ಜಿಮ್ ಕಾರ್ಬೆಟ್ ಕಾಡಿನ ರೋಚಕ ಅನುಭವದ ಕಥನ ಭಾಗ – ೪

ಜಿಮ್ ಕಾರ್ಬೆಟ್ ಕಾಡಿನ ರೋಚಕ ಅನುಭವದ ಕಥನ ಭಾಗ – ೪

© ಗುರು ಪ್ರಸಾದ್ ಕೆ. ಆರ್.

ಮೂರು ದಿನಗಳ ಪಕ್ಷಿ ಗಣತಿ ಕಾರ್ಯ ಯಶಸ್ವಿಯಾಗಿ ಮುಗಿಯುತ್ತಾ ಬಂದಿತ್ತು. ನಾಲ್ಕನೇ ದಿನ ನಾವು ಹಿಂದಿರುಗುವ ಸಮಯ. ಜಿಮ್ ಕಾರ್ಬೆಟ್ ಎನ್ನುವ ಅದ್ಭುತ ಅರಣ್ಯದ ರಾಶಿ ನೆನಪುಗಳ ಜೊತೆ, ರೋಮಾಂಚನ ಅನುಭವದ ಜೊತೆ ಇಲ್ಲಿನ ದಟ್ಟ ಕಾಡಿಗೆ ವಿದಾಯ ಹೇಳಿ, ಮರಳಿ ನಮ್ಮ ಮನೆ ಕಡೆಗೆ ಹೊರಡುವ ಸಮಯ ಬಂದೇಬಿಟ್ಟಿತ್ತು. ಒಟ್ಟಿನಲ್ಲಿ ವನಸಿರಿಯ ಮಧ್ಯೆ ಕಳೆದ ಈ ಮೂರು ದಿನಗಳ ಸುಂದರ ಅನುಭವ ಮೂರು ವರ್ಷಕ್ಕೆ ಆಗುವಷ್ಟಿತ್ತು. ನೂರಾರು ಪಕ್ಷಿ ಸಂಕುಲಗಳು, ಪ್ರಾಣಿಗಳು, ಬೆಟ್ಟ ಗುಡ್ಡಗಳಿಂದ ಕೂಡಿದ ದಟ್ಟ ಕಾಡು; ಬಣ್ಣಿಸಲಸದಳ!

ಕೊನೆಯ ದಿನ ನಾವು ವಾಪಾಸ್ ರಾಮ್ನಗರ್ ನ (Ramnagar) ಮುಖ್ಯ ಅರಣ್ಯ ಕಛೇರಿಗೆ ಬಂದು ಸೇರಬೇಕಿತ್ತು. ಜಿಮ್ ಕಾರ್ಬೆಟ್ ನ ಮೂಲೆ ಮೂಲೆಯಲ್ಲಿನ, ಬೇರೆ ಬೇರೆ ಶಿಬಿರಗಳಿಗೆ ಹೋಗಿದ್ದ ಸರಿ ಸುಮಾರು ಅರವತ್ತು ಸ್ವಯಂ ಸೇವಕರು ಪುನಃ ರಾಮ್ನಗರ್ ಗೆ ಬಂದು ತಮ್ಮ ತಮ್ಮ ಗಣತಿಯ ವರದಿಯನ್ನು ಅರಣ್ಯ ಭವನದ ಅಧಿಕಾರಿಗಳಿಗೆ ಕೊಡಬೇಕಿತ್ತು. ಇದೆಲ್ಲವನ್ನು ನಮಗೆ ಮೊದಲನೇ ದಿನವೇ ಸವಿವರವಾಗಿ ತಿಳಿ ಹೇಳಿದ್ದರು. ನಾವು ತಂಗಿದ್ದ ಮುಂಡಿಯಾಪನೀ ಅರಣ್ಯ ವಿಶ್ರಾಂತಿ ಭವನದಿಂದ ರಾಮ್ನಗರ್ ಮುಖ್ಯ ಅರಣ್ಯ ಕಛೇರಿಗೆ ಸುಮಾರು ನೂರಾ ಇಪ್ಪತ್ತು ಕಿಲೋಮೀಟರ್ ದೂರವಿತ್ತು. ಬೆಟ್ಟ-ಗುಡ್ಡಗಳ ಇಕ್ಕೆಲಗಳ ರಸ್ತೆಯಲ್ಲಿ ಸಾಗಲು ನಾಲ್ಕು ತಾಸು ಬೇಕಾಗಿತ್ತು. ನಮ್ಮನ್ನು ವಾಪಸ್ ಕರೆದುಕೊಂಡು ಹೋಗಲು ವಾಹನವು ಬೆಳಗ್ಗೆ 8 ಗಂಟೆಯ ಹೊತ್ತಿಗೆ ಬರುತ್ತದೆ ಎಲ್ಲರೂ ಅಷ್ಟರ ಒಳಗೆ ತಿಂಡಿ ತಿಂದು ಹೊರಡಲು ಸನ್ನದ್ಧರಾಗಿರಬೇಕು ಎಂಬ ವಿಷಯವನ್ನು ಮುಂಚೆಯೇ ತಿಳಿಸಲಾಗಿತ್ತು.

