ನೀವೂ ಕಾನನಕ್ಕೆ ಬರೆಯಬಹುದು
ಹಿಂದಿನ ಕಾಲದಲ್ಲಿ ಪ್ರತೀ ಹಳ್ಳಿಗೂ ಒಂದೊಂದು ಕೆರೆ, ಕುಂಟೆ, ಇರುತ್ತಿತ್ತು. ಕೆರೆ ಕಟ್ಟೆಯ ಕೆಳಗೆ ವಿಸ್ತಾರವಾದ ಗದ್ದೆಗಳು, ಕೆರೆ ತುಂಬಿದರೆ ಕೆರೆಗಳಿಂದ ಕೆರೆಗಳಿಗೆ ನೀರು ಹರಿಯಲು ಕಾಲುವೆಗಳು. ಹೀಗೆ ನಮ್ಮ ಪೂರ್ವಜರಿಗೆ ಈ ಕೆರೆ, ಕುಂಟೆ, ನದಿ ಮೊದಲಾದ ಜೌಗು ಪ್ರದೇಶಗಳಿಗೆ ಪ್ರಾಮುಖ್ಯತೆ ನೀಡಿದ್ದರು, ಹಾಗೂ ಕಾಲ ಕಾಲಕ್ಕೆ ಅವಶ್ಯಕತೆಗೆ ತಕ್ಕಂತೆ ಕೆರೆಗಳನ್ನ ನಿರ್ಮಿಸುತ್ತಿದ್ದರಂತೆ. ಆದರೆ ಕಾಲ ಎಷ್ಟು ಬದಲಾಗಿದೆ ಅಲ್ಲವೇ?
ಇಂದು ಯಾವ ಕೆರೆಯನ್ನ ನೋಡಿದರೂ ಖಾಲಿ ಖಾಲಿ, ಅಕಸ್ಮಾತ್ ತುಂಬಿರುವ ಕೆರೆ ಇದ್ದರೆ ಅದೂ ಕಂಡಿತಾ ಕುಡಿಯಲು ಅಥವಾ ಬಳಸಲು ಯೋಗ್ಯವಿಲ್ಲದ ಕೊಳಚೆ ನೀರು. ಇನ್ನು ಹಲವಾರು ಮಹಾಶಯರು ಕೆರೆ ಕಾಲಿಯಾಗುವುದನ್ನೇ ಕಾಯುತ್ತಾರೆ ಅದನ್ನ ಮುಚ್ಚಿ ನಿವೇಶನ ಮಾಡಲು. ಬೆಂಗಳೂರಿನಂತಹ ಮಹಾ ನಗರದಲ್ಲಿ ಎಷ್ಟೋ ಕೆರೆಗಳು ನಿವೇಶನ, ಮೈದಾನ, ಬಸ್ ನಿಲ್ದಾಣಗಳಾಗಿ ಮಾರ್ಪಟ್ಟಿರುವುದು ವಿಪರ್ಯಾಸ.
ಹೋದ ತಿಂಗಳು ನಮ್ಮ ಬೆಂಗಳೂರಿನಲ್ಲಿ ಅಳಿದುಳಿದ ವಿಸ್ತಾರವಾದ ಹುಳಿಮಾವು ಕೆರೆಯ ಕೋಡಿಯನ್ನೇ ಹೊಡೆದು ನೀರು ಖಾಲಿ ಮಾಡುವ ಹುನ್ನಾರವೇ ನಡೆದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹೇಳಲಾಗುತ್ತಿತ್ತು. ಬಹುಶಃ ಇದೂ ಕೂಡ ಯಾವುದೋ ನಿವೇಶನ ಅಥವಾ ಜಾಗ ಕಬಳಿಸುವ ಸಂಚು ಇರಬಹುದು. ಹಿಂದೆ ಅಕ್ಷರ ಜ್ಞಾನ ಅರಿಯದ ನಮ್ಮ ಪೂರ್ವಜರಿಗೆ ಜೌಗು ಪ್ರದೇಶದ ಮಹತ್ವ ತಿಳಿದಿತ್ತು ಹಾಗಾಗಿ ಕೆರೆ ಕಟ್ಟೆಗಳನ್ನ ನಿರ್ಮಿಸುತ್ತಿದ್ದರು. ಆದರೆ ಇಂದಿನ ಸೋ ಕಾಲ್ಡ್ ವಿದ್ಯಾವಂತರಾದ ನಮ್ಮಲ್ಲಿ ಈ ಜೌಗು ಪ್ರದೇಶ ದ ಮಹತ್ವದ ಬಗ್ಗೆ ಅರಿವೆ ಇಲ್ಲದಾಗಿದೆ.
