ಜೇನು ಪ್ರಪಂಚ: ಭಾಗ ೭

ಜೇನು ಪ್ರಪಂಚ: ಭಾಗ ೭

© ನಾಗೇಶ್ ಒ. ಎಸ್.


ಬಹುಶಃ ನಿಸ್ವಾರ್ಥತೆಗೆ, ಪರೋಪಕಾರಕ್ಕೆ (Altruism) ಪರ್ಯಾಯವೆಂದರೆ ನಾವೇ ಎಂದೇಳಬೇಕು. ನಮ್ಮಿಂದಲೇ ಪ್ರಪಂಚದಾದ್ಯಂತ ‘ನಿಸ್ವಾರ್ಥತೆ ಗುಣ’ ಹರಡಿರಲೂ ಸಾಧ್ಯ! ಈ ನಿಸ್ವಾರ್ಥ ಗುಣ ನಮಗೆ ಬಂದದ್ದು ನಮ್ಮ ತಾಯಿಯಿಂದ. ಅದು ನಮ್ಮೆಲ್ಲಾ ಸೋದರಿಯರಿಗೆ ಅನುವಂಶೀಯವಾಗಿದೆ, ಅವು Matrigenes, ಅಂದರೆ ತಾಯಿಯಿಂದ ಬಂದ ಅನುವಂಶೀಯಕಗಳು. ನಮ್ಮ ಜೇನು ನೊಣಗಳಲ್ಲದೆ ಇತರ ಜೀವಿಗಳಲ್ಲೂ ಈ ನಿಸ್ವಾರ್ಥ ಗುಣಕ್ಕೆ ತಾಯಿಯೇ ಮೂಲ. ತಂದೆಯಿಂದ ಬರುವುದು ಸ್ವಾರ್ಥ ಮನೋಭಾವನೆಯ ಅನುವಂಶೀಯಕಗಳು, Petrigenes ಎಂದು ಕರೆಯುವರು. ಅವು ಕೂಡ ಒಂದು ವಿಧದಲ್ಲಿ ಜೀವಿಯ ಉಳಿವಿಗೆ ತೀರಾ ಅವಶ್ಯಕವಾದವು.

ಈ ತಾಯಿಯಿಂದ ಬಂದ ಅನುವಂಶೀಯಕಗಳು ನಮ್ಮನ್ನು ಬಂಜೆಯಂತೆ ಮಾಡಿ, ತಾಯಿಯ ಸೇವೆಗೆ, ಸೋದರಿಯರ ಲಾಲನೆಗೆ ಮೀಸಲಿಡುವಂತೆ ಪ್ರೇರೇಪಿಸಿದರೆ, ಈ ತಂದೆಯಿಂದ ಬಂದ ಅನುವಂಶಿಕಗಳು ಸೂಕ್ತ ಸಮಯಕ್ಕೆ ಕಾದು ಸ್ವಾರ್ಥತೆಯನ್ನು ತೋರ್ಪಡಿಸುವಂತೆ ಪ್ರೇರೇಪಿಸುತ್ತವೆ. ಒಂದೊಮ್ಮೆ ನಮ್ಮ ರಾಣಿ/ತಾಯಿ ದುರದೃಷ್ಟವಶಾತ್ ಸತ್ತರೆ ನಮ್ಮ ತಾಯಿಗೆ ನಿಷ್ಠರಾಗಿ, ಉಳಿದ ಮರಿಗಳ ಪೋಷಣೆ ಮಾಡಿ ಮತ್ತೊಂದು ರಾಣಿಯನ್ನು ತಯಾರಿಸಬೇಕೋ ಅಥವಾ ನಮ್ಮ ಸಂತಾನೋತ್ಪತ್ತಿಯನ್ನು ಪುನರ್ಸ್ಥಾಪಿಸಿ ನಾವೇ ಮೊಟ್ಟೆಗಳಿಡಬೇಕೋ ಎನ್ನುವ ನಿಜವಾದ ದ್ವಂದ್ವಕ್ಕೆ ಸಿಕ್ಕಿಬೀಳುತ್ತೇವೆ. ಸಾಕಷ್ಟು ಬಾರಿ ನಮ್ಮ ನಿರ್ಣಯ ನಮ್ಮ ತಾಯಿಯ ಪರವಾಗಿರುತ್ತದೆ.