ಕೊನೆಯ ದಿನದ ಪುಟ್ಟ ಪಕ್ಷಿವೀಕ್ಷಣೆಗೆ, ನಾನು ಮತ್ತು ನನ್ನ ಸಹಚರ ಮುನೀಶ್ ತಯಾರಾಗಿ ಬೆಳಗ್ಗೆ ಆರು ಗಂಟೆಯಷ್ಟರಲ್ಲೇ ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೂಡಿ ಶಿಬಿರದಿಂದ ಹೊರಟೆವು. ನಾವು ತಂಗಿದ್ದ ಅರಣ್ಯ ವಿಶ್ರಾಂತಿ ಭವನದ ಹತ್ತಿರವೇ ಪಕ್ಷಿ ವೀಕ್ಷಣೆ ಮಾಡಲು ನಿರ್ಧರಿಸಿದ್ದೆವು. 8 ಗಂಟೆಯಷ್ಟರಲ್ಲೇ ಹೊರಡಲು ತಯಾರಿರಬೇಕಿದ್ದ ಕಾರಣ ಹೆಚ್ಚು ದೂರ ಹೋಗುವಂತೆ ಇರಲಿಲ್ಲ. ಅರಣ್ಯ ವಿಶ್ರಾಂತಿ ಭವನದ ಪಕ್ಕದಲ್ಲೇ ಹರಿಯುತ್ತಿದ್ದ ಒಂದು ಚಿಕ್ಕ ಹೊಳೆಯ ಪಕ್ಕ ನಮ್ಮ ಪಯಣ ಸಾಗಿತ್ತು. ಬೆಳಗಿನ ಎಳೆ ಹೊಂಬಿಸಿಲು ದಟ್ಟ ಅರಣ್ಯದ ಮರಗಳ ಮಧ್ಯೆ ನುಸುಳಿ ತನ್ನದೇ ಸುಂದರ ಚಿತ್ತಾರವನ್ನು ಮೂಡಿಸಿತ್ತು. ಎಳೆ ಬಿಸಿಲಿಗೆ ಮೈಯೊಡ್ಡಿ ವಿಶ್ರಮಿಸುತ್ತಿರುವ ಪಕ್ಷಿಗಳು ಒಂದು ಕಡೆಯಾದರೆ, ಪುಟ್ಟ ಮರಿಗಳಿಗೆ ಗುಟುಕು ತಿನ್ನಿಸುತ್ತಿದ್ದ ದೃಶ್ಯ ಇನ್ನೊಂದೆಡೆ. ಈ ಪಕ್ಷಿಗಳ ಲವಲವಿಕೆಯನ್ನು ಗಮನಿಸಿ ಆಸ್ವಾಧಿಸುತ್ತಿದ್ದ ನಮಗೆ ಪಕ್ಕದಲ್ಲಿಯೇ ಯಾವುದೋ ದೊಡ್ಡ ಪ್ರಾಣಿ ನಡೆದು ಬರುತ್ತಿರುವ ಶಬ್ಧವು ಕಿವಿಗೆ ಬಿತ್ತು. ಶಬ್ಧದ ಕಡೆಗೆ ದೃಷ್ಟಿಸಿದಾಗ ಅತಿ ಹತ್ತಿರದಲ್ಲೇ, ಅಂದರೆ ಒಂದು ಹತ್ತಿಪ್ಪತ್ತು ಹೆಜ್ಜೆ ದೂರದಲ್ಲಿರುವ ನದಿಯ ಪಕ್ಕದ ದಡದಲ್ಲಿ ಆನೆಗಳ ಹಿಂಡು ಬರುತ್ತಿರುವುದು ಕಾಣಿಸಿತು. ನಾವು ತಟ್ಟನೆ ಅಲ್ಲಿಯೇ ನಿಂತೆವು. ಆದರೆ ನಮ್ಮ ಜೊತೆಯಿದ್ದ ಅರಣ್ಯ ಸಿಬ್ಬಂದಿಯು ಮೆಲು ಧ್ವನಿಯಲ್ಲಿ ‘ಪರವಾಗಿಲ್ಲ ಬನ್ನಿ ಸಾರ್, ಇನ್ನು ಸ್ವಲ್ಪ ಮುಂದೆ ಹೋಗೋಣ ಒಳ್ಳೆ ಫೋಟೋ ಸಿಗುತ್ತೆ’ ಎಂದು ನಿಧಾನವಾಗಿ ಆನೆಗಳು ಇರುವ ಕಡೆಗೆ ಮುನ್ನಡೆದ. ಮನಸ್ಸಿನಲ್ಲಿ ಬೆಟ್ಟದಷ್ಟು ಭಯ, ಅಂಜಿಕೆ ಇದ್ದರೂ ಆ ಅರಣ್ಯ ಇಲಾಖೆಯವನ ಆತ್ಮವಿಶ್ವಾಸ ಮೆಚ್ಚಿ ಮರು ಮಾತಾಡದೆ ಅವನನ್ನು ಮೌನವಾಗಿ ಹಿಂಬಾಲಿಸಿದೆವು. ಹತ್ತಿರತ್ತಿರವಾದಂತೆ ಆನೆಗಳ ದೊಡ್ಡ ಹಿಂಡೇ ಅಲ್ಲಿ ನಮಗೆ ಕಾಣಿಸಿತು. ಸರಿ ಸುಮಾರು ಇಪ್ಪತ್ತು ಆನೆಗಳು ಆ ಗುಂಪಿನಲ್ಲಿದ್ದವು. ದೊಡ್ಡ ಆನೆ, ಚಿಕ್ಕ ಆನೆ, ಮರಿ ಆನೆ ಎಲ್ಲವೂ ನಿಧಾನವಾಗಿ ಹರಿಯುತ್ತಿದ್ದ ನದಿ ನೀರಿನಲ್ಲಿ ಆಟವಾಡುತ್ತ ಮುಂದೆ ಸಾಗುತ್ತಿದ್ದವು.

© ಗುರು ಪ್ರಸಾದ್ ಕೆ. ಆರ್.

ನಮ್ಮ ಕರ್ನಾಟಕದ ನಾಗರಹೊಳೆ ಕಾಡಿನಲ್ಲಿ, ಪಕ್ಷಿ ಗಣತಿಗೆಂದು ಹೋಗಿದ್ದಾಗ ಐದು ಅಥವಾ ಆರು ಆನೆಗಳಿರುವ ಹಿಂಡನ್ನು ನೋಡಿದ್ದುದ್ದೇ ಹೆಚ್ಚು. ಆದರೆ ಈಗ ಇಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚಿರುವ ಆನೆ ಹಿಂಡನ್ನು, ಅದರಲ್ಲೂ ಅನತಿ ದೂರದಲ್ಲಿಯೇ ಕಂಡದ್ದು ತಿರುಕನಿಗೆ ಮೃಷ್ಟಾನ್ನ ಭೋಜನ ಸಿಕ್ಕಂತಾಗಿತ್ತು. ಈ ದೃಶ್ಯವನ್ನು ಕ್ಯಾಮೆರಾ ಮುಖಾಂತರ ಸೆರೆಹಿಡಿಯುತ್ತಿದ್ದೆ. ಆನೆಗಳಿಗೆ ಅಷ್ಟು ಹತ್ತಿರದಲ್ಲಿಯೇ ಇದ್ದ ಕಾರಣ ಭಯವು ಹೆಚ್ಚುತ್ತಲೇ ಇತ್ತು. ಭಯವನ್ನು ತಡಯಲಾಗದೆ ನಮ್ಮ ಜೊತೆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ನಾನು ‘ಆನೆಗಳಿಗೆ ತುಂಬಾನೇ ಹತ್ತಿರದಲ್ಲಿ ಇದ್ದೇವೆ, ಆನೆಗಳಿಗೆ ಸಿಕ್ಕರೆ?  ಸಾಕು ಹೊರಡೋಣ ಬನ್ನಿ’   ಎಂದೆ. ಅವರು ನನ್ನ ಮಾತಿಗೆ ಸ್ವಲ್ಪವೂ ವಿಚಲಿತರಾಗದೆ “ಸಾಬ್ ಇಲ್ಲಿ ಮನುಷ್ಯ ಹಾಗು ಆನೆಗಳ ನಡುವೆ ಅಷ್ಟೊಂದು ಸಂಘರ್ಷ ಇಲ್ಲ. ಇಲ್ಲಿನ ಜನ ಆನೆ ಅಥವಾ ಆನೆಗಳ ಹಿಂಡು ಬರುತ್ತಿದ್ದರೆ ಸುಮ್ಮನೆ ಅವು ಹೋಗುವ ತನಕ ಏನು ಮಾಡದೇ ನಿಂತು ಬಿಡುತ್ತಾರೆ. ಅವುಗಳ ಪಾಡಿಗೆ ಅವು ಹೋಗುತ್ತವೆ. ನಾವು ಎಷ್ಟೋ ಬಾರಿ ಹೀಗೆಯೇ ಮಾಡಿದ್ದೇವೆ, ಹೆದರಬೇಡಿ” ಅವನ ಮಾತು ಆಶ್ಚರ್ಯಕರವಾಗಿತ್ತು. ಅವರು ಮಾತನ್ನು ಮುಂದುವರಿಸುತ್ತಾ ‘ಇಲ್ಲಿನ ಜನರೂ ಅಷ್ಟೇ, ಆನೆಗಳನ್ನು ಕಂಡಾಗ ಗಲಿಬಿಲಿಗೊಂಡು ಕೂಗಾಡುವುದು, ಹಾರ್ನ್ ಮಾಡುವುದು, ಗಲಾಟೆ ಮಾಡುವುದು, ಕಿರುಚಾಡಿ ಆನೆಗಳನ್ನು ಓಡಿಸುವುದು ಹೀಗೆ ಯಾವುದನ್ನೂ ಮಾಡದೇ, ಸಾವಕಾಶವಾಗಿದ್ದು ಅವುಗಳು ಸ್ವಲ್ಪ ದೂರಕ್ಕೆ ಹೋದ ನಂತರ ಹೋಗುತ್ತಾರೆ. ನನ್ನ ಅನುಭವದಿಂದಲೇ ಹೇಳುವುದಾದರೆ ಪ್ರಾಣಿಗಳು ನಮಗೆ ಮನುಷ್ಯರಿಂದ ಯಾವುದೇ ತೊಂದರೆ ಇಲ್ಲ ಎಂದು ಅವುಗಳಿಗೆ ಖಾತ್ರಿಯಾದರೆ ಅವುಗಳ ಪಾಡಿಗೆ ಅವು ಇರುತ್ತವೆ’ ಎಂದರು. ಆನೆಗಳ ಮತ್ತು ಅಲ್ಲಿನ ಜನರ ನಡುವಿನ ಸಂಬಂಧಗಳನ್ನು ಕೇಳಿ ಈ ಸಾಮರಸ್ಯ ಜೀವನದ ಬಗ್ಗೆ ಖುಷಿಯಾಯಿತು.

© ಧನರಾಜ್ ಎಂ.

ತುಂಬಾ ಹತ್ತಿರವಿದ್ದ ಆನೆಗಳ ಹಿಂಡನ್ನು ನೋಡಿ ನನಗೆ ಮೈ ರೋಮಾಂಚನವಾಗಿತ್ತು. ಒಂದೆರಡು ಪುಟ್ಟ ಆನೆ ಮರಿಗಳ ಆಟ, ಅವುಗಳಿಗೆ ತೊಂದರೆಯಾಗದಂತೆ ಅವುಗಳ ಸುತ್ತ ನೆರೆದಿದ್ದ ದೊಡ್ಡ ಆನೆಗಳು, ಪುಟ್ಟ ಮರಿಗಳ ಅಮ್ಮನ ಸೂಕ್ಷ್ಮ ಗಮನಿಸುವಿಕೆ ಎಲ್ಲವೂ ಮನಮೋಹಕವಾಗಿತ್ತು.    ಇವುಗಳೆಲ್ಲವನ್ನು ಒಂದು ದೊಡ್ಡ ಸಲಗ ಮುನ್ನಡೆಸುತ್ತಿತ್ತು. ಹೀಗೆಯೇ ಅವುಗಳ ವಿನೋದವನ್ನು ನೋಡುತ್ತಾ ಐದರಿಂದ ಹತ್ತು ನಿಮಿಷ ಕಳೆದಿರಬೇಕು, ಅಷ್ಟರಲ್ಲಿ ನೀರಿನಲ್ಲಿದ್ದ ಒಂದು ದೊಡ್ಡ ಆನೆ, ನೀರಿಂದ ಮೇಲೆ ಬಂದು ನಮ್ಮ ಕಡೆ ಬರುವುದಕ್ಕೆ ಶುರು ಮಾಡಿತು, ಒಂದಷ್ಟು ದೂರ ಬಂದ ಅದು ನಮ್ಮನ್ನು ನೋಡಿ ಅಲ್ಲಿಯೇ ನಿಂತು ಸೊಂಡಿಲನ್ನು ಮೇಲೆತ್ತಿತ್ತು. ಅದರ ಭಾಷೆಯನ್ನು ಅರಿತಂತೆ ನಮ್ಮ ಜೊತೆಗಿದ್ದ ಅರಣ್ಯ ಸಿಬ್ಬಂದಿ ‘ಇನ್ನು ಸಾಕು ಸರ್ ಬನ್ನಿ ಹಿಂದೆ ಹೋಗೋಣ’ ಎಂದು ಪಕ್ಕದ ದಾರಿ ಹಿಡಿದು ಹಿನ್ನಡೆದೆವು.

