ಸಿವಂಗಿ ಪರ್ವ

ಸಿವಂಗಿ ಪರ್ವ

©ರತನ್ ಶರ್ಮ

ಪ್ರಕೃತಿಯು ಆಹಾರ ಸರಪಳಿ ಎಂಬ ಸಂಕೀರ್ಣ ವ್ಯವಸ್ಥೆಯನ್ನು ತನ್ನ ಸುತ್ತಲೂ ಹೆಣೆದುಕೊಂಡು ಸಮತೋಲನದ ಹಗ್ಗದ ಮೇಲೆ ಸಾಗುತ್ತಿರುವಾಗ, ಮಾನವನ ಕೈವಾಡದ ಕಂಪನಗಳು ಹಲವು ಬಾರಿ ಸಂಪೂರ್ಣ ಜೀವ ವ್ಯವಸ್ಥೆಯನ್ನೇ ಅಲುಗಾಡಿಸಿ ಬಿಡುತ್ತವೆ. ಪುರಾತನ ನಾಗರಿಕತೆಗಳಾದಂತಹ ಹರಪ್ಪ, ಗ್ರೀಕ್, ಮೆಸೊಪಟೋಮಿಯನ್, ಆಲ್ಮಾರ್ಕ್ ನಾಗರೀಕತೆಗಳ ನಾಶಕ್ಕೂ ಪರಿಸರ ನಾಶವೇ ಮುಖ್ಯ ಕಾರಣವಿರಬಹುದು ಎಂದು ಅಂದಾಜಿಸಲಾಗುತ್ತದೆ. ನಮ್ಮದೇ ದೇಶದಲ್ಲಿ ಈ ರೀತಿಯ ಷಡ್ಯಂತ್ರದ ಕೈವಾಡಕ್ಕೆ ಸಿಕ್ಕಿ ನಿರ್ನಾಮಗೊಂಡ ಬಲಿಪಶುಗಳೇ ಈಗಿನ ಅತಿಥಿಸತ್ಕಾರದೊಂದಿಗೆ ಸ್ವಾಗತಿಸಲ್ಪಡುತ್ತಿರುವ ಸಿವಂಗಿಗಳು / ಚೀತಾಗಳು.

ಇಡೀ ವಿಶ್ವವೇ ಒಂದು ಕುಟುಂಬದಂತೆ ಎಂದು ಜಗತ್ತಿಗೆ ಸಾರಿ, ಪ್ರಕೃತಿ ಪೂಜೆಯ ಬುನಾದಿಯೊಂದಿಗೆ ಬೆಳೆದು ನಿಂತ ನಾಗರಿಕತೆಗಳ ಹಿನ್ನೆಲೆಯನ್ನು ಹೊಂದಿರುವ, ಸಕಲ ಜೀವಿಗಳ ಜೊತೆಗಿನ ಸಹಬಾಳ್ವೆಗೆ ಹೆಸರಾದ ನಾಡಿನಲ್ಲಿ, ಗಂಗೆಯ ನೀರನ್ನು ಕುಡಿದು ದಕ್ಷಿಣಪ್ರಸ್ಥಭೂಮಿಯುದ್ದಕ್ಕೂ ರಾಜಾರೋಷವಾಗಿ ನೆಲೆಸಿದ್ದ ಸಿವಂಗಿ ಎಂಬ ಪ್ರಾಣಿಯೊಂದು ಸಂಪೂರ್ಣ ನಾಶಗೊಂಡು ಇಂದು ಹೊರದೇಶದಿಂದ ಹುಲಿಯ ಮುಖವಾಡದ ವಿಮಾನದಲ್ಲಿ ಬರುತ್ತಿರುವ ಕಥಾ ಹಂದರವೇ ಸಿವಂಗಿ ಪರ್ವ.

