ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

©  ದೀಕ್ಷಿತ್ ಕುಮಾರ್ ಪಿ.

ಹೊಸ ಮನೆಗೆ ಬಂದಾಗಿನಿಂದ ನೋಡುತ್ತಿದ್ದೇನೆ. ದಿನೇ ದಿನೇ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನನ್ನ ಮನೆಗೆ ನಾನೊಬ್ಬಳೇ ಯಜಮಾನ್ತಿ ಎಂದು ಹಟದಿಂದ ಅವುಗಳಿಗೆ ಮನದಟ್ಟು ಮಾಡಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ! ಮೊದಲಿಗೆ ಅವುಗಳು ಕಿಟಕಿಯಿಂದ ಮನೆಗೆ ನುಗ್ಗುತ್ತಿವೆ ಎಂದು ಕಿಟಕಿ ಬಾಗಿಲನ್ನು ಯಾವಾಗ ತೆರೆಯಬೇಕು, ಎಷ್ಟು ಹೊತ್ತು ತೆರೆದಿಡಬೇಕು, ಯಾವಾಗ ಮುಚ್ಚಬೇಕು ಎಂದು ಮಕ್ಕಳಿಗೆ ತಿಳಿಸಲು ಹೋಗಿ ಸೋತು ಹೋದೆ. ಮಕ್ಕಳು ‘ ಅವ್ವಾ ಇಲ್ಲಿ ನೋಡಿಲ್ಲಿ, ಅಲ್ಲಿ ನೋಡಲ್ಲಿ ಹೆಂಗ ಹಾರ್ಯಾಡಕತ್ತಾವ? ಕಿಡಕಿ ತಗದ ಮರತ್ ಬಿಟ್ಟೀಯೇನ್? ಅದ ನಾವ್ ಮಾಡಿದ್ರ ಸುಮ್ನ್ ಇರ್ತಿದ್ದಿ ಏನ್?’ ಎಂದು ನನ್ನನ್ನೇ ತರಾಟೆ ತೆಗೆದುಕೊಳ್ಳಲು ಶುರು ಮಾಡಿದ ನಂತರ, ಇವುಗಳು ತಾಯಿ ಮಕ್ಕಳಿಗೇ ಜಗಳ ಹಚ್ಚಿಬಿಡುವಷ್ಟು ಬೆಳೆದು ಬಿಟ್ಟವೇ? ಎಂಬ ಆತಂಕ ಮೂಡಿತು.

