ಶಬ್ದ ಮಾಡಿ ನೀರು ಕೇಳುವ ಸಸ್ಯಗಳು!

ಶಬ್ದ ಮಾಡಿ ನೀರು ಕೇಳುವ ಸಸ್ಯಗಳು!

 ‘SOUND OK HORN’ ಪದಗಳ ಬಳಕೆ ಎಲ್ಲಿ ಹೆಚ್ಚಾಗಿ ಮಾಡುತ್ತಾರೆಂದು ಗೊತ್ತೇನು? ಹಾ… ನಿಮ್ಮ ಹಾಗೇ ನಾನು ಹೆಚ್ಚಾಗಿ ಕಂಡದ್ದು ಲಾರಿಗಳ ಹಿಂದೆ. ಇಲ್ಲಿಯವರೆಗೆ ನೋಡಿದ ಎಲ್ಲಾ ಲಾರಿಗಳ ಹಿಂದೆಯೂ ಈ ಪದಗಳು ಇದ್ದೇ ಇತ್ತು. ಆದರೇ ಚಿಕ್ಕಂದಿನಿಂದ ಮೊನ್ನೆ ಮೊನ್ನೆಯವರೆಗೂ ಅದರ ಅರ್ಥ ಮಾತ್ರ ಗೊತ್ತಿರಲೇ ಇಲ್ಲ. ಅರೇ… ಇದೇನಿದು, SOUND ಎಂದರೆ ಶಬ್ದ. HORN ಎಂದರೂ ಶಬ್ದವೇ (ಬರುವ ಶಬ್ದವೇ). ಮತ್ತೇತಕ್ಕೆ ಎರೆಡೆರೆಡು ಬಾರಿ ಬರದದ್ದು? ಅದರ ನಡುವೆ OK ಬೇರೆ, ಸಂಬಂಧವೇ ಇಲ್ಲದ ಹಾಗೆ, ಎಂದುಕೊಳ್ಳುತ್ತಿದ್ದೆ.  ಒಮ್ಮೊಮ್ಮೆ ‘ಶಬ್ದಮಾಡಿ ದಾರಿಕೇಳಿ’ ಎಂಬ ಕನ್ನಡ ಪದಗಳನ್ನು ಕೆಲವು ಲಾರಿಗಳ ಮೇಲೆ ಓದಿದ್ದೆನಾದರೂ. ಅವೆರೆಡರನ್ನು ಸಂಬಂಧಿಗಳನ್ನಾಗಿ ಮಾಡಿರಲಿಲ್ಲ. ಕ್ರಮೇಣ ಲೋಕಾಜ್ಞಾನ (ಲೋಕ+ಅಜ್ಞಾನ) ಬೆಳೆದಂತೆ, SOUND OK HORNಅನ್ನು ಓದಬೇಕಾದದ್ದು “SOUND HORN, OK?” ಧಾಟಿಯಲ್ಲಿ ಎಂದು ತಿಳಿಯಿತು. ಅರ್ಥಾತ್, “ಶಬ್ದಮಾಡಿ ದಾರಿ ಕೇಳಿ, ಆಯಿತೇ?” ಎಂದು. ಇನ್ನೊಂದರ್ಥಾತ್, “ನಮ್ಮ ವಾಹನವನ್ನು ದಾಟಿ ಮುಂದೆ ಹೋಗಬೇಕೆಂದರೆ ಶಬ್ದ ಮಾಡಿ ಆಗ ದಾರಿ ಮಾಡಿಕೊಡುತ್ತೇನೆ” ಎಂದು ಲಾರಿಯ ಚಾಲಕ ಹೇಳುತ್ತಿದ್ದಾನೆ. ಅದು ಸರಿ, ಆದರೆ ಇದಕ್ಕೂ ಶಬ್ದ ಮಾಡಿ ನೀರು ಕೇಳುವ ಸಸ್ಯಗಳಿಗೂ ಏನಾದರು ಸಂಬಂಧ ಇದೆಯೇ? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ನೇರವಾಗಿ ಸಂಬಂಧ ಇಲ್ಲದಿರಬಹುದು, ಆದರೆ ಕೊಂಡಿಯಿದೆ. ಒಂದು ನಿರ್ಜೀವ ವಸ್ತುವಿನ ಮೇಲೆಯೇ ಹೀಗೆ ಸೂಚನೆಗಳನ್ನು ಬರೆಯುತ್ತಾ ಸಂವಹಿಸುವ ನಾವು ಬುದ್ಧಿಜೀವಿಗಳಂತೆ ಬಿಂಬಿಸಿಕೊಳ್ಳುತ್ತೇವೆ. ಜೀವ ವಿಕಾಸದ ಕಾಲಘಟ್ಟದಲ್ಲಿ ನಮಗಿಂತ ಕೋಟ್ಯಾಂತರ ವರ್ಷಗಳ ಮೊದಲೇ ಬಂದು ಈಗಲೂ ಜೀವಿಸುತ್ತಿರುವ ಸಸ್ಯಗಳು ಎಷ್ಟು ಬುದ್ಧಿಯುತವಾಗಿರಬಹುದು? ಯೋಚಿಸಬೇಕಾದ ವಿಷಯವೇ. ಹೌದು, ಶೀರ್ಷಿಕೆಯಂತೆ ಸಸ್ಯಗಳು ತಮಗೆ ನೀರಿನ ಕೊರತೆಯುಂಟಾದಾಗ ಶಬ್ದಮಾಡುತ್ತವೆ. ಅದನ್ನು ಆಲಿಸಿದ ಕೆಲವು ವಿಜ್ಞಾನಿಗಳು ಅದನ್ನೇ ಈ ಸಂಶೋಧನಾ ಪ್ರಬಂಧದಲ್ಲಿ ಲೋಕಾರ್ಪಣೆ ಮಾಡಿದ್ದಾರೆ. “ಅಹುದೇ… ಹಾಗಿದ್ದರೆ ಗಿಡ ಮರಗಳ ಸುತ್ತಲೇ ಜೀವಿಸುವ ನಮಗೇಕೆ ಆ ಆರ್ತನಾದಗಳು ಕೇಳುತ್ತಿಲ್ಲ?” ಎಂಬ ಪ್ರಶ್ನೆ ಬಂದಿದ್ದರೆ, ಗುಡ್. ಉತ್ತರಕ್ಕಾಗಿ ಮುಂದೆ ಬನ್ನಿ ಹೇಳುತ್ತೇನೆ.

© TODOREAN GABRIEL_ISTOCK_GETTY

ಉತ್ತರ ಬಹುಪಾಲು ಸುಲಭ. ನೀವೇ ಊಹಿಸಲೂಬಹುದು. ಅವುಗಳು ಹೊರಡಿಸುವ ಶಬ್ದಗಳು ‘ಶ್ರವಣಾತೀತ ತರಂಗ ಶಬ್ದಗಳು’. ಈ ಶಬ್ದಗಳು ನಮ್ಮ ಕಿವಿಗಳಿಗೆ ಕೇಳಿಸುವುದಿಲ್ಲ. ಏಕೆ ಎಂದರೆ ಮನುಷ್ಯ ಪ್ರಾಣಿಯ ಕರ್ಣಗಳಿಗೆ 20Hz-20,000Hz ವರೆಗೆ ಆಗುವ ಎಲ್ಲಾ ಶಬ್ದಗಳು ಕೇಳಿಸುತ್ತದೆ. 20Hzಕ್ಕಿಂತ ಕಡಿಮೆ ಇರುವ ಅಥವಾ 20,000Hzಕ್ಕಿಂತ ಹೆಚ್ಚಿರುವ ಶಬ್ದಗಳು ಈಗಲೂ ನಮ್ಮ ಸುತ್ತ ಮುತ್ತೆಲ್ಲಾ ಇದ್ದರೂ ಆಲಿಸುವ ಸಾಮರ್ಥ್ಯ ನಮ್ಮ ಕಿವಿಗಳಿಗೆ ಇಲ್ಲ. ಹೀಗೆ 20,000Hzಕ್ಕಿಂತ ಹೆಚ್ಚಿರುವ ಶಬ್ಧಗಳನ್ನು ನಾವು ಶ್ರವಣಾತೀತ ಶಬ್ದಗಳೆಂದು ಕರೆಯುತ್ತೇವೆ. ಹಾಗಾದರೆ ಇದನ್ನು ಹೇಗೆ ಕಂಡುಕೊಂಡರು? ಅಸಲಿಗೆ ಸಂಶೋಧನೆ ಹೇಗೆ ನಡೆಯಿತು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕೋಣ. ಇಸ್ರೇಲ್ ನ Tel Aviv Universityಯ ಜೀವವಿಕಾಸ ಶಾಸ್ತ್ರಜ್ಞೆ ಲಿಲಾಚ್ ಹ್ಯಾಡನಿ ಮತ್ತು ಸಹೋದ್ಯೋಗಿಗಳು ಕೆಲವು ಟೊಮೇಟೊ, ತಂಬಾಕು ಗಿಡ (tobacco plant) ಮತ್ತು ಪಾಪಸ್ ಕಳ್ಳಿಯಂತ ಗಿಡಗಳನ್ನು ಈ ಸಂಶೋಧನೆಗೆ ತೆಗೆದುಕೊಂಡರು. ಅವುಗಳ ಎದುರಿಗೆ ಶ್ರವಣಾತೀತ ಶಬ್ದಗಳನ್ನೂ ಆಲಿಸಬಲ್ಲ ಮೈಕ್ ಅನ್ನು ಇರಿಸಿದರು. ಆ ಶಬ್ದವನ್ನು ನಮ್ಮ ಆಲಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ಬದಲಿಸಿ ಕೇಳಿದಾಗ ಎಲ್ಲರ ಚಹರೆಯಲ್ಲೂ ಆಶ್ಚರ್ಯ. ‘ಟಿಕ್ ಟಿಕ್ ಟಿಕ್’ ಎಂಬ ಶಬ್ಧಗಳು ಹೊರಬಂದವು. ಆದರೆ ಇಲ್ಲೊಂದು ಅನುಮಾನವೂ ಇದೆ. ಅದೇನೆಂದರೆ ಈ ಶಬ್ದಗಳು ಸಸ್ಯಗಳಿಂದಲೇ ಬರುತ್ತಿವೆ, ಬೇರೆ ಯಾವ ಮೂಲದಿಂದ ಅಲ್ಲ. ಎಂದು ಖಚಿತಪಡಿಸಿಕೊಳ್ಳಬೇಕು ಅಲ್ಲವೇ. ಅದಕ್ಕೇ, ಇದೇ ಪ್ರಯೋಗವನ್ನು ಈ ಮೊದಲು ಮಾಡಿದ ಪ್ರಯೋಗಶಾಲೆಯಿಂದ ದೂರದಲ್ಲಿ ಗಿಡಗಳನ್ನು ಶಬ್ದರೋಧಕ (soundproof) ವಾತಾವರಣದಲ್ಲಿಟ್ಟು ಪ್ರಯೋಗಿಸಿದರು. ಅಲ್ಲಿಯೂ ಸಹ ಇದೇ ಫಲಿತಾಂಶವಿತ್ತು. ಓಹ್, ಈಗ ಒಪ್ಪಬಹುದು. ಗಿಡಗಳು ನೀರಿನ ಕೊರತೆಯಿದ್ದಾಗ ಮಾತ್ರ ಮಾಡುತ್ತಿದ್ದ ಈ ಶ್ರವಣಾತೀತ ಶಬ್ದಗಳು ಎಷ್ಟಿತ್ತೆಂದರೆ, ಸಾಮಾನ್ಯವಾಗಿ ನಾವು ಮಾತನಾಡುವಾಗ ಹೊಮ್ಮಿಸುವ ಶಬ್ದಕ್ಕೆ ಹೋಲಿಕೆ ಮಾಡಬಹುದಂತೆ.  ಇದೇ ಶ್ರವಣಾತೀತ ಶಬ್ದಗಳು ಅದೇ ನೀರಿನ ಕೊರತೆ ಎದುರಿಸುತ್ತಿದ್ದ ಗಿಡಗಳನ್ನು ಮುರಿದಾಗಲೂ ಬರುತ್ತಿತ್ತಂತೆ. ಹಾಗೂ ಈ ರೀತಿಯ ಶಬ್ದಗಳು ನೀರಿನ ಕೊರತೆ ಇರದ ಅದೇ ಬಗೆಯ ಗಿಡಗಳಿಂದ ಬರುತ್ತಿರಲಿಲ್ಲ.