ಇವುಗಳ ಸ್ಥಳೀಯ ನಾಮ ಸಿವಂಗಿಗಳೆಂದು. ಬೆಕ್ಕಿನ ಪ್ರಭೇದಕ್ಕೆ ಸೇರಿದ ಫೆಲಿಡೆ ಕುಟುಂಬದ ಇವುಗಳ ವೈಜ್ಞಾನಿಕ ನಾಮಧೇಯ ಅಸಿನೋನಿಕ್ಸ್ ಜ್ಯೂಬ್ಯಾಟಸ್ (Acinonyx jubatus) ಎಂದು. ಇದಾವುದನ್ನೂ ತಲೆ ಕೆಡಿಸಿಕೊಳ್ಳದೆ ವಿಶಾಲ ಬಯಲು ಕಾಡುಗಳಲ್ಲಿ ಸ್ವಇಚ್ಛೆಯಿಂದ ಬದುಕಿಕೊಂಡು ಪ್ರಕೃತಿಯಲ್ಲಿ ಶಿಕಾರಿ ಪ್ರಾಣಿಗಳ ಪಾತ್ರವನ್ನು ನಿರ್ವಹಿಸುತ್ತಾ, ಪರಿಸರದ ಸ್ವಚ್ಛತೆಯನ್ನು ರಕ್ಷಿಸಿಕೊಂಡು ಹೋಗುತ್ತಿದ್ದವು. ಯಾವಾಗ ಮಾನವನಿಗೆ ಅವಶ್ಯಕತೆಯನ್ನು ಮೀರಿ ಶೋಕಿ, ವಿಲಾಸ, ಮನೋರಂಜನೆಯ ನಶೆಯೇರಿತೋ ಅಂದಿನಿಂದ ಕಣ್ಮರೆಯಾಗುತ್ತಾ ಹೋಗಿ ತಮ್ಮಅಸ್ತಿತ್ವವನ್ನು ಕಳೆದುಕೊಂಡವು.

ಹಲವರು ಹುಲಿ, ಚಿರತೆ ಹಾಗು ಸಿವಂಗಿ ನಡುವೆ ಗೊಂದಲಗೊಳ್ಳುವುದುಂಟು. ಹುಲಿಗಳು ದೇಹದ ಗಾತ್ರದಲ್ಲಿ ಇವೆಲ್ಲಕ್ಕಿಂತ ದೊಡ್ಡದು ಹಾಗು ದೇಹದ ಕೆಂಗಂದು ಬಣ್ಣದ ಹಿನ್ನೆಲೆಯ ಮೇಲೆ ಕಪ್ಪು ಪಟ್ಟೆಗಳನ್ನು ಕಾಣಬಹುದು. ಚಿರತೆಗಳು (leopard) ನಮ್ಮ ಸುತ್ತಮುತ್ತಲಿನ ಕಾಡುಗಳಲ್ಲಿ ಸಾಮಾನ್ಯವಾಗಿ ಜೀವಿಸುವ ಪ್ರಾಣಿಗಳಾಗಿದ್ದು, ಇವುಗಳನ್ನು ಚಿಟ್ಟೆ ಹುಲಿ ಅಥವಾ ಕುರ್ಕ ಅಂತಲೂ ಸಂಬೋಧಿಸುವುದುಂಟು. ದೇಹದ ಮೇಲೆ ಕಪ್ಪು ಆವರಣಗಳಿಂದ ರಚಿಸಲ್ಪಟ್ಟ ಪಟ್ಟೆಗಳನ್ನು ಕಾಣಬಹುದು. ಇನ್ನು ಸಿವಂಗಿಗಳ ದೇಹದ ಮೇಲೆ ಕೇವಲ ಕಪ್ಪು ಬೊಟ್ಟುಗಳನ್ನು ಗಮನಿಸಬಹುದು. ಹುಲಿ, ಚಿರತೆಗಳು ಕೆಲವೆಡೆ ಮಾನವ ಹಾಗೂ ವನ್ಯಜೀವಿ ಸಂಘರ್ಷವನ್ನು ಸೃಷ್ಟಿಸಿ ಅಪರೂಪದ ಅನಿರೀಕ್ಷಿತ ಘಟನೆಗಳಲ್ಲಿ ಜೀವಹಾನಿಗೊಳಿಸಿದ್ದರೂ, ಸಿವಂಗಿಗಳಿಂದ ಈವರೆಗೆ ಯಾವುದೇ ಮಾನವ ಜೀವಹಾನಿಗಳು ದಾಖಲಾಗಿಲ್ಲ. ಸಿವಂಗಿಗಳು ಹುಲಿಯಂತೆ ಘರ್ಜಿಸಲಾರವು, ಬದಲಾಗಿ ಬೆಕ್ಕಿನಂತೆ ಪುರ್ರ್‌ ಗುಟ್ಟಿ ತಮ್ಮ ಸಂವಹನವನ್ನು ನಡೆಸುತ್ತವೆ. ಆದರೆ ಇವು ಇತರೆ ಬೆಕ್ಕಿನ ಪ್ರಭೇದದ ಪ್ರಾಣಿಗಳಂತೆ ತಮ್ಮ ಉಗುರುಗಳನ್ನು ಸ್ವಇಚ್ಚೆಯಂತೆ ಚಲಿಸಲಾರವು. ಇದನ್ನು ಕ್ಯಾನಿಡೆ ಕುಟುಂಬದ ಪ್ರಾಣಿಗಳ ಶ್ವಾನಗಳ ಉಗರಿನಂತೆ ಕಲ್ಪಿಸಿಕೊಳ್ಳಬಹುದು. ಬೆಳಗಿನ ಹೊತ್ತಿನಲ್ಲಿ ಬೇಟೆಯಾಡುವ ಈ ಪ್ರಾಣಿಗಳು ತಮ್ಮ ಕಣ್ಣುಗಳ ತೀಕ್ಷ್ಣತೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಕಣ್ಣಿನ ಕೆಳಭಾಗದಲ್ಲಿ ಇರುವಂತಹ ಕಪ್ಪು ಗೆರೆಯು ಇವುಗಳ ಗುರುತಿಸುವಿಕೆಗೆ ಒಂದು ಸರಳ ಸಂಕೇತವಾಗಿದ್ದು, ಇದನ್ನು ಮಾಲಾರ್ ಪಟ್ಟಿ ಎನ್ನಲಾಗುತ್ತದೆ. ಕಪ್ಪು ಬಣ್ಣವು ಎಲ್ಲಾ ರೀತಿಯ ಕಿರಣಗಳ ಹೀರುವಿಕೆಯಿಂದ ಉಂಟಾಗಲಿದ್ದು, ಹಗಲಿನ ವೇಳೆಯಲ್ಲಿ ಬಯಲು ಪ್ರದೇಶಗಳಲ್ಲಿ ಬೇಟೆಯಾಡುವ ಪ್ರಾಣಿಯಾದ ಸಿವಂಗಿಗಳ ನೇತ್ರವನ್ನು ಬೆಳಕಿನ ಪ್ರತಿಫಲನದ ಪ್ರಜ್ವಲನದಿಂದ ಉಂಟಾಗುವ ಅಸ್ಪಷ್ಟ ನೋಟದಿಂದ ರಕ್ಷಿಸುತ್ತದೆ. ಇದು ಗೋಚರಿಸುವ ಬೆಳಕನ್ನು (ವಿಸಿಬಲ್ ಲೈಟ್) ಸಂಪೂರ್ಣವಾಗಿ ಹೀರಿಕೊಂಡು ಬೇಟೆಯಾಡುವ ಪ್ರಾಣಿಗೆ ಸ್ಪಷ್ಟವಾಗಿ ಕಾಣಲು ಸಹಾಯಮಾಡುತ್ತದೆ. ಸೂರ್ಯನ ಕಿರಣಗಳು ತೀವ್ರವಾಗಿರುವ ಸ್ಥಳದಲ್ಲಿ ವಾಸಿಸುವಂತಹ ಗಿಡುಗಗಳ ಮುಖದ ಮೇಲೆ ಕೂಡಾ ಅಂತಹದ್ದೇ ಗಾಢವಾದ ಮಾಲಾರ್ ಪಟ್ಟಿಯನ್ನು ಗಮನಿಸಬಹುದು ಉದಾಹರಣೆಗೆ ಪೆರಿಗ್ರೈನ್ ಫಾಲ್ಕನ್ಗಳು. ಇದೇ ತಂತ್ರವನ್ನು ಅನುಕರಿಸಿ ಹಲವು ಫುಟ್ಬಾಲ್ ಆಟಗಾರರು ತಮ್ಮ ಕಣ್ಣಿನ ಕೆಳಭಾಗದಲ್ಲಿ ಕಪ್ಪು ಬಣ್ಣ ಹಚ್ಚಿಕೊಳ್ಳುವುದನ್ನು ಗಮನಿಸಬಹುದು. ಹುಲಿ ಅಥವಾ ಚಿರತೆಗಳಿಗೆ ಹೋಲಿಸಿದರೆ ಸಿವಂಗಿಗಳು ವಿಭಿನ್ನ ಪ್ರಾಣಿಗಳು. ಇವು ಹುಲಿ ಅಥವಾ ಚಿರತೆಗಳಂತೆ ತನ್ನ ಬೇಟೆಯ ಮೇಲೆ ಕಾದು ಕುಳಿತು ದಾಳಿಮಾಡುವುದಿಲ್ಲ. ಬದಲಾಗಿ ತನ್ನ ಬೇಟೆಯನ್ನು ಓಡಿಸಿಕೊಂಡು ಹೋಗಿ ದಾಳಿಮಾಡುವಂತೆ ದೈಹಿಕವಾಗಿ ವಿಕಾಸ ಹೊಂದಿದ್ದು, ಗಂಟೆಗೆ ಗರಿಷ್ಠ 110 ಕಿಲೋಮೀಟರ್ ಗೂ ಹೆಚ್ಚಿನ ವೇಗದಲ್ಲಿ ಧಾವಿಸಿ ತನ್ನ ಬೇಟೆಯನ್ನು ಹಿಡಿಯಬಲ್ಲವು. ಅಲ್ಲದೆ ನೂರು ಚದರ ಕಿಲೋಮೀಟರ್ ಸ್ಥಳದಲ್ಲಿ 10 ರಿಂದ 15 ಚಿರತೆ ಅಥವಾ ಹುಲಿಗಳು ವಾಸಿಸಬಲ್ಲವಾದರೆ, ಈ ಸ್ಥಳ ಮಿತಿಯಲ್ಲಿ ಕೇವಲ ಒಂದು ಸಿವಂಗಿಯು ಮಾತ್ರ ಬದುಕಬಲ್ಲದು. ಹೆಣ್ಣು ಸಿವಂಗಿಯು ಒಂದು ಬಾರಿಗೆ ಮೂರರಿಂದ – ಐದು ಮರಿಗಳಿಗೆ ಜನ್ಮ ನೀಡಬಲ್ಲದಾದರೂ ಇವುಗಳು ಬದುಕುವ ಸಂಭಾವನೀಯತೆ ಶೇ.5 ಕ್ಕಿಂತಲೂ ಕಡಿಮೆ. ಜೊತೆಗೆ ಬಂಧಿಸಿಟ್ಟ ಚೀತಾಗಳು ಸಂತಾನೋತ್ಪತ್ತಿಯನ್ನು ನಡೆಸುವುದು ತುಂಬಾ ವಿರಳ. ಅನುವಂಶಿಕ ದೃಷ್ಟಿಕೋನದಿಂದ ಭಾರತದಲ್ಲಿದ್ದ ಏಷಿಯಾಟಿಕ್ ಚೀತಾಗಳು ಹಾಗು ಆಫ್ರಿಕನ್ ಚೀತಾಗಳು ಎರಡೂ ಸಹ ಒಂದೇ ಪ್ರಭೇದಕ್ಕೆಸೇರಿದ್ದರೂ ಬೇರೆ ಬೇರೆ ಉಪಪ್ರಭೇದಗಳು. 

