ವೈಮಾನಿಕ ಕುಂಡಿಗಳು!

ವೈಮಾನಿಕ ಕುಂಡಿಗಳು!

‘ಛೂ ಮಂತ್ರ ಗಾಳಿ… ಓ……ಮ್ ಫಟ್!’ ಎಂದು ಗಾಳಿಯಲ್ಲೇ ತನ್ನ ಕೈಯನ್ನು ಅತ್ತಾ-ಇತ್ತ ಕುಣಿಸುತ್ತಾ ಬೂದಿಯನ್ನು ತರಿಸುವ ಪವಾಡ ಪುರುಷರುಗಳನ್ನು ಕಂಡಿರಬಹುದು ಅಥವಾ ಕೇಳಿರಬಹುದು. ಅವರ ಆ ಪವಾಡ ಬಯಲಾಗಿ ಅದು ಪವಾಡ ಅಲ್ಲ ಬದಲಿಗೆ ಅವರು ನಂಬುವಂತಹವರಿಗೆ ತಿನಿಸುವ ಪಕೋಡ ಎಂದು ಅರಿತಿರುವುದಿಲ್ಲ. ಅವರ ಆ ಮೂಢನಂಬಿಕೆ ಕಣ್ಮುಂದೆಯೇ ಇರುವ ಹಾವನ್ನು ಹಗ್ಗವೆಂದರೆ ಹೌದೆಂದೇ ನಂಬುವಷ್ಟಿರುತ್ತದೆ. ಅರಿವಿನ ಕೊರತೆಯ ಪರಿಣಾಮ ಈ ಪರಿ. ಬಹುಶಃ ಅದೇ ತರಹದ ಅರಿವಿನ ಕೊರತೆ ನನ್ನನ್ನೂ ಒಮ್ಮೆ ಕಣ್ಮುಂದೆ ಇದ್ದ ಅಚ್ಚರಿಯನ್ನು ನೋಡದ ಹಾಗೆ ಮಾಡಿತ್ತು. ಅದು ‘ಆರ್ಕಿಡ್ ಗಳ ಪರ್ವ’ ವಿಭಿನ್ನ ಹಾಗೂ ಅವುಗಳು ಹೂ ಬಿಡುವ ವಿನ್ಯಾಸದಿಂದ ಕೊಂಚ ವಿಶೇಷ ಸ್ಥಾನವನ್ನೂ ಗಳಿಸಿರುವ ಸಸ್ಯ ಪ್ರಭೇದವದು. ಹೆಚ್ಚಾಗಿ ‘ಹಸಿರು ಮನೆಗಳಲ್ಲಿ’ ಅತ್ಯಂತ ಕಾಳಜಿಯಿಂದ ಬೆಳೆಸುವ ಈ ಗಿಡಗಳು, ಸ್ವಾಭಾವಿಕವಾಗಿ ಕಾಡುಗಳಲ್ಲೂ ಕಾಣಸಿಗುತ್ತವೆ. ಸಾಮಾನ್ಯವಾಗಿ ಎತ್ತರದ ಮರಗಳ ಕೊಂಬೆಗಳ ಮೇಲೆ ಕಾಣುವ ಇವು ತನಗೆ ಬೇಕಾದ ನೀರು ಲವಣಾಂಶಗಳನ್ನು ಭೂಮಿಯಿಂದ ಪಡೆದುಕೊಳ್ಳದೇ ನೇರವಾಗಿ ಗಾಳಿಯಿಂದಲೇ ಪಡೆದುಕೊಳ್ಳುತ್ತವೆ. ಇದು ಇನ್ನೂ ವಿಶೇಷ ಸಂಗತಿ. ಅವುಗಳ ಬಗ್ಗೆ ಆಗ ತಾನೆ ಪರಿಚಯವಾಗಿದ್ದ ಸರ್ವೇಸಾಮಾನ್ಯವಾಗಿ ನಮಗೆ ಅದೊಂದು ವಿಶೇಷ ಚರ್ಚೆಯ ವಿಷಯವಾಗಿತ್ತು. ಜೊತೆಗೆ ಆ ತರಹದ ಗಿಡವನ್ನು ಚಿಕ್ಕಂದಿನಿಂದಲೂ ನಾವು ಎಲ್ಲಿಯೂ ಗಮನಿಸಿರಲಿಲ್ಲ. ಹಾಗಾಗಿ ನಮ್ಮ ಬನ್ನೇರುಘಟ್ಟ ಕಾಡಿನಲ್ಲಿ ಈ ಸಸ್ಯ ಇಲ್ಲ, ಎಂದು ನಾವೇ ತಲೆಯಲ್ಲಿ ಒಪ್ಪಿಕೊಂಡುಬಿಟ್ಟಿದ್ದೆವು. ಆದರೆ ನಮ್ಮ ಜೊತೆ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಜಣ್ಣ, “ಇದಾ.. ಇದು ನಮ್ ಕಾಡಲ್ಲೂ ಅದೆ!” ಎಂದಾಗ ನಮಗೆ ನಂಬಲಾಗಲಿಲ್ಲ. ಚಿಕ್ಕಂದಿನಿಂದಲೂ ಇಲ್ಲೇ ಹುಟ್ಟಿ ಬೆಳೆದು ಓಡಾಡಿರುವ ಆ ಕಾಡಿನ ದಾರಿಯಲ್ಲಿ ಇಂತಹ ಗಿಡ ಇದೆ ಎಂದು ಎಂದೂ ಊಹಿಸಿರಲಿಲ್ಲ. ಆದ್ದರಿಂದ ಸ್ವಲ್ಪ ಸಂಶಯವೂ ಇತ್ತು. ಆದರೆ “ಮುತ್ರಾಯನ್ ಸ್ವಾಮಿ ದೇವ್ಸ್ಥಾನ ಕೆಳ್ಗೆ ಕಲ್ಯಾಣಿ ಐತಲ, ಅಲ್ಲಿರೋ ದೊಡ್ ಮರ್ದಲ್ಲಿ ಐತೆ” ಎಂಬ ಡ್ರೈವರ್ ರ ಮುಂದಿನ ಮಾತು ನಮ್ಮ ಸಂಶಯವನ್ನು ಕುತೂಹಲವನ್ನಾಗಿ ಮಾಡಿತು. ಹಾಗಾದರೆ ನೋಡಿಯೇ ಬಿಡಬೇಕು ಎಂಬ ಬಯಕೆಯು ಅಲ್ಲಿ ನೋಡಿದ ಮೇಲೆ ಸತ್ಯವಾಗಿ ಬದಲಾಯಿತು. ಇಷ್ಟು ವರ್ಷ ಅದೇ ದಾರಿಯಲ್ಲಿ ಓಡಾಟ ನಡೆಸಿದ್ದರೂ ಅದನ್ನು ನಾನು ಎಂದೂ ಕಂಡಿರಲಿಲ್ಲ ಅಥವಾ ಗಮನಿಸಿರಲಿಲ್ಲ ಎನ್ನಬಹುದು. ಇದೊಂದು ಅಚ್ಚರಿಯಲ್ಲಿ ಮುಳುಗಿದ ಸಂತೋಷದ ವಿಷಯವೇ! ಆದರೆ ನನಗೆ ಅದಕ್ಕಿಂತ ವಿಶೇಷವೆನಿಸಿದ್ದು ಸಾಮಾನ್ಯವಾಗಿ ಮಣ್ಣಿನಲ್ಲಿ ಬೆಳೆದು ನೀರು ಲವಣ ಪಡೆದು ಆಹಾರ ತಯಾರಿಸುವ ಸಸ್ಯಗಳನ್ನು ಮಾತ್ರ ಕಂಡಿದ್ದ ನಮಗೆ, ಗಾಳಿಯಿಂದಲೇ ಈ ಕೆಲಸವನ್ನು ಒಂದು ಸಸ್ಯ ಮಾಡುತ್ತದೆ ಎಂದು ಊಹಿಸಿಯೂ ಇರಲಿಲ್ಲ. ಹೀಗೆ ಗಾಳಿಯಿಂದ ನೀರಿನಂಶವನ್ನು ಹೀರುವ ಬೇರುಗಳಿಗೆ ‘ವೈಮಾನಿಕ ಬೇರು’ಗಳೆನ್ನುತ್ತಾರೆ. ಅದೇ ರೀತಿ ನಮ್ಮ ನಿತ್ಯಜೀವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಕೀಟವೊಂದು ಹೀಗೆ ತನಗೆ ಬೇಕಾದ ನೀರಿನ ಅಂಶವನ್ನು ಗಾಳಿಯಿಂದ ತೆಗೆದುಕೊಳ್ಳುತ್ತದೆ ಎಂದರೆ ಕಷ್ಟವಾದರೂ ನಂಬಲೇಬೇಕೆನ್ನುತ್ತಿದೆ ಈ ಹೊಸ ಸಂಶೋಧನೆ!

