ಬ್ರಹ್ಮ ವೃಕ್ಷವೂ ಒಂದು ಕಲ್ಪವೃಕ್ಷ
© ಭಗವತಿ ಬಿ. ಎಂ.
ಬ್ರಹ್ಮವೃಕ್ಷ ಮರ ಅರ್ಥಾತ್ ಮುತ್ತುಗ ಮರವನ್ನು ಆಂಗ್ಲ ಭಾಷೆಯಲ್ಲಿ ಫ್ಲೇಮ್ ಆಫ್ ದಿ ಫಾರೆಸ್ಟ್ (flame of the forest tree) ಮತ್ತು ಬುಟಿಯ ಗಮ್ ಟ್ರೀ (butea gum tree) ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಈ ಮರ ಬುಟಿಯಾ ಪ್ರಜಾತಿಯ, ಫಾಬೇಸಿ ಕುಟುಂಬಕ್ಕೆ ಹೊಂದಿಕೊಂಡ ಮರ. ಇದರ ಸಸ್ಯಶಾಸ್ತ್ರೀಯ ಹೆಸರು ‘ಬುಟಿಯ ಮೊನೊಸ್ಪೆರ್ಮ’ Butea monosperma. ಸಾಮಾನ್ಯವಾಗಿ ತೆಂಗಿನ ಮರವನ್ನು ನಾವು ಕಲ್ಪವೃಕ್ಷ ಎಂದು ಕರೆಯುತ್ತೇವೆ ಆದರೆ ಕಾನನದಲ್ಲಿ ಇನ್ನೂ ಅನೇಕ ಮರಗಳಿವೆ. ಅವುಗಳಲ್ಲಿ ಬ್ರಹ್ಮವೃಕ್ಷ ಮರ ಮನುಷ್ಯನಿಗೆ ಅತ್ಯಂತ ಉಪಯುಕ್ತ. ಇದರ ಬಗ್ಗೆ ಪ್ರಪಂಚದಲ್ಲಿ ಬಹಳ ಜನರಿಗೆ ಸರಿಯಾದ ಮಾಹಿತಿ ಇಲ್ಲವೆಂದು ವೈಜ್ಞಾನಿಕ ಸಮೀಕ್ಷೆ ತಿಳಿಸುತ್ತದೆ. ಬೇಸಿಗೆ ಕಾಲದಲ್ಲಿ ನೈಸರ್ಗಿಕವಾಗಿ ತುಂಬಾ ಗಿಡ-ಮರಗಳು ಒಣಗಿ ಹೋಗುತ್ತವೆ. ಆದರೆ ಸುಡು ಬಿಸಿಲಿನಲ್ಲಿ ಚೇತೋಹಾರಿ ನೆರಳು ನೀಡುವ ಮರ ಈ ಬ್ರಹ್ಮವೃಕ್ಷ. ಸಾಮಾನ್ಯವಾಗಿ ಮಾರ್ಚ್ – ಏಪ್ರಿಲ್ನಲ್ಲಿ ಎಲೆ ರಹಿತ ಮರದಲ್ಲಿ ಮೊಗ್ಗು ಅರಳಿ, ವರ್ಷದ ಋತುವಿನ ಆರಂಭದಲ್ಲಿ ಬೀಜ ಬಲಿತು ಸಿದ್ಧವಾಗಿರುತ್ತದೆ. ಆದರೆ ಹವಾಮಾನ ವೈಪರೀತ್ಯ ಮತ್ತು ಆಯಾ ಪ್ರಾಂತ್ಯದ ಹವಾಮಾನ ಅನುಸಾರವಾಗಿ ಈ ಮರದಲ್ಲಿ ಜನವರಿಯಿಂದಲೇ ಹೂ ಅರಳಲು ಆರಂಭವಾಗುತ್ತದೆ. ಬ್ರಹ್ಮವೃಕ್ಷದ ಹೂವುಗಳು ಅರಿಶಿನಯುಕ್ತ ಕೆಂಪು ಬಣ್ಣದ್ದಾಗಿದ್ದು ಬೆಂಕಿಯ ನಾಲಿಗೆಯಂತೆ ಕಾಣುತ್ತವೆ. ಇಡೀ ಮರ ಒಮ್ಮೆಲೆ ಹೂವು ಬಿಟ್ಟು ಕೆಂಪು ಗೊಳವಾಗಿಬಿಡುತ್ತದೆ.
