ಪ್ರಕೃತಿ ಬಿಂಬ
ಕಾಡು ಕುರಿ ©ಸನತ್ ಶಾನುಭೋಗ
ಮುಂಟ್ಜಾಕ್ ಎಂದು ಕರೆಯಲ್ಪಡುವ ಈ ಕಾಡು ಕುರಿಗಳು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಗುಡ್ಡಗಾಡು, ತೇವಾಂಶವಿರುವ ಎಲೆ ಉದುರುವ ಹಾಗೂ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಂಡುಬರುವ ಸ್ಥಳೀಯ ಜಿಂಕೆಗಳಾಗಿವೆ. ಕಾಡು ಕುರಿಗಳನ್ನು ಅದರ ಪುಟ್ಟ ಗಾತ್ರ, ತಲೆಯ ಮೇಲಿನ ಕೊಂಬು ಮತ್ತು ಪುಟ್ಟ ಕೋರೆ ಹಲ್ಲುಗಳಿಂದ ಗುರುತಿಸಬಹುದು. ಕಾಡು ಕುರಿಗಳು ಸಾಧಾರಣವಾಗಿ ಸಂಜೆ ಮತ್ತು ರಾತ್ರಿಗಳಲ್ಲಿ ಹೆಚ್ಚಾಗಿ ಸಂಚಾರ ಮಾಡುವುದರಿಂದ ಹಗಲಿನಲ್ಲಿ ಇವನ್ನು ಕಾಣುವುದು ಕೊಂಚ ಕಠಿಣ. ಬೇಟೆಗಾರ ಪ್ರಾಣಿಗಳನ್ನು ಕಂಡ ಕೂಡಲೆ ಜೋರಾಗಿ ಬೊಗಳಿಕೆಯಂತಹ ಧ್ವನಿಯಲ್ಲಿ ಕೂಗಿ, ಇತರೆ ಪ್ರಾಣಿಗಳಿಗೆ ಎಚ್ಚರಿಕೆಯನ್ನು ನೀಡುತ್ತವೆ. ಹುಲ್ಲು, ಎಲೆ, ಸೊಪ್ಪು ಮತ್ತು ಮರದಿಂದ ಉದುರಿದ ಹಣ್ಣು ಹಾಗೂ ಬೀಜಗಳು ಈ ಪ್ರಾಣಿಯ ಮುಖ್ಯ ಆಹಾರವಾಗಿದೆ..
ಸರ್ವಿಡೇ ಕುಟುಂಬಕ್ಕೆ ಸೇರುವ ಈ ಚುಕ್ಕೆ ಜಿಂಕೆಗಳು ಯಥೇಚ್ಛವಾಗಿ ಭಾರತದ ಹುಲ್ಲುಗಾವಲು ಹಾಗೂ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಸ್ಥಳೀಯ ಜಿಂಕೆಗಳಾಗಿವೆ. ಮೈ ಬಣ್ಣವು ಬಿಳಿಯ ಚುಕ್ಕೆಗಳನ್ನೊಳಗೊಂಡ ಕಂದು ಬಣ್ಣದ್ದಾಗಿದ್ದು, ಗಂಡು ಹೆಣ್ಣಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ ಹಾಗೂ ಕೊಂಬುಗಳನ್ನು ಹೊಂದಿದ್ದು, ವರುಷಕ್ಕೊಮ್ಮೆ ಕೊಂಬನ್ನು ಉದುರಿಕೊಳ್ಳುತ್ತವೆ. ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುವ ಇವುಗಳು, ನಿಧಾನಗತಿಯಲ್ಲಿ ಹುಲ್ಲು ಮೇಯುವುದನ್ನು ಕಾಣಬಹುದಾಗಿದೆ. ಸ್ವಭಾವತಃ ಸಂಕೋಚದ ಪ್ರಾಣಿಯಾದ ಕಾರಣ ಮಾನವರನ್ನು ಕಂಡ ತಕ್ಷಣ ಇವು ಓಡಿ ಮರೆಯಾಗುವವು. ಹುಲ್ಲು, ಎಲೆ, ಸೊಪ್ಪು ಮತ್ತು ಮರದಿಂದ ಉದುರಿದ ಹಣ್ಣು ಹಾಗೂ ಬೀಜಗಳು ಈ ಪ್ರಾಣಿಯ ಮುಖ್ಯ ಆಹಾರವಾಗಿದೆ.
