ಏರೋಪ್ಲೇನ್ ಚಿಟ್ಟೆಗಳ ಕೊಲೆಯ ಕಥೆ!
© Wikimedia Commons
ಚಿಕ್ಕಂದಿನ ಆ ದಿನಗಳು… ಶಾಲೆಯಿಂದ ಮನೆಗೆ ನಡೆಯುವ ದಾರಿಯಲ್ಲಿ ಮಾಡುತ್ತಿದ್ದ ಸಾಹಸ ಕೆಲಸಗಳು ಒಂದೆರೆಡಲ್ಲ. ಆಗಲೇ ನಮಗೆ ಮೊದಲ ರಾಜಕೀಯ ಪಕ್ಷದ ಪರಿಚಯ ಆದದ್ದು, ರಾಜಕಾರಣಿಗಳ ಮೂಲಕವಲ್ಲ, ಬದಲಿಗೆ ಏರೋಪ್ಲೇನ್ ಚಿಟ್ಟೆಯಿಂದ ಎಂದರೆ ಆಶ್ಚರ್ಯವಾಗಬಹುದು. ಹೇಗೆಂದು ವಿವರಿಸಿಯೇ ಬಿಡುತ್ತೇನೆ. ಈ ಏರೋಪ್ಲೇನ್ ಚಿಟ್ಟೆಗಳನ್ನು ಹಿಡಿದು ಅದರ ಬಾಲಕ್ಕೆ ದಾರ ಕಟ್ಟಿ ಹಾರಲು ಬಿಡುವುದು ಚಿಕ್ಕಂದಿನ ಹಳ್ಳಿಯ ಹುಡುಗರ ಆಟಗಳಲ್ಲಿ ಒಂದು. ಹೀಗೊಂದು ಇಳಿ ಸಂಜೆಯ ಸಮಯ, ಶಾಲೆ ಮುಗಿಸಿ ಮನೆಗೆ ಹೊರಡುವಾಗ ಮುಂದೆ ನಡೆದು ಹೋಗುತ್ತಿದ್ದ ಹುಡುಗರ ಕೈಯಲ್ಲಿ ಬುಡ-ಸಮೇತ ಕಿತ್ತ ಒಂದು ಗಿಡ ಇತ್ತು. ಅದನ್ನು ಗಾಳಿಯಲ್ಲಿ ಆಗಾಗ ಬೀಸುತ್ತಿದ್ದರು. ನಾವೂ ಸಹ ಆ ಸಾಹಸಕ್ಕೆ ಕೈ ಹಾಕಬೇಕೆನಿಸಿತು. ಹಾಗಾದರೆ ‘ಕಾಂಗ್ರೆಸ್ ಗಿಡ ಕಿತ್ಕೋ..’ ಎಂಬ ನನ್ನ ಸ್ನೇಹಿತನ, ಆ ಮಾತೇ ನನಗೆ ಪಾರ್ಥೇನಿಯಂ ಗಿಡವನ್ನು ಮೊದಲು ಪರಿಚಯಿಸಿತು. ಅದೂ ಈ ಏರೋಪ್ಲೇನ್ ಚಿಟ್ಟೆ ಹೊಡೆಯುವ ಸಮಯದಲ್ಲಿ. ಹೀಗೆ ಗಾಳಿಯಲ್ಲಿ ಕಾಂಗ್ರೆಸ್ ಗಿಡ ಬೀಸುತ್ತಿದ್ದದ್ದು, ಏರೋಪ್ಲೇನ್ ಚಿಟ್ಟೆಯನ್ನು ಹೊಡೆಯಲು. ಬೀಸುತ್ತಿದ್ದ ಗಿಡದ ಮಧ್ಯದಲ್ಲಿ ಚಿಟ್ಟೆ ಸಿಕ್ಕಿಕೊಂಡರೆ, ಅದನ್ನು ತಕ್ಷಣ ಹಿಡಿದು ದಾರಕಟ್ಟಬೇಕಿತ್ತು. ಆದರೆ ಈ ಕೆಲಸಕ್ಕೆ ಕಾಂಗ್ರೆಸ್ ಗಿಡವೇ ಏಕೆ ಬೇಕು? ಕಾರಣ ಇಷ್ಟೇ, ಹೀಗೆ ಚಿಟ್ಟೆ ಹೊಡೆಯುವಾಗ ಒಂದು ನಿರ್ದಿಷ್ಟ ಬಲದಿಂದ ಮತ್ತು ಗಿಡದಿಂದಲೇ ಹೊಡೆಯಬೇಕಿತ್ತು. ಏಕೆಂದರೆ ನಾವು ಹೊಡೆಯುವ ಏಟಿಗೆ ಚಿಟ್ಟೆ ಸತ್ತುಹೋದರೆ ನಮ್ಮ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಅದಕ್ಕೆಂದೇ ಹುಟ್ಟಿಕೊಂಡ ಆಯುಧ ಈ ‘ಕಾಂಗ್ರೆಸ್ ಗಿಡ’. ಇದು ನಮ್ಮ ಹುಡುಗರ ಸತತ ಪ್ರಯತ್ನ ಹಾಗೂ ಸಂಶೋಧನೆಯ ಪ್ರತಿಫಲ. ನೋಡಿದಿರಾ ಮಕ್ಕಳು ಹುಟ್ಟಿನಿಂದಲೇ ಕುತೂಹಲಿಗಳು, ಬಾಲ ವಿಜ್ಞಾನಿಗಳು. ಮಾಡುತ್ತಿರುವುದು ಹಿಂಸೆ, ಜೊತೆಗೆ ಬಾಲ ವಿಜ್ಞಾನಿಗಳು ಎಂದು ಕರೆದುಕೊಳ್ಳುತ್ತೀರಾ? ಎಂಬ ಪ್ರಶ್ನೆ ಕೇಳಬಹುದು. ಸತ್ಯ, ನಾವು “ಆಗ” ಮಾಡುತ್ತಿದ್ದದ್ದು ಹಿಂಸೆಯೇ ಆದರೆ ಅದು ಅರಿವಿಲ್ಲದ ವಯಸ್ಸಿನಲ್ಲಿ ನಡೆಯುತ್ತಿದ್ದ ಮನೋರಂಜನೆಯ ಆಟ. ಆದರೇ “ಈಗ” ನೀವು-ನಾವು ಅರಿತೂ ಅವುಗಳನ್ನು ಕೊಲ್ಲುವುದು ಎಷ್ಟು ಸರಿ?.
ಇದೆಂತಹ ಮಾತು? ನಾವು ಹೇಗೆ ಎಲ್ಲೋ ಇರುವ ಏರೋಪ್ಲೇನ್ ಚಿಟ್ಟೆಯನ್ನು ಕೊಲ್ಲುತ್ತಿದ್ದೇವೆ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ನಾನು ಹೇಳಿದ ಮಾತಿನಲ್ಲಿ ಸತ್ಯವಿದೆ. ಹೇಗೆಂದರೆ, ಇತ್ತೀಚಿನ ಸಂಶೋಧನೆಯೊಂದು ಹೇಳುತ್ತಿದೆ ‘ಹನ್ನೆರಡು-ಮಚ್ಚೆಯ ಸ್ಕಿಮ್ಮೆರ್ (Twelve-spotted skimmer)’ ಎಂದು ಕರೆಯಲ್ಪಡುವ ಏರೋಪ್ಲೇನ್ ಚಿಟ್ಟೆಯ ಪ್ರಭೇದವೊಂದು ಹವಾಮಾನ ಬದಲಾವಣೆಯ ಕಾರಣದಿಂದಾಗಿ ತನ್ನ ಪೀಳಿಗೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದೆಯಂತೆ.
ಅದು ಹೇಗೆ?
