತೆಯ ಕುರಿತಾದ ಜಾಗೃತಿ ಮೂಡಿಸುವ ವೇದಿಕೆಗಳು. ಆದರೆ ಅಲ್ಲಿ ಈಗ ಕೇವಲ ಪರಿಸರಾಸಕ್ತರಿಗೆ ಜಾಗ ಸಿಗುತ್ತಿಲ್ಲ. ಛಾಯಾಗ್ರಾಹಕರದ್ದೇ ಮೇಲುಗೈ. ಅವರು ಕೊಡುವ ಟಿಪ್ಸ್ ಆಸೆಗೆ ಬೇಕಾಬಿಟ್ಟಿಯಾಗಿ ಚಲಿಸುವ ಜೀಪುಗಳು. ಇದರಿಂದಾಗಿ ಕಾಡಿನೊಳಗೆ ಇಂಧನ ಉರಿದ ಹೊಗೆ ವ್ಯಾಪಿಸುತ್ತಿದೆ, ಅಷ್ಟೇ ಅಲ್ಲದೆ ಅರಣ್ಯದೊಡಲನ್ನು ಸೇರುತ್ತಿರುವ ಪ್ಲಾಸ್ಟಿಕ್ ವನ್ಯಜೀವಿಗಳ ಉದರ ಸೇರಲು ಹೆಚ್ಚು ಸಮಯಬೇಕಾಗಿಲ್ಲ. ಪರಿಸರ ಜಾಗೃತಿಯೊಡನೆ ಆದಾಯಕ್ಕಾಗಿ ನಾವು ಮಾಡಿಕೊಂಡ ದಾರಿಯೊಂದು ವನ್ಯಜೀವಿಗಳನ್ನು ನರಕದೆಡೆಗೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.
ಇದೊಂದು ಸಂಕೀರ್ಣ ಸಮಸ್ಯೆಯಾಗಿದ್ದರೂ ಒಂದಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಪ್ರತಿ ನಿತ್ಯ ಕಾಡಿನೊಳಗೆ ಸಂಚರಿಸುವ ಸಫಾರಿ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವುದು, ವೇಗಮಿತಿ ನಿಗದಿಗೊಳಿಸುವುದು, ಎಲೆಕ್ಟ್ರಿಕ್ ವಾಹನಗಳನ್ನು ಸಫಾರಿಗೆ ಪರಿಚಯಿಸುವುದು, ರಾಷ್ಟ್ರೀಯ ಉದ್ಯಾನಗಳಲ್ಲಿ ರಾತ್ರಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವುದು, ಸಫಾರಿಗೆ ಟಿಕೆಟ್ ನೀಡುವಾಗ ಒಂದೇ ವ್ಯಕ್ತಿಗೆ ಸತತ ನಾಲ್ಕು ಸಫಾರಿಗಳಿಗಿಂತ ಹೆಚ್ಚಿನ ಟಿಕೆಟ್ ನೀಡದಿರುವುದು, ಶೇ.50 ರಷ್ಟು ಟಿಕೆಟ್ ಗಳನ್ನು ಆನ್ ಲೈನ್ ಮೂಲಕವೇ ನೋಂದಾಯಿಸುವುದು, ಮುಂತಾದ ಕ್ರಮಗಳಿಂದ ಕಾಡು ಹಾಗೂ ಕಾಡುಪ್ರಾಣಿಗಳ ಮೇಲೆ ಆಗುತ್ತಿರುವ ಒತ್ತಡವನ್ನು ಒಂಚೂರು ಕಡಿಮೆ ಮಾಡಬಹುದು. ಪರಿಸರ ಪ್ರವಾಸೋದ್ಯಮವನ್ನು ಸುಸ್ಥಿರವಾಗಿಸುವಲ್ಲಿ ಇವು ಸಹಕಾರಿಯಾಗಬಲ್ಲವು.
