ಮಯೂರ ನರ್ತನ
ನಾಗರಹೊಳೆ ಹುಲಿ ಯೋಜನೆಯ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟಿ ವಲಯದ ಕಾಡಿನಲ್ಲಿ ವನ್ಯಜೀವಿ ಛಾಯಾಗ್ರಹಣಕ್ಕಾಗಿ ಅರಣ್ಯ ಇಲಾಖೆಯ ವಾಹನದಲ್ಲಿ ನಾವು ಸಾಗುತ್ತಿದ್ದೆವು. ಶುಭ್ರವಾದ ನೀಲಾಕಾಶ, ಆಗ ತಾನೇ ಉದಯಿಸಿದ ಭಾಸ್ಕರನಿಂದ ಖಗ-ಮೃಗಗಳು ಚಟುವಟಿಕೆ ಪ್ರಾರಂಭಿಸಿದ್ದವು. ನವಿಲುಗಳು ಮೇ-ಆವ್ಹ್… ಮೇ-ಆವ್ಹ್… ಮೇ-ಆವ್ಹ್… ಎಂದು ಕಾಡೆಲ್ಲ ಮಾರ್ಧನಿಸುವಂತೆ ಕೂಗುತ್ತಿದ್ದವು. ಇದ್ದಕ್ಕಿದ್ದಂತೆ ಕಪ್ಪನೆಯ ಹೆಪ್ಪುಗಟ್ಟಿದ ಕಾರ್ಮೋಡಗಳು ತೇಲಲಾರಂಭಿಸಿ ಮಳೆ ಬರುವ ಮುನ್ಸೂಚನೆ ನೀಡಿತು. ವಾಹನ ನಿಧಾನವಾಗಿ ಚಲಿಸುತ್ತಿತ್ತು. ಸ್ವಲ್ಪ ದೂರದಲ್ಲಿ ಪೊದೆಯ ಮುಂದೆ ಗಂಡು ನವಿಲೊಂದು ನಾಟ್ಯವಾಡುವ ದೃಶ್ಯ ಕಂಡ ತಕ್ಷಣ ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚನೆಯಿತ್ತು, ಕುಣಿಯುತ್ತಿದ್ದ ಗರಿಗಣ್ಣ ವಿಹಗನ ಛಾಯಾಚಿತ್ರಣ ಮಾಡತೊಡಗಿದೆ. ನಾಲ್ಕಾರು ಫೋಟೋ ಕ್ಲಿಕ್ಕಿಸುತ್ತಿದ್ದ ಹಾಗೇ ಅಲ್ಲಿಗೆ ನೀಲವೇಣಿಯೂ (ಹೆಣ್ಣು ನವಿಲು) ಬಂದಳು.
ಹೆಣ್ಣು ನವಿಲಿನೊಂದಿಗೆ ಮಿಲನ ಕೂಟಕ್ಕೆ ತವಕಿಸುವ ಗಂಡು ನವಿಲು ಆಕಾಶದಲ್ಲಿ ಕಾರ್ಮೋಡಗಳು ತೇಲಿದಾಗ, ಇಲ್ಲವೇ ಮಳೆ ಬರುವ ಮುನ್ಸೂಚನೆ ಸಿಕ್ಕಾಗ, ಮಳೆ ಬಾರದಿದ್ದರೂ ಗಂಡು ನವಿಲುಗಳು ಸಂಭ್ರಮಿಸುತ್ತ ನಾಟ್ಯವಾಡಲು ಪ್ರಾರಂಭಿಸುತ್ತವೆ. ಅವು ನೃತ್ಯ ಮಾಡುವಾಗ ತಮ್ಮ ಗರಿಗಳು ಒಂದಕ್ಕೊಂದು ಬಡಿದು ಮಳೆಹನಿ ಧರೆಗೆ ಸಿಂಚನಗೈಯುವ ಮುಸಲಧಾರೆ ಹನಿಗಳು ಬಿದ್ದ ಸಪ್ಪಳದಂತೆ ಭಾಸವಾಗುತ್ತದೆ. ಇದು ಹೆಣ್ಣು ನವಿಲಿಗೆ ಮುಸಲಧಾರೆ ಬಿತ್ತೆಂದು ನಂಬಿಸಿ ಮಿಲನ ಕೂಟಕ್ಕೆ ಆಕರ್ಷಿಸುವ ಮೋಹಕ ನಾಟ್ಯರೂಪಕವಾಗಿದೆ.