ಅದು ನೀಡಿದ ಮುನ್ಸೂಚನೆಯನ್ನು ಅರಿತ ಅರಣ್ಯ ಸಿಬ್ಬಂದಿಯ ಅನುಭವ, ಸಮಯ ಪ್ರಜ್ಞೆಯನ್ನು ಶ್ಲಾಘಿಸುತ್ತಾ ಎಲ್ಲರೂ ವಾಪಾಸ್ ನಮ್ಮ ಪಕ್ಷಿ ವೀಕ್ಷಣೆಯ ಕಡೆ ಗಮನ ಹರಿಸಿದೆವು.  ಎಲ್ಲಿಯ ತನಕ ಕಾಡಿನ ಭಾಷೆ ಅರಿಯುವುದನ್ನು ನಾವು ಕಲಿಯುವುದಿಲ್ಲವೋ ಅಲ್ಲಿಯ ತನಕ ಕಾಡು ನಿರ್ಜೀವಿ, ನಿಗೂಢ, ಅಗೋಚರ, ಆಪತ್ತು, ಅಸ್ಪಷ್ಟ, ಅವಿರತ ಮೌನ ಎನ್ನುವ ಭಾವನೆಗಳೆಲ್ಲ ಮೂಡುತ್ತವೆ. ಆದರೆ ಒಮ್ಮೆ ಅದರ ಭಾಷೆಯನ್ನು ಮತ್ತು ಅದರಲ್ಲಿರುವ ಪ್ರತಿ ಜೀವಿಯ ಭಾಷೆಯನ್ನು ಅರಿತಲ್ಲಿ ಎಲ್ಲವೂ ಕೌತುಕ, ಆಹ್ಲಾದಕರ, ರೋಮಾಂಚಿತ ಎನಿಸುತ್ತದೆ ಎಂದು ಆ ದಿನ ನಾನು ಅರಣ್ಯ ಸಿಬ್ಬಂದಿಯನ್ನು ನೋಡಿ ಕಲಿತೆ. ಅವರ ಸುತ್ತ ಇರುವ ಕಾಡೇ ಅವರ ಮಿತ್ರ. ಅವರ ಅನುಭವವೇ ಅವರ ಅಸ್ತ್ರ, ಅವರ ಸಮಯ ಪ್ರಜ್ಞೆಯೇ ಅವರ ಧೈರ್ಯ ಎಂದೆನಿಸಿದ್ದು ಸುಳ್ಳಲ್ಲ. ಅವರಿಗೂ ಎಲ್ಲರಂತೆ ಹಲವಾರು ಸಮಸ್ಯೆಗಳಿವೆ, ಎಲ್ಲರಿಗಿಂತ ಹೆಚ್ಚು ಸಮಸ್ಯೆಗಳಿವೆ ಎಂದರೂ ತಪ್ಪಾಗಲಾರದು, ಅಷ್ಟು ಸಮಸ್ಯೆಗಳಿದ್ದರೂ ಆ ಕಾಡಿನ ಜೀವಿಗಳನ್ನು ನೋಡಿ, ಅವುಗಳು ವಿನೋದದಿಂದಿರುವುದನ್ನು ನೋಡಿ ಇವರು ಸಹ ನೆಮ್ಮದಿ ಕಾಣುವುದನ್ನು ಕಂಡ ನನಗೆ ನಿಜಕ್ಕೆ ಎದೆ ತುಂಬಿ ಬಂತು. ಈ ಕಾಡಿನ ಜೀವಿಗಳು, ಅರಣ್ಯ ಸಿಬ್ಬಂದಿಗಳು, ಅಲ್ಲಿನ ಜನರ ಸಾಮರಸ್ಯವನ್ನು ಕಂಡು ನನಗೆ ಈ ರೀತಿಯ ಜೀವನವೇ ಎಷ್ಟೋ ಮಾನವ-ವನ್ಯಜೀವಿ ಸಮಸ್ಯೆಗಳಿಗೆ ಪರಿಹಾರವಲ್ಲವೇ? ಎಂದೆನಿಸಿತು. ಇದನ್ನು ನನ್ನ ಜೊತೆಗಾರ ಮುನೀಶ್ ಜೊತೆ ಚರ್ಚಿಸಬೇಕು ಎಂದು ಅವನು ಎಲ್ಲಿರುವನು ಎಂದು ಸುತ್ತಲೂ ನೋಡಿದೆ ಆಗಲೇ ತಿಳಿದದ್ದು ನನಗೆ, ನಾವಾಗಲೇ ನಾವು ತಂಗಿದ್ದ ಸ್ಥಳಕ್ಕೆ ಮರಳಿದ್ದೇವೆ ಎಂದು. ಮುನೀಶ್ ಜೊತೆ ಇದನ್ನು ಇನ್ನೊಮ್ಮೆ ಪುರೊಸೊತ್ತಿನ ಸಮಯದಲ್ಲಿ ಚರ್ಚಿಸೋಣ ಎಂದು ಸುಮ್ಮನಾದೆ.