ಪ್ರವಾಸಿಗರಿಂದಾಗಿ ವನ್ಯಜೀವಿಗಳು ಎದುರಿಸುತ್ತಿರುವ ಮತ್ತೊಂದು ಸಮಸ್ಯೆಯೆಂದರೆ ಬದಲಾದ ಆಹಾರ!!. ಕೋತಿಗಳು, ಮುಸಿಯಗಳು, ಸಿಂಗಳೀಕಗಳು, ಜಿಂಕೆಗಳು ಇಂದು ಪ್ರವಾಸಿಗರು ನೀಡುವ ಕುರುಕಲು ತಿಂಡಿಗಳಿಗೆ, ತಂಪು ಪಾನೀಯದ ಬಾಟಲಿಗಳಿಗೆ ಒಗ್ಗಿಹೋಗಿವೆ. ರಸ್ತೆಯ ಇಕ್ಕೆಲಗಳಲ್ಲಿ ಪ್ರವಾಸಿಗರ ವಾಹನಗಳಿಗಾಗಿ ಕಾದು ಕೂರುವ ಈ ಮುಗ್ಧ ಕಂಗಳ ಪ್ರಾಣಿಗಳನ್ನು ನೋಡಿದಾಗ ಭಿಕ್ಷೆಗೆ ಕೂತಿದ್ದವೇನೋ ಎಂದು ಭಾಸವಾಗುತ್ತದೆ. ಜನರೇನೋ ಪ್ರಾಣಿಗಳಿಗೆ ಆಹಾರ ಕೊಟ್ಟ ಪುಣ್ಯ ಬರುತ್ತದೆ! ಎಂಬ ಭಾವನೆಯಿಂದಲೇ ಕೊಡುತ್ತಾರೆ. ಆದರೆ ಅದರ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಹೀಗೆ ಜನರು ಕೊಟ್ಟದ್ದನ್ನೆಲ್ಲ ತಿಂದು ತೇಗುವ ಅಪ್ಪ ಅಮ್ಮಂದಿರನ್ನು ನೋಡಿ ಬೆಳೆಯುವ ಮರಿಗಳು ತಮ್ಮ ನೈಜ ಆಹಾರವನ್ನು ಮರೆತೇ ಬಿಡುತ್ತವೆ. ತಮ್ಮೆಲ್ಲಾ ಖಾಯಿಲೆಗಳಿಗೆ ವನರಾಶಿಯಲ್ಲಿರುವ ಔಷಧಗಳೂ ಅವಕ್ಕೆ ತಿಳಿಯುವುದೇ ಇಲ್ಲ. ಆಹಾರ ಸರಪಳಿಯ ಸೂಕ್ಷ್ಮ ಕೊಂಡಿಗಳು ವೇಗವಾಗಿ ಸವೆಯುತ್ತವೆ. ಮೊಳಕೆಯೊಡೆಯುವ ಮುಂಚೆ ಈ ಪ್ರಾಣಿಗಳ ಉದರ ದಾಟಿ ಬರಲೇಬೇಕಾದ ಬೀಜಗಳು ಕಾಡಿನ ನೆಲದಲ್ಲಿ ಹಾಗೇ ಉದುಗಿಹೋಗುತ್ತವೆ. ಕಾಡು ಬೆಳೆಯುವ ಪ್ರಮಾಣ ಕ್ಷೀಣಿಸುತ್ತದೆ. ಕಾಡೇ ಇಲ್ಲವಾದರೆ ಉಳಿದ ಜೀವಿಗಳಿಗೆ ಆಶ್ರಯ ಎಲ್ಲಿ? ಮನುಷ್ಯತ್ವ ಮೆರೆಯಲು ಪ್ರಾಣಿಗಳಿಗೆ ಬಿಸ್ಕೆಟ್ ತಿನ್ನಿಸುವ ಜನರು ಪರೋಕ್ಷವಾಗಿ ಅರಣ್ಯ ನಾಶಕ್ಕೆ ಕಾರಣವಾಗುತ್ತಾರೆ. ಅಷ್ಟೇ ಅಲ್ಲದೆ ಇಂತಹ ವ್ಯವಸ್ಥೆಗೆ ಒಗ್ಗಿ ಹೋದ ಪ್ರಾಣಿಗಳು ವಾಹನಗಳಡಿ ಸಿಲುಕಿ ಸಾಯುವುದು ಮಾಮೂಲಾಗಿ ಬಿಟ್ಟಿದೆ. ಪ್ರವಾಸಿಗರು ಇಲ್ಲದ ಸಮಯದಲ್ಲಿ ಅವರು ಕೊಡುವ ಆಹಾರ ಸಿಗದೇ, ತಮ್ಮ ನೈಸರ್ಗಿಕ ಆಹಾರವನ್ನು ಕಾಡಿನೊಳಗೆ ಹುಡುಕುವುದನ್ನು ತಿಳಿಯದೇ ದಿಕ್ಕೆಟ್ಟು ಹಸಿವಿನಿಂದ ಬಳಲಿ ಸಾಯುತ್ತವೆ. ಕರೋನದ ಲಾಕ್ ಡೌನ್ ಸಂದರ್ಭದಲ್ಲಂತೂ ಇಂತ ಸಾವುಗಳಿಗೆ ಲೆಕ್ಕವೇ ಇಲ್ಲದಂತಾಗಿತ್ತು.
