ಮರಿ ಬುಲ್ ಬುಲ್ ಪಕ್ಷಿಗೆ ಅಪ್ಪ ಅವ್ವ ಕಾವಲುಗಾರರು…

ಮರಿ ಬುಲ್ ಬುಲ್ ಪಕ್ಷಿಗೆ ಅಪ್ಪ ಅವ್ವ ಕಾವಲುಗಾರರು…

© ಅನುಪಮ ಹೆಚ್. ಎಂ.

ಸಮಯ ಬೆಳಿಗ್ಗೆ ಒಂಬತ್ತು ಒಂಬತ್ತುವರೆ ಆಗಿತ್ತು. ಮನೆಯಲ್ಲಿ ನಾಷ್ಟ ಮುಗಿಸಿ ಕೈ ತೊಳೆಯುವುದಕ್ಕೆ ತಟ್ಟೆ ಹಿಡಿದು ಬಾಗಿಲು ತೆಗೆದು ಹೊರ ಬಂದ ನನಗೆ ಅಚ್ಚರಿ ಕಾಯ್ದಿತ್ತು. ಒಂದು ಸುಂದರ ಪಕ್ಷಿಯು ನನ್ನ ಅಂಬಾರಿಯಾದ ಸೈಕಲಿನ ಮೇಲೆ ಕುಳಿತು ಗಡಿಬಿಡಿಯಲ್ಲಿ ಕತ್ತನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೊರಳಾಡಿಸುತ್ತಿತ್ತು. ಇದರ ಹೊರಳಾಟದಲ್ಲಿ ಅದರ ನೆತ್ತಿಯ ಮೇಲೆ ಇರುವ ಜುಟ್ಟು ನೃತ್ಯ ಮಾಡುತ್ತಿತ್ತು. ಕಣ್ಣಿನ ಅಂಚಲ್ಲಿ ಕಾಡಿಗೆಯಂತೆ ಕಾಣುವ ಕೆಂಪು ಬಣ್ಣದ ಚುಕ್ಕೆಯನ್ನು ಇಟ್ಟುಕೊಂಡಿತ್ತು. ಎದೆಯ ಭಾಗ ಬಿಳಿ ಬಣ್ಣ, ಬೀಸಣಿಕೆಯಂತಹ ಬಾಲದ ಕೆಳಗೆ ಕೆಂಪು ಬಣ್ಣ, ದೇಹದ ಉಳಿದ ಭಾಗಗಳಲ್ಲಿ ಕಂದು ಬಣ್ಣದಿಂದ ಕೂಡಿದ್ದ ಈ ಪಕ್ಷಿಯನ್ನು ಕಂಡೊಡನೆಯೇ ಇದು ಕೆಂಪು ಮೀಸೆಯ ಪಿಕಳಾರ ಎಂದು ತಿಳಿಯುವುದರಲ್ಲಿ ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ.

ಸುಮಾರು ತಿಂಗಳುಗಳ ಹಿಂದೆ ನಮ್ಮ ಕಛೇರಿಯ ಬಾಜು ಇದ್ದ ಮನೆಯ ಮಾಳಿಗೆಗೆ ಸುರುಳಿ ಸುತ್ತಿ ನೇತು ಬಿದ್ದಿದ್ದ ತಂತಿಯಲ್ಲಿ ಪಿಕಳಾರ (ಬುಲ್ ಬುಲ್) ದಂಪತಿಗಳು ಹುಲ್ಲು ಕಡ್ಡಿಯಿಂದ ಹೆಣಿಗೆ ಮಾಡುತ್ತಿರುವುದನ್ನು ನಾನು ಅಂದು ಗಮನಿಸುತ್ತಿದ್ದೆ. ನನ್ನ ಸೈಕಲಿನ ಮೇಲೆ ಇಂದು ಪಿಕಳಾರವನ್ನು ಕಂಡ ನನಗೆ ಆ ಸನ್ನಿವೇಶವು ನೆನೆಪಿಗೆ ಬಂತು. ಅಂದು ಕಂಡ ಪಿಕಳಾರ ಇದೇ ಇರಬಹುದೇ ಎಂಬ ಪ್ರಶ್ನೆ ತಲೆಗೆ ಬಂತು.

