ಮಮತೆಯ ಗೀಜಗ, ತಂದ ಸೋಜಿಗ!

ಮಮತೆಯ ಗೀಜಗ, ತಂದ ಸೋಜಿಗ!

© ಶ್ರೀಕಾಂತ್ ಎ. ವಿ.

ಮನುಷ್ಯ ಸಂಘಜೀವಿ; ಜೊತೆಗೆ ಸಮಾಜಜೀವಿ. ಹಿಂದೆ ನಮ್ಮಲ್ಲಿ ವ್ಯಕ್ತಿಗಳು ಮಾಡುವ ಕಾಯಕದ ಆಧಾರದ ಮೇಲೆ ಕಮ್ಮಾರರು, ಚಮ್ಮಾರರು, ಪುರೋಹಿತರು, ಬಡಗಿಗಳು, ಕುರುಬರು ಹೀಗೆ ವೃತ್ತಿಯನ್ನೇ ಆಧರಿಸಿದ ಪಂಗಡಗಳಿದ್ದವು. ಅವುಗಳಲ್ಲಿ ನೇಯ್ಗೆ ವೃತ್ತಿಯೂ ಒಂದು. ನಾನಿಲ್ಲಿ ಹೇಳಬೇಕು ಅಂತಿರೋದು ಬಟ್ಟೆಯನ್ನು ನೇಯೋ ಅಂತ ನೇಕಾರರ ಕುರಿತದ್ದಲ್ಲ, ತತ್ಸಮಾನವಾಗಿ ತನ್ನ ಪ್ರಿಯತಮೆ ಒಪ್ಪುವ ರೀತಿಯಲ್ಲಿ ಗೂಡನ್ನು ನೇಯ್ವ ನೇಕಾರ ಹಕ್ಕಿ ಎಂದೇ ಕರೆಯುವ ಗೀಜಗದ ತಾಯಿ ಮಮತೆಯ ಒಂದು ದೃಶ್ಯಕಾವ್ಯದ ಬಗ್ಗೆ. 

ಸಾಮಾನ್ಯವಾಗಿ ಫೋಟೋಗ್ರಫಿಗೆ ಅದರಲ್ಲೂ ಪಕ್ಷಿ ವೀಕ್ಷಣೆ ಮತ್ತು ಪಕ್ಷಿಗಳ ಹಾವಭಾವ ಸೆರೆಹಿಡಿಯೋದಕ್ಕೆ ಬೆಳಗಿನ ಹಾಗೂ ಸಂಜೆಯ ಸಮಯ ಮಾತ್ರ ಆಹ್ಲಾದಕರ ಮತ್ತು ಒಂದೊಳ್ಳೆಯ ಚಿತ್ರ ಲಭಿಸಲು ಸಾಧ್ಯ ಆಗುತ್ತೆ ಅನ್ನಬಹುದು. ಅಬ್ಬಬ್ಬಾ ಅಂದ್ರೆ 15 ಸೆಂಟಿಮೀಟರ್ ಇರೋ ಗುಂಪುಗುಂಪಾಗೆ ವಾಸಿಸುವ ಈ ಗುಬ್ಬಚ್ಚಿಯನ್ನ ಹೋಲುವಂತ ಹಕ್ಕಿಯನ್ನ ಸೆರೆಹಿಡಿಯೋದು ಅಷ್ಟು ಸುಲಭವಲ್ಲ.

ಅವತ್ತು ಬೆಳ್ಳಂಬೆಳಗ್ಗೆ ಎದ್ದೋನೆ ಮುಖಮಾರ್ಜನವನ್ನೂ ಮಾಡದೆ ಕ್ಯಾಮೆರಾ, ನೀರಿನ ಬಾಟಲ್ ಮತ್ತು ಕಾರಿನ ಕೀ ತಗೊಂಡೋನೇ ಸೀದಾ ನಮ್ಮೂರ ಹೊರಗಿನ ಊರ ಕಾಯ್ವ ಆಂಜನೇಯನ ದೇವಸ್ಥಾನದ ಸುತ್ತಲ ಹೊಲಗಳ ಬಳಿಗೆ ಹೋದೆ, ನವಿಲುಗಳ ಕೂಗು ತುಂಬಾ ಹತ್ತಿರದಲ್ಲೇ ಕೇಳ್ತಿತ್ತು, ವಾತಾವರಣ ಹಿತಕಾರಿಯಾಗಿತ್ತು. ಸೂರ್ಯ ಆಗತಾನೆ ದಾಳಿಂಬೆ ತಿಂದ ಮಗುವಿನ ತುಟಿಗಳಂತೆ ನಯನಗಳಿಗೂ ಹಿತಕೊಡುವ ಹಾಗೆ ಕೆಂಪುಕೆಂಪಾಗಿದ್ದ. ನಿದ್ದೆ ಪೂರ್ತಿಯಾಗದ ಕಣ್ಗಳಿಂದಲೇ ನೆನಪಲ್ಲುಳಿಯುವ ಚಿತ್ರಕ್ಕಾಗಿ ಕಾಯುತ್ತಾ ಕುಳಿತೆ.

ಊಹೂ ನಾನಂದುಕೊಂಡಂತೆ ಎರಡು ತಾಸು ಕಾದರೂ ಮನಸ್ಸಿಗೆ ತೃಪ್ತಿ ನೀಡುವಂತ ಸೆರೆ ಸಿಗಲಿಲ್ಲ. ಬೆಳಗ್ಗೆ ಬೇಗ ಎದ್ದಿದ್ದರಿಂದಲೂ, ಸೂರ್ಯ ಮೇಲೇರುತ್ತಾ ಹೊಟ್ಟೆ ಚುರುಗುಟ್ಟಂತಾಗಲು ನಿರಾಸೆಯಿಂದಲೇ ಮತ್ತೆ ಮನೆಯ ಕಡೆ ಕಾರು ಚಲಾಯಿಸಿದೆ. ಆಗಲೇ ಕಣ್ಣಿಗೆ ಬಿದ್ದದ್ದು, ರಸ್ತೆಯ ಪಕ್ಕದ ಹೊಲದಲ್ಲಿ ಸಾಕುಪ್ರಾಣಿಗಳ ಮೇವಿಗೆಂದೇ ಹಾಕಿದ್ದ ಬಿಳಿ ಜೋಳದ ಹೊಲ. ಇಲ್ಲಿ ‘ಕೆಂಪು ರಾಟವಾಳ’ (Red avadavat) ದ ಯೋಗಾಸನ ಭಂಗಿಗಳನ್ನ ಸೆರೆಹಿಡಿಯಲೇಬೇಕು ಅಂತ ಮನದಲ್ಲೇ ಚಿತ್ರಗಳನ್ನೂ ಕಲ್ಪನೆ ಮಾಡ್ಕೋತ ಮನೆಗೆ ಬಂದವನು ದಿನ ನಿತ್ಯದ ಕೆಲಸಗಳನ್ನೆಲ್ಲಾ ಮುಗಿಸ್ಕೊಂಡು ಅದೃಷ್ಟವಿದ್ದರೆ ಸಿಗಬಹುದು ಇನ್ನೊಂದು ಸುತ್ತು ಹೋಗೋಣ ಅಂತ ಜೋಳದ ಹೊಲದ ಜಾಗಕ್ಕೆ ಹೋದೆ.

ನಿರ್ಜನ ಪ್ರದೇಶ, ಸುತ್ತಲ ಗಾಳಿ, ಹಕ್ಕಿಗಳ ಕಲರವ, ಆಗೊಮ್ಮೆ ಈಗೊಮ್ಮೆ ಬೇಲಿಗಳಲ್ಲಿ, ಒಣಗಿದ ಎಲೆಗಳಲ್ಲಿ ಸರಕ್ ಸರಕ್ ಅಂತ ಓಡಾಡುವ ಸರೀಸೃಪಗಳನ್ನು ಹೊರತು ಪಡಿಸಿ, ಉಸಿರನ್ನೂ ಮಂದಗತಿಯಲ್ಲಿ ಆಡುತ್ತಿದ್ದ ನಾನು ಮತ್ತು ಉಸಿರನ್ನೇ ಆಡದ ನನ್ನ ಕಾ-ಕ್ಯಾ(ಕಾರು-ಕ್ಯಾಮರಾ). ಸುಮಾರು 30 ನಿಮಿಷಗಳ ಕಾಲ ಜಡವಸ್ತುವಾಗಿ ಕುಂತಲ್ಲೆ ಕುಂತು ಪಕ್ಷಿಗಳ ಸರಾಗ ಒಡನಾಟಕ್ಕೆ ಅವಕಾಶ ಮಾಡಿಕೊಡುವುದಿದೆಯಲ್ಲಾ ಅದು ಫೋಟೋಗ್ರಫಿಯ ಹವ್ಯಾಸವನ್ನು ರೂಢಿಸಿಕೊಳ್ಳಬೇಕಾದವರಿಗೆ ಇರಬೇಕಾದ ತಾಳ್ಮೆಯೆಂಬ ಮೊದಲ ಪಾಠ.

