ಕಲಾವಿದೆ
©ದೀಕ್ಷಿತ್ ಕುಮಾರ್ ಪಿ.
ಅಂದು ಮನೆಯೆಲ್ಲ ತುಂಬಾ ಪ್ರಶಾಂತವಾಗಿತ್ತು. ಏನನ್ನೋ ಯೋಚಿಸುತ್ತ ಮಲಗಿದ್ದ ನಾನು ಧಿಗ್ಗನೆ ಎದ್ದು ಕುಳಿತೆ! ಇಷ್ಟು ಶಾಂತವಾಗಿದೆಯೆಂದರೆ ನನ್ನ ತುಂಟ ಮಗ ಯಾವುದೋ ಭಾರಿ ಯೋಜನೆಯ ಹುನ್ನಾರವನ್ನೇ ನಡೆಸುತ್ತಿರಬಹುದು ಎಂದು ಯೋಚಿಸಿ ಮನೆಯೆಲ್ಲ ಅವನಿಗಾಗಿ ಶೋಧಿಸತೊಡಗಿದೆ. ಯಾವ ಕೋಣೆಯಲ್ಲೂ ಮಹಾಶಯನ ಸುಳಿವೇ ಇಲ್ಲ! ಇನ್ನೆಲ್ಲಿ ಹೋಗಿರಬಹುದು, ಏನು ಅನಾಹುತವಾಯಿತೋ ಅಂತ ವಿಚಿತ್ರವಾದ ಯೋಚನೆಗಳು ಆರಂಭವಾಗುವುದರಲ್ಲಿಯೇ ನೀರ ಹನಿಗಳು ಹಾಗು ಅದರ ಪಕ್ಕದಲ್ಲೇ, ಕೃಷ್ಣ ಜನ್ಮಾಷ್ಟಮಿಯಂದು ಮಾತ್ರ ಗೋಚರಿಸುವ ಕೃಷ್ಣನ ಪುಟ್ಟ ಪಾದಗಳಂತೆ ಕೆಂಪು ಮಣ್ಣಿನ ಕೆಸರಿನ ಹೆಜ್ಜೆ ಗುರುತುಗಳು ಕಂಡವು. ಅವುಗಳನ್ನು ಹಿಂಬಾಲಿಸುತ್ತ ಸಾಗಿದೆ. ಹೆಜ್ಜೆಗಳು ಹಿತ್ತಲ ಬಾಗಿಲನ್ನು ದಾಟಿ ಹೊರಗೆ ಅಂಗಳದ ಹತ್ತಿರ ಸಾಗಿದ್ದವು, ಆದರೆ ಅಂಗಳದಲ್ಲಿ ಯಾರೂ ಕಾಣಿಸಲಿಲ್ಲ! ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಮೇಲೆ ನೀರಿನ ಟ್ಯಾಂಕಿನ ಹತ್ತಿರ ಕುಳಿತು ಆಟವಾಡುತ್ತಿದ್ದ ನನ್ನ ಮಗ. ಅಲ್ಲೇನು ಕೆಲಸ ಇವನಿಗೆ ಎಂದು ಹತ್ತಿರ ಹೋಗಿ ನೋಡಿದರೆ ಅವನ ಕ್ರೇನ್, ಜೆಸಿಬಿ, ಡಂಪ್ ಟ್ರಕ್ಕುಗಳು ಕೆಲಸದಲ್ಲಿ ನಿರತವಾಗಿದ್ದವು. ಮನೆಯಂಗಳದ ಹೂದೋಟದಲ್ಲಿ ಇವನು ಒಂದು ಬಾವಿ ತೋಡುತ್ತಿದ್ದ. ಅದರಲ್ಲಿ ನೀರನ್ನು ತುಂಬಿಸಿ, ಬಾವಿ ತೋಡುವ ಮೊದಲೇ ಅಲ್ಲಿ ನೀರಿರುವಂತೆ ಜಾಗೃತ ವಹಿಸಿದ್ದ! ಮೈ-ಕೈ, ಬಟ್ಟೆ, ಚಪ್ಪಲಿ ಎಲ್ಲವೂ ಕೆಸರು. ಇನ್ನು ಬೈದರೆ ಏನು ಉಪಯೋಗವೆಂದು ಬಂದ ಸಿಟ್ಟನ್ನೆಲ್ಲ ನುಂಗಿ, ಅವನು ಆಡುವುದನ್ನೇ ನೋಡುತ್ತಾ ನೀರಿನ ಟ್ಯಾಂಕ್ ಮೇಲೆ ಕುಳಿತುಕೊಂಡೆ. ಆಗ ಹಳದಿ ಬಣ್ಣದ ವಸ್ತುವೊಂದು ಹಾರಿ ಹೋಗಿ ಕಿಟಕಿಯಲ್ಲಿ ಇಟ್ಟಿದ್ದ ಹೂಕುಂಡದಲ್ಲಿ ಮಾಯವಾಗಿ ಬಿಟ್ಟಿತು. ನನಗೆ ಮಹದಾಶ್ಚರ್ಯ, ಹಳೆಯ ಖಾಲಿಯಾದ ಗಾಜಿನ ಬಾಟಲುಗಳನ್ನು ಗಿಡ ನೆಡಬೇಕೆಂದು.