ಹನ್ನೆರೆಡು-ಮಚ್ಚೆಯ ಸ್ಕಿಮ್ಮೆರ್ ಅಥವಾ ಏರೋಪ್ಲೇನ್ ಚಿಟ್ಟೆ ಎಂಬುದು ಒಂದು ಬಗೆಯ ಏರೋಪ್ಲೇನ್ ಚಿಟ್ಟೆ. ಇಂಗ್ಲೀಷ್ ನಲ್ಲಿ ಡ್ರಾಗನ್ ಫ್ಲೈ ಎನ್ನುತ್ತಾರೆ. ಈ ಏರೋಪ್ಲೇನ್ ಚಿಟ್ಟೆಯ ರೆಕ್ಕೆಗಳನ್ನು ಗಮನಿಸಿದರೆ, 4 ರೆಕ್ಕೆಗಳಲ್ಲಿ 12 ಕಪ್ಪು ಮಚ್ಚೆಗಳು ಕಾಣುತ್ತದೆ. ಉಳಿದ ರೆಕ್ಕೆಯು ಪಾರದರ್ಶಕವಾಗಿದೆ. ಕೆಲ ಭಾಗದಲ್ಲಿ ಬಿಳಿಯ ಸಣ್ಣ ಮಚ್ಚೆಗಳನ್ನು ಕಾಣಬಹುದು. ಇವುಗಳಲ್ಲಿ ಕಪ್ಪು ಬಣ್ಣದ 12 ಮಚ್ಚೆಗಳು ನಮ್ಮ ಈ ಏರೋಪ್ಲೇನ್ ಚಿಟ್ಟೆಗೆ ಬಲು ಮುಖ್ಯವಾದವು. ಬಹುಶಃ ಈ ಮಚ್ಚೆಗಳಿಂದಲೇ ಇದಕ್ಕೆ ಆ ಹೆಸರು ಬಂದಿರುವುದು. ಅದಿರಲಿ, ಮುಖ್ಯ ವಿಷಯಕ್ಕೆ ಬಂದರೆ ಈ ಹವಾಮಾನ ಬದಲಾವಣೆ (Climate Change)ಯ ಕಾರಣದಿಂದಾಗಿ ಜಾಗತಿಕ ತಾಪಮಾನ (Global Warming) ಹೆಚ್ಚುತ್ತಿದೆ. ಇದರ ಪರಿಣಾಮ ನಮ್ಮ ಏರೋಪ್ಲೇನ್ ಚಿಟ್ಟೆಯ ಮೇಲೂ ಬಿದ್ದಿದೆ. ಅದು ಹೇಗೆಂದರೆ, ಕಪ್ಪು ಬಣ್ಣ ಹೆಚ್ಚೆಚ್ಚು ಬಿಸಿಲಿನ ಶಾಖವನ್ನು ಹೀರಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದರಿಂದಲೇ ಬೇಸಿಗೆಯ ಸಮಯದಲ್ಲಿ ಹೆಚ್ಚು ಬಿಳಿ ಬಣ್ಣದ ಬಟ್ಟೆಯನ್ನು ಬಳಸುವುದು ಅಲ್ಲವೇ. ಹಾಗೆ ಏರೋಪ್ಲೇನ್ ಚಿಟ್ಟೆಯ ಮೇಲೆ ಅಗಲವಾಗಿರುವ ಈ ಕಪ್ಪು ಚುಕ್ಕೆಗಳೂ ಸಹ ಬಿಸಿಲಿನ ಶಾಖವನ್ನು ಹೀರಿಕೊಳ್ಳುತ್ತವೆ. ಸಾವಿರಾರು ವರ್ಷಗಳಿಂದ ಹೀಗೆ ನಡೆದು ಬಂದಿದೆ. ಆದರೆ ಇತ್ತೀಚೆಗೆ ಬಂದ ಈ ಜಾಗತಿಕ ತಾಪಮಾನದ ಪರಿಣಾಮ ನಮ್ಮ ‘ಹನ್ನೆರೆಡು-ಮಚ್ಚೆಯ ಸ್ಕಿಮ್ಮೆರ್’ ಗಳ ರೆಕ್ಕೆ 2೦C ಹೆಚ್ಚು ಬಿಸಿಯಾಗುತ್ತಿದೆಯಂತೆ. ಇದರಿಂದ ಏರೋಪ್ಲೇನ್ ಚಿಟ್ಟೆ ರೆಕ್ಕೆಯ ಜೀವಕೋಶಗಳು ಹಾಳಾಗಿ ಅವುಗಳ ಹಾರಾಟಕ್ಕೇ ತೊಂದರೆಯಾಗಬಹುದು. ತಾಪಮಾನ ಕಡಿಮೆ ಇರುವ ಕಡೆ ಈ ದಪ್ಪ ಮಚ್ಚೆಗಳು ಸಹಾಯಕವಾದರೆ, ಉಷ್ಣ ಪ್ರದೇಶಗಳಲ್ಲಿ ಇವೇ ತೊಂದರೆಯಾಗಬಹುದು.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಏರೋಪ್ಲೇನ್ ಚಿಟ್ಟೆಗಳು ತಮ್ಮ ಜೀವ ವಿಕಾಸದ ಅನುಭವದ ಪಾಠವನ್ನು ಅಳವಡಿಸಿ ತಮ್ಮ ಮಚ್ಚೆಗಳ ಗಾತ್ರವನ್ನು ಕಡಿಮೆ ಮಾಡಿಕೊಂಡವು. ಇದು ತಿಳಿದದ್ದು ಉಷ್ಣವಲಯದ ಮತ್ತು ಶೀತವಲಯದ ಒಂದೇ ಪ್ರಭೇದದ ಈ ಏರೋಪ್ಲೇನ್ ಚಿಟ್ಟೆಗಳನ್ನು ಅಭ್ಯಸಿಸಿದ ನಂತರ. ಇದಕ್ಕಾಗಿ ವಿಜ್ಞಾನಿಗಳ ತಂಡ ಹತ್ತು ಬಗೆಯ ಏರೋಪ್ಲೇನ್ ಚಿಟ್ಟೆಗಳ ರೆಕ್ಕೆಗಳನ್ನು ಅಭ್ಯಸಿಸಿದರು. ಅವುಗಳಲ್ಲಿ ಉಷ್ಣವಲಯದ ಚಿಟ್ಟೆಗಳ ರೆಕ್ಕೆಯ ಮೇಲಿರುವ ಮಚ್ಚೆಗಳು, ಶೀತವಲಯದ ಚಿಟ್ಟೆಗಳ ರೆಕ್ಕೆಯ ಮೇಲಿರುವ ಮಚ್ಚೆಗಳಿಗಿಂತ ಗಾತ್ರದಲ್ಲಿ ಚಿಕ್ಕದಿದ್ದವು. ಅಲ್ಲದೇ ಜಾಗತಿಕ ತಾಪಮಾನ ಗರಿಷ್ಠ ತಲುಪಿದ್ದ 2005-2019ರ ಅವಧಿಯಲ್ಲಿ ಮಚ್ಚೆಗಳ ಗಾತ್ರ ಸರಾಸರಿಯಲ್ಲಿ ಅತೀ ಚಿಕ್ಕದಾಗಿದ್ದವು. ಅವುಗಳಲ್ಲಾದ ಈ ಬದಲಾವಣೆಯಿಂದ ಅವುಗಳ ರೆಕ್ಕೆಗಳು ಹೆಚ್ಚು ಬಿಸಿಯಾಗುವ ತೊಂದರೆ ದೂರವಾದಂತಾಯಿತು.