ಈ ಸಮಸ್ಯೆಗೆ ಪರಿಹಾರವೆಂದರೆ ಜಾಗೃತಿ. ಕೃತಕ ಆಹಾರಗಳನ್ನು ವನ್ಯಮೃಗ-ಪಕ್ಷಿಗಳಿಗೆ ಕೊಡುವುದರಿಂದ ಆಗುವ ಅನಾಹುತಗಳ ಬಗೆಗಿನ ಮಾಹಿತಿ ಜನ ಸಾಮಾನ್ಯರಿಗೆ ತಿಳಿಯಬೇಕು. ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಇಂತಹ ವಿಷಯಗಳನ್ನು ಸೇರಿಸಬೇಕು. ಇವುಗಳ ಬಗ್ಗೆ ಅರಿವು ಇರುವವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚುರ ಪಡಿಸಬೇಕು, ಅರಣ್ಯ ಇಲಾಖೆಯವರು ಪ್ರವಾಸಿಗರು ಹೆಚ್ಚಿರುವ ಸ್ಥಳಗಳಲ್ಲಿ ಫಲಕಗಳ ಮೂಲಕ ಮಾಹಿತಿ ನೀಡಬೇಕು.
ಕಾಡಿಗೆ ಬೆಂಕಿ
ಭಾರತದಲ್ಲಿ ಕಾಡಿಗೆ ಬೆಂಕಿ ತಾಕುವ ಘಟನೆಗಳ ಪ್ರಮಾಣ ಕಳೆದೊಂದು ದಶಕದಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ. ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಸುಮಾರು ಎರಡು ಲಕ್ಷ ಇಂತಹ ಘಟನೆಗಳು ಭಾರತದಲ್ಲಿ ನಡೆದಿವೆ. ಇದರಲ್ಲಿ ಬಹುತೇಕ ಘಟನೆಗಳು ಉದ್ದೇಶಪೂರ್ವಕವಾಗಿರುತ್ತವೆ ಎಂಬುದು ವಾಸ್ತವ. ಇನ್ನುಳಿದ ಘಟನೆಗಳು ಕಾಡಿನೊಳಗಿನ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರ, ಚಾರಣಿಗರ ನಿರ್ಲಕ್ಷ್ಯತನದಿಂದ ಅಥವಾ ‘ಕಿಡಿ’ಗೇಡಿತನದಿಂದ ನಡೆದಿರುತ್ತವೆ. ಮುಳ್ಳಯ್ಯನಗಿರಿಯಲ್ಲಿ ಇತ್ತೀಚೆಗೆ ನಡೆದ ಘಟನೆ ಇಂತಹ ನಿರ್ಲಕ್ಷ್ಯಕ್ಕೆ ತಾಜಾ ಉದಾಹರಣೆ. ಸಿಗರೇಟಿನ ಒಂದೇ ಒಂದು ಕಿಡಿ ಪ್ರವಾಸಿಗರ ಸ್ವರ್ಗವನ್ನು ನರಕವಾಗಿಸಿತ್ತು. ಚಾರಣದ ಹೆಸರಿನಲ್ಲಿ ಅರಣ್ಯ ಪ್ರವೇಶಿಸುವ ಇಂತಹ ಕಿಡಿಗೇಡಿಗಳು ಪರಿಸರಕ್ಕೆ ಎಸಗುವ ಹಾನಿ ಅಷ್ಟಿಷ್ಟಲ್ಲ. ತಮ್ಮ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಇಂತಹ ತಾಣಗಳು ಇಂದು ಪ್ಲಾಸ್ಟಿಕ್ ನಿಂದ ತುಂಬಿ ಹೋಗುತ್ತಿವೆ. ಎಲ್ಲಿ ನೋಡಿದರೂ ತಿಂದು ಬಿಸಾಡಿದ ತಟ್ಟೆಗಳು, ಪ್ಲಾಸ್ಟಿಕ್ ಬಾಟಲಿಗಳದ್ದೇ ಹಾವಳಿ. ಕಾನನದ ಮಡಿಲಲ್ಲಿ ಕುಡಿದು ಬಿಸಾಡಿದ ಹೆಂಡದ ಬಾಟಲಿಗಳು ರಾರಾಜಿಸುತ್ತಿವೆ. ಇಂತಹ ಮೋಜು ಮಸ್ತಿಗಾಗಿ ಪರಿಸರವನ್ನು ಹಾಳುಗೆಡವುತ್ತಿರುವುದು ಅದರ ಮೇಲೆ ಅತ್ಯಾಚಾರವೆಸಗಿದಂತಲ್ಲವೆ? ಇಷ್ಟೊಂದು ಕಸ ತುಂಬಿದ ಕಾಡಿಗೆ ಬೆಂಕಿ ತಗುಲಿದರೆ ಅದು ಧಗಧಗಿಸುವ ತೀವ್ರತೆ ಹೆಚ್ಚಾಗುತ್ತದೆ. ಪ್ಲಾಸ್ಟಿಕ್ ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ಉರಿದು ಅಲ್ಲಿನ ಗಾಳಿಯನ್ನು ಮಲಿನಗೊಳಿಸುತ್ತವೆ. ಲೆಕ್ಕವಿಲ್ಲದಷ್ಟು ಜೀವಸಂಕುಲ ಬೆಂಕಿಯ ಕೆನ್ನಾಲಗೆಯಲ್ಲಿ ಸಿಲುಕಿ ಸುಟ್ಟು ಕರಕಲಾಗುತ್ತವೆ.
ಬೆಂಕಿಯಲ್ಲಿ ದಹಿಸಿ ಹೋದ ಕಾಡು ಮತ್ತೆ ಸೃಷ್ಟಿಯಾಗಲು ದಶಕಗಳೇ ಬೇಕು. ಅದು ಸುಲಭಕ್ಕೆ ಮಾಯುವ ಗಾಯವಲ್ಲ. ಕಠಿಣ ನಿಯಮಗಳಿಂದ ಮಾತ್ರ ಮುಲಾಮು ಹಚ್ಚುವುದು ಸಾಧ್ಯ. ಚಾರಣಕ್ಕೆ ಅನುಮತಿಸಲಾಗುವ ಮಾರ್ಗಗಳಲ್ಲಿ ಮಾತ್ರ ಚಾರಣಿಗರಿಗೆ ಅವಕಾಶ ಕೊಡುವುದು, ಚಾರಣ ಹೋಗಲು ಪ್ರವಾಸೋದ್ಯಮ ಇಲಾಖೆಯಿಂದ ಕಡ್ಡಾಯ ಅನುಮತಿ ಪಡೆಯುವುದು, ಚಾರಣಿಗರು ಸಿಗರೇಟು, ಆಲ್ಕೋಹಾಲ್, ಲೈಟರ್, ಪ್ಲಾಸ್ಟಿಕ್ ಬಾಟಲಿಗಳನ್ನು ಕೊಂಡೊಯ್ಯದಂತೆ ತಪಾಸಣೆ ನಡೆಸುವುದು, ಮುಂತಾದ ಕ್ರಮಗಳು ಜಾರಿಯಾಗಬೇಕು. ಇದನ್ನು ಸಾಕಾರವಾಗಿಸಲು ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಸಮಿತಿಗಳು ಕೈಜೋಡಿಸಬೇಕು.
‘ವಾಸ್ತವ್ಯ’ಗಳ ವಾಸ್ತವ
ಈಗ ವೀಕೆಂಡ್ ಬಂತೆಂದರೆ ಸಾಕು ರೆಸಾರ್ಟ್ ವಾಸ್ತವ್ಯಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ವಿಪರೀತವಾಗಿದೆ. ರಜಾ ದಿನಗಳಲ್ಲಿ ಚಿಕ್ಕಮಗಳೂರು, ಮಡಿಕೇರಿಯ ಪರ್ವತ ಶ್ರೇಣಿಗಳಲ್ಲಿ ಪ್ರವಾಸಿಗರ ಕಾರುಗಳು ಇರುವೆಗಳಂತೆ ಸಾಲುಗಟ್ಟಿರುತ್ತವೆ. ವೈಭವೋಪೇತವಾಗಿ ನಿರ್ಮಾಣಗೊಂಡಿರುವ ಈ ರೆಸಾರ್ಟ್ ಗಳು ದಟ್ಟಾರಣ್ಯಗಳ ಮಧ್ಯೆ ತಲೆಯೆತ್ತಿರುವುದು ಚಿಂತಿಸಬೇಕಾದ ವಿಷಯ. ಇಂತಹ ಅರಣ್ಯ ಭೂಮಿಗಳು ಕಂದಾಯ ಇಲಾಖೆಯಡಿ ಇರುವುದರಿಂದ ಅರಣ್ಯ ಇಲಾಖೆ ಏನೂ ಮಾಡಲಾಗದ ಸ್ಥಿತಿಯಲ್ಲಿ ಕೈಕಟ್ಟಿ ಕುಳಿತಿದೆ. ಇಂತಹ ವಾಸ್ತವ್ಯಗಳಲ್ಲಿ ಮೋಜು ಮಸ್ತಿಯ ಹೆಸರಲ್ಲಿ ನಡೆಯುವ ಚಟುವಟಿಕೆಗಳಿಗೆ ಯಾವುದೇ ಲಂಗು-ಲಗಾಮಿಲ್ಲ. ರಾತ್ರಿಯೆಲ್ಲಾ ನಡೆಯುವ ಪಾರ್ಟಿಗಳಲ್ಲಿ ಹಾಕುವ ಡಿಜೆ ಯಿಂದ ಉಂಟಾಗುವ ಸದ್ದು ಸುತ್ತ ಇರುವ ವನ್ಯಜೀವಿಗಳಿಗೆ ಕಿರಿಕಿರಿ ಉಂಟುಮಾಡುತ್ತವೆ. ಹಗಲು ರಾತ್ರಿಯೆನದೆ ಸಂಚರಿಸುವ ವಾಹನಗಳು ಪ್ರಾಣಿಗಳ ಸುರಕ್ಷತೆಗೆ ಸವಾಲು ಒಡ್ಡುತ್ತಿವೆ. ಇಂತಹ ವಾಸ್ತವ್ಯಗಳಲ್ಲಿ ಪ್ರತಿ ನಿತ್ಯ ಉತ್ಪತ್ತಿ ಆಗುವ ತ್ಯಾಜ್ಯ ಎಲ್ಲಿ ಹೋಗುತ್ತಿದೆ? ಪ್ಲಾಸ್ಟಿಕ್ ಬಾಟಲಿಗಳನ್ನು, ಕಸವನ್ನು, ಬೀರ್ ಬಾಟಲಿಗಳನ್ನು ಎಷ್ಟು ಜನ ಸರಿಯಾಗಿ ವಿಲೇವಾರಿ ಮಾಡುತ್ತಿದ್ದಾರೆ? ಬಹಳಷ್ಟು ಕಡೆ ಅದು ಅರಣ್ಯ ಗರ್ಭ ಸೇರುತ್ತಿದೆ. ಇವುಗಳನ್ನೆಲ್ಲಾ ನಿಯಂತ್ರಿಸುವವರು ಯಾರು? ದೊಡ್ಡ ದೊಡ್ಡ ರೆಸಾರ್ಟ್ ಗಳೆಲ್ಲಾ ರಾಜಕಾರಣಿಗಳಿಗೆ, ಸಿನಿಮಾ ನಟರುಗಳಿಗೆ, ಬ್ಯುಸಿನೆಸ್ ಟೈಕೂನ್ ಗಳಿಗೆ ಸೇರಿರುವುದರಿಂದ ಉಳಿದವರು ಮೂಕ ಪ್ರೇಕ್ಷಕರಾಗಿ ನೋಡಬೇಕಷ್ಟೇ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 700 ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿವೆ. ಇವುಗಳಲ್ಲಿ ಕೇವಲ 215 ಮಾತ್ರ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿವೆ ಎಂಬುದು ಈ ಉದ್ಯಮದ ಮತ್ತೊಂದು ಕರಾಳಮುಖ. ಇವುಗಳಿಂದ ಪರಿಸರ ಪ್ರವಾಸೋದ್ಯಮ ಯಾರ ಆದಾಯಕ್ಕೆ ಎಷ್ಟು ಪೂರಕವಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಅದು ಪರಿಸರಕ್ಕೆ ಎಷ್ಟು ಮಾರಕವಾಗುತ್ತಿದೆ ಎಂಬುದು ಮಾತ್ರ ದಿಗಿಲು ಹುಟ್ಟಿಸುವಂತದ್ದು.
ಪರಿಸರ ಸೂಕ್ಷ್ಮ ವಲಯಗಳಲ್ಲಿ, ಕಂದಾಯ ಭೂಮಿಯಲ್ಲಿರುವ ರಕ್ಷಿತಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ರೆಸಾರ್ಟ್ ಅಥವಾ ಹೋಂಸ್ಟೇ ನಿರ್ಮಿಸಲು ಪಾಲಿಸಬೇಕಾದ ನಿಯಮಗಳನ್ನು ಅರಣ್ಯ ಇಲಾಖೆ ಹಲವು ವರ್ಷಗಳ ಹಿಂದೆಯೇ ಮಾರ್ಗಸೂಚಿಯಲ್ಲಿ ನೀಡಿದೆ. ಇವುಗಳ ಪ್ರಾಮಾಣಿಕ ಪಾಲನೆ ಕಟ್ಟುನಿಟ್ಟಾಗಿ ಆದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ. ಜೊತೆಯಲ್ಲಿ ಪರಿಸರದ ಮಧ್ಯೆ ವಾಸ್ತವ್ಯಕ್ಕೆ ಹೋದಾಗ ನಾವು ಕಳೆಯುವ ಸಮಯ ಪರಿಸರವನ್ನು ಅರಿಯಲು ಮೀಸಲಿರಬೇಕೇ ಹೊರತು ಮೋಜು ಮಸ್ತಿಗಲ್ಲ ಎಂಬ ಸಾಮಾನ್ಯ ತಿಳುವಳಿಕೆ ಜನರಲ್ಲಿರಬೇಕು. ಪ್ರವಾಸೋದ್ಯಮದ ಉದ್ದೇಶದಿಂದ ಕಾಡಿನೊಳಗೆ ನಿರ್ಮಾಣವಾಗುವ ಕಟ್ಟಡಗಳು ಪರಿಸರ ಸ್ನೇಹಿಯಾಗಿರುವಂತೆ ಜಾಗ್ರತೆ ವಹಿಸಬೇಕು. ತ್ಯಾಜ್ಯ ನಿರ್ವಹಣೆ ಬಗ್ಗೆ ಆಗಿಂದಾಗ್ಗೆ ತಪಾಸಣೆಗಳು ನಡೆಯಬೇಕು. ಕಿವಿಗವಚುವಷ್ಟು ಸದ್ದು ಮಾಡುವ ಧ್ವನಿ ವರ್ಧಕಗಳ ಬಳಕೆಯನ್ನು ನಿಷೇಧಿಸಬೇಕು.
