ಸೂಕ್ಷ್ಮ ಸರಕು ಸಾಗಣೆ

ಸೂಕ್ಷ್ಮ ಸರಕು ಸಾಗಣೆ

©BRUNO IN COLUMBUS_WIKIMEDIA COMMONS

ನಾನು ರೈತನ ಮಗನೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಕಾರಣವಿದೆ. ಹೊಲದಲ್ಲಿ ಹಾಕಿಸಿದ್ದ ಬೋರಿನಲ್ಲಿ ಚೆನ್ನಾಗಿಯೇ ನೀರು ಸಿಕ್ಕಿತ್ತು. ಆದ ಕಾರಣ, ಈ ಹಿಂದೆ ರಾಗಿಯಂತಹ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದ ನಮ್ಮ ತಂದೆಯು ಈಗ ನಮ್ಮ ಹೊಲದಲ್ಲಿ ಬೆಳೆಯಬಹುದಾದ ಎಲ್ಲಾ ತರಕಾರಿ ಬೆಳೆಗಳನ್ನು ಬೆಳೆಯಲು ಶುರು ಮಾಡಿದರು. ರಾಗಿಯಾದರೆ ವರ್ಷಕ್ಕೊಮ್ಮೆ ಮಳೆಯನ್ನು ನಂಬಿ ಬೆಳೆಯುತ್ತಿದ್ದರು. ನೀರು ಸಿಕ್ಕಮೇಲೆ ಮಳೆರಾಯನಿಗೆ ಕಾಯುವ ಅವಶ್ಯಕತೆಯೇ ಇಲ್ಲವಲ್ಲ ಅದಕ್ಕೆ ಕಂಡು ಕೇಳಿದ ತರಕಾರಿ ಬೆಳೆಗಳನ್ನೆಲ್ಲಾ ಬೆಳೆಯಲು ಶುರು ಮಾಡಿದರು. ಹುರುಳಿ, ಕಾರಾಮಣಿ, ವಿಧ ವಿಧವಾದ ಹೂವುಗಳು, ಬಟಾಣಿ, ಸೌತೇಕಾಯಿ, ಮೂಲಂಗಿ ಹೀಗೇ ಪಟ್ಟಿ ಮುಂದುವರೆಯುತ್ತದೆ. ಹಾಗೆಂದು ಹನಿ ನೀರಾವರಿ ಅಥವಾ ತುಂತುರು ನೀರಾವರಿಗಳಂತಹ ನೀರು ಕಡಿಮೆ ಬಳಕೆ ಮಾಡುವ ಯಾವ ವ್ಯವಸ್ಥೆಯನ್ನು ಆಧರಿಸಿ ಈ ಬೆಳೆಗಳನ್ನು ಬೆಳೆಯುತ್ತಿರಲಿಲ್ಲ. ಕಟ್ಟು ನೀರಾವರಿಯಿಂದಲೇ ಎಲ್ಲಾ ಬೆಳೆಯುತ್ತಿದ್ದರು. ಆಗಲೇ ನಾನೂ ಹೊಲದಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದದ್ದು. ಕೆಲವೊಮ್ಮೆ ಬೆಳಕು ಸರಿದು ಕತ್ತಲಾವರಿಸಿದರೂ ಹೊಲದಲ್ಲಿ ನೀರು ಕಟ್ಟುತ್ತಿದ್ದ ಉದಾಹರಣೆಗಳಿವೆ. ಹೊಲ ಉತ್ತು, ಸಾಲು ಹೊಡೆದು, ಬೀಜ ಹಾಕಿ, ಫಸಲು ಬಂದು ಅದನ್ನು ಕೆ. ಆರ್. ಮಾರ್ಕೆಟ್ ಗೆ ತಲುಪಿಸುವ ವರೆಗೆ ಕೆಲಸ ಮಾಡುತ್ತಿದ್ದ ದಿನಗಳವು. ಈಗ ಬೋರಿನಲ್ಲಿ ಆ ನೀರೂ ಇಲ್ಲ, ನಮ್ಮ ಕೆಲಸದ ನಡುವೆ ಅದಕ್ಕೆ ಸಮಯವೂ ಇಲ್ಲ. ಹಾಗೆಂದು ವ್ಯವಸಾಯವನ್ನು ಇಲ್ಲಿಗೇ ಬಿಟ್ಟಿಲ್ಲ. ಖಂಡಿತವಾಗಿಯೂ ಅದು ಮುಂದುವರೆದಿದೆ ಮತ್ತು ಮುಂದುವರೆಯುತ್ತದೆ. ಆದರೆ ಈ ಸಂದರ್ಭದಲ್ಲಿ ನಾನು ನೆನಪಿಸಿಕೊಳ್ಳುವ ಒಂದು ವಿಷಯವೇನೆಂದರೆ, ನಾವು ಬೆಳೆದ ಹೂವಾಗಲಿ, ತರಕಾರಿಗಳನ್ನಾಗಲಿ ಸಾಗಿಸುತ್ತಿದ್ದ ಬಗೆ. ನಮ್ಮ ಊರಿನ ಮುಖ್ಯರಸ್ತೆಯಿಂದ ನಮ್ಮ ಹೊಲ ಸುಮಾರು ಅರ್ಧ ಕಿ. ಮೀ. ದೂರವಿದೆ. ಜೊತೆಗೆ ಅಲ್ಲಿಗೆ ತಲುಪಲು ಇರುವುದು ಕೇವಲ ಕಾಲು ದಾರಿ ಮಾತ್ರ. ಹೀಗಿರುವಾಗ ಚೀಲ ತುಂಬಿದ ಸರಕನ್ನು ತಲೆಯ ಮೇಲೆ ಹೊತ್ತೇ ತರಬೇಕಿತ್ತು. ನನ್ನ ತಂದೆ ಬಲು ಗಟ್ಟಿ ಆಳು, ದೊಡ್ಡ ಚೀಲವನ್ನು ತಲೆ ಮೇಲೆ ಏರಿಸಿ ಸರ್ರನೆ ಓಡುತ್ತಿದ್ದರು. ಕೊನೆಯಲ್ಲಿ ಉಳಿಯುತ್ತಿದ್ದ ಕೊಸರೆ (ಪೂರ್ತಿಯಲ್ಲದ) ಚೀಲವನ್ನು ನಾನು ಹೊತ್ತು ಹೋಗಲು ಪ್ರಯತ್ನಿಸುತ್ತಿದ್ದೆ. ಆಗಲೇ ತಿಳಿದದ್ದು, ಅಷ್ಟು ಭಾರ ಹೊತ್ತ ನಂತರ ನಮಗೆ ನಿಧಾನವಾಗಿ ಹೆಜ್ಜೆಯಿಡುತ್ತಾ ನಡೆಯಲು ಆಗುವುದಿಲ್ಲ ಎಂದು. ಆ ತಲೆಯ ಮೇಲಿನ ಭಾರವೇ ನಮ್ಮನ್ನು ಓಡುವಂತೆ ಮಾಡಿಬಿಡುತ್ತದೆ. ಅಷ್ಟು ಭಾರವನ್ನು ಹೊತ್ತು ಹೋಗಿ ಅದರ ಜಾಗ ಸೇರಿಸಿದ ನಂತರ ಸಿಗುವ ಸಮಾಧಾನ ಮಾತಿನಲ್ಲಿ ಹೇಳಲಾಗದು. ಕತ್ತಿನ ಮೇಲೆ ಬೀಳುತ್ತಿದ್ದ ತೂಕದ ಒತ್ತಡಕ್ಕೆ ಒಮ್ಮೊಮ್ಮೆ ಅರ್ಧ ಅಡಿ ಎತ್ತರ ಕಡಿಮೆಯಾಗಿರುವೆನೇನೋ ಎಂಬ ಅನುಭವವಾಗುತ್ತಿತ್ತು.

