ಪ್ರಕೃತಿ ಬಿಂಬ
ನೀಲಗಿರಿ ಥಾರ್ © ಭಗವತಿ ಬಿ. ಎಂ.
ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿರುವ ನೀಲಗಿರಿ ಬೆಟ್ಟ, ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಮೇಕೆಯು ಬೋವಿಡೆ (Bovidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ನೀಲಗಿರಿಟ್ರಾಗಸ್ ಹೈಲೋಕ್ರಿಯಸ್ (Nilgiritragus hylocrius) ಎಂದು ಕರೆಯಲಾಗುತ್ತದೆ. ಸ್ಥೂಲವಾದ ದೇಹವಿರುವ, ಈ ಮೇಕೆಗಳಿಗೆ ಚಿಕ್ಕದಾದ ಹಾಗೂ ಒರಟಾದ ತುಪ್ಪಳ ಮತ್ತು ಬಿರುಸಾದ ಕೇಸರವಿರುತ್ತದೆ. ಗಂಡು ಮೇಕೆಯು ಹೆಣ್ಣಿಗಿಂತ ದೊಡ್ಡದಾಗಿದ್ದು, ಗಾಢ ಬಣ್ಣವನ್ನು ಹೊಂದಿರುತ್ತದೆ. ಬಾಗಿದ ಕೊಂಬುಗಳನ್ನು ಹೊಂದಿರುವ ಇವುಗಳು, ಹಿಂಡುಗಳಲ್ಲಿ ವಾಸಿಸುತ್ತವೆ ಮತ್ತು ವಿವಿಧ ಹುಲ್ಲುಗಳು, ಪೊದೆಗಳು, ಎಲೆಗಳನ್ನು ಆಹಾರವಾಗಿ ಸೇವಿಸುತ್ತವೆ. ನೀಲಗಿರಿ ಥಾರ್ ಗಳು ಅತ್ಯಂತ ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿದ್ದು, ದೂರದಿಂದಲೇ ಅಪಾಯವನ್ನು ಗುರುತಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ.
ಏಷ್ಯಾದ ದಟ್ಟವಾದ ಮಳೆಕಾಡು ಹಾಗೂ ತೇವಾಂಶವುಳ್ಳ ಮತ್ತು ಒಣಗಿರುವ ಎಲೆ ಉದುರುವ ಕಾಡುಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಕೆನ್ನಾಯಿಯನ್ನು ಏಷಿಯಾಟಿಕ್ ವೈಲ್ಡ್ ಡಾಗ್ (Asiatic wild dog) ಎಂಬ ಹೆಸರಿನಿಂದ ಕರೆಯುತ್ತಾರೆ. ಕ್ಯಾನಿಡೇ (Canidae) ಕುಟುಂಬಕ್ಕೆ ಸೇರುವ ಈ ಸಸ್ತನಿಯನ್ನು ವೈಜ್ಞಾನಿಕವಾಗಿ ಆಲ್ಪೈನ್ ಕ್ಯೂನ್ (Cuon alpinus) ಎಂದು ಕರೆಯಲಾಗುತ್ತದೆ. ಸುಮಾರು 20 ಇಂಚುಗಳಷ್ಟು ಎತ್ತರವಿರುವ, ಕೆಂಪು-ಕಂದು ಬಣ್ಣದ, ಮಧ್ಯಮ ಗಾತ್ರದ ನಾಯಿಯಾಗಿದ್ದು, ಪೊದೆಯಂತಹ ಕಪ್ಪು ಬಾಲವನ್ನು ಹೊಂದಿರುತ್ತದೆ. ಗಂಡು ನಾಯಿಯು ಸಾಮಾನ್ಯವಾಗಿ ಹೆಣ್ಣಿಗಿಂತ ಬಲವಾದ ಸ್ನಾಯುಗಳನ್ನು ಹೊಂದಿರುತ್ತದೆ. ಮನುಷ್ಯರಿಂದ ದೂರ ಇರಲು ಬಯಸುವ ಅತಿ ಸೂಕ್ಷ್ಮವಾದ ಈ ಜೀವಿಗಳು, ಗುಂಪುಗಳನ್ನು ರಚಿಸಿ ವಿವಿಧ ಶಬ್ದಗಳ ಮೂಲಕ ಸಂವಹನ ನಡೆಸಿ, ಚತುರತೆಯಿಂದ ಬೇಟೆಯಾಡುವುದು ಇವುಗಳ ವಿಶೇಷವಾಗಿದೆ.