ಮಣ್ಣಿನ ರಸ್ತೆ, ಮಧ್ಯಾಹ್ನದ ಬಿಸಿಲು ಮರೀಚಿಕೆಗಳು ಕುಣಿಯುತ್ತಾ ಮಾಯವಾಗುತ್ತಿದ್ದವು. ಸೊಂಪಾದ ಗಾಳಿ, ತೆನೆಗಳ ಭಾರವನ್ನೂ ಹೊತ್ತು ಗಾಳಿಗೆ ತಕ್ಕಂತೆ ಹೊಯ್ದಾಡುತ್ತಿದ್ದ ಜೋಳದ ಹೊಲವನ್ನು ನೋಡುವುದೇ ಒಂದು ಚಂದ.

ಆಗ ಒಂದೊಂದೇ ಪಕ್ಷಿಗಳು ಗಾಳಿಗೆ ತೂಗುತ್ತಿದ್ದ ಜೋಳದ ತೆನೆಯ ಕಾಳುಗಳನ್ನು ತಿನ್ನಲು ಬರತೊಡಗಿದವು, ಜೊತೆಗೆ ಅವುಗಳ ಮರಿಗಳೂ ಸಹ. ಚುಕ್ಕಿ ರಾಟವಾಳ, ಟ್ರೈ ಕಲರ್ ಮುನಿಯ, ಗೀಜಗ… ಇನ್ನೂ ಕೆಲವು ಹಕ್ಕಿಗಳು ತೀಕ್ಷ್ಣ ವೇಗದಲ್ಲಿ ಬಂದು ಕಾಳು ಬಿಡಿಸಿ ಹೊತ್ತೊಯ್ಯುತ್ತಿದ್ದವು. ಇದೆಲ್ಲ ಕೇವಲ 20 ಸೆಕೆಂಡಿನಲ್ಲಿ ಜರುಗುತ್ತಿತ್ತು.

© ಶ್ರೀಕಾಂತ್ ಎ. ವಿ.

ಕೆಲ ಸಮಯದ ನಂತರ ಹೊಲದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಅಂದರೆ ನಾನು ಮತ್ತು ನನ್ನ ಚರ ವಸ್ತುಗಳಿದ್ದಲ್ಲಿಗೆ ನಮ್ಮನ್ನೂ ಅವರ ಪರಿಸರದ ಒಂದು ಭಾಗವಾಗಿ ನೋಡುತ್ತಾ, ನಿರ್ಭಿಡೆಯಿಂದ ಗೀಜಗ (Baya Weaver) ಗಳು ಬಂದವು. ನನಗೆ ತೀರಾ ಸಮೀಪದಲ್ಲೇ ಒಂದು ಮರಿ ಗೀಜಗ ಬಂದು ಜೋಳದ ಕಡ್ಡಿಯ ಮೇಲೆ ಕುಳಿತು ರೆಕ್ಕೆಗಳನ್ನು ಚಟಪಟ ಒದರುತ್ತಾ ತನ್ನ ಚಿಯ್ ಗುಡುವಿಕೆಯಿಂದ ತನ್ನ ತಾಯಿಯನ್ನು ಆಹಾರಕ್ಕಾಗಿ ಕರೆಯಲು ಶುರುಮಾಡಿತು. ಅದೇ ತರಹದ ಅದೇ ವಯಸ್ಸಿನ ಇನ್ನೊಂದು ಹಕ್ಕಿ ಹತ್ತಡಿ ಅಂತರದ ಇನ್ನೊಂದು ಕಡ್ಡಿಯ ಮೇಲೆ ಕುಳಿತು ನಾನೇನು ಕಮ್ಮಿ ಅಂತ ಅದೂ ಇದೇ ರಾಗ ಮತ್ತು ಭಾವವನ್ನು ಪ್ರಕಟಿಸುತ್ತಿದ್ದಂತೆ, ತಾಯಿ ಗೀಜಗವೊಂದು ಹಾರಿ ಬಂದು ಮೊದಲು ಕರೆದ ಮಗುವಿಗೆ ಜೋಳ ತಿನ್ನಿಸಿ ಮತ್ತೊಮ್ಮೆ ಹಾರಿ ಮತ್ತೊಂದು ಹಕ್ಕಿಗೂ ಗುಟುಕಿಸುತ್ತಿತ್ತು. ಇದೇ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಆಡಾಡುತ್ತಾ ಅಣ್ಣ ತಮ್ಮಂದಿರು, ‘ಬೆಳೆ ಬೆಳೆಯುತ್ತಾ ದಾಯಾದಿಗಳು ಎಂಬಂತೆ’ ಇಲ್ಲಿ ಅಮ್ಮನನ್ನು ಎರಡೂ ಗಂಡು ಹಕ್ಕಿಗಳು ಹಠಕ್ಕೆ ಬಿದ್ದಂತೆ ಅತ್ತು ಕರೆಯುತ್ತಿದ್ದುದು ಎಂತಹವರಲ್ಲೂ ತಾಯಿ ವಾತ್ಸಲ್ಯ ಚಿಮ್ಮಿಸುವಂತಿತ್ತು.

