ನೀಲಿ ಬಾಲದ ಕಳ್ಳಿಪೀರ ಪಕ್ಷಿಗಳ ಪ್ರಣಯ ನಿವೇದನೆ…
©ಗುರು ಪ್ರಸಾದ್ ಕೆ. ಆರ್
ಶುಭ್ರ ನೀಲಿ ಆಗಸ… ಬಿರು ಬೇಸಿಗೆಯ ಕಾಲ… ಪಕ್ಕದಲ್ಲೇ ಹರಿಯುತ್ತಿರುವ ಕಾವೇರಿ ನದಿ… ಬೆಳಗಿನ ಆಹ್ಲಾದ ವಾತಾವರಣ… ಸೂರ್ಯನ ಪ್ರಖರತೆ ಆಗಲೇ ಕಾವು ಹೆಚ್ಚಿಸತೊಡಗಿತ್ತು. ನಾವು ಶ್ರೀರಂಗಪಟ್ಟಣದ ಸುತ್ತ ಮುತ್ತ ಹಿಂಡು ಹಿಂಡು ನೀಲಿ ಬಾಲದ ಕಳ್ಳಿಪೀರ ವಲಸೆ ಹಕ್ಕಿಗಳು ತಮ್ಮ ಹಾರಾಟ, ಕಲರವದಿಂದ ದಿನಚರಿ ಪ್ರಾರಂಭಿಸಿದ್ದವು..
ನಾನು ಇವುಗಳ ಚಲನ ವಲನ ಗಮನಿಸುತ್ತಾ ಫೋಟೋ ತೆಗೆಯುತ್ತಿದ್ದೆ. ಆಗ ಎರಡು ಗಂಡು ಕಳ್ಳಿಪೀರ ಹಕ್ಕಿಗಳು ತಮ್ಮ ಬಾಯಿಯಲ್ಲಿ ಬೇಟೆಯನ್ನು ಹಿಡಿದುಕೊಂಡು ಹೆಣ್ಣು ಹಕ್ಕಿಯನ್ನು ಓಲೈಸಿಕೊಳ್ಳಲು ಸರ್ಕಸ್ ಮಾಡ್ತಾ ಇದ್ದವು. ನೋಡೋಣ ಇವುಗಳ ಪ್ರಣಯ, ಪ್ರೇಮ ಪ್ರಸಂಗ ಅಂತ ನಾನೂ ಕಾದು ಕುಳಿತೆ. ದೂರದಲ್ಲಿ ಜೋಡಿ ಕಪ್ಪು ಬಿಳಿ ಮಿಂಚುಳ್ಳಿಗಳು ತಮ್ಮ ಪಾಡಿಗೆ ತಾವು ಬೆಳಗಿನ ಆಹಾರಕ್ಕೆ ಆಕಾಶದಿಂದ ಚಂಗ್ ಎಂದು ತಣ್ಣಗೆ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಮುಳುಗಿ ಮೀನು ಹಿಡಿದು ತಿನ್ನಲು ಪ್ರಾರಂಭಿಸಿದ್ದವು. ಸಮೀಪದಲ್ಲೇ ನವಿಲಿನ ಜೋರಾದ ಕೂಗುವ ಶಬ್ದ, ಮುನಿಯ ಹಾಗು ರಾಟವಾಳ ಹಕ್ಕಿಗಳ ಚಿಲಿಪಿಲಿ ಸದ್ದು, ಗೀಜಗ ಹಕ್ಕಿಗೂಡು ಕಟ್ಟುವ ಸೊಬಗು… ಇವುಗಳನ್ನೆಲ್ಲಾ ನೋಡುತ್ತಿದ್ದೆನಾದರೂ ಈ ಗಂಡು ನೀಲಿ ಬಾಲದ ಕಳ್ಳಿಪೀರ ಹೆಣ್ಣನ್ನು ವರಿಸುವ ಪರಿ ಏಕೋ ಹೆಚ್ಚು ಗಮನ ಸೆಳೆಯಿತು.
