ಪಕ್ಷಿಗಳ ವಂಶಾಭಿವೃದ್ಧಿ
© ನಾಗೇಶ್ ಓ ಎಸ್
ಅದೊಂದು ದಿನ ಮಾವಿನ ಮರದಲ್ಲಿ ‘ಖಗರತ್ನ’ (Purple-rumped sunbird) ಸಣ್ಣ ಟೊಂಗೆಯ ಮೇಲೆ ಕುಳಿತಿರುವುದನ್ನು ನೋಡಿದೆ. ಆದರೆ ಆ ಹಕ್ಕಿಯ ವರ್ತನೆ ವಿಚಿತ್ರವಾಗಿತ್ತು, ತನ್ನ ಬಾಯಲ್ಲಿ ಯಾವುದೋ ಒಂದು ವಸ್ತುವನ್ನು ಹಿಡಿದುಕೊಂಡು ಅತ್ತಿಂದಿತ್ತ ಗಾಬರಿಯಿಂದ ನೋಡುತ್ತಿತ್ತು. ಅದೇಕೆ ಹೀಗೆ ವರ್ತಿಸುತ್ತಿದೆ ಎಂದು ಹತ್ತಿರ ಹೋಗಿ ನೋಡಿದಾಗ, ಆ ಹಕ್ಕಿಯು ಗೂಡು ಕಟ್ಟುತ್ತಿರುವುದು ಕಂಡುಬಂದಿತು. ಆಗ ಅಲ್ಲಿಯೇ ಸ್ವಲ್ಪ ದೂರದಲ್ಲಿ (ಪಕ್ಷಿಗೆ ತಿಳಿಯದ ಹಾಗೆ) ಕುಳಿತು ಸೂಕ್ಷ್ಮವಾಗಿ ಆ ಹಕ್ಕಿಯ ವರ್ತನೆಯನ್ನು ವೀಕ್ಷಿಸಿದೆ. ಹೆಣ್ಣು ಹಕ್ಕಿಯು ಸಂಪೂರ್ಣವಾಗಿ ಆ ಗೂಡನ್ನು ಕಟ್ಟುತ್ತಿದ್ದರೆ, ಗಂಡು ಹಕ್ಕಿಯು ಶಬ್ದ ಮಾಡುತ್ತಾ ಹೆಣ್ಣನ್ನು ಹಿಂಬಾಲಿಸುತ್ತಿದ್ದರೂ ಗೂಡು ಕಟ್ಟುವಲ್ಲಿ ಸಕ್ರಿಯವಾಗಿ ಭಾಗಿಯಾಗಲಿಲ್ಲ. ನಾನು, ಗಂಡು ಪಕ್ಷಿಯು ಹೆಣ್ಣು ಪಕ್ಷಿಯ ರಕ್ಷಣೆಗಾಗಿ ಹಿಂಬಾಲಿಸುತ್ತಿರಬಹುದು ಎಂದೆಣಿಸಿದೆ.
ಇದೇ ತರಹ ಹೆಣ್ಣು ಹಕ್ಕಿಯು ಸಂಪೂರ್ಣವಾಗಿ ಗೂಡನ್ನು ರಚನೆ ಮಾಡಲು ಆರು ದಿನಗಳ ಸಮಯ ತೆಗೆದುಕೊಂಡರೆ, ಗಂಡು ಹಕ್ಕಿಯು ಅದಕ್ಕೆ ಕಾವಲಾಗಿತ್ತು. ಈ ಹಕ್ಕಿಗಳು ಗೂಡು ಕಟ್ಟುವ ಕಲೆಯನ್ನು ಸಂಪೂರ್ಣವಾಗಿ ಒಂದು ದಿನ ಮುಂಜಾನೆ ಎಂಟು ಗಂಟೆಯಿಂದ ಸಾಯಂಕಾಲ ಆರು ಗಂಟೆಯವರೆಗೆ ಕುಳಿತು ನೋಡಿದಾಗ, ಹೆಣ್ಣು ಹಕ್ಕಿಯು ಗೂಡು ಕಟ್ಟಲು ವಿವಿಧ ಬಗೆಯ ವಸ್ತುಗಳನ್ನು 201 ಬಾರಿ ತಂದು ಗೂಡು ರಚನೆ ಮಾಡಿರುವುದು ಕಂಡುಬಂದಿತು. ನಂತರ ಆ ಗೂಡಿನಲ್ಲಿ ಮೊಟ್ಟೆ ಇಟ್ಟು, ಮರಿ ಮಾಡಿ, ಈ ಕುಟುಂಬ ಆ ಜಾಗದಿಂದ ಕೆಲವು ದಿನಗಳ ನಂತರ ತನ್ನ ಪುಟ್ಟ ಮರಿಗಳೊಂದಿಗೆ ಹಾರಿಹೋದವು. ಇದೇ ತರಹ ಎಲ್ಲಾ ಹಕ್ಕಿಗಳು ಕಷ್ಟ ಪಡುವುದು ತಮ್ಮ ಸಂತಾನೋತ್ಪತ್ತಿಗಾಗಿ ಮತ್ತು ತಮ್ಮ ವಂಶಾಭಿವೃದ್ಧಿಗಾಗಿ.
