ಸೈನಿಕರಾದ ರೈತರು!
ಗಣರಾಜ್ಯೋತ್ಸವದ ಶುಭಾಶಯಗಳು. ಗಣರಾಜ್ಯೊತ್ಸವ ಎಂಬುದು ಕೇವಲ ಒಂದು ರಾಷ್ಟ್ರೀಯ ರಜೆಯ ದಿನವಲ್ಲದೆ, ನಮ್ಮ ಸಂವಿಧಾನ ರೂಪುಗೊಂಡು ನಾವೆಲ್ಲಾ ಭರತ ದೇಶದ ಸ್ವತಂತ್ರ ಪ್ರಜೆಗಳು ಎಂದು ಸಾರುವ ದಿನವೂ ಆಗಿದೆ. ಇಲ್ಲಿನ ಪ್ರಜೆಗಳು ನೆಮ್ಮದಿಯಿಂದ ಬಾಳು ಸಾಗಿಸಲು ಮುಖ್ಯ ಕಾರಣವಾದ ನಮ್ಮ ದೇಶ ಕಾಯುವ ಸೈನಿಕರನ್ನ ನೆನಪಿಸುವ ದಿನವಾಗಿಸೋಣ. ಹಾಗೆಂದು ನಮ್ಮ ದೇಶ ಕಾಯುವ ಸೈನಿಕರು ಗಡಿಯಲ್ಲಿ ಮಾತ್ರ ಇದ್ದಾರೆ ಎಂದೆಣಿಸಬೇಡಿ. ಒಂದು ಬಿಲಿಯನ್ ಗೂ ಹೆಚ್ಚು ಬಾಯಿಗಳಿರುವ ನಮ್ಮ ದೇಶದ ಹೊಟ್ಟೆಗಳನ್ನು ತುಂಬಿಸಲು ನಮ್ಮ ರೈತರು ಸಹ ಹಲವಾರು ಕಷ್ಟ-ಕಾರ್ಪಣ್ಯಗಳ ಜೊತೆಗೆ ಸೆಣೆಸಾಡಿ ನಮಗೆಲ್ಲ ಉಣಬಡಿಸುವುದರ ಮೂಲಕ ಸೈನಿಕರ ಗೌರವವನ್ನು ಪಡೆಯುತ್ತಾರೆ. ನಿಜವಾಗಿಯೂ ರೈತರು ನಮ್ಮ ದೇಶದ ಒಳಗಿನ ಸೈನಿಕರೇ!
ಶೀರ್ಷಿಕೆಗೆ ಸರಿಹೊಂದುವ ಮಾತುಗಳಿವೆ ಎಂದು ಇಲ್ಲಿಗೇ ನಿಲ್ಲಿಸಿಬಿಟ್ಟೀರಿ. ನಿಮ್ಮ ಹುಬ್ಬೇರಿಸುವಂತಹ ಹೊಸ ವಿಷಯವನ್ನ ಹೇಳದೇ ನಾನೆಂದಾದರೂ ವಿದಾಯ ಹೇಳಿದ್ದುಂಟೆ? ಮತ್ತೇ…? ಮುಂದೆ ಬನ್ನಿ. ನಿಮಗೆ ಚೆನ್ನಾಗಿಯೇ ಪರಿಚಯವಿರುವ ಒಂದು ದೇಶದಲ್ಲಿ ರೈತರೇ ಎದ್ದು ಸೈನಿಕರಂತೆ ತಮ್ಮ ದೇಶವನ್ನು ಆಪತ್ಕಾಲದಲ್ಲಿ ಹೋರಾಡಿ ಉಳಿಸಿಕೊಳ್ಳುತ್ತಾರೆ. ಆ ದೇಶವಾವುದು? ಹೇಳಿ ನೋಡೋಣ…
ಮುಂದೆ ಓದುವ ಮುಂಚೆ ಒಮ್ಮೆ ಯೋಚಿಸಿ ಒಂದು ಉತ್ತರವನ್ನ ಹೇಳಿ…
ಅಲ್ಲ…! ಹೋಗಲಿ ಬಿಡಿ ಅದನ್ನು ನಾನೇ ಹೇಳಿಬಿಡುತ್ತೇನೆ. ಅದೂ… ನಮಗೆಲ್ಲ ಸುತ್ತಮುತ್ತಲು ಕಾಣಸಿಗುವ ಹಚ್ಚ-ಹಸಿರಿನಿಂದ ಕೂಡಿದ ಸಸ್ಯಕೋಟಿಗಳು. ಹೌದು, ಸಸ್ಯಗಳಲ್ಲಿ ಎಲ್ಲಾ ಭಾಗಗಳಿಗೆ ಆಹಾರವನ್ನು ಉತ್ಪಾದಿಸಿ ಉಣಿಸುವ ರೈತರೆಂದರೆ ಎಲೆಯಲ್ಲಿರುವ ಪತ್ರಹರಿತ್ತಿನ ಕ್ಲೋರೋಪ್ಲಾಸ್ಟ್ ಗಳು ಎಂದರೆ ತಪ್ಪಾಗುವುದೇನು? ಖಂಡಿತ ಇಲ್ಲ! ಹಾಗೆ… ಈ ಮೇಲೆ ಹೇಳಿದ ಹಾಗೆ, ವಿಶೇಷವೆಂದರೆ ಈ ರೈತರು ಕೇವಲ ಆಹಾರವನ್ನು ಉತ್ಪಾದಿಸಲು ಮೀಸಲಿರದೆ, ಸಸ್ಯದ ಮೇಲೆ ಯಾವುದಾದರೂ ಸೂಕ್ಷ್ಮಜೀವಿಯಿಂದ ದಾಳಿಯಾದರೆ ಸೈನಿಕರಂತೆ ಹೋರಾಡಿ ಸಸ್ಯವನ್ನು ರೋಗಗಳಿಂದ ಕಾಪಾಡುತ್ತವೆ. ಎಂಬುದು ಹೊಚ್ಚ ಹೊಸ ಸುದ್ದಿ!!
ಹೇಗೆ..? ಎಂದು ತಿಳಿಯಲು ಎಂದಿನ ಹಾಗೆಯೇ ಮುಂದೆ ಓದಿ…
ಸಸ್ಯಗಳ ರೋಗಗಳ ಬಗ್ಗೆ ಅಧ್ಯಯನ ಮಾಡುವ ಲಂಡನ್ ನ ಇಂಪೀರಿಯಲ್ ಕಾಲೇಜ್ ನ ತೋಲ್ಗ ಬೋಜ್ಕುರ್ಟ್ ಎಂಬ ವಿಜ್ಞಾನಿಯು ಈ ವಿಷಯದ ಬಗ್ಗೆ ಹೆಚ್ಚು ತಿಳಿಯಲೆಂದು, ಭಂಗಿ ಸೊಪ್ಪಿನ ಜಾತಿಗೆ ಸೇರುವ ಒಂದು ಸಸ್ಯ(Nicotiana benthamiana)ದ ಮೇಲೆ ಶಿಲೀಂದ್ರಕ್ಕೆ ಸೇರುವ ಒಂದು ರೋಗಕಾರಕ ಸೂಕ್ಷ್ಮಜೀವಿ(Phytophthora infestans)ಯನ್ನು ಪ್ರಯೋಗಿಸಿದರು. ಹಾಗೂ ಅವರು ಕ್ಲೋರೋಪ್ಲಾಸ್ಟ್ ಗಳು ಸೂರ್ಯನ ಬೆಳಕು ಬೀಳುವ ಜಾಗಕ್ಕೆ ಚಲಿಸಿ, ಹೋಗಿ ಆಹಾರ ತಯಾರಿಸಲು ಅನುಕೂಲ ಆಗುವಂತೆ ನೆರವಾಗುತ್ತಿದ್ದ chloroplast unusual positioning 1,(CHUP1) ಎಂದು ಕರೆಯಲ್ಪಡುವ ಪ್ರೋಟೀನ್ ನ ಸಹಾಯದಿಂದ ಸೋಂಕು ತಗುಲಿದ ಜಾಗಕ್ಕೆ ತೆವಳಲು ಆ ಪ್ರೋಟೀನನ್ನು ಉಪಯೋಗಿಸಿಕೊಳ್ಳುತ್ತವೆಯೇನೋ ಎಂದು ಊಹಿಸಿದರು. ಪ್ರಯೋಗವನ್ನು ಹಾಗೆ ಮುಂದುವರೆಸಿ ಈ CHUP1 ಎಂಬ ಪ್ರೋಟೀನನ್ನು ನಿಷ್ಕ್ರಿಯಗೊಳಿಸಿದರು, ಆಗ ಕ್ಲೋರೋಪ್ಲಾಸ್ಟ್ ಗಳು ರೋಗಕಾರಕಗಳು ಬಂದಾಗ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ. ಆದರೆ ಪ್ರೋಟೀನ್ ಸಕ್ರಿಯವಾಗಿದ್ದಾಗ ತಮ್ಮ ಆಹಾರ ತಯಾರಿಕೆಯನ್ನು ನಿಲ್ಲಿಸಿ, ಸೋಂಕು ತಗುಲಿದ ಜಾಗಕ್ಕೆ ತೆರಳಿ ಸೈನಿಕರಂತೆ ಹೋರಾಡುತ್ತಿದ್ದವು.