           ಅಷ್ಟರಲ್ಲಿ ನಮ್ಮನ್ನು ಕರೆದುಕೊಂಡು ಹೋಗುವ ಜೀಪ್ ಬಂದು ನಮ್ಮ ಬರುವಿಕೆಯನ್ನು ಕಾಯುತ್ತಿತ್ತು. ಆದಷ್ಟು ಬೇಗನೆ ತಿಂಡಿ ಮುಗಿಸಿದ ಇಬ್ಬರು ನಮ್ಮ ಲಗೇಜ್ ಅನ್ನು ಜೀಪ್ ನಲ್ಲಿ ಇಟ್ಟು ನಮಗೆ ಈ ಅದ್ಭುತ ಪ್ರಪಂಚದ ಪರಿಚಯವನ್ನು ಮಾಡಿಕೊಟ್ಟ ಅರಣ್ಯ ಸಿಬ್ಬಂದಿಗೆ ಹೃದಯ ಪೂರ್ವಕವಾಗಿ ವಂದಿಸಿ ಅಲ್ಲಿಂದ ಬೀಳ್ಕೊಂಡೆವು. ನಮ್ಮ ಜೀಪ್ ಅಲ್ಲಿಂದ 20 ಕಿಲೋ ಮೀಟರ್ ದೂರದಲ್ಲಿದ್ದ ಇನ್ನೊಂದು ಕ್ಯಾಂಪ್ ನಿಂದ ಪಕ್ಷಿ ಗಣತಿಗೆಂದು ಬಂದಿದ್ದ ಸ್ವಯಂ ಸೇವಕರನ್ನು ಸಹ ಕರೆದೊಯ್ಯಬೇಕಿದ್ದ ಕಾರಣ ಅಲ್ಲಿಗೆ ತಲುಪಿದ ನಾವು ಅವರನ್ನು ಕೂರಿಸಿಕೊಂಡು ರಾಮ್ನಗರ್ ಕಡೆ ಹೊರಟೆವು.