ಸಂತಾನಾಭಿವೃದ್ಧಿಯಲ್ಲಿ ಗಂಡಿಗೆ ಸಹಜವಾಗಿ ಅವಸರ ಹೆಚ್ಚು. ಆದರೆ ಹೆಣ್ಣು ನವಿಲು ಪ್ರಸ್ತುತ ಸನ್ನಿವೇಶ ಸಂದರ್ಭಗಳನ್ನು ಅಂದರೆ ನಿಸರ್ಗದಲ್ಲಿ ಮುಂಬರುವ ನವಜಾತ ಮರಿಗಳಿಗೆ ಆಹಾರದ ಲಭ್ಯತೆಯನ್ನು ಅರಿತು ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ. ನವಿಲು ಜಾತಿಯ ಗಂಡು-ಹೆಣ್ಣುಗಳು ಮಿಲನಗೊಳ್ಳದೆ ಮೊಟ್ಟೆಗಳನ್ನಿಡುತ್ತವೆ, ಅದಕ್ಕಾಗಿ ಇವಕ್ಕೆ “ಪಾಪವಿಲ್ಲದ ಪಿಂಡ”ದ ಪಕ್ಷಿಗಳು ಎನ್ನುತ್ತಾರೆ ಎಂದು ನಮ್ಮ ಹಿರೀಕರಲ್ಲಿ ನಂಬಿಕೆ ಇದೆ. ಅವರು ಹೇಳುವಂತೆ ಗಂಡು ನವಿಲು ನೃತ್ಯ ಮಾಡುತ್ತಾ ಕಾಲನ್ನು ನೋಡಿಕೊಳ್ಳುತ್ತವೆ. ನಾನು ಎಷ್ಟು ಸುರಸುಂದರಾಂಗನಾಗಿರುವೆ, ಆದರೆ ನನ್ನ ಕಾಲುಗಳು ಸುಂದರವಾಗಿಲ್ಲವೆಂದು ಕಣ್ಣೀರಿಡುತ್ತದೆ. ನೆಲಕ್ಕೆ ಬಿದ್ದ ಆ ಕಣ್ಣೀರ ಹನಿಗಳನ್ನು ಹೆಣ್ಣು ನವಿಲು ಹೆಕ್ಕಿ ಕುಡಿದು ಗರ್ಭಧರಿಸುತ್ತದೆ ಎಂದು ನಂಬಿದ್ದಾರೆ. ಈ ಸನ್ನಿವೇಶದಲ್ಲಿ ಹೆಣ್ಣು ನವಿಲು ನೆಲದಲ್ಲಿ ಹೆಕ್ಕಿ ಕುಡಿಯುವುದು ಗಂಡಿನ ಕಣ್ಣೀರನ್ನಲ್ಲ ಬದಲಿಗೆ ಗಂಡು ನೃತ್ಯ ಮಾಡುತ್ತಾ ಹೆಣ್ಣಿಗಾಗಿ ನೆಲದಲ್ಲಿ ಬಿದ್ದ ಎಲೆ, ಕಡ್ಡಿಕಸಗಳನ್ನು ಕೆದರಿ ಹುಳು-ಹುಪ್ಪಟೆಗಳು ಮೇಲೆ ಬರುವಂತೆ ಮಾಡಿ “ಮಿಲನದೂಟ” (ಮಧುಚಂದ್ರ ರಾತ್ರಿಯಲ್ಲಿ ಹಣ್ಣು-ಹಂಪಲು, ಸಿಹಿ ಖಾದ್ಯಗಳನ್ನು ತಿನ್ನಲು ಇಡುವಂತೆ) ನೀಡುವಂತೆ ಮಾಡುತ್ತದೆ. ಆಗ ಅಲ್ಲಿಗೆ ಬಂದ ಹೆಣ್ಣು ನವಿಲು ಆ ಕೀಟ, ಹುಳು-ಹುಪ್ಪಟೆ ಗಳನ್ನು ಹೆಕ್ಕಿತಿನ್ನುವುದನ್ನು ನೋಡಿ ಕಣ್ಣೀರು ಕುಡಿಯುತ್ತವೆ ಎಂದು ತಪ್ಪಾಗಿ ಭಾವಿಸಿದ್ದಾರೆ.