©ರತನ್ ಶರ್ಮ

ಪುರಾತನ ನವಶಿಲಾಯುಗ, ತಾಮ್ರಯುಗ, ಬೃಹತ್ ಶಿಲಾಯುಗಗಳ ರೇಖಾಚಿತ್ರಗಳಿಂದ ಹಿಡಿದು ಭಾರತದಲ್ಲಿ ಅವಸಾನ ಹೊಂದುವವರೆಗೆ ಸಿವಂಗಿಗಳು ಮಾನವನೊಂದಿಗೆ ನಂಟು ಹೊಂದಿದ್ದನ್ನು ಹಲವು ಆಧಾರಗಳು ಪುಷ್ಠಿಗೊಳಿಸುತ್ತವೆ. ಸಿವಂಗಿಗಳು ಹುಲಿ, ಚಿರತೆಗಳಂತೆ ಪಳಗಿಸಲಾರದ ಪ್ರಾಣಿಯೇನಲ್ಲ. ಇವುಗಳನ್ನು ಸೆರೆಹಿಡಿದು ತರಬೇತುಗೊಳಿಸಿ ಬೇಟೆಯಾಡಲು ಬಳಸಿಕೊಳ್ಳಬಹುದು. ಇದನ್ನರಿತು ಚೀತಾಗಳನ್ನು ಪಳಗಿಸಿ ಬೇಟೆಗೆ ಬಳಸಿಕೊಂಡವರಲ್ಲಿ ಈಜಿಪ್ಟಿಯನ್ನರು ಮೊದಲಿಗರು. 12 ನೆೇ ಶತಮಾನದ ಸಂಸ್ಕೃತ ಸಾಹಿತ್ಯವಾದ ಮನಸೋಲ್ಲಾಸದಲ್ಲಿ ಸಿವಂಗಿಗಳ ಕುರಿತು ಪ್ರಸ್ತಾಪವನ್ನು ಕಾಣಬಹುದು. ನಂತರದ ಕಾಲಘಟ್ಟದಲ್ಲಿ ಹೆಚ್ಚಿದ ಜನಸಂಖ್ಯೆ, ವಿಸ್ತರಿಸಿದ ಕೃಷಿಭೂಮಿ, ಮಧ್ಯಕಾಲೀನ ಭಾರತದಲ್ಲಿ ಮಧ್ಯ ಏಶಿಯಾದ ಶಕ್ತಿಗಳ ಆಗಮನ, ಹೆಚ್ಚಿದ ಬೇಟೆಯ ಕ್ರೀಡೆ, ಮನೋರಂಜನೆಗಾಗಿ ಬೇಟೆಯ ಆಸಕ್ತಿ ಸಿವಂಗಿಗಳ ಸಂಖ್ಯೆಯ ಮೇಲೆ ಋಣಾತ್ಮಕ ಪರಿಣಾಮವನ್ನಂತೂ ಬೀರಿತು. ಅಕ್ಬರನ ಆಸ್ಥಾನದಲ್ಲಿ 9000ಕ್ಕೂ ಹೆಚ್ಚು ಚೀತಾಗಳು ಇದ್ದವೆನ್ನುವ ದಾಖಲೆಯೇ ಇದಕ್ಕೆ ಕೈಗನ್ನಡಿ. ಇದರೊಂದಿಗೆ ಭಾರತಕ್ಕೆ ಕರೆಯದೆ ಬಂದ ಪಾಶ್ಚಿಮಾತ್ಯ ಅತಿಥಿಗಳ (ವಸಾಹತುಶಾಹಿ ಶಕ್ತಿಗಳು) ಆಗಮನ, ಪ್ರಾಣಿ ಬೇಟೆಯ ಮೇಲೆ ಲಗಾಮಿಲ್ಲದ ಪಾಶ್ಚಿಮಾತ್ಯ ಹುಚ್ಚು ಶ್ರೀಮಂತಿಕೆ ಆಡಂಬರದ ತೋರುಗಾರಿಕೆ, ಸಿವಂಗಿಗಳ ಕಾಂತಿ ಕುಂದಿಸುವಲ್ಲಿ ಮುಖ್ಯಪಾತ್ರವಹಿಸಿತು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಸ್ಥಳೀಯ ಭಾರತೀಯ ರಾಜರುಗಳು ಇದೇ ಹಾದಿಯನ್ನು ಹಿಡಿದು ಹುಲಿ, ಚಿರತೆ ಹಾಗು ಸಿವಂಗಿಗಳನ್ನು ಕೊಂದು ಬೀಗುವಂತಹ ಮನಸ್ಥಿತಿಗೆ ದಾಸರಾದರು. ಸಿವಂಗಿಗಳನ್ನು ಹಿಡಿದು ನೀಡಿದರೆ ಸಿಗುತ್ತಿದ್ದಂತಹ ಬಹುಮಾನಗಳು ಸಿವಂಗಿಗಳ ಅಳಿವಿನ ಸಮಾಧಿಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಸಹಕರಿಸಿತು. ಇದರೊಂದಿಗೆ ಬೆರೆತಂತಹ ಆಡಳಿತ, ಕಾನೂನಿನ ಕೊಡುಗೆಯನ್ನು ವಿಶೇಷವಾಗೇನೂ ವಿವರಿಸಬೇಕಾಗಿಲ್ಲ. ವಾಣಿಜ್ಯೀಕರಣದ ದೃಷ್ಟಿಯಿಂದ ಅರಣ್ಯ ನಿರ್ವಹಣೆ ಅರಣ್ಯನಾಶ/ಆವಾಸಸ್ಥಾನದ ನಾಶ ಮಾಡಿ ಕೃಷಿ ಹಾಗು ಕೈಗಾರಿಕೆಗೆ ಪ್ರೋತ್ಸಾಹ, ಸಿವಂಗಿಗಳ ವಿನಾಶ ಯಾತ್ರೆಗೆ ಶರವೇಗವನ್ನು ಒದಗಿಸಿತು. ದಶದಿಕ್ಕುಗಳಿಂದಲೂ ಶೋಷಣೆಯ ಷಡ್ಯಂತ್ರದ ಬಲೆಗೆ ಸಿಕ್ಕ ಸಿವಂಗಿಗಳ ಲೋಕದ ಕಾಂತಿ ದಿನಕಳೆದಂತೆ ಮಸುಕತೊಡಗಿತು. 1948ರ ದಿನವೊಂದರ ರಾತ್ರಿ ಮಧ್ಯಪ್ರದೇಶದ ರಾಜನೊಬ್ಬನ ಗುಂಡಿಗೆ ಬಲಿಯಾದಂತಹ ಮೂರು ಸಿವಂಗಿಗಳೊಂದಿಗೆ ಭಾರತದಲ್ಲಿ ಸಿವಂಗಿ ಸಾಮ್ರಾಜ್ಯದ ಪತಾಕೆ ಇಳಿದು ಕ್ರೌರ್ಯದ ಮೊಬ್ಬು ಹರಿಯಿತು. 1952ರಲ್ಲಿ ಭಾರತ ಸರ್ಕಾರವು ಸಿವಂಗಿಗಳು ಭಾರತದಿಂದ ಸಂಪೂರ್ಣವಾಗಿ ಅಳಿದುಹೋಗಿವೆ ಎಂದು ಅಧಿಕೃತವಾಗಿ ಘೋಷಿಸಿತು.

