ಅಚ್ಚರಿ ಜೀರುಂಡೆ
© ಅಜಿತ್ ಯಾಳಗಿ
ಯಾರಾದರೂ ನಿಮಗಿಂತ ಹತ್ತು ಪಟ್ಟು ಹೆಚ್ಚು ತೂಕವನ್ನು ಎತ್ತಬಲ್ಲಿರಾ? ಅಸಾಧ್ಯ ಅಲ್ಲವೆ. ಇಡೀ ವಿಶ್ವದಲ್ಲೇ ಮನುಷ್ಯ ಅತೀ ಹೆಚ್ಚು ತೂಕ ಎತ್ತಿರುವ ದಾಖಲೆ 501 ಕೆ. ಜಿ ಎತ್ತಿರುವುದು. ಅದು ಒಬ್ಬ ನುರಿತ ತೂಕ ಎತ್ತುವ ಪಟುವಿನಿಂದ. 1.5-4.5 ಸೆಂ. ಮೀ. ಗಾತ್ರದ ಕೀಟ ತನ್ನ ತೂಕದ ಹತ್ತು ಪಟ್ಟು ಹೆಚ್ಚು ತೂಕವನ್ನು ನಿರಾಯಾಸವಾಗಿ ಎತ್ತುತ್ತದೆಂದರೆ ಅಚ್ಚರಿಯಾಗಲಾರದೆ!? ಹೌದು, ಅಚ್ಚರಿ ಆಗಲೇಬೇಕು. ಇನ್ನೊಂದು ಅಚ್ಚರಿ ಎಂದರೆ ಇದೇ ಪ್ರಭೇದದ ಕೀಟವು ಅದರ ತೂಕಕ್ಕಿಂತ 1141 ಪಟ್ಟು ಹೆಚ್ಚು ತೂಕವನ್ನು ಎತ್ತಬಲ್ಲದು. ಅಂಟಾರ್ಟಿಕಾ ಖಂಡದಲ್ಲಿ ಬಿಟ್ಟು ಎಲ್ಲೆಡೆ ವಾಸಿಸಬಲ್ಲ 30 ಮಿಲಿಯನ್ ವರುಷಗಳಿಂದಲೂ ಪರ್ಯಾವರಣದ ಸರಪಳಿಯಲ್ಲಿ ಕೊಂಡಿಯಾಗಿ ಬದುಕುತ್ತಿರುವ ಕೀಟ.
ಹಳ್ಳಿ ಕಡೆ ಸಗಣಿಗಳ ಚೆಂಡುಗಳು ಚಲಿಸುವುದನ್ನು ಅಲ್ಲಲ್ಲಿ ಸಾಮಾನ್ಯವಾಗಿ ಗಮನಿಸಿರುತ್ತೀರಿ, ಆ ಚೆಂಡನ್ನು ತಲೆ ಕೆಳಗಾಗಿ ಹಿಂಗಾಲುಗಳಿಂದ ಒಂದು ಅಥವಾ ಎರಡು ಕೀಟಗಳು ತಳ್ಳುತ್ತಿರುತ್ತವೆ. ಹಳ್ಳಿಗಳಲ್ಲಿ ದಿನ ನಿತ್ಯ ಕಾಣಬಲ್ಲ ಇದೆ ಕೀಟ ಈ ಎಲ್ಲ ಅಚ್ಚರಿಗಳ ನಾಯಕ; ಸಗಣಿ ಜೀರುಂಡೆ. ಸಗಣಿ ಜೀರುಂಡೆಗಳಲ್ಲಿ ಅವುಗಳ ವರ್ತನೆಯನ್ನು ಆಧರಿಸಿ 3 ವಿಭಾಗಗಳನ್ನಾಗಿ ಮಾಡಿದ್ದಾರೆ. ರೋಲರುಗಳು, ಟನಲ್ಲರಗಳು, ದ್ವೇಲ್ಲರಗಳು. ಇವುಗಳು ಪ್ರಾಣಿಗಳ ಮಲಗಳ ಜೊತೆಗೆ ಕೊಳೆಯುತ್ತಿರುವ ಮಾಂಸ, ಶಿಲೀಂಧ್ರ, ಹಣ್ಣುಗಳು, ಸತ್ತ ಇತರ ಕೀಟ ಮತ್ತು ಇರುವೆಗಳನ್ನು ಭಕ್ಷಿಸಲು ಆರಿಸಿಕೊಳ್ಳುತ್ತವೆ.