ಏಷ್ಯಾ ಖಂಡದ ಕೋನಿಫೆರಸ್ ಹಾಗೂ ಮಲೆನಾಡಿನ ಕಾಡುಗಳು, ಉಷ್ಣವಲಯದ ಶುಷ್ಕ ಮತ್ತು ತೇವಾಂಶವುಳ್ಳ ಕಾಡು ಹಾಗೂ ಪೊದೆಗಳು, ತಗ್ಗು ಪ್ರದೇಶದ ಜೌಗು ಪ್ರದೇಶಗಳು ಮತ್ತು ಪರ್ವತಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಸಸ್ತನಿಯು ಮಸ್ಟೆಲಿಡೆ (Mustelidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಮಾರ್ಟೆಸ್ ಫ್ಲಾವಿಗುಲಾ (Martes flavigula) ಎಂದು ಕರೆಯಲಾಗುತ್ತದೆ. ಇದರ ತುಪ್ಪಳವು ಕಪ್ಪು, ಬಿಳಿ, ಹಳದಿ ಮತ್ತು ಕಂದು ಬಣ್ಣಗಳ ಮಿಶ್ರಣವನ್ನು ಹೊಂದಿರುತ್ತದೆ. ಹಿಂಭಾಗವು ಕಂದು ಬಣ್ಣವಿದ್ದು, ಪಾರ್ಶ್ವಗಳು ಮತ್ತು ಹೊಟ್ಟೆಯ ಭಾಗವು ಪ್ರಕಾಶಮಾನವಾದ ಹಳದಿ ಬಣ್ಣದ್ದಾಗಿದೆ. ಬಾಲವು ಕಡುಗಪ್ಪು ಬಣ್ಣವಿದ್ದು, ದುಂಡಗಿನ ತುದಿಯನ್ನು ಹೊಂದಿದ ಅಗಲವಾದ ಕಿವಿಗಳನ್ನೊಳಗೊಂಡಿದೆ. ಹಣ್ಣು, ಮಕರಂದ, ಇಲಿಗಳು, ಮೊಲಗಳು, ಹಾವುಗಳು, ಹಲ್ಲಿಗಳು, ಮೊಟ್ಟೆಗಳು ನೆಲದ ಮೇಲೆ ಗೂಡುಕಟ್ಟುವ ಪಕ್ಷಿಗಳು ಇವುಗಳ ಆಹಾರವಾಗಿವೆ. ಮರಗಳನ್ನು ಹತ್ತುವ ಪ್ರಾವಿಣ್ಯತೆಯನ್ನು ಹೊಂದಿರುವ ಧೈರ್ಯವಂತ ಪ್ರಾಣಿಯಾದ ಇವುಗಳು ಹಗಲಿನಲ್ಲಿ ಗುಂಪುಗಳನ್ನು ರಚಿಸಿ ಬೇಟೆಯಾಡುತ್ತವೆ..
ಶ್ರೀಲಂಕಾ ಮತ್ತು ದಕ್ಷಿಣ ಭಾರತದ ಕಾಡುಗಳಿಗೆ ಸ್ಥಳೀಯವಾಗಿರುವ ಈ ಅಳಿಲು ಸ್ಕ್ಯೂರಿಡೆ (Sciuridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ರತುಫಾ ಮ್ಯಾಕ್ರೋರಾ (Ratufa macroura) ಎಂದು ಕರೆಯಲಾಗುತ್ತದೆ. ಬೂದು ಮಿಶ್ರಿತ ಕಂದು ಬಣ್ಣದ ದೇಹವನ್ನು ಬಿಳಿ ಕೂದಲುಗಳು ಆವರಿಸಿ ಇವುಗಳಿಗೆ ನಸುಗೆಂಪು ಬಣ್ಣ ನೀಡುತ್ತದೆ. ತಳಭಾಗವು ತಿಳಿಗಂದು ಬಣ್ಣವಿದ್ದು, ಬಿಳಿ ತುಪ್ಪಳವಿರುವ ಬಾಲವನ್ನು ಹೊಂದಿದೆ. ಹಣೆ ಮತ್ತು ಪಾದಗಳು ಕಪ್ಪು ಬಣ್ಣದಲ್ಲಿರುತ್ತವೆ ಹಾಗೂ ಮೂತಿಯು ಗುಲಾಬಿ ಬಣ್ಣದ್ದಾಗಿದೆ. ಮರಗಳ ಮೇಲೆ ವಾಸಿಸುವ ಈ ಅಳಿಲು ತನ್ನ ಉತ್ತಮವಾದ ದೃಷ್ಟಿಯಿಂದ ಪರಭಕ್ಷಕಗಳನ್ನು ಪತ್ತೆಹಚ್ಚುತ್ತದೆ. ಹಣ್ಣುಗಳು, ಬೀಜಗಳು, ಕೀಟಗಳು, ಪಕ್ಷಿಯ ಮೊಟ್ಟೆಗಳು ಮತ್ತು ಕೆಲವು ಮರಗಳ ತೊಗಟೆಯು ಇದರ ಆಹಾರವಾಗಿವೆ. ಹತ್ತಿರದ ಗುಂಪುಗಳೊಂದಿಗೆ ಸಂವಹನ ಮಾಡಲು ತಮ್ಮ ಜೋರಾದ ಧ್ವನಿಯನ್ನು ಬಳಸುತ್ತದೆ.