ಕಾನನ ಮತ್ತು ಊರು ಕೇರಿಗಳಲ್ಲಿ ಈ ಮರ ಬೆಂಕಿಯ ನಾಲಿಗೆ ರೀತಿ ಹೂವು ಬಿಡುವುದರಿಂದ ಇದು “ಅರಣ್ಯ ಜ್ವಾಲೆ” ಯಂತೆ ಕಲ್ಪನಾ ವಿಲಾಸಿಗಳಿಗೆ ಕಾಣಿಸುವುದು ಸೋಜಿಗವೇನಲ್ಲ. ಇನ್ನು ಈ ಮರವು ಮೊದಲೇ ತಿಳಿಸಿದಂತೆ ಎಲ್ಲಾ ರೀತಿಯ ವಾತಾವರಣಕ್ಕೆ ಒಗ್ಗುವ ಮರ. ಹಾಗಾಗಿ ಇದು ಕಾನನಗಳ ನಿರ್ಮಾಣದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ಬರಡು ಭೂಮಿಯಲ್ಲಿ ಈ ಮರ ತನ್ನ ಎಲೆಗಳನ್ನು ಉದುರಿಸಿ ಮೇಲ್ಮಣ್ಣನ್ನು ಉತ್ಪಾದಿಸುವಲ್ಲಿ ಸಹಕಾರಿ ಕೂಡ ಹೌದು. ಈ ಮರ ಬೀಜ ಅಂಕುರಿಸಿದ ಮೂರೇ ತಿಂಗಳಲ್ಲಿ ಧರೆಯ ತುಂಬಾ ಆಳಕ್ಕೆ ಬೇರು ಬಿಟ್ಟುಬಿಡುತ್ತದೆ. ಈ ಮರ ಮೂರು ವರ್ಷದಲ್ಲಿ ಇನ್ನೂ ಆಳಕ್ಕೆ ಇಳಿಯುತ್ತದೆ. ಮೊದಲು ಬೇರಿನ ಮೇಲೆ ಹಸುರಿನ ಕಟ್ಟಡ ನಿಧಾನವಾಗಿ ಶುರುವಾಗಿ ಆಗಸದೆಡೆ ತನ್ನ ದೊಡ್ಡ ತ್ರಿಪರ್ಣದೊಂದಿಗೆ ಬೆಳೆಯಲಾರಂಭಿಸುತ್ತದೆ. ಈ ಮರದಿಂದ ಉದುರಿದ ಎಲೆಗಳನ್ನು ಜಾನುವಾರುಗಳು ಮೇಯುವುದಿಲ್ಲ ಎಂಬುದು ವಿಶೇಷ. ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಹಾವಳಿ ಶುರುವಾಗುವ ಮುಂಚಿನಿಂದಲೂ ಈ ಮರದ ಎಲೆಗಳಿಂದ ಊಟದ ತಟ್ಟೆಗಳನ್ನು ತಯಾರಿ ಮಾಡುತ್ತಿದ್ದರು ಎಂಬುದು ಗಮನಾರ್ಹ. ಇದರ ತಾಯಿ ಬೇರು ಆಳಕ್ಕೆ ಇಳಿದುದರಿಂದ ಸಲೀಸಾಗಿ ಈ ಮರ ನಾಶವಾಗುವುದಿಲ್ಲ.