ಮೊದಲನೇ ದಿನ ರಾಮ್ನಗರ್ ನಿಂದ ನಮ್ಮ ಕ್ಯಾಂಪ್ ಗಳಿಗೆ ಬರುವಾಗ ಕಾಡಿನ ದಾರಿಯಲ್ಲಿ ಬಂದಿದ್ದ ನಾವು, ಹೋಗುವಾಗ ಬೇಗ ಹೋಗಬೇಕಿದ್ದ ಕಾರಣ ಜಿಮ್ ಕಾರ್ಬೆಟ್ ಕಾಡಿನ ಕಾಡು ದಾರಿಯಲ್ಲಿ ಹೋಗದೆ ಮಾಮೂಲಿ ರೋಡ್ ಮೂಲಕ ಹೋಗಲು ನಿರ್ಧರಿಸಿದ್ದೆವು. ದಾರಿ ಉದ್ದಕ್ಕೂ ಕಾಣಿಸುತ್ತಿದ್ದ ಕಡಿದಾದ ಕಣಿವೆ, ದೊಡ್ಡ ಬೆಟ್ಟಗಳು, ಗುಡ್ಡಗಳು, ರೋಡಿಗೆ ಅಲ್ಲಲ್ಲಿ ಸಿಗುತ್ತಿದ್ದ ದೊಡ್ಡ ಸೇತುವೆ, ನೀರಿನ ಜಲಪಾತ, ಉತ್ತರಾಖಂಡ್ ನ ನೈಜ ರೋಡಿನ ಅನುಭವ, ಎಲ್ಲವೂ ಪುಳಕಿತಗೊಳಿಸುತ್ತಿತ್ತು. ಮೊದಲನೇ ದಿನ ಕಂಡ ಕಾಡಿಗೂ ಈಗ ನೋಡುತ್ತಿರುವ ಕಾಡಿಗೂ ಎಷ್ಟು ಭಿನ್ನವಲ್ಲವೇ ಎನಿಸುತ್ತಿತ್ತು. ನಾವು ಬಂದ ಮೊದಲನೇ ದಿನ ನಿಗೂಢ ವಾಗಿದ್ದ ಕಾಡು ಇಂದು ಮಿತ್ರನಾಗಿದೆಯಲ್ಲವೇ ಎನಿಸುತ್ತಿತ್ತು. ನಮ್ಮ ಅದೃಷ್ಟವೋ? ಏನೋ? ನಾವು ಅಲ್ಲಿ ತಂಗಿದ್ದ ದಿನ ಮಳೆರಾಯ ಕರುಣೆ ತೋರಿದ್ದ. ಮೋಡ ಇದ್ದರು ಜೋರು ಮಳೆಯಾಗಿರಲಿಲ್ಲ. ಆದರೆ ವಾಪಾಸ್ ಬರುವ ದಿನ ಮಳೆರಾಯ ಅಲ್ಲಿನ ರೌದ್ರ ನರ್ತನವಾದ ತನ್ನ ನೈಜ ಸ್ವರೂಪವನ್ನು ತೋರಿದ. ಜೀಪ್ ನಲ್ಲಿ ಸಾಗುತ್ತಿದ್ದ ನಮಗೆ ಮುಂದಿನ ರಸ್ತೆಯೇ ಕಾಣಿಸುತ್ತಿರಲಿಲ್ಲ. ಮಳೆಯಿಂದ ರಸ್ತೆಗಳ ಪಕ್ಕದಲ್ಲಿನ ಬೆಟ್ಟಗಳಿಂದ ಹರಿದು ಬರುವ ನೀರು ಅಲ್ಲಲ್ಲಿ ಜಲಪಾತವನ್ನೇ ಸೃಷ್ಟಿಸಿತ್ತು.

ಬೆಟ್ಟ ಇಳಿದು ರಾಮ್ನಗರ್ ಕಡೆ ಬರ್ತಾ ಇದ್ದಾಗ ಮಳೆ ಸ್ವಲ್ಪ ಕಡಿಮೆಯಾಯಿತು. ನಮ್ಮ ಜೊತೆಯಲ್ಲಿದ್ದ ನಮ್ಮ ಜೀಪ್ ನ ಚಾಲಕ ದಾರಿಯುದ್ದಕ್ಕೂ ಸಿಕ್ಕ ಹಳ್ಳಿಗಳ, ದೇವಸ್ಥಾನಗಳ ಪರಿಚಯವನ್ನು ಮಾಡಿಕೊಟ್ಟರು.  ಅಂತೂ ರಾಮ್ನಗರ್ ತಲುಪಿದಾಗ ಮಧ್ಯಾಹ್ನವಾಗಿತ್ತು.  ಆಗಲೇ ಬೇರೆ ಬೇರೆ ಕ್ಯಾಂಪ್ ಕಡೆ ಇಂದ ಕೆಲವು ತಂಡಗಳು ಆಗಮಿಸಿದ್ದವು.  ಎಲ್ಲಾ ತಂಡಗಳು ಬಂದ ಮೇಲೆ, ನಮಗೆ ಕೊಟ್ಟಿದ್ದ ರಿಪೋರ್ಟ್ ಅನ್ನು ಪೂರ್ಣಗೊಳಿಸಿ ಪಕ್ಷಿ ಗಣತಿ ಕಾರ್ಯದ ಮಾಹಿತಿಯನ್ನು ಹಿಂತಿರುಗಿಸಿದೆವು. 