ಹಾಗಾದರೆ ಈ ಜೌಗು ಪ್ರದೇಶ ಎಂದರೇನು? ಇವುಗಳ ಪ್ರಾಮುಖ್ಯತೆಗಳೇನು?
ಯಾವ ಪ್ರದೇಶ ಶಾಶ್ವತವಾಗಿ ಅಥವಾ ಕಾಲಕ್ಕೆ ತಕ್ಕಂತೆ ನೀರಿನಿಂದ ಆವೃತವಾಗಿರುತ್ತದೋ ಆ ಪ್ರದೇಶವನ್ನ ಜೌಗು ಪ್ರದೇಶ ಎನ್ನುತ್ತಾರೆ. ಸಣ್ಣಸಣ್ಣ ತೊರೆಗಳು, ಕೆರೆಗಳು, ನದಿಗಳು,ಹವಳದ ದಿಣ್ಣೆಗಳು, ಮ್ಯಾಗ್ರೋ ಕಾಡುಗಳು ಮೊದಲಾದವು ನೈಸರ್ಗಿಕ ಜೌಗು ಪ್ರದೇಶಗಳಾದರೆ ಭತ್ತದ ಗದ್ದೆ, ಮೀನುಸಾಕಾಣೆ ಕುಂಟೆಗಳು, ಉಪ್ಪಿನ ಇಂಗು ಗುಂಡಿಗಳು ಮಾನವ ನಿರ್ಮಿತ ಜೌಗು ಪ್ರದೇಶಗಳಾಗಿವೆ. ಹಿಂದೆ ಈ ಜೌಗು ಪ್ರದೇಶಗಳ ಪ್ರಾಮುಖ್ಯತೆ ಹಾಗೂ ಪರಿಸರದಲ್ಲಿ ಅವುಗಳ ಪಾತ್ರದ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿರಲಿಲ್ಲ ಹಾಗಾಗಿ 2ನೇ ಫೆಬ್ರವರಿ 1971 ರಂದು ಕ್ಯಾಸ್ಟಿಯನ್ ಸಮುದ್ರದ ತೀರದಲ್ಲಿರುವ ರಮ್ ಸರ್ ನಲ್ಲಿ ನಡೆದ ಜೌಗು ಪ್ರದೇಶಗಳ ಸಮಾವೇಶದಲ್ಲಿ ಈ ಜೌಗು ಪ್ರದೇಶಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತೀ ವರ್ಷ 2ನೇ ಫೆಬ್ರವರಿ ಯಂದು ವಿಶ್ವ ಜೌಗು ಪ್ರದೇಶದ ದಿನ ಎಂದು ಆಚರಿಸಲು ತೀರ್ಮಾನಿಸಲಾಯಿತು. ಪ್ರತೀ ವರ್ಷ ಒಂದೊಂದು ಶೀರ್ಷಿಕೆಯೊಂದಿಗೆ ಆಚರಿಸುತ್ತಾ ಬಂದಿದ್ದು ಈ ವರ್ಷ ಜೌಗು ಪ್ರದೇಶ ಮತ್ತು ಅದರ ಜೀವ ವೈವಿಧ್ಯತೆ ಎಂಬ ಶೀರ್ಷಿಕೆಯೊಂದಿಗೆ ಜೌಗು ಪ್ರದೇಶ ಹಾಗು ಅದರಲ್ಲಿರುವ ಜೀವವೈವಿಧ್ಯತೆಯ ಮಹತ್ವವನ್ನ ತಿಳಿಸುವ ಸಲುವಾಗಿ ಈ ಶೀರ್ಷಿಕೆಯನ್ನ ಇಟ್ಟಿದ್ದಾರೆ.
ಹಾಗಾಗಿ ಜೌಗು ಪ್ರದೇಶ ಹಾಗು ಅವುಗಳ ಮಹತ್ವವನ್ನ ತಿಳಿಸುವ ಲೇಖನಗಳು ಹಾಗೂ ಕವನಗಳನ್ನ ನಮ್ಮ ಈ ಇ-ಮಾಸಿಕಕ್ಕೆ ಫೆಬ್ರವರಿ 15ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.