ಕಾಗದದ ಮನೆಯ ಯಜಮಾನ್ತಿ

ಕಾಗದದ ಮನೆಯ ಯಜಮಾನ್ತಿ

©ಸುನೀಲ್ ಕುಂಬಾರ್

ಶೀರ್ಷಿಕೆ ಕೇಳಲು ಬಲು ವಿಚಿತ್ರವಾದರೂ, ವಾಸ್ತವವಾಗಿ ಜಗತ್ತಿನಲ್ಲಿ ಏಕೈಕ ಕಾಗದದ ಮನೆ ಅಂದ್ರೆ ಈ ಕೀಟದ್ದೇ. ನಾನು ಹೇಳ್ತಾ ಇರೋದು ಕಣಜದ (Paper wasp) ಬಗ್ಗೆ. ಈ ಕಣಜ ಕಟ್ಟುವ ಗೂಡಿನಿಂದಾಗಿ ಈ ಹೆಸರು.! ಮರದ ನಾರಿನಂಶವನ್ನು ತನ್ನ ಬಾಯಿಯ ಲಾಲರಸದೊಂದಿಗೆ ಬೆರೆಸಿ ಕಾಗದದಂತಹ ವಸ್ತುವನ್ನು ತಯಾರಿಸಿ ಅದರಿಂದ ಗೂಡನ್ನು ಕಟ್ಟುತ್ತದೆ. ಇವೆಲ್ಲ ಅಂಶಗಳನ್ನು ಓದಿ ತಿಳಿಯಬೇಕಾದ ಸಂದರ್ಭವನ್ನು ಸೃಷ್ಟಿಸಿದ್ದು ಮಾತ್ರ ನಾನು! ಎಂದಿನಂತೆ ಮಗನಿಗೆ ಏನೋ ತಿಳಿಸಲು ಹೋಗಿ ಮತ್ತಿನ್ನೇನನ್ನೋ ತಿಳಿಯಬಯಸಿ ವಿಷಯಾಂತರವಾಗುವುದು ಮಾತ್ರ ಅಚ್ಚರಿಯೇ ಸರಿ. ಅವತ್ತು ಕೂಡ ವಿವಿಧ ಆಕಾರಗಳನ್ನು ಹೇಳಿ ಕೊಡುತ್ತಿರುವಾಗ ಅವನ ಪುಸ್ತಕದಲ್ಲಿರುವ ಆಕಾರಗಳನ್ನು ಮಾತ್ರ ತಿಳಿಸಿಕೊಟ್ಟಿದ್ದರೆ ವಿಷಯಾಂತರವಾಗುವುದು ತಪ್ಪುತ್ತಿತ್ತು! ಷಟ್ಕೋನಾಕೃತಿಗೆ ಉದಾಹರಣೆ ಹೇಳುತ್ತಾ, ಹಿತ್ತಲು ಬಾಗಿಲಿನ ಹೊರಬಾಗಿಲಿನ ಚೌಕಟ್ಟು ಮೂಲೆಯಲ್ಲಿರುವ ಕಣಜದ ಗೂಡನ್ನು ತೋರಿಸಿದೆ.

© ಅನುಪಮಾ ಕೆ ಬೆಣಚಿನಮರ್ಡಿ

ಅಷ್ಟೇ, ಅಲ್ಲಿಗೆ ನಮ್ಮ ಆಕಾರಗಳನ್ನು ಕಲಿಯುವ ಆಕಾರವೇ ಬದಲಾಗಿ ಹೋಯಿತು.ಗೂಡಿನಲ್ಲಿ ಒಟ್ಟು ಎಷ್ಟು ಕಣಜಗಳಿವೆ? ಅವುಗಳು ಗೂಡಿನ ಮೇಲೆಲ್ಲಾ ಹಾಗೇಕೆ ಸಂಚರಿಸುತ್ತಿವೆ? ಕೆಲ ಕಣಜಗಳು ಗೂಡಿಗೆ ಬಂದು ಮತ್ತೆ ಹಾರಿ ಹೋಗುತ್ತಿವೆ, ಅದೇಕೆ ಹಾಗೆ? ಗೂಡಿದ್ದ ಮೇಲೆ ಮರಿಗಳು ಇರಬೇಕಲ್ವೇ? ಇನ್ನೂ ಹತ್ತಾರು ಪ್ರಶ್ನೆಗಳು ಮನದಲ್ಲಿ ಮೂಡಿದ್ದವು.