ಓಹ್, ಹಾಗಾದರೆ ಸಮಸ್ಯೆಗೆ ಪರಿಹಾರ ಸಿಕ್ಕಿತಲ್ಲಾ ಎಂದುಕೊಂಡಿರಾ…? ಸಮಸ್ಯೆ ಇಲ್ಲೇ ಪ್ರಾರಂಭವಾಗಿರುವುದು. ಅದು ಹೇಗೆಂದರೆ, ರೆಕ್ಕೆಯ ಶಾಖವನ್ನು ಮಣಿಸಲು ಮಚ್ಚೆ ಚಿಕ್ಕದಾದರೆ ಅಲ್ಲಿನ ಸಮಸ್ಯೆ ಸರಿಹೋಯಿತು ಆದರೆ, ಅಲ್ಲಿಯೇ ಹೊಸ ಸಮಸ್ಯೆ ಹುಟ್ಟಿಕೊಂಡಿತು. ಅದೇನೆಂದರೆ ಗಂಡು ಏರೋಪ್ಲೇನ್ ಚಿಟ್ಟೆಯ ಮೇಲಿರುವ ಈ ಕಪ್ಪು ಮಚ್ಚೆಗಳ ಗಾತ್ರದ ಆಧಾರದ ಮೇಲೆಯೇ ಹೆಣ್ಣು ಏರೋಪ್ಲೇನ್ ಚಿಟ್ಟೆಗಳು ಆಕರ್ಷಿತರಾಗಿ ಮಿಲನಕ್ಕೆ ಒಪ್ಪುತ್ತಿದ್ದುದು. ಆದರೆ ಈಗ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದಿಂದ ಕಡಿಮೆಯಾಗಿರುವ ಈ ಕಪ್ಪು ಮಚ್ಚೆಗಳ ಗಾತ್ರದ ಪರಿಣಾಮ ಹೆಣ್ಣು ಏರೋಪ್ಲೇನ್ ಚಿಟ್ಟೆಗಳು ಸರಿಯಾದ ಗಂಡು ಏರೋಪ್ಲೇನ್ ಚಿಟ್ಟೆಗಳನ್ನು ಆರಿಸಲು ಕಷ್ಟವಾಗಿದೆ, ಹಾಗೇ ಅವುಗಳ ಮಿಲನಕ್ಕೆ ಅಡ್ಡಗೋಡೆಯಾಗಿದೆ. ಇದರಿಂದ ಅವುಗಳ ಮುಂದಿನ ಪೀಳಿಗೆಯೇ ಸಂಕಷ್ಟಕ್ಕೆ ಗುರಿಯಾಗಿದೆ. ಸಂತಾನೋತ್ಪತ್ತಿಗೇ ತೊಂದರೆಯಾದರೆ ಮುಂದಿನ ಪೀಳಿಗೆಯ ಮಾತೆಲ್ಲಿ?
ಈ ಸಂಶೋಧನೆಯಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವೇನೆಂದರೆ, ಗಂಡು ಏರೋಪ್ಲೇನ್ ಚಿಟ್ಟೆಗಳು ಜಾಗತಿಕ ತಾಪಮಾನಕ್ಕೆ ಬದಲಾದ ಹಾಗೆ ಹೆಣ್ಣು ಏರೋಪ್ಲೇನ್ ಚಿಟ್ಟೆಗಳು ಬದಲಾಗಲಿಲ್ಲ. ಇದಕ್ಕೆ ಉತ್ತರ ಇನ್ನೂ ಹುಡುಕಬೇಕಿದೆ.
ಅದೆಲ್ಲಾ ಸರಿ. ಇಲ್ಲಿ ಏರೋಪ್ಲೇನ್ ಚಿಟ್ಟೆಗಳ ಸಂತಾನೋತ್ಪತ್ತಿಗೆ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಕಾರಣವಾದರೆ, ನಮ್ಮನ್ನೇಕೆ ದೂಷಿಸುತ್ತಿದ್ದೀರಿ? ಎಲ್ಲಿಯೋ ಇರುವ ಅವುಗಳಿಗೂ ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೂ ಏನು ಸಂಬಂಧ?
ಸಂಬಂಧ ಇದೆ. ಪ್ರತ್ಯಕ್ಷವಾಗಿ ನಾವು ಅವುಗಳ ಪೀಳಿಗೆಯನ್ನು ಕಾಂಗ್ರೆಸ್ ಗಿಡದಿಂದ ಹೊಡೆದು ಕೊಲ್ಲದೇ ಇರಬಹುದು. ಆದರೆ ಅವುಗಳ ಈ ಪರಿಸ್ಥಿತಿಗೆ ನಾವೂ ಕಾರಣರೆ. ಹೇಗೆಂದರೆ, ಭೂಮಿಯ ಮೇಲಿನ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನಗಳು ಯಾರಿಂದ ಆಗುತ್ತಿದೆ? ಸಣ್ಣ ಪುಟ್ಟ ಕಾರ್ಖಾನೆಗಳಿಂದ ಹಿಡಿದು ದೊಡ್ಡ ದೊಡ್ಡ ಕಾರ್ಖಾನೆಗಳು, ಹೆಚ್ಚಿದ ವಾಹನ-ವಾಯು ಮಾಲಿನ್ಯ ಹಾಗೂ ಗಣಿಗಾರಿಕೆಗಳಿಂದ ಹವಾಮಾನ ಬದಲಾವಣೆಯಾಗುತ್ತಿದೆ. ಇವುಗಳ ಅಸ್ತಿತ್ವಕ್ಕೆ ಕಾರಣ ಏನು? ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳ ಮೇಲಿನ ಬೇಡಿಕೆಯಿಂದ. ಆ ಬೇಡಿಕೆಯನ್ನು ಅವರ ಮುಂದೆ ಇಡುವವರು ಯಾರು? ಇಡೀ ವಿಶ್ವದಲ್ಲೇ ಎಷ್ಟೋ ವಸ್ತುಗಳಿಗೆ ಭಾರತವೇ ಮೊದಲ ಹಾಗೂ ಮುಖ್ಯ ಮಾರುಕಟ್ಟೆ. ಹೀಗಿರುವಾಗ ಭಾರತದಲ್ಲಿರುವ ನಾವೇ ಮುಖ್ಯ ಬೇಡಿಕೆದಾರರಲ್ಲವೇ? ಇದಕ್ಕೆ ಮುಖ್ಯ ಕಾರಣ ಕೆಲವು ದಶಕಗಳಿಂದ ಬದಲಾಗುತ್ತಾ ಬಂದಿರುವ ನಮ್ಮ ಜೀವನ ಶೈಲಿ ಹಾಗೂ ಅವಶ್ಯಕತೆಗಿಂತ ಮಿಗಿಲಾದ ಬೇಡಿಕೆಗಳಿಂದ. ಹಾಗಾದರೆ ಈಗ ನೀವೇ ಹೇಳಿ ಏರೋಪ್ಲೇನ್ ಚಿಟ್ಟೆಗಳಂತಹ ಎಷ್ಟೋ ಜೀವವೈವಿಧ್ಯದ ಮಾರಣಹೋಮಕ್ಕೆ ಯಾರು ಕಾರಣರು? ಇದಕ್ಕೆ ಪರಿಹಾರವೇನು?
ಎಲ್ಲದಕ್ಕೂ ಉತ್ತರ ಮತ್ತು ಪರಿಹಾರ ನಮ್ಮಲ್ಲಿಯೇ ಇದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಬೇಕಾಗಿರುವುದು, ನಮ್ಮ ತಪ್ಪನ್ನು ಒಪ್ಪಿ ಪರಿಹಾರದ ಕಡೆಗೆ ಇಡುವ ಮೊದಲ ಹೆಜ್ಜೆಗೆ ಸರಿಹೊಂದುವ ಮನಸ್ಸು!
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.