ಒಂದು ಪಕ್ಷ ಈ ಮರಗಳು ಯಾವುದೇ ಕಾರಣಕ್ಕಾದರೂ ನಾಶವಾದರೆ ಮತ್ತೆ ಪುಟಿದೇಳುವುವು. ಹೀಗೆ ಪುಟಿದೇಳುವ ಬ್ರಹ್ಮವೃಕ್ಷ ಒಂದು ಪುಟ್ಟ ಮರವಾಗಲು ಏನಿಲ್ಲವಾದರೂ ಕನಿಷ್ಠ ಇಪ್ಪತ್ತು ವರ್ಷ ತೆಗೆದುಕೊಳ್ಳುತ್ತದೆ. ಈ ಇಪ್ಪತ್ತು ವರ್ಷದ ಅವಧಿಯಲ್ಲಿ ಅನೇಕ ಬಾರಿ ಸತ್ತು-ಬದುಕಿ ಬರುತ್ತದೆ. ಏತನ್ಮಧ್ಯೆ ಇದರ ಬೇರಿಗೆ ಪ್ರಾಣಿಗಳು ಮತ್ತು ಯಾವುದೇ ಜೀವಿಗಳು ಹಾನಿ ಉಂಟುಮಾಡಿದರೆ ಅಥವಾ ಇದರ ಹುಟ್ಟು ಬರಡು ಮಣ್ಣಿನ ಮೇಲಾದರೆ ಮತ್ತಷ್ಟು ಸಾವು ಬದುಕಿನ ಹೋರಾಟ ಮಾಡುವುದುಂಟು. ಇಷ್ಟೆಲ್ಲಾ ಕಷ್ಟದ ನಡುವೆಯೂ ಭೂಮಿಯನ್ನು ಹಸುರು ಮಾಡುವ “ಸಹಿಷ್ಣುತೆ” ಇದಕ್ಕೆ. ಎಂಥಾ ದಳ್ಳುರಿ ಕಾನನದಲ್ಲಿ ಬಿದ್ದರೂ ಪ್ರಪ್ರಥಮವಾಗಿ ಮೇಲೇಳುವ ಮರ ಈ ಬ್ರಹ್ಮವೃಕ್ಷ. ನಮ್ಮ ಹೋಮ-ಹವನಗಳ ಸಂಸ್ಕಾರದಲ್ಲಿ ಈ ಬ್ರಹ್ಮವೃಕ್ಷ ಬಲು ಪ್ರಮುಖ ಪಾತ್ರವಹಿಸುತ್ತದೆ. ವೈದೀಕವಾಗಿ ಬ್ರಹ್ಮವೃಕ್ಷ “ಅಗ್ನಿ” ಮರಗಳ ಪಟ್ಟಿಗೆ ಸೇರುತ್ತದೆ. ಬ್ರಹ್ಮವೃಕ್ಷಗಳ ಬಗ್ಗೆ ಪುರಾಣ, ವೇದ ಶಾಸ್ತ್ರಗಳಲ್ಲಿ ಅನೇಕ ವ್ಯಾಖ್ಯಾನಗಳು ಇವೆ ಎಂಬುದು ಗಮನಾರ್ಹ. ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ
ಬ್ರಹ್ಮವೃಕ್ಷವನ್ನು ಕಾಣಬಹುದು. ಮದುವೆ, ಉಪನಯನ, ಶ್ರಾದ್ಧ ಇನ್ನಿತರ ಸಮಾರಂಭಗಳಲ್ಲಿ ಊಟದ ತಟ್ಟೆಯಂತೆ ಬಳಸುವ, ಆಡುಭಾಷೆಯಲ್ಲಿ ‘ಪತ್ರೋಳಿ’ ಎಂದು ಕರೆಯಲ್ಪಡುವ ಬ್ರಹ್ಮವೃಕ್ಷದ ಮರದ ಎಲೆಗಳು ಚಿರಪರಿಚಿತ. ಬೇಸಿಗೆಯಲ್ಲಿ ಕಾನನದಲ್ಲಿನ ಇತರೆ ಮರಗಳೆಲ್ಲಾ ಎಲೆಗಳನ್ನು ಉದುರಿಸುತ್ತವೆ, ಹಾಗಾಗಿ ಕಾಡು ಸಂಪೂರ್ಣ ಒಣಮಯವಾಗಿ ಗಿಡದ ರೆಂಬೆ ಕಾಂಡಗಳು ಮಾತ್ರ ಎದ್ದು ಕಾಣುತ್ತವೆ, ಅಂತಹ ಬೋಳಾದ ಕಾನನದ ಮಧ್ಯೆ ಅಲ್ಲೊಂದು ಇಲ್ಲೊಂದು ಬ್ರಹ್ಮವೃಕ್ಷ ಮರವು ಎಲೆಯನ್ನು ಉದುರಿಸಿಕೊಂಡು ಗಿಡವೆಲ್ಲ ಹೂವಿನಿಂದ ಮತ್ತು ಪಕ್ಷಿಗಳಿಂದ ತುಂಬಿಕೊಂಡಿರುತ್ತದೆ. ಬ್ರಹ್ಮವೃಕ್ಷ ಭಾರತದಲ್ಲಿ ಹಳೆಯ ಮರ ಎಂದರೆ ತಪ್ಪಾಗಲಾರದು. ಈ ಮರವು ವೇದ ಪುರಾಣಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿದೆ ಎಂಬುದು ವೈಶಿಷ್ಟ್ಯ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಈ ಮರದ ವಿಶೇಷತೆಯನ್ನು ಕಂಡು ಫ್ಲೇಮ್ ಆಫ್ ದಿ ಫಾರೆಸ್ಟ್ ಎಂದು ಕರೆದಿದ್ದಾರೆ. ಭಾರತದಲ್ಲಿ ಅನೇಕ ಪ್ರದೇಶಗಳಲ್ಲಿಯೂ ಈ ಮರಕ್ಕೆ ನಾನಾರ್ಥಗಳಿಂದ ಕರೆಯುತ್ತಾರೆ. ಜನವರಿ ತಿಂಗಳಿನಲ್ಲಿ ಮೊಗ್ಗುಗಳು ಮೂಡಿ ಬೇಸಿಗೆಯಲ್ಲಿ ಉಜ್ವಲ ಕೆಂಪು ಬಣ್ಣದ ಹೂಗಳು ಎಲೆ ರಹಿತ ಮರದಲ್ಲಿ ಎದ್ದು ಕಾಣುತ್ತವೆ. ಹಚ್ಚಹಸಿರಿನ ಅಗಲವಾದ ಎಲೆಗಳು ದಪ್ಪವಾದ ನಾರಿನಿಂದ ಕೂಡಿದ್ದು ಬೇಗ ಹರಿದು ಹೋಗುವುದಿಲ್ಲ ಎಂಬುದು ಗಮನಾರ್ಹ. ಗ್ರಂಥಿಗೆ ಅಂಗಡಿಗಳಲ್ಲಿ ಪತ್ರೋಳಿ ಎಂದು ಹೆಸರಿಸಿ ಊಟದ ಎಲೆ ಎಂದು ಮಾರಾಟ ಮಾಡುವುದು ಇಂದಿಗೂ ಕಾಣಬಹುದು. ಬ್ರಹ್ಮವೃಕ್ಷ ಮರದಲ್ಲಿ ಅನೇಕ ಔಷಧೀಯ ಗುಣಗಳು ಇರುವುದನ್ನು ಪತ್ತೆ ಹಚ್ಚಿದ ಆಯುರ್ವೇದದ ಪಂಡಿತರು ಜನಸಾಮಾನ್ಯರಿಗೆ ಔಷಧೀಯ ಪ್ರಯೋಜನವನ್ನು ನೀಡಿದ್ದಾರೆ. ಬ್ರಹ್ಮವೃಕ್ಷದ ಹೂವು ಸಾಹಿತಿಗಳ ಲೇಖನಿಯಲ್ಲಿ ನಲಿದಾಡಿ ಎಲ್ಲರ ಗಮನ ಸಹ ಸೆಳೆದುಕೊಂಡಿದೆ. ಬ್ರಹ್ಮವೃಕ್ಷದ ಹೂವಿಗೆ ಸುಗಂಧವಿರುವುದಿಲ್ಲ.