 ನಂತರ ಈ 1300 ಚದರ ಕಿಲೋ ಮೀಟರ್ ಗಳ (1318.54 square kilometres) ವಿಸ್ತೀರ್ಣದ ಕಾಡಿನ ಬೇರೆ ಬೇರೆ ಕ್ಯಾಂಪ್ ಗಳಲ್ಲಿ ಸಿಕ್ಕ ಅಪರೂಪದ ಪಕ್ಷಿಗಳ ಬಗ್ಗೆ, ಅದರ ಫೋಟೋಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮುಖೇನ, ತಮ್ಮ ತಮ್ಮ ಅನಿಸಿಕೆ ಹಾಗು ಅನುಭವ ಹಂಚಿಕೊಂಡು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗಿಯಾದೆವು. 9 ರಾಜ್ಯಗಳಿಂದ ಬಂದಿದ್ದ 62 ಜನ ಸ್ವಯಂ ಸೇವಕರು ಸುಮಾರು 275 ಪಕ್ಷಿ ಪ್ರಭೇದಗಳನ್ನು ಹಾಗು ಅಪರೂಪದ ಸ್ಥಳೀಯ ಪಕ್ಷಿ ಪ್ರಭೇದಗಳನ್ನು ದಾಖಲಿಸಿದ್ದೆವು. ಅದರ ಜೊತೆ ಜೊತೆಯಲ್ಲೇ ಹಲವು ಬಗೆಯ ಪ್ರಾಣಿ ಮತ್ತು ಚಿಟ್ಟೆ ಪ್ರಭೇದಗಳ ದಾಖಲೀಕರಣ ಕೂಡ ಆಗಿತ್ತು. ವಂದನಾರ್ಪಣೆ ಬಳಿಕ ನಮ್ಮ ನಾಲ್ಕು ದಿನದ ಜಿಮ್ ಕಾರ್ಬೆಟ್ ಕಾಡಿನ ಪಕ್ಷಿ ವೀಕ್ಷಣೆ ಹಾಗು ಸಮೀಕ್ಷೆ ಕಾರ್ಯ ಸಮಾಪ್ತಿಯಾಗಿತ್ತು. ಎಲ್ಲರೂ ತಮ್ಮ ತಮ್ಮ ಸ್ನೇಹಿತರಿಗೆ ವಂದಿಸಿ ನೆನಪಿನ ಬುತ್ತಿಯ ಜೊತೆಗೆ ನಮ್ಮ ಬಟ್ಟೆಯ ಬುಟ್ಟಿಗಳನ್ನು ಹೊತ್ತು ಅಲ್ಲಿಂದ ಹೊರಟೆವು.

ಜಿಮ್ ಕಾರ್ಬೆಟ್ ಕಾಡಿನ ಬಗ್ಗೆ ಸಣ್ಣ ಮಾಹಿತಿ.

  • ಒಟ್ಟು ಅರಣ್ಯ ಪ್ರದೇಶ – 1318.54 ಚದರ ಕಿಲೋಮೀಟರ್.
  • ಕೋರ್ ಏರಿಯಾ – 520 ಚದರ ಕಿಲೋಮೀಟರ್
  • ಅರಣ್ಯದ ವಿಧ – ದಟ್ಟವಾದ ತೇವಾಂಶವುಳ್ಳ ಎಲೆಯುದುರುವ ಕಾಡು. ಮುಖ್ಯವಾಗಿ ಸಾಲ್, ಹಲ್ದು, ಪೀಪಲ್, ರೋಹಿಣಿ ಮತ್ತು ಮಾವಿನ ಮರಗಳನ್ನು ಒಳಗೊಂಡಿದೆ.
  • ನದಿಗಳು – ಕೋಸಿ ನದಿ, ರಾಮಗಂಗಾ ನದಿ
  • ಬೆಟ್ಟಗಳು – ನೈನಿತಾಲ್, ಭೀಮತಾಲ್, ನೌಕಿಚಿತಾಲ್, ಋಷಿಕೇಶ, ಸತ್ತಾಲ್.
  • ತಾಪಮಾನ – ಬೇಸಿಗೆಯಲ್ಲಿ ಗರಿಷ್ಠ 400c ಮತ್ತು ಚಳಿಗಾಲದಲ್ಲಿ 80c
  • ವಾರ್ಷಿಕ ಮಳೆ – ಸರಾಸರಿ 1133 ಮಿ. ಮೀ

ಲೇಖನ: ಗುರು ಪ್ರಸಾದ್ ಕೆ. ಆರ್.
 ಬೆಂಗಳೂರು ನಗರ ಜಿಲ್ಲೆ

Spread the love
error: Content is protected.