ಅಷ್ಟರಲ್ಲೇ ನನ್ನ ಪುಟಾಣಿ ಮಗ ತಾನೇನು ಕಡಿಮೆ ಎನ್ನುವಂತೆ ತುಂಬಾ ತಾರ್ಕಿಕವಾದ ಪ್ರಶ್ನೆಗಳನ್ನು ಕೇಳ ಹತ್ತಿದ “ಈ ಗೂಡು ಮೇಲಿನ ಗೋಡೆಗೆ ಅಂಟಿಕೊಂಡಿದ್ದರೆ, ಅದರ ಮೇಲಿರುವ ಕಣಜಗಳು ಕೆಳಗೆ ಬೀಳಬೇಕಲ್ಲವೇ? ಅವುಗಳಿಗೆ ಹಾರಲು ಬರದಿದ್ದರೂ ಸಹ ಮರಿಗಳು ಕೆಳ ಬೀಳುವುದಿಲ್ಲವೇ? ಮೊಟ್ಟೆಗಳು?!” ಇಷ್ಟು ತರ್ಕಬದ್ಧವಾದ ಪ್ರಶ್ನೆಗಳನ್ನು ಅವನಿಂದ ನಿರೀಕ್ಷಿಸಿರಲಿಲ್ಲ! ಹೀಗಾಗಿ ನನಗೆ ಗೊತ್ತಿಲ್ಲವೆಂದು ಹೇಳಿದರೆ ಹಠ ಮಾಡಬಹುದೆಂದು ಎನಿಸಿದರೂ ಕಾಲ್ಪನಿಕ ಕತೆ ಕಟ್ಟಿ ಅವನ ಕುತೂಹಲವನ್ನು ಅವೈಜ್ಞಾನಿಕವಾಗಿ ತಣಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯ ಕೊಟ್ಟರೆ ಓದಿ ತಿಳಿಸಿ ಹೇಳುವೆ ಎಂದೆ. ಒಮ್ಮೆಲೆ ಒಪ್ಪಿಗೆ ಕೊಟ್ಟುಬಿಟ್ಟ. ಏನೋ ವಿಚಿತ್ರವಾದುದೊಂದು ಘಟಿಸಿತೆಂದು ಮನಸ್ಸಿನಲ್ಲಿ ತಳಮಳ ಶುರುವಾಯಿತು! ಇಷ್ಟು ಬೇಗ ದೊಡ್ಡವನಾಗಿಬಿಟ್ಟನೇ? ನಾನು ಹೇಳಿದ್ದನ್ನು ಕೇಳಿದರೆ ಅವ ದೊಡ್ಡವನಾದನೆಂದುಕೊಳ್ಳಬೇಕೇ? ಮುಂದೆಯೂ ಅವನು ನಾನು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬಲ್ಲನೇ? ಯಾಕೋ ನನ್ನ ಯೋಚನೆಗಳೇ ದಿಗಿಲು ಹುಟ್ಟಿಸುವಂತಿದ್ದು ಸಧ್ಯಕ್ಕೆ ಮಗನ ನಿರೀಕ್ಷೆಯನ್ನು ಹುಸಿಮಾಡಬಾರದೆಂದು ಈ ಕಣಜಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡತೊಡಗಿದೆ. ನೋಡುತ್ತಿದ್ದಂತೆ ಕಣಜಗಳ ಬಗ್ಗೆ ಮಾಹಿತಿಯ ಕಣಜವೇ ಸಿಕ್ಕಿತು! ಭಾರತದಲ್ಲಿ ಕಾಣಸಿಗುವ ಈ ಪೇಪರ್ ಕಣಜಗಳು ನೋಡಲು ಕೆಂಪು ಮಿಶ್ರಿತ ಕಂದು ಬಣ್ಣದ್ದಾಗಿರುತ್ತವೆ. ಆಡುಭಾಷೆಯಲ್ಲಿ ‘ಖಡಜುರ್ಗಿ’ ಅಂತ ಕರೆದರೂ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಇದಕ್ಕೆ ಕಣಜವೆಂದೇ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Ropalidia marginata ಅಂತ.  Vespidae ಎಂಬ ಕುಟುಂಬಕ್ಕೆ ಸೇರಲ್ಪಟ್ಟಿದೆ.  ಉಳಿದ ಕೀಟಗಳಂತೆ ಕಣಜಗಳಲ್ಲಿ ಕೂಡ ರಾಣಿ ಕಣಜವೇ ಗೂಡಿನ ಮುಖ್ಯಸ್ಥೆ. ಬೇಸಿಗೆ ಶುರುವಾಗುತ್ತಿದ್ದಂತೆ ಇದರ ಜೀವನ ಚಕ್ರ ಉತ್ತಮ ವೇಗ ಪಡೆದುಕೊಳ್ಳುತ್ತದೆ. ರಾಣಿಯು ತುಂಬಾ ಯೋಚಿಸಿ ತನ್ನ ಗೂಡಿನ ಜಾಗವನ್ನು ಆಯ್ದುಕೊಳ್ಳುತ್ತದೆ.