ನಾನು ಮತ್ತು ಗೆಳೆಯ ಬಸ್ಸು (ಬಸವರಾಜ್), ಕಾರಲಕುಂಟಿ ಪರಮಾನಂದ ಗುಡ್ಡದಾಗ ಅಲೆದಾಡುವಾಗ ಜಿಟಿಜಿಟಿ ಮಳೆ ಶುರುವಾಯಿತು. ಬೇಗ ಮನೆಗೆ ಹೊರಡಲು ಬೈಕ್ ಸ್ಟಾರ್ಟ್ ಮಾಡಿ ‘ಬಸ್ಸುಗ ಕುಂದರ’ ಅಂದೆ. ಬೈಕ್ ಬುಟು ಬುಟು ಮಾಡುತ್ತಾ ಬೆಟ್ಟ ಇಳಿಯುತ್ತಿತ್ತು. ನಾನು ಹಠಾತ್ತಾಗಿ ಬ್ರೇಕ್ ಹೊಡೆದೆ “ಯಾಕೋ ಹಿಂಗ್ಯಾಕ್ ಬ್ರೇಕ್ ಹೊಡದಿ? ನಡಿಯೋ ಮಳಿ ಬರಕತ್ತಾದ ಮನಿಗಿ ಹೋಗೋಣ ನಡಿ” ಅಂದ ಬಸ್ಸು. ನಾನು ಚಿಕ್ಕ ಚಿಕ್ಕ ಸಗಣೆ ಉಂಡೆಗಳು ಉರುಳುತ್ತಿರುವುದು ಕಂಡು “ಬಸ್ಸು… ಇಲ್ಲಿ ಬಾರೋ, ಈ ಹುಳ ನೋಡು ಎಷ್ಟು ದ್ವಾಡದ ಹೆಂಡಿ ಉಂಡಿ ತಗೊಂಡು ಹೊಂಟದ” ಎಂದೆ. “ಎ ನಡಿಯೋ ಮಾರಾಯ ದಿನ್ನ ಮುಂಜಾಳೆ ಹೇಲ ಉಳ್ಸ್ಕೊಂಡ ಹೋಗುದ ನೋಡತೀನಿ” ಎಂದು ನಕ್ಕ. “ತಡಿ ಬಸ್ಸು ಒಂದೇರಡ ಫೋಟೋ ತಕ್ಕೋತೀನಿ” ಅಂತ ಫೋಟೋ ತಕ್ಕೊಂಡು ಬುಟು ಬುಟು ಸದ್ದಿನೊಂದಿಗೆ ಊರಿಗೆ ಬಂದ್ವಿ.
ಪರಿಸರ ಅರಿತಷ್ಟು ರೋಮಾಂಚನ ಎನ್ನುವುದಕ್ಕೆ ಇಂತಹ ನೂರಾರು ಕೌತುಕ ಸಂಗತಿಗಳೇ ಸಾಕ್ಷಿ. ಈ ಜೀವಿಗಳು ಬೀಜಗಳ ಪ್ರಸರಣದಲ್ಲಿ, ಮಣ್ಣಿನ ಬಯೋಟರ್ಬೇಶನ್ (ಬಯೋಟರ್ಬೇಶನ್ ಎಂದರೆ ಪ್ರಾಣಿ ಅಥವಾ ಸಸ್ಯಗಳಿಂದ ಮಣ್ಣು ಮತ್ತು ಕೆಸರುಗಳ ಪುನರ್ನಿರ್ಮಾಣ ಎಂದು ವ್ಯಾಖ್ಯಾನಿಸಬಹುದು.) ಮತ್ತು ಪೋಷಕಾಂಶಗಳ ಸೈಕ್ಲಿಂಗ್ ನಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಸಗಣಿ ಜೀರುಂಡೆಗಳು ಸಗಣಿ ಚೆಂಡನ್ನು ಹಿಮ್ಮುಖವಾಗಿ ತಲೆಕೆಳಗಾಗಿಸಿಕೊಂಡು ಹಿಂಗಾಲುಗಳಿಂದ ಗಂಡು ಮತ್ತು ಹೆಣ್ಣು ಎರಡು ಸೇರಿಕೊಂಡು ಅಥವಾ ಗಂಡುಗಳು ಮಾತ್ರ ಚೆಂಡನ್ನು ಉರಿಳಿಸುತ್ತವೆ. ದೂರದ ಸೂಕ್ಷ್ಮ ವಾಸನೆಯನ್ನು ಗ್ರಹಿಸಬಲ್ಲ ರೋಲರ್ ಜೀರುಂಡೆಗಳು ಎಲ್ಲಾ ಅಡೆತಡೆಗಳ ನಡುವೆಯೂ ಚೆಂಡುಗಳ ಮೇಲೆ ನಿಲ್ಲುತ್ತ ಹೋಗುವ ಗಮ್ಯವನ್ನು ಸರಳರೇಖೆಯಲ್ಲಿ ನ್ಯಾವಿಗೇಟ್ ಮಾಡುತ್ತವೆ. ಹೀಗೆ ಕರಾರುವಕ್ಕಾಗಿ ಚಲಿಸುವಾಗ ತುಂಬಾ ಬಿಸಿಲಿನಿಂದ ಕಾಲುಗಳು ಸುಡುತ್ತಿದ್ದರೆ ಚೆಂಡಿನ ಮೇಲೆ ನಿಂತು ಮುಂದೆ ಪ್ರಯಾಣ ಬೆಳೆಸುತ್ತವೆ.