© ಶ್ರೀಕಾಂತ್ ಎ. ವಿ.

ಯಾರಿಗೆ ತಾನೇ ಸ್ವಂತ ಮನೆಕಟ್ಕೊಳೋದು ಇಷ್ಟ ಇಲ್ಲ ಹೇಳಿ. ಎಲ್ಲ ಪಕ್ಷಿಗಳು ತಮ್ಮದೇ ಆದ ರೀತಿಯಲ್ಲಿ ಗೂಡು ಕಟ್ಕೊತಾವೆ. ಅದರಲ್ಲೂ ತುಂಬಾ ವಿಶೇಷ ಅನ್ನಿಸೋದು ಮಾತ್ರ ನೇಯ್ಗೆ ಹಕ್ಕಿಯ ಅಂದರೆ ಗೀಜಗದ ಗೂಡೆ. ಈ ಹೆಸರನ್ನೇ ನಾವು ಮಾನವರು ಕೂಡ ನಮ್ಮ ಮನೆಗೆ ಹೆಸರಾಗಿ ಇಟ್ಟುಕೊಳ್ಳುವಂತ ಮಧುರ ಭಾವ ಹುಟ್ಟಿಸುತ್ತೆ. ನಾನು ಇದೇ ಗೀಜಗನ ಗೂಡನ್ನ ನಮ್ಮೂರ ಕೆರೆಯ ಪಕ್ಕದ ಈಚಲ ಗಿಡದಲ್ಲಿ ಗಾಳಿಗೆ ತೊಟ್ಟಿಲಿನ ಹಾಗೆ, ಗಾಳೀಪಟದಂತೆ ಹೊಯ್ದಾಡುವುದನ್ನು ಕಂಡಿದ್ದೆ ಮತ್ತು ಗೂಡಿನ ಕೆಳಗಡೆಯಿಂದ ಇದ್ದ ಅದರ ಬಾಗಿಲನ್ನು ಕುತೂಹಲದಿಂದ ನೋಡಿ ಅವು ಅದ್ರಲ್ಲಿ ಮಲಗೋದಾದ್ರು ಹೇಗೆ? ಮೊಟ್ಟೆ ಇಟ್ಟರೆ ಕೆಳಗೆ ಬಿದ್ದು ಒಡೆದೋಗಲ್ವ? ಮರದ ಜೀಕುವ ಕೊಂಬೆಗೆ ಗೂಡು ಕಟ್ಟಿದಾವಲ್ಲ! ಕಳಚಿ ಬಿದ್ರೆ ನೀರಿಗೆ ಬೀಳುತ್ತಲ್ಲ!? ಯಾಕೆ ಇವು ಹೀಗೆ ಗೂಡು ಕಟ್ಟಿವೆ ಅನ್ನೋದಕ್ಕೆ ನಮ್ಮ 6ನೆಯ ತರಗತಿಯ ಪದ್ಯ ಗೀಜಗನ ಗೂಡು ಉತ್ತರಿಸಿತ್ತು ಮತ್ತು ನಮ್ಮ ಶಿಕ್ಷಕರು ಒಂದು ಗೀಜಗನಗೂಡನ್ನು ತರಿಸಿ ತೋರಿಸಿಯೂ ಇದ್ದರು. ಹಕ್ಕಿಗಳ ಗೂಡಿನಲ್ಲೂ ಕೋಣೆಗಳಿರುತ್ತೆ, ಆ ತಲೆಕೆಳಗಾದ ಶಂಖುವಿನ ಆಕಾರದ ಗೂಡಿನ ಒಳಗಡೆಯೂ ಬುಟ್ಟಿಯಂತಹ ಮಲಗುವ ಜಾಗವಿರುತ್ತದೆ ಮತ್ತು ಹೆಣ್ಣು ಹಕ್ಕಿಯ ಒಪ್ಪಿಗೆಯ ಮೇರೆಗೆ ಗೂಡು ಹೆಣೆಯುವ ಜವಾಬ್ದಾರಿ ಗಂಡನಾದರೆ ಗೂಡಿನಲ್ಲಿ ಮೊಟ್ಟೆ ಇಟ್ಟು ಮರಿಮಾಡುವುದು ಮಾತ್ರ ಹೆಣ್ಣು ಹಕ್ಕಿ.