© ಸುನೀಲ್ ಕುಂಬಾರ್

ಹೆಚ್ಚಾಗಿ ಮರದ ಪೊಟರೆ, ಮನುಷ್ಯನ ಆವಾಸದ ಸುತ್ತಮುತ್ತ ಮನೆಯ ಕಿಟಕಿಯ ಮೂಲೆಗೊ ಅಥವಾ ಗೋಡೆಯ ಬಿರುಕುಗಳಲ್ಲಿ ಗೂಡು ಕಟ್ಟಿ ಮೊಟ್ಟೆಯನ್ನಿಡುತ್ತದೆ. ಷಟ್ಕೋನಾಕೃತಿಯ (ಜೇನುಹುಳುವಿನ ಗೂಡಲ್ಲಿ ಕೂಡ ಈ ತರಹ ಚಿಕ್ಕ ಚಿಕ್ಕ ಕೋಣೆಗಳನ್ನು ನೋಡಬಹುದು) ಒಂದೊಂದು ಕೋಣೆಯಲ್ಲಿ ಒಂದು ಮೊಟ್ಟೆ ಮಾತ್ರ ಇಡುತ್ತದೆ. ಮುಂದೆ ಅದು ವಯಸ್ಕ ಕಣಜವಾಗುವವರೆಗೂ, ಆ ಪ್ರತ್ಯೇಕ ಕೋಣೆಯೇ ಅದರ ಮನೆ. ಒಂದು ಗೂಡಿಗೆ ಒಬ್ಬಳೇ ಮುಖ್ಯಸ್ಥೆ. ರಾಣಿ ಕಣಜ ಮಾತ್ರ ಮೊಟ್ಟೆಗಳನ್ನು ಇಡಬಹುದು. ಉಳಿದ ಕಣಜಗಳು ಕೇವಲ ಕೆಲಸಗಾರರು ಮಾತ್ರ. ಕೆಲಸಗಾರರ ಸಂಖ್ಯೆ ಹೆಚ್ಚಿದಂತೆ ಗೂಡು ಬೆಳೆಯುತ್ತಾ ಹೋಗುತ್ತದೆ, ಇದರಿಂದ ಕೇವಲ ಕಣಜಗಳ ಸಂಖ್ಯೆಯಷ್ಟೇ ಅಲ್ಲದೆ ಗೂಡಿನ ಗಾತ್ರ ಕೂಡ ಹೆಚ್ಚುತ್ತದೆ. ಎಂಟರಿಂದ ಹತ್ತು ದಿನಗಳಲ್ಲಿ, ಮೊಟ್ಟೆಯೊಡೆದು ಹೊರಬಂದ ಲಾರ್ವಗಳಿಗೆ ಸತತವಾಗಿ ಆಹಾರ ನೀಡಬೇಕಾಗುತ್ತದೆ. ಗೂಡಿನಲ್ಲಿ ಎಲ್ಲ ಕಣಜಗಳಿಗೂ ಪ್ರತ್ಯೇಕ ಜವಾಬ್ದಾರಿಗಳಿರುತ್ತವೆ. ಕೆಲ ಕಣಜಗಳು ಹೊರಗಿನಿಂದ ಆಹಾರ ತಂದರೆ, ಇನ್ನು ಕೆಲವು ಆ ಆಹಾರವನ್ನು ಲಾರ್ವಗಳಿಗೆ ತಲುಪಿಸುತ್ತವೆ. ಕೆಲ ಕಣಜಗಳು ಗೂಡಿನ ದುರಸ್ತಿ ಹಾಗು ಗೂಡು ಕಟ್ಟುವ ಕೆಲಸ. ಮುಂದಿನ ಹದಿನೈದು ದಿನಗಳವರೆಗೆ ಲಾರ್ವಗಳಿಗೆ ತಿನ್ನುವುದೊಂದೇ ಧ್ಯೇಯ. ಕಂಬಳಿಹುಳುಗಳು ಮತ್ತು ಜೇಡ ಇವುಗಳ ಮುಖ್ಯ ಆಹಾರ. ಲಾರ್ವಾಗಳು ಸಾಕಷ್ಟು ತಿಂದು ಕೊಬ್ಬಿದ ನಂತರ ಅವು ಕೋಶಾವಸ್ಥೆಗೆ ತಲುಪುತ್ತವೆ. ಆಗ ತಮ್ಮ ಕೋಣೆಯ ಮೇಲ್ಭಾಗವನ್ನು ನೂಲಿನೆಳೆಯಂತಹ ವಸ್ತುವಿನಿಂದ ನೇಯ್ದು ಅದನ್ನು ಮುಚ್ಚಿಕೊಂಡು ಬಿಡುತ್ತವೆ. ಮುಂದಿನ ಎಂಟು ದಿನಗಳು, ಲಾರ್ವಾ ಕಣಜವಾಗಿ ಮಾರ್ಪಾಡಾಗುವ ಸುಂದರ ಪ್ರಕ್ರಿಯೆ. ಇಷ್ಟೆಲ್ಲಾ ಅವಸ್ಥೆಗಳನ್ನು ಪೂರೈಸಿ ಬಂದ ಕಣಜವನ್ನು ಅದು ಮುಂದೆ ಯಾವಾಗಲಾದರೂ ಕಡಿಯಬಹುದೆಂದು ಮುಂದೆ ಸಿಕ್ಕ ದಿನಪತ್ರಿಕೆಯನ್ನೋ ಅಥವಾ ಪೊರಕೆಯಿಂದಲೋ ಓಡಿಸುವುದನ್ನು ನೆನಪಿಸಿಕೊಂಡಾಗ. ನಾನೆಷ್ಟು ಮೂರ್ಖೆ ಎಂದೆನಿಸಿದ್ದು ಸುಳ್ಳಲ್ಲ.

© ಅನುಪಮಾ ಕೆ. ಬೆಣಚಿನಮರ್ಡಿ

ಕಳೆದ ವರ್ಷ ದಸರಾ ಹಬ್ಬದ ಪ್ರಯುಕ್ತ ಮನೆಯಲ್ಲಿ 9 ದಿನಗಳ ಬತ್ತಿ (ಈ ದೀಪ 9 ದಿನ ನಿರಂತರವಾಗಿ ಉರಿಯಬೇಕು. ಇದು ದಸರಾ ಹಬ್ಬದ ಮುಖ್ಯ ನಿಯಮ) ಇದ್ದುದ್ದರಿಂದ ಇಡೀ ಮನೆಯನ್ನು ಗುಡಿಸಿ, ತೊಳೆದು ಶುಚಿಗೊಳಿಸಬೇಕಿತ್ತು. ಆಗ ದನಗಳ ಕೊಟ್ಟಿಗೆಯ ಕಿಟಕಿಯ ಪಕ್ಕ ಜೇನುಗೂಡಿನ ತುಕಡಿಯೊಂದು ಬಿದ್ದಂತೆ ಕಂಡಿತ್ತು. ಇರುವೆ ಸಾಲು ಕೂಡ ಇತ್ತು. ಗೂಡಿನ ಮೇಲೆಲ್ಲಾ ಇರುವೆ ಮುತ್ತಿದ್ದರಿಂದ ಏನೊಂದು ಕಾಣಿಸುತ್ತಿರಲಿಲ್ಲ. ಮಾಡುವ ಕೆಲಸ ಬೆಟ್ಟದಷ್ಟಿದ್ದರೂ, ಆ ದೃಶ್ಯವನ್ನು ಅಲ್ಲಿಗೆ ಬಿಡಲು ಮನಸ್ಸು ಒಪ್ಪಲಿಲ್ಲ. ಮನೆಯ ಹಿರಿಯರು ಬಯ್ದರೂ ಸರಿಯೇ, ಅಲ್ಲೇನಾಗುತ್ತಿದೆ ಎಂದು ನೋಡಲೇಬೇಕೆಂದು ಒಂದು ಕಡ್ಡಿಯಿಂದ ಇರುವೆಗಳನ್ನು ಚದುರಿಸಿದೆ. ಅದೇನು ಜೇನುಗೂಡಿನಂತೆ ಕಾಣಲಿಲ್ಲ. ಅಲ್ಲದೆ ಕೆಲ ಕಣಜಗಳು ಮೇಲಿನ ಗೋಡೆಯಲ್ಲಿ ಹಾರಾಡುತ್ತ ಇದನ್ನೆಲ್ಲಾ ವೀಕ್ಷಿಸುತ್ತಿದ್ದವು. ಹೀಗಾಗಿ ಅದು ಕಣಜಗಳ ಗೂಡೆಂದು ಮನದಟ್ಟಾಯಿತು. ಅಷ್ಟು ಹತ್ತಿರದಿಂದ ಅದನ್ನು ನೋಡುವ ಅವಕಾಶ ಬಂದಿರಲಿಲ್ಲ. ಆದರೆ ಈಗ ಮರಿಕಣಜಗಳ ಕೊಲೆಪಾತಕಿ ನಾನೆ ಎಂದು ಬೇರೆ ಕಣಜಗಳು ದಾಳಿ ಮಾಡಿದರೆ ಏನು ಗತಿ ಎಂದು ಅದನ್ನು ಅಲ್ಲಿಂದ ಒಯ್ದು ಮಹಡಿಯ ಇನ್ನೊಂದು ಕಿಟಕಿಯ ಬಳಿ ಇಟ್ಟು ದಿಟ್ಟಿಸಿ ನೋಡಿದೆ. ಅಂಗೈ ಅಗಲದ ಆ ಕಣಜದ ಗೂಡಿನಲ್ಲಿ, ಅದರ ಜೀವನ ಚಕ್ರದ ಎಲ್ಲಾ ಹಂತಗಳೂ ಇದ್ದವು. ಬೇರೆ ಬೇರೆ ಗಾತ್ರದ ಲಾರ್ವಗಳು, ಕೆಲ ಪ್ಯೂಪಾಗಳು, ಕೆಲ ಖಾಲಿ ಕೋಣೆಗಳು, ಒಂದರಲ್ಲಿ ಮೊಟ್ಟೆ ಸಹ ಇತ್ತು. ಕೆಲ ಕೋಣೆಗಳಲ್ಲಿರುವ ಲಾರ್ವಾಗಳನ್ನು ಇರುವೆಗಳು ಸವಿಯುತ್ತಿದ್ದವು! ಅಲ್ಲೊಂದು ಬೇರೆ ಲೋಕವೇ ಇತ್ತು. ಅದನ್ನು ನನ್ನಿಬ್ಬರ ಮಕ್ಕಳಿಗೂ ತೋರಿಸಬೇಕೆಂದು ಅವರನ್ನು ಹುಡುಕಲು ಹೊರಟೆ. ಸೀಲಿಂಗ್ ಫ್ಯಾನ್ ಅನ್ನು ಕೂಡ ಶುಚಿಗೊಳಿಸಬೇಕೆಂದು ನೀರಿನ ಪೈಪನ್ನು ಅದರತ್ತ ಗುರಿಯಿಟ್ಟು ನಳ ತಿರುಗಿಸಲು ತನ್ನ ತಮ್ಮನಿಗೆ ಆದೇಶ ನೀಡುತ್ತಿದ್ದ ನನ್ನ ಮಗನನ್ನು ನೋಡಿ ಎದೆ ನಡುಗಿತು. ಸಧ್ಯ ಸರಿಯಾದ ಸಮಯಕ್ಕೆ ಬಂದೆ ಎನ್ನುತ್ತಾ ಆ ಆಟದಿಂದ ಬಿಡಿಸಿ ಕಣಜದ ಗೂಡನ್ನು ತೋರಿಸಲು ಬರುವಷ್ಟರಲ್ಲಿ ಮತ್ತೊಂದು ಇರುವೆ ಸಾಲು ಕಣಜದ ಗೂಡಿಗೆ ಲಗ್ಗೆ ಇಟ್ಟಿತ್ತು. ಅಷ್ಟೊಂದು ರುಚಿಯಾಗಿರುತ್ತವೆಯೇ ಈ ಕಣಜಗಳು ಎಂಬ ಸಂದೇಹ ಮೂಡಿತು! (ಪುಣ್ಯಕ್ಕೆ ಆ ಸಂದೇಹವನ್ನು ನಿವಾರಿಸಲು ಯಾವುದೇ ಪ್ರಯತ್ನ ಪಡಲಿಲ್ಲ. ಅದಿನ್ನೂ ಸಂದೇಹವಾಗಿಯೇ ಉಳಿದಿದೆ!) ಮತ್ತೆ ಇರುವೆಗಳನ್ನು ಓಡಿಸಿ ಗೂಡನ್ನು ಮಕ್ಕಳಿಗೆ ತೋರಿಸಿದರೆ ಚಿಕ್ಕವನಿಗೆ ಏನು ಅರ್ಥವಾಯಿತೆಂದು ನನಗೆ ಅರ್ಥವಾಗದಿದ್ದರೂ, ದೊಡ್ಡವ ಏನು ಅರ್ಥ ಮಾಡಿಕೊಂಡನೋ? ಆ ಲಾರ್ವಾಗಳನ್ನು ಇರುವೆಗಳು ಯಾಕೆ ತಿಂದವು ಎಂದು ಅಳಲು ಶುರು ಮಾಡಿದ! ಇದೊಳ್ಳೆ ಫಜೀತಿಯಾಯ್ತಲ್ಲ, ಏನು ಮಾಡುವುದೆಂದು ಯೋಚಿಸುತ್ತಿರುವಾಗ, ಅವನೇ ಪರಿಹಾರ ಹುಡುಕಿದ. ‘ ನೀನು ಆ ಗೂಡನ್ನು ಫ್ರಿಜ್ ನಲ್ಲಿಡು. ಇರುವೆಗಳು ಮುತ್ತುವುದಿಲ್ಲ’ ಎಂದ!