ಚಿತ್ರಗಳು : ಭಗವತಿ ಬಿ. ಎಂ.
ಲೇಖನ : ದೀಪ್ತಿ ಎನ್.
ನಾನು ಒಬ್ಬ ಪಕ್ಷಿ ಪ್ರೇಮಿ ಮತ್ತು ಅದರ ಛಾಯಾಗ್ರಾಹಕಿ, ಇತರ ವನ್ಯ ಜೀವಿಗಳ ಛಾಯಾಗ್ರಹಣದಲ್ಲಿ ಆಸಕ್ತಿ ತುಂಬಾ ಇದೆ. ನಾನು ನನ್ನ ತಂದೆ ಸ್ಥಾಪಿಸಿದ ಒಂದು ಸಣ್ಣ ಕೈಗಾರಿಕೋದ್ಯಮದಲ್ಲಿ ನನ್ನ ಸೇವೆ ಮತ್ತು ಅದರ ಉನ್ನತಿ ನನ್ನ ಕೆಲಸ. ನನ್ನ ಮೇಲಿನ ಜವಾಬ್ದಾರಿ ಒಬ್ಬ ಮಗಳದಾಗಿ, ಒಬ್ಬ ಪತ್ನಿಯಾಗಿ, ಒಬ್ಬ ಮಗಳ ತಾಯಿಯಾಗಿ, ಒಬ್ಬ ಅತ್ತೆಯ ಸೊಸೆಯಾಗಿ ಇರುತ್ತದೆ. ನಾನು ನನ್ನ ಬಿಡುವಿನ ಸಮಯದಲ್ಲಿ ಛಾಯಾಚಿತ್ರದ ಹವ್ಯಾಸ ಬೆಳೆಸಿಕೊಂಡೆ ಮತ್ತು ಇದು ನನ್ನ ಮನಸ್ಸಿಗೆ ತುಂಬಾ ಅಚ್ಚುಮೆಚ್ಚು.
ಹಾಗೊಮ್ಮೆ ಹೀಗೊಮ್ಮೆ ಚಾರಣ ದಲ್ಲಿಯೂ ನನ್ನ ಆಸಕ್ತಿ , ಅದಕ್ಕೆ ನನ್ನ ಮಗಳ ಕಂಪನಿ ಇರುತ್ತದೆ…
ನನಗೆ ಶಾಸ್ತ್ರೀಯ ನೃತ್ಯ, ಸಂಗೀತದ ಅಭ್ಯಾಸವನ್ನು ಮಾಡಿದ್ದೇನೆ. ಸಮರ ಕಲೆಯನ್ನು ಅಭ್ಯಾಸ ಮಾಡಿದವಳು. ಹೀಗೆ ನನ್ನನ್ನು ನಾನು ಯಾವಾಗಲೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನನಗೆ ಇಷ್ಟ. ಸಾಮಾಜಿಕ ವಾಗಿಯೂ ಸಕ್ರಿಯವಾಗಿದ್ದೆನೆ. ಹೀಗಿದೆ ನನ್ನ ಇದುವರೆಗಿನ ಜೀವನ, ಮಂದಿನ ಜೀವನ ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಸರ, ವನ್ಯಜೀವಿಗಳ ಸಂರಕ್ಷಣೆಗಾಗಿ ನನ್ನ ಸೇವೆ ಮೀಸಲು.