ಇಲ್ಲಿ ಈಗ ಈ ಹಕ್ಕಿಗಳ ಒಡನಾಟದ ಚಿತ್ರಗಳನ್ನು ಕ್ಲಿಕ್ಕಿಸಿಯೇ ಬಿಡೋಣವೆಂದು ಇಳಿಸಿದ್ದ ಕಾರಿನ ಕಿಟಕಿಗೆ ಕ್ಯಾಮೆರಾವನ್ನು ಸುಮಾರು 40 ಪ್ರತಿಶತ ಹೊರಗೆ ಇರುವಂತೆ ಹೊಂದಿಸಿ, ಅವುಗಳಿಗೆ ನಾನು ಕದಲುವ ಸದ್ದೂ ಗೊತ್ತಾಗದ ಹಾಗೆ ತೆಗೆಯುತ್ತಾ ಹೋದೆ. ಒಂದಷ್ಟು ಫೋಟೊಗಳ ನಂತರ ಸಿಕ್ಕಿದ್ದೇ ಈ ಚಿತ್ರ (ಚಿತ್ರ 1). ಇದರ ನಂತರನೂ ಆ ಹಕ್ಕಿಗಳ ಸಹಚರ್ಯ ಹೀಗೆ ಇದ್ದರೂ ಇದು ಸಿಕ್ಕ ರೀತಿಯಲ್ಲಿ ಅಂದರೆ ಒಂದು ಒಳ್ಳೆ ಕಟ್ಟಿನಲ್ಲಿ ಎಲ್ಲವೂ ಸುಸಂಬದ್ಧವಾಗಿರುವಂತಹ ಚಿತ್ರ ಮತ್ಯಾವುದೂ ಸಿಗಲಿಲ್ಲ. ಹಾಗೆ ನಾನು ಬಳಸಿದ Canon EOS 7D; 400mm ಲೆನ್ಸ್; (f/7.6; 1/1600 sec) ಕ್ಯಾಮೆರಾ ಹಾಗೂ ಬಳಕೆಯಿಂದ ಈ ಚಿತ್ರದಲ್ಲಿ ಯಾವುದೇ ರೀತಿಯ ಸ್ಪಷ್ಟತೆಯ ದೋಷ ಕಂಡು ಬಂದಿಲ್ಲ. ಹಾಗೆ ಈ ಚಿತ್ರ ನಡೆದ ಆ ದೃಶ್ಯಕಾವ್ಯ ಸಂಭವಿಸಿರಬಹುದಾದದ್ದು, ಕೇವಲ 10 ರಿಂದ 20 ಸೆಕೆಂಡುಗಳು ಮತ್ತು ಆ ಮರಿ ಗೂಡಿಂದ ಹೊರಬಂದು ಒಂದು ಅಥವಾ ಎರಡು ದಿನವಾಗಿರಬಹುದು ಎಂಬ ಅಂದಾಜು.

