ಶಬ್ಧ ಮಾಡದೇ ದಾರಿ ಕೇಳಿ!
“ಆ ಬುಕ್ ನಂದು, ಅದ್ರಲ್ಲಿ ನೀನ್ ಶೀಟ್ ಹರಿಬೇಡ, ಬೇಕಾದ್ರೆ ನಿನ್ ಹಳೆ ಬುಕ್ಕಲ್ಲಿ ತಗೋ…” ಎಂದು ನನ್ನ ಅಕ್ಕ ನನಗೆ ಎಷ್ಟೇ ಹೇಳಿದರೂ, ಕೇಳಿಕೊಂಡರೂ, ಬೇಡಿಕೊಂಡರೂ, ಬೈದರೂ, ಹೊಡೆದರೂ ಬಿಡದೇ…
“ಯಾರ್ ಬುಕ್ ಆದ್ರೆ ಏನು, ನಮ್ಗೆ ಶೀಟ್ ಬೇಕಷ್ಟೆ! ಮಳೆ ನಿಂತೋದ್ರೇ…?” ಎಂಬ ಉದ್ಗಾರದ ಜೊತೆ ಜೊತೆಗೆ ಪುಸ್ತಕದ ಹಾಳೆ ಹರಿಯುವ, ಕಾಗದದ ದೋಣಿ ಮಾಡುವ ಕೆಲಸ ನಡೆದೇ ಇರುತ್ತಿತ್ತು. ಇಷ್ಟು ಸಾಲದು ಎಂಬಂತೆ ನನ್ನ ಬಾಡಿಗೆ ತಮ್ಮಂದಿರು, ನಮ್ಮ ಚಿಕ್ಕಪ್ಪನ ಇಬ್ಬರು ಮಕ್ಕಳನ್ನೂ ಸೇರಿಸಿಕೊಂಡು ಮಳೆಯಲ್ಲಿ ದೋಣಿ ಬಿಡುವ ನಮ್ಮ ಆಟ ಚಿಕ್ಕಂದಿನ ಆ ದಿನಗಳಲ್ಲಿ ನಡೆದೇ ಇತ್ತು. ಈಗೀಗ ನಾನು ಗಮನಿಸುವ ಹಾಗೆ ನಮ್ಮ ಹಳ್ಳಿಯಲ್ಲೇ ಇಂತಹ ಅಭ್ಯಾಸಗಳು ಹೇಳ ಹೆಸರಿಲ್ಲದಂತಾಗುತ್ತಿವೆ. ಇನ್ನು ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಮಳೆಯಲ್ಲಿ ನೆನೆಯುವುದಿರಲಿ, ಮಳೆ ಬರುವ ಸಮಯದಲ್ಲಿ ಕಿಟಕಿಯ ಬಳಿ ಬಿಡುವುದೂ ಸಂದೇಹವೇ. ನಮ್ಮ ಆ ಬಾಲ್ಯದಲ್ಲಿ ಹೀಗೆ ಕಾಗದದಲ್ಲಿ ಮಾಡುವ ದೋಣಿಯೇ ಎಲ್ಲ. ಆದರೆ ಈಗಿನ ಮಕ್ಕಳು ನೆನೆದರೆ ಸಾಕು, ಪೋಷಕರು ಅವರ ಆಸೆಯಂತೆ ನಿಜ ಹಡಗಿನಲ್ಲೇ ಪ್ರಯಾಣ ಮಾಡಿಸಿಬಿಡುತ್ತಾರೆ. ನಾವು ಕೇವಲ ಟಿ.ವಿಯಲ್ಲೋ ಅಥವಾ ಶೈಕ್ಷಣಿಕ ಪ್ರವಾಸದ ಸಮಯದಲ್ಲಿ ಎಲ್ಲೋ ದೂರದಲ್ಲಿ ನಿಂತಿರುವ ಹಡಗನ್ನು ನೋಡುವುದೇ ಭಾಗ್ಯವಾಗಿತ್ತು. ಆದರೆ ಇಂತಹ ಬದಲಾವಣೆಗಳನ್ನು ನಮ್ಮ ಪೀಳಿಗೆಗೆ ಸಿಗದ ಅವಕಾಶ ಈಗಿನ ಕಾಲಕ್ಕೆ ಎಲ್ಲರಿಗೂ ದೊರೆಯುತ್ತಿದೆ ಎಂದು ಸಂತೋಷ ಪಡಬೇಕೋ ಅಥವಾ ಈ ಹಡಗುಗಳ ಅತಿಯಾದ ಚಲನವಲನಗಳಿಂದ ಜಲಜೀವದ ಮೇಲೆ ಬೀರುತ್ತಿರುವ ಪರಿಣಾಮವ ನೆನೆದು ದುಃಖಿಸಬೇಕೋ ತಿಳಿಯುತ್ತಿಲ್ಲ.
ಅದೇನು ಹೀಗೆಂದಿರಿ… ಅಷ್ಟು ವಿಶಾಲ ಸಮುದ್ರದಲ್ಲಿ ಸಣ್ಣ ಕಾಳಿನ ಹಾಗೆ ನಿಶ್ಯಬ್ಧದಲಿ ತೇಲಿ ಸಾಗುವ ಈ ಹಡಗು ಜಲಚರಗಳಿಗೆ ಏನು ಕೇಡು ಮಾಡಲಾದೀತು ಎನ್ನುವುದಲ್ಲವೇ ನಿಮ್ಮ ವಾದ? ಹಾಗಾದರೆ ಬನ್ನಿ ಈ ಸಂಶೋಧನೆಯ ವಿವರಿಸುವ ಮೂಲಕ ನಿಮ್ಮ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ಈ ಹಿಂದಿನ ಕೆಲವು ಸಂಶೋಧನೆಗಳಲ್ಲಿ ವಿಜ್ಞಾನಿಗಳು ಸಮುದ್ರದಲ್ಲಿ ಸಂಚರಿಸುವ ಹಡಗುಗಳಿಂದ ಸಮುದ್ರದ ಜೀವಿಗಳ ಮೇಲೆ ಅಥವಾ ಸಂಶೋಧನೆಯಲ್ಲಿ ಹೇಳಿರುವ ಹಾಗೆಯೇ ಹೇಳುವುದಾದರೆ ಜಲ ಸಸ್ತನಿಗಳಾದ ಕೆಲವು ಬಗೆಯ ತಿಮಿಂಗಿಲಗಳ ಮೇಲೆ ಯವುದೇ ಪ್ರಭಾವ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಅವರ ಮಾತನ್ನು ಈಗ ಹಿಂತೆಗೆಯುವ ಸಮಯ ಬಂದಿದೆ. ಏಕೆಂದರೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಹಡಗುಗಳ ಸಂಚಾರದಿಂದ ಎಷ್ಟೋ ಜೀವಿಗಳಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಪುರಾವೆಯೇ ಕಾಡ್ ಫಿಶ್ (Cod Fish) ಮೇಲೆ ಹಡಗುಗಳ ಸಂಚಾರದಿಂದ ಆದ ಪರಿಣಾಮ ಹೇಳುವ ಈ ಸಂಶೋಧನೆ. ಉತ್ತರ ಗೋಳಾರ್ಧದಲ್ಲಿರುವ ಆರ್ಕ್ಟಿಕ್ ಪ್ರದೇಶದಲ್ಲಿ ನಡೆಸಿದ ಈ ಸಂಶೋಧನೆಯಿಂದ ತಿಳಿದುಬಂದದ್ದು ಇದು.
ಸಹಸ್ರಾರು ಸಂಖ್ಯೆಯಲ್ಲಿ ಈಜುತ್ತ ಆಹಾರವನ್ನರಸಿ ಹೋಗುವ ಕಾಡ್ ಫಿಶ್ ಎಂಬ ಒಂದು ಬಗೆಯ ಮೀನುಗಳ ಆಹಾರ ಹೆಚ್ಚಾದ ಹಡಗುಗಳ ಸಂಖ್ಯೆ ಹಾಗು ಅವುಗಳ ಸಂಚಾರದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಮಾಡಿವೆ.
ಅದು ಹೇಗೆ?