ಭಾರತ ಉಪಖಂಡ ಹಾಗೂ ಆಗ್ನೇಯ ಏಷ್ಯಾದ ಎಲೆ ಉದುರುವ, ಶುಷ್ಕ ಮತ್ತು ಒಣ ಕಾಡುಗಳಲ್ಲಿ, ಶೋಲಾ ಹುಲ್ಲುಗಾವಲು, ಪೈನ್, ಓಕ್ ಮತ್ತು ನಿತ್ಯಹರಿದ್ವರ್ಣದ ಕಾಡುಗಳಲ್ಲಿ ವ್ಯಾಪಕವಾಗಿ ಕಂಡುಬರುವ ಈ ಸಾರಂಗಗಳು, ಸರ್ವಿಡೇ ಕುಟುಂಬಕ್ಕೆ ಸೇರಿವೆ. ಸಾಮಾನ್ಯವಾಗಿ ತೇವಾಂಶವಿರುವ ಹಾಗೂ ಏರಿಳಿತಗಳಿರುವ ಭೂಪ್ರದೇಶದಲ್ಲಿ ವಾಸಿಸುತ್ತವೆ. ಈ ಜಿಂಕೆಗಳ ಒರಟಾದ ಚರ್ಮವು ಕಡುಗಂದು ಬಣ್ಣದ್ದಾಗಿದ್ದು, ಗಂಡು ಸಾರಂಗಗಳಲ್ಲಿ ಅಗಲವಾಗಿ ಹರಡಿಕೂಂಡ ಮತ್ತು ತುದಿಗಳಲ್ಲಿ ಕವಲೊಡೆದಿರುವಂತಹ ಕೊಂಬುಗಳನ್ನು ಕಾಣಬಹುದಾಗಿದೆ. ಇದು ಭಾರತದ ಅತಿ ದೊಡ್ಡ ಜಿಂಕೆಯಾಗಿದೆ.
ಭಾರತ ಮತ್ತು ನೇಪಾಳದ ನೀರಿನ ಮೂಲಗಳಿರುವ ಹುಲ್ಲುಗಾವಲು, ಬಯಲು ಪ್ರದೇಶ ಮತ್ತು ಲಘುವಾದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಈ ಕೃಷ್ಣಮೃಗಗಳು ಬೋವಿಡೇ ಕುಟುಂಬಕ್ಕೆ ಸೇರಿವೆ. ಕಾಲುಗಳ ಮೇಲಿನ ಭಾಗ ಮತ್ತು ಹೊರಭಾಗವು ಗಾಢ ಕಂದು ಬಣ್ಣ ಹಾಗೂ ಕಪ್ಪು ಬಣ್ಣದ್ದಾಗಿದ್ದರೆ, ಕೆಳಭಾಗ ಮತ್ತು ಒಳಭಾಗವು ಬಿಳಿಯಾಗಿರುತ್ತದೆ. ಗಂಡು ಕೃಷ್ಣಮೃಗಗಳ ಮೈ ಬಣ್ಣವು ಕಡುಗಂದು ಅಥವಾ ಕಪ್ಪಾಗಿದ್ದು, ಉದ್ದದ ಸುರುಳಿಯಾಕಾರದ ಕೊಂಬುಗಳನ್ನು ಹೊಂದಿರುತ್ತವೆ. ಹೆಣ್ಣು ಕೃಷ್ಣಮೃಗವು ಹಳದಿ ಅಥವಾ ಕಂದು ಬಣ್ಣದ್ದಾಗಿರುತ್ತದೆ. ಕಣ್ಣ ಸುತ್ತ ಬಿಳಿಯ ಸುರುಳಿಯಾಕಾರದ ಬಣ್ಣವನ್ನೂ ಸಹ ಹೊಂದಿರುತ್ತವೆ. ಇವು ಗುಂಪುಗಳಲ್ಲಿ ಹುಲ್ಲು ಮೇಯುವುದನ್ನು ಕಾಣಬಹುದಾಗಿದೆ.
ಚಿತ್ರಗಳು: ಸನತ್ ಶಾನುಭೋಗ
ಲೇಖನ: ದೀಪ್ತಿ ಎನ್.