ಚಿತ್ರ 1 © ಸುನಿಲ್ ಕುಮಾರ್ ಎಸ್.

ನೋಡಿ ಈ ಚಿತ್ರದಲ್ಲಿ ನಮಗೆ ಕಾಣುವುದು ತಾಯಿ ಹಕ್ಕಿಯು ಬಿಳಿಯ ಜೋಳವನ್ನು ಮರಿ ಹಕ್ಕಿಗೆ ತಿನ್ನಿಸುತ್ತಿರುವುದು. ಆದರೆ ತಾಯಿಹಕ್ಕಿ ಕಾಳನ್ನು ಹೆಕ್ಕಿ ತರುವಾಗ ಆ ಕಾಳು ಹಸಿರಿನದ್ದಾಗಿರುತ್ತದೆ. ಮರಿಹಕ್ಕಿಗೆ ತಿನ್ನಿಸುವಾಗ ಮೇಲಿನ ಹಸಿರು ಬಣ್ಣದ ಸಿಪ್ಪೆಯನ್ನು ತನ್ನದೇ ಕಾಲು ಮತ್ತು ಕೊಕ್ಕಿನ ಸಹಾಯದಿಂದ ಹಸನುಗೊಳಿಸಿ ಮರಿ ಹಕ್ಕಿಗೆ ತಿನ್ನಿಸುತ್ತದೆ. ಇವು ಮೇ ಯಿಂದ ಸೆಪ್ಟೆಂಬರ್‌ವರೆಗೆ ತಮ್ಮ ಸಂತಾನೋತ್ಪತ್ತಿಯನ್ನ ಮಾಡುತ್ತವೆ. ಗೂಡಿನ ಒಳಗೆ ಮೊಟ್ಟೆ ಇಡುವ ಜಾಗದಲ್ಲಿ ಜೇಡಿಮಣ್ಣನ್ನು ಮೆತ್ತಿರುತ್ತವೆ ಮತ್ತು ಮೃದುವಾದ ಹಕ್ಕಿಗಳ ಗರಿಗಳನ್ನು ಹಾಸಿ ಮರಿಗಳಿಗೆ ಮೆತ್ತನೆಯ ಹಾಸಿಗೆಯನ್ನೂ ಮಾಡಿರುತ್ತವೆ. ಹಾಗೆ ಈ ಸೋಜಿಗದ ಗೀಜಗದ ಎಲ್ಲಾ ವರ್ತನೆಗಳನ್ನ ಪಕ್ಷಿಪ್ರೇಮಿ ಡಾ. ಸಲೀಂ ಅಲಿಯವರು ಕ್ರೋಢೀಕರಿಸಿದ್ದಾರೆ.

“ಸಂತಾನೋತ್ಪತ್ತಿ ಕಾಲವನ್ನು ಹೊರತುಪಡಿಸಿದರೆ ಈ ಹಕ್ಕಿ ಸಾಮಾನ್ಯವಾಗಿ ಗುಬ್ಬಚ್ಚಿಯಂತೆಯೇ ಕಂಡುಬರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಗೀಜಗ ಹಕ್ಕಿ ಗೂಡನ್ನು ನಿರ್ಮಿಸಿ ಹೆಣ್ಣು ಹಕ್ಕಿಗೆ ತೋರಿಸುತ್ತದೆ. ಹೆಣ್ಣು ಒಪ್ಪಿದರೆ ಮಾತ್ರ ಸಂತಾನೋತ್ಪತ್ತಿ ಹಾಗೂ ಮೊಟ್ಟೆ, ಮರಿಗಳು. ಇಲ್ಲದಿದ್ದಲ್ಲಿ ಗಂಡು ಗೀಜಗ ಮತ್ತೊಂದು ಗೂಡನ್ನು ನಿರ್ಮಿಸುತ್ತದೆ.”