ನವಿಲುಗಳನ್ನು ಪಕ್ಷಿಶಾಸ್ತ್ರೀಯವಾಗಿ ‘ಪಾವೋ ಕ್ರಿಸ್ಟಟಸ್’ ( Pavo cristatus) ಎಂದು ಹೆಸರಿಸಿ ‘ಗ್ಯಾಲಿಫಾರ್ಮಿಸ್’ (Galliformes) ಗಣದ ‘ಫಸಿಯಾನಿಡೇ’ (Phasianidae) ಕುಟುಂಬಕ್ಕೆ ಸೇರಿಸಲಾಗಿದೆ. ಸಂಸ್ಕೃತದಲ್ಲಿ ಶಿಖ, ಮಯೂರ ಎಂಬ ಹೆಸರುಗಳಿವೆ. ತುಳುವಿನಲ್ಲಿ ನವಿಲ್ ಎಂದು, ಬೆಟ್ಟಕುರುಬರು ಮೀಲ ಎಂದು, ಕೊಡವರು ಮೈಲ್ ಎಂದು, ಹಕ್ಕಿಪಿಕ್ಕಿಗಳು ದಿಗಾಡೊ ಎಂದು ಕರೆಯುತ್ತಾರೆ. ಕನಕದಾಸರು ತಮ್ಮ ಕಾವ್ಯಗಳಲ್ಲಿ ನವಿಲ, ನೀಲಕಂಠ, ಮಯೂರ, ರೋಮಾಕ್ಷ, ಗರಿಗಣ್ಣವಿಹಗ, ನೀಲವೇಣಿ, ಮೋರ, ಶಿಖಿ, ನೀಲಕಂಧರ, ಷಣ್ಮುಖವಾಹನ ಎಂದೆಲ್ಲಾ ಉಲ್ಲೇಖಿಸಿದ್ದಾರೆ. ಕನಕದಾಸರ ಮೋಹನತರಂಗಿಣಿ ಕಾವ್ಯದ ಒಂದು ಸಾಂಗತ್ಯದಲ್ಲಿ
ನತ್ತಿಪ ನವಿಲ ನಾಟ್ಯಕೆ ಮೆಚ್ಚಿ ಪುರುಹೂತ
ತೆತ್ತೀಸ ಕೋಟಿ ನಿರ್ಜರರು
ಮುತ್ತಿನ ತ್ಯಾಗವ ಕೊಟ್ಟಂತೆ ಆಲಿಕಲ್
ಬಿತ್ತುದುರಿದವು ಉರ್ವಿಯಲಿ (4-38)
ಇದರ ಭಾವಾರ್ಥವು ನರ್ತಿಸುವ ನವಿಲ ನಾಟ್ಯಕ್ಕೆ ಮೆಚ್ಚಿ ಇಂದ್ರ ಹಾಗೂ ಮೂವತ್ತು ಮೂರು ಕೋಟಿ ದೇವತೆಗಳು ಮುತ್ತುಗಳ ದಾನ ನೀಡಿದಂತೆ ಆಲಿಕಲ್ಲು ಬಿತ್ತ?ಬೀಜ ಭೂಮಿಗೆ ಉದುರಿದವು ಎಂದಾಗಿದೆ.
