ಕರುಳ ಬಳ್ಳಿ ಈ ಸೂಕ್ಷಜೀವಿ!

ಕರುಳ ಬಳ್ಳಿ ಈ ಸೂಕ್ಷಜೀವಿ!

©ROBERT STREIFFER

ನಿದ್ದೆಯೂ ಒಂದು ಕೆಲಸ ಎಂದರೆ ಸರಿಯೇ? ಅದು ಹೇಗೆ ಸಾಧ್ಯ, ಮಲಗಿರುವಾಗ ನಾವೇನು ಕೆಲಸ ಮಾಡುವುದಿಲ್ಲವಲ್ಲ. ಅದು ವಿಶ್ರಾಂತಿಯ ಭಂಗಿ ಎಂದು ಎನಿಸಿದರೂ ನಿದ್ದೆಯೂ ಒಂದು ಕೆಲಸವೇ. ಹಾಗೆ ನೋಡಿದರೆ ನಿದ್ದೆ ಹಲವಾರು ನಡೆಯಲೇಬೇಕಾದ ಕೆಲಸಗಳನ್ನು ನಡೆಯಲು ಸಹಕರಿಸುವ ಮುಖ್ಯ ಅವಸ್ಥೆ. ಅದು ಹೇಗೆ ಎಂದರೆ ನಾವು ಏನೂ ಮಾಡದೆ ಮಲಗಿರುವ ಸಮಯದಲ್ಲಿ ಕೇವಲ ಭೌತಿಕ ಕೆಲಸಗಳಿಗೆ ವಿರಾಮ ನೀಡಿರುತ್ತೇವೆ, ಆದರೆ ಅಸಲಿಗೆ ಹೃದಯ ತನ್ನ ಕೆಲಸ ಮಾಡುತ್ತಲೇ ಇರುತ್ತದೆ, ಶ್ವಾಸಕೋಶ ಉಸಿರಾಟ ಕ್ರಿಯೆಯಲ್ಲಿ ಮಗ್ನವಾಗಿರುತ್ತದೆ, ನಾವು ರಾತ್ರಿ ಸೇವಿಸಿದ ಆಹಾರದ ಪಚನ ಕ್ರಿಯೆಯಲ್ಲಿ ಹಲವಾರು ಅಂಗಾಂಗಗಳು ತಲ್ಲೀನವಾಗಿರುತ್ತವೆ. ಇವನ್ನೆಲ್ಲಾ ನಿಯಂತ್ರಿಸುವ ಮೆದುಳು ತನ್ನ ಕೆಲಸವನ್ನು ಬಿಡುವಿಲ್ಲದ ಹಾಗೆ ಮಾಡುತ್ತಲೇ ಇರಬೇಕಾಗುತ್ತದೆ. ಇವಕ್ಕೆಲ್ಲ ಪೂರಕ ಶಕ್ತಿಯ ಅವಶ್ಯಕತೆಯೂ ಇರುತ್ತದೆ. ಹೀಗೆ ನಿದ್ರೆಯಲ್ಲಿಯೂ ಸಹ ನಮ್ಮ ದೇಹದ ಶಕ್ತಿಯನ್ನು ಗಂಭೀರವಾಗಿ ಬಳಸುವ ಕೆಲಸಗಳು ಅಹೋರಾತ್ರಿ ನಡೆಯುತ್ತಿರುತ್ತವೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಬೇರೆಲ್ಲಾ ಜೀವಿಗಳಲ್ಲೂ ನಡೆಯುತ್ತಿರುತ್ತದೆ. ಮಂಜಿನ ಪ್ರದೇಶಗಳಲ್ಲಿ ಬದುಕುವ, ಚಳಿಗಾಲದಲ್ಲಿ ಆಹಾರದ ಅಭಾವ ಎದುರಿಸಲು ಕೆಲವು ಜೀವಿಗಳು ಮಾಡುವ ‘ಚಳಿ ನಿದ್ರೆ’ಯಲ್ಲೂ ಕೂಡ ಇಂತಹ ಕ್ರಿಯೆಗಳು ನಡೆಯುವುದರಿಂದ ಸುಮ್ಮನೆ ಮಲಗಿರುವಾಗಲೂ ದೇಹದಲ್ಲಿ ಶಕ್ತಿಯ ಬಳಕೆ ಆಗುತ್ತಲೇ ಇರುತ್ತದೆ. ಇದನ್ನು ಸರಿದೂಗಿಸಲು ಚಳಿ ನಿದ್ರೆಗೆ ಜಾರುವ ಮುನ್ನವೇ ಇಂತಹ ಜೀವಿಗಳು ಚೆನ್ನಾಗಿ ತಿಂದು ಕೊಬ್ಬಿನ ರೀತಿಯಲ್ಲಿ ದೇಹದಲ್ಲೇ ಶೇಖರಿಸಿಕೊಂಡು ಅದನ್ನು ಈ ನಿದ್ರಾವಸ್ಥೆಯಲ್ಲಿ ಬಳಸಿಕೊಳ್ಳುತ್ತವೆ. ಆ ಕೊಬ್ಬಿನ ಅಂಶ ಕರಗಿದಂತೆಲ್ಲಾ ತನ್ನ ಕಾಯ್ದಿರಿಸಿದ ಶಕ್ತಿ ಕೇಂದ್ರದಿಂದ ಶಕ್ತಿ ಕಡಿಮೆ ಆಗುತ್ತಲೇ ಇರುತ್ತದೆ. ಇದು ಹೆಚ್ಚಾಗಿ ಖಾಲಿಯಾದರೆ ಮುಂದೊಂದು ದಿನ ಚಳಿಗಾಲದ ಅಂತ್ಯವಾದ ಮೇಲೆ ಆ ಜೀವಿ ನಿದ್ರೆಯಿಂದ ಎದ್ದ ನಂತರ ಶಕ್ತಿ ಇಲ್ಲದಿದ್ದರೆ ಆಹಾರವನ್ನರಸಿ ಹೋಗಲು ಕಷ್ಟಕರವಾಗುತ್ತದೆ. ಆದ್ದರಿಂದಲೇ ಈ ಚಳಿನಿದ್ರೆಯಲ್ಲಿ ಜೀವಿಗಳು ತಮ್ಮ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲೇಬೇಕು. ಇಲ್ಲವಾದರೆ ಅವು ಬಲಹೀನವಾಗಿಬಿಡುತ್ತವೆ. ಆದರೆ ಕರುಳಿನಲ್ಲಿ ಇರುವ ಒಂದು ಬಗೆಯ ಸೂಕ್ಷ್ಮಜೀವಿ ಹೀಗೆ ಚಳಿ ನಿದ್ರೆ ಮಾಡುವ ಕೆಲವು ಬಗೆಯ ಅಳಿಲುಗಳಿಗೆ ಶಕ್ತಿಯನ್ನು ಒದಗಿಸುವ ಕೇಂದ್ರಗಳಾಗಿ ಸಹಾಯ ಮಾಡುತ್ತಿವೆ ಎಂದರೆ ಅಚ್ಚರಿಯಾಗುತ್ತದೆ.