ಭಾರತದ ನೆಲದಲ್ಲಿನ ಸಿವಂಗಿಯ ಕೊನೆಯ ಚಿತ್ರ

ನಂತರ 1955 ರಲ್ಲಿ ಆಂಧ್ರಪ್ರದೇಶದ ಜೀವವೈವಿಧ್ಯ ಮಂಡಳಿ ಸಿವಂಗಿಗಳನ್ನು ಕರೆತರುವ ಆಸಕ್ತಿಯನ್ನು ತೋರಿದರೂ ಈ ಪ್ರಸಂಗವು ಸರಳವಾಗಿ ತೆರೆಯ ಮರೆಗೆ ಸರಿಯಿತು. 1970 ರಲ್ಲಿ 300 ಏಶಿಯಾದ ಚೀತಾಗಳನ್ನು ಹೊಂದಿದ್ದ ಏಕೈಕ ದೇಶವಾಗಿದ್ದ ಇರಾನಿನೊಂದಿಗೆ ಸಮ್ಮತಿಯ ಮಾತುಕತೆಗಳು ನಡೆದವಾದರೂ ಅನಿರೀಕ್ಷಿತವಾಗಿ ಅಲ್ಲಿ ನಡೆದ ಕ್ಷಿಪ್ರಕ್ರಾಂತಿಯಿಂದಾಗಿ ಈ ಯೋಜನೆಯ ಆಕಾಂಕ್ಷೆಗಳು ಮಣ್ಣು ಪಾಲಾಯಿತು. ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಸಚಿವಾಲಯ ಮತ್ತು ಭಾರತೀಯ ವನ್ಯಜೀವಿ ಟ್ರಸ್ಟ್ 2009 ರಲ್ಲಿ ಸಭೆಯೊಂದನ್ನು ನಡೆಸಿ ಸಿವಂಗಿಗಳ ಮರು ಪರಿಚಯಕ್ಕೆ ಸಂಭಾವ್ಯ ಸ್ಥಳ ಹಾಗು ಅಲ್ಲಿನ ಸಸ್ಯವರ್ಗವನ್ನು ಪರಿಗಣಿಸಿ ಚರ್ಚಿಸಿ ಮಧ್ಯಪ್ರದೇಶದ ಕೂನೋ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನವನ್ನು ಸೂಕ್ತಸ್ಥಳವೆಂದು ಪರಿಗಣಿಸಲಾಯಿತು. ಆದರೆ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನದ ಸಿಂಹಗಳ ಏಕಮಾತ್ರ ಸಮೂಹವನ್ನು ಹೊರತುಪಡಿಸಿ ಇನ್ನೊಂದು ಆರೋಗ್ಯಯುತ ಸಮೂಹ ಸೃಷ್ಟಿಯ ದೃಷ್ಟಿಯನಿಟ್ಟುಕೊಂಡು ಸರ್ವೋಚ್ಛ ನ್ಯಾಯಾಲಯ ಸಿವಂಗಿಗಳ ಆಗಮನಕ್ಕೆ ತಡೆಯೊಡ್ದಿತಾದರೂ, 2020 ರಲ್ಲಿ ಅನುಮತಿ ನೀಡಿತು. ಇದರೊಂದಿಗೆ ಅನುಮೋದನೆಗೊಂಡ ಪ್ರಾಜೆಕ್ಟ್ ಚೀತಾಗೆ ವೇಗ ದೊರಕಿದಂತಾಗಿ ಭಾರತದಿಂದ ಮರೆಯಾಗಿದ್ದ ಸಿವಂಗಿಗಳು 7 ದಶಕಗಳ ನಂತರ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ 5 ಹೆಣ್ಣು ಹಾಗು 3 ಗಂಡು ಆಫ್ರಿಕಾದ ಚೀತಾಗಳು ವಿಶೇಷ ಬೋಯಿಂಗ್ 74-400 ವಿಮಾನದಲ್ಲಿ ಭಾರತಕ್ಕೆ ಬಂದಿಳಿದವು.