ಬಾಲ್ಯದಲ್ಲಿ ನಾನು ಪ್ರತಿ ಸಲ ಹೊಲಕ್ಕೆ ಹೋದಾಗಲೂ, ನನ್ನ ಮುತ್ತಜ್ಜಿಯ ಸಮಾಧಿ ಸ್ಥಳಕ್ಕೆ ತಪ್ಪದೆ ಭೇಟಿ ಕೊಡುತ್ತಿದ್ದೆ. ಆ ಸ್ಥಳದಲ್ಲಿ ತಡಿ (ಒಂದು ಚಿಕ್ಕ ಗೋಪುರದ ಗುಡಿಯಂತೆ ಹೋಲಿಕೆ ಇರುವ ಒಂದು ಚಿಕ್ಕ ಮನೆ. ಹಿರಿಯರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಇದನ್ನು ಬಹುತೇಕ ಎಲ್ಲರೂ ಕಟ್ಟಿಸುತ್ತಾರೆ.) ಕಟ್ಟಿಸಿದ್ದೇವೆ.  ಇದರಲ್ಲಿ ಯಾವಾಗಲು ಸುಮಾರು 8-10 ಇಂತ ಕಾಗದ ಕಣಜಗಳ ಗೂಡಿರುತ್ತಿದ್ದವು. ಅವುಗಳನ್ನು ಎಷ್ಟೇ ಓಡಿಸಿದರೂ ಮತ್ತೆ ಎರಡು ಮೂರು ದಿನಗಳಲ್ಲಿ ಅವು ಗೂಡನ್ನು ಕಟ್ಟಿ ಬಿಡುತ್ತಿದ್ದವು. ಇವು ಕಡಿದರೆ ತುಂಬಾ ನೋವಾಗುತ್ತದೆ ಎಂದು ಕಡಿಸಿಕೊಂಡವರು ಹೇಳುತ್ತಿದ್ದರು. ಮತ್ತು ಅದು ಕುಟುಕಿದ ಜಾಗದಲ್ಲಿ ಅದರ ಮುಳ್ಳು ಅಲ್ಲಿಯೇ ಉಳಿದು ಬಿಡುತ್ತದೆ ಎಂದು ಹೆದರಿಸಿದ್ದರೂ ಕೂಡ. ಇದಕ್ಕಿಂತ ಹೆಚ್ಚು ಬೆಚ್ಚಿ ಬೀಳಿಸುವ ಅಂಶವೆಂದರೆ, ಕುಟುಕಿದ ಜಾಗದಿಂದ ಆ ಮುಳ್ಳನ್ನು ತೆಗೆಯಬೇಕೆಂದರೆ ಅದರ ಮೇಲೆ ಸಿಂಬಳ ಹಚ್ಚಬೇಕಂತೆ! ಅದಕ್ಕೆ ಅಂಟಿಕೊಂಡು ಮುಳ್ಳು ಹೊರಬರುತ್ತಂತೆ. ನೆಗಡಿಯಿದ್ದಾಗಲೇ ಕಣಜ ಕುಟಿಕಿದರೆ ಅದೃಷ್ಟ! ಇಲ್ಲದಿದ್ದರೆ? ನೀವೇ ಊಹಿಸಿಕೊಳ್ಳಿ.