ನಾವು ನಮ್ಮ ನಿಸ್ವಾರ್ಥತೆಯನ್ನು ಎರಡು ವಿಧದಲ್ಲಿ ತೋರಿಸಿಕೊಡುತ್ತೇವೆ. ಒಂದು, ನಿಮಗೆ ಗೊತ್ತು ನಮ್ಮ ಅಕ್ಕ-ತಂಗಿಯರಿಗೆ ಅಣ್ಣ-ತಮ್ಮಂದರಿಗೆ ಒಂದೇ ತಾಯಿ, ನಮ್ಮ ತಾಯಿ ಬಿಟ್ಟು ಉಳಿದ ನಾವೆಲ್ಲಾ ಸಹೋದರಿಯರು ಬಂಜೆಯರು, ನಮಗೂ ಕುಟುಕಿಗೆ ಬದಲಾಗಿ ನಮ್ಮ ತಾಯಿಯಂತೆ ಅಂಡಾಶಯಕಾರಕವನ್ನು ಹೊಂದಬಹುದಿತ್ತು ಆದರೆ ನಮ್ಮ ವಠಾರದ ಉಳಿವಿಗೆ ನಮ್ಮೆಲ್ಲರ ಯೋಗಕ್ಷೇಮಕ್ಕಾಗಿ ನಾವು ಅದನ್ನು ತ್ಯಾಗಮಾಡಿ ನಮ್ಮ ತಾಯಿ ಸ್ರವಿಸುವ ಫೆರೋಮೋನ್ ಅನ್ನು ತೆಗೆದುಕೊಂಡು ಬಂಜೇಯರಾಗಿದ್ದೇವೆ. ತಾಯಿತನವನ್ನು ತ್ಯಜಿಸಬೇಕೆಂದರೆ ನಾವೆಷ್ಟು ನಿಸ್ವಾರ್ಥಿಗಳು ಆಗಿರಬೇಕು ಎಂದು ನೀವೇ ಯೋಚಿಸಿ.

ಎರಡು, ನಾನು ಮತ್ತು ನನ್ನ ಸಹೋದರಿಯರೇ ನಮ್ಮ ವಠಾರದ ಸೈನಿಕರು, ವಿಪತ್ತಿನ ಕಾಲದಲ್ಲಿ ನಾವು ಜೀವದ ಹಂಗು ತೊರೆದು ಹೋರಾಡಬೇಕಿರುತ್ತದೆ. ಇಲ್ಲಿ ಒಮ್ಮೆ ನಮ್ಮ ಕುಟುಕನ್ನು ನಮ್ಮ ಶತ್ರುವಿಗೆ ಚುಚ್ಚಿದರೆ ಆ ಕುಟುಕು ಆ ಶತ್ರುವಿನ ಚರ್ಮಕ್ಕೆ ಸಿಕ್ಕಿಬೀಳುತ್ತದೆ. ಆ ಕುಟುಕಿನ ಜೊತೆಗೆ ನಮ್ಮ ವಿಷ ಗ್ರಂಥಿಯು ಸಹ ಅದರೊಂದಿಗೆ ಸೇರಿಕೊಂಡಿರುತ್ತದೆ, ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಭಾಗವಾಗಿದ್ದು, ಕುಟುಕು ಮತ್ತು ವಿಷ ಗ್ರಂಥಿಯ ಜೊತೆ ನಮ್ಮ ಜೀರ್ಣಾಂಗ ವ್ಯವಸ್ಥೆಯೇ ಹೊರ ಬರುವುದರಿಂದ ಚುಚ್ಚಿದ ಕೆಲವೇ ನಿಮಿಷಗಳಲ್ಲಿ ನಾವು ಸಾಯುತ್ತೇವೆ! ಇಲ್ಲಿ ಹೋರಾಟವೆಂದರೆ ಹುತಾತ್ಮನಾದಂತೆಯೇ. ನಿಮ್ಮ ಸೈನಿಕರು ಸಹ ಗಡಿಯಲ್ಲಿ ನಿಂತು, ಯುದ್ಧದಲ್ಲಿ ಪಾಲ್ಗೊಂಡು ಮಾಡುವುದು ಇದನ್ನೇ, ಜೀವವನ್ನೇ ಇತರರಿಗಾಗಿ ಪಣಕ್ಕಿಡುವುದು!

© ಗುರುಪ್ರಸಾದ್ ಕೆ. ಆರ್.