ಪಕ್ಷಿಗಳೇನೋ ಹುಲ್ಲಿನಿಂದ ಮನೆ ನಿರ್ಮಿಸಿ ಹೆಣ್ಣನ್ನು ಒಲಿಸಿಕೊಳ್ಳಲು ಯತ್ನಿಸುತ್ತವೆ. ಮನುಷ್ಯರಲ್ಲೇನಾದರೂ ಮನೆ ಕಟ್ಟಿ ಒಲಿಸಿಕೊಳ್ಳುವ ಪ್ರಕ್ರಿಯೆ ನಡೆದರೆ ಎಷ್ಟು ಅರ್ಧಂಬರ್ಧ ಮನೆಗಳಿರುತ್ತಿದ್ದವು ಊಹಿಸಿಕೊಳ್ಳಲೂ ಅಸಾಧ್ಯ!

ಮಿಂಚುಳ್ಳಿ ಪುಸ್ತಕದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಹಕ್ಕಿಗಳ ಗೂಡಿನ ಬಗ್ಗೆ ಹೀಗೆ ಹೇಳಿದ್ದಾರೆ: “ಹಕ್ಕಿಗಳಿಗೆ ಗೂಡು ಕಟ್ಟುವುದಾಗಲಿ ಅದರ ವಾಸ್ತುಶಿಲ್ಪವಾಗಲೀ ನಮ್ಮಂತೆ ಪ್ರಜ್ಞಾಪೂರ್ವಕ ಕೆಲಸವಲ್ಲ ಎನ್ನಿಸುತ್ತದೆ. ಮೊಟ್ಟೆ ಇಡುವ ಹಾಗೆ, ಮರಿ ಮಾಡುವ ಹಾಗೆ, ಉಸಿರಾಡುವ ಹಾಗೆ, ಊಟ ಮಾಡುವ ಹಾಗೆ, ಅದು ಅವುಗಳ ಅನುಶಂಗಿಕ ಪ್ರವೃತ್ತಿಯೇ ಇರಬಹುದು.” ಎನ್ನುವುದು ಅದೆಷ್ಟು ಸತ್ಯವಲ್ಲವೇ!?

ಇಷ್ಟೆಲ್ಲ ವಿಶೇಷತೆಯಿರುವ ಗೀಜಗದ ಗೂಡನ್ನು ಭಾವನಾತ್ಮಕವಾಗಿ ನೋಡುವವರಿಗೆ ಒಮ್ಮೆ ಆ ತೊಟ್ಟಿಲಿನಂತ ತೂಗಾಡುವ ಗೂಡಲ್ಲಿ ಸುಮ್ಮನೆ ನಿದ್ರಿಸುವ ಭಾವ ಹುಟ್ಟುವುದು ಸಹಜವಲ್ಲವೇ?

ಎಲ್ಲರೂ ‘ನೀರಿಲ್ಲ’ ಎಂದು ವ್ಯವಸ್ಥೆಯನ್ನು ದೂರಿದರೆ ಎಲ್ಲೂ ಇಲ್ಲದ ನೀರನ್ನು ಯಾವ ವ್ಯವಸ್ಥೆ ತಾನೆ ತಂದಿತು? ಇಂದು ಹೀಗೆ ಮುಂದುವರೆದರೆ ಈಗ ನಾವು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿದ ನೀರನ್ನು ಹಣ ಕೊಟ್ಟು ಕುಡಿಯುವಂತೆ ಈಗಿನ ಯುವ ಪೀಳಿಗೆಯ ಮಕ್ಕಳು ಉಸಿರಾಡುವ ಗಾಳಿ ಎಂದರೆ ಆಮ್ಲಜನಕವನ್ನು ಸಹ ದಿನಬಳಕೆಯ ವಸ್ತುಗಳಂತೆ ಹಣ ನೀಡಿ ಕೊಂಡು ಕೊಳ್ಳುವ ದಿನ ಬಹಳ ದೂರವಿಲ್ಲ ಎನಿಸುತ್ತಿದೆ ಒಮ್ಮೆ ನೀವೇ ಯೋಚಿಸಿ ನೋಡಿ. . .

© ಶ್ರೀಕಾಂತ್ ಎ. ವಿ.

ಲೇಖನ: ವನಜಾಕ್ಷಿ ಎಸ್.
            
                 ಮೈಸೂರು
ಜಿಲ್ಲೆ

Print Friendly, PDF & Email
Spread the love

Leave a Reply

Your email address will not be published. Required fields are marked *

error: Content is protected.