 ಇದೆಲ್ಲ ಉಸಾಬರಿಯೇ ಬೇಡ ಎಂದು ಕಣಜಗಳಿಂದ ಆದಷ್ಟು ಅಂತರ ಕಾಯ್ದುಕೊಂಡಿದ್ದೆ. ಆದರೂ ಯಾರಾದರೂ ತಿಳುವಳಿಕೆ ಹೇಳಿದ್ದರೆ ಅಥವಾ ನಾನೇ ಗಟ್ಟಿ ಮನಸ್ಸು ಮಾಡಿದ್ದರೆ ಸುಖಾ ಸುಮ್ಮನೆ ಮನೆ ಸ್ವಚ್ಛ ಮಾಡಲೆಂದು ಅವುಗಳ ಮನೆ ಬೀಳಿಸುತ್ತಿರಲಿಲ್ಲ. ಅದರ ಬಗ್ಗೆ ನನಗೆ ಖೇದವಿದೆ

© ಅನುಪಮಾ ಕೆ. ಬೆಣಚಿನಮರ್ಡಿ

ಇತ್ತೀಚಿನ ಹೊಸ ಸಂಶೋಧನೆಯ ಪ್ರಕಾರ, ಗೂಡಿನಲ್ಲಿರುವ ಪ್ರತಿಯೊಂದು ಕಣಜಕ್ಕೂ ತನ್ನದೇ ಆದ ಸ್ವಂತ ಕೋಣೆಯು ನಿಗದಿಯಾಗಿರುತ್ತದೆ ಮತ್ತು ಅದು ಆ ಕೋಣೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಕಾರಣವೂ ಕುತೂಹಲಕಾರಿಯಾಗಿದೆ.

© ಜಾನ್ಹವಿ ವೈ ಆರ್

ಅನಿರ್ದಿಷ್ಟವಾಗಿ ಯಾವುದೋ ಕೋಣೆಯಲ್ಲಿ ತಂಗುವುದರಿಂದ ಗೂಡಿನಲ್ಲಿ ಇನ್ಫೆಕ್ಷನ್ ಆಗುವ ಸಂಭವವಿದ್ದು ಅದನ್ನು ತಪ್ಪಿಸಲು, ಗೂಡಿನ ಉಳಿಯುವಿಕೆಗಾಗಿ ಇವು ಈ ವಿಧಾನವನ್ನು ಆಯ್ಕೆ ಮಾಡಿಕೊಂಡಿವೆ ಎಂದು ಅಧ್ಯಯನದ ಮುಖಾಂತರ ವಿಜ್ಞಾನಿಗಳು ಖಚಿತಪಡಿಸಿಕೊಂಡಿದ್ದಾರೆ. ಗೂಡಿನಲ್ಲಿ ಅತಿ ಹೆಚ್ಚು ಜೀವಿಸುವ ಕಣಜವೆಂದರೆ ರಾಣಿ ಕಣಜ. ಉಳಿದ ಕೆಲಸಗಾರ ಕಣಜಗಳ ಜೀವನ, 22 ದಿನಕ್ಕೆ ಮುಗಿದು ಹೋಗುತ್ತದೆ. ಚಳಿಗಾಲ ಶುರುವಾಯ್ತೆಂದರೆ ರಾಣಿ ಕಣಜ ಗೂಡನ್ನು ತೊರೆದು ದೀರ್ಘಾವಸ್ಥೆಯ ನಿದ್ದೆಗೆ ಹೋಗುತ್ತದೆ ಮತ್ತೆ ಮುಂದಿನ ಬೇಸಿಗೆಗೆ ಇದರ ಹೊಸ ಜೀವನ ಶುರುವಾಗುತ್ತದೆ.

© ಸುನೀಲ್ ಕುಂಬಾರ್

ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
             ಬೆಂಗಳೂರು ಜಿಲ್ಲೆ
.

Print Friendly, PDF & Email
Spread the love
error: Content is protected.