ಕೀಟದ ನಂಟು – ಚಿಟ್ಟೆಯ ಮೊಟ್ಟೆ
© ಭಗವತಿ ಬಿ. ಎಂ.
ಮಳೆಗಾಲ ಆಗಷ್ಟೇ ಆರಂಭವಾಗಿತ್ತು. ಪರಿಸರ ಸಂಪೂರ್ಣವಾಗಿ ತನ್ನ ಜಗತ್ತಿನಲ್ಲಿ ಮುಳುಗಿ ಹೋಗಿತ್ತು! ಸತತವಾಗಿ ಎರಡು ದಿನ ಸುರಿದ ಮಳೆ ಸ್ವಲ್ಪ ಬಿಡುವು ಕೊಟ್ಟಿದ್ದೇ ತಡ, ನನ್ನ ಮಗ ತನ್ನ ಪುಟ್ಟ ಸೈಕಲ್ಲನ್ನು ಮನೆಯಂಗಳಕ್ಕೆ ಲಗುಬಗೆಯಿಂದ ಇಳಿಸತೊಡಗಿದ್ದ. ಇನ್ನೇನು ಸೈಕಲ್ ತುಳಿಯಬೇಕು, ಅಷ್ಟರಲ್ಲಿ ಚಿಟ್ಟೆಯೊಂದು ಅವನ ಸುತ್ತ ಹಾರಾಡತೊಡಗಿತ್ತು. ಅವನ ದೃಷ್ಟಿಯೆಲ್ಲಾ ಅದರತ್ತ ನೆಟ್ಟಿತ್ತು. ಅದು Common Mormon ಹೆಣ್ಣು ಚಿಟ್ಟೆಯಾಗಿತ್ತು. ಹಾರಿ ಹಾರಿ ಎಲ್ಲ ಸಸ್ಯಗಳ ಸುತ್ತ ಗಿರಕಿ ಹೊಡೆಯುತ್ತ ಕರಿಬೇವಿನ ಗಿಡದ ಸುತ್ತಲೇ ಹೆಚ್ಚು ಹಾರುತ್ತಿತ್ತು. ‘ಅವ್ವಾ ನೋಡಿಲ್ಲಿ ಚಿಟ್ಟೆ ಕರಿಬೇವನ್ನು ತಿಂತಿರಬೇಕು! ಅಜ್ಜಿಗೆ ಹೇಳ್ತಿನಿ ತಾಳು, ಅವಳ ಕರಿಬೇವಿನ ಎಲೆಯನ್ನು ಚಿಟ್ಟೆ ಒಯ್ಯುತ್ತಿದೆ ಎಂದು!’ ಹೇಳುತ್ತಾ ಅಜ್ಜಿಯನ್ನು ಕರೆಯಲು ಒಳಗೋಡಿದ. ಅಜ್ಜಿಯು ಅದೇ ವೇಗದಿಂದ ಧಾವಿಸಿ ಬಂದು ‘ಆ ಚಿಟ್ಟೆಯನ್ನು ಕರಿಬೇವಿನ ಗಿಡದ ಹತ್ತಿರ ಬಿಡಬೇಡ. ಅದರ ಮರಿಗಳು ನನ್ನ ಗಿಡವನ್ನು ತಿಂದು ಖಾಲಿ ಮಾಡುತ್ತವೆ’ ಎಂದು ಹೇಳಿದಳು. ಈಗ ನನ್ನ ಮಗನಿಗೆ ಅದರ ಮರಿಗಳ ಬಗ್ಗೆ ಕುತೂಹಲ ಮೂಡಿತು. ಗಿಡವನ್ನೆಲ್ಲ ಅಲ್ಲಾಡಿಸಿ ನೋಡಿ ಮರಿಗಳಿಗಾಗಿ ಹುಡುಕತೊಡಗಿದ. ಅಜ್ಜಿಯು ‘ಅಯ್ಯೋ ಪುಟ್ಟ! ಬಹುಷಃ ಚಿಟ್ಟೆ ಈಗಷ್ಟೇ ಮೊಟ್ಟೆಗಳನ್ನಿಟ್ಟರಬಹುದು. ಸ್ವಲ್ಪ ದಿನಗಳ ನಂತರ ಮರಿಗಳು ಹೊರ ಬರುತ್ತವೆ. ಎಲ್ಲಿ? ಮೊಟ್ಟೆ ಹುಡುಕು ನೋಡೋಣ!’ ಎಂದಿದ್ದಕ್ಕೆ ನನ್ನ ಮಗ ಅದೇನು ತಿಳಿದುಕೊಂಡನೋ