ಸೋಂಕು ತಗುಲಿದ ತಕ್ಷಣ ಕ್ಲೋರೋಪ್ಲಾಸ್ಟ್ ಗಳಿಗೆ ಕೇವಲ ಆ ಜಾಗಕ್ಕೆ ತೆರಳಲು ಸಂದೇಶ ಸಿಗದೇ, ಅವುಗಳ ಜೀವಕೋಶದಿಂದ ಬೆರಳುಗಳ ರೀತಿಯಲ್ಲಿ ಅಂಗಗಳು ಹೊರ ಬಂದು ರೋಗಕಾರಕ ಜೀವಿಗೆ ಚುಚ್ಚಿ, ತಮ್ಮ ಆಹಾರ ತಯಾರಿಕೆ ಸಮಯದಲ್ಲಿ ಹೊರಬರುತ್ತಿದ್ದ ವಿಷಕಾರಕ ಅಂಶಗಳನ್ನು ಅದರೊಳಗೆ ಸೇರಿಸುತ್ತಿದ್ದವಂತೆ. ಹಾಗೂ ಆ ಸೂಕ್ಷ್ಮಜೀವಿ ಸಂಕುಚಿತವಾಗುವ ರೀತಿಯಲ್ಲಿ ತಿವಿಯುತ್ತಿದ್ದವಂತೆ.
ಕ್ಲೋರೋಪ್ಲಾಸ್ಟ್ ಗಳ ಈ ಪ್ರತಿಕ್ರಿಯೆ ನೋಡಿ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು, ಎನ್ನುತ್ತಾರೆ ಬೋಜ್ಕುರ್ಟ್, ಕ್ಲೋರೋಪ್ಲಾಸ್ಟ್ ಗಳ ಈ ನಡವಳಿಕೆ ನೋಡಿದರೆ ಸಾವಿರಾರು ವರುಷಗಳ ಹಿಂದೆ ಅವುಗಳು ಸ್ವತಂತ್ರವಾಗಿ ಏಕಾಕೋಶ ಆಹಾರ ತಯಾರಿಸುವ ಬ್ಯಾಕ್ಟೀರಿಯಾಗಳಂತೆ ಇರುವಾಗ ನೀಡುತ್ತಿದ್ದ ಪ್ರತಿಕ್ರಿಯೆಗೆ ಹೋಲುತ್ತಿದೆ. ಜೊತೆಗೆ ಕ್ಲೋರೋಪ್ಲಾಸ್ಟ್ ಗಳ ಈ ಪ್ರತಿಕ್ರಿಯೆ ಅಥವಾ ರಕ್ಷಣಾ ನಡವಳಿಕೆ ಬಹುಶಃ ಇವುಗಳ ಹಿಂದಿನ ರಕ್ಷಣಾ ವ್ಯವಸ್ಥೆಯಿಂದ ಬಂದಿರಬಹುದು ಎಂದು ಅಭಿಪ್ರಾಯಪಡುತ್ತಾರೆ.
ನಿಮ್ಮ ಅಭಿಪ್ರಾಯಗಳನ್ನು ನಮಗೆ ಬರೆದು ತಿಳಿಸಿ,
ಮೂಲ ಲೇಖನ: ScienceNewsforStudents
–ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.