© cc_squirrel

ನಾವು ನಿದ್ದೆ ಮಾಡಿ ಎದ್ದ ನಂತರ ಯಾವುದೇ ಬೆಟ್ಟ-ಗುಡ್ಡಗಳನ್ನು ಹತ್ತಬೇಕಿಲ್ಲ. ಆದರೆ ಚಳಿ ನಿದ್ರೆಯಿಂದ ಏಳುವ ಈ ಅಳಿಲುಗಳು ಅದನ್ನೇ ಮಾಡಬೇಕು. ಆದರೆ ದೀರ್ಘಕಾಲ ನಿದ್ರಾವಸ್ಥೆಯಲ್ಲಿರುವಾಗ ಕೊಬ್ಬನ್ನು ಜೀರ್ಣಿಸಿ ದೇಹಕ್ಕೆ ಶಕ್ತಿ ಉತ್ಪಾದಿಸಿ ಕೊಡುವ ಸಮಯದಲ್ಲಿ ಕೆಲವೊಮ್ಮೆ ಆ ಕೊಬ್ಬಿನಂಶ ಖಾಲಿಯಾಗಿ ದೇಹದ ಮಾಂಸಖಂಡಗಳನ್ನು ಬಳಸಿ ಶಕ್ತಿ ಉತ್ಪಾದನೆ ನಡೆಯುತ್ತದೆ. ಈ ಕ್ರಿಯೆಯಲ್ಲಿ ಸಾರಜನಕದ ಉತ್ಪತ್ತಿ ದೇಹದಲ್ಲಾಗುತ್ತದೆ. ಈ ಸಾರಜನಕದ ಪ್ರಮಾಣವು ದೇಹದಲ್ಲಿ ಹೆಚ್ಚಾದರೆ ತೊಂದರೆಯಾಗುತ್ತದೆ. ಹಾಗಾಗಿ ದೇಹ ಅದನ್ನು ‘ಯೂರಿಯಾ’ದ ಮೂಲಕ ಮೂತ್ರದಲ್ಲಿ ಹೊರಗೆ ಹಾಕುತ್ತದೆ. ಆದರೆ ಅದೇ ಸಾರಜನಕವು ಜೀವಿಯ ಮಾಂಸಖಂಡ ಸೃಷ್ಟಿಯಾಗಲು ಬೇಕಾದ ‘ಅಮೈನೋ ಆಸಿಡ್ (Amino Acid)’ ಉತ್ಪಾದನೆಯ ಮುಖ್ಯ ಅಂಶ ಕೂಡಾ ಆಗಿದೆ.

© cc_aminoacids

ಆರ್ಕಟಿಕ್ ನ ಒಂದು ಬಗೆಯ ಅಳಿಲಿನಲ್ಲಿ ಇಂತಹ ಮಾಂಸಖಂಡಗಳನ್ನು ಉತ್ಪಾದಿಸುವ ಅಮೈನೊ ಆಸಿಡ್ ಅನ್ನು ಅಳಿಲುಗಳೇ ಯಾವುದೇ ಸೂಕ್ಷ್ಮ ಜೀವಿಯ ಸಹಾಯವಿಲ್ಲದೆ ಮಾಡುತ್ತಿದ್ದವು ಎಂಬುದನ್ನು ಈಗಾಗಲೆ ಹಳೆಯ ಸಂಶೋಧನೆಯೊಂದು ಹೇಳಿದೆ. ಆದರೆ ಈ ಸಂಶೋಧನೆಯ ಪ್ರಕಾರ ಆ ಅಮೈನೋ ಆಸಿಡ್ ಆಗಲು ಅಳಿಲಿನ ಕರುಳಿನಲ್ಲಿ ದೊರಕುವ ಸೂಕ್ಷ್ಮಜೀವಿ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಹೇಳುತ್ತಿದೆ. ಹಾಗಾದರೆ ಅದನ್ನು ಹೇಗೆ ಕಂಡು ಹಿಡಿದರು? ಅದನ್ನು ಕಂಡುಹಿಡಿಯಲೆಂದೇ ‘ಐಸೋಟೋಪ್ (Isotope)’ ಎಂದು ಕರೆಯುವ ಒಂದು ಅಂಶವನ್ನು ಈ ಸೂಕ್ಷ್ಮಜೀವಿ ತಯಾರಿಸುವ ಸಾರಜನಕದ ಜೊತೆಗೆ ಜೋಡಿಸಿ ಅದು ಎಲ್ಲಿಗೆ ಹೋಗುತ್ತದೆ ಎಂದು ಅದರ ಜಾಡು ಹಿಡಿದರು. ಅವರ ಅಚ್ಚರಿಗೆ ಅಲ್ಲಿ ತಯಾರಾದ ಸಾರಜನಕ ಅಳಿಲಿನ ಮೂಳೆ ಬಳಿಯ ಮಾಂಸದಲ್ಲಿ ದೊರಕಿತು. ಅಂದರೆ ಈ ಸೂಕ್ಷ್ಮಜೀವಿ ತಯಾರಿಸಿದ ಸಾರಜನಕದಿಂದ ದೇಹದ ಮಾಂಸಖಂಡಗಳು ಬೆಳೆಯುತ್ತಿವೆ ಎಂದರೆ ತಪ್ಪಾಗಲಾರದು. ಅದನ್ನು ಖಚಿತಪಡಿಸಿಕೊಳ್ಳಲು ಅದೇ ಸಂಶೋಧನಾ ತಂಡ ಆ ಕರುಳಿನಲ್ಲಿರುವ ಸೂಕ್ಷ್ಮಜೀವಿಯನ್ನು ತೊಲಗಿಸುವ ಪ್ರತಿಜೀವಕ (antibiotic) ಕೊಟ್ಟರು. ಈ ಪ್ರತಿಜೀವಕ (Antibiotic) ಬಳಸಿದ ಅಳಿಲುಗಳ ಮಾಂಸಖಂಡದಲ್ಲಿ ಸಾರಜನಕದ ಕೊರತೆ ಗಮನೀಯವಾಗಿತ್ತು.  ಆಗ ಅವರಿಗೆ ಖಾತ್ರಿಯಾಗಿದ್ದು, ಕರುಳಿನ ಈ ಸೂಕ್ಷ್ಮಜೀವಿಯೇ ಅಳಿಲಿನ ಉಳಿವಿಗೆ ನೇರ ಸಹಾಯ ಮಾಡುತ್ತಿವೆ ಎಂದು.

ಎಂಥಾ ಸುವ್ಯವಸ್ಥೆ… ಸೊಂಪಾಗಿ ಮಲಗಿ ನಿದ್ರಿಸುತ್ತಿರುವ ಅಳಿಲಿಗೆ ಹೀಗೊಂದು ಕ್ರಿಯೆ ನನ್ನ ದೇಹದಲ್ಲೇ ಆಗುತ್ತಿದೆ, ಅದು ನನ್ನ ಉಳಿವಿಗೇ ಅತಿ ಅವಶ್ಯಕ ಎಂಬ ಅರಿವಿಲ್ಲ. ಹಾಗೆಯೇ ಇಂತಹದೊಂದು ಮಹತ್ಕಾರ್ಯ ನಾನು ಮಾಡುತ್ತಿದ್ದೇನೆಂದು ಆ ಸೂಕ್ಷ್ಮಜೀವಿಗೂ ತಿಳಿದಿಲ್ಲ. ಪ್ರಕೃತಿಯಲ್ಲಿ ಇದೊಂದು ಸಾಮಾನ್ಯ ಪ್ರಕ್ರಿಯೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ತಿಳಿಯುವುದೇನೆಂದರೆ ನಮ್ಮನ್ನು ಬಿಟ್ಟು ಉಳಿದೆಲ್ಲಾ ಜೀವಿಗಳು ನಿಸ್ವಾರ್ಥ, ಪರಸ್ಪರಾವಂಬನೆ, ಅನ್ಯೋನ್ಯತೆಗಳನ್ನು ಅಂತರ್ಗತವಾಗಿಸಿಕೊಂಡು, ಕೋಟ್ಯಾಂತರ ವರ್ಷಗಳಿಂದ ಬದುಕಿ ಬಂದಿವೆ. ನಾವು…?

© cc_mutualism

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.