‘ಸಾಮಾಜಿಕ ಪರಿಣಾಮಗಳು’
ಪರಿಸರ ಪ್ರವಾಸೋದ್ಯಮದ ಸದುದ್ದೇಶಗಳಲ್ಲಿ ಒಂದು, ಸ್ಥಳೀಯ ಸಮುದಾಯಗಳ ಹಾಗೂ ಬುಡಕಟ್ಟು ಪಂಗಡಗಳ ಬದುಕನ್ನು ಮುಖ್ಯವಾಹಿನಿಯೊಂದಿಗೆ ಸುಸ್ಥಿರವಾಗಿ ಬೆಸೆಯುವುದು. ಆದರೆ ಈ ಪ್ರಯತ್ನ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ? ಪರಿಸರದೊಳಗೆ ಅವಿಭಾಜ್ಯರಾಗಿರುವ ಈ ಜನರ ಜೀವನಶೈಲಿಯ ಅಸ್ಮಿತೆ ಅತ್ಯಮೂಲ್ಯವಾದುದು. ಅವರ ಸಂಪ್ರದಾಯ, ಆಚರಣೆ, ಸಂಸ್ಕೃತಿ, ಕಲೆ, ಜೀವನ ಶೈಲಿ, ಆಹಾರ ಪದ್ಧತಿ, ಕರಕುಶಲತೆ, ಭಾಷೆ, ಸಾಂಪ್ರದಾಯಿಕ ಜ್ಞಾನ ಭಂಡಾರದ ಅರಿವು ಹೊರ ಜಗತ್ತಿಗೆ ತಲುಪಬೇಕಾಗಿತ್ತು. ಆದರೆ ಇದು ತದ್ವಿರುದ್ಧವಾಗಿ ಸಾಗುತ್ತಿರುವುದು ದೊಡ್ಡ ಅಪಾಯಕ್ಕೆ ನಾಂದಿ ಹಾಡುತ್ತಿದೆ. ಈ ಜನರ ಬದುಕು ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಭೇಟಿ ನೀಡುವ ಹೊರಗಿನ ಜನ ತಮ್ಮ ಬದುಕಿನ ಶೈಲಿಯನ್ನು ಅವರಿಗೆ ಪರಿಚಯಿಸುತ್ತಿದ್ದಾರೆ. ನೈಸರ್ಗಿಕ ಆಹಾರ ತಿಂದು ಆರೋಗ್ಯವಾಗಿದ್ದ ಕಾಡಿನ ಮಕ್ಕಳ ಹೊಟ್ಟೆಗೆ ನಗರಗಳಲ್ಲಿನ ಕೆಟ್ಟ ಆಹಾರಗಳು ಸೇರುತ್ತಿವೆ. ಅವರೂ ಸಹ ಮುಖ್ಯ ವಾಹಿನಿಗೆ ಬರಬೇಕು, ಆಧುನಿಕ ಜೀವನಶೈಲಿಯಲ್ಲಿ ಬದುಕಬೇಕು, ಅಕ್ಷರಸ್ಥರಾಗಬೇಕು, ಎಂದು ವಾದಿಸುವವರ ತರ್ಕವೂ ಒಂದು ಆಯಾಮದಲ್ಲಿ ಸರಿಯಿರಬಹುದು. ಆದರೆ ದೇಶದ ಬಹುತೇಕ ಅರಣ್ಯಗಳು ಇಂದಿಗೂ ಜೀವಂತವಾಗಿರುವುದು ಮಾತ್ರ ಇಂತಹ ಸಮುದಾಯಗಳಿಂದಲೇ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಅವೈಜ್ಞಾನಿಕವಾದಾಗ ಶತಮಾನಗಳಷ್ಟು ಇತಿಹಾಸ ಹೊಂದಿರುವ ಪರಂಪರೆಗೆ ನಾವೇ ಕೊಳ್ಳಿ ಇಟ್ಟಂತಾಗುತ್ತದೆ. ಅವರ ಆರೋಗ್ಯಕರ ಬದುಕಿಗೆ ಹಾನಿಯಾಗುತ್ತದೆ.
ಸುಮಾರು 700 ಬುಡಕಟ್ಟು ಪಂಗಡಗಳನ್ನು ಭಾರತ ಸಂವಿಧಾನದ 342 ನೇ ಕಲಂ ಅನ್ವಯ ಅಧಿಕೃತವಾಗಿ ಗುರುತಿಸಲಾಗಿದೆ. ಬೆರಳೆಣಿಕೆಯಷ್ಟು ಜನಸಂಖ್ಯೆಯಿರುವ ನೂರಾರು ಪಂಗಡಗಳು ಕಾಡಿನೊಡಲಲ್ಲಿ ಚದುರಿ ಹೋಗಿವೆ. ಇವರೆಲ್ಲ ತಲೆಮಾರುಗಳಿಂದಲೂ ಅರಣ್ಯವಾಸಿಗಳೆ. ಆದರೆ ಈಗ ಅವರು ಸರ್ಕಾರಗಳೊಡನೆ, ಆಧುನಿಕ ಸಮಾಜದೊಡನೆ, ಬಲಾಢ್ಯರೊಡನೆ ಹಲವಾರು ಕಾರಣಗಳಿಗಾಗಿ ಸಂಘರ್ಷಗಳನ್ನು ಎದುರಿಸುವ ಪರಿಸ್ಥಿತಿಗೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಲ್ಲಿ ಅವರ ಬದುಕಿನ ಶೈಲಿ ಬದಲಾಯಿಸಿಬಿಟ್ಟರೆ ಅವರ ಹೋರಾಟ ದುರ್ಬಲಗೊಳ್ಳುತ್ತದೆ. ಏಕೆಂದರೆ ಅರಣ್ಯಭೂಮಿಯಲ್ಲಿ ಅವರ ವಾಸಕ್ಕೆ ಅನುವು ಮಾಡಿಕೊಟ್ಟಿರುವುದೇ ಅವರ ಪರಂಪರೆ ಹಾಗೂ ಜೀವನಶೈಲಿ. ಅದುವೇ ಅವರ ರಕ್ಷಾ ಕವಚ. ಆಧುನಿಕ ಜೀವನ ಶೈಲಿಯ ಅಭ್ಯಾಸ ಅವರಿಗೆ ಆಗಿಬಿಟ್ಟರೆ ಅವರನ್ನು ಕಾಡಿನಿಂದ ಹೊರದಬ್ಬುವ ಬಂಡವಾಳಶಾಹಿಗಳ ಕೆಲಸ ಸಲೀಸಾಗಿಬಿಡುತ್ತದೆ. ಕಾಡಿನ ಮಕ್ಕಳ ರಕ್ಷಣೆಯಾದರೆ ಮಾತ್ರ ಕಾಡಿನ ರಕ್ಷಣೆ ಸಾಧ್ಯ. ಅವರ ಬದುಕಿನ ಶೈಲಿಯ ಘನತೆಯನ್ನು ರಕ್ಷಿಸುವುದರಿಂದ ಮಾತ್ರ ಇದನ್ನು ನಿಜವಾಗಿಸಬಹುದು.
ಪರಿಸರ ಪ್ರವಾಸೋದ್ಯಮ ಹಲವಾರು ದೇಶಗಳಲ್ಲಿ ಯಶಸ್ವಿಯಾಗಿದೆ. ಆ ದೇಶಗಳು ತಮ್ಮ ಬೊಕ್ಕಸವನ್ನೂ ತುಂಬಿಸಿಕೊಳ್ಳುತ್ತಿವೆ. ಅದಕ್ಕೆ ಕಾರಣ ಅಲ್ಲಿ ಜಾರಿಯಲ್ಲಿರುವ ಕಠಿಣ ನಿಯಮಗಳು. ಈ ಉದ್ಯಮದ ಜೊತೆ ನಂಟು ಹಾಕಿಕೊಂಡ ಎಲ್ಲಾ ಚಟುವಟಿಕೆಗಳಿಗೂ ಇತಿಮಿತಿ ಹಾಕಲಾಗಿದೆ. ಪಾಲಿಸದೇ ಹೋದರೆ ಕಾನೂನು ಕ್ರಮ ಎದುರಿಸಲೇಬೇಕು. ಇಂತಹ ನೀತಿ ನಿಯಮಗಳು ಇದ್ದರೆ ಮಾತ್ರ ಪರಿಸರವನ್ನು ಹಾಳುಗೆಡವದೆ ಆದಾಯವನ್ನು ಪಡೆಯಲು ಸಾಧ್ಯ. ಪರಿಸರವೆಂಬುದು ನಾವು ಸೃಷ್ಟಿ ಮಾಡಿದ ಸ್ವತ್ತಲ್ಲ. ಮನುಷ್ಯರಾಗಿ ಹುಟ್ಟಿ ಅದರ ಮಹತ್ವವನ್ನು ಅರಿಯುವ ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ. ನಮ್ಮ ಅರಿವಿನ ಹಸಿವು ವನ್ಯಸಂಪತ್ತಿನ ಉಳಿವಿಗೆ ಸಂಚಕಾರವಾಗದಿದ್ದರೆ ಅಷ್ಟೇ ಸಾಕು.