ಹೀಗೆ: ಹಡಗುಗಳು ನಾವು ತಿಳಿದ ಹಾಗೆ ನಿಶ್ಯಬ್ಧವಾಗಿ ಚಲಿಸುವುದಿಲ್ಲ. ಬದಲಿಗೆ ಸ್ವಲ್ಪ ಮಟ್ಟಿಗೆ ಶಬ್ಧವನ್ನೂ ಮಾಡುತ್ತವೆ, ಅಂದರೆ ಸುಮಾರು 147 ಡೆಸಿಬಲ್ಸ್. ಅವುಗಳ ಶಬ್ಧದ ತೀವ್ರತೆಯನ್ನು ನಮ್ಮ ಮೋಟಾರ್ ಸೈಕಲ್ಲಿನ ಶಬ್ಧಕ್ಕೆ ಹೋಲಿಸಬಹುದು. ಆರ್ಕ್ಟಿಕ್ ನ ಕಾರ್ನ್ ವಾಲ್ಲೀಸ್ ದ್ವೀಪದ ಬಳಿ ಮಾಡಿದ ಪ್ರಯೋಗದಲ್ಲಿ ಎಪ್ಪತ್ತೇಳು ಕಾಡ್ ಫಿಶ್ ಗುಂಪುಗಳನ್ನು ಅಭ್ಯಸಿಸಲಾಯಿತು. ಜಾಗತಿಕ ತಾಪಮಾನದ ಪರಿಣಾಮ ಧೃವಗಳ ಮಂಜು ಕರಗುತ್ತಿರುವ ವಿಷಯ ನಿಮಗೇ ತಿಳಿದಿದೆ, ಇದರ ಪರಿಣಾಮ ಆರ್ಕ್ಟಿಕ್ ನ ಈ ಭಾಗದಲ್ಲಿ ಹಡಗುಗಳ ಸಂಖ್ಯೆಯೂ ಹೆಚ್ಚಿದೆ. ಸಂಶೋಧನೆಗೆಂದು ಈ ಹಡಗುಗಳ ಸಂಚಾರವನ್ನು ವೀಡಿಯೋ ಮಾಡಲಾಯಿತು. ಹಾಗೆ ಕಾಡ್ ಫಿಶ್ ನ ನಡವಳಿಕೆಯನ್ನೂ ಗಮನಿಸಲಾಯಿತು. ಹಡಗುಗಳು ಇಲ್ಲದ ಸಮಯದಲ್ಲಿ ಈ ಮೀನುಗಳ ಗುಂಪು 30ಮೀಟರ್ ಆಳದಲ್ಲಿ ತಮ್ಮ ಆಹರಕ್ಕಾಗಿ ದ್ವೀಪದ ದಂಡೆಯ ಬಳಿ ಶೋಧ ನಡೆಸುತ್ತಿದ್ದವು. ಹಡಗುಗಳು ಸಮೀಪಿಸುವಾಗ ಬರುವ ಶಬ್ಧದ ತರಂಗಗಳ ತಾಳಲಾರದೆ ಚೆಲ್ಲಾಪಿಲ್ಲಿಯಾಗಿ ಸುಮಾರು 350ಮೀಟರ್ ದೂರ ಸರಿದು, ಮೂವತ್ತು ನಿಮಿಷಗಳ ಕಾಲ ಆ ಜಾಗವನ್ನು ತೊರೆಯುತ್ತಿದ್ದವಂತೆ. ಅರ್ಥಾತ್ ಈ ಮೀನುಗಳು ಆಹಾರ ಹುಡುಕಲು ಬಳಸಬೇಕಿದ್ದ ತಮ್ಮ ಶಕ್ತಿಯೆಲ್ಲವನ್ನೂ ಹೀಗೆ ಹೆದರಿ ಓಡುವಲ್ಲೇ ವ್ಯಯಿಸುತ್ತಿವೆ. ಇದರಿಂದಾಗಿ ಅವುಗಳು ಹೆಚ್ಚಾಗಿ ಆಹಾರ ಬಯಸಿ ಬರುವ ಬೇಸಿಗೆಯ ಈ ಸಮಯದಲ್ಲೇ ಅದರ ಆಹಾರಕ್ಕೆ ಕುತ್ತು ಬಂದಿದೆ. ಇಷ್ಟೇ ಅಲ್ಲ, ಈ ಹಡುಗುಗಳ ಸಂಚಾರದ ಸಪ್ಪಳದಿಂದ ಮೀನುಗಳು ಸಂವಹಿಸಲು, ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು, ವಲಸೆ ಹೋಗಲು ಬಳಸುವ ಇವುಗಳ ಶಬ್ಧಕ್ಕೂ ಹಡಗಿನ ಶಬ್ಧ ಅಡ್ಡಿಯಾಗಬಹುದು. ಈಗ ನೀವೆ ಹೇಳಿ ನಿಮ್ಮ ಪ್ರಶ್ನೆಗೆ ಉತ್ತರ ದೊರಕಿತೇ?
ಇಷ್ಟು ತೊಂದರೆ ನಿಮಗೆ ಸಾಲದು ಎಂಬಂತೆ, 1980 ಯಿಂದ 2019ವರೆಗಿನ, ಸಮಯದಲ್ಲಿ ವರುಷಕ್ಕೆ ಕೇವಲ ನಾಲ್ಕು ಹಡಗುಗಳು ಸಂಚರಿಸುತ್ತಿದ್ದ ಈ ಪ್ರದೇಶದಲ್ಲಿ ಈಗ ಇಪ್ಪತ್ತೇಳು ಹಡಗುಗಳು ಸಂಚರಿಸುತ್ತಿವೆ. ಇದರ ಪರಿಣಾಮ ಒಮ್ಮೆ ನೀವೆ ಊಹಿಸಿ ನೋಡಿ. ಇದು ತೊಂದರೆ ಒಂದು.
ಎರಡನೆಯದು ಪೆಟ್ರೋಲಿಯಮ್ ತೈಲಗಳಿಗಾಗಿ ನಾವು ನಡೆಸಿರುವ ಕಲಿಯುಗದ ಸಮುದ್ರ ಮಂಥನ. ಸೋರಿಕೆಯಿಂದಾಗಿ ಸಮುದ್ರ ಸೇರುವ ಕಚ್ಛಾ ತೈಲದ ತೊಂದರೆಗಳೂ ಸಹ ಮೀನುಗಳು ಎದುರಿಸಬೇಕಿವೆ.
ಮೂರನೆಯದು ಕರಗುತ್ತಿರುವ ಹಿಮ. ಕಾಡ್ ಫಿಶ್ ನ ಮೊಟ್ಟೆಗಳನ್ನು ಸಮುದ್ರದ ಮೇಲೆ ತೇಲುತ್ತಿರುವ ಮಂಜುಗಡ್ಡೆಗಳು ಸಮುದ್ರದ ಅಲೆಗಳಿಂದ ಕಾಪಾಡುತ್ತಿದ್ದವಂತೆ. ಜಾಗತಿಕ ತಾಪಮಾನದಿಂದ ಕರಗುತ್ತಿರುವ ಮಂಜುಗಡ್ಡೆಯ ಪರಿಣಾಮ ಅವುಗಳ ವಂಶಾಭಿವೃದ್ಧಿಯ ಕಾರ್ಯಗಳಿಗೆ ತಡೆಗೋಡೆಯಾಗಿವೆ.
ನಾಲ್ಕನೆಯದೂ ಇದೆ. ಸಾಮಾನ್ಯವಾಗಿ ಎಲ್ಲರಿಗೂ ಬೆಳಗಿನ ಉಷ್ಣಾಂಶ ಇಪ್ಪತ್ತರಲ್ಲಿದ್ದರೆ ಕೆಲಸ ಕಾರ್ಯಗಳಿಗೆ ಸಲೀಸು. ಅದು ನಮಗೆ ಒಗ್ಗುವ ಉಷ್ಣಾಂಶ ಅಲ್ಲವೇ.. ಹಾಗೆಯೇ ಕಾಡ್ ಫಿಶ್ ಗಳಿಗೂ ಸಮುದ್ರದ ಉಷ್ಣಾಂಶ 30 ಸೆಲ್ಷಿಯಸ್ ಇದ್ದರೆ ಅವುಗಳ ದೈನಂದಿನ ಚಟುವಟಿಕೆಗಳು ಸುಗಮವಾಗಿರುತ್ತವೆ. ಆದರೆ ಸಮುದ್ರದ ಮೇಲೆ ಮಂಜುಗಡ್ಡೆ ಇರದ ಕಾರಣ ಸಮುದ್ರದ ಮೇಲ್ಮೈ ಸುಮಾರು 100 ಸೆಲ್ಷಿಯಸ್ ವರೆಗೆ ಮುಟ್ಟುತ್ತದೆ. ಅಂದರೆ ಸಾಮಾನ್ಯ ಉಷ್ಣಾಂಶಕ್ಕಿಂತ ಮೂರು ಪಟ್ಟು ಹೆಚ್ಚು! ಅವುಗಳ ಜೀವನ ಹೇಗಿರಬೇಕು ಹೇಳಿ…
ಹೊರ ವಿಚಾರ ತಿಳಿಯಲು ಸೌರಮಂಡಲದ ಎಲ್ಲಾ ಗ್ರಹಗಳಿಗೂ ನೌಕೆ ಕಳುಹಿಸುವಷ್ಟು ಬೆಳೆದಿರುವ ನಾವು ನಮ್ಮದೇ ಭೂಮಿಯ ಆರೋಗ್ಯಕರ ಬೆಳವಣಿಗೆಯಲ್ಲಿ ಎಷ್ಟರಮಟ್ಟಿಗೆ ಹಿಂದೆ ಉಳಿದುಬಿಟ್ಟಿದ್ದೇವೆ. ಇದು ಬರೀ ಯೋಚಿಸುವ ಸಮಯವಲ್ಲ, ಜೊತೆಗೆ ಕಾರ್ಯಪ್ರವೃತ್ತರಾಗಿ ನಮ್ಮ ತಪ್ಪನ್ನು ತಿದ್ದಿಕೊಳ್ಳಲು ಮೊದಲ ಹೆಜ್ಜೆ ಇಡುವ ಸಮಯ! ಇಷ್ಟು ದಿನ ಇಂತಹ ವಿಷಯಗಳೆಲ್ಲಾ ಬರಿ ಬಾಯಿ ಮಾತಾಗಿತ್ತು, ನಮ್ಮ ಕೈಯಿಂದ ಕೆಲಸವೇನಾಗಿದೆ.
– ಜೈಕುಮಾರ್ ಆರ್
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.