ಇರಲಿ, ಇವು ಕಿಟಕಿಯಿಂದ ಹೇಗೆ ಬಂದವೋ ಹಾಗೆಯೆ ಕಿಟಕಿಯಿಂದ ಓಡಿಸಿದರಾಯಿತು ಎಂದು ಯೋಚಿಸಿ, ಒಂದು ಚಿಕ್ಕ ಯೋಜನೆಯನ್ನು ಜಾರಿಗೆ ತಂದೆ. ಇವುಗಳಿಗೆ ಬಹು ಇಷ್ಟವಾದ ಒಂದು ಹಣ್ಣಿನ ತುಂಡನ್ನು ಅಡುಗೆಮನೆಯ ಕಿಟಕಿಯ ಹತ್ತಿರ ಇಟ್ಟು ಎಲ್ಲವೂ ಬಂದು ಅದರ ಮೇಲೆ ಮುಗಿ ಬೀಳಲಿ ಎಂದು ಕಾಯತೊಡಗಿದೆ. ಇವುಗಳು ಬಹುತೇಕ ನಮ್ಮ ಅಡುಗೆಮನೆಯ ಕೌಂಟರ್ ಟಾಪ್ ಅಂದರೆ ಗ್ಯಾಸ್ ಒಲೆಯ ಕಟ್ಟೆ ಮೇಲೆ ಇಟ್ಟಿರುವ ಎಲ್ಲಾ ವಸ್ತುಗಳ ಮೇಲೆ ಕುಳಿತಿರುತ್ತಿದ್ದವು. ಸ್ವಲ್ಪ ಹೊತ್ತಾದ ಮೇಲೆ ಮೆಲ್ಲನೆ ನಡೆದು ಕಿಟಕಿಯ ತಂತಿ ಪರದೆಯನ್ನು ತೆರೆದಿಟ್ಟೆ. ವೇಗವಾಗಿ ನಡೆದರೆ ಇವುಗಳು ಗಾಳಿಯ ಅಸಂಬದ್ಧ ಚಲನೆಯಿಂದಾಗಿ ಕೂತಿದ್ದ ಸ್ಥಳದಿಂದ ಎದ್ದು  ಎತ್ತೆತ್ತಲೋ ಹಾರಾಡಲು ಶುರು ಮಾಡುತ್ತವೆ. ಹೀಗಾಗಿ ನಿಧಾನಕ್ಕೆ ಹಿಂದಿರುಗಿ ಮತ್ತೆ ಸ್ವಲ್ಪ ಹೊತ್ತು ಕಾಯ್ದು ನಂತರ ಒಮ್ಮೆಲೇ ಒಂದು ತಟ್ಟೆಯಿಂದ ಜೋರಾಗಿ ಕಿಟಕಿಯತ್ತ ಗಾಳಿ ಬೀಸುತ್ತ ಅದರತ್ತ ಓಡುವುದು. ಅವುಗಳು ಕಕ್ಕಾಬಿಕ್ಕಿಯಾಗಿ ಗಾಳಿಯ ರಭಸದಿಂದ ಕಿಟಕಿಯತ್ತಲೇ ಹಾರಿ ಮನಸಿಲ್ಲದಿದ್ದರೂ ಹೊರ ಹೋಗಿ ಬಿಡುವುವು. ಮೊದಲಿಗೆ ಈ ಯೋಜನೆಯ ಬಗ್ಗೆ ನನ್ನ ಮೇಲೆ ನನಗೆ ಹೆಮ್ಮೆ ಎನಿಸಿದರೂ ಕ್ರಮೇಣ ಯೋಚಿಸಿದಾಗ ಅರಿವಾಗಿದ್ದೇನೆಂದರೆ ಯಾರಾದರೂ ಪಕ್ಕದ ಮನೆಯವರು ನಾನು ಹೀಗೆ ಅಡುಗೆಮನೆಯಲ್ಲಿ ಓಡಾಡುವುದನ್ನು ಕಂಡರೆ ಹೆದರಬಹುದಲ್ಲವೇ? ಅದೂ ಅಲ್ಲದೆ ಕಿಟಕಿಯು ಹಿತ್ತಲಿಗೆ ಮುಖ ಮಾಡಿದ್ದು, ನಮ್ಮ ಅಪಾರ್ಟ್ ಮೆಂಟಿನ ಮೂರೂ ಮಹಡಿಯ ಮನೆಯವರು ಹೀಗೆ ಓಡಾಡುವುದನ್ನು ನೋಡಿದರೆ ಏನೆಂದುಕೊಂಡಾರು ಎಂದು ಯೋಚಿಸಿಯೇ ಭಯವಾಯಿತು. ಕೇವಲ ಮೂರರಿಂದ ನಾಲ್ಕು ಮಿಲಿಮೀಟರ್ ಗಾತ್ರ ಹೊಂದಿರುವ ಈ ನೊರ್ಜುಗಳು ನನ್ನನ್ನು ಈ ರೀತಿ ತಲ್ಲಣಗೊಳಿಸಿವೆ ಎಂದು ತಿಳಿದು ಒಂಥರಾ ಅಪಮಾನವಾದಂತಾಯಿತು. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಇಲ್ಲಿ ಉಪಯೋಗಿಸಬಹುದೇ  ಎಂಬ ಸಂಶಯ ಬಂದಿತು!