ಅಷ್ಟು ಹತ್ತಿರದಲ್ಲಿಯೇ ಪಕ್ಷಿಯನ್ನು ಕಂಡ ನಾನು ಖುಷಿಯಿಂದ ಫೋಟೋ ಕ್ಲಿಕ್ಕಿಸುವ ಯೋಚನೆಯಿಂದ ಕೈಯಲ್ಲಿದ್ದ ತಾಟನ್ನು ಕೆಳಗೆ ಇಟ್ಟು, ಮನೆಯೊಳಗಿಂದ ಮೊಬೈಲ್ ತರಲು ಹೊರಟೆ. ಬರುವಷ್ಟರೊಳಗೆ ಆ ಪಕ್ಷಿಯು ಅಲ್ಲಿಂದ ಹಾರಿ ಹೋಗಿತ್ತು. ಸುತ್ತಮುತ್ತ ಕಣ್ಣು ಹಾಯಿಸಿದೆ, ಎಲ್ಲೂ ಕಾಣಲಿಲ್ಲ. ಎಲ್ಲೋ ಹೋಯಿತೆಂದು ಕೆಳಗೆ ಇಟ್ಟಿದ್ದ ತಾಟನ್ನು ತೆಗೆದುಕೊಳ್ಳುವುದಕ್ಕೆ ತಿರುಗಿ ಒಂದೆರಡು ಹೆಜ್ಜೆ ಇಟ್ಟಾಗ, ಸಣ್ಣನೆಯ ದನಿಯಲ್ಲಿ ಚುಚ್…. ಚುಚ್…. ಎಂದು ಕೂಗುತ್ತಿರುವುದು ಕೇಳಿಸಿತು. ಕುತೂಹಲದಿಂದ ತಿರುಗಿ ನೋಡಿದೆ. ಕಾಲುಗಳನ್ನು ಒಂದಕ್ಕೊಂದು ಜೋಡಿಸಿಕೊಂಡು ಅಲುಗಾಡದೆ ಬೆದರಿ ಮೈಯನ್ನು ಗುತ್ಯಗ ಮಾಡಿಕೊಂಡು ಒಂದಿಂಚೂ ಅಲುಗಾಡದೆ ಚಂದದ ಪಿಕಳಾರ ಪಕ್ಷಿಮರಿ ಕುಳಿತಿತ್ತು. ಕುಳಿತಲ್ಲಿಯೇ ತನ್ನ ಮೂತಿಯನ್ನು ಸುತ್ತಲು ಹೊರಳಾಡಿಸಿ ನೋಡುತ್ತಿತ್ತು.

©  ಶರಣಪ್ಪ ಎಚ್ ಸಂಗನಾಳ

ನಾನು ಹತ್ತಿರ ಹೋಗಿ ಮೊಬೈಲಿನಲ್ಲಿ ಅದರ ಚಂದವನ್ನು ಸೆರೆಹಿಡಿಯುವಷ್ಟರಲ್ಲಿಯೇ ಆ ಮರಿಯ ಅಪ್ಪ ಅವ್ವ ಎರಡೂ ನನ್ನ ಮೇಲೆ ಯುದ್ಧ ಮಾಡುಲು ಮೇಲೆರಗಿ ತಲೆಗೆ ಕುಕ್ಕಲು ಶುರುಮಾಡಿದವು. ಅವುಗಳ ಚೂಪನೆಯ ಕೊಕ್ಕಿಗೆ ಹೆದರಿದ ನಾನು ಕೈಯಲ್ಲಿರುವ ಮೊಬೈಲ್ ಅನ್ನು ಬಿಟ್ಟು ತಲೆ ತಿಕ್ಕುತ್ತಾ ಎದ್ದು ಓಡಿದೆ.  “ಸುಮ್ನ ನಿಂತ್ಗಂಡು ನೋಡೋದು ಬಿಟ್ಟು, ಗ್ವಾಡಿಮ್ಯಾಗ ಹೋಗು ಇರುವಿನ ಚಡ್ಯಾಗ ಬಿಡ್ಗೊಂಡಂಗಾತು” ನನ್ನ ಪರಿಸ್ಥಿತಿ.

©  ಅನುಪಮ ಹೆಚ್. ಎಂ.

