ಮಕ್ಕಳ ಕಥೆಗಳ ನಾಯಕ
©ದೀಕ್ಷಿತ್ ಕುಮಾರ್ ಪಿ.
ಈ ಅಂಕಣದ ಶೀರ್ಷಿಕೆ ಬಲು ವಿಚಿತ್ರವೆನಿಸುತ್ತದೆ ಅಲ್ಲವೇ? ಇಲ್ಲಿ ಮಕ್ಕಳ ಕಥೆಗಳನ್ನು ಮಾತ್ರ ಪರಿಗಣಿಸಿ ಶೀರ್ಷಿಕೆ ಓದಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಮಕ್ಕಳ ಕಥೆಗಳಲ್ಲಿ ಅಥವಾ ಪುಸ್ತಕಗಳಲ್ಲಿ ತುಂಬಾ ಹೆಚ್ಚಾಗಿ ಕಾಣಿಸುವ ಹುಳು ಯಾವುದೆಂದು ಊಹಿಸಬಲ್ಲಿರಾ? ಸುಳಿವು: ಇದು ಗಾಢ ಕೆಂಪು ಬಣ್ಣ ಹೊಂದಿದೆ. ಅದರ ಮೇಲೆ ಕಪ್ಪು ಬಣ್ಣದ ಚುಕ್ಕೆಗಳಿವೆ. ಹೌದು! ಅದೇ! ನಿಮ್ಮ ಊಹೆ ಸರಿಯಾಗಿದೆ. ನಾನು ಹೇಳುತ್ತಿರುವುದು ಜೀರುಂಡೆ! (Lady bug) ಬಗ್ಗೆ, ಬಹುತೇಕ ಎಲ್ಲ ಮಕ್ಕಳ ಪುಸ್ತಕದಲ್ಲಿ ಕಂಡುಬರುವ ಈ ಜೀರುಂಡೆ ಬಿಳಿಯ ಹಾಳೆಗಳಲ್ಲಿ ತುಂಬಾ ಅತ್ಯಾಕರ್ಷಕವಾಗಿ ಕಾಣುತ್ತದೆ. ಹೀಗಾಗಿ ಒಂದು ದಿನ ಕಥೆ ಹೇಳುತ್ತಿರಬೇಕಾದರೆ ನನ್ನ ಮಗ ಪ್ರಶ್ನೆಯನ್ನು ಕೇಳಿಯೇ ಬಿಟ್ಟ. ಇವ ಯಾವ ಪ್ರಶ್ನೆಯನ್ನು ಕೇಳಿ ನನ್ನ ಹೆದರಿಸುತ್ತಾನೆ ಎಂದು ಯೋಚಿಸಿದ್ದೇನೋ, ಆ ಪ್ರಶ್ನೆಯನ್ನು ಕೇಳದೆ ಬಿಡಲಿಲ್ಲ. “ನೀನು ಎಲ್ಲಾ ಹುಳುಗಳ ಬಗ್ಗೆ ಹೇಳ್ತಿಯಲ್ಲ ಆದರೆ ಈ ಲೇಡಿ ಬಗ್ ಎಲ್ಲೂ ತೋರಿಸಿಯೇ ಇಲ್ಲ. ಇದು ನಮ್ಮ ತೋಟಕ್ಕೆ ಬರುವುದಿಲ್ಲವೇ?” ಎಂದನು. ಅವತ್ತಿನಿಂದ ನಾನು ಈ ಜೀರುಂಡೆಯನ್ನು ಹುಡುಕತೊಡಗಿದೆ. ಆದರೆ ಅದರ ಸುಳಿವೇ ಇಲ್ಲ. ಇದು ಅಫಿಡ್ಸ್ ಗಳನ್ನು (ಗಿಡಗಳ ರಸವನ್ನು ಹೀರುವ ಒಂದು ಬಗೆಯ ಮಾರಕ ಕೀಟಗಳನ್ನು) ತಿನ್ನುತ್ತದೆ ಎಂದು ಅಫಿಡ್ಸ್ ಮೆತ್ತಿಕೊಂಡ ಗಿಡಗಳ ಸುತ್ತ ಬಹಳಷ್ಟು ಬಾರಿ ಸುಳಿದಾಡಿ ನಿರಾಶೆಗೊಂಡೆವು. ಗಾತ್ರದಲ್ಲಿ ಸುಮಾರು 0.3 to 0.4 ಇಂಚು ಇರುವ ಇವು ಕಾಣುವುದೇ ಅಪರೂಪ. ಇನ್ನು ಹಲವು ಬಾರಿ ಲೇಡಿ ಬಗ್ ತರಹದ ಜೀರುಂಡೆಗಳನ್ನು ನೋಡಿದರೂ ಅವುಗಳನ್ನು ಗುರುತಿಸಲು ವಿಫಲವಾಗಿಬಿಟ್ಟೆವು. ಯಾಕೆಂದರೆ ನಾವು ನೋಡಿದ ಲೇಡಿ ಬಗ್ ಗಳು ಕೆಂಪಾಗಿರಲೇ ಇಲ್ಲ. ಬದಲಾಗಿ ಕಪ್ಪು, ಕಂದು ಬಣ್ಣದ್ದು ಇದ್ದು, ಅದರ ಮೇಲಿನ ಚುಕ್ಕೆಗಳು ಸಹ ವಿಭಿನ್ನವಾಗಿದ್ದವು. ಹೀಗಾಗಿ ಅವು ಲೇಡಿ ಬಗ್ ಎಂದು ತಿಳಿಯದೆ ಹೋಯಿತು.
ಒಂದು ದಿನ ನಮ್ಮೂರ ಹತ್ತಿರದ ಗುಡ್ಡದ ಮೇಲಿನ ದೇವಸ್ಥಾನಕ್ಕೆ ಹೋಗಿದ್ದೆವು. ಹಾಗೆಯೆ ಅಲ್ಲಿ ಸುತ್ತಾಡುತ್ತಿರುವಾಗ ಫಕ್ಕನೆ ಕೆಂಪು ಚುಕ್ಕೆಯೊಂದು ನನ್ನ ಕಾಲ ಬಳಿ ಮಿಂಚಿ ಮರೆಯಾಯಿತು. ಹುಲ್ಲನ್ನು ಸ್ವಲ್ಪ ಸರಿಸಿ ಕಣ್ಣಾಡಿಸಿದಾಗ ಲೇಡಿ ಬಗ್ ಓಡಿ ಹುಲ್ಲಿನಲ್ಲಿ ಆಶ್ರಯ ಪಡೆದುಕೊಂಡಿತು. ದಿಟ್ಟಿಸಿ ನೋಡಿದಾಗ ಅದು ಕೆಂಬಣ್ಣವಾಗಿತ್ತು. ಆದರೆ ಅದರ ಮೇಲೆ ಕಪ್ಪು ಚುಕ್ಕಿಗಳಿರದೆ ಝಿಗ್ ಜ್ಯಾಗ್ ನಮೂನೆಯಲ್ಲಿ ಕಪ್ಪು ಬಣ್ಣದ ಪಟ್ಟೆಗಳಿದ್ದವು. ಹುಳುವಿನ ವರ್ಣ ಸಂಯೋಜನೆಯಿಂದ ಅದು ಬಹುತೇಕ ಲೇಡಿ ಬಗ್ ನಂತೆ ಕಾಣುತ್ತಿತ್ತು. ಅದರ ಬಗ್ಗೆ ಮಾಹಿತಿಯನ್ನು ಜಾಲಾಡಿದಾಗ ಅದು ಕೂಡ ಲೇಡಿ ಬಗ್ ನ ಪ್ರಭೇದವನ್ನು ತಿಳಿಯಿತು. ಸಾಮಾನ್ಯ ಲೇಡಿ ಬಗ್ ನ ವೈಜ್ಞಾನಿಕ ಹೆಸರು Coccinella Septempunctata. ಇದರ ಮೂಲ ಯುರೋಪ್ ಆದರೂ ಏಷ್ಯಾದ ಎಲ್ಲೆಡೆ ಕಾಣಬರುವ ಇವುಗಳ ಬಣ್ಣ ಮತ್ತು ಚುಕ್ಕೆಯ ಆಕಾರದಲ್ಲಿ ಬಹಳಷ್ಟು ಭಿನ್ನವಾಗಿವೆ. ಮೊದಲೇ ಹೇಳಿದಂತೆ ಇವುಗಳ ಮುಖ್ಯ ಆಹಾರ ಇತರ ಕೀಟಗಳು. ಬೆಳೆಗೆ ಮಾರಕವಾದ ಇತರ ಕೀಟಗಳನ್ನು ತಿನ್ನುವುದರಿಂದ ಇದಕ್ಕೆ ತುಂಬಾ ಗೌರವ. ಹೀಗಾಗಿ ಇತರ ಹುಳುಗಳಿಗಿಂತ ಬೇರ್ಪಡಿಸುವ ಸಲುವಾಗಿ ಇದಕ್ಕೆ ‘ಲೇಡಿ’ ಎಂಬ ಗೌರವಾನ್ವಿತ ಹೆಸರು ಬಂದಿರುವ ಪ್ರತೀತಿ ಇದೆ! ಇನ್ನೂ ವಿವರವಾಗಿ ಈ ಕಥೆಯನ್ನು ಹೇಳಬೇಕೆಂದರೆ ಹಿಂದೆ ಯುರೋಪಿನಲ್ಲಿ ಬೆಳೆಗಳಿಗೆ ಹುಳುಗಳ ಕಾಟ ಹೆಚ್ಚಾದಾಗ ಅಲ್ಲಿನ ರೈತರು ಮೇರಿ ಅಮ್ಮನಿಗೆ ಮೊರೆಯಿಟ್ಟಾಗ, ಲೇಡಿ ಬಗ್ ಹುಳು ಬಂದು ಎಲ್ಲಾ ಕ್ರಿಮಿಗಳನ್ನು ತಿಂದು ಹಾಕಿತು. ಆಗ ಇದರ ಹೆಸರು “Lady of beetles” “Queen of Beetles” ಅಂತ ಕರೆಯಲಾರಂಭಿಸಿದರು. ಕ್ರಮೇಣ ಅದು ಲೇಡಿ ಬಗ್ ಎಂದಾಯ್ತು.
ಅಂದ ಹಾಗೆ ಅವತ್ತು ನಾನು ನೋಡಿದ ಝಿಗ್ ಜ್ಯಾಗ್ ಲೇಡಿ ಬಗ್ ಅನ್ನು, ಝಿಗ್ ಜ್ಯಾಗ್ ಲೇಡಿ ಬಗ್ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತದೆಯಂತೆ. ಇದರ ವೈಜ್ಞಾನಿಕ ಹೆಸರು Cheilomenes sexmaculata. ಲೇಡಿ ಬಗ್ ನ ಜೀವನ ಚಕ್ರವೂ ಸ್ವಲ್ಪ ಭಿನ್ನವಾಗಿದೆ. ಹೆಣ್ಣು ಜೀರುಂಡೆ ಮೊಟ್ಟೆಯಿಟ್ಟ ಐದು ದಿನಗಳಲ್ಲಿ ಲಾರ್ವಗಳು ಹೊರ ಬರುತ್ತವೆ. ಜನ್ಮ ತಾಳುವ ಮರಿಗಳಿಗೆಂದೇ ಕೆಲ ಅನ್ ಫರ್ಟಿಲೈಸ್ಡ್ ಮೊಟ್ಟೆಗಳನ್ನು ತಿನ್ನಲು ಇಟ್ಟಿರುತ್ತದೆ. ಇವು ಆ ಮೊಟ್ಟೆಗಳೊಡನೆಯೇ ಬೆರೆತು ಬಿಟ್ಟಿರುತ್ತವೆ. ಹೀಗೆ ಲಾರ್ವಗಳು ಅನ್ ಫರ್ಟಿಲೈಸ್ಡ್ ಮೊಟ್ಟೆಗಳನ್ನು ತಿಂದು, ಮುಂದಿನ ಬದುಕಿಗೆ ಅಣಿಯಾಗುತ್ತವೆ. ತದ ನಂತರ ಇತರ ಮೃದು ಕೀಟಗಳನ್ನು ತಿನ್ನುತ್ತಾ ಮುಂದಿನ ಹದಿನೆಂಟು