©  ಹಯಾತ್ ಮೊಹಮ್ಮದ್

ಇಂಗ್ಲೀಷಿನಲ್ಲಿ  Fruit Fly ಎಂದೇ ಕರೆಸಿಕೊಳ್ಳುವ ಇವುಗಳಿಗೆ ಸಾಮಾನ್ಯವಾಗಿ ನೊರ್ಜು ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Drosophila Melanogaster. ಬರಿಗಣ್ಣಿಗೆ ಇವುಗಳ ಕೆಂಪಾದ ಮೂತಿಯೊಂದೇ ಕಾಣುತ್ತದೆ. ಆದರೆ ಅದು ಅವುಗಳ ದೊಡ್ಡ ಕಣ್ಣುಗಳು! ಉಳಿದಂತೆ ಇತರ ಕೀಟಗಳ ಹಾಗೆ Head, Thorax Abdomen ಎಂಬ ಮೂರು ದೇಹದ ಭಾಗಗಳಿದ್ದರೂ ಅತೀ ಚಿಕ್ಕದಾಗಿರುವುದರಿಂದ ಕೆಂಪು ಕಣ್ಣು ಮತ್ತು ಕಡು ಕಂದು ಬಣ್ಣದ ದೇಹ ಹಾಗು ತುಂಬಾ ಗಮನವಿಟ್ಟು ನೋಡಿದಾಗ ರೆಕ್ಕೆಗಳು ಮತ್ತು ಕಾಲುಗಳು ಕಾಣಿಸುತ್ತವೆ. ಇವುಗಳಿಗೆ ಹಣ್ಣು ಎಂದರೆ ಬಲು ಇಷ್ಟ. ಅದರಲ್ಲೂ ಬಾಳೆಹಣ್ಣು ಇದ್ದರಂತೂ ಸ್ವರ್ಗವೇ ಸರಿ. ಹೀಗಾಗಿಯೇ ಇವು ಎಲ್ಲಾ ಜ್ಯೂಸ್ ಅಂಗಡಿಗಳಲ್ಲಿ ಶಾಶ್ವತವಾಗಿ ನೆಲೆಸಿರುತ್ತವೆ. ಗಾತ್ರದಲ್ಲಿ ಕೂಡ ತುಂಬಾ ಚಿಕ್ಕದಾಗಿರುವುದರಿಂದ ಇವುಗಳನ್ನು ನಿರುಪದ್ರವಿಯೆಂದೇ ಎಲ್ಲರು ತಿಳಿದುಕೊಳ್ಳುತ್ತಾರೆ. ಮತ್ತು ಅಷ್ಟೇ ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಇವು ಎಲ್ಲೆಂದರಲ್ಲಿ ಕಣ್ಣಿನ ಮುಂದೆಯೇ ಹಾರುವಾಗ ತುಂಬಾ ಗಲೀಜೆನ್ನಿಸುತ್ತದೆ. ಬಹುಶಃ ಇವುಗಳು ಅಳಿದುಳಿದ ಆಹಾರವನ್ನು ತಿನ್ನಲು ಬರುತ್ತವೆ ಎಂದು ಸಾಕಷ್ಟು ಸ್ವಚ್ಛಗೊಳಿಸಿದರೂ ಮತ್ತೆ ಸ್ವಚ್ಛಗೊಳಿಸಿದ ಜಾಗದಲ್ಲಿ ಕೂಡ ಇನ್ನಷ್ಟು ನಿರ್ಭಿಡೆಯಾಗಿ ವಾಸಿಸತೊಡಗಿದಾಗ ದಿಕ್ಕೇ ತೋಚದಂತಾಗಿದ್ದು ನಿಜವಾದರೂ ಇವು ಕೊಳೆತ ಹಣ್ಣು ಹಾಗು ತರಕಾರಿಗಳನ್ನು ತಿನ್ನುವುದರಿಂದ ಇವುಗಳಿಗೆ ಆಹಾರ ಸರಪಣಿಯಲ್ಲಿ ತನ್ನದೇ ಆದ ವಿಶೇಷ ಸ್ಥಾನವಿದೆ ಎಂದು ಮನದಟ್ಟಾಗಿತ್ತು. ಅದಕ್ಕೆಂದೇ ಇವುಗಳ ಜೀವನ ಕ್ರಮವನ್ನು ಅಭ್ಯಾಸ ಮಾಡಲು ಅಷ್ಟು ಆಸಕ್ತಿ ಮೂಡಿದ್ದು! ಚಿಟ್ಟೆಗಳಂತೆಯೇ ಇವುಗಳ ಜೀವನ ಚಕ್ರದಲ್ಲಿ ಮೊಟ್ಟೆ, ಲಾರ್ವಾ, ಕೋಶಾವಸ್ಥೆ ಮತ್ತು ಪ್ರೌಢತೆ ಎಂಬ ಹಂತಗಳಿವೆ. ಎಲ್ಲಾ ಜೀವಿಗಳಲ್ಲಿರುವಂತೆ ಇವುಗಳಲ್ಲಿ ಕೂಡ ಸಂಗಾತಿಯನ್ನು ಆಕರ್ಷಿಸಲು ವಿಭಿನ್ನ ಉಪಾಯಗಳಿವೆ. ಗಂಡು ನೊಣ ತನ್ನ ಒಂದು  ರೆಕ್ಕೆಯನ್ನು ಮಾತ್ರ 90 ಡಿಗ್ರಿ ಕೋನದಲ್ಲಿ ತೆರೆದು ಮುಚ್ಚಿಡುವುದನ್ನು, ಅಥವಾ ಎರಡೂ ರೆಕ್ಕೆಗಳನ್ನು ತೆರೆದು ಬಡಿಯುತ್ತ ಸುಮ್ಮನೆ ಹಣ್ಣಿನ ಸುತ್ತ ಸುತ್ತುತ್ತಿರುತ್ತದೆ. ಕೆಲ ಬಾರಿ ಸಂಗಾತಿಯ ಓಲೈಕೆಗಾಗಿ ಗಂಡುಗಳಲ್ಲಿ ಜಗಳ ಕೂಡ ನಡೆಯುತ್ತದೆ. ಮಿಲನದ ನಂತರ ಹೆಣ್ಣು ನೊಣ ಮೊಟ್ಟೆಯನ್ನಿಡುತ್ತದೆ, ಹೆಚ್ಚಾಗಿ ಆಹಾರದ ಸುತ್ತಮುತ್ತ ಹಣ್ಣುಗಳ ಮೇಲ್ಭಾಗದಲ್ಲಿ ಅಥವಾ ಹಣ್ಣುಗಳ ಒಳಗೆ ಕೂಡ ಮೊಟ್ಟೆಯನ್ನಿಡಬಹುದು. 