ವಂಶಾಭಿವೃದ್ಧಿ ಎನ್ನುವುದು ಪ್ರತಿಯೊಂದು ಜೀವಿಯಲ್ಲಿ ನಡೆಯುವ ಒಂದು ನಿರಂತರವಾದ, ಬಹು ಮುಖ್ಯವಾದ ಪ್ರಕ್ರಿಯೆಯಾಗಿದೆ. ಈ ಸಂತಾನೋತ್ಪತ್ತಿ ಪ್ರಕ್ರಿಯೆ ಮೀನು, ಉಭಯವಾಸಿ, ಸರೀಸೃಪ, ಸಸ್ತನಿ ಹಾಗೂ ಪಕ್ಷಿಗಳಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯುತ್ತದೆ.
ಪ್ರಮುಖವಾಗಿ ಪಕ್ಷಿಗಳು ಸಂತಾನೋತ್ಪತ್ತಿಗೆ ಪ್ರಯಾಸ ಪಡುವಷ್ಟು ಭೂಮಿಯ ಮೇಲೆ ಮತ್ತಾವ ಜೀವಿಗಳು ಪ್ರಯಾಸ ಪಡುವುದಿಲ್ಲವೇನೋ? ಭಕ್ಷಕಗಳಿಂದ ರಕ್ಷಣೆ, ಗೂಡು ಕಟ್ಟುವ ಪರಿ, ಅದಕ್ಕಾಗಿ ಉಪಯೋಗಿಸುವ ವಸ್ತುಗಳು, ಪ್ರತಿಕೂಲ ಹವಾಮಾನದಿಂದ ರಕ್ಷಿಸಿಕೊಳ್ಳಲು ಸಾವಿರಾರು ಕಿಲೋಮೀಟರ್ ದೂರದವರೆಗೆ ವಲಸೆ ಬರುವುದು ಎಲ್ಲವೂ ನಿಬ್ಬೆರಗಾಗಿಸುವಂತವು.
ಪ್ರತಿಯೊಂದು ಜೀವಿಗಳು ತನ್ನದೇ ಆದಂತಹ ಆವಾಸಸ್ಥಾನ ಹೊಂದಿರುತ್ತವೆ. ಆದರೆ ಪಕ್ಷಿಗಳು ವಾಸಸ್ಥಾನಕ್ಕೆ ಗೂಡು ಕಟ್ಟುವ ಕಲೆ ವಿಶಿಷ್ಟವಾದದ್ದು ಹಾಗೂ ಕಲಾತ್ಮಕವಾದ ತಾಂತ್ರಿಕತೆಯಿಂದ ಕೂಡಿರುತ್ತದೆ. ಪಕ್ಷಿಗಳು ವಾಸಕ್ಕಾಗಿ ಅದರಲ್ಲೂ ಸಂತಾನೋತ್ಪತ್ತಿಗಾಗಿ ಗೂಡುಕಟ್ಟುತ್ತವೆ. ಒಂದೊಂದು ಪ್ರಭೇದದ ಪಕ್ಷಿಗಳ ಗೂಡುಗಳು ಒಂದೊಂದು ತರಹದ ಭಿನ್ನತೆಯಿಂದ ಕೂಡಿರುತ್ತವೆ. ಗೂಡುಕಟ್ಟುವ ಮುಂಚೆ ಸ್ಥಳದ ಆಯ್ಕೆ ಮಾಡುವಾಗ ವಹಿಸುವ ಚಾಣಾಕ್ಷತೆ ಬಹುಶಃ ಬುದ್ಧಿಶಾಲಿ ಮಾನವ ಕೂಡ ವಹಿಸುವುದಿಲ್ಲ; ಅಷ್ಟು ತೀಕ್ಷ್ಣವಾಗಿ ಸ್ಥಳದ ಆಯ್ಕೆ ನಡೆಯುತ್ತದೆ. ಗಾಳಿ-ಮಳೆಗೆ ವಿರುದ್ಧವಾಗಿ, ಭಕ್ಷಕ ಜೀವಿಗಳಿಗೆ ಗೂಡು ಸಿಗದ ಜಾಗದಲ್ಲಿ ಹಾಗೂ ಗಿಡಕ್ಕೆ ಗೂಡುಕಟ್ಟುವ ಕಡ್ಡಿಯನ್ನು ಆಯ್ಕೆ ಮಾಡುವಾಗಲೂ ಅದರ ತೀಕ್ಷ್ಣತೆ ಅಗಾಧವಾದದ್ದು. ಅಷ್ಟು ಸೂಕ್ಷ್ಮವಾದ ಜಾಗದಲ್ಲಿ ಗೂಡುಕಟ್ಟುತ್ತವೆ. ಅವುಗಳು ಸಂತಾನೋತ್ಪತ್ತಿಗಾಗಿ ಗೂಡುಕಟ್ಟಲು ಸಾವಿರಾರು ಬಾರಿ ಹುಲ್ಲು ಕಡ್ಡಿಗಳನ್ನು ತಂದು ಗೂಡು ಕಟ್ಟುತ್ತವೆ. ಗೀಜಗ (Baya weaver), ದರ್ಜಿ (Tailor bird), ನೊಣಹಿಡುಕ (Flycatcher), ಕವಲುತೋಕೆ (Swallow) ಹಕ್ಕಿಗಳ ಗೂಡುಗಳು ಬಹಳ ಕಲಾತ್ಮಕವಾಗಿ ಹಾಗೂ ತಾಂತ್ರಿಕತೆಯಿಂದ ಕೂಡಿರುತ್ತವೆ. ಪಕ್ಷಿಗಳಲ್ಲಿಯೇ ಗೀಜಗ ಹಕ್ಕಿಯು ಗೂಡು ಕಟ್ಟುವುದರಲ್ಲಿ ನಿಸ್ಸೀಮ. ಆದ್ದರಿಂದ ಇದನ್ನು ನೇಕಾರ ಹಕ್ಕಿ ಎಂದು ಸಹ ಕರೆಯುತ್ತಾರೆ.
ಕೆಲವು ಪಕ್ಷಿಗಳು ತಾವೇ ಸ್ವತಃ ಗೂಡು ಕಟ್ಟಿದರೆ, ಮತ್ತೆ ಕೆಲವು ಪಕ್ಷಿಗಳು ಇನ್ನೊಂದು ಪಕ್ಷಿ ಬಳಸಿ ಬಿಟ್ಟ ಗೂಡುಗಳನ್ನು ಬಳಸುತ್ತವೆ. ಉದಾಹರಣೆಗೆ, ಮರಕುಟುಕ ಹಕ್ಕಿ ಕಟ್ಟಿದ ಗೂಡುಗಳನ್ನು ಬೇರೆ ಬೇರೆ ಪಕ್ಷಿಗಳು ಬಳಸುತ್ತವೆ. ಪಕ್ಷಿಗಳು ಗೂಡು ಕಟ್ಟಲು, ಪರಿಸರದಲ್ಲಿ ಸಿಗುವ ಹುಲ್ಲು, ಕಡ್ಡಿ, ಎಲೆ ಹಾಗೂ ಜೇಡಗಳ ಬಲೆಗಳನ್ನು ಉಪಯೋಗಿಸುತ್ತವೆ. ಪ್ರಮುಖವಾಗಿ ಪಕ್ಷಿಗಳು ತಮ್ಮ ವಂಶಾಭಿವೃದ್ಧಿಯನ್ನು ಮುಂದುವರಿಸಲು ಹಾಗೂ ವಾಸಸ್ಥಾನಕ್ಕಾಗಿ ಗೂಡು ಕಟ್ಟುವುದು ವಾಡಿಕೆ. ಆದ್ದರಿಂದ ಪಕ್ಷಿ ಸಂಕುಲವನ್ನು ಹಾಗೂ ಅದರ ಗೂಡುಗಳನ್ನು ಕಾಪಾಡುವುದು ಹಾಗೂ ಪರಿಸರವನ್ನು ಸಮತೋಲನದಲ್ಲಿಡುವುದು ನಮ್ಮೆಲ್ಲರ ಮುಖ್ಯ ಪಾತ್ರವಾಗಿದೆ.
ಲೇಖನ: ಬಸನಗೌಡ ಎನ್. ಬಗಲಿ
ಉತ್ತರ ಕನ್ನಡ ಜಿಲ್ಲೆ