ಎರಡು ಗಂಡು ಹಕ್ಕಿಗಳು ತಲಾ ಒಂದೊಂದು ಸಣ್ಣ ಕೊಂಬೆ ಮೇಲೆ ಕುಳಿತು ಹೆಣ್ಣು ಹಕ್ಕಿಯ ಹತ್ತಿರ ಹೋಗಲು ಹಾತೊರೆಯುತ್ತಿದ್ದವು. ಈ ಗಂಡು ಹಕ್ಕಿಗಳ ಪ್ರಸ್ತಾವನೆಯನ್ನು ಒಪ್ಪದ ಹೆಣ್ಣು ಹಕ್ಕಿ ದೂರ ಓಡಿ ಹೋಗುತ್ತಿತ್ತು. ಕೆಲ ಸಮಯದ ಬಳಿಕ ಅದೇ ಕೊಂಬೆಯ ಹತ್ತಿರ ಬರುತ್ತಾ ಇತ್ತು. ಇದೇ ರೀತಿ ಕೆಲವು ವಿಫಲ ಪ್ರಯತ್ನದ ಬಳಿಕ ಒಂದು ಗಂಡು ಹಕ್ಕಿ ತನ್ನ ನಿವೇದನೆ ತೋಡಿಕೊಂಡಿತು. ಅದರ ಬಾಯಿಯಲ್ಲಿ ಇದ್ದ ಹುಳುವನ್ನು ತಿಂದು ಹೆಣ್ಣು ಹಕ್ಕಿ ಅದರ ಸಾಂಗತ್ಯ ಬೆಳೆಸಿತು. ಇನ್ನೊಂದು ಗಂಡು ಹಕ್ಕಿ ಹತ್ತಿರ ಬಂದು, ಮುನಿಸಿಕೊಂಡು, ಇವುಗಳ ಪ್ರಣಯ ಲೀಲೆ ನೋಡಿ ಹಾರಿ ಹೊಯ್ತು.
ನೀಲಿ ಬಾಲದ ಕಳ್ಳಿಪೀರ ಅಥವಾ ನೀಲಿ ಬಾಲದ ಪತ್ರಂಗ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಹಕ್ಕಿಯು Meropidae ಎನ್ನುವ ಫ್ಯಾಮಿಲಿಗೆ ಸೇರಿದೆ. ಈ ಹಕ್ಕಿಗಳ ವಾಸಸ್ಥಾನ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಮೈನ್ಮಾರ್, ಚೈನಾ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ದೇಶಗಳು. ಈ ಹಕ್ಕಿಯು ನೋಡಲಿಕ್ಕೆ ಬೇರೆ ಕಳ್ಳಿಪೀರ ಹಕ್ಕಿಗಳ ತರಹ ಕಂಡರು, ತನ್ನ ಗಾಢವಾದ ಎದ್ದು ಕಾಣುವ ಹಸಿರು ಮತ್ತು ಕಂದು ಮಿಶ್ರಿತ ಬಣ್ಣದಿಂದ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತವೆ. ಇದರ ಬಾಲ ಉದ್ದವಾಗಿ ನೀಲಿ ಬಣ್ಣಕ್ಕೆ ಇರುವುದರಿಂದ ಇದಕ್ಕೆ “ಬ್ಲೂಟೈಲ್ಡ್ ಬೀ ಈಟರ್” ಅಂತ ಹೆಸರು. ಇದರ ಕೊಕ್ಕು ಕಪ್ಪುಬಣ್ಣವಿದ್ದು, ಕತ್ತಿನ ಕೆಳಭಾಗದಲ್ಲಿ ಹಳದಿ ಮತ್ತು ಕಂದು ಮಿಶ್ರಿತ ಬಣ್ಣದಿಂದ ಕೂಡಿರುತ್ತದೆ. ವಯಸ್ಕ ಹಕ್ಕಿಗಳು ಸಾಮಾನ್ಯವಾಗಿ 23 ರಿಂದ 26 ಸೆಂಟಿಮೀಟರ್ ಉದ್ದ ಬೆಳೆಯುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿ ಸಾಮಾನ್ಯವಾಗಿ ಒಂದೇ ರೀತಿಯಾಗಿ ಕಾಣಿಸುತ್ತವೆ. ಹಾಗೆ ತೂಕ 30 ರಿಂದ 40 ಗ್ರಾಂ ಅಷ್ಟೇ. ಈ ನೀಲಿ ಬಾಲದ ಕಳ್ಳಿಪೀರ ಹಕ್ಕಿಗಳು ನಮಗೆ ಹೆಚ್ಚಾಗಿ ಕಾಣಸಿಗುವ ಜಾಗವೆಂದರೆ ನದಿ ನೀರಿನ ಹತ್ತಿರ ಮತ್ತು ಅದರ ದಡದಲ್ಲಿ. ಈ ಪ್ರಭೇದಕ್ಕೆ ಸೇರಿರುವ ಎಲ್ಲಾ ಕಳ್ಳಿಪೀರ ಹಕ್ಕಿಗಳು ಹಾರಾಡುತ್ತಲೇ ತಮ್ಮ ಆಹಾರವನ್ನು ಬೇಟೆಯಾಡಿ ತಿನ್ನುತ್ತವೆ.