ಕೇವಲ 24 ಗಂಟೆಗಳಲ್ಲಿ ಮೊಟ್ಟೆಯಿಂದ ಲಾರ್ವಾ ಹೊರಬಂದು ತನ್ನ ಆಹಾರ ಕಬಳಿಸುವ ಕೆಲಸವನ್ನು ಶುರು ಮಾಡುತ್ತದೆ. ಒಟ್ಟು 3 instar stage ಗಳಿದ್ದು, ನಂತರ ಕೋಶಾವಸ್ಥೆಗೆ ಹೋಗುತ್ತದೆ. ಕೋಶದಿಂದ ಹೊರಬಂದ ನೊಣಕ್ಕೆ ರೆಕ್ಕೆ ಮೂಡಲು ಕೆಲ ಘಂಟೆಗಳು ಬೇಕಾಗುತ್ತವೆ. ಮೊಟ್ಟೆಯಿಂದ ಪ್ರೌಢಾವಸ್ಥೆಗೆ ತಲುಪಲು 5 ದಿನಗಳು ಸಾಕು. ವಿಶೇಷವೆಂದರೆ ಇವುಗಳ ಗರಿಷ್ಠ ಜೀವಿತಾವಧಿ ಕೇವಲ 30 ದಿನ ಮಾತ್ರ! ಇಷ್ಟೆಲ್ಲಾ ತಿಳಿದ ಮೇಲೆ ಮೊದಲು ಮಾಡಿದ ಕೆಲಸವೇ ಹಣ್ಣಿನ ಬುಟ್ಟಿಯಲ್ಲಿದ್ದ ಕೊಳೆತ ಬಾಳೆಹಣ್ಣನ್ನು ಆಕಳಿಗೆ ಕೊಟ್ಟು ಬಿಟ್ಟೆ! ಮತ್ತು ಅಡುಗೆಮನೆಯ ಸ್ವಚ್ಛತೆಯನ್ನು ಮತ್ತೊಂದು ಹಂತಕ್ಕೆ ಏರಿಸಿದೆ. ಈಗ ಸ್ವಲ್ಪ ನಿರಾಳತೆಯಿಂದ ಉಸಿರು ಬಿಡುವಂತಾಗಿದೆ.  ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ, ಮನೆ ಮಾಳಿಗೆಯ ಒಂದು ತೊಲೆಗೆ ಅಥವಾ ಒಂದು ಕಬ್ಬಿಣದ ಸಲಾಕೆಗೆ, ಒಟ್ಟಾರೆ, ಎತ್ತರದಲ್ಲಿ ಕಳ್ಳಿ ಗಿಡದ ಟೊಂಗೆಯೊಂದನ್ನು ಕಟ್ಟುತ್ತಿದ್ದರು. ನೊರ್ಜುಗಳೆಲ್ಲ ಈ ಕಳ್ಳಿಗೆ ಆಕರ್ಷಿತವಾಗಿ ಅದರ ಮೇಲೆ ಕೂತು ಬಿಡುತ್ತಿದ್ದವು. ಒಂದೊಂದು ಸಲ ಹಸಿರಾದ ಕಳ್ಳಿಯ ಟೊಂಗೆ ಪೂರ್ತಿ ಕಪ್ಪಾಗಿ ಕಾಣುತ್ತಿತ್ತು! ಅಷ್ಟರ ಮಟ್ಟಿಗೆ  ನೊರ್ಜುಗಳು ಕಳ್ಳಿಯನ್ನು ಆಶ್ರಯಿಸುತ್ತಿದ್ದವು. ಅದಕ್ಕೆ ಕಾರಣವೇನೆಂದು ನನಗೆ ಇಲ್ಲಿಯ ತನಕ ಯಾರಿಂದಲೂ ಉತ್ತರ ಸಿಕ್ಕಿಲ್ಲ.