ಇದು ಸುಮಾರು 110 ಸೆಂ.ಮೀ ಉದ್ದವಾದ ದೊಡ್ಡ ಗಾತ್ರದ ಹಸಿರು ಮಿಶ್ರಿತ ನೀಲ ವರ್ಣ ಸುಂದರ ಪಕ್ಷಿ. ಗಂಡು-ಹೆಣ್ಣುಗಳ ದೇಹ ಲಕ್ಷಣಗಳಲ್ಲಿ ವ್ಯತ್ಯಾಸವಿದ್ದು, ಗಂಡು ಹಕ್ಕಿಯು ಹೊಳೆಯುವ ಹಸಿರು ಮಿಶ್ರಿತ ಕಡು ನೀಲ ವರ್ಣದಿಂದ ಕೂಡಿದೆ. ನೆತ್ತಿಯ ಮೇಲೆ ಶಿಖೆ (ಕುಚ್ಚ) ಇದೆ. ಬಲಿಷ್ಠ ತಿಳಿ ಹಳದಿ ಕೊಕ್ಕು, ಕಣ್ಣಿನ ಸುತ್ತ ಬಿಳಿ ಪಟ್ಟಿ ಇದೆ. ಪಕ್ಕೆ ಭಾಗದ ಪುಕ್ಕಗಳು ತಿಳಿ ಕಂದು ಬಣ್ಣದವು. ಉದ್ದವಾದ ವರ್ಣಮಯ ಚಿತ್ತಾಕರ್ಷಕ ಬಾಲವಿದೆ. ಬಾಲದ ಗರಿಗಳಲ್ಲಿ ಕಣ್ಣಿನಂತಿರುವ ಆಕೃತಿಗಳಿವೆ. ಇವು ಗರಿಗಳನ್ನು ಅಗಲಿಸಿ ನಾಟ್ಯ ಮಾಡುವಾಗ ಸ್ಪಷ್ಟವಾಗಿ ಗೋಚರಿಸುತ್ತವೆ. ಕಾಲುಗಳು ತಿಳಿ ಹಳದಿ ಬಣ್ಣದವು. ಹೆಣ್ಣು ಹಕ್ಕಿಗೆ ಮಿರುಗುವ ಪಾಚಿ ಹಸಿರು ಕತ್ತು, ಬೂದು ರೆಕ್ಕೆಗಳು ಮತ್ತು ಮೋಟು ಬಾಲವಿದೆ.
ನವಿಲುಗಳು “ಬಹುಪತ್ನಿತ್ವ”ದ (Polygamy)” ಹಕ್ಕಿಗಳಾಗಿವೆ. ಗಂಡು ನವಿಲು ಅನೇಕ ಹೆಣ್ಣು ನವಿಲುಗಳೊಂದಿಗೆ ಪ್ರಣಯಗೊಳ್ಳುತ್ತದೆ. ನವಿಲುಗಳು ಪರ್ಣಪಾತಿ ಕಾಡು, ಕುರುಚಲು ಕಾಡು, ಮೈದಾನ ಪ್ರದೇಶ, ತೋಟ, ನೆಡುತೋಪು, ವ್ಯವಸಾಯ ಭೂಮಿ, ಹಳ್ಳಿಗಳ ಊರಿನ ಬಳಿ, ನದಿ ಸರೋವರಗಳ ಪಕ್ಕ, ಬಂಡೆ ಪ್ರದೇಶಗಳ ನೆಲ ಅಥವಾ ಮರಗಳಲ್ಲಿ ಗುಂಪಾಗಿ ವಾಸಿಸುತ್ತವೆ. ಮೇ-ಆವ್ಹ್… ಮೇ-ಆವ್ಹ್… ಮೇ-ಆವ್ಹ್… ಎಂದು ಮಾರ್ದನಿಸುವಂತೆ ಕೂಗುತ್ತವೆ. ನಸುಕಿನ ಜಾವದಲ್ಲಿಯೂ ಕೂಗುವುದು ಉಂಟು. ರಾತ್ರಿ ಸಮಯದಲ್ಲಿ ಎತ್ತರದ ಮರಗಳಲ್ಲಿ ನವಿಲುಗಳು ತಂಗುತ್ತವೆ. ನವಿಲು ನಮ್ಮ ಪುರಾಣಗಳಲ್ಲಿ, ಪ್ರಾಚೀನ ಸಾಹಿತ್ಯದಲ್ಲಿ, ಚಿತ್ರಕಲೆ, ಶಿಲ್ಪಕಲೆಗಳಲ್ಲಿ ಹಾಸು ಹೊಕ್ಕಾಗಿದೆ. ಮೌರ್ಯರು ನವಿಲನ್ನು ತಮ್ಮ ರಾಜಮನೆತನದ ಲಾಂಛನ ಮಾಡಿಕೊಂಡಿದ್ದರು. ಇದು ಷಣ್ಮುಖಸ್ವಾಮಿಯ ವಾಹನವೆಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. 1962ರಲ್ಲಿ ಭಾರತ ಸರ್ಕಾರವು ಇದನ್ನು ರಾಷ್ಟ್ರಪಕ್ಷಿ ಎಂದು ಘೋಷಿಸಿದೆ.