© RUSSELL BURDEN_PHOTODISC_GETTY

ಹಾಗೆಂದರೆ ಗಿಡಗಳು ತಮಗೆ ನೀರಿನ ಅಭಾವವಾದಾಗ ಅಥವಾ ತೊಂದರೆಗೆ ಒಳಗಾದಾಗ ನಮ್ಮ ಹಾಗೇ ಕೂಗಿ – ಕಿರುಚಿ ತಮ್ಮ ಅವಶ್ಯಕತೆ ಮತ್ತು ತೊಂದರೆಗಳನ್ನು ಹೇಳುತ್ತಿದ್ದಾವೆ, ಎಂದೇ ಅಲ್ಲವೆ ಅರ್ಥ? ಹಾಗೆ ನೋಡಿದರೆ ಅವುಗಳು ಶಬ್ದ ಮಾಡಿಯೇ ಮಾತನಾಡುತ್ತಿವೆ. ನಾವೇ ಅವುಗಳನ್ನು ಆಲಿಸುತ್ತಿಲ್ಲ ಎಂದಾಯಿತಲ್ಲವೇ? ಹೌದೌದು. ಎಂದು ಎನಿಸಿದರೂ ನಾವು ಮನುಷ್ಯರು ವ್ಯವಹರಿಸಿ ಬದುಕುವ ಹಾಗೆ ಎಲ್ಲವನ್ನೂ ಹೋಲಿಕೆ ಮಾಡಲಾಗುವುದಿಲ್ಲ. ಏಕೆಂದರೆ, ಈ ಶಬ್ಧಗಳ ಅರ್ಥ ನಾವು ಈ ಮೇಲೆ ಅರ್ಥೈಸಿಕೊಂಡ ಹಾಗೆ 100% ಇಲ್ಲದೇ ಇರಬಹುದು. ಆದರೆ ಇದೇ ಗಿಡಗಳ ಶಬ್ದವನ್ನು ನಮಗೆ ಅನುಕೂಲಕರವಾಗುವ ಮಾಹಿತಿಯನ್ನಾ ಬಳಸಿಕೊಳ್ಳಬಹುದು. ಹೇಗೆಂದರೆ ಗಿಡದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಈ ಶಬ್ದ ಬರುವುದರಿಂದ, ಬೆಳೆಯನ್ನು ಬೆಳೆಯುವ ರೈತನಿಗೆ ಇದೊಂದು ಒಳ್ಳೆ ಮಾಹಿತಿಯಲ್ಲವೇ? ರೂಢಿಯಲ್ಲಿ ಭಾವಿಸಿ ಕೊಡುವ ನೀರಿಗಿಂತ, ಗಿಡಗಳೇ ತಮಗೆ ಅವಶ್ಯಕತೆ ಬಂದಾಗ ” ಶಬ್ದ ಮಾಡಿ ನೀರು ಕೇಳುವ” ಸಮಯದಲ್ಲಿ ನೀರು ಕೊಡುವುದಾದರೆ ಎಷ್ಟು ಚೆನ್ನ. ಹಾಗೆ ಒಮ್ಮೆ ಊಹಿಸಿ ನೋಡಿದರೆ ಆನಿಮೇಟೆಡ್ ಸಿನೆಮಾದ ಹಾಗೆ ಕಾಣುತ್ತದೆ. ಆದರೆ ಇಲ್ಲಿ ಇದು ವಾಸ್ತವ. ಯಾರಿಗೆ ಗೊತ್ತು, ಈಗ ಇದೊಂದು ಅಚ್ಚರಿಯ ಸಂಶೋಧನೆಯ ಭಾಗವಾಗಿ ಓದುತ್ತಿರುವ ವಿಷಯ, ಮುಂದೊಂದು ದಿನ ಬೆಳೆ ಬೆಳೆಯುವ ಕ್ರಮದಲ್ಲಿ ಇದೇ ವಿಷಯ ಸರ್ವೇ ಸಾಧಾರಣ ದೈನಂದಿನ ಕೆಲಸವಾಗಬಹುದು.

ಜೊತೆಗೆ ನನ್ನ ಪ್ರಕಾರ ಈ ಸಂಶೋಧನೆ ಕೇವಲ ಇಷ್ಟನ್ನೇ ಹೇಳುತ್ತಿಲ್ಲ. ಬದಲಿಗೆ ಪ್ರಕೃತಿಯು, ‘ಹೇ ಮಾನವ ಪ್ರಾಣಿ, ನಿನ್ನ ಗ್ರಹಣಾ ಸಾಮರ್ಥ್ಯವು ನನ್ನ ಅನಂತ ವೈಶಿಷ್ಠ್ಯವನ್ನು ಅರಿಯುವಲ್ಲಿ ತುಣುಕಷ್ಟೂ ಕೆಲಸಕ್ಕೆ ಬಾರದು.’ ಎಂದು ಅಣುಕಿಸಿದಂತಿದೆ!

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love
error: Content is protected.