ಇಷ್ಟೇ ಆಗಿದ್ದರೆ ಈ ನೊರ್ಜುಗಳು ಅಷ್ಟು ನೆನಪಿನಲ್ಲುಳಿಯುತ್ತಿರಲಿಲ್ಲ ಆದರೆ ಇವುಗಳನ್ನು model organism ನಂತೆ  ಬಳಸಿ ಮಾಡಲಾದ ವೈದ್ಯಕೀಯ ಸಂಶೋಧನೆಗಳಲ್ಲಿ 6 ಮಹತ್ವದ ಸಂಶೋಧನೆಗಳಿಗೆ ನೊಬೆಲ್ ಪ್ರಶಸ್ತಿ ಬಂದಿದೆ ಎಂದು ಓದಿದಾಗ ಇವುಗಳ ಬಗ್ಗೆ ಗೌರವ ಮೂಡಿತು. ಜೀವಿತಾವಧಿ ಮತ್ತು ಗಾತ್ರ ತುಂಬಾ ಕಡಿಮೆ ಇರುವುದರಿಂದ ಇವುಗಳನ್ನು ಪ್ರಯೋಗಶಾಲೆಯಲ್ಲಿ ಕಡಿಮೆ ಖರ್ಚಿನಲ್ಲೇ ಬೆಳಸಬಹುದು. ಜೆನೆಟಿಕ್ಸ್ ಕುರಿತ ಸಂಶೋಧನೆಗಳನ್ನು ಈ ನೊಣಗಳ ಮೇಲೆ ಪ್ರಯೋಗಿಸುವುದರಿಂದ ಮುಂದಿನ ಪೀಳಿಗೆಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಬಹುದು. ಈ ಎಲ್ಲ ಕಾರಣಗಳಿಂದಾಗಿ ಇವುಗಳ ಮೇಲೆ ಗೌರವ ಬೆಳೆದುಬಿಟ್ಟಿದ್ದರಿಂದ ಇವುಗಳನ್ನು ಓಡಿಸಲು ಸೊಳ್ಳೆ ಹಿಡಿಯುವ ಬ್ಯಾಟ್ ಅನ್ನು ನನ್ನ ಮಗ ತಂದುಕೊಟ್ಟರೂ ಅವುಗಳನ್ನು ಹಿಡಿಯಲು ಮನಸ್ಸಾಗಲಿಲ್ಲ. ಹಿಡಿಯಲು ಪ್ರಯತ್ನ ಪಟ್ಟಿದ್ದರೂ ಅವುಗಳು ಆ ಬ್ಯಾಟಿನ ತಂತಿ ಪರದೆಯಲ್ಲಿ ಸಿಗುವ ಸಾಧ್ಯತೆಗಳು ಇರಲಿಲ್ಲ. ಹಾಗಂತ; ಒಂದು ವೇಳೆ ನೊರಜುಗಳ ಈ ವಿಶೇಷತೆಯನ್ನು ಮಗನಿಗೆ ತಿಳಿಸಿದರೆ ಅವುಗಳನ್ನು ನಾವೂ ಸಾಕೋಣವೆ? ಎಂದು ಕೇಳಿದರೆ ಏನು ಮಾಡುವುದು ಎಂದು ಹೆದರಿ ಸೊಳ್ಳೆ ಬ್ಯಾಟನ್ನು ಸುಮ್ಮನೆ ಗಾಳಿಯಲ್ಲಿ ತಿರುಗಿಸುತ್ತಾ ನಿಂತಿದ್ದೆ.

© pexels.com

ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
             ಬೆಂಗಳೂರು ಜಿಲ್ಲೆ
.

Spread the love
error: Content is protected.