ಭಾರತಕ್ಕೆ ಚೀತಾಗಳ ಆಗಮನದೊಂದಿಗೆ ನಾವೆಸಗಿದ ಕ್ರೌರ್ಯ ದೌರ್ಜನ್ಯಗಳೆಲ್ಲ ಪರಿಹಾರವಾದವಂತಲೇನು ಅಲ್ಲ. ಇವುಗಳ ಆಗಮನ ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆಯ ಮೇಲೆ ಶ್ಲಾಘನೆಯೊಂದಿಗೆ ಹಲವು ತರ್ಕಬದ್ಧವಾದ ವಿಮರ್ಶೆ, ಟೀಕೆ, ಆರೋಪ ಮತ್ತು ಸವಾಲುಗಳನ್ನು ಒಂದು ನಾಣ್ಯದ ಎರಡು ಮುಖವೆಂಬಂತೆ ಹೊತ್ತು ತಂದಿದೆ. ಭಾರತದಲ್ಲಿ ಈಗಾಗಲೇ ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹ, ಹೆಬ್ಬಕ್ಕಿ (ಗ್ರೇಟ್ ಇಂಡಿಯನ್ ಬಸ್ಟರ್ಡ್), ಸಿಂಹ ಬಾಲದ ಸಿಂಗಳೀಕಗಳು ಇತರ ಹಲವು ಸ್ಥಳೀಯ ವನ್ಯಜೀವಿಗಳು ತಮ್ಮ ಉಳಿವಿಗಾಗಿ ಸಹಾಯದ ಹಸ್ತವನ್ನು ಕಾಯುತ್ತಿರುವಾಗ ವಿದೇಶದಿಂದ ಚೀತಾಗಳನ್ನು ಕರೆಸಿಕೊಳ್ಳುವಂತಹ ಆತುರವೇನಿತ್ತು? ಹಿಂದೆ ಸಿವಂಗಿಗಳಿದ್ದ ಹಲವು ಸ್ಥಳಗಳಲ್ಲಿ ಸಿವಂಗಿಗಳ ಪಾತ್ರವನ್ನು ಚಿರತೆಗಳು ತಕ್ಕಮಟ್ಟಿಗಾದರೂ ನಿರ್ವಹಿಸುತ್ತಿವೆ. ಅಷ್ಟೊಂದು ಉತ್ಸಾಹವಿದ್ದರೆ ರಾಷ್ಟ್ರೀಯ ಉದ್ಯಾನವನದಿಂದ ಜನ ಹಾಗೂ ಸಾಕು ಜಾನುವಾರುಗಳನ್ನು ಮುಕ್ತಗೊಳಿಸಿ, ಭಾರತದಲ್ಲಿ ಸಿವಂಗಿಗಳ ಬೇಟೆಗಳಾದ ಕೃಷ್ಣಮೃಗ, ಚುಕ್ಕಿ ಜಿಂಕೆ, ನೀಲ್ ಗಾಯ್, ಹುಲ್ಲೇಕರುಗಳ ಸಾಂದ್ರತೆಯನ್ನು ಹೆಚ್ಚಿಸಿ ಸೂಕ್ತ ತಯಾರಿಯ ನಂತರ ಆಮದು ಪ್ರಕ್ರಿಯೆ ಕೈಗೊಳ್ಳಬೇಕಿತ್ತು ಎನ್ನುವುದು ಹಲವು ಪರಿಸರತಜ್ಞರುಗಳ ಅಭಿಪ್ರಾಯವಾಗಿದೆ. ಭಾರತದಲ್ಲಿ ಮಾತ್ರ ಕಂಡುಬರುವ ಕೇವಲ ಒಂದೇ ಆರೋಗ್ಯಯುತ ಸಮೂಹದಲ್ಲಿ ಪ್ರಸ್ತುತವಿರುವಂತಹ ಏಷ್ಯಾಯಾಟಿಕ್ ಸಿಂಹಗಳ ಇನ್ನೊಂದು ಸಮೂಹವನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಿರಗೊಳಿಸುವಂತಹ ಯೋಜನೆಯು ಚೀತಾಗಳಿಂದಾಗಿ ವಿಳಂಬವಾಗಬಹುದೆಂಬ ಕಳವಳ ಸಹ ಇದೆ.  ಆಫ್ರಿಕಾದ ಚೀತಾಗಳು ಅಲ್ಲಿನ ಸವನ್ನಾ ಹುಲ್ಲುಗಾವಲುಗಳ ಸಾಮ್ರಾಜ್ಯದಿಂದ ಬಂದವಾದ್ದರಿಂದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಎಲೆ ಉದುರುವ ಕಾಡಿನಲ್ಲಿ ಚಿರತೆಗಳ (ಲೆಪರ್ಡ್) ಜೊತೆಗೆ ಆಹಾರಕ್ಕಾಗಿ ಸಂಘರ್ಷ ಉಂಟಾಗುವಂತಹ ಸಾಧ್ಯತೆಗಳನ್ನು ಕೂಡ ತಳ್ಳಿ ಹಾಕುವಂತಿಲ್ಲ. ಹಲವು ಅಧ್ಯಯನಗಳು, ಚಿರತೆಗಳು ಸಿವಂಗಿಗಳ ಮೇಲೆ ಆಕ್ರಮಣಕಾರಿಯಾದಂತಹ ವರ್ತನೆಯನ್ನು ತೋರಿ ದಾಳಿ ಮಾಡಿರುವುದನ್ನು ಬಹಿರಂಗಪಡಿಸಿದೆ.   