ಬ್ರಹ್ಮವೃಕ್ಷ ಹೂಗಳನ್ನು ನೋಡುವುದೇ ಚಂದ. ಈ ಬ್ರಹ್ಮ ವೃಕ್ಷದಲ್ಲಿ ಕೆಂಪು, ಹಳದಿ, ನೀಲಿ ಮತ್ತು ಬಿಳಿಯ ನಾಲ್ಕು ಪ್ರಭೇದಗಳಿವೆ. ಹೋಮ ಹವನಗಳಿಗೆ ಬ್ರಹ್ಮವೃಕ್ಷದ ಕಡ್ಡಿಯನ್ನು ಬಳಸುವುದುಂಟು. ಆದ್ದರಿಂದ ಈ ಮರಕ್ಕೆ ಬ್ರಹ್ಮವೃಕ್ಷ ಎಂಬ ಹೆಸರು ಇದೆ. ಈ ಮರದ ಚಿಗುರೆಲೆ, ಹೂವು, ಬೀಜ, ಬೇರು ಮತ್ತು ಅಂಟು ಉಪಯುಕ್ತ ಭಾಗಗಳಾಗಿವೆ. ಆಯುರ್ವೇದದಲ್ಲಿ ಇದರ ಔಷಧಿ ಗುಣಗಳು ಸ್ಪಷ್ಟವಾಗಿ ತಿಳಿಸಲಾಗಿದೆ. ಉದಾಹರಣೆಗೆ: ಮೂಲವ್ಯಾಧಿಯ ತೊಂದರೆಯಿಂದ ಬಳಲುವವರು ಎಳೆ ಎಲೆಯನ್ನು ಮಜ್ಜಿಗೆಯಲ್ಲಿ ಅರೆದು ಕುಡಿವುದುಂಟು.
ಗರ್ಭಿಣಿಯರು ಪ್ರತಿ ದಿನ ಒಂದು ಬ್ರಹ್ಮವೃಕ್ಷದ ಚಿಗುರೆಲೆಯನ್ನು ಹಾಲಿನಲ್ಲಿ ಅರೆದು ಕುಡಿಯುವುದರಿಂದ ಹುಟ್ಟುವ ಮಗುವು ಶಕ್ತಿವಂತವಾಗಿರುತ್ತದೆ ಎಂದು ಆಯುರ್ವೇದದಲ್ಲಿ ಹೇಳುವುದುಂಟು. ಚಿಗುರು ಎಲೆಯು ಊತ ರೋಗ, ಹೊಟ್ಟೆನೋವು, ಚರ್ಮರೋಗಗಳಿಗೂ ಉಪಯುಕ್ತವಾಗಿ ಕೆಲಸ ನಿರ್ವಹಿಸುತ್ತದೆ ಎಂಬುದು ಸಹ ಆಯುರ್ವೇದದಲ್ಲಿ ಹೇಳಲಾಗಿದೆ. ಬ್ರಹ್ಮವೃಕ್ಷದ ಕಾಂಡದಿಂದ ಬರುವ ಅಂಟು ಕೆಮ್ಮು, ಬಾಯಿ ಹುಣ್ಣಿನಿಂದ ಬಳಲುವವರಿಗೆ ಉಪಯುಕ್ತ. ಚೇಳು ಕಚ್ಚಿದಾಗ ಬ್ರಹ್ಮವೃಕ್ಷದ ಬೀಜವನ್ನು ಎಕ್ಕದ ಹಾಲಿನಲ್ಲಿ ಅರೆದು ಹಚ್ಚಿದರೆ ವಿಷದ ಬಾಧೆ ಕಡಿಮೆಯಾಗುತ್ತದೆ ಎಂಬುದನ್ನು ಆಯುರ್ವೇದ ಹೇಳುತ್ತದೆ. ಆಯುರ್ವೇದದ ವೈದ್ಯರು ಬ್ರಹ್ಮವೃಕ್ಷದ ಔಷಧಿ ಗುಣಗಳನ್ನು ಇನ್ನೂ ಸಂಶೋಧಿಸುತ್ತಿದ್ದಾರೆ. ಬೇಸಿಗೆಯಲ್ಲಿ ಬಿದ್ದ ಬೀಜಗಳು ಮಳೆಗಾಲದಲ್ಲಿ ಕೊಚ್ಚಿ ಹೋಗಿ ಕಾನನವೆಲ್ಲ ಸಸಿಗಳಾಗಿ ಹುಟ್ಟಿ ದೊಡ್ಡ ಮರವಾಗಿ ಬೆಳೆಯುತ್ತವೆ. ಬ್ರಹ್ಮವೃಕ್ಷ ಹೂ ಬಿಟ್ಟಾಗ ಹೆಚ್ಚಾಗಿ ನೇರಳೆ ಸೂರಕ್ಕಿ, ಬಿಳಿ ಕೋಗಿಲೆ(ಮಟಪಕ್ಷಿ), ಜೇನುನೊಣಗಳು ಅಲ್ಲಿ ಕಾಣುತ್ತವೆ. ಒಟ್ಟಾರೆಯಾಗಿ ಬಹುಪಯೋಗಿ ಮರವಾದ ಬ್ರಹ್ಮವೃಕ್ಷ ಹೂ ಬಿಟ್ಟಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಾವನೆಗಳು ಮೂಡಿ ಬರುತ್ತವೆ.