ಹಾಗು ಅವುಗಳು ಸುಂದರವಾಗಿ ಕಾಣಿಸಬೇಕೆಂದು ಅವುಗಳ ಹೊರಮೈ ಮೇಲೆ ಬಣ್ಣ ಬಣ್ಣದ ಚಿತ್ರ ಬಿಡಿಸಿ ಒಣಗಲು ಇಟ್ಟಿದ್ದೆ. ಖಾಲಿ ಬಾಟಲಿನಲ್ಲಿ ಏನು ಕೆಲಸ ಅಂತ ಇಣುಕಿ ನೋಡಿದೆ. ಅದಾಗಲೇ ಹುಳು ಹಾರಿ ಹೋಗಿತ್ತು. ಬಾಟಲಿಯ ತಳಭಾಗದಲ್ಲಿ ಹಸಿ ಮಣ್ಣಿನ ಕುರುಹುಗಳು ಕಂಡಿದ್ದೇ ಇದು ಕುಂಬಾರ ಹುಳು, ಗೂಡು ಕಟ್ಟಲು ಪ್ರಾರಂಭಿಸಿದೆ ಎಂದು ತಿಳಿದು ಸಂತೋಷವಾಯಿತು. ಮತ್ತೆ ನಾನು ಕುಳಿತ ಜಾಗಕ್ಕೆ ಹಿಂತಿರುಗಿದೆ. ಆಶ್ಚರ್ಯವೆಂಬಂತೆ ಆ ಹಳದಿ ಮತ್ತು ಕಪ್ಪು ಬಣ್ಣದ ಹುಳು, ಮಗ ತೋಡಿದ ಬಾವಿಯ ಪಕ್ಕದಲ್ಲಿನ ಮಣ್ಣನ್ನೇ ಉಂಡೆಯನ್ನಾಗಿ ಮಾಡಿ ಅದನ್ನು ತನ್ನ ಬಾಯಿಯ ಮ್ಯಾಂಡಿಬಲ್ಸ್ ಹಾಗು ಮುಂಗಾಲುಗಳಿಂದ ಎತ್ತಿ ಹಿಡಿದು ಹಾರುತ್ತಾ ಅದು ಗೂಡು ಕಟ್ಟುವ ಜಾಗಕ್ಕೆ ಒಯ್ಯಲಾರಂಭಿಸಿತ್ತು.
ಎಡೆಬಿಡದೆ ಎರಡು ಘಂಟೆಗಳವರೆಗೆ ಅದು ಸತತವಾಗಿ ಮಣ್ಣಿನ ಉಂಡೆಗಳನ್ನು ಎತ್ತೊಯ್ದಿತ್ತು. ಇದನ್ನೇ ನೆಪ ಮಾಡಿಕೊಂಡು ಅದರ ಬಗ್ಗೆ ವಿವರಿಸುತ್ತಾ ಮಗನಿಗೆ ಊಟ ಮಾಡಿಸಿದೆ. ಹೊತ್ತಾಯ್ತಲ್ಲ! ಇದೆಂಥಾ ಗೂಡು ಕಟ್ಟುತ್ತಿರಬಹುದು ಎಂದು ಬೇಗ ಬೇಗ ಕೈ ತೊಳೆದುಕೊಂಡು, ಹುಳು ಗಾಜಿನ ಬಾಟಲಿ ಹತ್ತಿರ ಇಲ್ಲ ಎಂದು ಖಾತ್ರಿಯಾದ ಮೇಲೆ ಇಣುಕಿ ನೋಡಿದೆ. ಅರೆ! ಗೂಡಿನ ಆಕಾರವೇ ಬೇರೆ ಇದೆಯಲ್ಲವೇ? ಎಂದು ಅಚ್ಚರಿಯಾಯಿತು. ಮಣ್ಣಿನ ಮಡಕೆ ತರಹ ಗೂಡನ್ನು ಕಲ್ಪಿಸಿಕೊಂಡ ನನಗೆ ಸ್ವಲ್ಪ ಕಸಿವಿಸಿಯಾಯಿತು. ಈಗ ಗಾಜಿನ ಬಾಟಲಿಯಲ್ಲಿರುವಂತ ಉದ್ದ ಉದ್ದನೆಯ ಕೊಳವೆಯಾಕಾರದ, ಒಂದರ ಪಕ್ಕದಲ್ಲಿ ಇನ್ನೊಂದು ಮತ್ತು ಒಂದರ ಮೇಲೆ ಇನ್ನೊಂದು ಮಣ್ಣಿನ ಗೂಡುಗಳು ಗುಂಪಿನಲ್ಲಿದ್ದವು. ಇದಕ್ಕಿಂತ ಮುಂಚೆಯೂ ತುಂಬಾ ಸಣ್ಣವಳಿದ್ದಾಗಿನಿಂದಲೂ ಇಂತ ಗೂಡುಗಳನ್ನು ನಮ್ಮ ಹಳ್ಳಿ ಮನೆಯಲ್ಲಿ, ಮಾಡ್ನಿಯಲ್ಲಿ (ಹಳೆಯ ಕಾಲದ ಮಣ್ಣಿನ ಮನೆಯ ಗೋಡೆಯ ಒಳಭಾಗದಲ್ಲಿ ಏನಾದರು ವಸ್ತುಗಳನ್ನು ಇಡಲು ಚಿಕ್ಕ shelf), ಗೋಡೆಗಳ ಸಂದುಗಳಲ್ಲಿ ನೋಡಿದ್ದೇನೆ. ನನ್ನ ಬಾಲ್ಯದ ಪ್ರತಿ ಬೇಸಿಗೆ ರಜೆಯಲ್ಲಿ ಇಂತ ಗೂಡುಗಳನ್ನು ಅಥವಾ ಅದರ ಜುಯ್ ಎನ್ನುವ ಶಬ್ದವನ್ನು ಗಮನಿಸುವುದು ನನ್ನ ಅತ್ಯಂತ ಮೆಚ್ಚಿನ ಹವ್ಯಾಸಗಳಲ್ಲೊಂದಾಗಿತ್ತು. ಆದರೆ ಈ ಹವ್ಯಾಸದಲ್ಲಿ ಮಗ್ನಳಾಗುತ್ತಿದ್ದೆನೆ ಹೊರತು ಅದರಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿರಲಿಲ್ಲ. ಯಾವ ಹುಳು ಅದು? ಏನನ್ನು ತಿನ್ನುತ್ತದೆ? ಅದರ ಗೂಡಿನ ರಚನೆ ಯಾವುದರ ಬಗ್ಗೆಯೂ ಖಚಿತ ಮಾಹಿತಿ ಅಥವಾ ಸರಿಸುಮಾರು ಅಂದಾಜು ಮಾಹಿತಿಯೂ ಕೂಡ ಸಿಗುತ್ತಿರಲಿಲ್ಲ. ಆದರೆ ಅವುಗಳನ್ನು ನೋಡುವ ಕುತೂಹಲ ಮಾತ್ರ ಕಡಿಮೆಯಾಗಿರಲಿಲ್ಲ.