ಚಂಡು ಎತ್ತಿ ನೋಡಿದೆ. ಆ ಮರಿಯ ಅಪ್ಪ ಅವ್ವ ನನ್ನ ಕಡೆಗೆ ದುರುಗುಟ್ಟಿಸಿಕೊಂಡು ನೋಡ್ತಿದ್ವು. ಇವೆರಡೂ ಈ ಮರಿಯ ಕಾವಲುಗಾರರೆಂದು ತಿಳಿಯಿತು. ಆ ಮರಿಯನ್ನು ನೋಡಿದೆ, ರೆಕ್ಕೆ ಬಿಚ್ಚಿ ಮುಂದೆ ಹೊರಟಿತ್ತು. ಪಾಪ ಮರಿಗೆ ನೀರಡಿಕೆ ಆಗಿರಬಹುದು ಸ್ವಲ್ಪ ನೀರುಣಿಸಬಹುದಿತ್ತು ಎಂದೆನಿಸಿದರೂ ಅದರ ಅಪ್ಪ ಅವ್ವನಿಗೆ ಹೆದರಿ ನಾನು ಆಗಲೇ ಕೆಳಗೆ ಇಟ್ಟಿದ್ದ ತಾಟನ್ನು ತಗೊಂಡು, ಸುಮ್ಮನೆ ತೊಳೆಯೋಕೆ ಹೋದೆ.