©ರತನ್ ಶರ್ಮ

ಪ್ರಾಜೆಕ್ಟ್ ಚೀತಾದ ಉದ್ದೇಶ ಆರೋಗ್ಯಯುತ ಶಾಶ್ವತ ಸಿವಂಗಿಗಳ ಸಮೂಹವೊಂದನ್ನು ಬೆಳೆಸಿ ಪರಿಸರದಲ್ಲಿ ಸ್ವಾಭಾವಿಕ ಪಾತ್ರ ನಿರ್ವಹಿಸುವಂತೆ ಮಾಡಬೇಕೆನ್ನುವುದು, ಹುಲ್ಲುಗಾವಲಿನ ಆಹಾರ ಸರಪಳಿಯ ಶಿಖರದಲ್ಲಿರುವಂಥ ಪ್ರಾಣಿಯಾದ ಸಿವಂಗಿಯನ್ನು ಉಳಿಸಿದರೆ ಹುಲ್ಲುಗಾವಲನ್ನು ಅವಲಂಬಿಸಿರುವ ಉಳಿದ ಎಲ್ಲಾ ಜೀವಿಗಳನ್ನು ಸಹ ಸಂರಕ್ಷಿಸಬಹುದು ಎಂಬುವಂತಹ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದೆ. ಆದರೆ, ಚೀತಾಗಳ ವಿಭಿನ್ನ ರೀತಿಯ ಜೀವನಶೈಲಿ ಹಾಗು ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ತಕ್ಕಮಟ್ಟಿಗಿನ ಹುಲ್ಲು ಅಥವಾ ಬೇಟೆಯಾಡಲು ಬೇಟೆಪ್ರಾಣಿಗಳ ಸಾಂದ್ರತೆಯ ಕೊರತೆ ಈ ಉದ್ದೇಶಗಳ ನೆರವೇರುವ ಸಾಧ್ಯತೆಯನ್ನು ಜಟಿಲಗೊಳಿಸುತ್ತದೆ.


ಲೇಖನ: ರಜತ್ ಕುಮಾರ್.
         ಚಿಕ್ಕಮಗಳೂರು ಜಿಲ್ಲೆ
.

Print Friendly, PDF & Email
Spread the love
error: Content is protected.