ನವಿಲುಗಳ ಸಂತಾನೋತ್ಪತ್ತಿ ಸಮಯವು ಜನವರಿ-ಅಕ್ಟೋಬರ್ ತಿಂಗಳಾಗಿದೆ. ಈ ಸಮಯದಲ್ಲಿ ಪೊದೆ ಇರುವ ನೆಲದಲ್ಲಿ ಸ್ವಲ್ಪ ಗುಳಿ ಮಾಡಿ ಒಣ ಎಲೆ, ಹುಲ್ಲು, ಕಡ್ಡಿಗಳನ್ನು ಹರಡಿ ಗೂಡು ಕಟ್ಟಿ 4 ರಿಂದ 7 ಕೆನೆ ವರ್ಣದ ಮೊಟ್ಟೆಗಳನ್ನು ಇಟ್ಟು, ಸುಮಾರು 27 ರಿಂದ 29 ದಿನಗಳವರೆಗೆ ಕಾವು ನೀಡಿ ಮರಿ ಮಾಡುತ್ತದೆ. ಮೊಟ್ಟೆಗಳಿಗೆ ಕಾವು ಕೊಡುವ ನವಿಲುಗಳು ಮೊಟ್ಟೆಯ ಸುತ್ತ ಮುತ್ತಲೂ ಓಡಾಡಿಕೊಂಡಿರುತ್ತವೆ. ಹಾವು, ನರಿಗಳು ಮೊಟ್ಟೆಗಳನ್ನು ಕಬಳಿಸುವ ಶತ್ರುಗಳಾಗಿದ್ದು, ಶತ್ರುಗಳನ್ನು ದೂರದಿಂದ ತಮ್ಮ ತೀಕ್ಷ್ಣದೃಷ್ಟಿಯಿಂದ ಗುರುತಿಸಿ, ಶತ್ರುವಿನ ನೋಟವನ್ನು ತಮ್ಮತ್ತ ಸೆಳೆಯುವಂತೆ ಮಾಡಿ ಆಗುವ ಅಪಾಯವನ್ನು ತಪ್ಪಿಸಿ ಮೊಟ್ಟೆಗಳನ್ನು ರಕ್ಷಿಸಿಕೊಳ್ಳುತ್ತವೆ. ಇವುಗಳು ಸುಮಾರು 20 ವರ್ಷಗಳ ಕಾಲ ಜೀವಿಸಬಲ್ಲವು. ನವಿಲುಗಳು ಮಿಶ್ರಾಹಾರಿಗಳಾಗಿವೆ. ಮುಖ್ಯವಾಗಿ ಹಾವು, ಹಲ್ಲಿ, ಕೀಟ, ಹುಪ್ಪಡಿ, ಕಾಳು, ಬೀಜಗಳನ್ನು ತಿನ್ನುತ್ತವೆ.
ಸಂತಾನಾಭಿವೃದ್ಧಿಗಾಗಿಯೇ ಹುಟ್ಟಿರುವ ಬಾಲದ ಗರಿಯನ್ನು ಗಂಡು ನವಿಲುಗಳು ಹೊತ್ತುಕೊಂಡು ಮಳೆಗಾಲದಲ್ಲಿ ತಿರುಗಾಡುವುದು ಕಷ್ಟದ ಕೆಲಸ. ಹಾಗಾಗಿ ಮಳೆಗಾಲ ಶುರುವಾಗಿ ಪ್ರಣಯಕೂಟಗಳು ಮುಗಿದಾದ ಮೇಲೆ ಮಧ್ಯ ಮಳೆಗಾಲದ ಹೊತ್ತಿಗೆ ಗರಿಗಳನ್ನು ತಾವೇ ಕಿತ್ತುಕೊಂಡು ಮೊಟು ಬಾಲ ಮಾಡಿಕೊಂಡು ಹೆಣ್ಣು ನವಿಲಿನಂತೆ ಓಡಾಡುತ್ತಿರುತ್ತವೆ.