© HHELENE_ISTOCK_GETTY IMAGES PLUS

   ಗೋಧಿಯಲ್ಲಿ, ಕಾಳುಗಳಲ್ಲಿ, ಹಿಟ್ಟಿನಲ್ಲಿ ಹೆಚ್ಚಾಗಿ ಕಾಣಸಿಗುವ ಕೆಂಪು ಜೀರುಂಡೆಗಳು ಅತಿ ಕಡಿಮೆ ನೀರಿರುವ ಜಾಗಗಳಲ್ಲಿಯೂ ಸಹ ನಿರಾಯಾಸವಾಗಿ ಬದುಕುತ್ತವೆ. ಇದಕ್ಕೆ ಮುಖ್ಯ ಕಾರಣ ಅವುಗಳು ತಮ್ಮ ದೇಹದಲ್ಲಿನ ನೀರನ್ನು ಮರುಬಳಕೆ ಮಾಡುತ್ತವೆ. ಹಾಗಾಗಿ ನಮ್ಮ ಹಾಗೆ ಪ್ರತಿ ಬಾರಿ ನೀರನ್ನು ಸೇವಿಸುತ್ತಿರಲೇಬೇಕು ಎಂದೇನಿಲ್ಲ. ಆದರೆ ನೀರಿನ ಅಂಶ ಅತ್ಯಂತ ಕಡಿಮೆ ಇರುವ ಗೋಧಿಯನ್ನು ಸಂಗ್ರಹಿಸಿ ಇಡುವ ಜಾಗದಲ್ಲಿಯೂ ಇರುತ್ತವೆ. ಇದು ವಿಜ್ಞಾನಿಗಳ ಕುತೂಹಲ ಕೆರಳಿಸಿತು. ಎಷ್ಟೇ ನೀರಿನ ಮರುಬಳಕೆ ಮಾಡಿದರೂ ಹಾಗೆ ಬದುಕಲು ಸಾಧ್ಯವೇ? ಎಂಬ ಸಂಶಯ ಕಾಡುತ್ತದೆ. ಜೊತೆಗೆ ಇದುವರೆಗೆ ಯಾರೂ ಈ ಸಂಶೋಧನೆಯ ಹಾದಿಯಲ್ಲಿ ಹೋಗಿರಲಿಲ್ಲ. ಕೋಪನ್ ಹೇಗನ್ ವಿಶ್ವವಿದ್ಯಾಲಯದ ಕೆನ್ನೆತ್ ಹಾಲ್ಬರ್ಗ್ ಮಾತ್ರ ಇದನ್ನು ಕಂಡುಹಿಡಿಯಲು ಮುಂದಾದರು. ಆಗ ಅವರಿಗೆ ತಿಳಿದದ್ದು, ಈ ಜೀರುಂಡೆಗಳು ಜೀವನ ಪೂರ್ತಿ ನೀರಿರದೆ ಬದುಕುವುದಿಲ್ಲ. ಬದಲಿಗೆ ವಾತಾವರಣದಲ್ಲಿನ ನೀರಿನ ಅಂಶವನ್ನು ದೇಹಕ್ಕೆ ಹೀರಿಕೊಳ್ಳಲು ತಮ್ಮ ಗುದದ್ವಾರ/ಕುಂಡಿಗಳನ್ನು ತೆರೆಯುತ್ತವೆ ಎಂದು. ವಾತಾವರಣದಲ್ಲಿ ಇರುವ ನೀರಿನಂಶವನ್ನು ಗ್ರಹಿಸಿ ಹೀಗೆ ತೆರೆಯುವ ಕುಂಡಿಗಳಲ್ಲಿ ಕರುಳಿನಲ್ಲಿರುವ ಮಲ ಈ ನೀರಿನಂಶವನ್ನು ಹೀರಿಕೊಂಡು ಘನೀಕರಿಸುತ್ತವೆ. ನಂತರ ಕರುಳಿನಲ್ಲಿರುವ ವಿಶೇಷ ಜೀವಕೋಶಗಳ ಸಹಾಯದಿಂದ ನೀರನ್ನು ಹೀರಿಕೊಂಡು ದೇಹಕ್ಕೆ ರವಾನಿಸುತ್ತವೆಯಂತೆ. “ಇದೊಂದು ಅದ್ಭುತ ಯಾಂತ್ರಿಕತೆ” ಎನ್ನುತ್ತಾರೆ ಹಾಲ್ಬರ್ಗ್. ಆದರೆ ಈ ವಿಶೇಷ ಜೀವಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದಾಗಿ ನಿಖರವಾಗಿ ತಿಳಿದಿರಲಿಲ್ಲ. ಈ ಸಂಶೋಧನೆಯಲ್ಲಿ ಇದಕ್ಕೆ ಕಾರಣ ಕರುಳಿನಲ್ಲಿರುವ ‘Nha1’ ಎಂಬ ಜೀನ್ ಎಂದು ಊಹಿಸಿದ್ದಾರೆ. ಈ ಜೀನ್ ಇರುವ ಕಾರಣ ನೀರಿನ ಅಂಶವನ್ನು ಮಲ ಹೀರಿಕೊಂಡಾಗ ಅಲ್ಲಿರುವ ಈ ವಿಶೇಷ ಜೀವಕೋಶಗಳಲ್ಲಿ ‘ಪರಿಸರಣ ಕ್ರಿಯೆ(osmosis)’ಯನ್ನು ಪ್ರಚೋದಿಸುತ್ತದೆಯಂತೆ. ಆಗ ನೀರು ದೇಹದೊಳಕ್ಕೆ ಹೀರಿಕೊಳ್ಳಲಾಗುತ್ತದೆ. ‘ಇಂತಹ ಸಂಶೋಧನೆಯಿಂದ ಪ್ರಪಂಚದ 1/5 ಭಾಗದ ಬೆಳೆಯನ್ನು ಹಾಳು ಮಾಡುವ ಇಂತಹ ಕೀಟಗಳನ್ನು ನಿಯಂತ್ರಿಸುವ ವಿಧಾನಗಳನ್ನು ಕಂಡುಕೊಳ್ಳಬಹುದು.’ ಎನ್ನುವುದು ಹಾಲ್ಬರ್ಗ್ ರವರ ವಾದ. ಅಷ್ಟೇ ಅಲ್ಲದೆ ಈ ಜೀರುಂಡೆಗಳಿಗೆ ಮಾತ್ರ ಪರಿಣಾಮಕಾರಿಯಾಗಿ ದುಂಬಿ ಮತ್ತು ಇತರ ಕೀಟಗಳಿಗೆ ಹಾನಿಯಾಗದ ಕೀಟನಾಶಕಗಳನ್ನು ತಯಾರಿಸುವಲ್ಲಿ ಇಂತಹ ಸಂಶೋಧನೆ ನೆರವಾಗುತ್ತದೆ ಎಂಬುದು ಇವರ ನಂಬಿಕೆ.

ಏನೇ ಆಗಲಿ ಸಸ್ಯಗಳಲ್ಲಿ ಕಂಡಿದ್ದ ವೈಮಾನಿಕ ಬೇರುಗಳ ಹಾಗೆ ಈ ಕೀಟಗಳಿಗೆ ಇರುವ ಈ ವೈಮಾನಿಕ ಕುಂಡಿಗಳಿರುವ ಸಾಧ್ಯತೆಯನ್ನು ಕೇಳಿದರೆ ಅಚ್ಚರಿಯೆನಿಸುತ್ತದೆ. ಅಂದರೆ ಪ್ರಕೃತಿಯಲ್ಲಿನ ವಿಚಿತ್ರ-ವಿವಿಧ-ವಿಶೇಷ ಸವಾಲುಗಳಿಗೆ ಅದೇ ರೀತಿ ವಿಚಿತ್ರ-ವಿವಿಧ-ವಿಶೇಷ ಪರಿಹಾರಗಳಿರುವ ರಹಸ್ಯಗಳ ಅನಾವರಣ ಬಾಯಿ ಮೇಲೆ ಬೆರಳಿಡುವ ಹಾಗೆ ಮಾಡುವುದಂತೂ ನಿಜ!

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love
error: Content is protected.