‘ನನ್ನೆತ್ತರದ ಗಿಡದಲ್ಲಿ ಅದು ಹೇಗೆ ಮೊಟ್ಟೆ ಇಡುತ್ತದೆ? (ಬಹುಷಃ ಕೋಳಿ ಮೊಟ್ಟೆಯ ಗಾತ್ರವನ್ನು ಊಹಿಸಿಕೊಂಡಿರಬೇಕು!) ಕೊನೆಗೆ ನಾನು ಇವರ ಮಧ್ಯೆ ಪ್ರವೇಶಿಸಿ ಕರಿಬೇವಿನ ಚಿಗುರೆಲೆಯ ಹಿಂಬದಿಯಲ್ಲಿ ಚಿಟ್ಟೆಯ ಒಂದು ಗಸಗಸೆ ಗಾತ್ರದ ತಿಳಿ ಹಳದಿ ಬಣ್ಣದ ಮೊಟ್ಟೆಯನ್ನು ತೋರಿಸಿದೆ. ನನ್ನ ಮಗ ಮತ್ತೊಂದು ನೂರು ಪ್ರಶ್ನೆಗಳನ್ನು ಕೇಳಿದ. ಅವನಿಗೆ ಎಲ್ಲಿಲ್ಲದ ಕುತೂಹಲ ಮೂಡಿತ್ತು. ದಿನಕ್ಕೆರಡು ಬಾರಿಯಾದರೂ ಗಿಡದ ವಿವಿಧ ಎಲೆಗಳ ಮೇಲೆ ಇದ್ದ ಮೊಟ್ಟೆಗಳನ್ನು ಪರೀಕ್ಷಿಸುತ್ತಿದ್ದ. ಐದಾರು ದಿನಗಳಾದ ಮೇಲೆ ಚಿಕ್ಕ ಲಾರ್ವಾಗಳು ಕಾಣಿಸತೊಡಗಿದವು. ಮೊಟ್ಟೆಯಿಂದ ಚಿಟ್ಟೆಯೇ ಹೊರಬರುವುದೆಂದು ಎಣಿಸಿದ್ದ ಪ್ರಣವನಿಗೆ ತುಸು ನಿರಾಸೆಯಾಯಿತು. ಅವನಿಗೆ ಚಿಟ್ಟೆಯ ಜೀವನ ಚಕ್ರವನ್ನು ಅರ್ಥ ಮಾಡಿಸುವ ಸಲುವಾಗಿ ಒಂದು ಕಾರ್ಡ್ ಬೋರ್ಡಿನ ಮೇಲೆ ಚಿಟ್ಟೆಯ ಚಿತ್ರ ತೆಗೆದು ಅವನಿಗೆ ಬಣ್ಣ ಹಚ್ಚಲು ಹೇಳಿ, ಎಲೆ, ಮೊಟ್ಟೆಯನ್ನು ಸೂಚಿಸಲು ಗಸಗಸೆ, ಅದರ ಪ್ಯೂಪಾ ಎಲ್ಲವನ್ನೂ ಸಿದ್ಧ ಪಡಿಸಿ ವಿವರಿಸಿದರೆ, ಪ್ರಣವ ‘ಅಯ್ಯೋ! ಇಲ್ಲೇ ನಮ್ಮ ಕರಿಬೇವಿನ ಗಿಡದಲ್ಲಿ ಲಾರ್ವಗಳಿವೆಯಲ್ಲ! ಅದನ್ನೇ ನೋಡ್ತೀನಿ ಬಿಡು. ಚಿಟ್ಟೆ ಹೊರ ಬರುವ ತನಕ ನಾನು ಅಲ್ಲಾಡುವುದೇ ಇಲ್ಲ’ ಎಂದು ಬಿಟ್ಟ. ‘ಎಲಾ ಇವನ? ‘ ಎಂದು ಹಲ್ಲು ಕಚ್ಚಿ (ನನ್ನ 50 ನಿಮಿಷಗಳ ಪರಿಶ್ರಮವನ್ನು ಕಡೆಗಣಿಸಿದ್ದಕ್ಕಾಗಿ!) ನನ್ನ ಚಟುವಟಿಕೆಯನ್ನು ಎತ್ತಿಟ್ಟು ಅವನ ಹಿಂದೆ ಓಡಿದೆ.