ಸಗಣಿಯನ್ನು ವೃತ್ತಾಕಾರ ಮಾಡುವ ಮೂಲಸ್ಥಾನದ ಸಂದರ್ಭದಲ್ಲಿ ತುಂಬಾ ಪೈಪೋಟಿ ಇರುತ್ತದೆ. ಸ್ವಲ್ಪ ಆಲಸ್ಯದ ಮತ್ತು ಬಲಿಷ್ಠ ರೋಲರ್ ಜೀರುಂಡೆಗಳು ಮತ್ತೊಂದು ಚೆಂಡನ್ನು ಕದಿಯಲು ಪ್ರಯತ್ನಿಸುತ್ತವೆ. ಚಾಣಾಕ್ಷ ರೋಲರ್ ಜೀರುಂಡೆಗಳು ಚೆಂಡು ತಯಾರಾದ ನಂತರ ದಣಿವಾರಿಸದೆ ತಮ್ಮಿಂದ ಸಾಧ್ಯವಾದಷ್ಟು ವೇಗವಾಗಿ ಚಲಿಸುತ್ತವೆ. ಮೂಲ ಸ್ಥಾನದಿಂದ ದೂರಾದ ನಂತರ ನಿಧಾನವಾಗಿ ಚೆಂಡನ್ನು ದೂಡಲಾರಂಭಿಸುತ್ತವೆ. ಭೂಮಿಯನ್ನು ನೋಡುತ್ತಾ ತೆರಳುವಾಗ ಎಲ್ಲಿ ಮೃಧುವಾದ ಮಣ್ಣನ್ನು ಕಾಣುತ್ತವೋ ಆಗ ಅಲ್ಲಿ ಆ ಚೆಂಡನ್ನು ಹೂತು ಹಾಕುತ್ತವೆ. ನಂತರದಲ್ಲಿ ಹೆಣ್ಣು ರೋಲರ್ ಜಿರುಂಡೆಯು ಅದರೊಳಗೆ ಮೊಟ್ಟೆ ಇಡುತ್ತದೆ. ಈ ಸಗಣಿಯ ಚೆಂಡನ್ನು ಆಹಾರದ ಮೂಲವಾಗಿ ಅಥವಾ ಸಂತಾನೋತ್ಪತ್ತಿಯ ಕೋಣೆಗಳಾಗಿ ಬಳಸುತ್ತವೆ. ಮೊಟ್ಟೆಗಳು ಲಾರ್ವ ಹಂತ ತಲುಪಿದ ನಂತರ ತಮ್ಮ ಸುತ್ತ ಮುತ್ತಲಿನ ಸಗಣಿಯನ್ನು ತಿಂದು ಬೆಳೆಯುತ್ತವೆ.
ಅಲ್ಲಲ್ಲಿ ಮಣ್ಣಿನಲ್ಲಿ ರಂಧ್ರಗಳನ್ನು ಮಾಡುವುದರಿಂದ ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ ಹಾಗು ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ ಕಾರಣ ನ್ಯೂಜಿಲ್ಯಾಂಡ್ ದೇಶವು 10 ಬಗೆಯ ಸಗಣಿ ಜೀರುಂಡೆಗಳನ್ನು ಆಮದಿಸಿ ಅಲ್ಲಿನ ಮಣ್ಣಿನಲ್ಲಿ ಬಿಡುತ್ತಿದ್ದಾರೆ. ಈಜಿಪ್ಟ್ ಸಂಸ್ಕೃತಿಯಲ್ಲಿ ಜೀರುಂಡೆಗಳು ಪವಿತ್ರ ಸ್ಥಾನಮಾನವನ್ನು ಹೊಂದಿದ್ದವು. ಮೊದಲೆಲ್ಲ ಮಣ್ಣಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಇವುಗಳು ಈಗ ಕಣ್ಮರೆಯಾಗುತ್ತಿರುವುದಕ್ಕೆ ಕಾರಣ ಅತಿಯಾದ ಕೀಟನಾಶಕಗಳ ಬಳಸುವಿಕೆ ಕೆಲವು ಸಸ್ತನಿಗಳ ಅಳಿವಿನಂಚಿನ ಸಂಖ್ಯೆಗಳಿಂದಾಗಿ ಎನ್ನಬಹುದು.
ಲೇಖನ: ಅಜಿತ್ ಯಾಳಗಿ
ವಿಜಯಪುರ ಜಿಲ್ಲೆ