ಅವು ಆ ದಿನಗಳು. ನಾನಿನ್ನು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳು. ಈಗ ಕಾಲ ಬದಲಾಗಿದೆ. ಸರಕು ಸಾಗಿಸಲು ಯಾರೂ ದೈಹಿಕವಾಗಿ ಅಷ್ಟು ಶ್ರಮಿಸುತ್ತಿಲ್ಲ. ಮಾರ್ಕೆಟ್ ಹೊರಡುವ ಟೆಂಪೋವನ್ನೇ ಹೊಲದ ಬಳಿಗೆ ಕರೆಸುವ ವ್ಯವಸ್ಥೆಗಳಾಗಿವೆ. ಇಷ್ಟೆಲ್ಲಾ ಹೇಳಿದ ಮೇಲೆ ಮುಖ್ಯವಿಷಯಕ್ಕೆ ಬಂದುಬಿಡೋಣ ಕಾಲ ಬದಲಾದಂತೆ ಹೊಸ ಸಂಶೋಧನೆಗಳು ಬದಲಾಗಿವೆ. ಈ ಮೇಲೆ ಹೇಳಿದ ನಿದರ್ಶನದಂತೆ ಸೂಕ್ಷ್ಮ ಜೀವಿಗಳು ತಮ್ಮ ಮೇಲೆ ಸರಕನ್ನು ಹೊತ್ತು ಸಾಗುತ್ತವೆ ಎಂದರೆ ನಂಬುವಿರಾ, ನಂಬಲೇ‌ಬೇಕು ಜೊತೆಗೆ ಹೀಗೆ ಸರಕನ್ನು ಹೊತ್ತು ಸಾಗುವಾಗ ಅವು ಹೆಚ್ಚು ವೇಗವಾಗಿ ಚಲಿಸುತ್ತವೆ ಎಂದು ಹೊಸ ಸಂಶೋಧನೆಯೊಂದರಿಂದ ಕಂಡುಕೊಂಡಿದ್ದಾರೆ. ಆ ಸೂಕ್ಷ್ಮ ಜೀವಿ ಯಾವುದೆಂದುಕೊಂಡಿರಿ? ಏಕಕೋಶ ಜೀವಿ ಅಮೀಬಾ ಕಣ್ರೀ… ಹೇಗೆ? ಏಕೆ? ಈ ಸಂಶೋಧನೆಯಿಂದ ನಮಗೇನಾದರು ಉಪಯೋಗವಿದೆಯೇ? ಎಂಬ ನಿಮ್ಮ ಕುತೂಹಲಕಾರಿ ಪ್ರಶ್ನೆಗಳಿಗೆ ಮುಂದೆ ಉತ್ತರಗಳಿವೆ ನೋಡಿ…

ಸಂಶೋಧಕರು ‘ಸ್ಟಿರಿಲೀನ್’ ಎಂದು ಕರೆಯಲ್ಪಡುವ ಸೂಕ್ಷ್ಮ ಉಂಡೆಗಳನ್ನು ಈ ಏಕಕೋಶ ಅಮೀಬಾಗಳ ಮೇಲೆ ಹೊರಿಸಿ ಅದನ್ನು ಅವು ಹೊತ್ತು ಸಾಗುತ್ತವೆಯೇ ಇಲ್ಲವೇ‌ ಎಂದು ಪರೀಕ್ಷಿಸಿದರು. ಈ ಸೂಕ್ಷ್ಮ ಉಂಡೆಗಳು 10 ಮೈಕ್ರಾನ್ ನಷ್ಟು ದಪ್ಪವಿದ್ದವು. ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳುವುದಾದರೆ ಕೆಂಪು ರಕ್ತ ಕಣದ ಗಾತ್ರದಷ್ಟು. ಹೀಗೆ ಸ್ಟಿರಿಲೀನ್ ಬಾಲ್ ಗಳನ್ನು ಹೊತ್ತು ಹೋಗುತ್ತಿದ್ದವಾದರೂ, ಆಶ್ಚರ್ಯಕರ ವಿಷಯ ಅದಲ್ಲ. ಆ ಭಾರ ಹೊತ್ತಮೇಲೆ ಅಮೀಬಾಗಳು ತಮ್ಮ ಸಾಮಾನ್ಯ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸತೊಡಗಿದವು. ಈ ರೀತಿ ಅಭ್ಯಾಸ ಮಾಡುವಾಗ ತಿಳಿದುಬಂದ ಇನ್ನೊಂದು ವಿಷಯವೇನೆಂದರೆ, ಅವುಗಳು 30-60 ಮೈಕ್ರಾನ್ ನಷ್ಟು ತೂಕ ಹೊರುವಾಗ ಹೆಚ್ಚು ವೇಗವಾಗಿ ಚಲಿಸುತ್ತಿದ್ದವಂತೆ. ಇದಕ್ಕಿಂತ ಹೆಚ್ಚು ತೂಕ ಅಥವಾ ಕಡಿಮೆ ತೂಕವಾದರೆ ಅವುಗಳ ವೇಗ ಕುಗ್ಗುತ್ತಿತ್ತು.

‘ಇದನ್ನು ಕಂಡು ನಿಜವಾಗಿಯೂ ನನಗೆ ಆಶ್ಚರ್ಯವೆನಿಸುತ್ತದೆ.’ ಎನ್ನುತ್ತಾರೆ ಪೋಟ್ಸ್ಡಾಮ್ ವಿಶ್ವವಿದ್ಯಾಲಯದ ಜೀವ-ಭೌತಶಾಸ್ತ್ರಜ್ಞ. ‘ಏಕೆಂದರೆ ಸಾಮಾನ್ಯವಾಗಿ ಯೋಚಿಸುವುದಾದರೆ, ತೂಕ ಹೆಚ್ಚಿದಷ್ಟು ಹೊರುವ ಸಾಮರ್ಥ್ಯ ಮತ್ತು ವೇಗ ಕಡಿಮೆಯಾಗಬೇಕು. ಆದರೆ ಇಲ್ಲಿ ಹಾಗೆ ನಡೆಯುತ್ತಿಲ್ಲ.’ ಎಂದು ಸೇರಿಸುತ್ತಾರೆ. ಹಾಗೆಂದು ಎಷ್ಟೆಂದರೆ ಅಷ್ಟು ತೂಕವನ್ನು ಅವು ಹೊರುತ್ತಿರಲಿಲ್ಲ. ಅದೆಲ್ಲಾ ಸರಿ ಈ ಸೂಕ್ಷ್ಮ ವಸ್ತುಗಳ ರವಾನೆಯಿಂದ ‘ನಮಗೇನು ಲಾಭ?’ ಎಂಬ ಸ್ವಾರ್ಥ ಪ್ರಶ್ನೆ ಬರುವುದು ಸಹಜ. ಎಷ್ಟಾದರು ನಾವು ಮಾನವರು, ಎಷ್ಟೇ ಪ್ರಯತ್ನಿಸಿದರೂ ಕೊನೆಗೆ ಸ್ವಾರ್ಥವೇ ಬದುಕು ಎಂಬ ವಾಕ್ಯಕ್ಕೆ ದಾಸರಾಗಿ ಹೋಗಿದ್ದೇವೆ. ಸಮಾಜವೂ ಅದೇ ಸರಿ ಎನ್ನುವಾಗ ಮುಕ್ತ-ಸ್ವಂತ ಆಲೋಚನೆಗಳು ಬೆಲೆ ಕಾಣದೆ ಮಂಕಾಗುತ್ತವೆ. ಅದಿರಲಿ ಬಿಡಿ, ಈ ಪ್ರಶ್ನೆಗೆ ಸೂಕ್ತ ಉತ್ತರವೂ ಇದೆ. ನಮ್ಮ ದೇಹಕ್ಕೆ ಬಂದು ಒದಗುವ ಎಷ್ಟೋ ಖಾಯಿಲೆಗಳಿಗೆ ನಮ್ಮ ಬಳಿ ಔಷಧಿಗಳಿಲ್ಲ. ಹೀಗೆ ಸೂಕ್ಷ್ಮ ಜೀವಿಗಳಿಂದ ಅಥವಾ ನಮ್ಮಲ್ಲೇ ಸಿಗುವ ಬಿಳಿ ರಕ್ತಕಣಗಳಂತಹ ಜೀವಕೋಶಗಳಿಂದ ಔಷಧಿಯನ್ನು ನೇರವಾಗಿ ಬಾಧಿತ ಜಾಗಕ್ಕೆ ತಲುಪಿಸಿ, ಈ ರೋಗ ನಿವಾರಣೆ ಸಾಧ್ಯವಿಲ್ಲ ಎಂಬ ಎಷ್ಟೋ ರೋಗಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ವಾಸಿ ಮಾಡಬಹುದಾದ ದೊಡ್ಡ ಸಾಧ್ಯತೆ ಸಂಶೋಧಕರ ಕಣ್ಣಮುಂದೆ ಎದ್ದು ಕಾಣುತ್ತಿದೆ. ಹಾಗೆಂದು ಸಂಶೋಧನೆ ಇಲ್ಲಿಗೇ‌ ಮುಗಿದಿಲ್ಲ. ಮುಂದಿನ ಭಾಗದ ಸಂಶೋಧನೆಯಲ್ಲಿ ಎರಡು ವಿಷಯದ ಬಗ್ಗೆ ಗಮನ ಹರಿಸಬೇಕಿದೆ. ಒಂದು ಹೀಗೆ ಗೋಳಾಕಾರದ ವಸ್ತುಗಳನ್ನು ಬಿಟ್ಟು ಬೇರೆ ಆಕಾರದ ವಸ್ತುಗಳನ್ನು ಇವು ಸಾಗಿಸಬಲ್ಲವೇ? ಜೊತೆಗೆ ನಮ್ಮ ಮನಸ್ಸಿನ ಹಾಗೆ ಎಲ್ಲೆಲ್ಲೋ ಓಡಾಡುವ ಇವುಗಳಿಗೆ ‘ರಾಸಾಯನಿಕ ರಸ್ತೆ’ಗಳನ್ನು ಹಾಕಿ ನಮಗೆ ಬೇಕಾದ ಸ್ಥಳಕ್ಕೆ ಕಳುಹಿಸಬಹುದೇ? ಎಂಬುದು.

ಇವೆರಡೂ ಸಾಧ್ಯವಾಗಿದ್ದೇ ಆದರೆ ರೋಗ ಚಿಕಿತ್ಸೆಯಲ್ಲಿ ಹೊಸ ಯುಗ ಪ್ರಾರಂಭವಾಗುವುದರಲ್ಲಿ ಸಂಶಯವೇ ಇಲ್ಲ. ಇಂತಹ ಸಂಶೋಧನೆಗಳು ದೈಹಿಕ ರೋಗಗಳಿಗೆ ಬರುವ ಸವಾಲುಗಳನ್ನು ಎದುರಿಸುವಲ್ಲಿ ನೆರವಾಗಬಹುದು. ಆದರೆ ಇಂತಹ ಎಷ್ಟೋ ರೋಗಗಳು ಬಾರದ ಹಾಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ನಿಮ್ಮ ಆಯ್ಕೆ-ವಿವೇಚನೆಗಳಿಗೆ ಬಿಟ್ಟಿದ್ದು.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.