ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                                ©ಡಾ.ದೀಪಕ್ ಬಿ, Gardon orb weaver spider   

ಜೇಡಗಳೆಂದರೆ ಭಯ ಪಡುವವರೇ ಹೆಚ್ಚು. ಆದರೆ ಈ ಸುಂದರ ಜೀವಿಗಳ ಜೀವನವನ್ನು ಹತ್ತಿರದಿಂದ ಗಮನಿಸಿದರೆ ತಿಳಿಯುತ್ತದೆ ಇವುಗಳ ಮಹತ್ವ. ಕುರುಚಲು ಪ್ರದೇಶಗಳ ಬಳಿ ಸಂಜೆವೇಳೆಗೆ ನೆಲಮಟ್ಟದಲ್ಲಿ ಬಲೆ ಕಟ್ಟುವ ಕೆಲಸಕ್ಕೆ ನಿಲ್ಲುವ ಈ ಜೇಡ ದುಂಡನೆಯ ವೃತ್ತಗಳುಳ್ಳ ಬಲೆಯನ್ನು ನಿಮಿಷಗಳಲ್ಲಿ ನಿರ್ಮಿಸಿ ಬಲೆಯ ಮಧ್ಯದಲ್ಲಿ ಬೇಟೆಯ ಬರುವಿಕೆಗಾಗಿ ಕಾದು ಕುಳಿತಿರುತ್ತದೆ. ಹಾರುವ ಸಣ್ಣ ಸಣ್ಣ ಕೀಟಗಳು ಬಲೆಗೆ ಬಿದ್ದರೆ ಚಕ್ಕನೆ ಹಿಡಿದು ತನ್ನ ದೇಹದಲ್ಲಿ ಸೂಸುವ ದಾರದ ಎಳೆಗಳಿಂದ ಸುತ್ತಿ ಬಂಧಿಸಿ ಬೇಟೆಯ ದೇಹಕ್ಕೆ ವಿಷವನ್ನು ಚುಚ್ಚುತ್ತದೆ. ಬಿಡುವಿನಲ್ಲಿ ತಿಂದು ಮುಗಿಸುತ್ತದೆ. ತಿಳಿ ಹಸಿರು ಕಾಲುಗಳುಳ್ಳ ಈ ಸುಂದರ ಜೇಡ ಬೆಳಗಾಗುತ್ತಿದ್ದಂತೆ, ಬೇಟೆ ಮುಗಿಸಿ ಸುರಕ್ಷಿತ ಸ್ಥಳದಲ್ಲಿ ಕುಳಿತುಕೊಳ್ಳುತ್ತದೆ. ಬಹಳ ನಾಚಿಕೆ ಸ್ವಭಾವ ಈ ಜೇಡ ತನಗೆ ಅಪಾಯ ಬಂದಾಗ ರೆಂಬೆಯ ಮೇಲಿಂದಲೇ ರೊಯ್ಯನೆ ನೆಲಕ್ಕೆ ನೇರ ಜಿಗಿದು ಕಣ್ಮರೆಯಾಗುತ್ತದೆ.

©ಡಾ.ದೀಪಕ್ ಬಿ, Signature Spider

ಸಣ್ಣ ಸಣ್ಣ ಪೊದೆಗಳ ಬಳಿ ನೆಲಮಟ್ಟದಿಂದ ಮೂರ್ನಾಲ್ಕು ಅಡಿ ಎತ್ತರದಲ್ಲಿ ಬಿಳಿಬಣ್ಣದ X ಆಕಾರದ ಗುರುತನ್ನು ನೀವು ಕಂಡಿರಬಹುದು. ಇದು ಯಾರೋ ಬರೆದ ಗುಣಕಾರದ ಚಿನ್ಹೆ ಅಲ್ಲ. ಇದು 20mm ಉದ್ದ ಉಳ್ಳ ಸಹಿ ಜೇಡದ ಕೆಲಸ. ಪೊದೆಗಳ ಬಳಿ  ದುಂಡನೆಯ ಬಲೆ ನಿರ್ಮಿಸಿಸುವ ಈ ಜೇಡ ಬಲೆಯ ಮಧ್ಯೆದಲ್ಲಿ ಖಾಲಿ ಬಿಟ್ಟಿರುತ್ತದೆ. ಕೆಲವೆ ಎಳೆಗಳನ್ನು ಬಂಧಿಸಿ ಉಂಟಾದ ಬಲೆಯ ಮಧ್ಯಭಾಗದಲ್ಲಿ ಜೇಡ ಕುಳಿತುಕೊಳ್ಳುತ್ತದೆ. ಬಲಿಷ್ಟವಾದ ಕಪ್ಪು ಕಾಲುಗಳುಳ್ಳ ಈ ಸಹಿ ಜೇಡದ ದೇಹವು ಹಳದಿ ಬಣ್ಣಕ್ಕೆ ಇರುತ್ತದೆ. ಗಂಡು ಜೇಡವೂ ಹೆಣ್ಣು ಜೇಡಕಿಂತ ಚಿಕ್ಕವು. ಬಲೆಯ ಮಧ್ಯೆದಲ್ಲಿ ಬಿಳಿ ಎಳೆಗಳಿಂದ X ಆಕಾರಕ್ಕೆ ಗುರುತು ಮಾಡುತ್ತದೆ. ಈ ಜೇಡದ ಆಹಾರವಾದ ಕೀಟಗಳನ್ನು ಬಲೆಯ ಕಡೆಗೆ ಆಕರ್ಷಿಸಲು ಮತ್ತು ಸಿಹಿ ಜೇಡವನ್ನು ಹಿಡಿದು ತಿನ್ನುವ ಪಕ್ಷಿಗಳನ್ನು ಎದುರಿಸಿ ತಪ್ಪಿಸಿಕೊಳ್ಳಲು X ಆಕಾರವನ್ನು ಬಳಸುತ್ತದೆ. ಈ ಸುಂದರ ಬಲೆಯನ್ನು ನೋಡುವುದೇ ಚೆಂದ.

ಚಿತ್ರಗಳು: ಡಾ.ದೀಪಕ್ ಬಿ.ಮೈಸೂರು
ವಿವರಣೆ: ಶಂಕರಪ್ಪ .ಕೆ .ಪಿ

Print Friendly, PDF & Email
Spread the love
error: Content is protected.