ಸ್ವಲ್ಪ ಹೊತ್ತಿನ ನಂತರ ಆ ಮರಿ ಅಲ್ಲಿಯೇ ಇದೆಯೋ ಇಲ್ಲವೋ ಎಂಬ ಕುತೂಹಲದಿಂದ ಮತ್ತೆ ಇಣುಕಿ ನೋಡಿದೆ. ಆ ಮರಿಯು ಆ ಜಾಗದಲ್ಲಿ ಇರಲಿಲ್ಲ.  ಮನೆಯ ಗೇಟಿನ ಬಳಿ ಅಪ್ಪ ಅವ್ವ ಪಕ್ಷಿಗಳು ಚುಚ್…. ಚುಚ್…. ಎಂದು ಪುರುಸೊತ್ತು ಇಲ್ಲದೆ ಕೂಗುತ್ತಿರುವುದು ಕೇಳಿಸಿತು. ಅಲ್ಲಿಗೆ ಹೋಗಿ ನೋಡಿದಾಗ ಮರಿ ಕಾಂಪೌಂಡ್ ಗೋಡೆಗೆ ಒರಗಿ ಕುಳಿತಿತ್ತು. ಮರಿಯ ಅಪ್ಪ ಅವ್ವ ಗೇಟಿನ ಮೇಲೆ ಅತ್ತಿಂದ ಇತ್ತ, ಇತ್ತಿಂದ ಅತ್ತ ಹಾರಾಡ್ತಾ ಕೂಗ್ತಿರೋದು ಕೇಳಿ ಆ ಕಡೆ ನೋಡಿದೆ. ಗೇಟಿನ ಕೆಳಗೆ ಎರಡು ಮುಂಗುಸಿಗಳಿದ್ದವು. ಅವುಗಳು ನಮ್ಮ ಮರಿಯನ್ನು ತಿಂದು ಹಾಕಬಹುದು ಎಂಬ ಬೆದರಿಕೆಯಿಂದ ಆ ಪೋಷಕರು ಗೇಟಿನ ಒಳಗಡೆ ಬರದಂತೆ ತಡೆದು ಓಡಿಸುತ್ತಿದ್ದವು.  ಇದನ್ನು ಕಂಡ ನನಗೆ, ಯಾವುದೇ ಜೀವಿಯಾದರೂ ಅವ್ವ ಅಪ್ಪಂದಿರು ತಮ್ಮ ಮಕ್ಕಳ ಸುಖಕ್ಕಾಗಿ ಪ್ರಾಣ ಲೆಕ್ಕಿಸದೇ ಅಪಾಯಗಳನ್ನು ಎದುರಿಸುತ್ತವೆಯಲ್ಲಾ ಎಂದು ಅಚ್ಚರಿಯಾಯಿತು. ಇದಾದ ಕೆಲವು ಸಮಯದಲ್ಲಿ ಗೇಟಿನ ಮೇಲೆ ಕುಳಿತಿದ್ದ ಒಂದು ಪಕ್ಷಿಯು ಎತ್ತಲೋ ಹಾರಿ ಹೋಯಿತು. ಸ್ವಲ್ಪ ಸಮಯದಲ್ಲೇ ಹಿಂದಿರುಗಿದ ಅದು ಮರಿಯ ಬಳಿಗೆ ಹೋಗಿ ತನ್ನ ಕೊಕ್ಕಿನಲ್ಲಿದ್ದ ಸಣ್ಣ ಕೀಟವನ್ನು ಅದಕ್ಕೆ ಗುಟುಕು ನೀಡಿತು. ಇಷ್ಟು ಆನಂದವಾಗಿರುವ ಕುಟುಂಬದ ನಡುವೆ ನನ್ನ ಇರುವಿಕೆಯು ತೊಂದರೆಯಾಗಬಾರದೆಂದು ನಾನು ಮನೆಯ ಒಳಕ್ಕೆ ಹಿಂದಿರುಗಿದೆ. ಸ್ವಲ್ಪ ಸಮಯದ ನಂತರ ಮರಿಯೊಂದೆ ಕೂಗುತ್ತಿರುವುದು ಕೇಳಿಸಿತು. ಹೋಗಿ ನೋಡಿದಾಗ ಅಪ್ಪ ಅವ್ವ ಇರಲಿಲ್ಲ. ಬೊಗಸೆಯಲ್ಲಿ ಹಿಡಿದುಕೊಳ್ಳುವಾಗ ಬೆದರಿ ಹಾರಲು ರೆಕ್ಕೆ ಬಡಿಯುತ್ತಿತ್ತು. ನಿಧಾನವಾಗಿ ಕೈಯಲ್ಲಿ ಹಿಡಿದು ಬಕೇಟಿನಲ್ಲಿದ್ದ ನೀರಿಗೆ ಮರಿಯ ಕೊಕ್ಕನ್ನು ತಾಗಿಸಿದಾಗ ಅದು ನೀರು ಕುಡಿಯುತ್ತಿರುವುದನ್ನು ನೋಡಿ, ಮರಿಗೆ ಎಷ್ಟು ನೀರಡಿಕೆಯಾಗಿತ್ತು, ಎನ್ನುವುದು ಗೊತ್ತಾಯಿತು. ಅಂಗೈಯಲ್ಲಿ ಹಿಡಿದು ಬೆರಳಿಂದ ತಲೆಯನ್ನು ಸವರಿದಾಗ ತಲೆ ಹಿಂದಕ್ಕೆ ತೆಗೆದುಕೊಂಡಿತು. ಅಷ್ಟೊತ್ತಿಗಾಗಲೇ ಮರಿಯ ಅಪ್ಪ ಅವ್ವ ಬಂದದ್ದು ನೋಡಿ, ಮರಿಯನ್ನು ಕೆಳಗೆ ಇಳಿಸಿ ದೂರ ಸರಿದೆ.

ಮರಿ ಪಿಕಳಾರ ಪಕ್ಷಿ ಹಾರಿ ಮುಂದೆ ಹೋದ ಹಾಗೆಲ್ಲ ಹಿಂದಿಂದೆ ಕಾವಲುಗಾರರಾಗಿ ಅಪ್ಪ ಅವ್ವ ಪಕ್ಷಿಗಳು ಹೋಗುತ್ತಿದ್ದವು. ಈ ಪಿಕಳಾರ ಪಕ್ಷಿಗಳ ಬದುಕಿನ ಹೋರಾಟ ನಮಗೂ ಕನ್ನಡಿಯಲ್ಲವೇ ಅನಿಸಿತು.

©  ಅನುಪಮ ಹೆಚ್. ಎಂ.
©  ಶರಣಪ್ಪ ಎಚ್ ಸಂಗನಾಳ


ಲೇಖನ: ಶರಣಪ್ಪ ಎಚ್ ಸಂಗನಾಳ .
         ಗದಗ
ಜಿಲ್ಲೆ.

Print Friendly, PDF & Email
Spread the love
error: Content is protected.