ನಿಸ್ವಾರ್ಥತೆ ಎನ್ನುವುದು ಒಂದು ಬಹಳ ಕ್ಲಿಷ್ಟವಾದದ್ದು. ಜೀವ ವಿಕಾಸದಲ್ಲಿ ಇದೊಂದು ‘ವಿಕಾಸವಾದ ವಿರೋಧಿ’, ಜೀವಿಯ ಉಳಿವಿಗೆ ಬಹಳ ತೊಡಕಾದದ್ದು. ನಾನು, ನನ್ನ ಆಹಾರ, ನನ್ನ ಸಂತತಿ ಇವಷ್ಟೇ ವಿಕಾಸದಲ್ಲಿ ಬದುಕಲು ಬೇಕಾದ ಮಂತ್ರಗಳು. ತನಗೆ ಮೊದಲು ಆಹಾರ ಸಿಗಬೇಕು, ನನಗೆ ಜಾಸ್ತಿ ಸಿಗಬೇಕು, ನಾನು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಬೇಕು, ಅವರು ಆರೋಗ್ಯವಾಗಿ ದಷ್ಟಪುಷ್ಟವಾಗಿ ಬೆಳೆಯಬೇಕು ಎನ್ನುವುದೇ ಪ್ರತಿಯೊಂದು ಜೀವಿಯ ಆಂತರಿಕ ಆಕಾಂಕ್ಷೆ ಇದರಿಂದಲೇ ಸಂತತಿ ಮುಂದುವರೆಯುವುದು, ಅದೇ ವಿಕಾಸ ನಮ್ಮಲ್ಲಿ ಇರುವಂತೆ ಪ್ರೇರೇಪಿಸಿರುವುದು.

ಮತ್ತೇಕೆ ನಮ್ಮಲ್ಲಿ ಈ ‘ನಿಸ್ವಾರ್ಥ’ ಗುಣ ವಿಕಾಸವಾಯಿತು? ವಿಕಾಸವಾದವಷ್ಟು ಕ್ರೂರ ನಡೆ ಈ ವಿಶ್ವದಲ್ಲಿ ಇನ್ನೊಂದಿಲ್ಲ. ಅಯೋಗ್ಯರನ್ನು, ಅನಾವಶ್ಯಕತೆಯನ್ನು ಮುಲಾಜಿಲ್ಲದೆ ಕತ್ತರಿಸುತ್ತಾ ಕೊಲ್ಲುತ್ತಾ ಸಾಗುತ್ತಿರುತ್ತದೆ. ನಾವು ಇಲ್ಲಿಯವರೆಗೆ ನಮ್ಮ ಸಂತತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರೆ ಈ ‘ನಿಸ್ವಾರ್ಥ’ ಗುಣದಿಂದ ನಮ್ಮ ಉಳಿವಿಗೆ ಏನೋ ಸಂಬಂಧ ಇರಲೇಬೇಕು.

ನಮ್ಮ ಈ ‘ನಿಸ್ವಾರ್ಥ’ ನಡುವಳಿಕೆಗೆ ವಿಕಾಸವಾದದ ಪಿತೃ ಎಂದು ಕರೆಸಿಕೊಂಡಿರುವ ನಿಮ್ಮ ಚಾರ್ಲ್ಸ್ ಡಾರ್ವಿನ್ ಸಹ ಸೋಲನ್ನು ಒಪ್ಪಿಕೊಂಡು ನಮ್ಮ ಈ ನಡುವಳಿಕೆಯನ್ನು ವಿವರಿಸಲು ಸಾಧ್ಯವಾಗಿರಲಿಲ್ಲ, ಇದಕ್ಕೆ ಸೂಕ್ತ ವಿವರಣೆ ಕೊಡಲು ಮುಂದೆ 100 ವರ್ಷಗಳೇ ಕಾಯಬೇಕಾಯಿತು… ಅದರ ಕುರಿತಾಗಿ ತಿಳಿಯಬೇಕೆಂದರೆ ಮುಂದಿನ ಭಾಗಕ್ಕೆ ನಿಮ್ಮ ಕುತೂಹಲತೆಯನ್ನು ಕಾಯ್ದಿರಿಸಿ . . .

ಲೇಖನ: ಹರೀಶ ಎ. ಎಸ್.

ಜಿಕೆವಿಕೆ, ಬೆಂಗಳೂರು ನಗರ ಜಿಲ್ಲೆ

Spread the love
error: Content is protected.