ಅಲ್ಲಿಗೆ ಬಂದ ಹೆಣ್ಣು ನವಿಲು ಅತ್ತಿಂದಿತ್ತ ಗಂಡನ್ನು ಸುತ್ತು ಹಾಕಿ ತನ್ನ ಎದೆಯನ್ನು ಉಬ್ಬಿಸಿ ಅತ್ತ-ಇತ್ತ ಒಮ್ಮೆ ನೋಡಿ ತಾನೂ ಮಿಲನಕ್ಕೆ ಸಿದ್ಧವಿದ್ದೇನೆಂದು ಸಮ್ಮತಿ ಸೂಚಿಸುವಂತೆ ತನ್ನ ಮೋಟು ಬಾಲದ ಗರಿಯನ್ನು ಅರಳಿಸಿ ನಿಂತಿತು.
ಅವು ಈಗ ಪ್ರಣಯದಾಟದ ಕೂಟಕ್ಕೆ ಉತ್ಸುಕತೆಯಲ್ಲಿದ್ದಂತೆ ಭಾಸವಾಗುತ್ತಿತ್ತು. ಕಾಡಿನ ಭೂರಮೆಯ ಹಚ್ಚ ಹಸಿರು, ಹಿಂಬದಿಯಲ್ಲಿರುವ ಪೊದೆ, ಆಕಾಶದಲ್ಲಿ ತೇಲುವ ಕಾರ್ಮೋಡಗಳ ಶೃಂಗಾರವನ್ನು ನೋಡಿ ಮೋರ-ಮೋರಿಣಿಯರು ಹಿಗ್ಗಿದರು. ಗಂಡು ನವಿಲು ಒಂದೊಂದೆ ಹೆಜ್ಜೆ ಇಡುತ್ತ ತನ್ನ ಅರಳಿದ ಗರಿಗಳ ಗುಚ್ಛವನ್ನು ಹೊತ್ತು ಹೆಣ್ಣುನವಿಲ ಸನಿಹಕ್ಕೆ ಬಂದು, ತನ್ನ ಕೊರಳು ಎತ್ತಿ ಹೆಣ್ಣು ನವಿಲನ್ನು ದೃಷ್ಟಿಸಿ ನೋಡಿ ಇನ್ನೂ ಸನಿಹಕೆ ಬಂದು, ಅದರ ತಲೆಯನ್ನು ತನ್ನ ಬಾಗಿದ ನುಣುಪಿನ ಕೊಕ್ಕಿನಿಂದ ಹಿಡಿದನು ಕುಕ್ಕಿದನು… ನಾಟ್ಯಕ್ಕಾಗಿ ತೆರೆದ ಗರಿ ಸಮೂಹ ಅರಳಿ ಹಾಗೇ ಇತ್ತು. ಅದರಲ್ಲಿನ ಸಾವಿರಕಣ್ಣುಗಳು ಉಲ್ಲಾಸಗೊಂಡಂತೆ ಭಾಸವಾಯಿತು. ನವಿಲುಗಳ ಸಂಯೋಜನೆ ಕಂಬಕ್ಕೆ ಹಬ್ಬಿದ ಲತೆಯಂತೆ ಗೋಚರಿಸಿ ಪ್ರಕೃತಿಯು ಚಿತ್ತಾರ ಬಿಡಿಸಿದಂತೆ ಕಂಡು ಬಂದಿತು.
ಎಲ್ಲ ದೃಶ್ಯಗಳು ನನ್ನ ಕ್ಯಾಮರಾದಲ್ಲಿ ಸೆರೆಯಾದವು. ಅದ್ಭುತ ಅವರ್ಣನಾತೀತ ಸನ್ನಿವೇಶವನ್ನು ಕಣ್, ಮನ, ಕ್ಯಾಮರಾಗಳಲ್ಲಿ ತುಂಬಿಕೊಂಡು, ಮಳೆ ಹನಿಗಳು ಬೀಳಲಾರಂಭಿಸಿದಾಗ ಕಾಡಿನಿಂದ ಮರಳಿದೆವು.
– ಲೇಖನ ಮತ್ತು ಛಾಯಾಚಿತ್ರ: ಶಶಿಧರಸ್ವಾಮಿ ಆರ್ ಹಿರೇಮಠ
ಹಾವೇರಿ
ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.