ಲೇಖನ: ಶ್ರೀಕಾಂತ್ ಎ. ವಿ.
ಶಿವಮೊಗ್ಗ ಜಿಲ್ಲೆ
ಜನ್ಮ ದಿನಾಂಕ: 03/11/1982
· ಜನ್ಮ ಸ್ಥಳ: ಶಿವಮೊಗ್ಗ
· ಪ್ರಾಥಮಿಕ ಶಿಕ್ಷಣ: ಶಿವಮೊಗ್ಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆ
· ಪದವಿ ಶಿಕ್ಷಣ: ಪ್ರತಿಷ್ಠಿತ ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ ಇಲ್ಲಿ ಬಿ.ಎಸ್ಸಿ ಪದವಿ -2003
· ಸ್ನಾತಕೋತ್ತರ ಶಿಕ್ಷಣ: ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಸ್ವರ್ಣ ಪದಕ– ಕುವೆಂಪು ವಿಶ್ವವಿದ್ಯಾನಿಲಯ–ಶಂಕರಘಟ್ಟ – 2005
· ಎಂ.ಫಿಲ್ ಪದವಿ – 2008 – ಕುವೆಂಪು ವಿಶ್ವವಿದ್ಯಾನಿಲಯ–ಶಂಕರಘಟ್ಟ
· ಪ್ರಸ್ತುತ ಪಿ.ಹೆಚ್.ಡಿ ಸಂಶೋಧನಾ ಅಧ್ಯಯನ – ಶಿವಮೊಗ್ಗ ಜಿಲ್ಲೆಯ ಸಸ್ಯ ವೈವಿಧ್ಯತೆ ಹಾಗೂ ಹಕ್ಕಿಗಳ ವೈವಿಧ್ಯತೆಯ ಪರಿಸರ ಅಧ್ಯಯನ
· 2005-07 – ಸಹ್ಯಾದ್ರಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕನಾಗಿ ವೃತ್ತಿ ಪ್ರಾರಂಭ
· 2007-09 – ಪ್ರತಿಷ್ಟಿತ ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕನಾಗಿ ಸೇವೆ
· 2009 – ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಜೀವಶಾಸ್ತ್ರ ಉಪನ್ಯಾಸಕನಾಗಿ ಕೆ.ಪಿ.ಎಸ್.ಸಿ ಯಿಂದ ಆಯ್ಕೆ.
· 2009-2015 – ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾಗರ
· 2015 – ಪ್ರಸ್ತುತ – ಸರ್ಕಾರಿ ಪದವಿ ಪೂರ್ವ ಕಾಲೇಜು, ಸೈನ್ಸ್ ಮೈದಾನ, ಶಿವಮೊಗ್ಗ
· ಯುಜಿಸಿ ವತಿಯಿಂದ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯಲ್ಲಿ ಎರಡು ಬಾರಿ ತೇರ್ಗಡೆ–
– 42ND RANK IN 2011
– 30TH RANK IN 2013
· ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ– 2013 (K_SET) ನಲ್ಲಿ ಪ್ರಥಮ rank ನಲ್ಲಿ ತೇರ್ಗಡೆ.
· Centre for Teachers’ Accreditation (Centa) Teaching Professionals Olympiad ನಲ್ಲಿ ಪ್ರಾದೇಶಿಕ 38 ನೇ rank ನಲ್ಲಿ ತೇರ್ಗಡೆ.
· ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದ (TALP-Technology Assisted Learning Program) Master trainer.
· ಇತ್ತೀಚಿಗೆ ನಡೆದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ 3 ನೇ rank.
· ಹವ್ಯಾಸಗಳು – ವನ್ಯಜೀವಿ ಛಾಯಾಗ್ರಹಣ, ವೈಜ್ಞಾನಿಕ ಲೇಖನಗಳ ರಚನೆ, ಸಣ್ಣ ಕವಿತೆಗಳ ರಚನೆ, Quotes Writing