ಇದರ ಆಹಾರ ಪದ್ಧತಿ ಚಿಟ್ಟೆ, ಜೇನ್ನೊಣ, ದುಂಬಿ, ಜೇಡ, ಡ್ರಾಗನ್ ಫ್ಲೈ ಮತ್ತು ಜೀರುಂಡೆ ಮುಂತಾದವು. ಹಾರುತ್ತ ಹಾರುತ್ತ ಇವುಗಳು ಬೇಟೆಯಾಡುವ ರೀತಿಯನ್ನು ನೋಡಬೇಕು ಅದು ಒಂಥರಾ ಕಣ್ಣಿಗೆ ಹಬ್ಬ. ಎಷ್ಟು ಬೇಗನೆ ಆಕಾಶಕ್ಕೆ ನೆಗೆದು, ಅಷ್ಟೇ ಚಾಕಚಕ್ಯತೆಯಿಂದ ತನ್ನ ಆಹಾರವನ್ನು ಬಾಯಿಯಲ್ಲಿ ಹಿಡಿದು, ಮೊದಲು ಕೂತಿದ್ದ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತವೆ. ಆಮೇಲೆ ತಾನು ಹಿಡಿದ ಆಹಾರವನ್ನು ಮೇಲೆಸೆದು, ಅದನ್ನು ಸಾಯಿಸಿ ತಿನ್ನುತ್ತವೆ. ನದಿ ನೀರಿನ ಹತ್ತಿರ ಹಾಗೂ ಅದರ ದಂಡೆಗಳಲ್ಲಿ ಅದರ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡ ಮರಗಳಲ್ಲಿ ಯಥೇಚ್ಛವಾಗಿ ಈ ಹಕ್ಕಿಗಳಿಗೆ ಬೇಕಾದ ಆಹಾರ ಸಿಗುವುದರಿಂದ ಕಳ್ಳಿಪೀರ ಹಕ್ಕಿಗಳು ನೀರಿರುವ ಸ್ಥಳದಲ್ಲಿ ಜಾಸ್ತಿ ಕಂಡುಬರುತ್ತವೆ. ಇದರ ಮುಖ್ಯ ವಾಸಸ್ಥಳ ಜೌಗು ಪ್ರದೇಶ, ಹರಿಯುವ ನದಿ, ಚಿಕ್ಕ-ಚಿಕ್ಕ ಝರಿ, ಕುರುಚಲು ಕಾಡು ಮುಂತಾದವು.
ಇವು ಸಾಮಾನ್ಯವಾಗಿ ವಲಸೆ ಹಕ್ಕಿಗಳು. ಸಂತಾನ ಅಭಿವೃದ್ಧಿ ಕಾಲದಲ್ಲಿ ಅಂದರೆ ಫೆಬ್ರವರಿಯಿಂದ ಜೂನ್ ತನಕ ದಕ್ಷಿಣ ಭಾರತದ ಹಾಗೂ ದಕ್ಷಿಣ ಏಷ್ಯಾದ ಹಲವು ಪ್ರದೇಶಗಳಿಗೆ ವಲಸೆ ಬರುತ್ತವೆ.
ನಮ್ಮಲ್ಲಿ ಅಂದರೆ ಕರ್ನಾಟಕದ ಕಾವೇರಿ ನದಿ ತೀರ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈ ಹಕ್ಕಿಗಳು ಬೇರೆ ಕಳ್ಳಿಪೀರ (ಬೀ ಈಟರ್) ಹಕ್ಕಿಗಳ ಹಾಗೆ ಕುಹರದ ಗೂಡನ್ನು ಕಟ್ಟುತ್ತವೆ (ಕ್ಯಾವಿಟಿ ನೆಸ್ಟರ್ಸ್). ಅಂದರೆ ನದಿ ಬದಿಯ ದಿಬ್ಬ ಹಾಗು ದಡದಲ್ಲಿ ಬಿಲವನ್ನು ಕೊರೆದು ಗೂಡು ಕಟ್ಟಿಕೊಳ್ಳುತ್ತವೆ. ಇವುಗಳ ಗೂಡು ವಠಾರಗಳ ತರಹ ಇರುತ್ತವೆ. ಎಲ್ಲ ಹಕ್ಕಿಗಳು ಒಟ್ಟಾಗಿ ಒಂದೇ ಕಡೆ ಗೂಡು ಕಟ್ಟಿ ವಾಸ ಮಾಡುತ್ತವೆ. ಒಂದು ಸಾರಿ ಇವು ಐದರಿಂದ ಏಳು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ತಂದೆ ಮತ್ತು ತಾಯಿ ಹಕ್ಕಿ ಎರಡೂ ಸೇರಿ ಮೊಟ್ಟೆಗಳಿಗೆ ಕಾವುಕೊಟ್ಟು ನೋಡಿಕೊಂಡು, ಮೊಟ್ಟೆಯಿಂದ ಮರಿಗಳು ಹೊರ ಬಂದಾಗ ಅವುಗಳನ್ನು ಆರೈಕೆ ಮಾಡುತ್ತವೆ. ಹೊರ ಬಂದ ಹಕ್ಕಿಗಳು ಹೊಸ ಜಾಗಗಳನ್ನು ಹುಡುಕಿ ಹೋಗುತ್ತವೆ. IUCN (International Union for Conservation of Nature) ಪ್ರಕಾರ ಇವುಗಳ ಸಂತತಿ ಸ್ಥಿರವಾಗಿದೆ. ಆದರೂ ಕೂಡ ಮಾನವನ ಅತಿಕ್ರಮ, ಅರಣ್ಯ ನಾಶ. ನದಿ ಹತ್ತಿರದ ಜಾಗಗಳ ನಾಶದಿಂದ ವರ್ಷದಿಂದ ವರ್ಷಕ್ಕೆ ಸಂತತಿ ಕ್ಷೀಣಿಸುತ್ತಿರುವುದಂತೂ ಸತ್ಯ. ಪ್ರತಿಯೊಂದು ಜೀವಿ ಕೂಡ ಪ್ರಕೃತಿಯಲ್ಲಿ ಅಮೂಲ್ಯವಾದ ತನ್ನದೇ ಆದ ಕೊಡುಗೆ, ಸಮತೋಲನ ಹಾಗು ಪರಿಸರ ಸಂರಕ್ಷಣೆ ಮಾಡುತ್ತ ಬಂದಿದೆ. ಮನುಷ್ಯನ ಆಸೆಯಿಂದ ಹಾಗು ಅಭಿವೃದ್ಧಿ ನೆಪದಲ್ಲಿ ಆಗಿರುವ ಅತೀ ಹಸ್ತಕ್ಷೇಪದಿಂದ ಇವುಗಳ ವಾಸಸ್ಥಾನ ಹಾಳಾಗುತ್ತ ಬಂದಿದೆ. ಇದೊಂದೇ ಪ್ರಭೇದದ ಜೀವಿಯಲ್ಲದೆ ಇನ್ನೂ ಹಲವಾರು ಜೀವಿಗಳು ಕ್ಷೀಣಿಸುತ್ತಿವೆ .
ನಾವು ಅಂದರೆ ಮನುಷ್ಯ ಕೂಡ ಪ್ರಕೃತಿ ಪರಿಸರದಲ್ಲಿ ಒಂದು ಜೀವಿ. ನಮಗೆ ಹೇಗೆ ಬದುಕುವ ಹಕ್ಕು ಇದೆಯೋ ಎಲ್ಲ ಜೀವಿಗಳಿಗೂ ಅಷ್ಟೇ ಹಕ್ಕಿದೆ. ನಮ್ಮ ಕಡೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯ ಹಾಗು ಅರಣ್ಯ ನಾಶ ಖಂಡಿತ ನಿಲ್ಲಬೇಕು. ಎಲ್ಲರೂ ಸ್ವಯಂ ಜಾಗೃತರಾಗಿ ಪರಿಸರ ಸಂರಕ್ಷಣೆ ಮಾಡಿ ಇಂಥ ಅನನ್ಯ ಜೀವಿಗಳ ಬದುಕುವಿಕೆಗೆ ದಾರಿ ಮಾಡಿಕೊಡಬೇಕು.
ನಾವು ಬದುಕೋಣ ಬೇರೆ ಜೀವಿಗಳನ್ನು ಬದುಕಲು ಬಿಡೋಣ…
ಇಂತಹ ಒಂದು ಸಂರಕ್ಷಿತ ವಲಯದಲ್ಲಿ ಅಂದರೆ ನಮ್ಮ ಕರ್ನಾಟಕದ ಶ್ರೀರಂಗಪಟ್ಟಣದ ಅಕ್ಕ ಪಕ್ಕ ಇರುವ ಕಾವೇರಿ ನದಿ ದಡದಲ್ಲಿ ಇವುಗಳ ಆಟೋಟ ನೋಡಲು ಕಾಣಸಿಗುತ್ತವೆ.
ಲೇಖನ: ಗುರುಪ್ರಸಾದ್ ಕೆ. ಆರ್.
ಬೆಂಗಳೂರು ಜಿಲ್ಲೆ.
ಸುಂದರವಾದ ಲೇಖನ… ಅದ್ಭುತವಾದ ಛಾಯಾಚಿತ್ರಗಳು… ಸರ್.