ದಿನಗಳವರೆಗೆ ಬರಿ ತಿನ್ನುವುದಷ್ಟನ್ನೇ ಮುಂದುವರಿಸುತ್ತವೆ. ನಂತರ ಕೋಶಾವಸ್ಥೆಗೆ ತಲುಪುತ್ತವೆ. ಪ್ಯೂಪದಿಂದ ಹೊರಬಂದ ಲೇಡಿ ಬಗ್ ಹುಳುಗಳು ಮೊದಲಿಗೆ ಸಂಪೂರ್ಣ ಕಪ್ಪಾಗಿರುತ್ತವೆ. ಯಾವುದೇ ಚುಕ್ಕೆಗಳಿರುವುದಿಲ್ಲ. ಸಮಯ ಕಳೆದಂತೆ ಕೆಂಪು ವರ್ಣಕ್ಕೆ ತಿರುಗುತ್ತವೆ. ಆಗ ಅಲ್ಲಲ್ಲಿ ಕಪ್ಪು ಚುಕ್ಕೆಗಳು ಉಳಿಯುತ್ತವೆ. ವಸಂತ ಋತುವಿನಲ್ಲಿ ತುಂಬಾ ಚುರುಕಾಗಿರುವ ಇವು ಚಳಿಗಾಲ ಬಂದೊಡನೆ ಬೆಚ್ಚಗೆ ಮಲಗಿಕೊಂಡು ಬಿಡುತ್ತವೆ (Hibernation). ಇವುಗಳ ಜೀವಿತಾವಧಿ ಸುಮಾರು 3-4 ವರ್ಷವಿರುತ್ತದೆ. ತನ್ನ ಜೀವಿತಾವಧಿಯಲ್ಲಿ ಸುಮಾರು 5000 ಕೀಟಗಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ಜೀರುಂಡೆಗಳೆಂದರೆ ಗಾಢ ಕಪ್ಪು ಅಥವಾ ಕಂದು ಬಣ್ಣದ ವಿವಿಧ ಗಾತ್ರದ ಜೀರುಂಡೆಗಳು ನೆನಪಾದರೂ ಆಗಾಗ ಗಾಢ ಹೊಳೆಯುವ ಹಸಿರು ಬಣ್ಣದ ಮೆಟಾಲಿಕ್ ಅಥವಾ ಜೆವೆಲ್ ಬೀಟಲ್ಸ್ ಕೂಡ ಕಾಣಸಿಗುತ್ತವೆ. ಆದರೆ ಕಥೆಯಲ್ಲಿ ಬರುವ ಕೆಂಪು ಬಣ್ಣದ ಮತ್ತು ಏಳು ಕಪ್ಪು ಚುಕ್ಕೆಗಳೇ ಇರುವ ಲೇಡಿ ಬಗ್ ಕಾಣಸಿಗುವುದು ವಿರಳ. ಬಹುಷಃ ನಮ್ಮ ನಾಡಿನಲ್ಲಿ ಬೇರೆ ಬಣ್ಣದ, ಬೇರೆ ನಮೂನೆಯ ಚುಕ್ಕೆಗಳಿರುವ ಜೀರುಂಡೆಗಳೇ ಹೆಚ್ಚು ಅನಿಸುತ್ತದೆ, ಹೀಗಾಗಿ ಇನ್ನು ಮುಂದೆ ನಾನು ಬರೆಯುವ ಕಥೆಯಲ್ಲಿ ಲೇಡಿ ಬಗ್ ಪಾತ್ರಧಾರಿ ಬಂದರೆ ಅದು ಗಾಢ ಕೆಂಪು ಬಣ್ಣದ್ದು ಇರಬಾರದು ಎಂದು ತೀರ್ಮಾನಿಸಿದ್ದೇನೆ.
ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
ಬೆಂಗಳೂರು ನಗರ ಜಿಲ್ಲೆ.