ಒಂದು ದಿನದ ಬಕಾಸುರ ಲಾರ್ವಗಳು ಆಗಲೇ ಅರ್ಧ ಎಲೆಯನ್ನು ತಿಂದಿದ್ದವು. ಒಂದು ವಾರದಲ್ಲಿ ಐದಾರು ಲಾರ್ವಗಳು ಸೇರಿ ಗಿಡದ ಅರ್ಧದಷ್ಟು ಎಲೆಗಳನ್ನು ಕಬಳಿಸಿ ಬಿಟ್ಟಿದ್ದವು! ಇಷ್ಟು ದಿನಗಳ ತನಕ ಹಕ್ಕಿಯ ಮಲದಂತೆ ಕಾಣುತ್ತಿದ್ದ ಲಾರ್ವಗಳು (1st instar to 4th instar) ಈಗ ಹಸಿರು ಬಣ್ಣದ ಲಾರ್ವಾಗಳಾಗಿ (5th instar caterpillar) ಮಾರ್ಪಾಡು ಹೊಂದಿ ಸಾಕಷ್ಟು ಬೆಳೆದಿದ್ದವು. ಪ್ರಣವನಿಗೆ ಬಂದ ಸಹಸ್ರ ಪ್ರಶ್ನೆಗಳಲ್ಲಿ ಇಷ್ಟು ಅಸಹ್ಯವಾದ ಕಂಬಳಿ ಹುಳುಗಳು ಅವು ಹೇಗೆ ಸುಂದರ ಚಿಟ್ಟೆಗಳಾಗುತ್ತವೆ? ಎಂದು! ಕಂಬಳಿಹುಳುಗಳು ತುಂಬಾ ಬುದ್ಧಿವಂತ ಕೀಟಗಳು. ಹಕ್ಕಿಯ ಮಲದಂತೆ ಕಾಣಿಸಿಕೊಂಡರೆ ಯಾವ ಬೇಟೆಗಾರ ಪಕ್ಷಿಗಳು ತಮ್ಮನ್ನು ತಿನ್ನುವುದಿಲ್ಲ ಎಂದು ಆ ಮಾರ್ಪಾಡು! ಉದ್ಯಾನವನದಲ್ಲಿ ಸಾಕಷ್ಟು ಪಕ್ಷಿಗಳಿದ್ದು ಅವುಗಳ ಮರಿಗಳ ಕೊನೆಗಾಣದ ಹಸಿವು ಇದ್ದರೂ ಕೂಡ ಈ ಕಂಬಳಿ ಹುಳುಗಳು ಚಿಗುರೆಲೆಯ ಮೇಲೆ ಕುಳಿತು ದಿನವಿಡೀ ತಿನ್ನುತ್ತಾ ಇದ್ದರೂ ಬದುಕಿ ಉಳಿದಿದ್ದವು. ಈಗ ಕೊಬ್ಬಿದ ಕಂಬಳಿ ಹುಳುಗಳು ತಮ್ಮ ಹಳೆಯ ಹಕ್ಕಿ ಮಲದ ರೂಪವನ್ನು ಕಳಚಿ ಬಿಟ್ಟಿದ್ದವು. ಹೀಗಾಗಿಯೇ ಕೆಲ ಬುಲ್ ಬುಲ್ ಹಾಗು ಮಡಿವಾಳ ಹಕ್ಕಿಗಳು ಬಂದು ಎಲೆಗಳ ಮೇಲಿದ್ದ ಕೆಲ ಲಾರ್ವಾಗಳನ್ನು ತಿಂದು ಬಿಟ್ಟಿದ್ದವು. ಇನ್ನುಳಿದ ಲಾರ್ವಗಳು ಪೂರ್ತಿ ಗಿಡದ ಎಲೆಗಳನ್ನು ತಿಂದು ಮುಗಿಸಿದ್ದರಿಂದ ಬೇರೆ ಗಿಡಗಳಿಗಾಗಿ ಅರಸಿ ಹೋದವು. ಬೆಳಗಾದೊಡನೆ ನನ್ನ ಮಗ ಚಿಟ್ಟೆಯ ಕಂಬಳಿ ಹುಳುಗಳಿಗಾಗಿ ಹಪಹಪಿಸತೊಡಗಿದರೆ ಅಜ್ಜಿಯು ತನ್ನ ಖಾಲಿಯಾದ ಕರಿಬೇವಿನ ಎಲೆಗಳಿಗಾಗಿ ಹಲುಬತೊಡಗಿದಳು. ಇವರ ಮಧ್ಯೆ ಮತ್ತೆ ಸುರಿಯತೊಡಗಿದ ಮಳೆ. ತುಂಬಾ ಪ್ರಯತ್ನ ಪಟ್ಟು ಹುಡುಕಿದ ಮೇಲೆ ಎರಡು ಕ್ರಿಸಲಿಸ್ (Crysalis) ಸಿಕ್ಕವು. ಅವು ಅಲ್ಲಿ ಎಷ್ಟು ದಿನಗಳಿಂದ ಇವೆ ಎಂದು ಗೊತ್ತಿಲ್ಲದ ಕಾರಣ ಚಿಟ್ಟೆ ಯಾವಾಗ ಹೊರ ಬರುತ್ತದೆ ಎಂದು ಹೇಳಲಸಾಧ್ಯವಾಗಿತ್ತು. ದಿನವೂ ಪರೀಕ್ಷಿಸುವುದೊಂದೇ ನಮ್ಮ ಆಯ್ಕೆಯಾಗಿತ್ತು. ಮರುದಿನವೇ ಕ್ರಿಸಲಿಸ್ ಒಂದು ಕಡೆಯಿಂದ ತೆರೆದುಕೊಂಡಿತ್ತು. ಆದರೆ ಚಿಟ್ಟೆಯ ಸುಳಿವೇ ಇಲ್ಲ. ಪ್ರಣವ ಅಳತೊಡಗಿದ್ದ. ಜಿಟಿ ಜಿಟಿ ಮಳೆ ಶುರುವಾಗಿತ್ತು. ಕ್ರಿಸಲಿಸ್ ನಿಂದ ಹೊರಬಂದ ಚಿಟ್ಟೆಗೆ ಕೂಡಲೇ ಹಾರುವಷ್ಟು ಸಾಮರ್ಥ್ಯವಿಲ್ಲದ್ದರಿಂದ ಇಲ್ಲೇ ಎಲ್ಲೋ ಇರಬಹುದೆಂದು ನಾನು ಹುಡುಕುತ್ತಿದ್ದೆ. ಅಷ್ಟರಲ್ಲೇ ಆ ಅವಿತಿದ್ದ ಹೊಸ ಚಿಟ್ಟೆಯ ರೆಕ್ಕೆಯ ಕಪ್ಪು ಬಣ್ಣದ ತುದಿ ಪಕ್ಕದ ಮೇ ಫ್ಲವರ್ ಗಿಡದ ಎಲೆಯ ಹಿಂಬದಿಯಲ್ಲಿ ಸ್ವಲ್ಪವೇ ಕಾಣಿಸಿತು. ‘ಆಹ್! ಸಿಕ್ಕಿಬಿಟ್ಟಿತು!’ ಎಂದು ಪ್ರಣವನಿಗೆ ತೋರಿಸಿದೆ. ಪ್ರಣವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಚಿಟ್ಟೆಯ ರೆಕ್ಕೆಗಳು ಸ್ತಬ್ಧವಾಗಿದ್ದು ಬರಲಿರುವ ತನ್ನ ಮುಂದಿನ ಜೀವನಕ್ಕೆ ಅಣಿಗೊಳ್ಳುತ್ತಿದ್ದವು. ಚಿಟ್ಟೆಯ ಸುಂದರವಾದ ಹೊಳೆಯುವ ಬಣ್ಣ ಪ್ರಣವನ ಹೊಳೆಯುವ ಕಣ್ಣುಗಳಲ್ಲಿ ಇನ್ನಷ್ಟು ಸುಂದರವಾಗಿ ಕಂಡಿತು!
ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
ಬೆಂಗಳೂರು ಜಿಲ್ಲೆ.