ಈಗ ಗೂಡಿನ ರಚನೆಯ ಆಧಾರದ ಮೇಲೆ ಹುಳುವಿನ ಬಗ್ಗೆ ಮಾಹಿತಿ ಅರಸಿದಾಗ ತಿಳಿದು ಬಂದಿದ್ದು, ಇದು mud dauber wasp ಎಂಬ ಹೆಸರುಳ್ಳ ಕಣಜ ಎಂದು. ಗೂಡು ಕಟ್ಟುವ ವಿಶೇಷತೆಯಿಂದಲೇ ಇದಕ್ಕೆ mud dauber wasp ಅಂತ ಹೆಸರು ಬಂದಿದೆ. ಇದರ ವೈಜ್ಞಾನಿಕ ಹೆಸರು Sceliphron caementarium ಆಗಿದ್ದು, Sphecidae ಕುಟುಂಬಕ್ಕೆ ಸೇರಲ್ಪಡುತ್ತದೆ. ಇದು ತನ್ನ ಎರಡು ಮುಂಗೈ ಹಾಗು ಬಾಯಿಯ ಮ್ಯಾಂಡಿಬಲ್ಸ್ ನಿಂದ ಕೆಸರಿನ ಉಂಡೆ ಮಾಡುವುದನ್ನು ನೋಡುವುದೇ ಚಂದ. ಒಬ್ಬ ಉತ್ತಮ ಕಲಾವಿದೆಯ ತರಹ ಮೊದಲು ಕೆಸರನ್ನು ಆಯ್ದುಕೊಳ್ಳುತ್ತದೆ. ಎಷ್ಟು ತೆಳುವಾಗಿರಬೇಕು? ಕೆಸರಿನ ಹದ ಹೇಗಿರಬೇಕು? ಗೂಡು ಕಟ್ಟಲು ನಿಯೋಜಿಸಿದ ಜಾಗಕ್ಕೆ ಹತ್ತಿರದಲ್ಲಿದೆಯೇ? ಗೂಡಿನ ಪಕ್ಕ ಸಾಕಷ್ಟು ಆಹಾರ ಲಭ್ಯವಿದೆಯೇ? ಹೀಗೆ ಒಬ್ಬ ಪಕ್ಕಾ ಇಂಜಿನಿಯರ್ ತರಹ ಮೊದಲೇ ಯೋಜನೆಯನ್ನು ರೂಪಿಸಿಕೊಳ್ಳುತ್ತದೆ. ಅದರಂತೆಯೇ ಕಾರ್ಯನಿರ್ವಹಿಸುತ್ತದೆ.
ಈ ಕಣಜಗಳು ಏಕಾಂಗಿ (solitary) ಅಂದರೆ ಗುಂಪಿನಲ್ಲಿ ವಾಸಿಸುವುದಿಲ್ಲ. ಪೇಪರ್ ಕಣಜದ ಅಂಕಣದಲ್ಲಿ ಪ್ರಸ್ತಾಪಿಸಿದ ಹಾಗೆ ಪೇಪರ್ ಕಣಜಗಳು ಗುಂಪಿನಲ್ಲಿ ವಾಸಿಸುತ್ತಿದ್ದು, ಅವುಗಳಲ್ಲಿ ಜಾತಿ ಪದ್ದತಿಯಿರುತ್ತದೆ! ಆದರೆ ಇವುಗಳಲ್ಲಿ ರಾಣಿ, ಸೇವಕ ಎಂಬ ವರ್ಗಗಳಿಲ್ಲ. ತಾಯಿ ಕಣಜವೇ ಗೂಡುಕಟ್ಟಿ, ಒಂದು ಗೂಡಿನಲ್ಲಿ ಒಂದು ಮೊಟ್ಟೆಯನ್ನಿಡುತ್ತದೆ. ನಂತರ ಅದರಲ್ಲಿ ಕಂಬಳಿಹುಳು ಅಥವಾ ಜೇಡಗಳನ್ನು ತಂದಿಡುತ್ತದೆ. ತನ್ನ ಅಸ್ತ್ರದ ಮೂಲಕ ಜೇಡಗಳನ್ನು ಪ್ರಜ್ಞೆ ತಪ್ಪಿಸಿ (ಪ್ಯಾರಲೈಜ್) ಮಾಡಿ ಗೂಡಿನ ಒಳಗೆ ಇಡುತ್ತದೆ. ಗೂಡು ಜೇಡಗಳಿಂದ ಅಥವಾ ಕಂಬಳಿ ಹುಳುಗಳಿಂದ ತುಂಬಿದ ಮೇಲೆ ಗೂಡಿನ ಪ್ರವೇಶವನ್ನು ಮಣ್ಣಿನಿಂದ ಮುಚ್ಚಿ ಬಿಡುತ್ತದೆ. ಹೆಚ್ಚಾಗಿ ಕೊನೆಯಲ್ಲಿ (ಗೂಡಿನ ಕೊನೆ/ತಳ) ತಂದಿಟ್ಟ ಜೇಡದ (ಮೊದಲ ಜೇಡಗಳು) ಮೇಲೆ ಮೊಟ್ಟೆಯಿಡುತ್ತದೆ. ಅದರ ನಂತರ ಮತ್ತೆ ಜೇಡ ಅಥವಾ ಕಂಬಳಿ ಹುಳುಗಳನ್ನು ತಂದು ಇಡುತ್ತದೆ. ಬಹುತೇಕ ಗೂಡು ತುಂಬುವ ತನಕವೂ ಬೇಟೆಯನ್ನು ತಂದಿಡುತ್ತದೆ. ಕೆಲ ವಿದ್ಯಾರ್ಥಿಗಳು ಸಂಶೋಧನೆ ಮಾಡಿದಾಗ 25 ರವರೆಗೂ ಜೇಡಗಳು ಪತ್ತೆಯಾದ ಉದಾಹರಣೆಗಳಿವೆ. ಕೆಲ ತಾಯಿ ಕಣಜಗಳು ಒಂದೇ ಪ್ರಭೇದದ ಜೇಡಗಳನ್ನು ಹೆಕ್ಕಿ ತಂದರೆ, ಇನ್ನು ಕೆಲ ತಾಯಿ ಕಣಜಗಳು ಬೇರೆ ಬೇರೆ ಪ್ರಭೇದದ ಜೇಡಗಳನ್ನು ಹೆಕ್ಕಿ ತರುತ್ತವೆ. ಗೂಡು ಜೇಡಗಳಿಂದ ಭರ್ತಿಯಾದ ನಂತರ ಗೂಡಿನ ಬಾಗಿಲನ್ನು ಮಣ್ಣಿನಿಂದ ಮುಚ್ಚುತ್ತದೆ. ಮೊಟ್ಟೆಯಿಟ್ಟ ಒಂದೂವರೆ ಯಿಂದ ಮೂರು ದಿನಗಳವರೆಗೆ ಮೊಟ್ಟೆಯೊಡೆದು ಲಾರ್ವ ಹೊರಬರುತ್ತದೆ. ತನಗಾಗಿ ಅಮ್ಮ ತಂದಿಟ್ಟ ಜೇಡಗಳ ತಿಂಡಿಯನ್ನು ಒಂದರಿಂದ ಮೂರು ವಾರಗಳಲ್ಲಿ ತಿಂದು ಖಾಲಿಯಾದ ನಂತರ ಅದೇ ಗೂಡಿನಲ್ಲಿಯೇ ಕೋಶಾವಸ್ಥೆಗೆ ಜಾರುತ್ತದೆ. ಈ ಕೋಶವು ನೋಡಲು ಕೆಂಪು ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ ಹಾಗು ಸಹಜವಾಗಿಯೇ ಗಾತ್ರದಲ್ಲಿ ಸ್ವಲ್ಪ ಉದ್ದವಾಗಿರುತ್ತದೆ. ಕೋಶಾವಸ್ಥೆ ಪೂರ್ಣಗೊಂಡ ಮೇಲೆ ವಯಸ್ಕ ಕಣಜವು ಗೂಡಿನ ಬಾಗಿಲನ್ನು ತನ್ನ ಬಾಯಿಯ ಸಲೈವಾ ದಿಂದಲೇ ಒದ್ದೆ ಮಾಡಿ ಮಣ್ಣು ಬದಿಗೊತ್ತಿ ಹೊರಬರುತ್ತದೆ. ವಯಸ್ಕ ಕಣಜಗಳು 3-6 ವಾರಗಳವರೆಗೆ ಜೀವಿಸುತ್ತವೆ.
ಬರಿ ಮಣ್ಣಿನ ಗೂಡನ್ನು ನೋಡಿ ಕುಂಬಾರ ಹುಳ ಎಂದು ಮಗನಿಗೆ ತಪ್ಪು ಹೇಳಿ ಬಿಟ್ಟೆನಲ್ಲವೇ? ಎಂಥ ಕೆಲಸವಾಯಿತು! ಎಂದು ನನ್ನನ್ನು ನಾನೇ ಹಳಿದುಕೊಂಡೆ. ಅವನಿಗೆ ಮೊದಲು ಇದರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂದು ಮತ್ತೆ ಅವನನ್ನು ಹುಡುಕತೊಡಗಿದೆ!
ಮುಂದುವರಿಯುತ್ತದೆ .…
ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
ಬೆಂಗಳೂರು ನಗರ ಜಿಲ್ಲೆ.