ಕವಿಗಳನ್ನು ಕಾಡಿರುವ ಈ ಬ್ರಹ್ಮವೃಕ್ಷವು ಹಲವು ಕವನಗಳು ಹುಟ್ಟಲೂ ಕಾರಣವಾಗಿದೆ. ಬ್ರಹ್ಮವೃಕ್ಷ ಮರದ ರಕ್ಷಣೆಯಿಂದ ಪ್ರಕೃತಿಯ ಸೌಂದರ್ಯದ ಜೊತೆಗೆ ಸ್ಥಳೀಯವಾಗಿ ಉದ್ಯೋಗವನ್ನು ಕಲ್ಪಿಸುವ ಕಾಮಧೇನುವಾಗಬಲ್ಲದು. ಪ್ಲಾಸ್ಟಿಕ್ ಹಾಳೆ, ತಟ್ಟೆಗಳ ಬದಲಿಗೆ ಬಾಳೆಎಲೆ, ಬ್ರಹ್ಮವೃಕ್ಷದ ಎಲೆಯ ಹಾಳೆಗಳು ಎಲ್ಲ ಸಮಾರಂಭಗಳಲ್ಲಿ ಬಳಸಿದರೆ ಈ ಮರದ ಎಲೆಯಿಂದ ತಯಾರಿಸಿದ ಪತ್ರೊಳಿಗಳು ಸ್ವಯಂ ಉದ್ಯೋಗ ಕಲ್ಪಿಸಲು ನೆರವಾಗಬಲ್ಲದು. ಪ್ರಕೃತಿಗೆ ರಂಗುತುಂಬುವ ಈ ಮರವನ್ನು ನಾಶ ಮಾಡದೆ ಅದರ ಸಹಜ ಸೌಂದರ್ಯವನ್ನು ಕಾಪಾಡಿಕೊಂಡು ಹೋಗಬೇಕಾಗಿದೆ. ಗುಡಿ ಕೈಗಾರಿಕೆಯಲ್ಲಿ ಮತ್ತು ದೊಡ್ಡ ಕಾರ್ಖಾನೆಯಲ್ಲಿ ಬ್ರಹ್ಮವೃಕ್ಷದ ಬೀಜಗಳಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ಮರದ ಎಣ್ಣೆಯನ್ನು ಬಿತ್ತನೆಗೆ ಕೂಡ ಉಪಯೋಗಿಸುವುದುಂಟು. ಈ ಎಣ್ಣೆಯನ್ನು ಸಾಬೂನುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಎಣ್ಣೆ ತೆಗೆದ ನಂತರ ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿಸಿಕೊಳ್ಳುತ್ತಾರೆ. ಪ್ರಕೃತಿ ಚೆಲುವಿನ ಬ್ರಹ್ಮವೃಕ್ಷ ಸಂತತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಅರಣ್ಯ ಇಲಾಖೆ ಮುಂದಾಗಿದೆ. ಎಲ್ಲ ನರ್ಸರಿಗಳಲ್ಲಿ ಬ್ರಹ್ಮವೃಕ್ಷ ಸಸಿಬೆಳೆಸಿ ವಿತರಣೆ ಮಾಡುವ ಯೋಜನೆಯನ್ನು ಅರಣ್ಯ ಇಲಾಖೆ ಹಾಕಿಕೊಂಡಿದೆ. ತೆಂಗಿನ ಮರ ಬಿಟ್ಟರೆ ಬ್ರಹ್ಮವೃಕ್ಷವೂ ಕಲ್ಪವೃಕ್ಷವೆಂದು ಖ್ಯಾತಿ ಪಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಚಿತ್ರ – ಲೇಖನ: : ವಿಜಯ ಕುಮಾರ್ ಹೆಚ್. ಕೆ.
ರಾಯಚೂರು ಜಿಲ್ಲೆ